Thursday, March 15, 2018

ಒಂದು ಊರಿನ ಕಥೆ - 6 (ಹೊಕ್ಕಳಿಕೆ)


ನಾನು ವಿಷ್ಣುಮೂರ್ತಿಯೊಡನೆ ಬಸವಾನಿ ಮಾಧ್ಯಮಿಕ ಶಾಲೆಗೆ ಹೋಗತೊಡಗಿದೆ. ಅದೇ ಕಾಲಕ್ಕೆ ಹೊಕ್ಕಳಿಕೆ ಶಾಲೆಗೆ ಡೋಂಗರೆಯವರ ಜಾಗಕ್ಕೆ ನಾಗೇಶಭಟ್ಟರೆಂಬ ಹೊಸ ಮೇಷ್ಟರೊಬ್ಬರ ಆಗಮನವಾಯಿತು. ಅವರು ಕೂಡಾ ವಿಶ್ವೇಶ್ವರಯ್ಯನವರಂತೆ ನಾರ್ವೆ ಊರಿನವರೇ ಆಗಿದ್ದರು. ಯಥಾ ಪ್ರಕಾರ ನಾಗೇಶಭಟ್ಟರಿಗೆ ಕೂಡ ಊರಿನ ಎಲ್ಲ ಮನೆಗಳಲ್ಲೂ ೧೫ ದಿನ ಸರದಿಯ ಮೇಲೆ ವಾಸಮಾಡುವ ಪದ್ಧತಿ ಮುಂದುವರೆಯಿತು. ಮೇಷ್ಟರು ಪ್ರತಿ ಶನಿವಾರ ಸಂಜೆ ನಾರ್ವೆಗೆ ಹೋಗಿ ಸೋಮವಾರ ಕೆಲಸಕ್ಕೆ ಹಾಜರಾಗುತ್ತಿದ್ದರು. ಅವರ ಪಯಣ ಕಾಲ್ನಡುಗೆಯ ಮೂಲಕ. ಅಲ್ಲದೇ ಅವರು ಹೊಕ್ಕಳಿಕೆ ಊರಿನಲ್ಲಿ ಒಂದು ಪೈಸೆ ಕೂಡ ಖರ್ಚು ಮಾಡುವ ಅವಕಾಶವಿರಲಿಲ್ಲ. ಹಾಗಾಗಿ ಆ ಕಾಲಕ್ಕೆ ಮೇಷ್ಟರ ಕೈಗೆ ಬರುತ್ತಿದ್ದ ೩೦ ರೂಪಾಯಿ ತಿಂಗಳ ಸಂಬಳದಲ್ಲೂ ಒಂದು ಆಕರ್ಷಣೆ ಇತ್ತು ಅನಿಸುತ್ತಿದೆ.

ಭಾವನ ಹಿರಿಯ ಮಗ ಮಂಜಪ್ಪ ಹೊಕ್ಕಳಿಕೆ ಶಾಲೆಯಲ್ಲಿ ೪ನೇ ತರಗತಿಯಲ್ಲಿ ಓದುತ್ತಿದ್ದ. ಅವನ ಸಹಪಾಠಿಗಳೆಂದರೆ ಫಣಿಯಪ್ಪಯ್ಯನವರ ಮೂರನೇ ಮಗ ಪುರುಷೋತ್ತಮ, ಸದಾಶಿವಯ್ಯನವರ ಹಿರಿಯ ಮಗ ರಾಮಚಂದ್ರ, ಕೃಷ್ಣಯ್ಯನವರ ಹಿರಿಯ ಮಗ ರಾಮಚಂದ್ರ, ಜನಾರ್ಧನಯ್ಯನವರ ಹಿರಿಯ ಮಗ ನಾಗರಾಜ ಮತ್ತು ಅಚ್ಯುತಯ್ಯನವರ ಮನೆಯಲ್ಲಿ ಇದ್ದ ನರ್ಜಿಯ ವೆಂಕಟ್ರಾಯ ಎಂಬ ಹುಡುಗ. ಬಹು ಬೇಗನೆ ಇವರೆಲ್ಲಾ ನನ್ನ ಸ್ನೇಹಿತರಾದರು. ನನಗೆ ಆಗ ಕಬಡ್ಡಿ ಮತ್ತು ಕುಂಟಾಟದ ಹುಚ್ಚು ತುಂಬಾ ಇತ್ತು. ವಿಷ್ಣುಮೂರ್ತಿ ನಮ್ಮೆಲ್ಲರಿಗಿಂತಲೂ ಸ್ವಲ್ಪ ದೊಡ್ಡವನಾಗಿದ್ದರಿಂದ ಯಾರೊಡನೆಯೂ ಸೇರುತ್ತಿರಲಿಲ್ಲ. ಮತ್ತೂ ಯಾವ ಆಟಗಳಲ್ಲೂ ಭಾಗವಹಿಸುತ್ತಿರಲಿಲ್ಲ.  ನಾನು ಮೇಲೆ ಹೇಳಿದ ಹುಡುಗರೊಟ್ಟಿಗೆ ಇನ್ನು ಕೆಲವರನ್ನು ಸೇರಿಸಿ ಒಂದು ಆಟದ ತಂಡವನ್ನು ತಯಾರಿ ಮಾಡಿಬಿಟ್ಟೆ. ನಮ್ಮ ತಂಡದವರು ಊರಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಊಟ ಮುಗಿದನಂತರ ಕಬಡ್ಡಿ ಆಡುವುದು ಮಾಮೂಲಾಗಿ ಬಿಟ್ಟಿತು. ನಾನು ಅದಕ್ಕಾಗಿ ಅಕ್ಕನಿಂದ ಹಲವು ಬಾರಿ ಬೈಸಿಕೊಂಡರೂ ನನ್ನ ಆಟದ ಹುಚ್ಚು ನಿಲ್ಲಲಿಲ್ಲ.

ಗುಂಡಾಚಾರಿಯ ಇಂಗ್ಲಿಷ್ ಹೆಸರು!
ಗುಂಡಾಚಾರಿ ನನ್ನ ಭಾವನ ಒಕ್ಕಲಾಗಿದ್ದ. ಅಂದರೆ ಭಾವನವರ ಸ್ವಲ್ಪ ಗದ್ದೆಯನ್ನು ಗೇಣಿ ಮಾಡುತ್ತಿದ್ದ. ಜೊತೆಗೆ ತನ್ನ ಕುಲ ಕಸುಬಾದ ಬಡಗಿ ಕೆಲಸವನ್ನೂ ಮಾಡುತ್ತಿದ್ದ. ಅವನಿಗೆ ನಾವು ಕಲಿಯುತ್ತಿದ್ದ ಇಂಗ್ಲಿಷ್ ಭಾಷೆಯ ಮೇಲೆ ವಿಶೇಷ ಆಸಕ್ತಿ ಇತ್ತು. ನನ್ನ ಓದಿನ ಬಗ್ಗೆ ಮಾತಾಡುತ್ತಾ ಅವನು ಒಂದು ದಿನ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಿಬಿಟ್ಟ. ವಿಷಯ ಇಷ್ಟೇ. ಅವನಿಗೆ ತನ್ನ ಹೆಸರು ಇಂಗ್ಲಿಷ್ ಭಾಷೆಯಲ್ಲಿ ಏನೆಂದು ತಿಳಿದುಕೊಳ್ಳ ಬೇಕಿತ್ತು!  ನಾನು ಅವನಿಗೆ ಯಾರ ಹೆಸರೂ ಇಂಗ್ಲಿಷ್ ಭಾಷೆಯಲ್ಲಿ ಬದಲಾಗುವುದಿಲ್ಲವೆಂದು ಎಷ್ಟು ಹೇಳಿದರೂ ಅವನಿಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ಅವನು ನನ್ನಿಂದ ಗುಂಡ ಮತ್ತು ಆಚಾರಿ ಎಂಬ ಪದಗಳಿಗೆ ಇಂಗ್ಲಿಷ್ ಪದಗಳನ್ನು ತಿಳಿಯ ಬಯಸಿದ. ನಾನು ಅವನಿಗೆ Round ಮತ್ತು Carpenter ಎಂಬ ಪದಗಳನ್ನು ಹೇಳಿದ ಮೇಲೆ ತೃಪ್ತಿಯಿಂದ ಹೊರಟು ಹೋದ!

ಕಮಲ ಶೆಡ್ತಿಯ ಕಜ್ಜಿ ಔಷಧಿ!
ಕಮಲ ಶೆಡ್ತಿ ದಕ್ಷಿಣ ಕನ್ನಡದಿಂದ ಕೆಲಸಮಾಡಲು ಘಟ್ಟದ ಮೇಲೆ ಬಂದ ಗಟ್ಟಿ  ಹೆಂಗಸು. ವಿಧವೆಯಾಗಿದ್ದ ಅವಳು ತನ್ನ ನಾಲ್ಕು ಮಕ್ಕಳನ್ನು ತನ್ನ ಸ್ವಂತ ದುಡಿಮೆಯಿಂದ ಸಾಕಿ ಬೆಳೆಸಿದ್ದಳು. ಹೊಕ್ಕಳಿಕೆಯಿಂದ ಹೊಸಮನೆಗೆ ಹೋಗುವ ದಾರಿಯಲ್ಲಿ ಅವಳ ಸಣ್ಣ ಮನೆ ಇತ್ತು. ಅವಳು ಭಾವನವರ ಮನೆಯಲ್ಲಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಳು. ಅಕ್ಕನ ಮನೆಗೆ ಹೋದ ಸ್ವಲ್ಪ ಸಮಯದ ನಂತರ ನನಗೆ ಕಾಲುಗಳಲ್ಲಿ ಕಜ್ಜಿ ಕಾಟ ಪ್ರಾರಂಭವಾಯಿತು. ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ಸೈಬಾಲ್ ಎಂಬ ಮುಲಾಮನ್ನು ಹಚ್ಚಿ ಕೊಂಡರೂ ಏನೂ ಸುಧಾರಣೆಯಾಗಲಿಲ್ಲ. ಅಕ್ಕನಿಂದ ಕಮಲ ಶೆಡ್ತಿಯ ಹತ್ತಿರ ಇದಕ್ಕೆಲ್ಲ ಸೊಪ್ಪಿನ ಔಷಧಿ ಇರುವುದೆಂದು ತಿಳಿದು ಬಂತು. ನಾನು ಒಪ್ಪಿದ ನಂತರ ಶೆಡ್ತಿ ಒಂದು ದಿನ ಸೊಪ್ಪಿನೊಂದಿಗೆ ಆಗಮಿಸಿದಳು. ಅವಳು ಹೇಳಿದಂತೆ ಅಕ್ಕ ಸೊಪ್ಪಿನ ರಸ ತಯಾರುಮಾಡಿದಳು. ನಾನು ಅದನ್ನು ಕೇವಲ ಕಜ್ಜಿಯ ಮೇಲೆ ಹಚ್ಚಿಕೊಳ್ಳಬೇಕೆಂದು ಭಾವಿಸಿದ್ದೆ. ಆದರೆ ಶೆಡ್ತಿಯ ಪ್ರಕಾರ ನಾನು ಒಂದು ಮಿಳ್ಳೆಯಷ್ಟು ರಸವನ್ನು ದಿನಕ್ಕೆ ಎರಡು ಬಾರಿ ಕುಡಿಯ ಬೇಕಿತ್ತು! ನಿರ್ವಾಹವಿಲ್ಲದೆ ನಾನು ಕಟ್ಟ  ಕಹಿಯಾಗಿದ್ದ ಆ ರಸವನ್ನು ಕಣ್ಣು ಮುಚ್ಚಿಕೊಂಡು ಕುಡಿಯ ತೊಡಗಿದೆ. ನೀವು ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಕೇವಲ ಒಂದು ವಾರದಲ್ಲಿ ನನ್ನ ಕಾಲಿನ ಕಜ್ಜಿಗಳೆಲ್ಲಾ ಒಣಗಿ ಉದುರಿ ಹೋಗಿ ಕಾಲುಗಳು ಮೊದಲಿನಂತಾದವು!

ಕಾಳು, ಕರ್ಕು, ಚೀನ್ಕ್ರಾ ಮತ್ತು ಗ್ವಾನ್ಕ್ರಾ
ಕಮಲ ಶೆಡ್ತಿಯು ತನ್ನ ನಾಲ್ಕು ಮಕ್ಕಳ ಹೆಸರುಗಳನ್ನು ತುಂಬಾ ಸ್ವಾರಸ್ಯವಾಗಿ ಹಾಗೂ ಪ್ರಾಸಬದ್ಧವಾಗಿ ಇಟ್ಟಿದ್ದಳು. ಮೊದಲನೆಯವನ ಹೆಸರು ಕಾಳು, ಎರಡನೆಯವಳು ಕರ್ಕು, ಮೂರನೆಯವನು ಗ್ವಾನ್ಕ್ರಾಮತ್ತು ಕಿರಿಯವನು ಚೀನ್ಕ್ರಾ. ಕಾಳು ಮತ್ತು ಕರ್ಕು ಪ್ರಾಯಶಃ ಶಾಲೆಗೆ ಹೋಗಲೇ ಇಲ್ಲ.  ಕಾಳು ಕೂಲಿ ಕೆಲಸ ಮತ್ತು ಸ್ವಲ್ಪ ಗದ್ದೆ ಗೇಣಿ ಮಾಡುತ್ತಿದ್ದ. ಕರ್ಕು ಅಮ್ಮನೊಡನೆ ಅಕ್ಕನ ಮನೆ ಕೆಲಸಕ್ಕೆ ಬರುತ್ತಿದ್ದಳು.  ಗ್ವಾನ್ಕ್ರಾ ಮತ್ತು ಚೀನ್ಕ್ರಾ  ಇಬ್ಬರನ್ನೂ ಹೊಕ್ಕಳಿಕೆ ಶಾಲೆಗೆ ಸೇರಿಸುವಾಗ ಹೆಸರನ್ನು ಬದಲಾಯಿಸಿ ಕ್ರಮವಾಗಿ ರಾಮಶೆಟ್ಟಿ ಮತ್ತು ಕೃಷ್ಣಶೆಟ್ಟಿ ಎಂದು ಮಾಡಲಾಯಿತು. ರಾಮಶೆಟ್ಟಿಯ ಓದು ಬೇಗನೆ ನಿಂತು ಹೋಯಿತು. ಆದರೆ ಕೃಷ್ಣಶೆಟ್ಟಿ ಚೆನ್ನಾಗಿ ಓದಿ SSLC ಪಾಸು ಮಾಡಿ ಹೊಸನಗರದಲ್ಲಿ ಶಾಲೆಯ ಮೇಷ್ಟರಾಗಿ ಬಿಟ್ಟ.

ಕಾಳುಶೆಟ್ಟಿ ಬಚ್ಚಣಿಕೆ ಕೊರಗಶೆಟ್ಟಿ ಎಂಬ ಶ್ರೀಮಂತ ಜಮೀನ್ದಾರರ ಮಗಳನ್ನು ಮದುವೆಯಾಗಿ ಸ್ವಲ್ಪ ಉನ್ನತ ಮಟ್ಟಕ್ಕೇರಿ ಬಿಟ್ಟ. ಕರ್ಕುವಿನ ಹೆಸರು ಬದಲಾಗಲೂ ಇಲ್ಲ ಮತ್ತು ಮದುವೆಯಾಗಿ ಗಂಡನ ಮನೆ ಸೇರಿದವಳು ಯಾವುದೋ ಕಾರಣದಿಂದ ಅಣ್ಣನ ಮನೆಗೆ ವಾಪಾಸ್ ಬಂದು ಬಿಟ್ಟಳು. ನಾನು ಎಷ್ಟೋ ವರ್ಷದ ನಂತರ ಅವಳು ರುಕ್ಮಿಣಕ್ಕನ ಹೊಸಮನೆಯಲ್ಲಿ ಮನೆ ಕೆಲಸ ಮಾಡುವುದನ್ನು ನೋಡಿದೆ. ಆಮೇಲೆ ಅವಳೇನಾದಳೋ ಗೊತ್ತಾಗಲಿಲ್ಲ.

ಕೃಷ್ಣಾಚಾರಿ
ಕೃಷ್ಣಾಚಾರಿ ಗುಂಡಾಚಾರಿಯ ಮಗ. ಓದಿನಲ್ಲಿ ಬುದ್ಧಿವಂತನಾಗಿದ್ದ ಅವನು ಡಿಪ್ಲೋಮ ಪಾಸ್ ಮಾಡಿ ಮುಂಬಯಿನಲ್ಲಿ ಲಾರ್ಸೆನ್ & ಟೌಬ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾನು ಬೊಂಬಾಯಿಯ ಸಾಂಟಾ ಕ್ರೂಜ್ ಎಂಬಲ್ಲಿ ವಾಸ ಮಾಡುತ್ತಿದ್ದಾಗ ಹಲವು ಬಾರಿ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಆಮೇಲೆ ಹೆಚ್ಚಿನ ಹಣ ದುಡಿಯಬೇಕೆಂದು ದುಬೈಗೆ ಹೋಗಿದ್ದ. ಅವನು ಆಗಾಗ ಊರಿಗೆ ಬಂದು ತನ್ನ ಸಂಸಾರಕ್ಕೆ ತುಂಬಾ ಹಣ ಸಹಾಯ ಮಾಡುತ್ತಿದ್ದನಂತೆ. ಆದರೆ ದುರದೃಷ್ಟವಶಾತ್ ಅವನು ಯಾವುದೊ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡನೆಂದು ಅಕ್ಕನಿಂದ ತಿಳಿಯಿತು.

ಆಳುಗಳ ಬಿಡಾರ
ಅಕ್ಕನ ಮನೆಯ ಮುಂದೆ ರಸ್ತೆಯ ಮೇಲ್ಭಾಗದಲ್ಲಿ ಆಳುಗಳಿಗಾಗಿ ಒಂದು ಕೊಟ್ಟಿಗೆಯಲ್ಲಿ ಹಲವು ಬಿಡಾರಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ದಕ್ಷಿಣ ಕನ್ನಡದಿಂದ ವಲಸೆ ಬಂದ ಹಲವು ಕುಟುಂಬಗಳು ವಾಸ ಮಾಡುತ್ತಿದ್ದವು.  ನನಗೆ ಹಿರಿಯನಾಯ್ಕ, ನಕ್ರ ನಾಯ್ಕ ಮತ್ತು ಶೀನನಾಯ್ಕ ಎಂಬುವರ ಹೆಸರುಗಳು ನೆನಪಿಗೆ ಬರುತ್ತಿವೆ. ನಕ್ರ ನಾಯ್ಕ ಹಿರಿಯನಾಯ್ಕನ ಅಕ್ಕನ ಮಗ. ತರುಣನಾಗಿದ್ದ ಅವನು ಗಾಡಿಹೊಡೆಯುವನಾಗಿ ನೇಮಕನಾಗಿದ್ದ. ಸ್ವಲ್ಪ ದಿನಗಳ ನಂತರ ಅವನು ಊರಿಗೆ ಹೋಗಿ ಮದುವೆ ಮಾಡಿಕೊಂಡು ಹೆಂಡತಿಯೊಡನೆ ವಾಪಾಸ್ ಬಂದ. ಅವನಿಗೆ ಪ್ರತ್ಯೇಕ ಬಿಡಾರ ಏರ್ಪಾಟು ಮಾಡಲಾಯಿತು. ನಕ್ರನ  ಹೆಂಡತಿ ಅವನಷ್ಟು ಚೆಂದ ಇರಲಿಲ್ಲವೆಂಬ ಅಭಿಪ್ರಾಯ ಬಂತು. ಅವಳೂ ಕೂಡ ಭಾವನ ಮನೆಗೆ ಕೆಲಸಕ್ಕೆ ಬರಲಾರಂಭಿಸಿದಳು.

ಶೀನನ ಹೆಂಡತಿ ಲಕ್ಷ್ಮಿ. ಶೀನ ಸ್ವಲ್ಪ ಮಂಕುದಿಣ್ಣೆಯಾಗಿದ್ದ. ಶೀನ-ಲಕ್ಷ್ಮಿ ಜೋಡಿಗೆ ಗುಂಡನೆಂಬ ಮಗನಿದ್ದ.  ಶುದ್ಧ ಉಂಡಾಡಿ ಗುಂಡನೇ ಆಗಿದ್ದ ಗುಂಡ ಶಾಲೆಗೆ ಹೋಗಲೇ ಇಲ್ಲ. ಅಪಾಪೋಲಿಯಾಗಿದ್ದ ಅವನು  ಚಿಕ್ಕ ಪುಟ್ಟ ಕಳ್ಳತನ, ಜಗಳ ಇತ್ಯಾದಿಗಳಲ್ಲಿ ತೊಡಗಿರುತ್ತಿದ್ದ. ಒಮ್ಮೆ ಕೃಷ್ಣಮೂರ್ತಿ ಭಾವನ ಹೆಂಡತಿ ಗೋಪಿಯಿಂದ ಚೆನ್ನಾಗಿ  ಚೆಚ್ಚಿಸಿಕೊಂಡಿದ್ದ. ಶೀನನಿಗೆ ಮಗನ  ಮೇಲೆ ಹಿಡಿತವಿರಲಿ, ಸ್ವಲ್ಪ ಸುಂದರಿಯಾಗಿದ್ದ ತನ್ನ ಹೆಂಡತಿ ಲಕ್ಷ್ಮಿಯ ಮೇಲೆ ಕೂಡ ಸ್ವಲ್ಪವೂ ಹಿಡಿತವಿರಲಿಲ್ಲ. ಅದರ ಪರಿಣಾಮವನ್ನು ಬೇಗನೆ ಎದುರಿಸ ಬೇಕಾಗಿ ಬಂತು.
----ಮುಂದುವರಿಯುವುದು ---

No comments: