Tuesday, November 22, 2016

ನನ್ನ ಬಾಲ್ಯ


ಅಧ್ಯಾಯ
ನಮ್ಮ ತಂದೆ ವೆಂಕಟರಮಣಯ್ಯ ಓರ್ವ ನಿಗೂಢ ವ್ಯಕ್ತಿ. ಚಿಕ್ಕ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಸೋದರಮಾವನ ಮನೆಯಲ್ಲಿ ಬಾಲ್ಯವನ್ನು ಕಳೆದು ನಂತರ ಊರೂರು ತಿರುಗುತ್ತಿದ್ದರಂತೆ.   ತಮ್ಮ ಸ್ವಂತ ಸಂಸಾರದಬಗ್ಗೆ  ಏನೂ ಯೋಚನೆ ಮಾಡದೆ ಪರೋಪಕಾರಿ  ಪಾಪಣ್ಣನಂತೆ ಇತರರ ಸೇವೆ ಮಾಡುವುದೇ ಅವರ ದಿನಚರಿಯಾಗಿತ್ತಂತೆ .  ಅವರ ಬಾಲ್ಯ ಜೀವನದಲ್ಲಿ ಎಷ್ಟೋ ಕಷ್ಟ ನಷ್ಟಗಳನ್ನನುಬವಿಸಿದ್ದರೂ ಅದರ ಬಗ್ಗೆ ಯಾರೊಡನೆಯೂ ಹೇಳುತ್ತಿದ್ದಿಲ್ಲ. ವಿಚಿತ್ರವೆಂದರೆ ನಾವೂ ಆಬಗ್ಗೆ ಅವರನ್ನು ವಿಚಾರಿಸಿದ್ದಿಲ್ಲ . ಅವರ ಜೀವನದ ದುರಂತಗಳಲ್ಲಿ  ಬಹುಮುಖ್ಯವಾದುವೆಂದರೆ  ತಮ್ಮಿಬ್ಬರು  ಅಕ್ಕಂದಿರನ್ನು (ಭಾವಂದಿರನ್ನು ಸಹಾ) ಬಹುಬೇಗನೆ ಕಳೆದುಕೊಂಡಿದ್ದುದು.. ಇನ್ನು ತಂಗಿಯ ಜೀವನದಲ್ಲಿ ಬಹು ದೊಡ್ಡ ಅನಾಹುತ ನಡೆಯಿತು. ಆ ಬಗ್ಗೆ ಇಲ್ಲಿ ಬರೆಯದಿರುವುದೇ ಲೇಸು.

ನಮ್ಮಮ್ಮನೊಡನೆ ನಮ್ಮ ತಂದೆಯ ಮದುವೆ ನಡೆದಾಗ ಎಲ್ಲರೂ ಅವರಿಗೆ ದೊಡ್ಡ ಲಾಟರಿ ಹೊಡೆಯಿತೆಂದೇ ತಿಳಿದಿದ್ದರಂತೆ . ಏಕೆಂದರೆ ನಮ್ಮಮ್ಮ ಅವರ ಶ್ರೀಮಂತ ತಂದೆಗೆ ಒಬ್ಬಳೇ ಮಗಳು. ಮೊದಲಮನೆ ಸುಬ್ಬಣ್ಣಯ್ಯ ಮೂರು ಜನ ಗಂದುಮಕ್ಕಳಲ್ಲಿ ಹಿರಿಯರು. ಅವರ ಒಬ್ಬಳೇ ಪ್ರೇಮದಪುತ್ರಿ  ನಮ್ಮಮ್ಮ. ಅವರಿಗೆ ಮನೆಯ ಹತ್ತಿರವಿದ್ದ ಐದೆಕರೆ ತೋಟವಲ್ಲದೆ ಬೇರೆಬೇರೆಕಡೆ ಜಮೀನುಗಳಿದ್ದುವು .  ಅದರಲ್ಲಿ ಮೂರನೇ ಒಂದು ಭಾಗ ನಮ್ಮಪ್ಪನ ಸುಪರ್ದಿಗೆ ಬಂದೇ ಬರುವಂತೆ ಕಾಣುತ್ತಿತ್ತು. ಆದರೆ ಅದು ಇದ್ದಕ್ಕಿದ್ದಂತೆ ಕೇವಲ ಮರೀಚಿಕೆ ಆಗಿಬಿಟ್ಟಿತು!

ಧಾರ್ಮಿಕ ಸ್ವಭಾವದ  ಸುಬ್ಬಣ್ಣಯ್ಯ ಮತ್ತು ರುಕ್ಮಿಣಿಯಮ್ಮನ ಜೋಡಿಗೆ ವ್ಯವಹಾರಿಕ ಪ್ರಪಂಚದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ .  ತುಂಬಾ ಅನ್ಯೋನ್ಯವಾಗಿದ್ದ  ಈ ದಂಪತಿಗಳು  ದುರದೃಷ್ಟವಶಾತ್ ತಮ್ಮ ಮಧ್ಯ ವಯಸ್ಸಿನ ಕೊನೆಯ ಭಾಗದಲ್ಲಿ ಇದ್ದಕ್ಕಿದ್ದಂತೆ ಒಟ್ಟೊಟ್ಟಿಗೆ ತೀರಿಕೊಂಡುಬಿಟ್ಟರು.  ಆಗ ನಮ್ಮ ತಂದೆ ನಿಜವಾಗಿ ಲಾಟರಿ ಹೊಡೆಯುವ ಪರಿಸ್ತಿತಿಗೆ ಬಂದರು! ಆಗ ಅವರ ನೆರವಿಗೆ ಬಂದವರು ಪುರದಮನೆ ಶಿಂಗಪ್ಪಯ್ಯ. ಅವರಿಗೆ ತೀವ್ರ ಕಾಹಿಲೆಯಾಗಿದ್ದಾಗ ಸೇವೆ ಮಾಡಿದ್ದಕ್ಕೆ ನಮ್ಮಪ್ಪನನ್ನು ಒಂದೆಕರೆ ತೋಟ ಹಾಗೂ ಒಂದು ಖಂಡುಗ ಗದ್ದೆಯ  ಜಮೀನ್ದಾರನಾಗಿ ಮಾಡಿಬಿಟ್ಟರು! ಹೀಗೆ ಶುರುವಾಯಿತು ನಮ್ಮಪ್ಪನ ಅಡೇಕಂಡಿ  ಸಂಸಾರ .

ಗೇಣಿದಾರರೇ ಹೆಚ್ಚಾಗಿದ್ದ ನಮ್ಮೂರಿನಲ್ಲಿ ನಮ್ಮ ತಂದೆಯ ಒಂದೆಕರೆ ಜಮೀನ್ದಾರಿಕೆ ಸ್ವಲ್ಪ ವಿಚಿತ್ರವಾಗೇ ಕಾಣುತ್ತಿತ್ತಂತೆ.  ಮುಂದೆ ಒಂದು ಕಾಲಕ್ಕೆ ಗೇಣಿದಾರರೆಲ್ಲಾ ಜಮೀನ್ದಾರರಾಗಿ, ಮೊದಲಿನ  ಜಮೀನ್ದಾರರು ಜಮೀನು ಮಾರಿ ಊರು ತೊರೆಯುವಂತಾದರೂ, ನಮ್ಮ ತಂದೆಯ ಪರಿಸ್ತಿತಿಯಲ್ಲಿ ಯಾವುದೇ ಬದಲಾವಣೆ ಕಾಣದುದೂ ಒಂದು ವಿಚಿತ್ರವೇ ಅನ್ನಿ! ಅದಕ್ಕೆ ಒಂದು ಮುಖ್ಯ ಕಾರಣ ಅವರಿಗೆ ತಮ್ಮ ಹೆಸರಿನಲ್ಲಿ ಯಾವುದೇ ಆಸ್ತಿ ಇಟ್ಟುಕೊಳ್ಳುವುದರಲ್ಲಿದ್ದ ನಿರಾಸಕ್ತಿ. ಅವರು ತಮ್ಮ ಹೆಚ್ಚು ವೇಳೆಯನ್ನು ಪುರದಮನೆ  ಶಿಂಗಪ್ಪಯ್ಯನವರ ಸೇವೆಗೆ ಮೀಸಲಿಟ್ಟಿದ್ದರುಶಿಂಗಪ್ಪಯ್ಯನವರಿಗೆ ಸಂತಾನವಿಲ್ಲದಿದ್ದರಿಂದ ಅವರು ತಮ್ಮ ಆಸ್ತಿಯನ್ನು ಸಮಭಾಗವಾಗಿ ಪಾಲುಮಾಡಿ ತಮ್ಮ ಭಾವನ ಮಕ್ಕಳಾದ ಶ್ರೀನಿವಾಸಯ್ಯ ಮತ್ತು ಕೃಷ್ಣರಾವ್ ಅವರ ಹೆಸರಿಗೆ ಬರೆದು ತೀರಿಕೊಂಡರು.

ನಮ್ಮ ತಂದೆ ಪುರದಮನೆಗೆ ತಮ್ಮನ್ನು ಎಷ್ಟು ಸಮರ್ಪಿಸಿಕೊಂಡಿದ್ದರೆಂದರೆ ಶಿಂಗಪ್ಪಯ್ಯನವರು ಕಾಲವಾದನಂತರ ಶ್ರೀನಿವಾಸಯ್ಯನವರ ಸಂಸಾರದ ಜೊತೆಗೂ ತಮ್ಮ ಸೇವಾ ಮನೋಭಾವನೆಯನ್ನು ಮುಂದುವರಿಸಿದರು. ಅದೆಷ್ಟೆಂದರೆ ಶಿಂಗಪ್ಪಯ್ಯನವರು ತಮಗೆ ದಾನವಾಗಿ  ಕೊಟ್ಟಿದ್ದ ಜಮೀನನ್ನು ಶ್ರೀನಿವಾಸಯ್ಯನವರ ಹೆಸರಿಗೆ "ನಂಬಿಕೆ ಖರೀದಿ ಪತ್ರ " ಮಾಡಿ ರಿಜಿಸ್ಟರ್ ಮಾಡಿಬಿಟ್ಟರು. ಅದಕ್ಕೆ ಬದಲಾಗಿ ಶ್ರೀನಿವಾಸಯ್ಯ ನಮ್ಮ ಸಂಸಾರದ ಸಂಪೂರ್ಣ ವಾರ್ಷಿಕ ಖರ್ಚನ್ನು ಹೊರಬೇಕೆಂದು ಒಂದು ಒಳ ಒಪ್ಪಂದ ಮಾಡಿಕೊಂಡರು. ಒಪ್ಪಂದದಲ್ಲಿ  ತಂದೆಯವರು ನಮ್ಮ ದೊಡ್ಡಣ್ಣನೊಡನೆ ಪ್ರತಿದಿನ ಪುರದಮನೆಗೆ ಹೋಗಿ ಜಮೀನಿನ ಮೇಲ್ವಿಚಾರಣೆ ಇತ್ಯಾದಿಗಳನ್ನು ನೋಡಬೇಕೆಂದೂ ಇತ್ತು.  ತೋಟ ನಮ್ಮ ಸುಪರ್ದಿನಲ್ಲಿಯೇ ಇದ್ದು ನಾವು ಬೆಳೆದ  ಅಡಿಕೆಯನ್ನು ಶ್ರೀನಿವಾಸಯ್ಯನವರಿಗೆ ಕೊಡುತ್ತಿದ್ದೆವು. ಆದರೆ ನಮ್ಮ ಜಮೀನಿನ ವಾರ್ಷಿಕ ಬೇಸಾಯ ಮಾಡುವುದನ್ನೇ ನಿಲ್ಲಿಸಲಾಯಿತು. ನಮ್ಮ ಸಂಸಾರಕ್ಕೆ ತಕ್ಕಷ್ಟು ದಿನಸಿ ಇತ್ಯಾದಿಗಳನ್ನು ಪುರದಮನೆಯಿಂದ ನಮಗೆ ಕೊಡಲಾಗುತ್ತಿತ್ತು. ವ್ಯವಸ್ಥೆ ಕೆಲವು ವರ್ಷ ಚೆನ್ನಾಗಿಯೇ ನಡೆಯಿತು. ಗದ್ದೆಯ ಗೇಣಿಯಾಗಿ ನಮಗೆ ಖಂಡುಗ ಬತ್ತ ಬರುತ್ತಿತ್ತು. ಇದಲ್ಲದೆ ನಮಗೆ ಗೇಣಿಗೆ ಬೆಳವಿನಕೊಡಿಗೆಯವರ ಅರ್ಧ ಎಕರೆ ತೋಟವಿತ್ತು. ಆದರೆ ಅದಕ್ಕೂ  ಸರಿಯಾಗಿ ಬೇಸಾಯ ಮಾಡುತ್ತಿರಲಿಲ್ಲ. ಅದಕ್ಕೆ ನಮ್ಮ ತಂದೆಯ ನಿರಾಸಕ್ತಿಯೇ ಕಾರಣ.

ಅಣ್ಣ ಮನೆಯಿಂದ  'ಓಡಿ' ಹೋದದ್ದು
ನಮ್ಮಣ್ಣನಿಗೆ ತನ್ನನ್ನು ಮುಂದೆ ಓದಿಸಲಿಲ್ಲವೆಂದು ತಂದೆಯವರ ಮೇಲೆ ಅಸಮಾಧಾನವಿದ್ದಿತು. ಇದಲ್ಲದೆ ತಂದೆಯವರ ಎಷ್ಟೋ ವರ್ತನೆಗಳು ಅವನಿಗೆ ಹಿಡಿಸುತ್ತಿರಲಿಲ್ಲಚಿಕ್ಕ ಮಕ್ಕಳಾಗಿದ್ದ ನಮಗೆ ಅದರ ಬಗ್ಗೆ ಅರಿವಿರಲಿಲ್ಲ. ನಾನಿನ್ನೂ ಚಿಕ್ಕವನಿದ್ದಾಗ ಒಂದುದಿನ ಬೆಳಿಗ್ಗೆ ಅಂಗಳದ ಮುಂದೆ ತಂಗಿಯೊಡನೆ ಯಾವುದೋ ಚೇಷ್ಟೆಯಲ್ಲಿ ತೊಡಗಿದ್ದೆ. ನಮ್ಮಣ್ಣ ಒಂದು  ವೀಳ್ಯದೆಲೆ ಹೊತ್ತಲೆಯೊಡನೆ ಮನೆಯಿಂದ ಹೊರಟವನು ನಮ್ಮ ಹತ್ತಿರ ಬಂದು ಅದೇಕೋ ಅದನ್ನು ಕೆಳಗಿರಿಸಿ ತಂಗಿಯನ್ನು ಮುದ್ದಿಸಿ ನನ್ನ ಬೆನ್ನು ತಟ್ಟಿ ಮುಂದೆ ಹೋಗಿಬಿಟ್ಟ. ಅವನು ಯಾವತ್ತೂ ಹಾಗೆ ಮಾಡಿರಲಿಲ್ಲ. ವೇಳೆಗೆ ತಂದೆಯವರೂ ಮನೆಯಲ್ಲಿರಲಿಲ್ಲ. ನನ್ನ ಮನಸ್ಸಿಗೆ ಏನೋ ಸರಿಯಿಲ್ಲವೆನಿಸಿತು. ಸಂಜೆಯಾದರೂ ಅಣ್ಣನ ಸುಳಿವಿಲ್ಲದ್ದನ್ನು ನೋಡಿ ಅಮ್ಮನಿಗೆ ಗಾಬರಿಯಾಯಿತು. ಅಣ್ಣ ಅವಳ ಹತ್ತಿರ ಕೊಪ್ಪಕ್ಕೆ ಹೋಗಿ ಸಂಜೆಯೊಳಗೆ ಬರುವುದಾಗಿ ಹೇಳಿದ್ದನಂತೆ. ತಂದೆಯವರು ರಾತ್ರಿ ಮನೆಗೆ ಬರುವಾಗಲೂ ಅಣ್ಣನ ಸುಳಿವಿರಲಿಲ್ಲ. ಅಮ್ಮನ ಗಾಬರಿ ನೋಡಿ ನಾವೂ ಅಳಲಾರಂಭಿಸಿದೆವು.

ಮಾರನೇ ದಿನ ತಂದೆಯವರು ಕೊಪ್ಪಕ್ಕೆ ಹೀಗಿ ವಿಚಾರಿಸಿದಾಗ ಯಾರೋ ಅವರಿಗೆ ಅಣ್ಣ ಶಿವಮೊಗ್ಗ ಬಸ್ ಹತ್ತಿದನೆಂದು ಹೇಳಿದರಂತೆ. ಮುಂದೇನು ಮಾಡಲೂ ತೋಚದೆ ತಂದೆಯವರು ವಾಪಾಸ್ ಬಂದರು. ಸಮಾಚಾರ ಎಲ್ಲಾ ಕಡೆ ಹರಡಿ ಕೆಲವರು ಮನೆಗೆ ಬಂದು " ರಾಮಕೃಷ್ಣ ಓಡಿ ಹೋದದ್ದು ನಿಜವೇ" ಎಂದು ವಿಚಾರಿಸ ತೊಡಗಿದರು. ಚಿಕ್ಕವರಾದ ನಮ್ಮ ಮನಸ್ಸಿನಲ್ಲಿ  ಎಷ್ಟೋ ಪ್ರಶ್ನೆಗಳು ಎದ್ದುವು. ಮೊದಲನೆಯದಾಗಿ ಅಣ್ಣ ನಮ್ಮೆದುರಿಗೆ ನಿಧಾನವಾಗೇ ನಡೆದು ಹೋದದ್ದು ನಮಗೆ ಗೊತ್ತಿತ್ತು. ಆದ್ದರಿಂದ ಅವನುಓಡಿ ಹೋದನೆಂದುಯಾಕೆ ತೀರ್ಮಾನಿಸಿದರೆಂದು ನಮಗೆ ಅರ್ಥವಾಗಲಿಲ್ಲ. ಹಾಗೆಯೇ ಶಿವಮೊಗ್ಗದಿಂದ ಅವನು ಯಾಕೆ ವಾಪಾಸ್ ಬರಲಿಲ್ಲವೆಂದೂ ಗೊತ್ತಾಗಲಿಲ್ಲ.

ಅಮ್ಮನಿಂದ ನಮಗೆ ಇನ್ನೊಂದು ವಿಷಯ ತಿಳಿಯಿತು. ಕೆಲವು ವರ್ಷಗಳ ಹಿಂದೆ ತಂದೆಯವರ ಅಕ್ಕನ  ಮಗ ಮರಡಿ ಶ್ಯಾಮು ಎಂಬುವರೂ ಮನೆಬಿಟ್ಟು ಓಡಿ  ಹೋಗಿದ್ದರಂತೆ. ಅವರ ತಂದೆ-ತಾಯಿ ಇಬ್ಬರೂ ತೀರಿಕೊಂಡಿದ್ದರು. ಆಮೇಲೆ ಅವರು ಬಳ್ಳಾರಿಯಿಂದ ನಮ್ಮ ತಂದೆಗೆ ಒಂದು ಪತ್ರ ಬರೆದಿದ್ದರಂತೆ. ಅದರಲ್ಲಿ ಅವರು ತಾವು ಒಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತಿರುವುದಾಗಿಯೂ ತಂದೆಯವರು ಬಂದು ವಾಪಾಸ್ ಕರೆದುಕೊಂಡು ಬರಬೇಕೆಂದೂ ಕೇಳಿಕೊಂಡಿದ್ದರಂತೆ. ತಮ್ಮ ವಿಳಾಸವನ್ನೂ ತಿಳಿಸಿದ್ದರಂತೆ. ಆದರೆ ತಂದೆಯವರು ಸುಮ್ಮನಿದ್ದರಂತೆ. ಅಮ್ಮನ ಒತ್ತಾಯವನ್ನೂ ಕಿವಿಯಮೇಲೆ ಹಾಕಿಕೊಳ್ಳಲಿಲ್ಲವಂತೆ. ಅವರಲ್ಲಿ ಹಣವಿಲ್ಲದ್ದೂ ಒಂದು ಕಾರಣವಿರಬಹುದುಆದರೆ ಅದೇ ಕೊನೆ. ಶ್ಯಾಮು ಎಂದೂ  ವಾಪಾಸ್ ಬರಲೇ ಇಲ್ಲ.

ನಮಗೆ ಕಥೆಯನ್ನು ಕೇಳಿ ನಮ್ಮಣ್ಣನೂ ಪತ್ತೆಯಿಲ್ಲದಂತಾಗುವನೆಂಬ ಭಯ ಪ್ರಾರಂಭವಾಯಿತು. ನಮ್ಮಮ್ಮನ ಗೋಳು ಹೇಳತೀರದು. ಮನೆಯಲ್ಲಿ ನೆಮ್ಮದಿ ಇಲ್ಲದಂತಾಯಿತು. ನಮ್ಮ ತಂದೆ ವಾರಕ್ಕೊಮ್ಮೆ ನಮ್ಮೂರಿನಿಂದ ಮೈಲಿ ದೂರದಲ್ಲಿದ್ದ ಕಲ್ಕೆರೆ ಎಂಬಲ್ಲಿದ್ದ ಪೋಸ್ಟ್ ಆಫೀಸಿಗೆ ಹೋಗಿ ಅಣ್ಣನಿಂದ ಪತ್ರವೇನಾದರೂ ಬಂದಿದಿಯೇ ಎಂದು ವಿಚಾರಿಸಿ ಬರುತ್ತಿದ್ದರು. ಹೀಗೆ ಸುಮಾರು ಆರು ತಿಂಗಳು ಕಳೆದ ನಂತರ ಒಂದು ದಿನ ಬೆಳವಿನಕೊಡಿಗೆ ತಿಮ್ಮಪ್ಪಜ್ಜಯ್ಯನವರು ಒಂದು ಪೋಸ್ಟ್ ಕಾರ್ಡ್ ಹಿಡಿದುಕೊಂಡು ನಮ್ಮ ಮನೆಗೆ ಬಂದರು.   ಅದು ನಮ್ಮಣ್ಣನಿಂದ ಬಂದಿತ್ತು. ಅದನ್ನು ಅವರು ಆಗಲೇ ಬೇರೆಯವರಿಗೂ ಓದಿ ಹೇಳಿಬಿಟ್ಟಿದ್ದರು. ನಮ್ಮ ಮುಂದೂ ಅವರು ಗಟ್ಟಿಯಾಗಿ ಓದಿ ಹೇಳಿದರು. ಅದರ ಪ್ರಕಾರ ನಮ್ಮಣ್ಣ ಮೈಸೂರಿನ ಚಂದ್ರ ವಿಲಾಸ ಎಂಬ ಒಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಮತ್ತೂ ಮನೆಗೆ ಹಿಂದಿರುಗಲು ತಯಾರಿದ್ದ. ಆದರೆ ಒಂದು ಷರತ್ತಿನ ಮೇಲೆ. ನಮ್ಮ ತಂದೆಯವರು  ಒಂದು ವಾರದಲ್ಲಿ ಸ್ವತಃ ಬಂದು ಕರೆದುಕೊಂಡು ಬರಬೇಕು. ಅದಕ್ಕೂ ತಡಮಾಡಿದರೆ ಅವನು ಬೊಂಬಾಯಿಗೆ ಹೋಗಿಬಿಡುವುದಾಗಿ ಎಚ್ಚರಿಕೆ ನೀಡಿದ್ದ.

ನಾವು ಕೇಳಿದ ಪ್ರಕಾರ ಬೊಂಬಾಯಿ ಒಂದು ದ್ವೀಪವಂತೆ. ಅದರ ಸುತ್ತಲೂ ಸಮುದ್ರವಂತೆ.ಅಲ್ಲಿಗೆ ಹಡಗಿನಲ್ಲಿ ಹೋಗಬೇಕಂತೆಅಲ್ಲಿ ಚಿನ್ನವನ್ನು ಮಣಗಟ್ಟಲೆ ಮಾರಾಟ ಮಾಡುತ್ತಾರಂತೆ. ಅಷ್ಟು ಶ್ರೀಮಂತರಿದ್ದ ಬೊಂಬಾಯಿಂದ ವಾಪಾಸ್ ಬರುವುದು ಮಾತ್ರಾ ತುಂಬಾ ಕಷ್ಟವಂತೆ. ನಮಗೆ ನಮ್ಮಣ್ಣನೂ ತನ್ನನ್ನು ಚಿನ್ನದ ಮಾರಾಟದಲ್ಲಿ ತೊಡಗಿಸಿಕೊಂಡು ಎಂದೂ ವಾಪಾಸ್ ಬರುವುದಿಲ್ಲವೆಂಬ ಭಯ ಹುಟ್ಟಿಕೊಂಡಿತು. ನಮ್ಮ ಅಮ್ಮನ ಒತ್ತಾಯದಿಂದ ತಂದೆಯವರು ತಡಮಾಡದೇ ಹಣ ಹೊಂದಿಸಿಕೊಂಡು ಮೈಸೂರಿಗೆ  ಹೊರಟುಬಿಟ್ಟರು.

ಮೂರು  ದಿನಗಳ ನಂತರ ನಮ್ಮಣ್ಣನೊಡನೆ ನಮ್ಮ ತಂದೆ ಹಿಂತಿರುಗಿದಾಗ ನಮಗಾದ ಸಂತೋಷ ಅಷ್ಟಿಟ್ಟಲ್ಲ. ಸುಮಾರು ೬೦ ವರ್ಷಕ್ಕೂ ಹಿಂದಿನ ಆದಿನದ ದೃಶ್ಯ ನನ್ನ ಕಣ್ಣ ಮುಂದೆ ಈಗಲೂ ಸ್ಪಷ್ಟವಾಗಿ ಬರುತ್ತಿದೆ. ನಾವೆಲ್ಲ ಅಣ್ಣನ ಸುತ್ತಾ ಕುಳಿತು ಅವನ ಮುಖವನ್ನೇ ನೋಡತೊಡಗಿದೆವು. ಮನೆಯವರೆಲ್ಲರ ಕಣ್ಣಿನಲ್ಲೂ ನೀರು ಹರಿಯುತ್ತಿತ್ತು. ಓಡಿಹೋದ ನಮ್ಮಣ್ಣ ನಮ್ಮ ಮುಂದೆ ಪುನಃ ಪ್ರತ್ಯಕ್ಷವಾಗಿದ್ದ! ಅವನ ಕೈಚೀಲದಿಂದ ನಮಗೆಲ್ಲಾ   ಬಗೆಬಗೆಯ   ಗಿಫ್ಟ್ ಗಳು ಹೊರಬಿದ್ದವುನಮ್ಮ ಕಣ್ಣೇರು ಆನಂದ ಭಾಷ್ಪವಾಗಿ ಪರಿವರ್ತಿಸಿತು.

ಆಮೇಲೆ ಎಷ್ಟೋ ದಿನಗಳು  ನಮಗೆ ಅಣ್ಣನ ಬಾಯಿಂದ ಅವನ ಮೈಸೂರಿನ ಅನುಭವಗಳನ್ನು ಹಾಗೂ ಮೈಸೂರು ನಗರದ ಬಗ್ಗೆ ತಿಳಿದುಕೊಳ್ಳುವುದರಲ್ಲೇ ಕಳೆದು ಹೋಯಿತು. ನಮ್ಮಣ್ಣನಿಗೆ ತಾನು ನೋಡಿದುದನ್ನು ತುಂಬಾ ಸ್ವಾರಸ್ಯವಾಗಿ ಹೇಳುವ ಕಲೆ ಇತ್ತುಊರಿನವರೆಲ್ಲಾ ಬಂದು ಅವನ ಬಾಯಿಂದ ಅವನ ಮೈಸೂರು ಪ್ರವಾಸದ ಕಥೆ ಕೇಳಿ ಖುಷಿಪಟ್ಟರುಆಮೇಲೆ ಕೆಲವು ವರ್ಷಗಳ ನಂತರ ಅಣ್ಣನನ್ನು ಅನುಕರಿಸಿ ಇನ್ನೂ ಇಬ್ಬರು ತರುಣರು ನಮ್ಮೂರಿನಿಂದ ಮನೆ ಬಿಟ್ಟು ಓಡಿಹೋಗಿ ವಾಪಸ್ ಬಂದರು. ಆದರೆ ಅವರಿಗೆ ನಮ್ಮಣ್ಣನ ಕಥೆ ಹೇಳುವ ಕಲೆ ಇರಲಿಲ್ಲ. ಹಾಗಾಗಿ ಅವರ  ಸಾಹಸಕ್ಕೆ ಸರಿಯಾದ ಬೆಲೆ ಸಿಕ್ಕದೇ ಹೋಯಿತು.
----ಮುಂದುವರಿಯುವುದು -----
   







No comments: