Sunday, November 6, 2016

ನನ್ನ ಬಾಲ್ಯ

ಅಧ್ಯಾಯ
ನಮ್ಮೂರಿನ ಪ್ರಾಥಮಿಕ ಶಾಲೆ ಶಿಂಗಪ್ಪಯ್ಯ ಎಂಬ ದೊಡ್ಡ ಜಮೀನ್ದಾರರು ಹಾಗೂ ಧಾರ್ಮಿಕ ವ್ಯಕ್ತಿಗೆ ಸೇರಿದ ಪುರದಮನೆ ಎಂಬ ಬಂಗಲೆಯೊಳಗಿತ್ತು. ಚೌಕಾಕೃತಿಯ ಬೃಹದಾಕಾರದ ಬಂಗಲೆಯ ಮುಂಭಾಗ ಪೂರ್ತಿ ಶಾಲೆ ಹರಡಿಕೊಂಡಿತ್ತು. ಒಂದು ಕಾಲದಲ್ಲಿ ಶಾಲೆ ಎಷ್ಟೊಂದು ಖ್ಯಾತಿ ಹೊಂದಿತ್ತೆಂದರೆ ಅನೇಕ ಪರಊರಿನ ವಿದ್ಯಾರ್ಥಿಗಳು ತಮ್ಮ ಸಂಬಂಧಿಗಳ ಮನೆಯಲ್ಲಿದ್ದುಕೊಂಡು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಅದಕ್ಕೆ ಮುಖ್ಯ ಕಾರಣ ರಾಮಣ್ಣ ಮತ್ತು ತಿಮ್ಮಪ್ಪ ಎಂಬ ಇಬ್ಬರು  ಸುಪ್ರಸಿದ್ಧ ಮಾಸ್ತರರು.

ಇಂತಹ ವಿದ್ಯಾರ್ಥಿಗಳಲ್ಲಿ ಅತ್ಯಂತ ಪ್ರಸಿದ್ಧರಾದವರೆಂದರೆ ನಮ್ಮ ದೊಡ್ಡಣ್ಣನ ಸಹಪಾಠಿ ಡಾಕ್ಟರ್ ತಲವಾನೆ ಶ್ರೀನಿವಾಸ್. ಅವರು ಅವರ ಅಣ್ಣನಾದ ಮಂಜಪ್ಪನವರೊಡೆನೆ ನಮ್ಮ ಮನೆಯ ಹತ್ತಿರವಿದ್ದ ನಡುವಿನಮನೆ ಎಂಬಲ್ಲಿ ಅವರ ಸಂಬಂಧಿಗಳ ಮನೆಯಲ್ಲಿ ಇದ್ದುಕೊಂಡು ಶಾಲೆಯಲ್ಲಿ ಓದುತ್ತಿದ್ದರು. ನಂತರ ಅವರು ನವದೆಹಲಿಯ ಇಂಡಿಯನ್ ಅಗ್ರಿಕಲ್ಚರಲ್ ರೀಸರ್ಚ್  ಇನ್ಸ್ಟಿಟ್ಯೂಟ್ನಿಂದ  ಡಾಕ್ಟರೇಟ್ ಪಡೆದು ನಮ್ಮ ಜನಾಂಗದಲ್ಲೇ ಪದವಿ ಪಡೆದ ಮೊದಲಿಗರೆನ್ನಿಸಿಕೊಂಡರು. ಪ್ರಾಯಶಃ ಅವರು ನಮ್ಮ ಮಲೆನಾಡಿನಲ್ಲೇ ಪದವಿ ಪಡೆದ ಮೊದಲಿಗರಿರಬೇಕು.

ನನ್ನ ಮೊದಲ ಶಾಲೆಯ ಗುರುಗಳ ಹೆಸರು ಶ್ರೀಕಂಠ ಜೋಯಿಸ್ ಎಂದಿತ್ತು. ಆದರೆ ಅವರು ನನಗೆ ಯಾವುದೇ ಪಾಠಮಾಡಿದ ನೆನಪು ಬರುತ್ತಿಲ್ಲ. ಅವರನ್ನು ಮಾಸ್ತರರು ಎನ್ನುವುದಕ್ಕಿಂತ ಪುರೋಹಿತರೆಂದು ಎಂದು ಹೇಳುವುದು ಸೂಕ್ತವಾದೀತು. ನಮ್ಮೂರಿನ ಶ್ರೀಮಂತರೊಬ್ಬರ ಮೊಮ್ಮಗಳನ್ನು ಮದುವೆಯಾಗಿ ಅವರ ಮನೆಯಲ್ಲಿಯೇ ವಾಸವಾಗಿದ್ದ ಅವರು ಪ್ರತಿದಿನ ಮನೆಯ ಮಕ್ಕಳೊಡನೆ ಶಾಲೆಗೆ ಬರುತ್ತಿದ್ದರು. ಮಂತ್ರ ಪಠಣದಲ್ಲಿ ನಿಸ್ಸೀಮರಾಗಿದ್ದ ಜೋಯಿಸರು ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಲ್ಲಿ  ವಿಶೇಷ ಪಾತ್ರವಹಿಸುತ್ತಿದ್ದರು. ಹಾಗೆಯೇ ಅವರು ಮದುವೆಗೆ ಜಾತಕ ಹೊಂದಿಸುವುದರಲ್ಲಿ ವಿಶೇಷ ಪರಿಣಿತರಾಗಿದ್ದರು. ನಮ್ಮ ದೊಡ್ಡಕ್ಕನ ಜಾತಕವನ್ನು ನಮ್ಮ ಭಾವನ ಜಾತಕಕ್ಕೆ ಅವರು ಹೊಂದಿಸಿದ್ದು ನೆನಪಿಗೆ ಬರುತ್ತಿದೆಅವರ ಅಣ್ಣ ಶಂಕರನಾರಾಯಣ ಜೋಯಿಸ್ ಅವರು ಮಹಾ ವಿದ್ವಾಂಸರಾಗಿದ್ದು ಶೃಂಗೇರಿಯ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿದ್ದರು.

ಹಾಗೆಯೇ ಜೋಯಿಸರ ತಮ್ಮನೊಬ್ಬ ಇಂಡಿಯನ್ ಏರ್ಲೈನ್ಸ್ ಪೈಲಟ್ ಆಗಿದ್ದನೆಂದು ನಾವು ಕೇಳಿದ್ದೆವು. ನಮಗೆ ಅವನ ಕೆಲಸದ ಬಗ್ಗೆ ತುಂಬಾ ಕುತೂಹಲ ಹಾಗೂ ಈರ್ಷ್ಯೆ ಇತ್ತು.   ದಿನಗಳಲ್ಲಿ ಅನೇಕ ಬಾರಿ ನಾವು ಆಕಾಶದಲ್ಲಿ ವಿಮಾನಗಳು ಹಾರಾಡುವುದನ್ನು ಕಾಣುತ್ತಿದ್ದೆವುಯಾವುದೇ ವಿಮಾನದ ಶಬ್ದ ಕೇಳಿದೊಡನೆ ನಾವು ಅಂಗಳಕ್ಕೆ ಓಡಿ ಅದನ್ನು ಜೋಯಿಸರ ತಮ್ಮನೇನಾದರೂ ನಡೆಸುತ್ತಿರಬಹುದೇ ಎಂದು ಕುತೂಹಲದಿಂದ ಆಕಾಶದತ್ತ ನೋಡುತ್ತಿದ್ದೆವು. ಒಂದು ಬಾರಿ ಚಿಕ್ಕ ವಿಮಾನವೊಂದು ಸ್ವಲ್ಪ ತಗ್ಗಿನಲ್ಲೇ ಹಾರಿ ಹೋಗುತ್ತಿದ್ದುದು ನಮ್ಮ ಕಣ್ಣಿಗೆ ಬಿತ್ತು. ಆಗ ಪುಟ್ಟಣ್ಣ ತನಗೆ ಜೋಯಿಸರ ತಮ್ಮ ವಿಮಾನವನ್ನು ಡ್ರೈವ್ ಮಾಡುತ್ತಿರುವುದು ಅದರ ಕಿಟಕಿಯಿಂದ ಕಣ್ಣಿಗೆ ಬಿತ್ತೆಂದು ಹೇಳಿದ. ನನಗೆ ತುಂಬಾ ಹೊಟ್ಟೆಕಿಚ್ಚಾಗಿ ಅವರನ್ನು ಹೇಗೆ ಗುರುತು ಹಿಡಿದೆ ಎಂದು ಪ್ರಶ್ನಿಸಿದೆ. ಅದಕ್ಕೆ ಅವನು ಅವರು ಜೋಯಿಸರಂತೆ ಜುಟ್ಟು ಬಿಟ್ಟಿದ್ದರೆಂದು ಹೇಳಿಬಿಟ್ಟ! ನಾನು ನಂಬಿಯೂ ಬಿಟ್ಟೆ! ಆಮೇಲೆ ಎಷ್ಟೋ ವರ್ಷಗಳ ನಂತರ ನಮಗೆ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ನಲ್ಲಿ ಕೆಲಸ ಮಾಡುತ್ತಿದರೆಂದೂ ಆದರೆ ಪೈಲಟ್ ಆಗಿರಲಿಲ್ಲವೆಂದೂ ತಿಳಿದು ಬಂತು.

ಜೋಯಿಸರು ನನಗೆ ಒಂದು ವಿಷಯಕ್ಕೆ ನೆನಪಾಗುತ್ತಾರೆ. ದಿನದ ಮಲೆನಾಡಿನಲ್ಲಿ ಮಕ್ಕಳಿಗೆ ಒಳ ಉಡುಪನ್ನು ಹಾಕುವ ಪದ್ಧತಿಯೇ ಇರಲಿಲ್ಲ. ಅಷ್ಟು ಮಾತ್ರವಲ್ಲ. ಚಿಕ್ಕ ಗಂಡು ಮಕ್ಕಳಿಗೆ ಮೂರು ವರ್ಷದವರೆಗೆ ಚೆಡ್ಡಿಯನ್ನೂ ಹಾಕುತ್ತಿರಲಿಲ್ಲ. ಜೋಯಿಸರು ಅವರ ಎರಡು ವರ್ಷದ ಮಗನನ್ನು ಅವರೊಡನೆ  ಶಾಲೆಗೇ ಕರೆತರುತ್ತಿದ್ದರು. ನಮಗೆ ಅವನ ಮೇಲೆ ತುಂಬಾ ಹೊಟ್ಟೆಕಿಚ್ಚು. ಏಕೆಂದರೆ ಎರಡು ವರ್ಷದ ಅವನಿಗೆ ಚೆಡ್ಡಿ ಹಾಕುವ ಅದೃಷ್ಟ ಪ್ರಾಪ್ತಿಯಾಗಿತ್ತು! ಆದರೆ ಅದರಲ್ಲಿ ಒಂದು ವಿಶೇಷವಿತ್ತು. ಜೋಯಿಸರು ಅವನ ಜನನಾಂಗವನ್ನು ಯಾವಾಗಲೂ ಚೆಡ್ಡಿಯ ಮಧ್ಯದ ಗುಂಡಿಯನ್ನು ತೆರೆದು ಹೊರಗೆ ಬಿಟ್ಟಿರುತ್ತಿದ್ದರು! ಉದ್ದೇಶ ಚೆಡ್ಡಿ ಒದ್ದೆ ಮಾಡದಿರಲೆಂದು. ಆದರೆ ನಮಗೆ ಒಂದು ವಿಷಯ ಅರ್ಥವಾಗುತ್ತಿರಲಿಲ್ಲ. ಏಕೆಂದರೆ ಚೆಡ್ಡಿ ಹಾಕುವ ಉದ್ದೇಶವೇ ಜನನಾಂಗವನ್ನು ಪ್ರದರ್ಶಿಸಬಾರದೆಂದಲ್ಲವೇ? ಅದಕ್ಕೆ ಯಾವುದೇ ಉತ್ತರವಿರಲಿಲ್ಲ.

ಜೋಯಿಸರ ಇನ್ನೊಂದು ವಿಶೇಷವೆಂದರೆ ಅವರು ಯಾವುದೇ ಮಕ್ಕಳನ್ನು ಅವರ ತಂದೆ ತಾಯಿ ಇಟ್ಟ  ಹೆಸರಲ್ಲಿ ಕರೆಯುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಹೆಸರಿಟ್ಟು ಕರೆಯುತ್ತಿದ್ದರು. ಹೆಸರು ಹುಡುಗನ ರೂಪಕ್ಕೆ,ನಡೆತೆಗೆ ಮತ್ತು ಅವನು ಓದುವುದರಲ್ಲಿ ತೋರಿಸುತ್ತಿದ್ದ ಆಸಕ್ತಿಯ ಮೇಲೆ ನಿರ್ಧಾರಿತವಾಗಿರುತ್ತಿತ್ತು. ಉದಾಹರಣೆಗೆ ಅವರು ತುಂಬಾ ತರಲೆಮಾಡುತ್ತಿದ್ದ ಒಬ್ಬ ಹುಡುಗನಿಗೆ " ಟೆಟ್ಟೆಟ್ಟೆ " ಎಂದು ಹೆಸರಿಟ್ಟಿದ್ದರು. ನನ್ನ ಪ್ರಕಾರ ಅದು ಹುಡುಗನಿಗೆ ಅತ್ಯಂತ ಸಮರ್ಪಕವಾದ ಹೆಸರಾಗಿತ್ತು.

ನಾನು ಮೊದಲೇ ಹೇಳಿದಂತೆ ಜೋಯಿಸರಿಗೆ ಪಾಠಹೇಳುವುದಕ್ಕಿಂತಾ ಪುರೋಹಿತಿಗೆ ಮಾಡುವುದೇ ಹೆಚ್ಚು ಇಷ್ಟವಾಗಿತ್ತು. ಅದೆಷ್ಟೆಂದರೆ ಊರಿನಲ್ಲಿ ಯಾರೋ ಅದರ ಬಗ್ಗೆ ಒಂದು ಚುಟುಕವನ್ನೇ ರಚಿಸಿಬಿಟ್ಟಿದ್ದರು. ನಾವೂ  ಅದನ್ನು ಪ್ರಾಸಬದ್ಧವಾಗಿ  ಹಾಡುತ್ತಿದ್ದುದು ನೆನಪಿಗೆ ಬರುತ್ತಿದೆ.
                                 "ಮೇಷ್ಟ್ರೇ ಮೇಷ್ಟ್ರೇ ಎಲ್ಲಿಗ್ಹೋಗಿದ್ರೀ ?
                                  ಬೆಂಡೆಹಕ್ಲಲ್ಲಿ ಚಂಡಿಹೋಮ  ಅಲ್ಲಿಗ್ಹೋಗಿದ್ದೆ "
                                  (ಬೆಂಡೆಹಕ್ಲು ಒಂದು ಊರಿನ ಹೆಸರು)
ನೀವು ನಂಬಿದರೆ ನಂಬಿ; ಬಿಟ್ಟರೆ ಬಿಡಿ.ಜೋಯಿಸರಿಗೆ  ನಮ್ಮೂರಿನಿಂದ ವರ್ಗವಾದದ್ದು ಬೆಂಡೆಹಕ್ಕಲಿಗೇ!
------------------------0-------------------------------0--------------------------------0----------------------------0-
ಜೋಯಿಸರ ವರ್ಗಾವಣೆಯ ನಂತರ ಬೇರೆ ಯಾರೂ ಮೇಷ್ಟರು ಬಾರದೇ ನಮ್ಮ ಸ್ಕೂಲ್ ಮುಚ್ಚಿಯೇ ಬಿಟ್ಟಿತು ನಡುವೆ ನಮ್ಮಮ್ಮನ ತವರುಮನೆಯಾದ ಮೊದಲಮನೆ ಎಂಬಲ್ಲಿಗೆ ಒಬ್ಬರು "ಮನೆಮೇಸ್ಟರರು " ಆಗಮಿಸಿದರು. ನಾನು ನನ್ನ ತಂಗಿಯೊಡನೆ ಅಲ್ಲಿ ಪಾಠ ಕಲಿಯಲು ಹೋಗತೊಡಗಿದೆ. ತುಂಬಾ ವಯಸ್ಸಾದ ಮೇಸ್ಟರರು ನೋಡುವುದಕ್ಕೆ ಪಕ್ಕಾ ಮಹಾತ್ಮಾ ಗಾಂಧಿಯಂತೆ ಕಾಣುತ್ತಿದ್ದರು. ನಿಜವಾಗಿ ಅವರೊಬ್ಬ ಅತ್ಯಂತ ಒಳ್ಳೆಯ ಮೇಷ್ಟರು. ಆದರೆ ನನ್ನ ಅವರ ಸಂಬಂಧ ದುರದೃಷ್ಟವಶಾತ್ ತುಂಬಾ ಕೆಟ್ಟ ರೀತಿಯಲ್ಲಿ ಕೊನೆಗೊಂಡಿತು.

ಇಲ್ಲಿ ನಾನೊಂದು ವಿಷಯ ಹೇಳಲೇ ಬೇಕು. ನಮ್ಮಮ್ಮ ನಮ್ಮನ್ನೆಲ್ಲಾ ತುಂಬಾ ಸಂಸ್ಕಾರವಂತರಾಗಿ ಬೆಳೆಸಿದ್ದಳು. ನಾವು ಯಾವುದೇ ಸಂದರ್ಭದಲ್ಲೂ ಕೆಟ್ಟ ಪದಗಳನ್ನು ನಮ್ಮ ಮಾತಿನಲ್ಲಿ ಬಳಸುವಂತಿರಲಿಲ್ಲ. ಹಾಗೆಯೇ ನಾವು ಬಗೆಯ ಪದಗಳನ್ನು ಕೇಳಲೂ ತಯಾರಿರಲಿಲ್ಲ.

ಪ್ರಾರಂಭದಲ್ಲಿ ನಮ್ಮ ಪಾಠಗಳು  ತುಂಬಾ ಚೆನ್ನಾಗಿಯೇ ನಡೆಯ ತೊಡಗಿದವು. ನನಗೆ  ತುಂಬಾ ಬೇಗ ಕಲಿಯ ಬಲ್ಲವನೆಂಬ ಹೆಸರೂ ಸಿಕ್ಕಿತು. ಆದರೆ ನನ್ನದೊಂದು ಸಮಸ್ಯೆ ಇತ್ತು. ನಾನು ಬರವಣಿಗೆ ಮಾಡುವಾಗ  ಎಂಬ ಅಕ್ಷರವನ್ನು ಆಗಾಗ ತಲೆಕೆಳಗಾಗಿ ಬರೆಯುತ್ತಿದ್ದೆ. ಅದಕ್ಕೆ ಕಾರಣವೇನೆಂದು ಇಂದಿಗೂ ನನಗೆ ತಿಳಿದಿಲ್ಲ. ಮೇಷ್ಟರು ನನಗೆ ಬಗ್ಗೆ ಹಲವು ಬಾರಿ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆದರೆ ನಾನು ಅದನ್ನೊಮ್ಮೆ ಪುನಃ ಹಾಗೆ ಬರೆದದ್ದನ್ನು ನೋಡಿ ಅವರ ಕೋಪ ನೆತ್ತಿಗೇರಿತು. ಅವರು ಗಟ್ಟಿಯಾಗಿ "ಮುಂಡೇಗಂಡ " ನಿನಗೆ ಬುದ್ಧಿ ಇಲ್ಲವೇ ಎಂದು ಕಿರುಚಿ ಬಿಟ್ಟರು. ಮೊದಲೇ ಹೇಳಿದಂತೆ ಬಗೆಯಸಂಸ್ಕೃತ”  ಶಬ್ದವನ್ನು  ಕೇಳಲು ನಾನೆಂದೂ ತಯಾರಿರಲಿಲ್ಲ.

ಮಾರನೇ ದಿನ ಬೆಳಿಗ್ಗೆ ನಾನು ಅಮ್ಮನೊಡನೆ ನಾನು ಇನ್ನು ಮುಂದೆ ಮನೆಪಾಠಕ್ಕೆ ಹೋಗುವುದಿಲ್ಲವೆಂದು ಹೇಳಿಬಿಟ್ಟೆ. ಅದಕ್ಕೆ ಕಾರಣವನ್ನೂ ತಿಳಿಸಿದೆ. ಅವಳು ನನಗೆ ವಿಷಯ ತಂದೆಯವರೊಡನೆ ಮಾತಾಡುವಂತೆ ತಿಳಿಸಿದಳು. ನಾನು ಅವರ ಹತ್ತಿರ ಹೋದೆ. ಆಗ ಅವರು ಒಂದು ಮರದ ಕುಂಟೆಯನ್ನು ಕೊಡಲಿಯಲ್ಲಿ ಹೊಡೆದು ಚಕ್ಕೆ ಮಾಡುತ್ತಿದ್ದರು. ಅವರ ಮೈಯಿಂದ ಜೋರಾಗಿ ಬೆವರಿಳಿಯುತ್ತಿತ್ತು. ಅವರು ಸ್ವಲ್ಪ ಹೊತ್ತು ನನ್ನ ಮಾತುಗಳನ್ನು ಕಿವಿಯಲ್ಲೇ ಹಾಕಿಕೊಳ್ಳಲಿಲ್ಲಆಗ ನಾನು ಸ್ವಲ್ಪ ಗಟ್ಟಿಯಾಗಿಯೇ ನನಗೆ ಮನೆಪಾಠಕ್ಕೆ ಹೋಗಲು ಇಷ್ಟವಿಲ್ಲ.  ಏಕೆಂದರೆ ನನಗೆ ಮುಂಡೇಗಂಡನೆಂದು ಹೇಳಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದೆ.  ಆಗ ನಮ್ಮ ತಂದೆ ಸಿಟ್ಟಿನಲ್ಲಿ ಯಾರು ನಿನಗೆ ಮುಂಡೇಗಂಡನೆಂದು ಹೇಳಿದರೋ ಅವರೇ ಮುಂಡೇಗಂಡ ಎಂದು ಬಿಟ್ಟರು.

ನನಗೆ ಅಷ್ಟೇ ಸಾಕಾಯಿತು. ನಾನು ತಡಮಾಡದೇ ಮನೆಪಾಠಕ್ಕೆ ಹೊರಟುಬಿಟ್ಟೆ. ನನ್ನ ದುರಾದೃಷ್ಟಕ್ಕೆ ಹಿಂದಿನ ದಿನದ ಪ್ರಸಂಗವೇ ಪುನರಾವರ್ತನೆಗೊಂಡು ಪುನಃ ಮೇಷ್ಟರ ಬಾಯಿಂದ ಮುಂಡೇಗಂಡ ಎಂಬ ಪದ ಹೊರಬಿದ್ದಿತು. ನಾನು ಕೂಡಲೇ “ಅದು ಮಾತ್ರಾ ನೀವೇ ಅಂತೆ. ಏಕೆಂದರೆ ನನ್ನ ತಂದೆಯವರೇ ಅದನ್ನು ಹೇಳಿಬಿಟ್ಟಿದ್ದಾರೆ” ಎಂದು ಅವರಿಗೆ ಉತ್ತರ ಕೊಟ್ಟುಬಿಟ್ಟೆ. ನನ್ನ ಮಾತಿನಿಂದ ಮೇಷ್ಟರಿಗೆ ಸಿಡಿಲೆರಗಿದಂತಾಗಿ ಒಂದು ಕ್ಷಣ ಅವರ ಬಾಯಿಂದ ಮಾತುಗಳೇ ಬರಲಿಲ್ಲ. ಪ್ರಾಯಶಃ ಅವರು ಒಬ್ಬ ಹುಡುಗನಿಂದ ಬಗೆಯ ಉತ್ತರವನ್ನು ಕನಸಿನಲ್ಲೂ ಎಣಿಸಿರಲಿಕ್ಕಿಲ್ಲ. ಮನೆಯಲ್ಲಿ ಒಂದು ದೊಡ್ಡ ಕೋಲಾಹಲವೇ ಉಂಟಾಗಿ ನಮ್ಮ ತಂದೆಗೆ ಕೂಡಲೇ ಬರುವಂತೆ ಕರೆ ಹೋಯಿತು.

ಮುಂದೇನಾಯಿತೆಂದು ನನಗೀಗ ನೆನಪಿಗೆ ಬರುತ್ತಿಲ್ಲ. ಆದರೆ ಪ್ರಸಂಗದ ನಂತರ ನಮ್ಮ ಪಾಠಗಳು ನಿಂತೇ ಹೋದವು. ಮೇಷ್ಟರು ಬೇರೊಂದು ಕಡೆಗೆ ಹೊರಟು ಹೋದರು. ಆಮೇಲೆ ಅವರೆಂದೂ ನಮ್ಮ ಕಣ್ಣಿಗೆ ಬೀಳಲಿಲ್ಲ.

----ಮುಂದುವರಿಯುವುದು ---

No comments: