ಅಧ್ಯಾಯ ೧೦
ನಮ್ಮೂರಿನ ನವರಾತ್ರಿ
ಸಡಗರ
ಆ ದಿನಗಳಲ್ಲಿ ನವರಾತ್ರಿಯ ಹಬ್ಬವನ್ನು ನಮ್ಮ ಊರಿನಲ್ಲಿ ತುಂಬಾ ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಸರದಿಯ
ಮೇಲೆ ಬೇರೆ ಬೇರೆ ಮನೆಗಳಲ್ಲಿ ಸಮಾರಾಧನೆಗಳು ನಡೆಯುತ್ತಿದ್ದವು. ಮೊದಲ ದಿನದ ಸಮಾರಾಧನೆ ಪಾಡ್ಯದಂದು ನಮ್ಮಮ್ಮನ ತವರುಮನೆಯಾದ “ಮೊದಲಮನೆ”ಯಲ್ಲಿ (ಅದರ ಹೆಸರಿಗೆ ತಕ್ಕಂತೆ) ನಡೆದರೆ ಕೊನೆಯ ಮೂರುದಿನ ಕ್ರಮವಾಗಿ ಹುರುಳಿಹಕ್ಲು, ಬೆಳವಿನಕೊಡಿಗೆ ಮತ್ತು ಪುರದಮನೆಯಲ್ಲಿ ನಡೆಯುತ್ತಿತ್ತು. ಆದರೆ ಪುರದಮನೆಯಲ್ಲಿ ನಡೆದಷ್ಟು ವಿಜೃಂಭಣೆಯಿಂದ ಬೇರೆಲ್ಲಿಯೂ ನಡೆಯುತ್ತಿರಲಿಲ್ಲ.
ಪುರದಮನೆಯ ಗತವೈಭವ
ನನಗೆ ನೆನಪಾಗುವಂತೆ ಚಿಕ್ಕವನಾದ ನನ್ನನ್ನು ತಂದೆಯವರು ತಮ್ಮ ಬೆನ್ನಿನಮೇಲೆ ಕೂರಿಸಿಕೊಂಡು ಸಮಾರಾಧನೆಯ ಹಿಂದಿನ ದಿನದ
ರಾತ್ರಿ "ಓಡಾಟ"ಕ್ಕೆಂದು ಪುರದಮನೆಗೆ ಹೋಗುವಾಗ ಕರೆದುಕೊಂಡು ಹೋಗುತ್ತಿದ್ದರು. ಓಡಾಟವೆಂದರೆ ಮಾರನೇ ದಿನದ ಅಡಿಗೆಗೆ ಬೇಕಾದ ತರಕಾರಿಗಳನ್ನು ಹೆಚ್ಚುವುದು, ಮಾವಿನ ಸೊಪ್ಪಿನಿಂದ ಮನೆಗೆ
ಅಲಂಕಾರ ಮಾಡುವುದು, ಪೂಜಾ ಮಂಟಪವನ್ನು ಅಲಂಕರಿಸುವುದು, ಇತ್ಯಾದಿ. ಅದರಲ್ಲಿ ಊರಿನ ಎಲ್ಲಾ ಮನೆಗಳಿಂದಲೂ ಜನರು ಹಾಜರಾಗುತ್ತಿದ್ದರು. ವಿಶೇಷವಾಗಿ ನಿಯಮಿತರಾದ ಅಡಿಗೆ ಭಟ್ಟರು ಅದೇ ವೇಳೆಯಲ್ಲಿ ಊಟಕ್ಕೆ ಬೇಕಾದ ಸಿಹಿ ತಿಂಡಿಗಳನ್ನು ತಯಾರು ಮಾಡುತ್ತಿದ್ದರು. ಪುರದಮನೆಯಲ್ಲಿ ಆ ದಿನಗಳಲ್ಲಿ ಸೌತಳ್ಳಿ ಸುಬ್ಬರಾಯ ಎಂಬುವ ಒಬ್ಬರು ಮನೆಯಲ್ಲೇ ಇದ್ದು ಮನೆಯ ಎಲ್ಲಾ ಕೆಲಸಗಳಲ್ಲೂ ನೆರವಾಗುತ್ತಿದ್ದರು. ಈ ಓಡಾಟದ ಸಮಯದಲ್ಲಿ ಅವರು ಒಂದು ನಿಮಿಷವೂ ಪುರುಸೊತ್ತು ಇಲ್ಲದಷ್ಟು ಕೆಲಸದಲ್ಲಿ ತೊಡಗಿರುತ್ತಿದ್ದರು.
ವಿದ್ಯುಚ್ಛಕ್ತಿ ಇನ್ನೂ ಬಂದಿರದ ಆ ದಿನಗಳಲ್ಲಿ ಪೆಟ್ರೋಮ್ಯಾಕ್ಸ್ ದೀಪಗಳನ್ನು ಹೊಚ್ಚುವುದೇ ಒಂದು ದೊಡ್ಡ ಕಾರ್ಯಕ್ರಮವಾಗಿತ್ತು. ಆ ಕೆಲಸ ಕೆಲವು ಪರಿಣಿತರಿಗೆ ಮಾತ್ರ ಸಾಧ್ಯವಾಗುತ್ತಿತ್ತು. ಅದರಲ್ಲಿ ನಮ್ಮ ಅಣ್ಣನೂ ಒಬ್ಬ. ಈ ದೀಪಗಳು ಊರಿನ ಶ್ರೀಮಂತರ ಮನೆಯಲ್ಲಿ ಮಾತ್ರ ಇರುತ್ತಿದ್ದು ಮನೆಯಲ್ಲಿ ಯಾವುದಾದರೂ ಸಮಾರಂಭಗಳು ನಡೆಯುವಾಗ ಮಾತ್ರ
ರಾತ್ರಿ ವೇಳೆಯಲ್ಲಿ ಹಚ್ಚಲ್ಪಡುತ್ತಿದ್ದವು. ಮಕ್ಕಳಾದ ನಾವೆಲ್ಲಾ ಸುತ್ತಲೂ ಕುಳಿತುಕೊಂಡು ದೊಡ್ಡವರು ದೀಪ ಹೊಚ್ಚುವುದನ್ನು ಕುತೂಹಲದಿಂದ ನೋಡುತ್ತಿದ್ದೆವು. ಹಾಗೆಯೇ ತರಕಾರಿ ಹೆಚ್ಚುವುದನ್ನೂ ಸಂಭ್ರಮದಿಂದ ನೋಡುತ್ತಿದ್ದೆವು. ಹೆಂಗಸರೂ ಮತ್ತು ಗಂಡಸರೂ ಕೂಡಿ ಬೇರೆ ಬೇರೆ ಕಥೆಗಳನ್ನು ಹೇಳುತ್ತಾ, ವಿವಿಧ ವಿಷಯಗಳನ್ನು ಚರ್ಚಿಸುತ್ತಾ ಮತ್ತು ಮಧ್ಯೆ ಮಧ್ಯೆ ಕಾಫಿ ಕುಡಿಯುತ್ತಾ ಕೆಲಸದಲ್ಲಿ ಮಗ್ನರಾಗಿರುವುದನ್ನು ನೆನೆಸಿಕೊಂಡರೆ ಆ ಕಾಲದ ಗತವೈಭವ ಮರಳಿ ಎಂದೂ ಬಾರದೆಂದು ವಿಷಾದವಾಗುತ್ತದೆ.
ಸಮಾರಾಧನೆಯ ದಿನ ಸಾಮಾನ್ಯವಾಗಿ ಹತ್ತು ಘಂಟೆಗೇ ಅತಿಥಿಗಳು ಬರ ತೊಡಗುತ್ತಿದ್ದರು.ಶ್ರೀನಿವಾಸಯ್ಯನವರ ದಾಯಾದಿಗಳು ಹೆಚ್ಚಾಗಿ ಅಗಳಗಂಡಿಯಲ್ಲಿದ್ದು ಅವರೆಲ್ಲಾ ಸಮಾರಂಭಕ್ಕೆ ಹಾಜರಾಗುತ್ತಿದ್ದರು. ಅವರಲ್ಲಿ ಕೆಲವರು ಹಿಂದಿನ ದಿನದ ಓಡಾಟಕ್ಕೇ ಬಂದಿರುತ್ತಿದ್ದರು. ಅತಿಥಿಗಳಲ್ಲಿ ಕೆಲವರು ಇಸ್ಪೀಟ್ ಆಟದಲ್ಲಿ
ತೊಡಗುತ್ತಿದ್ದರು. ಮಕ್ಕಳಾದ ನಾವೆಲ್ಲ ನಮ್ಮದೇ ಆದ
ಆಟಗಳಲ್ಲಿ ತೊಡಗಿರುತ್ತಿದ್ದೆವು. ಅತಿಥಿಗಳನ್ನು ಸ್ವಾಗತಿಸಲು ಮನೆಯಲ್ಲಿದ್ದ ಹೆಚ್ಎಂವಿ ಗ್ರಾಮೋಫೋನಿನಲ್ಲಿ ವಿವಿಧ ರೆಕಾರ್ಡ್ ಗಳನ್ನು ಪ್ಲೇ ಮಾಡಲಾಗುತ್ತಿತ್ತು. ಅದನ್ನು ಪ್ಲೇ ಮಾಡುವ ಜವಾಬ್ದಾರಿ ಶ್ರೀನಿವಾಸಯ್ಯನವರ ತಮ್ಮನಾದ ಕೃಷ್ಣರಾಯರದಾಗಿತ್ತು.
ಆ ಹಾಡುಗಳನ್ನು ಗುಬ್ಬಿ ವೀರಣ್ಣನವರ
ಮತ್ತು ಹಿರಣ್ಣಯ್ಯನವರ ನಾಟಕಗಳಿಂದ ಹಾಗೂ ಕನ್ನಡ ಸಿನಿಮಾ ಗಳಿಂದ ಆರಿಸಲಾಗುತ್ತಿತ್ತು.
ಉದಾಹರಣೆಗೆ :
"ಕಾಣದ ಹೆಣ್ಣ ಕರೆತಂದವನೇ
ಜಾಣರ
ಮೋರೆಗೆ ಮಸಿ ಬಳಿದವನೇ
ಹೆಂಗೆ
ತಾನೇ ನಂಬಲೋ ಗೆಳೆಯಾ ನಾ ನಿನ್ನ
ಈ ಆಟವೆಲ್ಲಾ
ಮೂರು ದಿನ ಬಲ್ಲೆ ನಾ ನಿನ್ನ".
“ಜಗದಾದಿ
ದೇವತೆಯ ಪ್ರತಿರೂಪವೋ ಎಂಬ
ಝಣಝಣದ
ರೂಪಾಯಿ ಅವಳ ಗಂಡ
ಇದ್ದು
ನಾಶವಾಗೈದು ಇರದೆ ಚಿಂತೆಯ ತರುವ
ಆ ಇಬ್ಬಂದಿ
ರೂಪಾಯಿ ಅವಳ ಗಂಡ "
“ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ
ಕೂಗಿದರು
ದನಿ ಕೇಳಲಿಲ್ಲವೇ ನರಹರಿಯೇ”
“ಭಾಮೆಯ
ನೋಡಲು ತಾ ಬಂದಾ
ಬೃಂದಾವನದಿಂದಾ
ಮುಕುಂದ”
“ಚೆಲುವಯ್ಯ
ಚೆಲುವೋ ತಾನಿ ತಂದಾನ
ಚಿನ್ಮಯಾ ರೂಪೇ ಕೋಲಣ್ಣ ಕೋಲೇ”
“ಇನ್ನು
ಯಾಕೆ ಬರಲಿಲ್ಲ ಹುಬ್ಬಳ್ಳಿಯವಾ "
ಹೀಗೆ ಗ್ರಾಮೋಫೋನ್ ಸಮಾರಂಭದ ಒಂದು ಅವಿಭಾಜ್ಯ ಅಂಗವೇ ಆಗಿರುತ್ತಿತ್ತು.
ಗಂಗಮ್ಮನ
ಮೊಮ್ಮಕ್ಕಳು
ಪುರದಮನೆಯ ಪ್ರತಿ ನವರಾತ್ರಿಗೂ ನಮ್ಮೂರಿಗೆ
ಸುಮಾರು ನಾಲ್ಕು ಮೈಲಿ ದೂರದಲ್ಲಿದ್ದ ಕೆಳಕೊಪ್ಪ ಎಂಬಲ್ಲಿಂದ ಗಂಗಮ್ಮ ಎಂಬ ವಿಧವೆ ಬಿಳಿ ಸೀರೆಯುನ್ನುಟ್ಟು
ಬರುತ್ತಿದ್ದರು. ಅವರು ತಮ್ಮೊಡನೆ ನಮ್ಮ ವಯಸ್ಸಿನವರೇ ಆದ ಇಬ್ಬರು ಮೊಮ್ಮಕ್ಕಳನ್ನು ಕರೆತರುತ್ತಿದ್ದರು.
ಅವರಲ್ಲಿ ದೊಡ್ಡವನು ಶಾಂತ ಸ್ವಭಾವದ ಹುಡುಗ. ಆದರೆ ಎರಡನೆಯವನು ನಮ್ಮ ಪ್ರಕಾರ ತುಂಬಾ ದುಷ್ಟ
(villain). ಅವನು ವಿನಾ ಕಾರಣ ನಾವು ಒಬ್ಬೊಬ್ಬರೇ ಸಿಕ್ಕಿದರೆ ಹೊಡೆದು ಓಡಿ ಹೋಗುತ್ತಿದ್ದ. ಅವನಿಗೆ
ಸರಿಯಾದ ಬುದ್ದಿ ಕಲಿಸುವುದೇ ನಮ್ಮ ಗುರಿಯಾಗಿತ್ತು. ನನಗೆ ಒಂಟಿಯಾಗಿ ಅವನನ್ನು ಎದುರಿಸುವ ಶಕ್ತಿಯಿರಲಿಲ್ಲ.
ಪುಟ್ಟಣ್ಣನ ಹತ್ತಿರ ಹೇಳಿ ಅವನಿಗೆ ಸರಿಯಾಗಿ ಬುದ್ಧಿ ಕಲಿಸುತ್ತಿದ್ದೆ. ಈ ನಮ್ಮ ಜಗಳಗಳು ಪ್ರತಿ ವರ್ಷವೂ ಹಾಗೆಯೇ ಮುಂದುವರೆಯುತ್ತಿದ್ದವು. ವಿಚಿತ್ರವೆಂದರೆ
ನಾವೆಂದೂ ಈ ಹುಡುಗರ ಹೆಸರು ತಿಳಿಯಲು ಪ್ರಯತ್ನಿಸಲಿಲ್ಲ. ದೊಡ್ಡವನು ಆಮೇಲೆ ಕೊಪ್ಪ ಬಸ್ ಸ್ಟ್ಯಾಂಡ್
ಹೋಟೆಲ್ನಲ್ಲಿ ಸುಪ್ಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಆ ಹೋಟೆಲ್ಲಿನ ತಿಂಡಿ ತಿಂದು ತಿಂದು ಅವನು
ಕೂಡಾ ಹೋಟೆಲ್ಲಿನ ಬೋಂಡದಂತೆ ಊದಿಕೊಂಡದ್ದನ್ನು ನೋಡಿ ನಮಗೆ ಹೊಟ್ಟೆಕಿಚ್ಚಾಗುತ್ತಿತ್ತು. ಸಾಧ್ಯವಾದರೆ ನಾವು ಕೂಡ ಹೋಟೆಲ್ ಸುಪ್ಪ್ಲೈಯರ್ ಆಗಿ ಮೂರು
ಹೊತ್ತೂ ಮಸಾಲೆ ದೋಸೆ ಮತ್ತು ಬೋಂಡಾ ತಿನ್ನಬೇಕೆಂದು ಕನಸು ಕಾಣುತ್ತಿದ್ದೆವು. ಅದೃಷ್ಟವಶಾತ್ ನಮ್ಮ
ಕನಸೆಂದೂ ನನಸಾಗಲಿಲ್ಲ! ಅಣ್ಣ ತಮ್ಮಂದಿರಿಬ್ಬರೂ ಆಮೇಲೆ ಬೆಂಗಳೂರಿನಲ್ಲಿ ಹೋಟೆಲ್ ತೆರೆದರೆಂದು ನಾವು
ಕೇಳಿದ್ದೆವು.
ಮನೆಯ ಜಗಲಿಯಲ್ಲಿದ್ದ ರೂಮಿನಲ್ಲಿ ಪೂಜಾ
ಮಂಟಪವಿದ್ದು ಅದರಲ್ಲಿ ಶ್ರೀನಿವಾಸಯ್ಯನವರು ಪುರೋಹಿತರ ಮಂತ್ರಪಠಣದೊಡನೆ ಪೂಜೆಯಲ್ಲಿ ತೊಡಗಿರುತ್ತಿದ್ದರು.
ಬೆಣ್ಣೆಗುಡ್ಡೆ ಶಂಕರ ಭಟ್ಟರ ಕಾಲದಲ್ಲಿ ಮಂತ್ರಪಠಣ ಅಷ್ಟು ಸ್ಪಷ್ಟವಾಗಿ ಕೇಳದಿದ್ದರೂ ಆಮೇಲಿನ ಪುರೋಹಿತರಾದ
ಗುಂಡಾಭಟ್ಟರ ಉಚ್ಛ ಸ್ವರದ ಮಂತ್ರಪಠಣ ಗುಡ್ಡದ ಮೇಲಿನವರೆಗೂ ಕೇಳಿಸುತ್ತಿತ್ತು. ರೇಷ್ಮೆ ಮಡಿ ಮತ್ತು
ಶಲ್ಯ ಧರಿಸಿದ ಶ್ರೀನಿವಾಸಯ್ಯನವರ ವ್ಯಕ್ತಿತ್ವಕ್ಕೆ ಆ ದಿನ ಒಂದು ವಿಶೇಷ ಕಳೆಯಿರುತ್ತಿತ್ತು.
ಮದ್ಯಾಹ್ನ ಸುಮಾರು ಒಂದು ಘಂಟೆಗೆ ಮಂಗಳಾರತಿಗೆ
ಕರೆ ಬರುತ್ತಿತ್ತು. ಗಂಡಸರೆಲ್ಲಾ ಶರ್ಟ್ ತೆಗೆದು ಶಲ್ಯಗಳನ್ನು ಹೊದ್ದುಕೊಂಡು ಮಂಟಪದ ಮುಂದಿನ ಜಗಲಿಯಲ್ಲಿ
ಸೇರುತ್ತಿದ್ದರು. ಹೆಂಗಸರು ಅವರ ಹಿಂದೆ ನಿಂತಿರುತ್ತಿದ್ದರು. ಆರತಿ ಪ್ರಾರಂಭವಾಗುತ್ತಿದ್ದಂತೆ ಶಂಖ
ಊದುವುದು ಮತ್ತು ಜಾಗಟೆಗಳನ್ನು ಬಾರಿಸುವುದು ಶುರುವಾಗುತ್ತಿತ್ತು. ಸಣ್ಣ ಸಣ್ಣ ಆರತಿಗಳಿಂದ ಪ್ರಾರಂಭವಾಗಿ
ಬೇರೆ ಬೇರೆ ಬಗೆಯ ವಿವಿಧ ಆರತಿಗಳನ್ನು ಹಚ್ಚಿ ಶ್ರೀನಿವಾಸಯ್ಯನವರ
ಕೈಯಲ್ಲಿ ಕೊಡಲಾಗುತ್ತಿತ್ತು. ಕೆಲವು ಆರತಿಗಳು ಎಷ್ಟೊಂದು ದೊಡ್ಡದಾಗಿ ವಿಚಿತ್ರವಾದ ರೂಪದಲ್ಲಿರುತ್ತಿದ್ದವೆಂದರೆ
ಅವನ್ನು ಎತ್ತುವುದು ಶ್ರೀನಿವಾಸಯ್ಯನವರಿಗೆ ಮಾತ್ರಾ ಸಾಧ್ಯವಿತ್ತು. ಕೊಟ್ಟ ಕೊನೆಯ ಆರತಿಯನ್ನು ಶ್ರೀನಿವಾಸಯ್ಯನವರ
ಕೈಗಿಟ್ಟಾಗ ಶಂಖ ಮತ್ತು ಜಾಗಟೆಯ ಶಬ್ದಗಳು ಹಾಗೂ ಪುರೋಹಿತರ ಮಂತ್ರಗಳು ತಾರಕಕ್ಕೇರುತ್ತಿದ್ದವು. ಆ ಸಂಭ್ರಮವೊಂದು ವಿಶೇಷ ಅನುಭವ.
ನಾನು ನನ್ನ ಜೀವಮಾನದಲ್ಲಿ ಪುನಃ ಎಂದೂ ಶ್ರೀನಿವಾಸಯ್ಯನವರು ಮಾಡುತ್ತಿದ್ದ ರೀತಿಯ ಮಂಗಳಾರತಿಯನ್ನು
ನೋಡಲಿಲ್ಲ.
ಸಾಮಾನ್ಯವಾಗಿ ಎಲ್ಲರ ಮನೆಯ ನವರಾತ್ರಿ ಸಮಾರಾಧನೆ ಮದ್ಯಾಹ್ನದ ಊಟದೊಂದಿಗೆ ಮುಗಿದು ಅತಿಥಿಗಳು ಕಾಫಿ
ಮುಗಿದೊಡನೇ ಹೊರಟು ಬಿಡುತ್ತಿದ್ದರು. ಆದರೆ ಪುರದಮನೆಯಲ್ಲಿ ಹಾಗಿರಲಿಲ್ಲ. ಏಕೆಂದರೆ ಅಲ್ಲಿ ಆ ರಾತ್ರಿ
"ಜಾಗರಣೆ" ಪ್ರೋಗ್ರಾಮ್ ಇರುತ್ತಿತ್ತು.
ಹಾಗಾಗಿ ಸಮಾರಂಭ ಮುಂದುವರೆದು ರಾತ್ರಿ ಪುನಃ ಪೆಟ್ರೋಮ್ಯಾಕ್ಸ್ ದೀಪಗಳು ಬೆಳಗತೊಡಗುತ್ತಿದ್ದವು.
ಜಾಗರಣೆ ಎಂದರೆ ರಂಗಮಂಟಪ ಮತ್ತು ಕುಣಿತಗಳಿಲ್ಲದ ಯಕ್ಷಗಾನ. ಅದಕ್ಕಾಗಿ ಕೆಲವು ವಿಶಿಷ್ಟ ಕಲಾವಿದರು
ಸಂಜೆಯ ವೇಳೆಗೆ ಆಗಮಿಸುತ್ತಿದ್ದರು. ನನಗೆ ನೆನಪಿರುವಂತೆ ಚಂಡೆ ಬಾರಿಸಲು ಹುಲಿಗರಡಿ ಮಂಜಪ್ಪಯ್ಯ ಹಾಗೂ
ಉಳಿದ ಪಾತ್ರಗಳಿಗೆ ಕ್ವಾರನಕೊಡಿಗೆ ಶಿಂಗಪ್ಪಯ್ಯ ಮತ್ತು ಕೊಡೂರು ಸುಬ್ಬಣ್ಣಯ್ಯ ಎಂಬುವರು ಪ್ರಮುಖವಾಗಿದ್ದರು.
ಇನ್ನು ಶ್ರೀನಿವಾಸಯ್ಯನವರ ಚಿಕ್ಕಪ್ಪನಾದ ಕೆರೆಮನೆ ತಿಮ್ಮಪ್ಪಯ್ಯ (ಚಿಕ್ಕಣ್ಣ) ಎನ್ನುವರು ಸ್ತ್ರೀ
ಪಾತ್ರ ಅದರಲ್ಲೂ ದ್ರೌಪದಿಯ ಪಾತ್ರಕ್ಕೆ ಪ್ರಸಿದ್ಧಿ ಪಡೆದಿದ್ದರು. ಅವರ ವಯ್ಯಾರ ಕೂಡಿದ ಹೆಣ್ಣಿನ
ಪಾತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿತ್ತು.
ಜಾಗರಣೆ ಸಾಮಾನ್ಯವಾಗಿ ಬೆಳಗಿನ ಝಾವದವರೆಗೂ
ಮುಂದುವರೆಯುತ್ತಿತ್ತು. ಅದರ ಮಧ್ಯದಲ್ಲಿ ರವೆ ಉಂಡೆ, ಚೌಚೌ ಮೊದಲಾದ ತಿಂಡಿಗಳೂ ಮತ್ತು ಕಾಫಿ ಹಾಗೂ ಕಷಾಯಗಳು ಹಂಚಲ್ಪಡುತ್ತಿದ್ದವು.
ಅದಕ್ಕಾಗೇ ಕಾಯುತ್ತಿದ್ದ ನಾವು ತಿಂಡಿ ಕಾಫಿ ಮುಗಿಯುತ್ತಿದ್ದಂತೆ ನಿದ್ದೆಗೆ ಶರಣಾಗುತ್ತಿದ್ದೆವು.
ನನಗೆ ಯಾವುದೇ ಜಾಗರಣೆ ಪ್ರಸಂಗವನ್ನು ಪೂರ್ತಿ ನೋಡಿದ ನೆನಪಾಗುವುದಿಲ್ಲ.
ವರ್ಷಗಳು ಕಳೆಯುತ್ತಿದ್ದಂತೆ ಜಾಗರಣೆ
ಔಟ್ ಆಫ್ ಫ್ಯಾಷನ್ ಆಗಿರಬೇಕು ಅಥವಾ ಕಲಾವಿದರು ಅಪರೂಪವಾಗಿರಬೇಕು. ಹಾಗಾಗಿ ಜಾಗರಣೆ ಕಾರ್ಯಕ್ರಮಕ್ಕೆ
ಮಂಗಳ ಹಾಡಲಾಯಿತು. ಅದರ ಬದಲಾಗಿ ಕೆಲವು ವರ್ಷ ನಮ್ಮೂರ ಹಾಗೂ ಹುರುಳಿಹಕ್ಕಲಿನ ಸ್ಕೂಲ್ ಹುಡುಗ ಹಾಗೂ
ಹುಡುಗಿಯರಿಂದ ನಾಟಕಗಳನ್ನು ಆಡಿಸಲಾಗುತ್ತಿತ್ತು.
ಎ ಎಸ್ ಮೂರ್ತಿ, ಕೆ ಗುಂಡಣ್ಣ ಮತ್ತು ಪರ್ವತವಾಣಿ ವಿರಚಿತ ಈ ನಾಟಕಗಳು ತುಂಬಾ ಚೆನ್ನಾಗಿಯೇ
ಆಡಲ್ಪಡುತ್ತಿದ್ದವು. ಸ್ವಲ್ಪ ಕಾಲದ ನಂತರ ಆ ನಾಟಕಗಳಿಗೂ ತೆರೆ ಬಿತ್ತು.
ಸಮಾರಾಧನೆಯ ಮಾರನೇ ದಿನ ಪುರದಮನೆಯಲ್ಲಿ
ಮಾತ್ರ ಮರುಪೂಜೆ ಎಂಬ ಸಮಾರಂಭ ನಡೆಯುತ್ತಿತ್ತು. ಮೊದಮೊದಲು ಮದ್ಯಾಹ್ನದ ಊಟದ ನಂತರ ಮಾರನೇ ದಿನ ಶೃಂಗೇರಿಯಲ್ಲಿ
ನಡೆಯುತ್ತಿದ್ದ ರಥೋತ್ಸವಕ್ಕೆ ಎಲ್ಲರೂ ಹೊರಡುವ ಕ್ರಮವಿತ್ತು.
ಈ ಮಧ್ಯೆ ಕೆಲವು ವರ್ಷ ಹಿಂದಿನ ದಿನ ನಾಟಕ ನಡೆದ ಸ್ಟೇಜಿನ ಮೇಲೆ ಮಕ್ಕಳ ಕಾರ್ಯಕ್ರಮ ಏರ್ಪಾಟಾಗುತ್ತಿತ್ತು.
ಅದರಲ್ಲಿ ಮಕ್ಕಳಿಗೆ ಭಾಷಣ ಮಾಡುವ ಹಾಗೂ ಹಾಡು ಹೇಳುವ ಅವಕಾಶ ಕೊಡಲಾಗುತ್ತಿತ್ತು. ಅದನ್ನು ಹಿರಿಯರೆಲ್ಲಾ
ನೋಡಿ ಆನಂದಿಸುತ್ತಿದ್ದರು. ಈ ಕಾರ್ಯಕ್ರಮಕ್ಕೆ ಗುಡ್ಡೇತೋಟದ ರಘುಪತಿ ಎನ್ನುವರು ಅಧ್ಯಕ್ಷತೆ ವಹಿಸುತ್ತಿದ್ದುದು
ನೆನಪಾಗುತ್ತದೆ. ಮುಂದೆ ಹಲವು ವರ್ಷಗಳ ನಂತರ ಅವರ ವಿವಾಹ ಶ್ರೀನಿವಾಸಯ್ಯನವರ ಮೊದಲ ಮಗಳಾದ ಜಲಜಾಕ್ಷಿಯೊಂದಿಗೆ
ನಡೆಯಿತು. ಒಮ್ಮೆ ಈ ಕಾರ್ಯಕ್ರಮದಲ್ಲಿ ನಾನು ಸ್ವಾಗತ ಭಾಷಣ ಮಾಡಿದ್ದೂ ನೆನಪಿಗೆ ಬರುತ್ತಿದೆ.
ಇಂದು ಶ್ರೀನಿವಾಸಯ್ಯನವರು ನಮ್ಮನ್ನಗಲಿ
ಎಷ್ಟೋ ವರ್ಷಗಳು ಸಂದಿವೆ. ಹಾಗೆಯೇ ಅವರ ನಿವಾಸವಾಗಿದ್ದ ಚಾರಿತ್ರಿಕ ಪುರದಮನೆ ಕಾರಣಾಂತರದಿಂದ ನೆಲಸಮವಾಗಿದೆ.
ಅದರ ಕುರುಹುಗಳೂ ಕೂಡ ಕಣ್ಣಿಗೆ ಬೀಳುವುದಿಲ್ಲ. ಗುಡ್ಡದ ಕೆಳಗೆ ತೋಟದ ಅಂಚಿನಲ್ಲಿದ್ದ ನೂರಾರು ವರುಷದ
ಪುರಾತನ ಮನೆ ಈಗ ನಮಗೆ ಕೇವಲ ನೆನಪು ಮಾತ್ರ. ಆದರೆ ಆ ನೆನಪು ನಮ್ಮ ಜೀವಮಾನ ಪರ್ಯಂತ ಇರುವಂತದ್ದು.
ಅದು ಎಂದಿಗೂ ನಮ್ಮ ಕಣ್ಣಿನಿಂದ ಮರೆಯಾಗಲಾರದು.
----ಮುಂದುವರಿಯುವುದು ---
1 comment:
Post a Comment