Tuesday, July 21, 2020

ಬಾಲ್ಯ ಕಾಲದ ನೆನಪುಗಳು – ೧೦೨

ನನ್ನ ವಿದ್ಯಾಭ್ಯಾಸ ಸಮಯದಲ್ಲಿ ಯಾವಾಗಲೂ ನನಗೆ ಭೌತಶಾಸ್ತ್ರ (ಫಿಸಿಕ್ಸ್) ಸಬ್ಜೆಕ್ಟಿನಲ್ಲಿ ವಿಶೇಷ ಆಸಕ್ತಿ ಇತ್ತು. ಮ್ಯಾಥಮ್ಯಾಟಿಕ್ಸ್ ಬಿಟ್ಟರೆ ಈ ಸಬ್ಜೆಕ್ಟಿನಲ್ಲಿ ನನಗೆ ಹೆಚ್ಚಿನ ಅಂಕಗಳು ದೊರೆಯುತ್ತಿದ್ದವು. ಕೃಷ್ಣಪ್ಪಯ್ಯನವರ ನೇತೃತ್ವದಲ್ಲಿ ನಮ್ಮ ಕಾಲೇಜಿನಲ್ಲಿ ಈ ಡಿಪಾರ್ಟ್ಮೆಂಟ್ ತುಂಬಾ ಒಳ್ಳೆಯ ಅಧ್ಯಾಪಕರುಗಳನ್ನು ಹೊಂದಿತ್ತು.

ನನ್ನ ಮತ್ತು ಕೃಷ್ಣಪ್ಪಯ್ಯನವರ ನಡುವಿನ ಸಂಬಂಧ ಸ್ವಲ್ಪ ವಿಶಿಷ್ಟವಾದದ್ದೇ ಆಗಿತ್ತು. ಅವರ "ನೋ-ನಾನ್ಸೆನ್ಸ್" ವರ್ತನೆ ಅಥವಾ ಮನೋಭಾವ ನನಗೆ ತುಂಬಾ ಇಷ್ಟವಾಗುತ್ತಿತ್ತು. ವಿಚಿತ್ರವೆಂದರೆ ನಮಗೆಲ್ಲಾ ಕೃಷ್ಣಪ್ಪಯ್ಯ ಎಂಬ ಹೆಸರಿನವರು ನಮ್ಮ ಕಾಲೇಜಿಗೆ ಫಿಸಿಕ್ಸ್ ಉಪನ್ಯಾಸಕರಾಗಿ ಬರುತ್ತಾರೆಂದು ತಿಳಿದಾಗ ಸ್ವಲ್ಪ ಗಜಿಬಿಜಿಯೇ ಆಯಿತು. ಏಕೆಂದರೆ ಆ ಹೆಸರು ಕೇಳಿದೊಡನೆ ನಮಗೆ ಕೂಡಲೇ ನೆನಪಿಗೆ ಬಂದುದು ತೀರ್ಥಹಳ್ಳಿಯ ಆ ಕಾಲದ ಅತಿ ಪ್ರಸಿದ್ಧ ಹೋಟೆಲೊಂದರ ಮಾಲೀಕರದ್ದು.  ಒಂದು ಕಾಲದಲ್ಲಿ ತೀರ್ಥಹಳ್ಳಿಯ ಕೃಷ್ಣಪ್ಪಯ್ಯನವರ ಹೋಟೆಲ್ ಬೆಂಗಳೂರಿನ ಎಂ ಟಿ ಆರ್ ಹೋಟೆಲಿನಷ್ಟೇ ಪ್ರಸಿದ್ಧವಾಗಿತ್ತು. ನಾವಿನ್ನೂ ಚಿಕ್ಕವರಾಗಿದ್ದಾಗ ಪುರದಮನೆ ಶ್ರೀನಿವಾಸಯ್ಯನವರ ಕುಟುಂಬದೊಡನೆ ವ್ಯಾನ್ ಒಂದರಲ್ಲಿ ತೀರ್ಥಹಳ್ಳಿಯ ಎಳ್ಳಮಾವಾಸ್ಯೆ ಉತ್ಸವದಲ್ಲಿ ಪಾಲ್ಗೊಂಡು ಕೃಷ್ಣಪ್ಪಯ್ಯನವರ ಹೋಟೆಲಿನ ಮಸಾಲೆ ದೋಸೆ ರುಚಿ ನೋಡಿದ್ದನ್ನು ಎಂದೂ ಮರೆಯುವಂತಿಲ್ಲ.

ನಮ್ಮ ಮನಸ್ಸಿನಲ್ಲಿ ನಾವು ಹೋಟೆಲ್ ಮಾಲೀಕರಾದ ಕೃಷ್ಣಪ್ಪಯ್ಯನವರಂತೆಯೇ  ನಮ್ಮ ಉಪನ್ಯಾಸಕ ಕೃಷ್ಣಪ್ಪಯ್ಯನವರೂ ಕೂಡ ಒಬ್ಬ ಅಡ್ಡಪಂಚೆ ಉಟ್ಟ ಮಧ್ಯಮ ವಯಸ್ಸಿನ ವ್ಯಕ್ತಿ ಇರಬೇಕೆಂದು ಭಾವಿಸಿಬಿಟ್ಟಿದ್ದೆವು.  ಆದರೆ ಇನ್ನೂ ತರುಣರಾಗಿ ಮೀಸೆ ಬಿಟ್ಟು ಟ್ರಿಮ್ಮಾಗಿ ಡ್ರೆಸ್ ಮಾಡಿ ನಮ್ಮೆದುರು ಪ್ರತ್ಯಕ್ಷರಾದ ವ್ಯಕ್ತಿಯೇ ನಮ್ಮ ಉಪನ್ಯಾಸಕ ಕೃಷ್ಣಪ್ಪಯ್ಯನವರೆಂದು ತಿಳಿದಾಗ ನಮಗಾದ ಆಶ್ಚರ್ಯ ಮತ್ತು ಸಂತೋಷ ಅಷ್ಟಿಷ್ಟಲ್ಲ. ಅವರಾಗಲೇ ಮಣಿಪಾಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು ಎರಡು ವರ್ಷ ಸೇವೆ ಮಾಡಿ ಶೃಂಗೇರಿಗೆ ಬಂದಿದ್ದರು. ಹಾಗಾಗಿ ಅವರು ತೆಗೆದುಕೊಂಡ ಮೊದಲ ತರಗತಿಯಲ್ಲೇ ಆವರೆಷ್ಟು ಉತ್ತಮ ಮಟ್ಟದ ಉಪನ್ಯಾಸಕರೆಂದು ನಮಗೆ ಗೊತ್ತಾಗಿ ಹೋಯಿತು. ಆದರೆ ಏಕೋ ಏನೋ ಗೊತ್ತಿಲ್ಲ. ನಮಗೆಲ್ಲಾ ಅವರು ತಮ್ಮ ಹೆಸರಿನಲ್ಲಿ ಸೇರಿದ್ದ "ಅಪ್ಪಯ್ಯ" ಎಂಬ ಪದವನ್ನು ತೆಗೆದುಹಾಕಿದರೆ ಒಳ್ಳೆಯದೆಂದು ಅನಿಸುತ್ತಿತ್ತು! ಏಕೆಂದರೆ ನಮ್ಮೂರಿನಲ್ಲಿ ಅದನ್ನು ಹಿರಿಯ ವಯಸ್ಸಿನವರ ಮುಂದೆ ಮಾತ್ರ ಸೇರಿಸಲಾಗುತ್ತಿತ್ತು. 

ಕೃಷ್ಣಪ್ಪಯ್ಯನವರಿಗೆ ಅವರು ಕ್ಲಾಸ್ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳಲ್ಲದೇ ಬೇರೆ ತರಗತಿಯ ವಿದ್ಯಾರ್ಥಿಗಳೂ ತುಂಬಾ ಗೌರವ ಕೊಡುತ್ತಿದ್ದರು. ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಮೈಕ್ ಸೆಟ್ಟಿನ ಜವಾಬ್ದಾರಿಯನ್ನು ಯಾವಾಗಲೂ ಅವರೇ ವಹಿಸುತ್ತಿದ್ದರು. ಮೂಲತಃ ಒಬ್ಬ ರಿಸರ್ವ್ಡ್ ಪರ್ಸನ್ ಅಗಿದ್ದ ಕೃಷ್ಣಪ್ಪಯ್ಯನವರು ತಮ್ಮ ಸಬ್ಜೆಕ್ಟ್ ಬಿಟ್ಟು ಬೇರೆ ಯಾವುದೇ ವಿಷಯ  ಮಾತನಾಡಲು ಹೋಗುತ್ತಿರಲಿಲ್ಲ. ನಾನು ಕೇವಲ ಒಂದೇ ಒಂದು ಸಂದರ್ಭದಲ್ಲಿ ಅವರೊಡನೆ ಸ್ವಲ್ಪ ಮನಸ್ತಾಪ ಮಾಡಿಕೊಂಡಿದ್ದೆ. ನನ್ನ ಅಂತಿಮ ಡಿಗ್ರಿ ವರ್ಷದ ಮೊದಲ ಟರ್ಮ್  ಪರೀಕ್ಷೆಯ ಉತ್ತರ (answer) ಪೇಪರ್ ಒಂದರಲ್ಲಿ  ಕರೆಕ್ಷನ್ ಮಾಡಿದ  ಮೇಲೆ ಟೋಟಲ್ ಮಾಡುವಾಗ ಅವರು ಒಂದು ಉತ್ತರಕ್ಕೆ ಕೊಟ್ಟ ೫ ಅಂಕಗಳನ್ನು ಸೇರಿಸಿರಲಿಲ್ಲ. ಹಾಗಾಗಿ ನನಗೆ ೫ ಅಂಕಗಳು ಕಡಿಮೆ ಬಂದಿದ್ದವು. ನಾನು ನನಗೆ ಬರಬೇಕಾಗಿದ್ದ ಅಂಕಗಳ ಬಗ್ಗೆ ತುಂಬಾ ಸೆನ್ಸಿಟಿವ್ ಆಗಿದ್ದೆ. ಆದ್ದರಿಂದ ನಾನು ತುಂಬಾ ಅಸಮಾಧಾನದಿಂದ ಆ ಪೇಪರ್ ತೆಗೆದುಕೊಂಡು ಕೃಷ್ಣಪ್ಪಯ್ಯನವರ ಬಳಿಗೆ ಹೋದೆ. ಅವರು ತಾಳ್ಮೆಯಿಂದ ಪೇಪರ್ ಪುನಃ ತಿರುವಿ ನೋಡಿ ಕೈಬಿಟ್ಟಿದ್ದ ೫ ಅಂಕಗಳನ್ನು ಸೇರಿಸಿ ನನಗೆ ಕೊಟ್ಟಿದ್ದ ಟೋಟಲ್ ಅಂಕಗಳನ್ನು ಬದಲಾಯಿಸಿದರು. ಆದರೆ ಪೇಪರ್ ನನಗೆ ಹಿಂದಿರುಗಿಸುವಾಗ, ೫ ಅಂಕಗಳ ವ್ಯತ್ಯಾಸ ಸರಿಮಾಡದಿದ್ದರಿಂದ ಅಂತಹ ದೊಡ್ಡ ಪ್ರಮಾದವೇನೂ ಜರುಗಿದಂತಾಗುತ್ತಿರಲಿಲ್ಲವೆಂದು ಸ್ವಲ್ಪ ವ್ಯಂಗವಾಗಿಯೇ ಹೇಳಿಬಿಟ್ಟರು. ನನಗೆ ಆಗ ತುಂಬಾ ಕೋಪ ಬಂದು ಬಿಟ್ಟಿತು. ನಾನು ಸಿಟ್ಟಿನಿಂದ ನನ್ನ ವಿಷಯದಲ್ಲಿ ಅದು ದೊಡ್ಡ  ಪ್ರಮಾದವೇ ಹೌದು. ಏಕೆಂದರೆ ನನಗೆ ೫ ಅಂಕಗಳು ಕೂಡ ಬಹು ಮುಖ್ಯವೇ ಎಂದು ಗಟ್ಟಿಯಾಗಿ ಹೇಳಿದೆ. ಆದರೆ ಕೃಷ್ಣಪ್ಪಯ್ಯನವರು ತಾಳ್ಮೆ ಕಳೆದುಕೊಳ್ಳದೇ ಮೌನವಾಗಿದ್ದರು.

ಆದರೆ ಆಮೇಲೆ ಸ್ವಲ್ಪ ಸಮಯದಲ್ಲೇ ನನಗೆ ತುಂಬಾ ಪಶ್ಚಾತ್ತಾಪವಾಯಿತು. ನನ್ನ ಅತ್ಯಂತ ಮೆಚ್ಚಿನ ಗುರುಗಳ ಮುಂದೆ ನಾನು ತುಂಬಾ ಒರಟಾಗಿ ಮಾತನಾಡಿಬಿಟ್ಟಿದ್ದೆ.  ಒಂದು ಸಣ್ಣ ವಿಷಯಕ್ಕೆ ನಾನು ಅವರೊಡನೆ ಮನಸ್ತಾಪವಾಗುವಂತೆ ಮಾತನಾಡಿಬಿಟ್ಟಿದ್ದೆ. ನಾನು ಕೂಡಲೇ ಅವರ ಹತ್ತಿರ ಹೋಗಿ ಕ್ಷಮಾಪಣೆ ಕೇಳಿಕೊಂಡೆ. ಅವರು ನನ್ನನ್ನು ಸಮಾಧಾನಪಡಿಸಿ ಆ ವಿಷಯವನ್ನು ಅಲ್ಲಿಗೇ ಮರೆತುಬಿಡುವಂತೆ ಹೇಳಿದರು.

ಬಾಳೆಹೊನ್ನೂರ್ ಕಾಫಿ ರಿಸರ್ಚ್ ಸ್ಟೇಷನ್ ಗೆ ಪಿಕ್ನಿಕ್

ನಮ್ಮ ಕಾಲೇಜಿನಿಂದ ಕೃಷ್ಣಪ್ಪಯ್ಯನವರ ನೇತೃತ್ವದಲ್ಲಿ ಬಾಳೆಹೊನ್ನೂರ್ ಕಾಫಿ ರಿಸರ್ಚ್ ಸ್ಟೇಷನ್ ಗೆ ಒಂದು ಪಿಕ್ನಿಕ್ ಏರ್ಪಡಿಸಲಾಗಿತ್ತು. ನಾವು ಅಲ್ಲಿಯವರೆಗೆ ಬಾಳೆಹೊನ್ನೂರಿನಲ್ಲಿ ಕಾಫಿ ರಿಸರ್ಚ್ ಇನ್ಸ್ಟಿಟ್ಯೂಟ್ ಇರುವುದೆಂದು ಕೇಳಿದ್ದು ಮಾತ್ರವಾಗಿತ್ತು. ಆದರೆ ಈ ಪಿಕ್ನಿಕ್ ನಮಗೆ ಅದನ್ನು ನೋಡುವ ಮತ್ತು ಅದರ ಬಗ್ಗೆ ವಿವರಗಳನ್ನು ತಿಳಿದುಕೊಳ್ಳುವ ಒಂದು ಸದವಕಾಶವಾಗಿತ್ತು. ಅಲ್ಲದೇ ಆಗ ನಮ್ಮ ಕಾಲೇಜಿನ ವಿದ್ಯಾರ್ಥಿಯಾಗಿದ್ದ ವಿದ್ಯಾನಂದ ಶೆಣೈ ಎಂಬುವರ ಒಬ್ಬ ಸಹೋದರ ಅಲ್ಲಿಯೇ ಕೆಲಸ ಮಾಡುತ್ತಿದ್ದರು . ಅವರು ನಮ್ಮನ್ನು ಇನ್ಸ್ಟಿಟ್ಯೂಟ್ ಒಳಗೆಲ್ಲಾ ಸುತ್ತಾಡಿಸಿ ಅಲ್ಲಿನ ಕಾರ್ಯ ವೈಖರಿಯ ಬಗ್ಗೆ ಸೂಕ್ತ ವಿವರಣೆ ನೀಡಿದರು . (ನನ್ನ ಸ್ನೇಹಿತರೂ ಆಗಿದ್ದ ವಿದ್ಯಾನಂದ ಶೆಣೈ ಅವರು ಮುಂದೆ ಆರ್ ಎಸ್ ಎಸ್ ಸಂಸ್ಥೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು).

ತುಂಬಾ ಯಶಸ್ವಿಯಾಗಿ ನಡೆದ ಈ ಪಿಕ್ನಿಕ್ ನಮಗೆಲ್ಲಾ ತುಂಬಾ ಸಂತೋಷವನ್ನು ತಂದಿತು. ಪಿಕ್ನಿಕ್ ನಡುವೆ ಮದ್ಯಾಹ್ನದ ಊಟಕ್ಕೆ ಮುಂಚೆ ಒಂದು ಹಾಡಿನ ಸ್ಪರ್ಧೆ ನಡೆಸಲಾಯಿತು. ಆ ಸ್ಪರ್ಧೆಯ ನಡುವೆ ವಿದ್ಯಾರ್ಥಿನಿಯರ ಗುಂಪೊಂದು "ಉಂಡಾಡಬಹುದು, ಓಡಿಬಾ ಎನ್ನಪ್ಪಾ, ಊಟಕೆ ಬಾರೋ ಕೃಷ್ಣಪ್ಪಾ " ಎಂಬ ಹಾಡನ್ನು ಹಾಡುತ್ತಾ ಕೃಷ್ಣಪ್ಪಯ್ಯನವರ ಕಡೆ ಕೈ ತೋರಿಸಿದಾಗ ನಮಗೆಲ್ಲಾ ಬಂದ ನಗೆ ಅಷ್ಟಿಷ್ಟಲ್ಲ! ಆಗ ಕೃಷ್ಣಪ್ಪಯ್ಯನವರ ಮುಖದಲ್ಲೂ ಮುಗುಳ್ನಗೆ ಕಾಣಿಸಿದ್ದು ಇಂದೂ ನೆನಪಿಗೆ ಬರುತ್ತಿದೆ.

ಟಾಟಾ ಇನ್ಸ್ಟಿಟ್ಯೂಟ್ ಸೀಟಿಗೆ ಪ್ರಯತ್ನಿಸಲು ಕೃಷ್ಣಪ್ಪಯ್ಯನವರ ಸಲಹೆ

ನಮ್ಮಕಾಲೇಜಿನ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದಂತೇ ಒಂದು ದಿನ ಕೃಷ್ಣಪ್ಪಯ್ಯನವರು ನನಗೆ ಅವರ ಮನೆಗೆ ಬರಹೇಳಿದರು. ಬ್ರಹ್ಮಚಾರಿಯಾಗೇ ಉಳಿದಿದ್ದ ಅವರು ತಮ್ಮ ಇನ್ನೊಬ್ಬ ಸಹೋದ್ಯೋಗಿಯೊಡನೆ ಒಂದು ಮನೆಯಲ್ಲಿ ವಾಸಮಾಡುತ್ತಿದ್ದರು. ನಾನಲ್ಲಿಗೆ ಹೋದಾಗ ತುಂಬಾ ಆರಾಮದಲ್ಲಿ ನನ್ನೊಡನೆ ಮಾತನಾಡಿದರು. ಅವರಿಗೆ ನನ್ನ ಮುಂದಿನ ವಿದ್ಯಾಭ್ಯಾಸದ ಗುರಿ ಮತ್ತು ಪ್ಲಾನ್ ಏನೆಂದು ತಿಳಿದುಕೊಳ್ಳಬೇಕಿತ್ತು. ಸತ್ಯ ಹೇಳಬೇಕೆಂದರೆ ನನ್ನ ಮುಂದಿನ ಗುರಿ ಏನೆಂದು ನನಗೇ ಗೊತ್ತಿರಲಿಲ್ಲ. ನಮ್ಮ ಕುಟುಂಬದ ಆರ್ಥಿಕ ಸ್ಥಿತಿ ಕಷ್ಟಕಾರವಾಗಿಯೇ ಇದ್ದರಿಂದ ನನ್ನ ಮುಂದಿನ ಬಾಳ  ಪಯಣ ತುಂಬಾ ಮಸುಕು ಮಸುಕಾಗಿಯೇ ಕಾಣುತ್ತಿತ್ತು. ನನ್ನ ಒಂದು ಗುರಿ ಫಿಸಿಕ್ಸ್ ಸಬ್ಜೆಕ್ಟಿನಲ್ಲಿ ಸ್ನಾತಕೋತ್ತರ ಪದವಿ ಪಡೆಯುವುದಾಗಿತ್ತು. ನಾನು ಅದನ್ನೇ ಕೃಷ್ಣಪ್ಪಯ್ಯನವರಿಗೆ ಹೇಳಿದೆ.

ಕೃಷ್ಣಪ್ಪಯ್ಯನವರು ತಮ್ಮ ಬೀರುವಿನಿಂದ ಒಂದು ಪುಸ್ತಕವನ್ನು ಹೊರತೆಗೆದು ನನ್ನ ಕೈಗಿತ್ತರು. ಅದು ಇಂಡಿಯನ್ ಇನ್ಸ್ಟಿಟ್ಯೂಟ್  ಅಫ್ ಸೈನ್ಸ್ (ಟಾಟಾ ಇನ್ಸ್ಟಿಟ್ಯೂಟ್ ಎಂದು ಪ್ರಸಿದ್ಧಿ ಪಡೆದ)  ಪ್ರಾಸ್ಪೆಕ್ಟಸ್ ಆಗಿತ್ತು. ಇನ್ಸ್ಟಿಟ್ಯೂಟಿನ ಬಗ್ಗೆ ಮತ್ತು ಅಲ್ಲಿನ ಕೋರ್ಸ್ ಗಳ  ಬಗ್ಗೆ  ಎಲ್ಲಾ ವಿವರಗಳನ್ನು ಹೊಂದಿದ್ದ ಆ ಪುಸ್ತಕದ ಮೇಲೆ ನಾನು ಒಮ್ಮೆ ಕಣ್ಣಾಡಿಸಿದೆ. ಕೃಷ್ಣಪ್ಪಯ್ಯನವರು ನನಗೆ ನನ್ನ ಮುಂದಿನ ವಿದ್ಯಾಭ್ಯಾಸವನ್ನು ಇನ್ಸ್ಟಿಟ್ಯೂಟಿನಲ್ಲಿ ಮಾಡಬೇಕೆಂದು ಸಲಹೆ ಮಾಡಿದರು. ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಆಗ ಬಿ.ಎಸ್ ಸಿ.  ಪದವಿ ಪಡೆದ ವಿದ್ಯಾರ್ಥಿಗಳಿಗೆ ಮೂರು ಇಂಜಿನಿಯರಿಂಗ್ ಕೋರ್ಸ್ ಗಳಿದ್ದುವು. ಮೆಟಲರ್ಜಿ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಇಂಜಿನಿಯರಿಂಗ್ ಎಂಬ ಮೂರು ವಿಭಾಗಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದಿತ್ತು. ಒಂದೊಂದು ವಿಭಾಗದಲ್ಲೂ ಅಖಿಲ ಭಾರತ ಮಟ್ಟದಲ್ಲಿ ೩೦ ವಿದ್ಯಾರ್ಥಿಗಳಿಗೆ ಸೀಟ್ ದೊರೆಯುತ್ತಿತ್ತು.

ಕೃಷ್ಣಪ್ಪಯ್ಯನವರು ನನಗೆ ಮೆಟಲರ್ಜಿ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಸಲಹೆ ಮಾಡಿದರು. ನಾನು ಬಿ.ಎಸ್ ಸಿ.   ಓದುವಾಗ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಮೇಜರ್ ಸಬ್ಜೆಕ್ಟುಗಳಾಗಿ ತೆಗೆದುಕೊಂಡಿದ್ದರಿಂದ ಆ ಕೋರ್ಸಿಗೆ ಅರ್ಹತೆ ಪಡೆದಿದ್ದೆ. ಅವರ ಪ್ರಕಾರ ಮೂರು ವರ್ಷದ ಕೋರ್ಸ್ ನಲ್ಲಿ ಒಟ್ಟಾರೆ ಡಿಸ್ಟಿಂಕ್ಷನ್ ಪಡೆದುಕೊಂಡರೆ ಅಮೇರಿಕಾಕ್ಕೆ ಹೋಗುವ ಅವಕಾಶ ದೊರೆಯಲಿತ್ತು. ಆ ಕಾಲದಲ್ಲಿ ಮೆಟಲರ್ಜಿ ಇಂಜಿನಿಯರ್ ಗಳಿಗೆ ಅಲ್ಲಿ ತುಂಬಾ ಡಿಮ್ಯಾಂಡ್ ಮತ್ತು ಅವಕಾಶಗಳಿದ್ದವಂತೆ. ಒಂದು ವೇಳೆ ಡಿಸ್ಟಿಂಕ್ಷನ್ ದೊರೆಯದಿದ್ದರೆ ಟಾಟಾ ಸ್ಟೀಲ್ ಕಂಪನಿಯಿಂದ ನೌಕರಿಯ ಗ್ಯಾರಂಟಿ ಇತ್ತಂತೆ. ಆಗ ಟಾಟಾ ಇನ್ಸ್ಟಿಟ್ಯೂಟ್ ಬಿಟ್ಟರೆ ಬನಾರಸ್ ಹಿಂದೂ ಯೂನಿವರ್ಸಿಟಿ ಯಲ್ಲಿ ಮಾತ್ರ ಮೆಟಲರ್ಜಿ ಇಂಜಿನಿಯರಿಂಗ್ ಕೋರ್ಸ್ ಇತ್ತಂತೆ. ಕೃಷ್ಣಪ್ಪಯ್ಯನವರು ನನಗೆ ಪ್ರಾಸ್ಪೆಕ್ಟಸ್  ಇಟ್ಟುಕೊಳ್ಳುವಂತೆ ಹೇಳಿ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಪ್ರವೇಶಕ್ಕೆ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ತತ್ವಶಾಸ್ತ್ರದ ಡಿಪಾರ್ಟ್ಮೆಂಟ್

ಆ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಂದು ಸಮಾಚಾರ ನಮ್ಮ ಕಿವಿಗೆ ಬಿತ್ತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಒಂದು ಹಿಂದೂ ತತ್ವಶಾಸ್ತ್ರದ ಡಿಪಾರ್ಟ್ಮೆಂಟ್  ಸ್ಥಾಪಿಸಿ ಅದರಲ್ಲಿ ಸ್ನಾತಕೋತ್ತರ ತರಗತಿಯೊಂದನ್ನು ಆರಂಭಿಸಲು ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ ಅನುಮತಿ ನೀಡಿತ್ತು. ಆ ಇಲಾಖೆಯ ಮುಖ್ಯಸ್ಥರನ್ನಾಗಿ ನೇಮಿಸಲು ಹಿಂದೂ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ವ್ಯಕ್ತಿಯೊಬ್ಬರ ಅವಶ್ಯಕತೆ ಇತ್ತು.  ವಿಶ್ವವಿದ್ಯಾನಿಲಯದವರಿಗೆ ಅಂತಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅವಶ್ಯಕತೆಯೇ ಬರಲಿಲ್ಲ. ಅವರು ನೇರವಾಗಿ ನಮ್ಮ ಪ್ರಿನ್ಸಿಪಾಲರಾದ ರಾಮಕೃಷ್ಣರಾಯರಿಗೆ ನೇಮಕಾತಿಯ ಪತ್ರವನ್ನೇ ಕಳಿಸಿಬಿಟ್ಟಿದ್ದರು. ಅವರು ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಚಾರ್ಜ್ ತೆಗೆದುಕೊಳ್ಳಬೇಕಾಗಿತ್ತು.

ನಮ್ಮ ಬಿ.ಎಸ್ ಸಿ.  ಡಿಗ್ರಿಯ ಅಂತಿಮ ಪರೀಕ್ಷೆಗಳು ೧೯೬೯ನೇ ಇಸವಿಯ ಮಾರ್ಚ್ ತಿಂಗಳಿನ ಕೊನೆಯ ವಾರದಲ್ಲಿ ಆರಂಭಗೊಂಡವು. ನಾನು ಫಿಸಿಕ್ಸ್ ಸಬ್ಜೆಕ್ಟಿನ ಎಲ್ಲಾ ಪ್ರಶ್ನೆ ಪತ್ರಿಕೆಗಳಿಗೂ ಚೆನ್ನಾಗಿ ಉತ್ತರ ಬರೆದೆ ಮತ್ತು ಪ್ರಾಕ್ಟಿಕಲ್ ಪರೀಕ್ಷೆ ಕೂಡ ತೃಪ್ತಿಕರವಾಗಿಯೇ ನಡೆಯಿತು. ಆದರೆ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆಗಳಿಗೆ ನಾನು ಬರೆದ ಉತ್ತರಗಳು ನನಗಷ್ಟು ತೃಪ್ತಿ ನೀಡಲಿಲ್ಲ. ಆದರೆ ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ನಾನು ತುಂಬಾ ಚೆನ್ನಾಗಿಯೇ ಕಾರ್ಯ ನಿರ್ವಹಣೆ ಮಾಡಿದ್ದೆ. 

----ಮುಂದುವರಿಯುವುದು ---


No comments: