Friday, March 9, 2018

ಒಂದು ಊರಿನ ಕಥೆ - 5 (ಹೊಕ್ಕಳಿಕೆ)


ನಮ್ಮ ಊರಿನ ಶಾಲೆಗೆ ಸುಬ್ಬಾಭಟ್ಟರ ನಂತರ ನಾರ್ವೆಯ ವಿಶ್ವೇಶ್ವರಯ್ಯನವರು ಮೇಷ್ಟರಾಗಿ ಬಂದರು. ಅವರು ನನಗೆ ೫ನೇ ತರಗತಿಗೆ ಪ್ರೈವೇಟ್ ಪಾಠ ಮಾಡಿ ನಾರ್ವೆ ಮಿಡ್ಲ್ ಸ್ಕೂಲ್ನಲ್ಲಿ ಪರೀಕ್ಷೆ ಕಟ್ಟಿಸಿದರು. ಹೆಡ್ ಮಾಸ್ಟರ್ ಹಿರಣ್ಣಯ್ಯನವರು ನಾನು ಎಲ್ಲ ವಿಷಯಗಳಲ್ಲೂ (subjects) ತರಗತಿಗೆ ಪ್ರಥಮನಾಗಿ ಬಂದಿದ್ದೇನೆಂದು ಪ್ರಕಟಿಸಿ ಬಿಟ್ಟರು. ನಾರ್ವೆಯಲ್ಲಿ ನಾನು ಮೇಷ್ಟರ ಮನೆಯಲ್ಲಿ ಕಳೆದ ಎರಡು ವಾರಗಳು ನನ್ನ ಜೀವನದ ಅತ್ಯಂತ ಅಮೂಲ್ಯ ದಿನಗಳಾಗಿದ್ದವು. ನಾರ್ವೆ ಊರಿನ ಜನಗಳು, ಶಾಲೆಯ ಮೇಷ್ಟರು ಮತ್ತು ವಿದ್ಯಾರ್ಥಿಗಳಿಂದ ನನಗೆ ವಿಶೇಷ ಪ್ರೀತಿ ಮತ್ತು ಅಭಿಮಾನಗಳು  ದೊರೆತವು. ಅದಕ್ಕೆಲ್ಲಾ ವಿಶ್ವೇಶ್ವರಯ್ಯನವರೇ ಕಾರಣ.  ಅಷ್ಟಲ್ಲದೇ ಮೇಷ್ಟರ ಮನೆಯವರೆಲ್ಲಾ ನಾನು ಅವರ ಮನೆಯಲ್ಲೇ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂದು ಒತ್ತಾಯ ಮಾಡಿದರು. ಹಿರಣ್ಣಯ್ಯನವರಿಗೂ ನಾನು ಅವರ ಶಾಲೆಯಲ್ಲೇ ಮುಂದೆ ಓದಬೇಕೆಂಬ ಅಭಿಪ್ರಾಯವಿತ್ತು.

ಆದರೆ ವಿಶ್ವೇಶ್ವರಯ್ಯನವರದ್ದು ತುಂಬಾ ದೊಡ್ಡ ಸಂಸಾರವಾಗಿದ್ದರಿಂದ ನಾನು ಅವರಿಗೆ ಹೊರೆಯಾಗುವುದು ನಮ್ಮ ಮನೆಯವರಿಗೆ ಇಷ್ಟವಿರಲಿಲ್ಲ. ಅಲ್ಲದೆ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ  ನಾನು ಹೊಕ್ಕಳಿಕೆಯಲ್ಲಿ ಗೌರಕ್ಕನ ಮನೆಯಲ್ಲಿದ್ದು ಗಡಿಕಲ್ ಮಾಧ್ಯಮಿಕ ಶಾಲೆಗೆ ಹೋಗುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ನನಗೆ ಅಕ್ಕನ ಮನೆಯ ಮೇಲೆ ತುಂಬಾ ಆಕರ್ಷಣೆ ಇತ್ತು. ಅದಕ್ಕೆ ವಿಶೇಷ ಕಾರಣಗಳಿದ್ದುವು. ಗೌರಕ್ಕ ರುಕ್ಮಿಣಿಕ್ಕನಂತೆ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಅವಳದು ತುಂಬಾ ಮೃದು ಸ್ವಭಾವ. ಅಲ್ಲದೆ ಮನೆಯಲ್ಲಿ ಹಾಲು ಮತ್ತು ಮೊಸರಿನ ಸಮೃದ್ಧಿ ಇತ್ತು. ನಮ್ಮ ಮನೆಯಲ್ಲಿದ್ದಂತೆ ಯಾವುದೇ ಕಷ್ಟದ ಕೆಲಸಗಳನ್ನು ಮಾಡುವ ಪ್ರಶ್ನೆ ಇರಲಿಲ್ಲ. ನಾನು ಹಿಂದಿನ ಬಾರಿ ಹೊಕ್ಕಳಿಕೆಗೆ ಹೋದಾಗ ಅಕ್ಕ ದೊಡ್ಡ ಸಂಸಾರದೊಡನೆ ಹಳೆಯ ಮನೆಯಲ್ಲಿದ್ದಳು. ಆದರೆ ಆಮೇಲೆ ಆಸ್ತಿ  ಪಾಲಾದ ನಂತರ ಈಗ ಪಕ್ಕದಲ್ಲೇ  ಕಟ್ಟಿದ  ಹೊಸಮನೆಯಲ್ಲಿದ್ದಳು. ಹಾಗಾಗಿ ನನಗೆ ಅವಳಿಂದ ಹೆಚ್ಚಾದ ಪ್ರೀತಿ ಮತ್ತು ಸ್ವಾತಂತ್ರ ಸಿಗಲಿತ್ತು .
0-------------------0--------------0----------------0----------------------0-----------------0-
ಆ ಬೇಸಿಗೆ ರಜದಲ್ಲಿ ನನಗೆ ಅಮ್ಮನೊಡನೆ ಒಮ್ಮೆ ಹೊಕ್ಕಳಿಕೆಗೆ ಹೋಗಿ ಬರುವ ಅವಕಾಶ ಸಿಕ್ಕಿತು. ಅಕ್ಕನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ.  ಭಾವನವರು ಊರಿನ ದೇವಸ್ಥಾನದ ಪಕ್ಕದಲ್ಲಿದ್ದ ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡುವುದಾಗಿ ಹೇಳಿಕೊಂಡಿದ್ದರಂತೆ. ಆ ಸಮಾರಂಭ ತುಂಬಾ ಸಂಭ್ರಮದಿಂದ ನಡೆಯಿತು. ನಾನು ಮೊದಲ  ಬಾರಿಗೆ ಅಕ್ಕನ ಹೊಸಮನೆಗೆ ಪ್ರವೇಶ ಮಾಡಿದೆ. ಮನೆ ಆ ಕಾಲಕ್ಕೆ ತುಂಬಾ ಚೆನ್ನಾಗಿ ಮತ್ತು ಅನುಕೂಲಕ್ಕೆ ತಕ್ಕಂತೆ ಕಟ್ಟಲ್ಪಟ್ಟಿತ್ತು. ಮನೆಯ  ಪಕ್ಕದಲ್ಲಿ ಒಂದು ದೊಡ್ಡ ಕಟ್ಟಡವನ್ನು ಜಾನುವಾರು, ಗಾಡಿಎತ್ತುಗಳು, ಅಕ್ಕಿ ಮತ್ತು ಬತ್ತಗಳನ್ನು ಕೂಡಿಡಲು ಅನುಕೂಲವಾಗುವಂತೆ ಕಟ್ಟಲಾಗಿತ್ತು. ಸಮಾರಂಭದ ದಿನ ರಾತ್ರಿ ಈ ಕಟ್ಟಡದ ಒಂದು ರೂಮಿನಲ್ಲಿ ಹೆಣ್ಣು ಮಕ್ಕಳೆಲ್ಲಾ ಬಾಗಿಲು ಹಾಕಿಕೊಂಡು ಹಾಡು ಹೇಳುತ್ತಿರುವುದು ಕೇಳಿಸಿತು. ನಾವು ಕಿಟಕಿಯಿಂದ ಇಣುಕಿ ನೋಡಿದಾಗ ಹುಡುಗಿಯೊಬ್ಬಳು ನರ್ತನ ಮಾಡುತ್ತಿರುವುದು ಕಾಣಿಸಿತು. ಆ ಹುಡುಗಿಯ ಹೆಸರು ರಾಧಾ ಎಂದೂ ಮತ್ತು ಅವಳು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ಮಗಳೆಂದೂ ತಿಳಿಯಿತು. ಅವಳು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಳಂತೆ. ಆ ಕಾಲಕ್ಕೆ ಹುಡುಗಿಯೊಬ್ಬಳು ಪ್ರೌಢಶಾಲೆಯಲ್ಲಿ ಓದುವುದು ಮತ್ತು ನರ್ತನ ಮಾಡುವುದು ಎರಡೂ ತುಂಬಾ ವಿಶೇಷ  ವಿಷಯಗಳಾಗಿದ್ದವು.

ಭಾವನವರ ಸಂಬಂಧಿಗಳೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನನಗೆ ಭಾವನ ತಂಗಿ ನರ್ಜಿ ಸೀತಮ್ಮನವರ ಮಗ ವಿಷ್ಣುಮೂರ್ತಿಯ ಪರಿಚಯ ಮಾಡಿಕೊಡಲಾಯಿತು. ಅವನೂ ಕೂಡ ನನ್ನಂತೆಯೇ ಗಡಿಕಲ್ ಮಿಡ್ಲ್ ಸ್ಕೂಲ್ನಲ್ಲಿ ಓದಲು ಹೊಕ್ಕಳಿಕೆಗೆ ಬರುವನಿದ್ದ. ನಾನು ಆರನೇ ತರಗತಿಯಾದರೆ ವಿಷ್ಣು ಏಳನೇ ತರಗತಿ. ಅವನು ಹಳೆಮನೆಯಲ್ಲಿ ಇಬ್ಬರು ಸೋದರ ಮಾವಂದಿರ (ಕೃಷ್ಣಮೂರ್ತಿ ಮತ್ತು ನಾಗೇಶಯ್ಯ) ಮನೆಯಲ್ಲಿರುವುದೆಂದು ತೀರ್ಮಾನವಾಗಿತ್ತು. ತುಂಬಾ ಸ್ಫುರದ್ರೂಪಿಯಾದ ವಿಷ್ಣುವಿನ ವಿಶೇಷವೆಂದರೆ ಅವನ ಜುಟ್ಟು. ಶಾಲೆಗೆ ಹೋಗುವ ಎಲ್ಲ ಮಕ್ಕಳೂ ಕ್ರಾಪ್ ಕಟ್ ಮಾಡಿಸಿಕೊಂಡಿರುತ್ತಿದ್ದ ಆ ದಿನಗಳಲ್ಲೂ, ವಿಷ್ಣುವಿನ ಆ ವಯಸ್ಸಿನ ಜುಟ್ಟು ಒಂದು ವಿಚಿತ್ರವೇ ಆಗಿತ್ತು!
0-------------------0--------------0----------------0----------------------0-----------------0----
ಅದು ೧೯೫೯ ನೇ ಇಸವಿಯ ಮೇ ತಿಂಗಳ ಕೊನೆಯ ವಾರ. ಅಣ್ಣ ನನಗಾಗಿ ಆಗಲೇ ೬ನೇ ತರಗತಿಯ ಪುಸ್ತಕಗಳನ್ನು ತಂದು ಬಿಟ್ಟಿದ್ದ.  ಆ ಕಾಲದಲ್ಲೇ ಅಣ್ಣನ ಸ್ನೇಹಿತರಾದ ಗೋಳಿಕಟ್ಟೆ ಕೃಷ್ಣರಾವ್ ಅವರ ಮನೆಗೆ  ಫಿಲಂ ಫೇರ್ ವಾರ ಪತ್ರಿಕೆ ಬರುತ್ತಿತ್ತು. ಅಣ್ಣ ಅದರ ಒಂದು ಕಾಪಿ ಮನೆಗೆ ತಂದ . ಉದ್ದೇಶ ಓದಲಿಕ್ಕಲ್ಲ. ನನ್ನ ಪುಸ್ತಕಗಳಿಗೆ ಬೈಂಡ್ ಮಾಡುವುದಕ್ಕೆ!  ರಾಜ್ ಕಪೂರ್, ನರ್ಗಿಸ್, ದಿಲೀಪ್ ಕುಮಾರ್, ಮಧುಬಾಲ, ಮುಂತಾದವರ ಫೋಟೋಗಳಿದ್ದ ಪತ್ರಿಕೆಯ ಪುಟಗಳು ನನ್ನ ಪುಸ್ತಕಗಳ ಹೊರಭಾಗವನ್ನು ಅಲಂಕರಿಸಿದುವು.

ಮನೆಯಿಂದ ಹೊರಟ ನಾನು ಮತ್ತು ಅಣ್ಣ ಬಸ್ಸಿನಲ್ಲಿ ಕೊಪ್ಪ ತಲುಪಿದೆವು. ಸೀದಾ  ಅಚ್ಯುತ ಭಟ್ಟರ ಅಂಗಡಿಗೆ ಹೋಗಿ ನನಗೆ ಒಂದು ಜೊತೆ ಶರ್ಟ್ ಮತ್ತು ಚೆಡ್ಡಿ ಬಟ್ಟೆಗಳನ್ನು ಖರೀದಿಸಿದೆವು. ಅದನ್ನು ಹೊಲಿಸಲು ಆ ಕಾಲಕ್ಕೆ ಕೊಪ್ಪದಲ್ಲಿ ಅತ್ಯಂತ  ಪ್ರಸಿದ್ಧನಾಗಿದ್ದ ಶೇಷಗಿರಿ ಎಂಬುವನ ಟೈಲರ್ ಶಾಪ್ ಒಳಗೆ ಪ್ರವೇಶ ಮಾಡಿದೆವು. ಶೇಷಗಿರಿಯ ಪ್ರಸಿದ್ಧಿ ಅವನ ಹೊಲಿಗೆಯ ಪ್ರವೀಣತೆಗಲ್ಲ. ಅದಕ್ಕೆ ಕಾರಣವೆ ಬೇರೆ.  ಅವನು ಯಾವುದೇ ಡ್ರೆಸ್ ಹೊಲಿಗೆಗೆ ಕೊಟ್ಟದ್ದನ್ನು ಒಪ್ಪಿಕೊಂಡ ಸಮಯಕ್ಕೆ ಹೊಲಿದು ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಸಾಮಾನ್ಯವಾಗಿ ಗೋಕುಲಾಷ್ಟಮಿಗೆ ಹಾಕಲೆಂದು ಹೊಲಿಗೆಗೆ ಕೊಟ್ಟರೆ ಮಹಾಶಿವರಾತ್ರಿಗೆ ಅದು ಸಿಗುವ ಸಾಧ್ಯತೆ ಇತ್ತು!

ಶೇಷಗಿರಿಯ ಹತ್ತಿರ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ನನ್ನ ಅಣ್ಣ ಅವನು ಬಟ್ಟೆ ಕಟ್ ಮಾಡಿ ಹೊಲಿಯಲು ಪ್ರಾರಂಭ ಮಾಡಿದ್ದನ್ನು ಕಣ್ಣಾರೆ ಕಂಡ  ಮೇಲೆಯೇ ನನ್ನನ್ನು ಒಂದು ಶೂ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನನಗೆ ಒಂದು ಜೊತೆ ಕ್ಯಾನ್ವಾಸ್ ಶೂ ಕೊಡಿಸಲಾಯಿತು. ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಏಕೆಂದರೆ ಆ ಕಾಲದಲ್ಲಿ ನಮ್ಮೂರಿನಲ್ಲಿ ಶೂ ಇರಲಿ, ಚಪ್ಪಲಿಯನ್ನು ಧರಿಸುವರೇ ವಿರಳರಾಗಿದ್ದರು. ನನಗೆ ಶೂ ಕೊಡಿಸುವ ಅಣ್ಣನ ತೀರ್ಮಾನ ಒಂದು ದೊಡ್ಡ ಕ್ರಾಂತಿಕಾರಿ ತೀರ್ಮಾನವಾಗಿತ್ತು! ಶೂ ಧರಿಸಿದ ನನ್ನನ್ನು ಅಣ್ಣ ಪುನಃ ಶೇಷಗಿರಿಯ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನಾನು ನನ್ನ ಹೊಸ ಡ್ರೆಸ್ ಗಳು ರೆಡಿಯಾಗುವುದನ್ನು ಕಣ್ಣಾರೆ ಗಮನಿಸಬೇಕಾಗಿತ್ತು. ಏಕೆಂದರೆ ಅಣ್ಣನಿಗೆ ಶೇಷಗಿರಿಯ ಮೇಲೆ ನಂಬಿಕೆಯೇ ಇರಲಿಲ್ಲ.

ನನ್ನ ಹೊಸ ಬಟ್ಟೆ ರೆಡಿಯಾದ ಮೇಲೆ ನಾವು ಬಸ್ ಪ್ರಯಾಣ ಮಾಡಿ ಗಡಿಕಲ್ ಎಂಬ ಊರನ್ನು ತಲುಪಿದೆವು. ನಾನು ಹಿಂದೆ ಹೊಕ್ಕಳಿಕೆಗೆ ಹೋಗುವಾಗ ಹರಿಹರಪುರ ಮಾರ್ಗವಾಗಿ ನಡೆದೇ ಹೋಗಿದ್ದೆ. ಆದರೆ ಈ ಬಾರಿ ಬಿ ಜಿ ಕಟ್ಟೆಯಿಂದ ಕೊಪ್ಪ ಮಾರ್ಗವಾಗಿ ಬಸ್ನಲ್ಲೇ ಗಡಿಕಲ್ ತಲುಪಿದ್ದೆ. ಅಲ್ಲಿಂದ ನಾವು ಎರಡು ಮೈಲಿ ಕಾಲ್ನಡಿಗೆ ಮಾಡಬೇಕಿತ್ತು. ಗಡಿಕಲ್ ಊರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಾಗಿತ್ತು. ಕನ್ನಡದ ಪ್ರಸಿದ್ಧ ಕವಿ ಕುವೆಂಪು ಅವರು ಇಲ್ಲಿಗೆ ಸಮೀಪದ ಕುಪ್ಪಳ್ಳಿಯವರು .

ಗೌರಕ್ಕನಿಗೆ ನಾನು ಅವಳ ಮನೆಯಲ್ಲೇ ಇರಲು ಬಂದದ್ದು ತುಂಬಾ ಸಂತೋಷ ಕೊಟ್ಟಿತು. ಅಲ್ಲದೆ ನಾನು ಅವಳ ಮನೆಯಲ್ಲೇ ಮೂರು ವರ್ಷ ಇರುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ಅಷ್ಟರಲ್ಲೇ ನರ್ಜಿ ವಿಷ್ಣುಮೂರ್ತಿ ಕೂಡ ಹೊಕ್ಕಳಿಕೆಗೆ ೭ನೇ ತರಗತಿ ಓದಲು ಪಕ್ಕದ ಮನೆಗೆ ಬಂದು ಬಿಟ್ಟಿದ್ದ. ಆದರೆ ಅವನನ್ನು ನಾವೆಣಿಸಿದಂತೆ ಗಡಿಕಲ್ ಶಾಲೆಗೆ ಸೇರಿಸಿರಲಿಲ್ಲ. ಬದಲಿಗೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಎಂಬಲ್ಲಿದ್ದ ಗವರ್ನಮೆಂಟ್ ಶಾಲೆಗೆ ಸೇರಿಸಿದ್ದರು. ಆ ಊರು ಹೊಕ್ಕಳಿಕೆಗೆ ಮೂರು ಮೈಲಿ ದೂರದಲ್ಲಿತ್ತು. ಅಲ್ಲಿನ ಶಾಲೆ ತುಂಬಾ ಪ್ರಸಿದ್ಧಿ ಪಡೆದಿತ್ತಂತೆ. ಅದನ್ನು ತಿಳಿದ ನಂತರ ನನ್ನನ್ನೂ ಅದೇ ಶಾಲೆಗೆ ಸೇರಿಸುವುದೆಂದು ತೀರ್ಮಾನಿಸಲಾಯಿತು.
----ಮುಂದುವರಿಯುವುದು ---

No comments: