Friday, January 27, 2017

ನನ್ನ ಬಾಲ್ಯ


ಅಧ್ಯಾಯ ೧೩
ಬೆಣ್ಣೆಗುಡ್ಡೆ ಯಾತ್ರೆ
ನನ್ನ ನೆನಪಿನಲ್ಲಿ ಹಚ್ಚ ಹಸಿರಾಗಿ ಇಂದಿಗೂ ಉಳಿದಿರುವ  ಇನ್ನೊಂದು ಸಂದರ್ಭವೆಂದರೆ ನಮ್ಮ ಮನೆಯವರೆಲ್ಲಾ ಒಟ್ಟಿಗೆ ತುಂಗಾನದಿಯ ತೀರದಲ್ಲಿರುವ ಬೆಣ್ಣೆಗುಡ್ಡೆ ಎಂಬ ಸ್ಥಳಕ್ಕೆ ಹೋಗಿದ್ದು ಸ್ಥಳ ನಮ್ಮೂರಿಂದ ಸುಮಾರು ನಾಲ್ಕು ಮೈಲಿ ದೂರದಲ್ಲಿದೆ. ಹೆಸರಿಗೆ ತಕ್ಕಂತೆ ನದಿಯ ತೀರವೆಲ್ಲಾ ಬೆಣ್ಣೆಯಷ್ಟೇ ಬೆಳ್ಳಗಿರುವ ಮರಳು ರಾಶಿಯಿಂದ ತುಂಬಿತ್ತು. ನದಿಯಿಂದ ಸ್ವಲ್ಪ ದೂರದಲ್ಲಿ ದೇವಸ್ಥಾನವೊಂದಿದ್ದು ಅದರ ಪಕ್ಕದ ಮನೆಯೊಂದರಲ್ಲಿ ನಮ್ಮೂರಿಗೆ ಪುರೋಹಿತರಾದ ಶಂಕರ ಭಟ್ಟರು ವಾಸಮಾಡುತ್ತಿದ್ದರು. ನಮ್ಮ ಕೆಳಗಿನ ಮನೆಯ ಚಂದ್ರು ಮತ್ತು ನಡುವಿನ ಮನೆಯ ಚಂದ್ರು ಇಬ್ಬರಿಗೂ ಒಟ್ಟಿಗೆ ಒಂದೇ ಮುಹೂರ್ತದಲ್ಲಿ ದೇವಸ್ಥಾನದ ಎದುರಿಗೆ ಹಾಕಿದ್ದ  ಚಪ್ಪರದ ಕೆಳಗೆ  ಉಪನಯನದ ಏರ್ಪಾಟು ಮಾಡಲಾಗಿತ್ತು. ಮಕ್ಕಳಾದ ನಮಗೆ ದಟ್ಟವಾದ ಕಾಡಿನ ನಡುವಿನ ಪ್ರಯಾಣ ಒಂದು "ಪಿಕ್ನಿಕ್ ಪಾರ್ಟಿ" ಯಂತೆ ಅನ್ನಿಸಿ ತುಂಬಾ ಮಜವಾಗಿತ್ತು.

ನಾವು ಮುಂಜಾನೆಯ ಉಪಹಾರ ಮುಗಿಸಿ ನಮ್ಮ ಊರಿನಿಂದ ಪಯಣ ಆರಂಭಿಸಿದೆವು. ಮೊದಲಿಗೆ ನಮ್ಮ ಅಡಿಕೆ ತೋಟವನ್ನು ದಾಟಿ ಕಿತ್ಲೆಕಟ್ಟೆ ಗುಡ್ಡ ಎಂಬ ಬೆಟ್ಟದ  ಬುಡ ಸೇರಿದೆವು. ಗುಡ್ಡದ ಮೇಲೇರಿ ಹಿಂದಿರುಗಿ ನೋಡಿದಾಗ ನಮ್ಮೂರಿನ ಹಸಿರು ತುಂಬಿದ ಕಣಿವೆ ಅತ್ಯಂತ ಮನೋಹರವಾಗಿ ಗೋಚರಿಸಿತು. ಆದರೆ ಬೆಟ್ಟದ ಇನ್ನೊಂದು ಬದಿಗೆ ನಮ್ಮ ದೃಷ್ಟಿ ಹರಿಸಿದಾಗ ಅಲ್ಲಿ ಕಂಡ ಅಪೂರ್ವ ದೃಶ್ಯ ನಮ್ಮನ್ನು ಮೂಕರನ್ನಾಗಿ ಮಾಡಿತು. ಅದೊಂದು ದಟ್ಟವಾದ ಅರಣ್ಯದಿಂದ ಕೂಡಿದ ಕಣಿವೆಯಾಗಿದ್ದು ಅದರ ನಡುವಿನಿಂದ ಒಂದು ಜಲಧಾರೆ (ಹಳ್ಳ) ಹರಿದು ಹೋಗಿ ಬೆಟ್ಟದ ತಳಭಾಗದಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ತುಂಗಾ ನದಿಯನ್ನು ಸೇರುತ್ತಿತ್ತು. ಬೆಟ್ಟದಿಂದ ಕೆಳಗಿಳಿದು ಹೋಗಲು ಹಳ್ಳದ ಪಕ್ಕದಲ್ಲೇ ಒಂದು ಕಾಲುದಾರಿ ಇತ್ತು. ನಾವು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ನಿಧಾನವಾಗಿ ದಾರಿಯಲ್ಲೇ ನಡೆದು ಹೋದೆವು. ನಮಗೆ ಅರಣ್ಯದ ಮಧ್ಯದಿಂದ ಕಾಡು ಮೃಗಗಳು ಕೂಗುತ್ತಿರುವುದು ಕೇಳುತ್ತಿತ್ತು. ಹಾಗೆಯೇ ಕೋತಿಗಳು ಮತ್ತು ಕಬ್ಬೆಕ್ಕುಗಳು ಮರದಿಂದ ಮರಕ್ಕೆ ಹಾರುವುದನ್ನು ವಿಸ್ಮಯದಿಂದ ನೋಡುತ್ತಾ  ಮುಂದುವರಿದೆವು. ಮಧ್ಯೆ ಒಂದೆರಡು ಕೇರೇ ಹಾವುಗಳು ನಮ್ಮ ದಾರಿಗೆ ಅಡ್ಡವಾಗಿ ಹರಿದು ಹೋದವು. ಆದರೆ ಅವುಗಳನ್ನು ಎಷ್ಟೋ ಬಾರಿ  ನೋಡಿದ್ದ ನಮಗೆ ಸ್ವಲ್ಪವೂ ಭಯವಾಗಲಿಲ್ಲ. ಬೆಟ್ಟದ ಇಳಿಜಾರಿನಲ್ಲಿ ಹರಿದು ಹೋಗುತ್ತಿದ್ದ ಜಲಧಾರೆಯ ಮಧುರ ಶಬ್ದ ನಮ್ಮ ಕಿವಿಗಳಿಗೆ ಸಂಗೀತದಂತೆ ಮುದ ನೀಡಿತು. ಹೋಗುವ ದಾರಿಯಲ್ಲೇ ನಾವು ಕಾಡಿನಲ್ಲಿ ಮಾತ್ರ ಬೆಳೆಯುವ (ಬೆಂಬಾರ್ಲು, ಕರ್ಜಿ, ಚುರ್ಚೆ, ಕಾಡುಕಿತ್ತಳೆ,ಇತ್ಯಾದಿ) ಅನೇಕ ಹಣ್ಣುಗಳನ್ನು ನಮ್ಮ ಜೇಬಿಗೆ ಸೇರಿಸಿಕೊಂಡೆವು.

ಉಪನಯನದ ಮುಹೂರ್ತಕ್ಕೆ ಮುನ್ನವೇ ನಾವು ದೇವಸ್ಥಾನವನ್ನು ತಲುಪಿದೆವು. ಶಂಕರ  ಭಟ್ಟರ ನೇತೃತ್ವದಲ್ಲಿ "ಚಂದ್ರು ಮತ್ತು ಚಂದ್ರು" ಜೋಡಿಯ ಉಪನಯನ ಚೆನ್ನಾಗಿ ನೆರವೇರಿತು. ನಮ್ಮ ಊರಿನ ಜನರೆಲ್ಲಾ ಹಾಜರಿದ್ದರು. ಭರ್ಜರಿ ಸಂತರ್ಪಣೆ ಊಟದ ನಂತರ ನಾವೆಲ್ಲಾ ನದೀ ತೀರದಲ್ಲಿದ್ದ "ಬೆಣ್ಣೆಗುಡ್ಡೆ" ಯನ್ನು ನೋಡಲು ಹೋದೆವು. ತುಂಗೆಯ ದಡವೆಲ್ಲಾ ಬಿಳೀ ಮರಳಿನ ರಾಶಿಯಿಂದ ತುಂಬಿ ಹೋದ ಸುಂದರ ದೃಶ್ಯ ನಮ್ಮ ಕಣ್ಣಿಗೆ ಬಿತ್ತು. ಅಲ್ಲಿಂದ ವಾಪಾಸ್ ಬರಲು ಮನಸ್ಸೇ ಒಪ್ಪಲಿಲ್ಲ. ಆದರೆ ಸಂಜೆಯಾಗತೊಡಗಿದ್ದರಿಂದ ವಾಪಾಸ್ ದೇವಸ್ಥಾನಕ್ಕೆ ಬಂದು ನಮ್ಮೂರಿಗೆ ಮರು ಪ್ರಯಾಣ ಮಾಡಿದೆವು. ಹೋಗುವಾಗ ಇದ್ದ ಉತ್ಸಾಹ ತಿರುಗಿ ಬರುವಾಗ ಇರಲಿಲ್ಲ

ಶಂಕರ ಭಟ್ಟರಿಗೆ ಆಗಲೇ ತುಂಬಾ ವಯಸ್ಸಾಗಿತ್ತು. ಅವರಿಗೆ ಗಂಡು ಮಕ್ಕಳಿರಲಿಲ್ಲ. ನಮ್ಮೂರಿಗೆ ಅಧಿಕೃತ  ಪುರೋಹಿತರಾದ  ಅವರು ಊರಿನ ಎಲ್ಲಾ ಮನೆಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡಬೇಕಿತ್ತು. ಗಣಪತಿ ಹಬ್ಬದ ದಿನ ಪ್ರತಿಯೊಂದು ಮನೆಗೂ ಹೋಗಿ ವ್ರತವನ್ನು ಮಾಡಿಸಬೇಕಿತ್ತು. ಹಾಗೆಯೇ ಯುಗಾದಿ ಹಬ್ಬದ ದಿನ ಪ್ರತಿಯೊಂದು ಮನೆಗೂ ಹೋಗಿ ಒಂಟಿಕೊಪ್ಪಲ್ ಪಂಚಾಂಗದಿಂದ ವರ್ಷದ ಭವಿಷ್ಯವನ್ನು ಓದಿ ಹೇಳಿ ಅದರ ಪ್ರತಿಯೊಂದನ್ನು ಮನೆಯ  ಯಜಮಾನರ ಕೈಮೇಲೆ ಇಡಬೇಕಿತ್ತು.

ಸ್ವಲ್ಪ ಸಮಯದ ನಂತರ ನಮ್ಮೂರಿನ ಅಧಿಕೃತ ಪೌರೋಹಿತ್ಯವನ್ನು ವಯಸ್ಸಾದ ಶಂಕರ ಭಟ್ಟರ ಕೈಯಿಂದ  ತರುಣರಾದ ಗುಂಡಾ ಭಟ್ಟರಿಗೆ ಹಸ್ತಾಂತರ ಮಾಡಲಾಯಿತು. ಗುಂಡಾ ಭಟ್ಟರು ಯಾವಾಗಲೂ ಏರು ದ್ವನಿಯಲ್ಲಿ ಮಂತ್ರಗಳನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಹಾಗಾಗಿ ನಾವು ಕೂಡ ತಕ್ಕ ಮಟ್ಟಿಗೆ ಕೆಲವು ಮಂತ್ರಗಳನ್ನು ಹೇಳಲು ಕಲಿತು ಬಿಟ್ಟೆವು. ಉದಾಹರಣೆಗೆ : ""ಶುಭತಿಥೇ ಶೋಭನೇ ಮುಹೂರ್ತೇ ---------ಕಲಿಯುಗೇ ಪ್ರಥಮ ಪಾದೇ ಭರತವರ್ಷೇ ಭರತ ಖಂಡೇ "
"ಓಂ ರಾಜಾಧಿ ರಾಜಾಯ ಪ್ರಸಖ್ಯ ಸಾಯಿನೇ
ನಮೋ ವಯಂ ವೈ ಶ್ರವಣಾಯ ಕೂರ್ಮಹೇ"
"ಶತಮಾನಮ್ ಭವತಿ ಶತಾಯುಷ್ಯಮ್ "
"ಯಾನಿಕಾಂಚ ಪಾಪಾನಿ ಜನೇನಹಮ್ ಪದೇ ಪದೇ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ"
ಗಂಡು ಮಕ್ಕಳಿಲ್ಲದ ಶಂಕರ ಭಟ್ಟ ದಂಪತಿಗಳು ವೃದ್ಧಾಪ್ಯದಲ್ಲಿ ಜೋಗದಲ್ಲಿ ಇಂಜಿನಿಯರ್ ಆಗಿದ್ದ ತಮ್ಮ ಅಳಿಯನ ಮನೆಗೆ ಹೊರಟು  ಹೋದರು. ಅಲ್ಲಿಗೆ ನಮ್ಮ ಬೆಣ್ಣೆಗುಡ್ಡೆ ಸಂಪರ್ಕವೂ ಮುಕ್ತಾಯಗೊಂಡಿತು. ಈಗ ನಮಗೆ ಬೆಣ್ಣೆಗುಡ್ಡೆ ಕೇವಲ  ಒಂದು ನೆನಪು ಮಾತ್ರ.
ಚಿಕ್ಕಮಗಳೂರ ಸಂತೆ
ಕೊಪ್ಪದ ಭಾನುವಾರ ಸಂತೆಯನ್ನು ನೋಡಿ ಬಂದ ನಂತರ ನನಗೆ ತುಂಬಾ ದೂರ ಬಸ್ ಪ್ರಯಾಣ ಮಾಡಿ ಚಿಕ್ಕಮಗಳೂರಿನ ಮಂಗಳವಾರದ ಸಂತೆಯನ್ನು ನೋಡಿ ಬರಬೇಕೆಂದು ಆಸೆಯಾಯಿತು. ದಿನಗಳಲ್ಲಿ ಪ್ರತಿ ವಾರವೂ ನಮ್ಮ ತಂದೆ ಅಥವಾ  ಅಣ್ಣ ನಮ್ಮೂರಿನಿಂದ ಬಾಳೆಕಾಯಿಯನ್ನು ಚಿಕ್ಕಮಗಳೂರಿನ  ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರು. ನನ್ನ ಕಾಟವನ್ನು ತಡೆಯಲಾರದೆ ತಂದೆಯವರು ನನ್ನನ್ನು ಅವರೊಟ್ಟಿಗೆ ಕರೆದುಕೊಂಡು ಹೋಗಲು ಒಪ್ಪಿಗೆ ನೀಡಿದರು.

ಸಂತೆಗೆ ಹೋಗಲು ಬೇರೆಬೇರೆ ಮನೆಗಳಿಂದ ಬಾಳೆಕಾಯಿಯನ್ನು ಒಟ್ಟುಮಾಡುವ ಕೆಲಸವನ್ನು ಸೋಮವಾರ ಬೆಳಿಗ್ಗೆಯೇ ಶುರು ಮಾಡಬೇಕಿತ್ತು. ತೋಟದಲ್ಲಿದ್ದ ಬೆಳೆದ ಬಾಳೆ ಗೊನೆಗಳನ್ನು ಕಡಿದು ಚಿಪ್ಪುಗಳನ್ನು ಬೇರ್ಪಡಿಸಿ ಎಣಿಸಿದ ನಂತರ ಚೀಲಗಳಲ್ಲಿ ತುಂಬಿ ಸಂಪಿಗೇ ಕೊಳಲಿಗೆ ತರಲಾಗುತ್ತಿತ್ತು. ಕಾಲದಲ್ಲಿ ಬಾಳೆಹಣ್ಣು ಅಥವಾ ಕಾಯಿಯನ್ನು ತೂಕ ಮಾಡುವ ಕ್ರಮವಿರಲಿಲ್ಲ. ಎಣಿಕೆಯ ಆಧಾರದ ಮೇಲೆ ೧೦೦ಕ್ಕೆ ಅಥವಾ ಸಾವಿರಕ್ಕೆ ಇಷ್ಟೆಂದು ಬೆಲೆ ಕಟ್ಟಲಾಗುತ್ತಿತ್ತು. ಆ ದಿನಗಳಲ್ಲಿ ಯಾವುದೇ ವಾಹನಗಳು ನಮ್ಮ ಮನೆಗೆ ಬರಲಾಗುತ್ತಿರಲಿಲ್ಲ. ಆದ್ದರಿಂದ ಸಂಪಿಗೆ ಕೊಳಲಿನಿಂದಲೇ ಅವರ  ಗಾಡಿಯಲ್ಲಿ ಬಾಳೆಕಾಯಿಯನ್ನು ಸಂತೆಗೆ  ಕೊಂಡೊಯ್ಯಬೇಕಾಗಿತ್ತು.

ಮಂಗಳವಾರ ಬೆಳಿಗ್ಗೆ ನಮ್ಮ ಪ್ರಯಾಣ ಗಾಡಿಯಲ್ಲಿ ಬಾಳೆಕಾಯಿ ಮೂಟೆಗಳನ್ನು ತುಂಬಿದ ನಂತರ  ಪ್ರಾರಂಭವಾಯಿತು. ಸುಮಾರು ಗಂಟೆಯ ವೇಳೆಗೆ ನಾವು ಸೀತಾ ನದಿಯನ್ನು ದಾಟಿ ಬೆಳಗೊಳ ಗಣಪತಿ ಕಟ್ಟೆಯನ್ನು ತಲುಪಿದೆವು. ಮಾಮೂಲಿನಂತೆ ನಾವು ಕೊಪ್ಪದಿಂದ ಚಿಕ್ಕಮಗಳೂರಿಗೆ ಗಂಟೆಗೆ ಹೊರಡುವ ಮಲ್ಲಿಕಾರ್ಜುನ  ಬಸ್ಸಿನಲ್ಲಿ ಪ್ರಯಾಣಿಸಬೇಕಿತ್ತು. ಬಸ್ಸಿನ ಡ್ರೈವರ್ ಯಲ್ಲಪ್ಪ ನಮ್ಮ ತಂದೆಗೆ ತುಂಬಾ ಪರಿಚಿತನಾಗಿದ್ದ. ಆದರೆ ನಮ್ಮ ದುರಾದೃಷ್ಟಕ್ಕೆ ದಿನ ಕೊಪ್ಪದಲ್ಲಿಯೇ ಯಾರೋ ಬಸ್ಸಿನ ಟಾಪ್ ತುಂಬಾ ಸಾಮಾನು ಲೋಡ್ ಮಾಡಿಬಿಟ್ಟಿದ್ದರು. ಹಾಗಾಗಿ ನಮ್ಮ ಬಾಳೆಕಾಯಿ ಮೂಟೆಗೆ  ಅಲ್ಲಿ ಜಾಗವೇ ಇರಲಿಲ್ಲ. ನಂತರದ  ೧೦ ಗಂಟೆಯ ಬಸ್ಸಿನಲ್ಲಿಯೂ ಅದೇ ಕಥೆಯಾಯಿತು. ಕೊನೆಗೆ ಸಂಜೆಯ ವೇಳೆಯ ಬಸ್ಸೊಂದರಲ್ಲಿ ನಾವು ಸುಮಾರು ಗಂಟೆಗೆ ಚಿಕ್ಕಮಗಳೂರು ತಲುಪಿದೆವು. ಮಂಗಳವಾರದ ಸಂತೆಯಲ್ಲಿ ಪಾಲ್ಗೊಳ್ಳುವ ಅವಕಾಶ ನಮಗೆ ದೊರೆಯಲಿಲ್ಲ.

ಬಸ್ಸಿನಿಂದ ಮೂಟೆಗಳನ್ನು ಇಳಿಸಿ ಬಸ್ ಸ್ಟ್ಯಾಂಡಿನ ಒಂದು ಮೂಲೆಯಯಲ್ಲಿ ಪೇರಿಸಿ ಇಡಲಾಯಿತು. ಬೆಳಿಗ್ಗೆ ತಿಂಡಿಯ ನಂತರ ಯಾವುದೇ ಆಹಾರವಿಲ್ಲದೇ ನಮ್ಮ ಹೊಟ್ಟೆ ತಾಳ ಹಾಕುತ್ತಿತ್ತು . ನಾವು ಸೀದಾ ಬಸ್ ಸ್ಟಾಂಡ್ ಹೋಟೆಲಿನೊಳಗೆ ಪ್ರವೇಶ ಮಾಡಿದೆವು. ನನಗದು ನನ್ನ ಜೀವನದ  ಮೊದಲ ಹೋಟೆಲ್ ಅನುಭವ. ಹಾಗಾಗಿ ತುಂಬಾ ಉತ್ಸುಕನಾಗಿದ್ದೆ. ಬಿಳಿಯ ಯುನಿಫಾರ್ಮ್ ದರಿಸಿದ್ದ ಸಪ್ಪ್ಲೈರ್ ಒಬ್ಬ ನಮ್ಮ ಬಳಿಗೆ ಬಂದು ಬಡಬಡನೆ ತಿಂಡಿಯ ಹೆಸರನ್ನು ಹೇಳತೊಡಗಿದ. ಅಷ್ಟೊಂದು  ಹೆಸರುಗಳನ್ನು ಒಮ್ಮೆಲೇ ಕೇಳಿ ನನ್ನ ತಲೆ ತಿರುಗಿದಂತಾಯಿತು. ಅವನ ಪ್ರಕಾರ ದೋಸೆಯಲ್ಲೇ ಮೂರು ವಿಧದ ದೋಸೆಗಳಿರುವವಂತೆ! ಖಾಲಿ ದೋಸೆ, ತುಪ್ಪದ ಅಥವಾ ಪ್ಲೈನ್ ದೋಸೆ ಮತ್ತು ಮಸಾಲೆ ದೋಸೆಗಳಂತೆನಾವು ಅದುವರೆಗೂ ಮನೆಯಲ್ಲಿ ತಿನ್ನುತ್ತಿದ್ದುದು ಕೇವಲ "ಖಾಲಿ" ದೋಸೆಯಂತೆಮಸಾಲೆ ದೋಸೆಯೊಳಗೆ ಆಲೂಗೆಡ್ಡೆ ಪಲ್ಯವಿರುವುದಂತೆನನಗದೇ ದೋಸೆ ಬೇಕೆಂದು ತಂದೆಯವರಿಗೆ ಹೇಳಿಬಿಟ್ಟೆ. ಅವರು ಎರಡು ಮಸಾಲೆ ದೋಸೆಗಳಿಗೆ ಆರ್ಡರ್ ಮಾಡಿದರು. ನಾನು ಮನೆಯಲ್ಲಿ ಸಾಮಾನ್ಯವಾಗಿ ಐದು ದೋಸೆ ತಿನ್ನುತ್ತಿದ್ದೆ. ತಂದೆಯವರು ಕೇವಲ ಒಂದೊಂದು ದೋಸೆಗೆ ಆರ್ಡರ್ ಮಾಡಿದ್ದು ನನಗೆ  ಸ್ವಲ್ಪ ನಿರಾಶೆಯಾಯಿತು.

ನಮ್ಮಿಂದ ಆರ್ಡರ್ ತೆಗೆದುಕೊಂಡ ಸಪ್ಪ್ಲೈರ್ ಎಷ್ಟು ಹೊತ್ತಾದರೂ ಬರಲಿಲ್ಲ. ನಮ್ಮ ತಂದೆಯವರು ಬೇರೊಬ್ಬನನ್ನು ನಮ್ಮ ಸಪ್ಪ್ಲೈರ್ ಎಂದು ತಿಳಿದುಕೊಂಡು ಅವನನ್ನು ಕರೆದು ಅರ್ಜೆಂಟಾಗಿ ಸಪ್ಲೈ ಮಾಡುವಂತೆ ಹೇಳಿದರು. ಸ್ವಲ್ಪ ಸಮಯದ ನಂತರ ಇಬ್ಬರೂ ಎರಡೆರಡು ಮಸಾಲೆ ದೋಸೆಗಳನ್ನು ತೆಗೆದುಕೊಂಡು ನಮ್ಮ ಹತ್ತಿರ ಹಾಜರಾದರುನನಗೇನೋ ಎರಡು ದೋಸೆಗಳನ್ನೂ  ತಿನ್ನಬೇಕೆಂಬ ಆಸೆಯಿತ್ತು. ಆದರೆ ನಮ್ಮ ತಂದೆ ಮತ್ತು ಸಪ್ಪ್ಲೈರ್ ಗಳ ನಡುವೆ ದೊಡ್ಡ ಜಗಳವೇ ಆಗಿ ಹೋಯಿತು. ಕೊನೆಗೆ ಎರಡು ದೋಸೆಗಳು ಮಾತ್ರ ನಮ್ಮ ಟೇಬಲ್ ಮೇಲೆ ಉಳಿದುವು. ನನ್ನ ಜೀವನದ ಮೊದಲ ಮಸಾಲೆ ದೋಸೆಯ ರುಚಿ ಹೇಳತೀರದು. ಆಲೂಗೆಡ್ಡೆ ಪಲ್ಯದಿಂದ ತುಂಬಿದ ದೋಸೆಯನ್ನು ಬಾಯಿ ಚಪ್ಪರಿಸುತ್ತಾ ತಿಂದು ಮುಗಿಸಿದೆ. ಆದರೆ ಒಂದಕ್ಕಿಂತ ಹೆಚ್ಚು ದೋಸೆಯನ್ನು ತಿನ್ನುವುದು ಅಸಾಧ್ಯವೆನ್ನುವ ವಿಷಯವೂ ಗೊತ್ತಾಯಿತು. ಬಸ್ ಸ್ಟ್ಯಾಂಡಿನಲ್ಲಿದ್ದ ಒಂದು ಅಂಗಡಿಯವರಿಗೆ ನಮ್ಮ ಬಾಳೆಕಾಯಿ ಮೂಟೆಗಳ ಮೇಲೆ ಸ್ವಲ್ಪ ಗಮನವಿಡುವಂತೆ ಹೇಳಿ ನಾವು ಗುಬ್ಬಿ ವೀರಣ್ಣವರ ಕಂಪನಿ ಆಗ ಚಿಕ್ಕಮಗಳೂರಿನಲ್ಲಿ ಆಡುತ್ತಿದ್ದ "ದಶಾವತಾರ " ಎಂಬ ನಾಟಕ ನೋಡಲು ಹೋದೆವು.

ನಾಟಕರತ್ನ ಗುಬ್ಬಿ ವೀರಣ್ಣನವರ ದಶಾವತಾರ ನಾಟಕ ನನ್ನ ಬಾಲ್ಯದ ಒಂದು  ಅತ್ಯದ್ಭುತ ಅನುಭವವೆಂದು ಹೇಳಲೇ ಬೇಕು. ನಾಟಕದ ಸೀನರಿಗಳು ಮತ್ತು ವಿವಿಧ ಪಾತ್ರಗಳು ವರ್ಣಿಸಲಸದಳ. ಸಮುದ್ರ ಮಥನದ ಸೀನರಿ ಅತ್ಯದ್ಭುತವಾಗಿದ್ದರೆ ಲವ-ಕುಶ ಪಾತ್ರಮಾಡಿದ ಎರಡು ಮಕ್ಕಳ ನಟನೆ ಮನ  ಸೆಳೆಯುವಂತಿತ್ತು. ಇನ್ನೊಂದು ವಿಶೇಷವೆಂದರೆ ಯಕ್ಷಗಾನಗಳಲ್ಲಿ ಸ್ತ್ರೀ ಪಾತ್ರಗಳನ್ನು ಗಂಡಸರೇ ಮಾಡುತ್ತಿದ್ದರೆ, ಇಲ್ಲಿ ಸ್ತ್ರೀಯರೇ ಪಾತ್ರಧಾರಿಗಳಾಗಿದ್ದರು. ಇದು ಕಥೆಗೆ ನೈಜತೆ ಬರುವಂತೆ ಮಾಡುತ್ತಿತ್ತು. ಮೋಹಿನಿ ಪಾತ್ರಧಾರಿ ಹುಡುಗಿ ನನ್ನ ಕಣ್ಣಿಗೆ ನಿಜವಾದ ಮೋಹಿನಿಯಂತೇ ಕಂಡು ಮೈ ಮರೆಸಿಬಿಟ್ಟಳು. ದೇವತೆಗಳಿಗೆ ಅಮೃತವನ್ನು ಅವಳು ನೀಡುವಾಗ ತೋರಿದ ವಯ್ಯಾರ ಅಸಾಧಾರಣವಾಗಿತ್ತು. ನನಗೆ ಅದು ನಾಟಕವೇ ಅನ್ನಿಸದೆ ನಾನು ಬೇರೊಂದು ಪ್ರಪಂಚದಲ್ಲಿರುವಂತೆ ಭಾಸವಾಯಿತು.

ನಾವು ರಾತ್ರಿ ಬಸ್ ಸ್ಟ್ಯಾಂಡಿನಲ್ಲೇ ಮಲಗಬೇಕಾಯಿತು. ನಮ್ಮ ಬಾಳೆಕಾಯಿ ಮೂಟೆಗಳನ್ನು ಬಿಟ್ಟು ನಾವು ಯಾವುದೇ ಹೋಟೆಲ್ ನಲ್ಲಿ ಉಳಿದುಕೊಳ್ಳುವ ಅವಕಾಶವಿರಲಿಲ್ಲ. ಮಾರನೇ ದಿನ ನಾವು ತೆಗೆದುಕೊಂಡು ಹೋಗಿದ್ದ ಬಾಳೆಕಾಯಿ ಮಾರಾಟ ತುಂಬಾ ಕಷ್ಟಸಾಧ್ಯವಾಗಿತ್ತು. ಏಕೆಂದರೆ ಸಂತೆ ಹಿಂದಿನ ದಿನವೇ ಮುಗಿದಿದ್ದರಿಂದ ಗಿರಾಕಿಗಳೇ ಇರಲಿಲ್ಲ. ತಂದೆಯವರ ಅಸಾಧಾರಣ ವ್ಯಾಪಾರೀ ಜಾಣ್ಮೆ ಯಾವುದೋ ರೀತಿಯಲ್ಲಿ ನಮಗೆ ಸಾಧ್ಯವಾದಷ್ಟು ಉತ್ತಮ  ಬೆಲೆ ದೊರೆಯುವಂತೆ ಮಾಡಿತು. ನಮ್ಮ ಮನೆಗೆ ಬೇಕಾದ ವಿವಿಧ ಸಾಮಾನುಗಳನ್ನು ಖರೀದಿಸಿದ ನಂತರ  ಮರುಪ್ರಯಾಣ ಮಾಡಿ ನಾವು ಸಂಜೆಯ ವೇಳೆಗೆ ಮನೆ ತಲುಪಿದೆವು. ನನ್ನ ಮಟ್ಟಿಗೆ ಚಿಕ್ಕಮಗಳೂರು ಪಯಣ ನನ್ನ ಬಾಲ್ಯದ ಇನ್ನೊಂದು ಸಾಹಸ ಯಾತ್ರೆಯಾಗಿತ್ತು
ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆ
ಅಮ್ಮ ನಮ್ಮನ್ನು ಅಂದು ಬೆಳಗಿನ ಝಾವದಲ್ಲೇ ಎಬ್ಬಿಸಿದಳು. ನಾವೆಲ್ಲಾ ಬೇಗ ಸ್ನಾನ ಮುಗಿಸಿ ಪುರದಮನೆಗೆ ಹೋದೆವು. ದಿನ ಎಳ್ಳಮವಾಸ್ಯೆ ಎಂದೂ ಮತ್ತು ನಾವು ಪುರದಮನೆಯವರೊಡನೆ ತೀರ್ಥಹಳ್ಳಿಗೆ ಹೋಗಲಿದ್ದೇವೆಂದೂ ತಿಳಿದು ಬಂತು. ಹಿಂದಿನ ದಿನ ರಾತ್ರಿಯೇ ಒಂದು ವ್ಯಾನ್ ಜಯಪುರದಿಂದ ಬಂದು ಮನೆಯ ಮುಂದೆ ನಿಂತಿತ್ತು. ನಾವು ಅದರಲ್ಲೇ ಪ್ರಯಾಣ ಮಾಡಲಿದ್ದೇವೆಂದು ತಿಳಿದು ನಮಗೆ ತುಂಬಾ ಖುಷಿಯಾಯಿತು.

ಆಗಿನ ಕಾಲದಲ್ಲಿ ಬಸ್ ಮತ್ತು ವ್ಯಾನ್ ಗಳನ್ನು ವಾಹನದ  ಒಳಗಿನಿಂದ ಸ್ಟಾರ್ಟ್ ಮಾಡಲಾಗುತ್ತಿರಲಿಲ್ಲ. ನಾವೆಲ್ಲಾ ಒಳಗೇ ಕುಳಿತ ನಂತರ ಡ್ರೈವರ್ ಒಂದು ಉದ್ದದ ಕಬ್ಬಿಣದ ರಾಡ್ ವ್ಯಾನಿನ ಮುಂಭಾಗದಲ್ಲಿದ್ದ ತೂತೊಂದರ ಒಳಗೆ ಹಾಕಿ ತಿರುಗಿಸ ತೊಡಗಿದ. ಹಾಗೆ ತುಂಬಾ ಸಲ ಮಾಡಿದ  ನಂತರ ಎಂಜಿನ್ ಸ್ಟಾರ್ಟ್ ಆಯಿತು. ನಂತರ ಅವನು ಒಳಗೆ ಕುಳಿತು ವ್ಯಾನ್ ಚಾಲನೆ ಮಾಡಿದ. ನಾವು ಮೊಟ್ಟ  ಮೊದಲ ಬಾರಿ ಹೀಗೆ ವ್ಯಾನ್ ನಲ್ಲಿ ಪ್ರಯಾಣ ಮಾಡುತ್ತಿದ್ದರಿಂದ ನಮ್ಮ ಉತ್ಸಾಹಕ್ಕೆ ಮಿತಿ ಇರಲಿಲ್ಲ. ಅಲ್ಲಿಯವರೆಗೆ ನಾವೆಂದೂ ನಮ್ಮೂರಿನಿಂದಲೇ ವಾಹನ ಪ್ರಯಾಣ ಮಾಡಿರಲಿಲ್ಲ. ನಮ್ಮೂರಿನಿಂದ ಕಾಲ್ನಡಿಗೆಯಲ್ಲಿ ಒಂದು ಗಂಟೆ  ತೆಗೆದುಕೊಳ್ಳುತ್ತಿದ್ದ ಬೆಳಗೊಳದವರೆಗಿನ ಪ್ರಯಾಣ ಕೇವಲ ಕಾಲು ಗಂಟೆಯಲ್ಲಿ ಮುಗಿಯಿತು. ಅಲ್ಲಿಂದ ನಾವು ನಾರ್ವೆಯ ಮೇಲೆ ಕೊಪ್ಪ ತಲುಪಿದೆವು. ಆಮೇಲೆ ನಾವು ಗಡಿಕಲ್ಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಗಡಿ ದಾಟಿ ಶಿವಮೊಗ್ಗ ಜಿಲ್ಲೆಯಲ್ಲಿ  ಮುಂದುವರಿದು  ತುಂಗಾ ನದಿಯ ಸೇತುವೆ ದಾಟಿ ಪರಶುರಾಮ ಕ್ಷೇತ್ರವೆಂದು ಪ್ರಸಿದ್ಧವಾದ ತೀರ್ಥಹಳ್ಳಿ ತಲುಪಿದೆವು. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಸೇತುವೆಗೆ ಕುಂದಗಳೇ ಇಲ್ಲವೆಂದು ತಿಳಿದು ನಮಗೆ ಅದನ್ನು ದಾಟುವಾಗ ಸ್ವಲ್ಪ ಭಯವೇ ಆಯಿತು!

ವೇಳೆಗೆ ಬೆಳಗಿನ ಉಪಹಾರದ ಸಮಯವಾದ್ದರಿಂದ ನಾವು ಸೀದಾ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ  ಕೃಷ್ಣಪ್ಪಯ್ಯನವರ ಹೋಟೆಲ್ ಒಳಗೆ  ಪ್ರವೇಶ ಮಾಡಿದೆವು. ಹೋಟೆಲ್ ಪೂರ್ತಿ ಎಳ್ಳಮವಾಸ್ಯೆಗೆ ಬಂದ ಜನರು ತುಂಬಿದ್ದರು. ನಮಗೆ ಫ್ಯಾಮಿಲಿ ರೂಮಿನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ  ಮಾಡಲಾಯಿತು. ಇಡ್ಲಿ ವಡಾ ಮತ್ತು ತುಪ್ಪದ ದೋಸೆಗಳನ್ನು ಮತ್ತು ಕಾಫಿ ಹಾಗೂ ಬಿಸಿ ಹಾಲಿಗೆ ಆರ್ಡರ್ ಮಾಡಲಾಯಿತು. ತಿಂಡಿಗಳ ರುಚಿ ಹೋಟೆಲ್ಲಿನ ಹೆಸರಿಗೆ ತಕ್ಕಂತೆ ಇತ್ತು. ಅಲ್ಲಿಂದ ರಾಮೇಶ್ವರ ದೇವಸ್ಥಾನಕ್ಕೆ ಹೋಗಿ ವಿಶೇಷ ಅರ್ಚನೆ ಮಾಡಿಸಲಾಯಿತು.

ಅಲ್ಲಿಂದ ನಾವು ಹುಲ್ಕುಳಿ ಸುಬ್ಬರಾಯರೆಂಬುವರ ಮನೆಗೆ ಮಧ್ಯಾಹ್ನದ ಊಟಕ್ಕೆ ಹೋದೆವು. ಸುಬ್ಬರಾಯರು  ಹುಲ್ಕುಳಿ ಎಂಬ ಊರಿನಲ್ಲಿ ದೊಡ್ಡ ಜಮೀನ್ದಾರರಾಗಿದ್ದರು. ತುಂಬಾ ಧಾರ್ಮಿಕ ಹಾಗೂ ಜನಪ್ರಿಯ ವ್ಯಕ್ತಿಯಾಗಿದ್ದ ಅವರ ತೀರ್ಥಹಳ್ಳಿ ಮನೆ ಅವರ ದೂರದ ಸಂಭಂದಿಗಳಿಗೆ ಹಾಗೂ ಪರಿಚಯಸ್ಥರಿಗೆ ಒಂದು ಛತ್ರದಂತಿತ್ತು. ಅಲ್ಲಿ ಹೋದವರಿಗೆಲ್ಲಾ ಊಟ ಹಾಕುವುದು ಮಾತ್ರವಲ್ಲದೆ ತಂಗುವ ವ್ಯವಸ್ಥೆಯೂ ಇತ್ತು. ನಮ್ಮ ಸೋದರಮಾವನಾದ ಮೊದಲಮನೆ ಕೃಷ್ಣಮೂರ್ತಿಯವರ ವಿಧವೆ ಪತ್ನಿ ವಿಶಾಲಾಕ್ಷಿ ಅತ್ತೆ ಮನೆಯಲ್ಲಿ ಹುಲ್ಕುಳಿ ಪುಟ್ಟಮ್ಮ ಎಂಬ ಇನ್ನೊಬ್ಬ ವಿಧವೆ ಹೆಂಗಸೊಬ್ಬರ ಜೊತೆ ವಾಸ  ಮಾಡುತ್ತಿದ್ದರು. ಬಿಳೀ ಸೀರೆಯಲ್ಲಿ ಲಕ್ಷಣವಾಗಿ ಕಾಣುತ್ತಿದ್ದ  ವಿಶಾಲಾಕ್ಷಿ ಅತ್ತೆಯನ್ನು ಮೊದಲಬಾರಿ ನೋಡಿ ನಮಗೆಲ್ಲ ತುಂಬಾ ಸಂತೋಷವಾಯಿತು. ಅವರು ಪ್ರೀತಿಯಿಂದ ನಮಗೆಲ್ಲ ಊಟ ಬಡಿಸಿದರು.

ದಿನಗಳಲ್ಲಿ ಕೊಪ್ಪ ಮತ್ತು ಶೃಂಗೇರಿಗಳಲ್ಲಿ ಟೆಂಟ್ ಸಿನಿಮಾಗಳು ಮಾತ್ರಾ ಇರುತ್ತಿದ್ದು ಮಳೆಗಾಲದಲ್ಲಿ ಅವು ಮುಚ್ಚಿರುತ್ತಿದ್ದವು. ಆದರೆ ತೀರ್ಥಹಳ್ಳಿಯಲ್ಲಿ ಮಾತ್ರ ಆಗಲೇ ವೆಂಕಟೇಶ್ವರ ಎಂಬ ಪರ್ಮನೆಂಟ್ ಟಾಕೀಸ್ ಇತ್ತು. ಟೆಂಟ್ ಸಿನೆಮಾಗಳಲ್ಲಿ ಕೇವಲ ರಾತ್ರಿ ಮಾತ್ರಾ ಎರಡು ಶೋಗಳು ಇರುತ್ತಿದ್ದವು. ಆದರೆ ತೀರ್ಥಹಳ್ಳಿಯಲ್ಲಿ ಮದ್ಯಾಹ್ನದ ಮ್ಯಾಟಿನಿ ಶೋ ಕೂಡ ಇತ್ತು. ನಾವೆಲ್ಲ ಪ್ರಥಮ ಬಾರಿಗೆ ಮ್ಯಾಟಿನಿ ಶೋ ನೋಡಲು ಹೋದೆವು. ಫಂಡರೀಬಾಯಿ ನಾಯಕಿಯಾಗಿ ನಟಿಸಿದ್ದ ಸಿನಿಮಾದ ಹೆಸರು ಸಂತಸಕ್ಕುಬಾಯಿ ಎಂದಿತ್ತು. ನನಗೆ ನೆನಪಿದ್ದಂತೆ ಅದೊಂದು ಭಕ್ತಿ ಪ್ರಧಾನ ಮರಾಠಿ ಕಥೆ. ಅದರಲ್ಲಿ ಮರಾಠಿ ಜನರು ನಮ್ಮೂರಿನ ಒರಗು ದಿಂಬುಗಳಂತಿದ್ದ ಗುಂಡಗಿನ ದೊಡ್ಡ್ದ ದೊಡ್ಡ ಪೇಠಗಳನ್ನು ಧರಿಸಿಕೊಂಡಿರುವುದು ನಮಗೆ ತಮಾಶೆಯಾಗಿ ಕಾಣಿಸಿತು.

ಮ್ಯಾಟಿನಿ ಶೋ ನಂತರ ಯಾವುದೊ  ಹೋಟೆಲ್ ನಲ್ಲಿ ಕಾಫಿ ಕುಡಿದು ನಾವು ವ್ಯಾನ್ ನಲ್ಲಿ ಮರು ಪ್ರಯಾಣ ಪ್ರಾರಂಭಿಸಿದೆವು. ಹೀಗೆ  ನಮ್ಮ ತೀರ್ಥಹಳ್ಳಿ ಎಳ್ಳಮವಾಸ್ಯೆ ಯಾತ್ರೆ ಮುಕ್ತಾಯವಾಯಿತು.
----ಮುಂದುವರಿಯುವುದು ---






No comments: