ಭಾವನವರ ಆಳುಗಳು ವಾಸಮಾಡುತ್ತಿದ್ದ
ಕೊಟ್ಟಿಗೆಯ ಪಕ್ಕದಲ್ಲೇ ಇನ್ನೊಂದು ಆಳುಗಳ ಬಿಡಾರವಿತ್ತು.
ಅದರಲ್ಲಿ ಗೋವಿಂದ ಶೆಟ್ಟಿ ಎಂಬ ಮಧ್ಯ ವಯಸ್ಸಿನ ಆಳು ವಾಸಮಾಡುತ್ತಿದ್ದ. ನನಗೆ ನೆನಪಿದ್ದಂತೆ ಅವನು
ಅಚ್ಯುತಯ್ಯನವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪ್ರಾಯಶಃ ಅವನ ಹೆಂಡತಿ ಮಕ್ಕಳು ದಕ್ಷಿಣ ಕನ್ನಡದಲ್ಲೇ ಉಳಿದಿರಬೇಕು. ಒಂಟಿಯಾಗಿದ್ದ
ಗೋವಿಂದ ಶೆಟ್ಟಿಯ ಕಣ್ಣು ಶೀನನ ಹೆಂಡತಿ ಲಕ್ಷ್ಮಿಯ ಮೇಲೆ ಬಿತ್ತು. ಇವರಿಬ್ಬರ ಅನೈತಿಕ ಸಂಬಂಧ ಊರಿನವರಿಗೆಲ್ಲಾ
ಗೊತ್ತಾದರೂ ಶೀನ ಮಾತ್ರಾ ಕಣ್ಣು ಮುಚ್ಚಿಕೊಂಡಿದ್ದ. ಶೀನ, ಹಿರಿಯ ಮತ್ತು ನಕ್ರ ಎಲ್ಲರೂ ಮರಾಠಿ ಪಂಗಡಕ್ಕೆ
ಸೇರಿದ ನಾಯ್ಕ ಕುಲದವರು. ಈ ಕುಲಕ್ಕೆ ಸೇರಿದ ಇನ್ನಿಬ್ಬರು ತರುಣ ಆಳುಗಳಿಗೆ ಗೋವಿಂದಶೆಟ್ಟಿಯ ಅನೈತಿಕ
ಸಂಬಂಧ ಏನೂ ಇಷ್ಟವಿರಲಿಲ್ಲ. ಒಂದು ದಿನ ಯಾವುದೋ ಕಾರಣಕ್ಕೆ ಅವರು ಶೆಟ್ಟಿಯೊಡನೆ ಜಗಳ ತೆಗೆದರು. ನಮ್ಮ
ಕಣ್ಣು ಮುಂದೆಯೇ ಈ ಜಗಳ ಅತಿರೇಕಕ್ಕೆ ಹೋಗಿ ಅವರಿಬ್ಬರೂ ಸೇರಿ ಗೋವಿಂದಶೆಟ್ಟಿಗೆ ಚೆನ್ನಾಗಿ ದೊಣ್ಣೆ
ರುಚಿ ತೋರಿಸಿಬಿಟ್ಟರು. ಆ ಬಿಸಿರಕ್ತದ ತರುಣರಿಗೆ ಪ್ರಸಂಗ ಹೇಗೆ ಮುಂದುವರಿಯುವುದೆಂಬ ಬಗ್ಗೆ ಸ್ವಲ್ಪವೂ
ಅರಿವಿರಲಿಲ್ಲ.
ಹೊಡೆತ ತಿಂದ ಗೋವಿಂದ ಶೆಟ್ಟಿ ಎರಡು
ದಿನ ಯಾರ ಕಣ್ಣಿಗೂ ಬೀಳಲಿಲ್ಲ. ಅವನ ಬಿಡಾರದ ಬಾಗಿಲು
ಮುಚ್ಚಿತ್ತು. ಆ ದಿನಗಳಲ್ಲಿ ಗೋವಿಂದ ಶೆಟ್ಟಿಯ ಬಂಟ ಸಮುದಾಯದ ಬೇರೆ ಯಾವ ಕೂಲಿ ಆಳುಗಳೂ (ಕಮಲ ಶೆಡ್ತಿಯ
ಹೊರತು) ಹೊಕ್ಕಳಿಕೆಯಲ್ಲಿ ಇರಲಿಲ್ಲ. ಮಂಜೇಶೆಟ್ಟಿಯ ಹೋಟೆಲ್ ಇದ್ದರೂ ಅವನು ಇಂತಹ ವಿಷಯಗಳಿಗೆ ತಲೆ
ಹಾಕುತ್ತಿರಲಿಲ್ಲ. ಹಾಗಾಗಿ ಮರಾಠಿ ನಾಯ್ಕರಿಗೆ ಬೇರೆ ಬಂಟ ಸಮುದಾಯದವರ ಭಯ ಕೊಂಚವೂ ಇರಲಿಲ್ಲ. ಆದರೆ
ಅವರ ಭಾವನೆ ಎಷ್ಟು ತಪ್ಪಾಗಿತ್ತೆಂದು ಬೇಗನೆ ಅರಿವಾಯಿತು.
ಇದ್ದಕ್ಕಿದ್ದಂತೆ ಒಂದು ಸಮಾಚಾರ ಹೊಕ್ಕಳಿಕೆ ಊರನ್ನು ತಲುಪಿತು. ಅದೇನೆಂದರೆ
ಗೋವಿಂದಶೆಟ್ಟಿ ಸೀದಾ ಬಂಟ ಸಮುದಾಯದ ಮುಖ್ಯಸ್ಥರೂ ಮತ್ತು
ಶ್ರೀಮಂತ ಜಮೀನ್ದಾರರಾಗಿದ್ದ ಬಚ್ಚಣಿಕೆ ಕೊರಗಶೆಟ್ಟಿಯವರ ಮನೆಗೆ ಹೋಗಿ ತನಗಾದ ಅವಮಾನವನ್ನು
ಹೇಳಿಕೊಂಡಿದ್ದನಂತೆ. ಅವರು ಹರಿಹರಪುರದ ಸುತ್ತಮುತ್ತಲಿದ್ದ ಬಂಟರೆಲ್ಲರ ಸಭೆ ಕರೆದರಂತೆ. ತಮ್ಮ ಸಮುದಾಯದ ಒಬ್ಬನಿಗೆ ಆದ ಅವಮಾನ ಯಾರಿಗೂ ಸಹಿಸಲಾಗಲಿಲ್ಲವಂತೆ.
ಸಭೆಯಲ್ಲಿ ಹೊಕ್ಕಳಿಕೆ ಮರಾಠಿ ಕುಟುಂಬಗಳಿಗೆ ಬಂಟರ ಸೇನೆಯ ಧಾಳಿಯ ಹಾಗೂ ಅವರ ಪೆಟ್ಟಿನ ರುಚಿ ತೋರಿಸುವುದೆಂದು
ತೀರ್ಮಾನ ಮಾಡಲಾಯಿತಂತೆ. ಅದಕ್ಕಾಗಿ ಒಂದು ದಿನವನ್ನೂ ಗೊತ್ತು ಮಾಡಲಾಯಿತಂತೆ.
ಬಂಟ
ಮರಾಠ ಕಾಳಗ
ಸುದ್ದಿ ಬಹು ಬೇಗನೆ ಊರಿನಲ್ಲೆಲ್ಲಾ
ಹರಡಿತು. ನಮಗಂತೂ ಈ ಕಾಳಗ ಹೇಗೆ ನಡೆಯುವುದು ಹಾಗೂ ಮುಕ್ತಾಯಗೊಳ್ಳುವುದೆಂದು ನೋಡಲು ತುಂಬಾ ಕುತೂಹಲವಿತ್ತು.
ನಾವು ಅಲ್ಲಿಯವರೆಗೆ ಕೇವಲ ಯಕ್ಷಗಾನಗಳ ಕಾಳಗಗಳನ್ನು ಮಾತ್ರ ನೋಡಿದ್ದೆವು. ಆದರೆ ಅವು ಕೇವಲ ಇಬ್ಬರ
ನಡುವೆ ನಡೆಯುತ್ತಿದ್ದ ನಟನೆಯ ಕಾಳಗ. ಆದರೆ ಈಗ ನೋಡಬಹುದಾದದ್ದು
ಎರಡು ಸಮುದಾಯಗಳ ನಡುವಿನ ಪ್ರತ್ಯಕ್ಷ ಹಾಗೂ ನೈಜ ಕಾಳಗ.
ನಮ್ಮ ಕುತೂಹಲ ಮತ್ತು ನಿರೀಕ್ಷೆಗೆ ಎಲ್ಲೆಯೇ ಇರಲಿಲ್ಲ.
ಮೊದಲೇ ನಿಗದಿ ಮಾಡಿದ ದಿನ ಬಂಟರ ಸೇನೆ
ಹೊಕ್ಕಳಿಕೆಗೆ ಆಗಮಿಸಿತೆಂದು ತಿಳಿದು ಬಂತು. ಆದರೆ ನಾವೆಣಿಸಿದಂತೆ ಅದನ್ನು ಎದುರಿಸಲು ಮರಾಠಿ ಸೇನೆಯ
ಯಾವ ಸೈನಿಕನೂ ಊರಿನವರ ಕಣ್ಣಿಗೆ ಬೀಳಲಿಲ್ಲ. ಕಾರಣವಿಷ್ಟೇ. ಅವರೆಲ್ಲಾ ಊರಿನಿಂದ ಪರಾರಿಯಾಗಿದ್ದರು! ಬಂಟರ ಸೇನೆಯ ಮುಖ್ಯಸ್ಥರು ಊರಿನ ಹಿರಿಯರೊಡನೆ ರಾಜಿ ಪಂಚಾಯಿತಿ
ಮಾಡಿ ಪ್ರಸಂಗಕ್ಕೆ ಮುಕ್ತಾಯ ಹಾಡಿದರು. ಮಂಜೇಶೆಟ್ಟಿಯ ಹೋಟೆಲಿನ ಕಾಫಿ ತಿಂಡಿ ಮುಗಿಸಿ ಬಂಟರ ಸೇನೆ
ಹಿಂದಿರುಗಿತು.
ಕಮ್ಮರಡಿ ಜೋಯಿಸರ
ದಿವ್ಯಔಷಧಿ
ಅಕ್ಕನಿಗೆ
ಮದುವೆಯಾಗಿ ನಾಲ್ಕು ವರ್ಷಗಳ ಮೇಲಾದರೂ
ಮಕ್ಕಳಾಗಲಿಲ್ಲವೆಂಬ ಕೊರಗು ಇತ್ತು. ಭಾವನವರಿಗೆ
ಯಾರ ಮೂಲಕವೋ ಕಮ್ಮರಡಿ ಜೋಯಿಸರೊಬ್ಬರು
ಸಂತಾನ ಮುಂದುವರೆಯುವ ಹಾಗೆ ಸ್ತ್ರೀಯರಿಗೆ ಔಷಧ
ಕೊಡುವುದರಲ್ಲಿ ಪ್ರವೀಣರಾಗಿದ್ದರೆಂದು ತಿಳಿದು ಬಂತು. ಭಾವನವರ
ಕೋರಿಕೆಯ ಮೇರೆಗೆ ಒಂದು ದಿನ
ಜೋಯಿಸರು ಮನೆಗೆ ಆಗಮಿಸಿದರು. ಆಜಾನುಬಾಹು
ಜೋಯಿಸರ ವ್ಯಕ್ತಿತ್ವ ಅವರ ಪಾಂಡಿತ್ಯವನ್ನು ಪ್ರದರ್ಶಿಸುವಂತಿತ್ತು.
ಜೋಯಿಸರು
ಅಕ್ಕನೊಡನೆ ಕೆಲವು ಪ್ರಶ್ನೆಗಳನ್ನು ಅವಳೊಬ್ಬಳನ್ನೇ
ಕೂರಿಸಿ ಕೇಳಬೇಕೆಂದು ಹೇಳಿದರು. ಅದಕ್ಕಾಗಿ ಉಪ್ಪರಿಗೆಯ ಮೇಲೆ ಜೋಯಿಸರನ್ನು ಕೂರಿಸಿ
ಅಲ್ಲಿಗೆ ಅಕ್ಕನನ್ನು ಕಳಿಸಲಾಯಿತು. ಅಕ್ಕನಿಗೆ ಅದೊಂದು ಅಗ್ನಿ ಪರೀಕ್ಷೆಯೇ
ಅನಿಸಿರಬೇಕು. ಅಕ್ಕ
ಸ್ವಲ್ಪ ಅಂಜಿಕೆ ಮತ್ತು ನಾಚಿಕೆಯಿಂದ
ಉಪ್ಪರಿಗೆ ಮೆಟ್ಟಲು ಹತ್ತಿ ಹೋದದ್ದು
ಈಗಲೂ ನನ್ನ ಕಣ್ಣ ಮುಂದೆ
ಕಾಣಿಸಿದಂತಾಗುತ್ತಿದೆ. ಕೇವಲ ಐದು ನಿಮಿಷಗಳಲ್ಲಿ
ಅಕ್ಕ ಮೌಖಿಕ ಪರೀಕ್ಷೆ ಮುಗಿಸಿ
ವಾಪಾಸ್ ಬಂದಳು. ಜೋಯಿಸರಿಂದ ಅಕ್ಕನಿಗೆ
ಸೂಕ್ತವಾದ ಔಷಧ ಕೊಡಲಾಯಿತು. ಆಮೇಲೆ
ಬೇಗನೆ ಅಕ್ಕ ಗರ್ಭಿಣಿ ಎಂದು
ಗೊತ್ತಾಯಿತು. ಹೊಕ್ಕಳಿಕೆಯಲ್ಲೇ ಇನ್ನೊಬ್ಬರಿಗೂ ಜೋಯಿಸರ ಔಷಧಿ ತೆಗೆದುಕೊಂಡ
ನಂತರ ಸಂತಾನ ಪ್ರಾಪ್ತಿಯಾಯಿತು. ಜೋಯಿಸರ
ಪ್ರವೀಣತೆ ತುಂಬಾ ಉನ್ನತ ಮಟ್ಟದ್ದಾಗಿತ್ತು.
ರುಕ್ಮಿಣಕ್ಕನ ಮದುವೆ
ನಮ್ಮ
ಎರಡನೇ ಅಕ್ಕನಾದ ರುಕ್ಮಿಣಕ್ಕ
ಮದುವೆಯ ವಯಸ್ಸಿಗೆ ಬಂದಿದ್ದಳು. ನಮ್ಮ ದೃಷ್ಟಿಯಲ್ಲಿ ರುಕ್ಮಿಣಕ್ಕನಷ್ಟು
ಸುಂದರಿ ನಮ್ಮ ಊರಿನಲ್ಲಿ ಬೇರೆ
ಯಾರೂ ಇರಲಿಲ್ಲ. ಅಲ್ಲದೇ ಮನೆ ಕೆಲಸಗಳಲ್ಲಿ
ಅಕ್ಕ ತುಂಬಾ ಹುಷಾರಿ. ನಮಗೆಲ್ಲಾ
ಆಗಾಗ ಅಕ್ಕನಿಂದ ಪೆಟ್ಟುಗಳು ಬೀಳುತ್ತಿದ್ದರೂ ನಮಗೆ ಅವಳ ಮೇಲೆ ಪ್ರೀತಿ
ಏನೂ ಕಡಿಮೆಯಿರಲಿಲ್ಲ. ಒಂದು
ಬಾರಿ ಅಕ್ಕನನ್ನು ನೋಡಲು ಹೊಸನಗರದ ಕಡೆಯಿಂದ
ಒಂದು ಗಂಡು ತನ್ನ ಸ್ನೇಹಿತರು
ಮತ್ತು ಮನೆಯವರೊಡನೆ ಬಂದಿದ್ದ. ಆ
ದಿನಗಳಲ್ಲಿ ಗಂಡಸರು ಕೇವಲ ಎರಡು
ಗುಂಡಿಗಳಿದ್ದ ಶರ್ಟ್ ಧರಿಸುವುದು ಮಾಮೂಲಾಗಿತ್ತು.
ಆದರೆ ಈ ಗಂಡು ಏಳೆಂಟು
ಗುಂಡಿಗಳಿದ್ದ ಆ ದಿನಗಳಲ್ಲಿ ರೂಢಿಯಿಲ್ಲದ
ಬುಷ್ ಶರ್ಟ್ ಧರಿಸಿದ್ದ. ಮಧ್ಯಾಹ್ನದ ವೇಳೆಗೆ ಬಂದ ಅವರನ್ನು
ಊಟಕ್ಕೆ ಎಬ್ಬಿಸಲಾಯಿತು. ಊಟಕ್ಕೆ
ಶರ್ಟ್ ತೆಗೆದು ಬರಲೇ ಬೇಕಾಗಿತ್ತು.
ಬೇರೆಲ್ಲರೂ ಶರ್ಟ್ ತೆಗೆದು ಊಟಕ್ಕೆ
ಬಂದರೂ ಈ ಗಂಡಿಗೆ ತನ್ನ
ಹೊಸ ಶರ್ಟಿನ ಗುಂಡಿಗಳನ್ನು ತೆಗೆದು
ಮುಗಿಯಲೇ ಇಲ್ಲ. ಅವನ ಒದ್ದಾಟ
ನೋಡಿ ನಮಗೆ ನಗೆ ತಡೆಯಲಾರದೇ
ಮನೆಯಿಂದ ಹೊರಗೆ ಓಡಿ ಬಿಟ್ಟೆವು.
ನಮ್ಮ ದೃಷ್ಟಿಯಲ್ಲಿ ಅವನು ಅಕ್ಕನಿಗೆ ಸರಿಯಾದ
ಗಂಡು ಅನಿಸಲಿಲ್ಲ. ಒಟ್ಟಿನಲ್ಲಿ ಆ ಸಂಬಂಧ ಕೂಡಿ
ಬರಲೂ ಇಲ್ಲ.
ಹೊಸಮನೆ ಸಂಬಂಧ
ನಾನು
ಹೊಕ್ಕಳಿಕೆಯಲ್ಲಿ ಇದ್ದಾಗಲೇ ರುಕ್ಮಿಣಕ್ಕನಿಗೆ ಹೊಸಮನೆ ತಿಮ್ಮಪ್ಪಯ್ಯನವರ ಹಿರಿಯ
ಮಗ ಶ್ರೀನಿವಾಸಯ್ಯನೊಡನೆ ಮದುವೆಯ ಪ್ರಸ್ತಾಪ ಬಂತು. ವಿಚಿತ್ರವೆಂದರೆ
ಹೆಣ್ಣು ನೋಡುವುದಕ್ಕೆ ನಮ್ಮ ಮನೆಗೆ ತಿಮ್ಮಪ್ಪಯ್ಯ
ಬಂದಾಗ ಅವರೊಡನೆ ಮದುವೆಯ ಗಂಡು
ಶ್ರೀನಿವಾಸಯ್ಯನೇ ಇರಲಿಲ್ಲ. ಹಾಗಾಗಿ
ವಧು ವರ ಇಬ್ಬರೂ
ಪರಸ್ಪರ ಭೇಟಿಯಾಗಲೇ ಇಲ್ಲ. ಆದರೆ ತಿಮ್ಮಪ್ಪಯ್ಯನವರು
ವಧು ಪರೀಕ್ಷೆ ಮುಗಿಸಿ ವಧು-ವರ ಜೋಡಿ ಚೆನ್ನಾಗಿದೆ
ಎಂದು ತೀರ್ಮಾನ ಮಾಡಿಬಿಟ್ಟರು. ನಮಗೆ
ರುಕ್ಮಿಣಕ್ಕ ಮತ್ತು ಭಾವ ಮದುವೆಯ
ಮುಂಚೆ ಒಬ್ಬರನ್ನೊಬ್ಬರು ನೋಡಿದ್ದರೇ ಎಂದು ಗೊತ್ತಾಗಲೇ ಇಲ್ಲ.
ರುಕ್ಮಿಣಕ್ಕ ಗೌರಕ್ಕನ ಮನೆಗೆ ಹೋಗಿದ್ದಾಗ
ಪ್ರಾಯಶಃ ಒಬ್ಬರನ್ನೊಬ್ಬರು ನೋಡಿರುವ ಸಾಧ್ಯತೆ ಇತ್ತು.
----ಮುಂದುವರಿಯುವುದು ---
No comments:
Post a Comment