Monday, January 16, 2017

ನನ್ನ ಬಾಲ್ಯ


ಅಧ್ಯಾಯ ೧೧
ನಮ್ಮ ಬಾಲ್ಯ ಕಾಲದಲ್ಲಿ ನಡೆದ ಕೆಲವು ಸಂಗತಿಗಳು ನಮ್ಮ ಮನಸ್ಸಿನಲ್ಲಿ ಅಚ್ಚಾಗಿ ಉಳಿದು ಬಿಡುತ್ತವೆಇಂತಹ ಎರಡು ಪ್ರಸಂಗಗಳು ಈಗ ನನ್ನ ನೆನಪಿಗೆ ಬರುತ್ತಿವೆ.

ಜಗದ್ಗುರು ಚಂದ್ರಶೇಖರ ಭಾರತಿಯವರ ಇಹಲೋಕ ನಿರ್ಗಮನ
ಚಂದ್ರಶೇಖರ ಭಾರತಿ ಮಹಾಸ್ವಾಮಿಯವರು ಶೃಂಗೇರಿ ಶಾರದಾ ಪೀಠದ ಅತ್ಯಂತ ಪ್ರಸಿದ್ಧ ಗುರುಗಳಾಗಿದ್ದರು. ಮಹಾ ವಿದ್ವಾಂಸರು ಹಾಗೂ ಸನ್ಯಾಸಿಗಳಾಗಿದ್ದ ಅವರಿಗೆ ಲೌಕಿಕ ವಿಷಯಗಳಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಶೃಂಗೇರಿ ಮಠದ ಭಕ್ತರಲ್ಲಿ ಮೊದಲಿಂದ ಒಂದು ನಂಬಿಕೆ ಇದೆಅದೇನೆಂದರೆ  ಶೃಂಗೇರಿ ಪೀಠದ ಸಂಸ್ಥಾಪಕರಾದ ಪರಮ ಪೂಜ್ಯ ಶಂಕರಾಚಾರ್ಯರು ಆಗಾಗ ಪೀಠದ ಗುರುಗಳಾಗಿ ಪುನರಾವತಾರ ಎತ್ತಿ ಬರುತ್ತಾರೆಂದು. ಅದರ ಪ್ರಕಾರ ಪ್ರತಿಯೊಬ್ಬ ಗುರುವಿನ ನಂತರದ ಗುರುಗಳು ಶಂಕರಾಚಾರ್ಯರೇ ಆಗಿರುತ್ತಾರೆಅಂತೆಯೇ ಚಂದ್ರಶೇಖರ ಭಾರತಿ ಮಹಾಸ್ವಾಮಿಯವರು  ಕೂಡ ಶಂಕರಾಚಾರ್ಯರ ಪುನರಾವತಾರವೆಂದು ನಂಬಲಾಗಿತ್ತು. ಗುರುಗಳ ವಿದ್ವತ್ತು ಮತ್ತು ಪ್ರೌಢಿಮೆಯನ್ನು ಗಮನಿಸಿದ ಯಾವುದೇ ವ್ಯಕ್ತಿಗೆ ನಂಬಿಕೆ ಪರಮ  ಸತ್ಯವೆಂದು ಮನವರಿಕೆಯಾಗುತ್ತಿತ್ತು. ನಮ್ಮ ಮನೆಯಲ್ಲಿ ಕೂಡ ಆಗಿನ ಕಾಲದ ಎಲ್ಲ ಮನೆಗಳಂತೆ ಚಂದ್ರಶೇಖರ ಭಾರತಿಯವರ ಒಂದು ಫೋಟೋ ಗೋಡೆಯ ಮೇಲೆ ವಿರಾಜಿಸುತ್ತಿತ್ತು. ಚಿಕ್ಕ ಮಕ್ಕಳಾದ ನಮಗೆ ಕೂಡ ಫೋಟೋವನ್ನು ನೋಡಿದೊಡನೆ ಭಕ್ತಿ ಮೂಡಿ ಬರುತ್ತಿತ್ತು.

ಶೃಂಗೇರಿಯ ಎಲ್ಲಾ ಗುರುಗಳಂತೆ ಚಂದ್ರಶೇಖರ ಭಾರತಿ ಮಹಾಸ್ವಾಮಿಯವರು  ಕೂಡ ತುಂಗಾ ನದಿಯ ಆಚೆ ದಂಡೆಯಲ್ಲಿ ಆಶ್ರಮದಂತಿದ್ದ ನರಸಿಂಹವನದಲ್ಲಿ ವಾಸಮಾಡುತ್ತಿದ್ದರು. ಪ್ರತಿದಿನ ಬೆಳಗಿನ ಝಾವ ನದಿಯ ದಂಡೆಯಲ್ಲಿದ್ದ ಕಟ್ಟೆಯ ಕೆಳಗೆ ತುಂಗಾ ಸ್ನಾನ ಮುಗಿಸಿ ಈಚೆಯ ದಂಡೆಯಲ್ಲಿದ್ದ ದೇವಸ್ಥಾನಕ್ಕೆ ದಿನನಿತ್ಯದ ಪೂಜೆಗೆ ಬರುತ್ತಿದ್ದರು. ಅವರು ಆಗಲೇ ಮುಂದಿನ ಪೀಠಾಧಿಪತಿಯಾಗಿ ತಮ್ಮಶಿಷ್ಯರಾದ  ಅಭಿನವ ವಿದ್ಯಾತೀರ್ಥರನ್ನು ಆರಿಸಿದ್ದರು. ಹಾಗೂ ನವರಾತ್ರಿ ಪಲ್ಲಕ್ಕಿ ಉತ್ಸವ ಇತ್ಯಾದಿಗಳಲ್ಲಿ ಭಾಗವಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿ ಬಿಟ್ಟಿದ್ದರು. ಅವರು ತಮ್ಮ ಸಂಪೂರ್ಣ ವೇಳೆಯನ್ನು ದೇವರ ಪೂಜೆ ಮತ್ತು ಧ್ಯಾನಗಳಲ್ಲಿ ತೊಡಗಿಸಿದ್ದರು. ಕ್ರಮೇಣ ಅಂತರ್ಮುಖಿಯಾಗಿ ಮೌನ ವೃತವನ್ನು ಆಚರಿಸಲಾರಂಭಿಸಿದ್ದರು.

೧೯೫೪ನೇ ಇಸವಿಯ ದಿನ ಗುರುಗಳು ಯಥಾಪ್ರಕಾರ ತುಂಗೆಯ ಕಟ್ಟೆಯ ಕೆಳಗೆ ಬೆಳಗಿನ ಝಾವದಲ್ಲಿ ಸ್ನಾನ ಮಾಡುತ್ತಿದ್ದರು. ಅವರ ಶಿಷ್ಯನೊಬ್ಬ ದಂಡೆಯಮೇಲೆ ಕುಳಿತು ಅವರು ಸ್ನಾನ ಮಾಡಿ ಬರುವುದನ್ನು ನಿರೀಕ್ಷಿಸುತ್ತಿದ್ದ. ನದಿಯಲ್ಲಿ ಮುಳುಗಿ ಮುಳುಗಿ ಮೇಲೇಳುತ್ತಿದ್ದ ಗುರುಗಳು ಇದ್ದಕ್ಕಿದ್ದಂತೆ ಕಾಣೆಯಾದುದು ಅವನ ಗಮನಕ್ಕೆ ಬಂತು. ಗುರುಗಳಿಗೆ ಈಜುವುದು ಚೆನ್ನಾಗಿ ಬರುತ್ತಿತ್ತು ಮತ್ತು ಅವರು ಸ್ನಾನಮಾಡುತ್ತಿದ್ದ ನದಿಯ ಭಾಗದಲ್ಲಿ ನೀರಿನ ಸೆಳವು ಕೂಡಾ ಹೆಚ್ಚಾಗಿ ಇರಲಿಲ್ಲಶಿಷ್ಯನ ಕೂಗಾಟ ಕೇಳಿ ಬೇರೆಯವರ ಸಹಾಯ ಬರುವಷ್ಟರಲ್ಲಿ ಗುರುಗಳ ದೇಹ ನೀರಿನಲ್ಲಿ ತುಂಬಾ ದೂರದವರೆಗೆ ತೇಲಿ ಹೋಗಿತ್ತು. ಆಮೇಲೆ ಪಟ್ಟಣದ ತುದಿಯ ಭಾಗದಲ್ಲಿ  ಗುರುಗಳ ಶರೀರವನ್ನು ನೀರಿನಿಂದ ಹೊರತೆಗೆಯಲಾಯಿತು. ಭಕ್ತರ ಪ್ರಕಾರ ಅದೊಂದು ಅಪಘಾತವಾಗಿರಲಿಲ್ಲ. ಅವರ ನಂಬಿಕೆಯಂತೆ ಗುರುಗಳು ಸ್ವತಃ ದೇಹಪರಿತ್ಯಾಗ ಮಾಡಿದ್ದರು.

ಗುರುಗಳು ಹೀಗೆ ಆಕಸ್ಮಿಕವಾಗಿ ದೇಹ ಪರಿತ್ಯಾಗಮಾಡಿದ ಸಮಾಚಾರ ಕಾಡ್ಗಿಚ್ಚಿನಂತೆ ಎಲ್ಲಾ ಕಡೆ ಹರಡಿತು. ಆದರೆ ಟೆಲಿಫೋನ್ ಇತ್ಯಾದಿ ಸಂಪರ್ಕ ಸಾಧನಗಳಿಲ್ಲದ ಕಾಲದಲ್ಲಿ ಸಮಾಚಾರ ನಮ್ಮೂರಿಗೆ ತಲುಪುವಾಗ ಸಂಜೆ ಸುಮಾರು ೪ರಿಂದ ಘಂಟೆಯಾಗಿರಬಹುದು. ವಿಷಯ ತಿಳಿದೊಡನೆ ಇಡೀ ಊರೇ ದಿಗ್ಬ್ರಾಂತವಾದಂತಾಯಿತು. ನಮ್ಮ ತಂದೆ ಹಾಗೂ ದೊಡ್ಡ ಅಣ್ಣ ಕೂಡಲೇ ಶೃಂಗೇರಿಗೆ ಕಾಲ್ನಡಿಗೆ ಪ್ರಯಾಣ ಬೆಳೆಸಿದರುಮಠದ ಕ್ರಮ ಪ್ರಕಾರ ಗುರುಗಳ ಅಂತ್ಯಕ್ರಿಯೆ ಸಂಪೂರ್ಣವಾಗಿ ನೆರವೇರಿದ ನಂತರವೇ ಅವರಿಬ್ಬರೂ ಹಿಂತಿರುಗಿ ಬಂದರು. ಇಡೀ ಶೃಂಗೇರಿ ಊರು ಆಗಿನ ಮೈಸೂರು ರಾಜ್ಯದ ಬೇರೆ ಬೇರೆ ಭಾಗಗಳಿಂದ ಹಾಗೂ ತಮಿಳು ನಾಡು ಮತ್ತು ಆಂಧ್ರದಿಂದ ಬಂದ ಭಕ್ತರಿಂದ ತುಂಬಿ ಹೋಯಿತು. ಆಮೇಲೆ  ಗುರುಗಳ ಸಮಾಧಿಯನ್ನು ನರಸಿಂಹವನದಲ್ಲೇ ಕಟ್ಟಲಾಯಿತು.

ಆಮೇಲೆ ಸ್ವಲ್ಪ ದಿನದಲ್ಲೇ ಅಭಿನವ  ವಿದ್ಯಾತೀರ್ಥರ ಪಟ್ಟಾಭಿಷೇಕ ಶೃಂಗೇರಿಯಲ್ಲಿ ತುಂಬಾ ವಿಜೃಂಭಣೆಯಿಂದ ನೆರವೇರಿತು. ನಮ್ಮ ಮನೆಯಿಂದ ಎಲ್ಲರೂ ಹೋಗಿ ಸಮಾರಂಭದಲ್ಲಿ ಭಾಗವಹಿಸಿದ್ದೆವು. ನಾನು ಸಣ್ಣವನಾಗಿದ್ದರಿಂದ ನನ್ನ ಅತ್ತೆಯ ಕುತ್ತಿಗೆಯಮೇಲೆ ಕುಳಿತು ಗುರುಗಳಿಗೆ ಕ್ಷೀರಾಭಿಷೇಕವನ್ನು ಮಾಡುವುದನ್ನು ನೋಡಿದ ನೆನಪು ಹಚ್ಚ ಹಸುರಾಗಿದೆ. ಹಾಗೆಯೆ ಅಮ್ಮನಿಗೆ ಕಾಟ ಕೊಟ್ಟು ಪದೇಪದೇ ರಬ್ಬರ್ ಬೆಲೂನ್ ಗಳನ್ನು  ಕೊಡಿಸಿಕೊಂಡು ಊದಿ ತುಟಿಗಳನ್ನು ಬಣ್ಣ ಮಾಡಿಕೊಂಡು ಬೈಯಿಸಿಕೊಂಡದ್ದೂ ನೆನಪಿನಲ್ಲಿದೆ. ವಿಚಾರಕ್ಕೆ ಅಮ್ಮನಿಂದ ನನಗೆಂದೂ ಕ್ಷಮೆ ಸಿಗಲೇ ಇಲ್ಲ. ಆಮೇಲೆ ಗುರುಗಳ ಪಟ್ಟಾಭಿಷೇಕದ ವಿಷಯ ಬಂದಾಗಲೆಲ್ಲ ನನ್ನ ಕಾಟವನ್ನು ನೆನಪಿಸಿಕೊಳ್ಳುತ್ತಲೇ ಇದ್ದಳು.
ದೊಡ್ಡಮ್ಮನ ಕಾಶಿಯಾತ್ರೆ
ಆ ದಿನಗಳಲ್ಲಿ ಕಾಶೀಯಾತ್ರೆಗೆ ಹೋದವರು ಹಿಂತಿರುಗಿ ಬರುತ್ತಾರೆಂದು ಯಾವುದೇ ಗ್ಯಾರಂಟಿ ಇರಲಿಲ್ಲ. ಏಕೆಂದರೆ ವಯಸ್ಸಾದವರು ಮಾತ್ರ ಕಾಶೀಯಾತ್ರೆಗೆ ಹೋಗುವ ಕ್ರಮವಿತ್ತು. ನಮ್ಮ ತಂದೆಯ ದೊಡ್ಡಮ್ಮ ಅಂದರೆ ತಾಯಿಯ ಅಕ್ಕ ಸಂಪಿಗೆ ಕೊಳಲಿನಲ್ಲಿ (ನಮ್ಮ ನೆರೆಮನೆ) ಅವರ ಅಣ್ಣನ ಮಗನ ಮನೆಯಲ್ಲಿ ವಾಸ  ಮಾಡುತ್ತಿದ್ದರು. ವಿಧವೆಯಾಗಿದ್ದ ಅವರು ಎಷ್ಟೊಂದು ಗೌರವಸ್ಥರೆಂದರೆ ನಾವೆಲ್ಲಾ ಅವರನ್ನು ಪ್ರೀತಿಯಿಂದ  "ಅಮ್ಮನೆಂದೇ" ಕರೆಯುತ್ತಿದ್ದೆವು. ಅವರ  ಹತ್ತಿರ ಅಕ್ಷಯಪಾತ್ರೆಗೆ ಸಮಾನವಾದ ಹಣದ ಚೀಲವೊಂದಿತ್ತು. ಅದರಲ್ಲಿ ಎಷ್ಟು ಹಣವಿತ್ತೆಂದು ಯಾರಿಗೂ ಗೊತ್ತಿರಲಿಲ್ಲ. ನಾನು  ಕಂಡಂತೆ ನನ್ನ ಮೂರುಜನ ತಮ್ಮಂದಿರಿಗೂ ಅವರು "ರಹಸ್ಯವಾಗಿ" ಕಿವಿಗೆ ಚಿನ್ನದ ಒಂಟಿ ಮಾಡಿಸಿಕೊಟ್ಟಿದ್ದರು. ಆ ಒಂಟಿಗಳನ್ನು ಅವರ ಅಕ್ಷಯ ಚೀಲದಿಂದಲೇ ಹೊರತೆಗೆದು ಅಮ್ಮನ ಕೈಯಲ್ಲಿಟ್ಟಿದ್ದನ್ನು ನಾನು ನೋಡಿದ್ದೆ.

ಹೀಗೆ ಹಣವಂತರಾಗಿದ್ದ ದೊಡ್ಡಮ್ಮ ಇದ್ದಕ್ಕಿದ್ದಂತೆ ಕಾಶಿಯಾತ್ರೆ ಮಾಡಬೇಕೆಂದು ತೀರ್ಮಾನಿಸಿದರು. ತಿರುಪತಿ ಯಾತ್ರೆ ಮಾಡುವುದೇ ಕಷ್ಟಸಾಧ್ಯವಾಗಿದ್ದ ಆ ಕಾಲದಲ್ಲಿ ಅದೊಂದು ದೊಡ್ಡ ಸಾಹಸವೇ ಆಗಿತ್ತು. ಅವರೊಂದಿಗೆ ನಮ್ಮ ಕೆಳಗಿನಮನೆಯ ಕಿಟ್ಟಜ್ಜಯ್ಯ ಮತ್ತು ಮೇಲಿನಕೊಡಿಗೆ ಅನಂತಯ್ಯ-ವೆಂಕಮ್ಮ ದಂಪತಿಗಳೂ ಸೇರಿಕೊಂಡರು. ವೆಂಕಮ್ಮ ನಮ್ಮ ಅಮ್ಮನ ಸೋದರತ್ತೆ. ಇವರೆಲ್ಲಾ ಯಾತ್ರೆಗೆ ಹೊರಡುವ ದಿನ ವಿಧಿಪ್ರಕಾರ ಒಂದು “ಬೀಳ್ಕೊಡುಗೆ” ಸಮಾರಂಭವನ್ನು ಏರ್ಪಡಿಸಲಾಗಿತ್ತು.  ಈ ಯಾತ್ರೆಗೆಂದೇ ಕಿಟ್ಟಜ್ಜಯ್ಯ ಮತ್ತು ಅನಂತಜ್ಜಯ್ಯ ಇಬ್ಬರಿಗೂ ಕಪ್ಪು ಕೋಟನ್ನು ಹೊಲಿಸಲಾಗಿತ್ತು. ನಮಗೆ ಆ ವೇಷದಲ್ಲಿ ಅವರು ದಾಸಯ್ಯನ ಪಾತ್ರ  ಧರಿಸಿದವರಂತೆ ಕಾಣುತ್ತಿದ್ದರು. ವಿಶೇಷವಾಗಿ ಕರೆಸಿದ್ದ ನಾರ್ವೆ ಸುಬ್ಬನ ವಾದ್ಯಘೋಷದೊಡನೆ ಯಾತ್ರಿಗಳನ್ನು ನಮ್ಮೂರ ಗಡಿಯವರೆಗೆ ನಾವೆಲ್ಲರೂ ಹೋಗಿ ಕಳಿಸಿಬಂದೆವು.

ಆಮೇಲೆ ಸುಮಾರು ಒಂದು ತಿಂಗಳ ನಂತರ ಯಾತ್ರಿಗಳೆಲ್ಲಾ ಕ್ಷೇಮವಾಗಿ ಊರಿಗೆ ಹಿಂದಿರುಗಿದರು. ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಊರಿನವರಿಗೆಲ್ಲಾ ಅವರ  ಅನುಭವಗಳನ್ನು ಕೇಳಬೇಕೆಂಬ ಕುತೂಹಲ. ಸಂಪಿಗೇ ಕೊಳಲಿನಲ್ಲಿ "ಕಾಶಿ ಸಮಾರಾಧನೆ” ತುಂಬಾ ವಿಜೃಂಭಣೆಯಿಂದ ನಡೆಯಿತು. ದೊಡ್ಡಮ್ಮನ ಸಂಬಂಧಿಗಳು ಬೇರೆ ಬೇರೆ ಊರುಗಳಿಂದ ಆಗಮಿಸಿದರು. ಅವರಿಗೆ ಅಷ್ಟೊಂದು ಸಂಬಂಧಿಗಳು ಇದ್ದರೆಂದು ನಮಗೆ ಆಗಲೇ ಗೊತ್ತಾದದ್ದು. ನಮಗೆಲ್ಲಾ ಗಂಗಾ ತೀರ್ಥವನ್ನು ಕುಡಿಯುವ ಹಾಗೂ ಕಾಶಿದಾರವನ್ನು ಕೈಗೆ ಕಟ್ಟಿಕೊಳ್ಳುವ ಪುಣ್ಯ ಸಿಕ್ಕಿತು. ಇಷ್ಟಲ್ಲದೇ ಮಕ್ಕಳಾದ ನಮಗೂ "ನಾಲ್ಕಾಣೆ" ದಕ್ಷಿಣೆ ಕೊಡಲಾಯಿತು. ನಮಗೆ ಅದನ್ನು ಏನು ಮಾಡಬೇಕೆಂದು ತೋಚಲಿಲ್ಲ. ಏಕೆಂದರೆ ನಮ್ಮೂರಿನ ಸುತ್ತಮುತ್ತ ಯಾವುದೇ ಅಂಗಡಿಗಳಿರಲಿಲ್ಲ. ಹಾಗಾಗಿ ನಮ್ಮ ದಕ್ಷಿಣೆ ಅಮ್ಮನ ಕೈ ಸೇರಿತು. ಆ ಕಾಲದಲ್ಲಿ ನಾಲ್ಕಾಣೆಗೆ ಒಂದು ಸೇರು ಅಕ್ಕಿ ಸಿಗುತ್ತಿತ್ತಂತೆ.

ವಾಡಿಕೆಯಂತೆ ಕಾಶಿಗೆ ಹೋದವರು ತಮಗೆ ಪ್ರಿಯವಾದ ಆಹಾರವೊಂದನ್ನು ತ್ಯಜಿಸಬೇಕಾಗಿತ್ತಂತೆ. ಆದರೆ ದೊಡ್ಡಮ್ಮ ಯಾವುದನ್ನು ತ್ಯಜಿಸಿದರೆಂದು ನಮಗೆ ಗೊತ್ತಾಗಲಿಲ್ಲ. ಕಿಟ್ಟಜ್ಜಯ್ಯನವರು ಅವರಿಗೆ ಅತ್ಯಂತ ಪ್ರಿಯವಾದ ಫರಂಗಿ (ಅನಾನಸ್) ಹಣ್ಣನ್ನು ತೊರೆದು ಬಂದಿದ್ದರು. ದೊಡ್ಡಮ್ಮ ತಮ್ಮೊಡನೆ ಕಾಶಿಯ ಅನೇಕ ಚಿತ್ರಪಟಗಳನ್ನು ತಂದಿದ್ದರು. ನಾವೆಲ್ಲ ಅವನ್ನು ನೋಡಿ ಆನಂದಿಸಿದೆವು. ಆಮೇಲೆ ಅನೇಕ ದಿನಗಳು ಅವರ ಕಾಶಿಯಾತ್ರೆ ಅನುಭವಗಳನ್ನು ಕೇಳುವುದರಲ್ಲೇ ಕಳೆದು ಹೋದವು. ದೊಡ್ಡಮ್ಮನ ಪ್ರಕಾರ ಎಲ್ಲಕ್ಕಿಂತ ಕೌತುಕಮಯವಾದ ವಿಷಯವೆಂದರೆ ಅವರು ಕೇಳಿದಂತೆ ಕಾಶಿಯ ವಿಶ್ವನಾಥ ಮಂದಿರದಿಂದ ನಮ್ಮ ದೇಶದ ದಕ್ಷಿಣದ ತುದಿಯಲ್ಲಿರುವ ರಾಮೇಶ್ವರದ ದೇವಸ್ಥಾನಕ್ಕೆ ಒಂದು ಸುರಂಗ ಮಾರ್ಗ ಇರುವುದಂತೆ! ಕಾಶಿಯಲ್ಲಿ ಅವರು ಅದರ ದ್ವಾರವನ್ನು ನೋಡಿ ಬಂದರಂತೆ!

ಆಮೇಲೆ ಎಷ್ಟೋ ದಿನ ನನಗೆ ನಾನು ಕಾಶಿ-ರಾಮೇಶ್ವರ ಸುರಂಗ ಮಾರ್ಗದಲ್ಲಿ ಪ್ರಯಾಣ ಮಾಡಿದಂತೆ ಕನಸು ಬೀಳುತ್ತಿತ್ತು. ನಾನು ದೊಡ್ಡವನಾದಮೇಲೆ ಖಂಡಿತವಾಗಿಯೂ ಆ ಸಾಹಸವನ್ನು ಮಾಡಲೇ ಬೇಕೆಂದು ತೀರ್ಮಾನಿಸಿ ಬಿಟ್ಟಿದ್ದೆ.
----ಮುಂದುವರಿಯುವುದು ---





No comments: