ಅಧ್ಯಾಯ ೧೨
ನಮ್ಮ
ಬಾಲ್ಯದಲ್ಲಿ ನಾವು ಓದಿದ ಕಾದಂಬರಿಗಳಲ್ಲಿ ನಮ್ಮ ಮೇಲೆ ಅತ್ಯಂತ ಪ್ರಭಾವ ಬೀರಿದ ಕಾದಂಬರಿಗಳೆಂದರೆ
ಶ್ರೀನಿವಾಸಾಚಾರ್ಯ ಅವರು ಬರೆದ
ರಾಜಾ ಮಲಯಸಿಂಹ, ಮತ್ತೂರು ಕೃಷ್ಣಮೂರ್ತಿಯವರು ಬರೆದ ಅಲೆಯೊಸಗೆ ಮತ್ತು ಕಮಕೋಡು ಶಂಕರ ಅವರು ಬರೆದ
ಪ್ರೇಮ ಪ್ರಕರಣ, ವಿವಾಹ ವಿಚ್ಚೇದ ಮತ್ತು ರಂಗಭೂಮಿ. ಮೂರು ಭಾಗಗಳಲ್ಲಿ ಬಂದ ರಾಜಾ ಮಲಯಸಿಂಹ ಫ್ರಾನ್ಸಿನ ಪ್ರಸಿದ್ಧ ಕಾದಂಬರಿಕಾರ ಅಲೆಕ್ಸಾಂಡರ್
ಡ್ಯೂಮ ಅವರ ಕೌಂಟ್ ಆಫ್ ಮೊಂಟೆ ಕ್ರಿಸ್ಟೋ ಕಾದಂಬರಿಯನ್ನು ಆಧಾರಿಸಿ ಬರೆದ ಕಾದಂಬರಿ. ಆ ಕಥೆ ಎಷ್ಟು
ಸ್ವಾರಸ್ಯವಾಗಿತ್ತೆಂದರೆ ಅದನ್ನು ಎಷ್ಟು ಬಾರಿ ಓದಿದರೂ ನಮಗೆ ತೃಪ್ತಿ ದೊರೆಯುತ್ತಿರಲಿಲ್ಲ. ಆಮೇಲೆ
ಮೂಲ ಕಥೆಯನ್ನು ಇಂಗ್ಲಿಷ್ನಲ್ಲಿ ಓದಿದಾಗ ಕೂಡಾ ನನಗೆ ಶ್ರೀನಿವಾಸಾಚಾರ್ಯರು ಕನ್ನಡದಲ್ಲಿ ಬರೆದಷ್ಟು ಸ್ವಾರಸ್ಯ
ಕಾಣಲಿಲ್ಲ.
ಮತ್ತೂರು
ಕೃಷ್ಣಮೂರ್ತಿಯವರ ಅಲೆಯೊಸಗೆ ಕೂಡಾ ಮೂರು ಭಾಗಗಳಲ್ಲಿ ಪ್ರಕಟವಾಗಿತ್ತು. ಈ ಕಾದಂಬರಿಯ ಮೂಲ ತಮಿಳಿನಲ್ಲಿ ಕಲ್ಕಿಯವರು ಬರೆದ ಅಲೇ ಓಸೈ
ಎಂಬ ಕಾದಂಬರಿ. ತುಂಬಾ ಸ್ವಾರಸ್ಯ ಕಥೆ ಹೊಂದಿದ ಈ ಕಾದಂಬರಿ ಸ್ವಾತಂತ್ರ ಸಂಗ್ರಾಮ ಕಾಲಕ್ಕೆ ಸೇರಿತ್ತು.
ಈ ಕಾದಂಬರಿ ಧಾರಾವಾಹಿಯಾಗಿ ವಾರ ಪತ್ರಿಕೆಯೊಂದರಲ್ಲಿ ಕೂಡ ಪ್ರಕಟವಾಗಿತ್ತು. ಆದರೆ ಪುನಃ ಓದಲು ಈ
ಕಾದಂಬರಿ ನಮಗೆಲ್ಲೂ ಲಭ್ಯವಾಗಲಿಲ್ಲ.
ಕಮಕೋಡು ಶಂಕರ
“ಪ್ರೇಮ
ಪ್ರಕರಣ ಮತ್ತು ಸೆರೆಮನೆಯಲ್ಲಿ” ಕಮಕೋಡು ಶಂಕರ ಅವರ
ಮೊದಲ ಕೃತಿ. ಎರಡೂ ಬೇರೆಬೇರೆ ಕಥೆಗಳು ಆದರೆ ಒಂದೇ ಪುಸ್ತಕದಲ್ಲಿದ್ದುವು. ನನಗೆ ನೆನಪಿದ್ದಂತೆ ಮೈಸೂರಿನ ಕಾವ್ಯಾಲಯ (ಕೂಡಲಿ ಚಿದಂಬರಂ) ಈ
ಪ್ರಕಟಣೆ ಮಾಡಿದ್ದರು. ಪ್ರೇಮ ಪ್ರಕರಣ ನಮ್ಮ
ಮೇಲೆ ಬಾಲ್ಯ ಕಾಲದಲ್ಲೇ ಪ್ರಭಾವ ಬೀರಿದ ಅತ್ಯಂತ ಮಧುರವಾದ ಪ್ರಣಯ ಕಥೆ. ಕಥೆ ಮುಂದುವರೆದು ನಾಯಕ ನಾಯಕಿಯರ
ವಿವಾಹವಾಗಿ ನಂತರ "ವಿವಾಹ ವಿಚ್ಚೇದ " ಎಂಬ
ಇನ್ನೊಂದು ಕಾದಂಬರಿಯಲ್ಲಿ ಕೊನೆಗೊಳ್ಳುತ್ತದೆ. ಕಥೆ ಹೀಗೆ ದುಃಖಾಂತ್ಯವಾಗಲು ನಾಯಕಿಯ ಅಕ್ಕನ ಗಂಡನೇ (ಭಾವ) ಕಾರಣ. ನಮಗೆ ಅವನೊಬ್ಬ ಶುದ್ಧ ಖಳನಾಯಕ ಅನ್ನಿಸಿ
ಅವನ ಮೇಲೆ ದ್ವೇಷ ಭಾವನೆ ಮೂಡಿತ್ತು.
ನೀವು
ನಂಬಿದರೆ ನಂಬಿ; ಬಿಟ್ಟರೆ ಬಿಡಿ. ಈ ಎರಡು ಪ್ರಣಯ ಕಾದಂಬರಿಗಳು ಲೇಖಕನ ನಿಜ ಜೀವನದ ಮೇಲೆ ಆಧಾರಿಸಿ
ಬರೆದುದುವೆಂದೂ ಮತ್ತು ನಮಗೆ ಖಳನಾಯಕನಾಗಿ ಕಂಡ ವ್ಯಕ್ತಿ ನಿಜ ಜೀವನದಲ್ಲೂ ಕನ್ನಡ ಸಿನೆಮಾಗಳಲ್ಲಿ ಖಳನಾಯಕನ ಪಾತ್ರವಹಿಸುತ್ತಿದ್ದವನೆಂದೂ
ತಿಳಿದು ಬಂತು. ಒಮ್ಮೆ ನಮ್ಮ ಮನೆಗೆ ನಮ್ಮ ಅಣ್ಣನೊಡನೆ ಭೇಟಿಯಾಗಲು ಮಾರ್ತಾಂಡಪುರದ ಕೃಷ್ಣರಾಯ ಎಂಬುವರೊಬ್ಬರು
ಬಂದಿದ್ದರು. ಮಾರ್ತಾಂಡಪುರ ನಮ್ಮೂರಿಂದ ನಾರ್ವೆಗೆ ಹೋಗುವ ಮಾರ್ಗದಲ್ಲಿದೆಯಂತೆ. ಅಜಾನುಬಾಹು ವ್ಯಕ್ತಿತ್ವ
ಹೊಂದಿದ್ದ ಕೃಷ್ಣರಾಯರು ನಮ್ಮ ಕಣ್ಣಿಗೆ ಮಾರ್ತಾಂಡನಂತೆಯೇ ಗೋಚರಿಸಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.
ಅವರು ನಮ್ಮಣ್ಣನೊಡನೆ ಅಂದಿನ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಬಗ್ಗೆ ತುಂಬಾ ಪ್ರೌಢಿಮೆಯಿಂದ ಮಾತನಾಡತೊಡಗಿದರು.
ಆಗ ಅವರು ಕಮಕೋಡು ಶಂಕರ ಅವರು ಬರೆದ ಪ್ರೇಮ ಪ್ರಕರಣ, ವಿವಾಹ ವಿಚ್ಚೇದ ಮತ್ತು ರಂಗಭೂಮಿ ಮೂರೂ ಕೂಡ
ಆತ್ಮಕಥೆಗಳೇ ಎಂಬ ರಹಸ್ಯವನ್ನು ಬಯಲು ಮಾಡಿದರು. ಅಷ್ಟು ಮಾತ್ರವಲ್ಲ; ಮೊದಲಿನ ಎರಡು ಕಾದಂಬರಿಗಳ ಖಳನಾಯಕ
ಆಗಿನ ಕನ್ನಡ ಸಿನೆಮಾಗಳ ಪ್ರಸಿದ್ಧ ಖಳನಾಯಕನಾಗಿದ್ದ
ಢಿಕ್ಕಿ ಮಾಧವರಾವ್ ಅವರೇ ಎಂದೂ ಹೇಳಿದರು. ಅದನ್ನು ಕೇಳಿ ನಮಗಾದ ಆಶ್ಚರ್ಯ ಅಷ್ಟಿಟ್ಟಲ್ಲ.
ವಿಚಿತ್ರವೆಂದರೆ
ಶಂಕರ ಅವರ ಬರವಣಿಗೆಯಲ್ಲಿ ಆಮೇಲೆ ಬೇರೆ ಯಾವುದೇ ಕೃತಿಗಳು ಹೊರಗೆ ಬರಲಿಲ್ಲ. ನಮಗೆ ಅದರಿಂದ
ತುಂಬಾ ನಿರಾಸೆಯಾಯಿತು. ಆದರೆ ಮಾರ್ತಾಂಡಪುರದ ಕೃಷ್ಣರಾಯರು ಹೇಳಿದ ಮಾತು ಸತ್ಯವಾಗಿರಬೇಕೆಂದೂ
ಅನ್ನಿಸಿತು. ಉತ್ತಮ ಬರವಣಿಗೆ ಮಾಡಿದ್ದ ಶಂಕರ ಅವರ ಸಾಹಿತ್ಯ ಕೇವಲ ತಮ್ಮ ಆತ್ಮ ಕಥೆಯನ್ನು ಬರೆಯುವುದರಲ್ಲೇ
ಮುಕ್ತಾಯಗೊಂಡುದು ವಿಷಾದವನ್ನು ತರುವಂತದ್ದು.
ದೊಡ್ಡಮ್ಮ ಮತ್ತು ಚಿಕ್ಕಮ್ಮ ಅವರೊಂದಿಗೆ
ಗಾಡಿ ಪಯಣ
ನನ್ನ
ಮತ್ತು ಪುಟ್ಟಣ್ಣನ ಕ್ಷೌರ ಪುರಾಣ ಮತ್ತು ಜಯಪುರ ಪಯಣದ ಬಗ್ಗೆ ಆಗಲೇ ಬರೆದಿದ್ದೇನೆ. ಆಗಿನ ಕಾಲದಲ್ಲಿ
ವಿಧವೆಯರೂ ಕೂಡ ತಲೆ ಪೂರ್ತಿ ಬೋಳಿಸಿಕೊಳ್ಳಬೇಕಾದ ನಿಯಮವಿತ್ತು. ಅವರು ಅದಕ್ಕಾಗಿ ಎಷ್ಟು ಮುಜುಗರ
ಅನುಭವಿಸಬೇಕಾಗಿತ್ತೆಂದು ಹೇಳತೀರದು. ಸಂಪೇಕೊಳಲಲ್ಲಿ ದೊಡ್ಡಮ್ಮನ ಜೊತೆ ಚಿಕ್ಕಮ್ಮ ಎಂಬ ಇನ್ನೊಬ್ಬ
ವಿಧವೆ (ಗಣೇಶರಾಯರ ಅಮ್ಮ) ಇದ್ದರು. ಒಮ್ಮೆ ನಮ್ಮ ಮಾಮೂಲಿ ಕ್ಷೌರಿಕ ವಾಸು ತುಂಬಾ ದಿನ ಬರದಿದ್ದಾಗ
ಅವರ ಪರಿಸ್ಥಿತಿ ತುಂಬಾ ಕಷ್ಟಕ್ಕೆ ಬಂತು. ಆಗ ಅವರಿಬ್ಬರನ್ನೂ ಕ್ಷೌರಕ್ಕಾಗಿ ಗಾಡಿಯಲ್ಲಿ ನಾರ್ವೆಗೆ
ಕರೆದುಕೊಂಡು ಹೋಗಲು ತೀರ್ಮಾನಿಸಲಾಯಿತು. ಅವರಿಗೆ ಕಂಪನಿ ಕೊಡಲು ಒಬ್ಬ ಹುಡುಗನ ಅವಶ್ಯಕತೆ ಇತ್ತು.
ಅದಕ್ಕಾಗಿ ನನ್ನನ್ನು ಆರಿಸಲಾಯಿತು. ಗಾಡಿ ಪ್ರಯಾಣ ಬೆಳಗಿನ ಝಾವದಲ್ಲೇ ಶುರುವಾಗಬೇಕಿತ್ತು. ಹಾಗಾಗಿ
ನಾನು ಹಿಂದಿನ ದಿನ ರಾತ್ರಿ ಸಂಪೇಕೊಳಲಲ್ಲಿ ಕ್ಯಾಂಪ್ ಮಾಡಬೇಕಾಯಿತು.
ನನ್ನನ್ನು
ಬೆಳಿಗ್ಗೆ ೫ ಘಂಟೆಗೇ ಎಬ್ಬಿಸಿ ಮುಖ ತೊಳೆದು ಹಾಲು ಕುಡಿದ ನಂತರ ಗಾಡಿಗೆ ಹತ್ತಿಸಲಾಯಿತು. ದೊಡ್ಡಮ್ಮ ಮತ್ತು ಚಿಕ್ಕಮ್ಮ ಯಾವುದೇ ಆಹಾರ
ತೆಗೆದುಕೊಳ್ಳದೆ ಗಾಡಿ ಹತ್ತಿದರು. ನಾನು ಅವರ ನಡುವೆ
ಛಳಿಗೆ ಮುದುರಿಕೊಂಡು ಕುಳಿತಿದ್ದೆ. ಆದರೂ ಹಿರಿಯರಿಬ್ಬರ ನಡುವೆ ಕುಳಿತು ಮುಂಜಾವಿನ ಜೋಡೆತ್ತಿನ ಗಾಡಿ ಪ್ರಯಾಣ ನನಗೆ ಒಂದು ಅಪೂರ್ವ ಅನುಭವವಾಗಿತ್ತು.
ದೊಡ್ಡಮ್ಮ ದಾರಿಯಲ್ಲಿ ಯಾವುದೊ ಕಥೆ ಹೇಳುತ್ತಾ ಇದ್ದರು.
ಸುಮಾರು ೬ ಘಂಟೆಗೆ ಗಾಡಿ ನಾರ್ವೆ ತಲುಪಿತು. ಮತ್ತೊಂದು ಘಂಟೆಯ ಒಳಗೆ ಇಬ್ಬರ ಕ್ಷೌರವೂ ಮುಗಿದು ಹೋಯಿತು.
ದೊಡ್ಡಮ್ಮ ಮೊದಲೇ ನನ್ನ ಕೈಗೆ ಎರಡಾಣೆ ಇಟ್ಟು ಅಬೂಬಕರ್ ಸಾಹೇಬರ ಅಂಗಡಿಗೆ ಕಳಿಸಿದ್ದರು. ನಾನು ಒಂದಾಣೆಗೆ
ಶುಂಠಿ ಪೆಪ್ಪರ್ಮಿಂಟ್ ಮತ್ತು ಇನ್ನೊಂದು ಆಣೆಗೆ ಆನೆ ಮತ್ತು ಗಿಳಿ ರೂಪದಲ್ಲಿದ್ದ ಬಿಸ್ಕತ್ ಗಳನ್ನು
ಕೊಂಡುಕೊಂಡೆ. ನನ್ನ ವಾಪಾಸ್ ಗಾಡಿ ಪ್ರಯಾಣ ಪೆಪ್ಪರ್ಮಿಂಟ್ ಮತ್ತು ಬಿಸ್ಕತ್ ತಿನ್ನುವುದರಲ್ಲೇ ಕಳೆದು
ಹೋಯಿತು.
ಯಕ್ಷಗಾನ ಪ್ರಸಂಗಗಳು
ನಾವು
ಪ್ರತಿ ವರ್ಷವೂ ನವರಾತ್ರಿ ಹಬ್ಬಕ್ಕೆ ಶೃಂಗೇರಿಗೆ ಹೋದಾಗ ಒಂದು ರಾತ್ರಿ ಸಣ್ಣೇಭಟ್ಟರ ಮನೆಯಲ್ಲಿ ಕ್ಯಾಂಪ್
ಮಾಡುತ್ತಿದ್ದೆವು. ಹಾಗೆಯೇ ಮಾಮೂಲಾಗಿ ರಾತ್ರಿ ಒಂದು ಯಕ್ಷಗಾನ ಪ್ರಸಂಗವನ್ನು ನೋಡುವ ಕ್ರಮವಿತ್ತು.
ಆದರೆ ಮಕ್ಕಳಾದ ನಾವು ಯಾವುದೇ ಪ್ರಸಂಗವನ್ನು ಅರ್ಧಕ್ಕಿಂತ ಜಾಸ್ತಿ ನೋಡಿದ ನೆನಪಿಲ್ಲ. ಅಷ್ಟರಲ್ಲೇ
ನಾವು ನಿದ್ದೆಗೆ ಶರಣಾಗುತ್ತಿದ್ದೆವು. ಪ್ರಸಂಗಗಳು ಸಾಮಾನ್ಯವಾಗಿ ಬೆಳಿಗಿನ ವೇಳೆಗೆ ಮುಕ್ತಾಯವಾಗುತ್ತಿದ್ದವು.
ಒಂದು ವರ್ಷ ಪ್ರಸಿದ್ಧ ಮಂದಾರ್ತಿ ಮೇಳ ನಮ್ಮೂರಿಗೇ ಆಗಮಿಸಿತ್ತು. ನಮ್ಮೂರಿನ ಗಣಪತಿ ಕಟ್ಟೆಯ ಮುಂದೆ
ಹಾಕಿದ ರಂಗಸ್ಥಳದಲ್ಲಿ ಪುರದಮನೆ,
ಬೆಳವಿನಕೊಡಿಗೆ ಮತ್ತು ಕೆಳಕೊಡಿಗೆಯವರ ಖರ್ಚಿನಲ್ಲಿ ವೀರ ಅಭಿಮನ್ಯು, ಭಕ್ತ ಪ್ರಹ್ಲಾದ ಮತ್ತು ಮೋಹಿನಿ
ಭಸ್ಮಾಸುರ ಎಂಬ ಮೂರು ಪ್ರಸಂಗಗಳನ್ನು ಆಡಿಸಲಾಯಿತು.
ಆ ಸಮಯದಲ್ಲಿ ಊರಿನ ತುಂಬಾ ಸಡಗರದ ಹಬ್ಬದ ವಾತಾವರಣವಿತ್ತು.
ತಮಾಷೆ ಪ್ರಸಂಗಗಳು
ಒಮ್ಮೆ
ನಮ್ಮ ಅಕ್ಕನ ಊರಿನಲ್ಲಿ ಒಂದು ಯಕ್ಷಗಾನ ಪ್ರಸಂಗ ನಡೆಯಿತಂತೆ. ರಂಗಸ್ಥಳದಲ್ಲಿ ರಾಜನ ಸಿಂಹಾಸನಕ್ಕಾಗಿ ನಮ್ಮ ಅಕ್ಕನ ಮನೆಯದೇ ಕುರ್ಚಿಯೊಂದನ್ನು
ಬಳಸಲಾಯಿತಂತೆ. ಆ ದಿನ ರಾತ್ರಿ ನಡೆದ ಪ್ರಸಂಗದಲ್ಲಿ ರಾಜನು ವಿಶೇಷವಾಗಿ ಅಲಂಕರಿಸಿದ್ದ ಸಿಂಹಾಸನದಲ್ಲಿ
ವಿರಾಜಮಾನನಾಗಿದ್ದನಂತೆ. ಆಗ ವೈರಿ ರಾಜನೊಬ್ಬ ಒಳನುಗ್ಗಿ
ಸಿಂಹಾಸನದಲ್ಲಿ ಕುಳಿತಿದ್ದ ರಾಜನನ್ನು ಮಲ್ಲಯುದ್ಧಕ್ಕೆ ಆಹ್ವಾನಿಸಿದನಂತೆ. ಕಥೆಯ ಪ್ರಕಾರ ರಾಜನು
ಸಿಂಹಾಸನದಿಂದೆದ್ದು ವೈರಿಯ ಮೇಲೆ ಅಕ್ರಮಣ ಮಾಡಬೇಕಿತ್ತು. ಆದರೆ ಎಷ್ಟು ಹೊತ್ತಾದರೂ ರಾಜನು ಮೇಲೇಳಲೇ
ಇಲ್ಲವಂತೆ. ಕಾರಣವಿಷ್ಟೇ. ರಾಜನು ಧರಿಸಿದ್ದ ದೊಡ್ಡ ಪೋಷಾಕು ಅಕ್ಕನ ಮನೆಯ ಚಿಕ್ಕ ಕುರ್ಚಿಯಲ್ಲಿ
(ಸಿಂಹಾಸನ) ಸಿಕ್ಕಿಕೊಂಡು ಅವನಿಗೆ ಮೇಲೇಳಲೇ ಆಗದಂತೆ ಮಾಡಿಬಿಟ್ಟಿತ್ತಂತೆ! ಕೊನೆಗೆ ರಂಗಸ್ಥಳಕ್ಕೆ ತೆರೆಯೆಳೆಯುವ ಮೂಲಕ ಅವನ ಕಷ್ಟವನ್ನು ಪರಿಹರಿಸಲಾಯಿತಂತೆ!
ಭಕ್ತ
ಪ್ರಹ್ಲಾದ ಪ್ರಸಂಗವೊಂದರಲ್ಲಿ ನಡೆಯಿತೆಂದು ಕೇಳಿದ
ಕಥೆಯಿದು. ರಂಗಸ್ಥಳದ ನಾಲ್ಕು ಕಡೆ ನಾಲ್ಕು ಪೇಪರ್ನಲ್ಲಿ ಮಾಡಿದ ಕಂಬಗಳಿದ್ದು ಒಂದರಲ್ಲಿ ಮಾಮೂಲಿನಂತೆ ನರಸಿಂಹ ಅವತಾರದಲ್ಲಿದ್ದ
ಪಾತ್ರದಾರಿಯನ್ನು ಅಡಗಿಸಲಾಗಿತ್ತು. ಹಿರಣ್ಯ ಕಷಿಪುವಿನ ಪಾತ್ರದಾರಿಗೆ ಆ ಕಂಬದಲ್ಲಿಯೇ ದೇವರನ್ನು
ತೋರಿಸುವಂತೆ ಪ್ರಹ್ಲಾದ ಪಾತ್ರದಾರಿಗೆ ಹೇಳಬೇಕೆಂದು ಸೂಚಿಸಲಾಗಿತ್ತು. ಆದರೆ ಕಥೆಯ ಮಧ್ಯದಲ್ಲಿ ಈ
ಸಂದರ್ಭ ಬಂದಾಗ ಹಿರಣ್ಯ ಕಷಿಪುವಿನ ಪಾತ್ರದಾರಿ ಬೇರೊಂದು ಕಂಬದಲ್ಲಿ ದೇವರನ್ನು ತೋರಿಸಬೇಕೆಂದು ಪ್ರಹ್ಲಾದ
ಪಾತ್ರದಾರಿಗೆ ಹೇಳಿಬಿಟ್ಟ. ಇದು ಪ್ರಹ್ಲಾದ ಪಾತ್ರದಾರಿಗೆ ದೊಡ್ಡ ಸಮಸ್ಯೆಯಾಯಿತು. ಏಕೆಂದರೆ ನರಸಿಂಹ
ಪಾತ್ರದಾರಿಯನ್ನು ಬೇರೊಂದು ಕಂಬದಲ್ಲಿ ಅಡಗಿಸಲಾಗಿದೆಯೆಂದು ಅವನಿಗೆ ಗೊತ್ತಿತ್ತು. ಅವನು ಎಷ್ಟೋ ಸನ್ನೆಗಳ
ಮೂಲಕ ಹಿರಣ್ಯ ಕಷಿಪುವಿನ ಪಾತ್ರದಾರಿಗೆ ಅದನ್ನು ತಿಳಿಸಿದರೂ ಉಪಯೋಗವಾಗಲಿಲ್ಲ. ಕೊನೆಗೆ ಪರದೆಯನ್ನೆಳೆದಾಗಲೇ
ನಿಜವಾದ ವಿಷಯ ಬಯಲಿಗೆ ಬಂತು. ಹಿರಣ್ಯ ಕಷಿಪುವಿಗೆ ಎರಡು ತಿಂಗಳ ಸಂಬಳ ಬಾಕಿ ಇತ್ತಂತೆ. ಅದನ್ನು ಕೈಯಲ್ಲಿಟ್ಟ
ಮೇಲೆಯೇ ಅವನು ರಂಗಸ್ಥಳ ಪುನಃ ಪ್ರವೇಶಮಾಡಿ ಸರಿಯಾದ ಕಂಬದತ್ತ ಕೈ ತೋರಿಸಿದ್ದು.
ದ್ರೌಪದಿ
ವಸ್ತ್ರಾಪಹರಣ ಪ್ರಸಂಗ. ತಿಮ್ಮಪ್ಪನೆಂಬ ಪಾತ್ರಧಾರಿ
ದ್ರೌಪದಿ ಪಾತ್ರಮಾಡುತ್ತಿದ್ದ. ದುಶ್ಯಾಸನನ ಪಾತ್ರ ಮಾಡುತ್ತಿದ್ದ ವ್ಯಕ್ತಿ ರಜೆ ಹೋಗಿದ್ದರಿಂದ ಆ
ಪಾತ್ರವನ್ನು ಹೊಸಬನೊಬ್ಬನಿಗೆ ಕೊಡಲಾಗಿತ್ತು. ಮಾಮೂಲಿನಂತೆ ದ್ರೌಪದಿಗೆ ಐದು ತೆಳುವಾದ ಸೀರೆಗಳನ್ನು
ಉಡಿಸಲಾಗಿದ್ದು ದುಶ್ಯಾಸನನ ಪಾತ್ರಧಾರಿಗೆ ನಾಲ್ಕು ಸೀರೆಗಳನ್ನು ಎಳೆದು ಸುಸ್ತಾದವನಂತೆ ನಟಿಸಬೇಕೆಂದು
ಸೂಚಿಸಲಾಗಿತ್ತು. ಆದರೆ ತುಂಬಿದ ರಾಜಸಭೆಯ ನಡುವೆ ದ್ರೌಪದಿಯ ವಸ್ತ್ರಾಪಹರಣ ನಡೆಯುವಾಗ ಒಂದು ದೊಡ್ಡ
ಅನಾಹುತವೇ ಜರುಗಿ ಬಿಟ್ಟಿತು. ದುಶ್ಯಾಸನನ ಪಾತ್ರಧಾರಿ ನಿಜವಾದ ದುಶ್ಯಾಸನನೇ ಆಗಿ ದ್ರೌಪದಿಯ ಐದನೇ
ಸೀರೆಯನ್ನೂ ಸೆಳೆದು ಬಿಟ್ಟ! ದ್ರೌಪದಿ ಪಾತ್ರಧಾರಿ ತಿಮ್ಮಪ್ಪನ ಚೆಡ್ಡಿ ಪ್ರೇಕ್ಷಕರ ಕಣ್ಣಿಗೆ ಗೋಚರಿಸಿಬಿಟ್ಟು
ರಂಗಸ್ಥಳಕ್ಕೆ ತೆರೆ ಬೀಳುವಷ್ಟರಲ್ಲೇ ಅವನು ಒಳಗೆ ಓಡಿ ಬಿಡುವಂತಾಯಿತು. ಆಮೇಲೆ ದುಶ್ಯಾಸನನ ಪಾತ್ರಧಾರಿಯ
ವಿಚಾರಣೆ ನಡೆದಾಗ ಅವನು ಮೊದಲಿನಿಂದಲೂ ಲೆಕ್ಕದಲ್ಲಿ ವೀಕ್
ಎಂದು ತಿಳಿದು ಬಂತು. ಆದರೆ ಕೆಲವರ ಪ್ರಕಾರ ಅವನು ತಿಮ್ಮಪ್ಪನ ಮೇಲಿನ ಯಾವುದೊ ಹಳೆಯ ಸೇಡನ್ನು
ಈ ರೀತಿ ತೀರಿಸಿಕೊಂಡಿದ್ದ!
----ಮುಂದುವರಿಯುವುದು ---
No comments:
Post a Comment