Wednesday, March 7, 2018

ಒಂದು ಊರಿನ ಕಥೆ - 4 (ಹೊಕ್ಕಳಿಕೆ)


ನಾನು ಅಕ್ಕನ ಮನೆಗೆ ಹೋಗಿ ಬಂದದ್ದು ಪ್ರಾಯಶಃ ೧೯೫೬ನೇ ಇಸವಿಯಲ್ಲಿ ಇರಬಹುದು. ಆಮೇಲೆ ನಮ್ಮೂರಿನ ಶಾಲೆಗೆ ಸುಬ್ಬಾಭಟ್ಟರೆಂಬ ಮೇಷ್ಟರು ಬಂದು ನನ್ನ ಓದು ಮುಂದುವರೆಯಿತು. ಆ ಸಮಯದಲ್ಲಿ ನನಗೆ ಹೊಕ್ಕಳಿಕೆ ಊರಿನ ಸಂಪರ್ಕವಿಲ್ಲದಿದ್ದರೂ ಅಕ್ಕ ತವರುಮನೆಗೆ ಬಂದಾಗ ಮುರುವಿನ ಒಲೆಯ ಮುಂದೆ ಕುಳಿತು ಹೇಳುತ್ತಿದ್ದ ಊರಿನ ಸಮಾಚಾರಗಳೆಲ್ಲಾ ನೆನಪಿಗೆ ಬರುತ್ತಿವೆ. ಅತಿ ಮುಖ್ಯ ಸಮಾಚಾರವೆಂದರೆ ಭಾವ ಮತ್ತು ಅವರ ನಾಲ್ಕು ಜನ ತಮ್ಮಂದಿರ ನಡುವೆ ಆಸ್ತಿ  ಪಾಲಾಗಿದ್ದು.  ಆ ವೇಳೆಗೆ ಭಾವನ  ಕಿರಿಯ ತಮ್ಮ ನಾಗೇಶಯ್ಯನವರಿಗೆ ಗುಡ್ಡೇತೋಟ ಕೃಷ್ಣರಾಯರ ಮಗಳು ಸಿಂಗಾರಿಯೊಡನೆ ವಿವಾಹವಾಗಿತ್ತು.

ನಾನು ಮೊದಲೇ ಬರೆದಂತೆ ಭಾವನವರು ಹಣಕಾಸಿನ ವ್ಯವಹಾರದಲ್ಲಿ ಅತಿ ಬುದ್ದಿವಂತರಾಗಿದ್ದು ತಮ್ಮ ತಂದೆಯ ಮರಣಾನಂತರ  ಅತಿ ಶೀಘ್ರದಲ್ಲೇ ಇದ್ದ ಜಮೀನು ಅಭಿವೃದ್ಧಿ ಮಾಡಿದುದು ಮಾತ್ರವಲ್ಲ ಹೊಸ ಹೊಸ ಜಮೀನುಗಳನ್ನೂ  ಕೊಂಡು ಹಾಕಿ ಆದಾಯವನ್ನು ಮೇಲಕ್ಕೇರಿಸಿಬಿಟ್ಟಿದ್ದರು.  ಆದ್ದರಿಂದ ಅವರು ಆಸ್ತಿ ಪಾಲಾಗುವ ವೇಳೆ  ಚಿನ್ನಾಭರಣ ಇತ್ಯಾದಿ ಬೇರೆಲ್ಲಾ ವಸ್ತುಗಳನ್ನು ಸಮ ಪಾಲು ಮಾಡಿ, ಜಮೀನು  ಹಂಚಿಕೆ ಮಾಡುವಾಗ ತಮ್ಮ ಪಾಲಿನಲ್ಲಿ ಒಂದು ಎಕರೆ ಅಡಿಕೆ ತೋಟ ಹೆಚ್ಚಾಗಿ ಇಟ್ಟುಕೊಂಡಿದ್ದರು. ಅವರ ಪ್ರಕಾರ ಅದು ಅವರು ಸಂಸಾರಕ್ಕಾಗಿ ಹೊಸದಾಗಿ ಕೊಂಡು ಹಾಕಿದ್ದ ಜಮೀನುಗಳ ಒಂದು ಅಂಶವಾಗಿತ್ತು. ಆದರೆ ಅವರೆಣಿಸಿದಂತೆ  ಅವರ ತೀರ್ಮಾನಕ್ಕೆ ಅವರ ತಮ್ಮಂದಿರ ಒಪ್ಪಿಗೆ ಸಿಗದೇ ಹೋಯಿತು. ಅದು ಯಾವ ಮಟ್ಟಕ್ಕೆ ಹೋಯಿತೆಂದರೆ ಅವರ ತಮ್ಮಂದಿರು ಅವರೊಡನೆ ಮಾತುಕತೆ ಮತ್ತು ಅವರ ಮನೆಗೆ ಬರುವುದನ್ನೇ ನಿಲ್ಲಿಸಿಬಿಟ್ಟರು.

ಆಸ್ತಿ ಪಾಲಿನ ಪ್ರಕಾರ ಚಂದ್ರಹಾಸಯ್ಯನವರಿಗೆ ಬಿಳುವಿನಕೊಪ್ಪ  ಎಂಬಲ್ಲಿ  (ಹೊಸಮನೆಯ ಹತ್ತಿರ)  ಜಮೀನು (ಗದ್ದೆ ಮತ್ತು ತೋಟ) ಸಿಕ್ಕಿ, ಹೊಸಮನೆ ಕಟ್ಟಿಕೊಳ್ಳುವ ವ್ಯವಸ್ಥೆಯಾದರೆ , ಗಣೇಶಯ್ಯನವರಿಗೆ ಊರಿನ ರಸ್ತೆಯ ಪಕ್ಕದಲ್ಲೇ ಹೊಸ ಮನೆ ಕಟ್ಟಿಕೊಳ್ಳುವ ವ್ಯವಸ್ಥೆಯಾಯಿತು.  ಕೃಷ್ಣಮೂರ್ತಿ ಮತ್ತು ನಾಗೇಶಯ್ಯನವರಿಗೆ ಹಳೆಮನೆಯಲ್ಲೇ ಎರಡು ಭಾಗ ಮಾಡಿ ಇರುವ ಏರ್ಪಾಟಾಯಿತು. ಮೂರು ತಮ್ಮಂದಿರಿಗೂ ಹೊಕ್ಕಳಿಕೆಯಲ್ಲೇ ತೋಟ ಮತ್ತು ಗದ್ದೆಗಳು ದೊರೆತವು. ಬಾವನವರ ಪಾಲಿಗೆ ಹಳೆಮನೆಯ ಪಕ್ಕದಲ್ಲೇ ಕಟ್ಟಿದ್ದ ಹೊಸಮನೆ ಮತ್ತು ಮನೆಯ ಮುಂದಿದ್ದ ತೋಟ ಬಂತು. ಜೋಡೆತ್ತಿನ ಗಾಡಿ ಮತ್ತು ಗಾಡಿ ಹೊಡೆಯುವ ಜಗ್ಗು, ಗಣೇಶ ಭಾವನ ಪಾಲಿಗೆ ಹೋದರು. ಭಾವನವರು ಹೊಸ  ಗಾಡಿ ಮತ್ತು ಎತ್ತು ಖರೀದಿಸಿ ನಕ್ರನೆಂಬ ತರುಣನನ್ನು  ಗಾಡಿ ಹೊಡೆಯುವನಾಗಿ ಏರ್ಪಾಟು ಮಾಡಿದರು.

ಭಾವನವರ ಮತ್ತು ಅವರ ತಮ್ಮಂದಿರ ನಡುವಿನ ಮನಸ್ತಾಪ ಅಕ್ಕ ಮತ್ತು ಅವಳ ವಾರಗಿತ್ತಿಯರ ನಡುವೆ ಯಾವುದೇ ಪರಿಣಾಮ ಉಂಟುಮಾಡಲಿಲ್ಲ. ಅವರೆಲ್ಲರೂ ಅಕ್ಕನ ಮೇಲಿದ್ದ ಆದರ ಮತ್ತು ಪ್ರೀತಿಯನ್ನು ಯಥಾವತ್ತಾಗಿ ಮುಂದುವರೆಸಿಕೊಂಡು  ಹೋದರು. ಅಕ್ಕನೊಬ್ಬ ಅಜಾತಶತ್ರು. ಅವಳಿಗೆ ಯಾರೊಡನೆಯೂ ಮನಸ್ತಾಪ ಯಾವತ್ತೂ ಬರಲಿಲ್ಲ.
ಊರಿನ ಶಾಲೆ
ಮೇಷ್ಟರಿಲ್ಲದೆ ಹಾಳು  ಸುರಿಯುತ್ತಿದ್ದ ಹೊಕ್ಕಳಿಕೆ ಶಾಲೆಗೆ ಸ್ವಲ್ಪ ಸಮಯದಲ್ಲೇ ಡೋಂಗರೆ ಎಂಬ ಹೊಸ ಮೇಷ್ಟರ ಆಗಮನವಾಯಿತಂತೆ. ಡೋಂಗರೆಯವರು ಮರಾಠಿ ಚಿತ್ಪಾವನ್ ಕುಟುಂಬಕ್ಕೆ ಸೇರಿದವರು. ದಿನಗಳಲ್ಲಿ ಪರಊರಿನಿಂದ ಬಂದ ಶಾಲೆಯ ಮೇಷ್ಟರುಗಳಿಗೆ ಊಟ ಮತ್ತು ವಸತಿ ಒಂದು ದೊಡ್ಡ ಸಮಸ್ಯೆಯಾಗಿತ್ತು. ಹೊಕ್ಕಳಿಕೆಯಲ್ಲಿ ಅದಕ್ಕಾಗಿ ಒಂದು ವಿಶೇಷ ವ್ಯವಸ್ಥೆ ಮಾಡಲಾಯಿತು. ಅದರ ಪ್ರಕಾರ ಮೇಷ್ಟರು ಪ್ರತಿಯೊಂದು ಮನೆಯಲ್ಲೂ ಎರಡು ವಾರ ಸರದಿಯ ಮೇಲೆ ವಾಸ ಮಾಡಬೇಕಾಗಿತ್ತು. ಅಲ್ಲೇ ಅವರ ಊಟ ಮತ್ತು ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು. ಕೇವಲ ೩೦ ರೂಪಾಯಿ ತಿಂಗಳ ಸಂಬಳ ಎಣಿಸುತ್ತಿದ್ದ ಮೇಷ್ಟರಿಗೆ ಇದೊಂದು ಸೌಭಾಗ್ಯವೇ ಆಗಿತ್ತು.

ಆದರೆ ಬಗೆಯ ಮೇಷ್ಟರ ಮನೆವಾಸ ಹಲವು ಬಾರಿ ಮುಜುಗರ ಸನ್ನಿವೇಶ ಸೃಷ್ಟಿಸುತ್ತಿತ್ತಂತೆ. ಅಕ್ಕ ನಮಗೆ ಹೇಳಿದ ಒಂದು ಪ್ರಸಂಗ ನೆನಪಿಗೆ ಬರುತ್ತಿದೆ. ಡೋಂಗರೇ ಮೇಷ್ಟ್ರು ಊರಿನ ಒಂದು ಮನೆಯಲ್ಲಿ ಇದ್ದಾಗ ಒಂದು ದಿನ ಊಟಮಾಡುವಾಗ ಅಂಗಿಯನ್ನು ಗೋಡೆಯ ಮೊಳೆಯೊಂದಕ್ಕೆ ಸಿಕ್ಕಿಸಿದ್ದರಂತೆ.  ಊಟ ಮುಗಿಸಿ ಅಂಗಿಯನ್ನು ಪುನಃ ಹಾಕಿಕೊಳ್ಳುವಾಗ ಅವರಿಗೆ ಜೇಬಿನಲ್ಲಿ ಪತ್ರವೊಂದು ಸಿಕ್ಕಿತಂತೆ. ಅದು   ಮನೆಯಲ್ಲಿದ್ದ ಹುಡುಗಿ ಒಬ್ಬಳು ಬರೆದ ಪ್ರೇಮ ಪತ್ರ . ಮೇಷ್ಟರಿಗೆ ಅದನ್ನು ನೋಡಿ ತಲೆ ಸುತ್ತು ಬಂತಂತೆ. ಅವರಿಗೆ  ತುಂಬಾ ಮುಜುಗರವಾಗಿ ಅವರು ಅದನ್ನು ಮನೆಯ ಯಜಮಾನರಿಗೆ ತೋರಿಸಿದರಂತೆ. ಪ್ರಸಂಗ ಅಲ್ಲಿಗೆ ಮುಕ್ತಾಯವಾಯಿತಾದರೂ ಸಮಾಚಾರ ಊರಿನವರಿಗೆ ಹೇಗೋ ತಿಳಿದು ಬಿಟ್ಟಿತಂತೆ. ಅಷ್ಟರಲ್ಲೇ ಮೇಷ್ಟರಿಗೆ ಪೋಸ್ಟ್ ಆಫೀಸ್ ಕೆಲಸ ಸಿಕ್ಕಿ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೆ ಊರಿಗೆ  ಹೋಗಿ ಬಿಟ್ಟರಂತೆ.

ಡೊಂಗರೇ ಮೇಷ್ಟ್ರು ತುಂಬಾ ಚೆನ್ನಾಗಿ ಪಾಠ ಮಾಡುತ್ತಿದ್ದರಂತೆ. ಹಾಗಾಗಿ ಅವರಿಗೆ ಊರಿನಲ್ಲಿ ಒಳ್ಳೆ ಹೆಸರು ಬಂತಂತೆ. ಅವರು ಸುಮಾರು ಮೂರು ವರ್ಷಕ್ಕೂ ಮೇಲ್ಪಟ್ಟು ಹೊಕ್ಕಳಿಕೆಯಲ್ಲಿದ್ದಿರಬೇಕು. ನಾನು ೧೯೫೯ನೇ ಇಸವಿಯಲ್ಲಿ ಓದಲು ಅಕ್ಕನ ಮನೆಗೆ ಹೋದಾಗ ಅವರು ಪರಊರಿಗೆ  ಹೊರಟು ಹೋಗಿದ್ದರು.
ಊರಿನ ಇತರ ಬೆಳವಣಿಗೆಗಳು
ಜನಾರ್ಧನಯ್ಯ ಮತ್ತು ರಾಮಯ್ಯನವರಿಗೆ ಆಸ್ತಿ ಪಾಲಾದ ನಂತರ ರಾಮಯ್ಯನವರಿಗಾಗಿ ಹಳೆಮನೆಗೆ ಅಂಟಿಕೊಂಡು ಒಂದು ಹೊಸಮನೆ ಕಟ್ಟಿ ಅವರು ಅದರಲ್ಲಿ ವಾಸಮಾಡತೊಡಗಿದ್ದರು. ಇನ್ನು ಸದಾಶಿವಯ್ಯ, ಶ್ರೀನಿವಾಸಯ್ಯ, ಅಚ್ಯುತಯ್ಯ ಮತ್ತು ಗಣೇಶಯ್ಯನವರಿಗೂ ಆಸ್ತಿ ಪಾಲಾಗಿ, ಸದಾಶಿವಯ್ಯನವರು ಹೊಕ್ಕಳಿಕೆಯ ಮತ್ತೊಂದು ಭಾಗದಲ್ಲಿದ್ದ ಕಾರಬೈಲು ಎಂಬಲ್ಲಿ ಮನೆಕಟ್ಟಿಕೊಂಡು ವಾಸಮಾಡತೊಡಗಿದ್ದರು. ಶ್ರೀನಿವಾಸಯ್ಯ ನಮ್ಮ ಭಾವನವರ  ತಮ್ಮ ಗಣೇಶಯ್ಯನವರ ಮನೆಯ ಪಕ್ಕದಲ್ಲೇ ಮನೆ ಕಟ್ಟಿಸಿಕೊಂಡಿದ್ದರು. ಅವರ ಕಿರಿಯ ತಮ್ಮ ಗಣೇಶಯ್ಯನವರಿಗೆ ಒಂದು ಸಮಸ್ಯೆ ಇತ್ತು. ಏಕೆಂದರೆ ಊರಿನಲ್ಲಿ ಅವರಿಗಿಂತ ಹಿರಿಯರಾದ ಇನ್ನೊಬ್ಬ ಗಣೇಶಯ್ಯನವರಿದ್ದರು. ಅವರು ನಮ್ಮ ಭಾವನವರ ತಮ್ಮ. ಇಬ್ಬರು ಗಣೇಶಯ್ಯನವರಲ್ಲಿ ವ್ಯತ್ಯಾಸ ತೋರಿಸಲು ಒಂದು ಸುಲಭ ಪರಿಹಾರ ಕಂಡು ಹಿಡಿಯಲಾಯಿತು. ಅದರ ಪ್ರಕಾರ ನಮ್ಮ ಭಾವನವರ  ತಮ್ಮ ದೊಡ್ಡ ಗಣೇಶಯ್ಯ ಆದರು. ಹಾಗೆಯೇ ಸದಾಶಿವಯ್ಯನವರ ತಮ್ಮ ಸಣ್ಣ ಗಣೇಶಯ್ಯ ಆದರು. ಇಷ್ಟು ಮಾತ್ರವಲ್ಲ. ದೊಡ್ಡ ಗಣೇಶಯ್ಯನವರ ಹೆಂಡತಿಯಾದ ಕಾನೂರು ಸುಬ್ಬರಾಯರ ಮಗಳು ಜಯಲಕ್ಷ್ಮಿಯವರ ತಂಗಿ ಸೀತಾಲಕ್ಷ್ಮಿಯವರೊಡನೆ ಸಣ್ಣ  ಗಣೇಶಯ್ಯನವರ ಮದುವೆಯೂ ಆಯಿತು!

ಮೇಲಿನಮನೆ ಫಣಿಯಪ್ಪಯ್ಯನವರ ದೊಡ್ಡ ಮಗಳು ಶ್ರೀದೇವಿಯನ್ನು ಕೊಪ್ಪ-ಜಯಪುರ ರಸ್ತೆಯಲ್ಲಿದ್ದ ಕಟ್ಟೆಮನೆ ತಿಮ್ಮಪ್ಪಯ್ಯನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಎರಡನೇ ಮಗಳು ವಾಗ್ದೇವಿಯನ್ನು ಕಳಸದಲ್ಲಿ ಒಬ್ಬರಿಗೆ ಮದುವೆ  ಮಾಡಲಾಗಿತ್ತು. ದೊಡ್ಡ ಮಗ ಶೇಷಾದ್ರಿಯವರಿಗೆ ಗುಡ್ಡೇತೋಟದ ನಾಗರತ್ನ ಎಂಬುವರೊಡನೆ ಮದುವೆಯಾಗಿತ್ತು. ಶ್ರೀನಿವಾಸಯ್ಯ, ಅಚ್ಯುತಯ್ಯ ಮತ್ತು ಗಣೇಶಯ್ಯ ಇದ್ದ ಮನೆಯಲ್ಲಿ ಲಕ್ಷ್ಮೀನಾರಾಯಣ ಎಂಬ ಹುಡುಗ ಇದ್ದುದು ನೆನಪಿಗೆ ಬರುತ್ತಿದೆ. ಅವನಿಗೆ ತಂದೆ ತಾಯಿ ಇರಲಿಲ್ಲ. ಅವನಿಗೆ ಮನೆಯವರೊಡನೆ ಏನು ಸಂಬಂಧ ಇತ್ತೋ ಗೊತ್ತಿಲ್ಲ. ಕಾಲದಲ್ಲಿ ಕೇವಲ ಹೆಣ್ಣು ಮಕ್ಕಳು ಮತ್ತು ಆಸ್ತಿ ಇದ್ದವರು 'ಮನೆಅಳಿಯ'ನಿಗಾಗಿ ಹುಡುಕುವುದು ಮಾಮೂಲಾಗಿತ್ತು. ಅಕ್ಕನಿಂದ ತಿಳಿದಂತೆ ಲಕ್ಷ್ಮೀನಾರಾಯಣ ಕೂಡ ಹೊಸನಗರದ ಕಡೆಯ ಕುಟುಂಬ ಒಂದರ ಮನೆಅಳಿಯನಾಗಿ ಹೋದನಂತೆ.

ತಿಮ್ಮಪ್ಪಯ್ಯನವರ ತಮ್ಮಂದಿರಾದ ಕೃಷ್ಣಯ್ಯ ಮತ್ತು ಮಂಜಪ್ಪಯ್ಯ ನಾನು ಹಿಂದೆ ಹೋದಾಗ  ಕಾನೂರು ಎಂಬಲ್ಲಿ ವಾಸ ಮಾಡುತ್ತಿದ್ದರಂತೆ. ಅವರಿಬ್ಬರೂ ಕಾನೂರು ತ್ಯಜಿಸಿ ಹೊಕ್ಕಳಿಕೆಗೆ ವಾಪಾಸ್ ಬಂದಿದ್ದರು.   ಕೃಷ್ಣಯ್ಯನವರು   ಅಚ್ಯುತಯ್ಯ ಮತ್ತು ಗಣೇಶಯ್ಯನವರ ಮನೆಯ ಪಕ್ಕದಲ್ಲೇ ಸುಂದರವಾದ ಹೊಸಮನೆ ಕಟ್ಟಿಕೊಂಡಿದ್ದರು. ಅವರ ಹಿರಿಯ ಮಗಳು ಲಲಿತ ಮತ್ತು ಹಿರಿಯ ಮಗ ರಾಮಚಂದ್ರ ಹೊಕ್ಕಳಿಕೆ ಶಾಲೆಯಲ್ಲಿ ಓದುತ್ತಿದ್ದರು. ಮಂಜಪ್ಪಯ್ಯನವರ ಹೊಸಮನೆ ಮೇಲಿನಮನೆಯ ಮೇಲ್ಭಾಗದಲ್ಲಿ ಕಟ್ಟಲಾಗುವ ವೇಳೆಯಲ್ಲಿ ಅವರ ಸಂಸಾರ ಕೃಷ್ಣಯ್ಯನವರ ಮನೆಯಲ್ಲೇ ವಾಸಮಾಡುತ್ತಿತ್ತು.

ಒಟ್ಟಿನಲ್ಲಿ ನಾನು ೧೯೫೯ನೇ ಇಸವಿಯಲ್ಲಿ ಹೊಕ್ಕಳಿಕೆಯಲ್ಲಿ ಅಕ್ಕನ ಮನೆಯಲ್ಲಿ ಮಿಡ್ಲ್ ಸ್ಕೂಲ್ ಓದಲು ಹೋಗುವಾಗ ಊರು ತುಂಬಾ ಬೆಳೆದು ಹೋಗಿತ್ತು. ಒಂದು ತುದಿಯಲ್ಲಿ ಮಂಜಪ್ಪಯ್ಯನವರ ಮನೆ ಇದ್ದರೆ ಇನ್ನೊಂದು ತುದಿಯಲ್ಲಿದ್ದ ಬೊಮ್ಲಾಪುರ ರಸ್ತೆಯಲ್ಲಿ ಮಂಜೇ ಶೆಟ್ಟಿ ಹೋಟೆಲ್ ಬಂದುಬಿಟ್ಟಿತ್ತು. ಇನ್ನೆರಡು ತುದಿಯಲ್ಲಿ ಸದಾಶಿವಯ್ಯನವರ ಕಾರ್ಬೈಲ್ ಮನೆ  ಮತ್ತು ಚಂದ್ರಹಾಸಯ್ಯನವರ ಬಿಳುವಿನಕೊಪ್ಪದ ಮನೆಗಳಿದ್ದುವು.
----ಮುಂದುವರಿಯುವುದು ---

No comments: