Thursday, July 16, 2020

ಬಾಲ್ಯ ಕಾಲದ ನೆನಪುಗಳು – ೧೦೧

ವರ್ಷದ  ಶೃಂಗೇರಿಯ ಅತಿ ಮುಖ್ಯ ಸಂಗತಿ ಎಂದರೆ ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕನ್ನಡದ ಪ್ರಸಿದ್ಧ ಸಾಹಿತಿ ಯು.ಆರ್. ಅನಂತಮೂರ್ತಿಯವರ  ಸಂಸ್ಕಾರ ಕಾದಂಬರಿಯ ಫಿಲಂ ಶೂಟಿಂಗ್ ಪೇಟೆಯ ಸುತ್ತಮುತ್ತ ನಡೆದುದು.  ಕನ್ನಡ ಸಿನಿಮಾದ ಚಿತ್ರಕಥೆ ಮತ್ತು ಸಂಭಾಷಣೆ ಬರೆದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದವರು ಮುಂದೆ ಜ್ಞಾನಪೀಠ ಪ್ರಶಸ್ತಿ ಗಳಿಸಿದ ಗಿರೀಶ್ ಕಾರ್ನಾಡ್ ಅವರು. ಪಟ್ಟಾಭಿರಾಮ ರೆಡ್ಡಿಯವರು ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರದ ಅಧಿಕೃತ ನಿರ್ದೇಶಕರೂ ಅವರೇ ಆಗಿದ್ದರೂ ಕಾರ್ನಾಡ್ ಅವರೇ ಅದರ ಅನಧಿಕೃತ ನಿರ್ದೇಶಕರಾಗಿದ್ದರೆಂದು ಹೇಳಲಾಗುತ್ತಿತ್ತು. ಚಿತ್ರದ ನಾಯಕಿಯಾಗಿ ಕಥೆಯಲ್ಲಿ ಬರುವ ವೇಶ್ಯೆ ಚಂದ್ರಿಯ ಪಾತ್ರವನ್ನು ವಹಿಸಿದವರು ಪಟ್ಟಾಭಿರಾಮ ರೆಡ್ಡಿಯವರ ಪತ್ನಿ ಸ್ನೇಹಲತಾ ರೆಡ್ಡಿಯವರು.

ತುಂಬಾ ಪ್ರತಿಭಾವಂತ ಮಹಿಳೆಯಾಗಿದ್ದ ಸ್ನೇಹಲತಾ ಅವರು ಮುಂದೆ  ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲು ವಾಸ ಮಾಡಬೇಕಾಗಿ ಬಂತು. ಆಗ ಅವರ ಅರೋಗ್ಯ ಹದಗೆಟ್ಟು ತುಂಬಾ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಾಣ ಕಳೆದುಕೊಂಡರು. ಚಿತ್ರದ ಒಂದು ವಿಶೇಷವೆಂದರೆ ಆಗ ತಾನೆ ಇಂಡಿಯಾಕ್ಕೆ ಪ್ರವಾಸಿಯಾಗಿ ಬಂದಿದ್ದ ಟಾಮ್ ಕೊವಾನ್  ಅವರು ಅದರ ಛಾಯಾಗ್ರಾಹಕರಾದದ್ದು. ಚಿತ್ರದ ಮುಖ್ಯ ನಕಾರಾತ್ಮಕ ವ್ಯಕ್ತಿಯ ಪಾತ್ರದಲ್ಲಿ ಕನ್ನಡದ ವಿವಾದಾತ್ಮಕ ಸಾಹಿತಿಯಾಗಿದ್ದ ಪಿ. ಲಂಕೇಶ್ ಅವರು ಅಭಿನಯಿಸಿದ್ದರು. ಅವರು ನಿರ್ವಹಿಸಿದ ನಾರಣಪ್ಪನ ಪಾತ್ರ ಚಿಕ್ಕದೇ ಆದರೂ ಪಾತ್ರದ ಶವ ಸಂಸ್ಕಾರದ ವಿವಾದವೇ ಚಿತ್ರದ ಮುಖ್ಯ ಕಥಾವಸ್ತು ಆಗಿತ್ತು. ಈ ಚಿತ್ರದ ಬಿಡುಗಡೆಯೇ ಒಂದು ವಿವಾದಾತ್ಮಕ ವಿಷಯವಾಗಿ ಸೆನ್ಸಾರ್ ಬೋರ್ಡ್  ಅದರ ಬಿಡುಗಡೆ ಮಾಡದಂತೆ ನಿಷೇದಾಜ್ಞೆ ಹೊರಡಿಸಿತ್ತು. ವಿಚಿತ್ರವೆಂದರೆ ಮುಂದೆ ಚಿತ್ರದ ಬಿಡುಗಡೆಯಾಗಿ ೧೯೭೧ನೇ ಇಸವಿಯಲ್ಲಿ ರಾಷ್ಟ್ರಪತಿಯವರಿಂದ "ಬೆಸ್ಟ್ ಇಂಡಿಯನ್ ಫೀಚರ್ ಫಿಲಂ" ಪ್ರಶಸ್ತಿಯನ್ನೂ ಗಳಿಸಿತು!

ಚಿತ್ರದ ಬಗ್ಗೆ ವಿವಾದಗಳು ಏನೇ ಇರಲಿ, ಆದರೆ ಶೃಂಗೇರಿಯ ಜನಗಳಿಗೆ ಮತ್ತು ವಿದ್ಯಾರ್ಥಿಗಳಾದ ನಮಗೆ ಚಿತ್ರದ ಶೂಟಿಂಗ್ ಒಂದು ತುಂಬಾ ಆಕರ್ಷಕ ಮತ್ತು ಎಂದೆಂದೂ ನೆನಪಿಡುವ ಅವಕಾಶವಾಗಿ ಹೋಯಿತು. ನಾವು ನಮ್ಮ ಜೀವನದಲ್ಲಿ ಮೊಟ್ಟ ಮೊದಲ ಬಾರಿ ಸಿನಿಮಾ ಶೂಟಿಂಗ್ ಒಂದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶ ಅದಾಗಿತ್ತು. ಸಂಪೂರ್ಣ ಚಿತ್ರವನ್ನು ಶೃಂಗೇರಿ ಮತ್ತು ಅದರ ಸುತ್ತಮುತ್ತ ಹೊರಾಂಗಣ ಚಿತ್ರೀಕರಣದ ಮೂಲಕವೇ ಮುಗಿಸಲಾಯಿತು. ನಮಗೆಲ್ಲಾ ಕನ್ನಡದ ಪ್ರಸಿದ್ಧ ಸಾಹಿತಿಗಳನ್ನು ಮತ್ತು ಬಹು ಪ್ರತಿಭೆಯ ಕಲಾವಿದರನ್ನು ನೋಡುವ ಅಪೂರ್ವ ಅವಕಾಶ ಅದಾಗಿತ್ತು. ಚಿತ್ರದ ಇನ್ನೊಂದು ವಿಶೇಷವೆಂದರೆ ಅದರಲ್ಲಿ ಯಾವುದೇ ಮಾಮೂಲಿ ಕನ್ನಡ ಸಿನಿಮಾ ನಟರು ಅಭಿನಯ ಮಾಡದೇ ಕೇವಲ ಹವ್ಯಾಸಿ ಕಲಾವಿದರೇ ಅದರಲ್ಲಿ ಪಾತ್ರವಹಿಸಿದುದು. ಅವರಲ್ಲಿ ದಾಶರಥಿ ದೀಕ್ಷಿತ್, ಸಿ.ಆರ್.ಸಿಂಹ, ಭಾರ್ಗವಿ ನಾರಾಯಣ್ ಮತ್ತು ಬಿ.ಆರ್.ಜಯರಾಮ್ ಅವರು ನೆನಪಿಗೆ ಬರುತ್ತಾರೆ. ಚಿತ್ರದ ಸಂಗೀತ ನಿರ್ದೇಶನ ರಾಜೀವ್ ತಾರಾನಾಥ್ ಮತ್ತು ಆರ್ಟ್ ಡೈರೆಕ್ಷನ್  ಎಸ್ ಜಿ. ವಾಸುದೇವ್ ಅವರದ್ದಾಗಿತ್ತು.

ಸಿನಿಮಾದ ಹೆಚ್ಚಿನ ಚಿತ್ರೀಕರಣ ಶೃಂಗೇರಿಯ ಹತ್ತಿರದಲ್ಲೇ ತುಂಗಾ ನದಿಯ ದಡದಲ್ಲಿ ಇದ್ದ ವೈಕುಂಠಪುರ ಎಂಬ ಊರಿನಲ್ಲಿ ನಡೆಯಿತು. ನಾನು ಹಿಂದೆ ಅಕ್ಕನ ಮನೆಯಲ್ಲಿದ್ದಾಗ ಹಳ್ಳಿಯ ಮೂಲಕವೇ ಜಕ್ಕಾರುಕೊಡಿಗೆ ಎಂಬ ಊರಿಗೆ ನಡೆದು ಹೋದುದು ಚಿತ್ರೀಕರಣವನ್ನು ವೀಕ್ಷಿಸುವಾಗ ನನ್ನ ನೆನಪಿಗೆ ಬಂತು. ಊರು ಸಂಸ್ಕಾರದ ಕಥೆಯ ಚಿತ್ರೀಕರಣಕ್ಕೆ ತುಂಬಾ ಸೂಕ್ತವಾಗಿತ್ತೆಂಬುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಸರಿ ಸುಮಾರು ಮೂರು ತಿಂಗಳು ಚಿತ್ರದ ಶೂಟಿಂಗ್ ಶೃಂಗೇರಿಯಲ್ಲಿ ನಡೆಯಿತು ಅನಿಸುತ್ತದೆ. ಪೇಟೆಯ ಹೋಟೆಲ್ ಗಳಿಗೆ ಆಗ ತುಂಬಾ ಒಳ್ಳೆಯ ವ್ಯವಹಾರ ಸಿಕ್ಕಿತು. ಪೇಟೆಯಲ್ಲಿ ಆಗ ಒಂದು ಹಬ್ಬದ ವಾತಾವರಣ ಇತ್ತು. ನಮ್ಮ ರಜೆಯ ದಿನಗಳಲ್ಲಿ ನಾವು ಚಿತ್ರೀಕರಣ ನಡೆಯುತ್ತಿದ್ದಲ್ಲಿ ಹಾಜರಾಗಿ ಬಿಡುತ್ತಿದ್ದೆವು.  ಮುಖ್ಯವಾಗಿ ಶೃಂಗೇರಿಯ ಹೊಳೆ ಗೊಣೆಯಲ್ಲಿ ನಡೆದ ಶೂಟಿಂಗ್ ಒಂದು ತುಂಬಾ ನೆನಪಿಗೆ ಬರುತ್ತಿದೆ. ಅದರಲ್ಲಿ ನುರಿತ ಕಲಾವಿದ ಬಿ.ಆರ್.ಜಯರಾಮ್  ಅವರು ಪಾತ್ರವಹಿಸಿದ್ದರು. ಅವರಿಗೆ ಮುಂದೆ "ಶ್ರೇಷ್ಠ ಪೋಷಕನಟ ಪ್ರಶಸ್ತಿ" ಕೂಡ ದೊರೆಯಿತಂತೆ. 

ತತ್ವಶಾಸ್ತ್ರಜ್ಞರು ಸೇಡು ತೀರಿಸಿಕೊಂಡರೇ?

ನಮ್ಮ ಶೈಕ್ಷಣಿಕ ವರ್ಷ ಮುಗಿಯುತ್ತಾ ಬರುತ್ತಿದ್ದಂತೇ ಶೃಂಗೇರಿ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿ ಜೀವನವೂ ಕೊನೆಗೊಳ್ಳುವುದರಲ್ಲಿತ್ತು. ಒಂದು ದಿನ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರಿನ್ಸಿಪಾಲರು ಒಂದು ಘೋಷಣೆ ಮಾಡಿದರು. ಅವರ ಪ್ರಕಾರ ನಮ್ಮ ಕಾಲೇಜು ಪ್ರತಿ ವರ್ಷವೂ ಡಾಕ್ಟರ್ ಟಿ.ಎಂ..ಪೈ ಅವರ ಹೆಸರಿನಲ್ಲಿ ಒಂದು ಚಿನ್ನದ ಪದಕವನ್ನು ಕೊಡಲು ತೀರ್ಮಾನಿಸಿತ್ತು.  ಪದಕವನ್ನು ವರ್ಷ ಕಾಲೇಜಿನಿಂದ ನಿರ್ಗಮಿಸುವ ಅತ್ಯುತ್ತಮ ವಿದ್ಯಾರ್ಥಿಗೆ ಕೊಡುವುದೆಂದೂ ತೀರ್ಮಾನವಾಗಿತ್ತು. ಕಾಲೇಜಿನ ಆಡಳಿತ ವರ್ಗ ಪದಕವನ್ನು ಯಾವ ವಿದ್ಯಾರ್ಥಿಗೆ ಕೊಡುವುದೆಂದೂ ತೀರ್ಮಾನಿಸಿತ್ತು. ಪ್ರಿನ್ಸಿಪಾಲರ ಪ್ರಕಾರ ಪದಕಕ್ಕೆ ಇಬ್ಬರು ವಿದ್ಯಾರ್ಥಿಗಳು ಸಮನಾದ ಅರ್ಹತೆ ಅಥವಾ ಅಂಕಗಳನ್ನು ಗಳಿಸಿದ್ದರು.  ಅವರಲ್ಲಿ ಕಾಲೇಜಿನ ಮೊದಲ ವರ್ಷವೇ ಪಿ.ಯು.ಸಿ ಪರೀಕ್ಷೆಯಲ್ಲಿ ನಾಲ್ಕನೇ Rank ಗಳಿಸಿದ ನಾನೊಬ್ಬನಾಗಿದ್ದೆ. ಇನ್ನೊಬ್ಬ ವಿದ್ಯಾರ್ಥಿ ಎರಡನೇ ವರ್ಷದ ಬಿ. . ಪರೀಕ್ಷೆಯಲ್ಲಿ ಸಂಸ್ಕೃತ ಸಬ್ಜೆಕ್ಟಿನಲ್ಲಿ Rank ಪಡೆದವನಾಗಿದ್ದ. ಹೀಗೆ  ಸಮನಾದ ಅರ್ಹತೆ ಪಡೆದಿದ್ದ ನಮ್ಮಿಬ್ಬರಲ್ಲಿ ಟೈ ಬ್ರೇಕ್ ಮಾಡಲು ಹೊಸದೊಂದು ಅರ್ಹತೆಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಯಿತಂತೆ.

ಅದೇನೆಂದರೆ ವಿದ್ಯಾರ್ಥಿಯು ಕಾಲೇಜಿನಲ್ಲಿ ನಡೆದ ಎಲ್ಲಾ ಪರೀಕ್ಷೆಗಳಿಗೂ ಹಾಜರಾಗಿದ್ದಾನೆಯೇ ಎಂಬ ವಿಷಯ. ನಾನು ಹಿಂದೆಯೇ ಪಿ.ಯು.ಸಿ ತರಗತಿಯಲ್ಲಿ ಕಾಲೇಜು ನಡೆಸಿದ ಪೂರ್ವಭಾವಿ (ಪ್ರಿಪರೇಟರಿ) ಪರೀಕ್ಷೆಗೆ ನಾನು ಹಾಜರಾಗಿರಲಿಲ್ಲವೆಂದು ಬರೆದಿದ್ದೇನೆ. ಹಾಗಿದ್ದೂ ನಾನು ಅಂತಿಮ ಪರೀಕ್ಷೆಯಲ್ಲಿ ನಾಲ್ಕನೇ Rank ಪಡೆದುದು ನನ್ನ ಒಂದು ದೊಡ್ಡ ಸಾಧನೆ ಎಂದು ನಾನು ತಿಳಿದಿದ್ದೆ. ಆದರೆ ಸಾಧನೆಯನ್ನೇ ನನ್ನ ಗೌರವಾನ್ವಿತ ಪ್ರಿನ್ಸಿಪಾಲರು ನನಗೆ ಪದಕ ದೊರೆಯದಂತೆ ಮಾಡಲು ಮಾನದಂಡವಾಗಿ ಉಪಯೋಗಿಸುವರೆಂದು ನಾನು ಕನಸ್ಸಿನಲ್ಲೂ ಎಣಿಸಿರಲಿಲ್ಲ. ಆದರೆ ಅವರು ಕಾರಣಕ್ಕಾಗಿಯೇ ಪದಕವನ್ನು ಇನ್ನೊಬ್ಬ ವಿದ್ಯಾರ್ಥಿಗೆ ಕೊಡುವುದಾಗಿ ತೀರ್ಮಾನ ಮಾಡಲಾಯಿತೆಂದು ಘೋಷಿಸಿ ಬಿಟ್ಟರು!

ಪ್ರಿನ್ಸಿಪಾಲರ ಘೋಷಣೆ ಕೇಳಿ ನನ್ನ ಮೆಚ್ಚಿನ ಅದ್ಯಾಪಕರುಗಳಿಗೆ ಪರಮಾಶ್ಚರ್ಯವಾಯಿತೆಂದು ಅವರ ಮುಖದ ಭಾವನೆಗಳೇ ಸೂಚಿಸುತ್ತಿದ್ದವು. ಪದಕ ನೀಡಲು  ಇಷ್ಟೊಂದು ವಿಚಿತ್ರ ಮಾನದಂಡವನ್ನು ಹೇಗೆ ಬಳಸಲಾಯಿತೆಂದು ಅವರು ಯಾರಿಗೂ ಅರ್ಥವಾಗಲಿಲ್ಲ. ಮತ್ತು ಕಾರಣವೂ ತಿಳಿಯಲಿಲ್ಲ. ಅವರೆಲ್ಲಾ ನನ್ನೊಡನೆ ನನಗೆ ಪದಕ ದೊರೆಯದಿದ್ದಕ್ಕೆ ತಮ್ಮ ಅಸಂತೋಷವನ್ನು ವ್ಯಕ್ತ ಮಾಡಿದರು. ಆದರೆ ಯಾರಿಗೂ ಪ್ರಿನ್ಸಿಪಾಲರೊಡನೆ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸುವ ಧೈರ್ಯವಿರಲಿಲ್ಲ. ಆದರೆ ನನಗೆ ಹೇಗೆ ನಾನೊಂದು ಪರೀಕ್ಷೆಗೆ ಹಾಜರಾಗದ ವಿಷಯವನ್ನೇ ನನ್ನ ವಿರುದ್ಧವಾಗಿ ಬಳಸಿಕೊಳ್ಳಲಾಯಿತೆಂದು ಗೊತ್ತಿತ್ತು. ಅದೇನು ದೊಡ್ಡ ರಹಸ್ಯವಾಗಿರಲಿಲ್ಲ. ನಾನು ಪ್ರಿನ್ಸಿಪಾಲರು ಹೇಳಿದಂತೆ ಮಣಿಪಾಲ್ ಅಕಾಡೆಮಿಯ ಬಾಂಡ್ ಗಳಲ್ಲಿ ನನ್ನ ಸ್ಕಾಲರ್ಷಿಪ್ ಹಣವನ್ನು ತೊಡಗಿಸಲು ನಿರಾಕರಿಸಿದುದೇ ನನಗೆ ಚಿನ್ನದ ಪದಕ ದೊರೆಯದಿರಲು ಮುಖ್ಯ ಕಾರಣವಾಗಿತ್ತು!

(ಆದರೆ ದೇವರು ನನ್ನ ಕೈ ಬಿಡಲಿಲ್ಲ. ಮುಂದೆ ಇದೇ ರಾಮಕೃಷ್ಣರಾಯರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಿಂದೂ ತತ್ವಶಾಸ್ತ್ರದ ಪ್ರೊಫೆಸರ್ ಆಗಿದ್ದಾಗ ಅವರ ಕಣ್ಣ ಮುಂದೆಯೇ ಕುಲಪತಿ ಹಾಗೂ ರಾಜ್ಯಪಾಲರಾಗಿದ್ದ ಧರ್ಮವೀರ ಅವರು ನನಗೆ ಚಿನ್ನದ ಪದಕ ಪ್ರಧಾನ ಮಾಡಿದರು.  ಬಗ್ಗೆ ಮುಂದೆ ಬರೆಯಲಿದ್ದೇನೆ)

----ಮುಂದುವರಿಯುವುದು ---


No comments: