Saturday, November 19, 2016

ನನ್ನ ಬಾಲ್ಯ


ಅಧ್ಯಾಯ
ಕ್ಷೌರ ಪುರಾಣ
ನಾನು ಈ ಮೊದಲೇ ಹೇಳಿದಂತೆ ಗಂಡುಮಕ್ಕಳಿಗೆ ಆಗಿನ ಕಾಲದಲ್ಲಿ ಮೂರು ವರುಷದವರೆಗೆ ಚೆಡ್ಡಿ ಹಾಕುತ್ತಿರಲಿಲ್ಲ ಹಾಗೂ ಆರು ವರ್ಷವಾದರೂ ತಲೆ ಕ್ಷೌರ ಮಾಡಿಸುತ್ತಿರಲಿಲ್ಲ. ನಾನೂ ಕೂಡ ಬೆಳಿಗ್ಗೆ ಶಾಲೆಗೆ ಹೋಗುವಾಗ ರುಕ್ಮಿಣಿ ಅಕ್ಕನಿಂದ ಜಡೆ ಹಾಕಿಸಿಕೊಂಡು ಹೋಗುತ್ತಿದ್ದೆ. ಶಾಲೆಯಲ್ಲಿ ದೊಡ್ಡ ಹುಡುಗರು ನನ್ನ ಜಡೆ  ಎಳೆದು ತಮಾಷೆ ಮಾಡುತ್ತಿದ್ದರು. ನನಗೆ ತುಂಬಾ ಮುಜುಗರವಾಗಿ ಬೇಗನೆ ಕ್ಷೌರ ಮಾಡಿಸುವಂತೆ ತಂದೆಯವರ ಬೆನ್ನು ಹತ್ತಿದೆ. ಅದಕ್ಕೆ ಒಂದು ದಿನ ನಿಗದಿ ಮಾಡಿ ಬೆಣ್ಣೆಗುಡ್ಡೆ ಎಂಬಲ್ಲಿ ವಾಸಮಾಡುತ್ತಿದ್ದ ಅಪ್ಪು ಎಂಬ ಕ್ಷೌರಿಕನಿಗೆ ಬರಹೇಳಲಾಯಿತು. ಬೆಳಿಗ್ಗೆ ಪೂರ್ತಿ ಅವನಿಗಾಗಿ ಕಾಯುತ್ತಿದ್ದೆವು. ತುಂಬಾ ಉತ್ಸಾಹದಲ್ಲಿದ್ದ ನನಗೆ ಕಾದುಕಾದು ಬೇಜಾರಾಯಿತು. ಇದ್ದಕಿದ್ದಂತೆ “ಅಪ್ಪು ಬಂದ! ಅಪ್ಪು ಬಂದ!” ಎಂದು ಯಾರೋ ಕೂಗುವುದು ಕೇಳಿಸಿತು. ಮನೆಯೊಳಗಿದ್ದ ನಾನು ಓಡಿ ಓಡಿ ಹೊರಬರುವಾಗ ಹೊಸಲೆಡವಿ ದಿಡೀರೆಂದು ಬಿದ್ದುಬಿಟ್ಟೆ. ನನ್ನ ತುಟಿ ಕತ್ತರಿಸಿ ಬಾಯಿಂದ ರಕ್ತ ಬರಲಾರಂಭಿಸಿತು. ಅಪ್ಪು ಬಂದಿದ್ದು ನಿಜವಾಗಿತ್ತು. ಹಾಗಾಗಿ ನನ್ನ ಉತ್ಸಾಹ ಕುಂದದೆ ಕ್ಷೌರಕ್ಕೆ ತಯಾರಾಗಿಬಿಟ್ಟೆ. ಕ್ಷೌರ ಮುಗಿದಮೇಲೆ ಅಪ್ಪು ಕನ್ನಡಿಯಲ್ಲಿ ನನ್ನ ಮುಖ ತೋರಿಸಿದಾಗ ದೊಡ್ಡ ದಿಗ್ವಿಜಯ ಮಾಡಿದವನಂತೆ ನನಗೆ ಅನಿಸಿತು.  ಅಂದಿನಿಂದ  ಅಕ್ಕನ ಕೆಲಸವೂ ಕಡಿಮೆಯಾಯಿತು.

ಸ್ವಲ್ಪ ಸಮಯದ  ನಂತರ ಅಪ್ಪು ಇದ್ದಕ್ಕಿದ್ದ ಹಾಗೆ ನಮ್ಮೂರಿಗೆ ಬರುವುದನ್ನು ನಿಲ್ಲಿಸಿಬಿಟ್ಟ. ಆಮೇಲೆ ಎಷ್ಟೋ ದಿನಗಳ ನಂತರ ಎತ್ತಿನಹಟ್ಟಿ ಎಂಬಲ್ಲಿ ವಾಸಮಾಡುತ್ತಿದ್ದ ವಾಸು ಎಂಬುವನನ್ನು ನಮ್ಮೂರಿನ ಕ್ಷೌರಿಕನಾಗಿ ನೇಮಕ ಮಾಡಲಾಯಿತು. ಅವನಿಗೆ ವರ್ಷಕ್ಕೆ ಎಷ್ಟು ಅಡಿಕೆ (ಅಥವಾ ಅಕ್ಕಿ ) ಕೊಡಬೇಕೆಂದೂ ನಿಗದಿ ಮಾಡಲಾಯಿತು. ಮದ್ಯೆ ನನ್ನ ಮತ್ತು ಪುಟ್ಟಣ್ಣನ ತಲೆ ಕೂದಲು ಬೆಳೆದು ಪುನಃ ಜಡೆಹಾಕುವ ಮಟ್ಟಕ್ಕೆ ಬಂತು! ಅಷ್ಟರಲ್ಲಿ ನಮ್ಮೂರಿನ ಹುರುಳಿಹಕ್ಕಲು ಎಂಬಲ್ಲಿ ಒಂದು ಮದುವೆಗೆ ಕರೆಬಂತು. ಆಗ ನಾವಿಬ್ಬರೂಜಟಾಧಾರಿಗಳಾಗಿ’ ದುವೆಗೆ ಹೋಗಲು ತಯಾರಿಲ್ಲವೆಂದು ಸ್ಪಷ್ಟವಾಗಿ ಹೇಳಿಬಿಟ್ಟೆವು! ನಮ್ಮ ‘ಮದುವೆ  ಬಹಿಷ್ಕಾರ’' ಊರಿನಲ್ಲಿ ಒಂದು ಸಮಾಚಾರವಾಗಿ ಹರಡಿ ಎಲ್ಲರೂ ತಮಾಷೆ ಮಾಡತೊಡಗಿದರು.
ನಮ್ಮ ಮೊದಲ ಜಯಪುರ ಪ್ರಯಾಣ
ನಿರ್ವಾಹವಿಲ್ಲದೆ  ನಮ್ಮ ತಂದೆ ನಮ್ಮನ್ನು ನಮ್ಮೂರಿನಿಂದ ಆರು ಮೈಲಿ ದೂರದಲ್ಲಿದ್ದ ಜಯಪುರಕ್ಕೆ ಕಳಿಸುವ ತೀರ್ಮಾನ ಮಾಡಿದರು. ಆದರೆ ಒಂದು ಸಣ್ಣ ಸಮಸ್ಯೆ ಇತ್ತು. ನಮ್ಮ ತಂದೆಯವರ ಹತ್ತಿರ ನಮ್ಮಿಬ್ಬರ ಕ್ಷೌರಕ್ಕೆ ಕೊಡಬೇಕಾದಷ್ಟು ನಗದು ಹಣವಿರಲಿಲ್ಲ. ಅದಕ್ಕಾಗಿ ಅವರು ಎರಡು ವೀಳ್ಯದೆಲೆ ಹೊತ್ಲೆ ತಯಾರು ಮಾಡಿದರುಒಂದೊಂದರಲ್ಲೂ ಇಪ್ಪತ್ತು ಎಲೆಯ ಇಪ್ಪತ್ತೈದು ಕೌಳಿಗೆ ಇಡಲಾಗಿತ್ತು. ನಾವು ಅದನ್ನು ಜಯಪುರದಲ್ಲಿ ಮಾರಿ ಬಂದ ಹಣದಿಂದ ಕ್ಷೌರ ಮಾಡಿಸಿಕೊಳ್ಳಬೇಕಾಗಿತ್ತು.

ಮಾರನೇದಿನ ಬೆಳಿಗ್ಗೆ ಮುಂಚೆ ನಾವಿಬ್ಬರೂ ಎಲೆ ಹೊತ್ಲೆಯನ್ನು ತಲೆಯಮೇಲೇರಿಸಿಕೊಂಡು ಜಯಪುರಕ್ಕೆ ಕಾಲ್ನಡಿಗೆ ಪ್ರಯಾಣ ಬೆಳೆಸಿದೆವು. ನಮ್ಮ ಮನೆಯ ನಾಯಿ ಟಾಮಿ ಕೂಡ ನಮ್ಮನ್ನು ಹಿಂಬಾಲಿಸಿತು. ನಮಗೊಬ್ಬ ಒಳ್ಳೆ ಸಹಪ್ರಯಾಣಿಕ ಸಿಕ್ಕಿದಷ್ಟು ಸಂತಸವಾಯಿತು. ಆದರೆ ಆಮೇಲೆ ಪಶ್ಚಾತ್ತಾಪ ಪಡುವಂತಾಗುವುದೆಂದು ನಮಗಾಗ ಗೊತ್ತಿರಲಿಲ್ಲ

ಮೊದಲಿಗೆ ನಮ್ಮೂರ ಗಣಪತಿಕಟ್ಟೆಯನ್ನು ದಾಟಿ ಹೊಸಳ್ಳಿ ಮುಖಾಂತರ ಎತ್ತಿನಹಟ್ಟಿ ಎಂಬ ಊರನ್ನು ಸಮೀಪಿಸಿದೆವು. ಅಲ್ಲಿ ನಾವೊಂದು ದೊಡ್ಡ ಹಳ್ಳವನ್ನು ಹಾದು ಹೋಗಬೇಕಿತ್ತು. ಆಗತಾನೆ ಮಳೆಗಾಲ ಮುಗಿದು ಹಳ್ಳ ತುಂಬಾ ಆಳವಾಗಿ ಹಾಗೂ ಬಿರುಸಿನಿಂದ ಹರಿಯುತ್ತಿತ್ತು. ನಮಗೆ ಯಾವ ಜಾಗದಲ್ಲಿ ಅದನ್ನು ದಾಟಬೇಕೆಂದು ಗೊತ್ತಾಗಲಿಲ್ಲ. ನಮ್ಮ ಅದೃಷ್ಟಕ್ಕೆ ಅದೇ ವೇಳೆಗೆ ನಮಗೆ  ಪರಿಚಯವಿದ್ದ ತಿಮ್ಮಾಚಾರಿ ಎಂಬ ಕಮ್ಮಾರ ಅಲ್ಲಿ ಬಂದು ನಮ್ಮನ್ನು ಕ್ಷೇಮವಾಗಿ ದಾಟಿಸಿಬಿಟ್ಟ. ಆದರೆ ನಮ್ಮಿಬ್ಬರ ಚೆಡ್ಡಿಗಳೂ ಸಂಪೂರ್ಣ ಒದ್ದೆಯಾಗಿ ಬಿಟ್ಟವು

ಇಷ್ಟರಲ್ಲಿ ನಮ್ಮ ಟಾಮಿ ಹಳ್ಳದ ಬದಿಯಲ್ಲೇ ಉಳಿದುಬಿಟ್ಟಿತ್ತು. ನಾವು ತಿಮ್ಮಾಚಾರಿಗೆ ಅದನ್ನೂ ಹೇಗಾದರೂ ದಾಟಿಸುವಂತೆ ಕೇಳಿಕೊಂಡೆವು. ಅವನು ಅದಕ್ಕೆ ಈಜು ಬರುವುದೆಂದೂ ಅದು ತಾನಾಗಿಯೇ ಆಚೆ ಬರುವುದೆಂದೂ ಹೇಳಿದ. ನಾವು ನೋಡುತ್ತಿದ್ದಂತೇ ಟಾಮಿ ನೀರಿಗೆ ಹಾರಿ ಈಜ ತೊಡಗಿತು. ಆದರೆ ಅದೊಂದು ತಪ್ಪು ಮಾಡಿತ್ತು. ಹೆಚ್ಚು ಸೆಳವು ಇರುವಲ್ಲಿ ಹಾರಿದ್ದರಿಂದ ಪ್ರವಾಹದಲ್ಲಿ ಕೊಚ್ಚಿ ಹೋಗತೊಡಗಿತು. ನಾವು ನಮ್ಮ ಟಾಮಿಯ ಕಥೆ ಮುಗಿಯಿತೆಂದು ಬೊಬ್ಬೆ ಹಾಕತೊಡಗಿದೆವು. ಆದರೆ ತಿಮ್ಮಾಚಾರಿ ನಮಗೆ ತಾಳ್ಮೆಯಿಂದಿರುವಂತೆ ಹೇಳಿದ. ಅವನ ಪ್ರಕಾರ ಅದು ಬೇಕೆಂದೇ ಸೆಳವಿನಲ್ಲಿ ಹಾರಿ ನಮ್ಮ ಮುಂದೆ ತನ್ನ ಸಾಹಸ ಪ್ರದರ್ಶನ ಮಾಡುತ್ತಿತ್ತು! ಅವನ ಮಾತು ಸತ್ಯವಾಗಿತ್ತು. ಸ್ವಲ್ಪದೂರ ತೇಲಿಹೋದ ಟಾಮಿ ಸೆಳವಿಲ್ಲದಲ್ಲಿ ಸುಖವಾಗಿ ಈಜಿ ದಡ ಸೇರಿತು. ನಮಗೆ  ಟಾಮಿಯ ಮೇಲೆ ತುಂಬಾ ಹೆಮ್ಮೆಯಾಯಿತು. ನಾವು ಅದರ ಬೆನ್ನು ತಟ್ಟುತ್ತಾ ನಮ್ಮ ಪ್ರಯಾಣ ಮುಂದುವರಿಸಿದೆವು.

ಆದರೆ ಇದ್ದಕ್ಕಿದ್ದಂತೆ ನಮ್ಮ ಟಾಮಿ ಹೀರೋನಿಂದ ಖಳನಾಯಕನ ಪಾತ್ರಕ್ಕೆ ಹಾರಿಬಿಟ್ಟಿತು! ನಮ್ಮ ಹಾದಿಯಲ್ಲಿ ಕೆಳಕೊಪ್ಪದ ಚಿನ್ನೇಗೌಡ ಎಂಬುವರ ಮನೆಯಿತ್ತು. ನಾವು ಅವರ ಮನೆ ದಾಟುವಷ್ಟರಲ್ಲಿ ನಮ್ಮ ಟಾಮಿ ಇದ್ದಕಿದ್ದಂತೆ ಮಾಯವಾಗಿ ಬಿಟ್ಟಿತು. ನಾವು ಸ್ವಲ್ಪ ಮುಂದೆ ಹೋಗಿ ಹಿಂತಿರುಗಿ ನೋಡಿದಾಗ ನಮ್ಮ ಜೀವವೇ ಹಾರಿ ಹೋದಂತಾಯಿತು. ಕಾರಣವಿಷ್ಟೇ. ಟಾಮಿ ತನ್ನ ಬಾಯಲ್ಲಿ ಚಿನ್ನೇಗೌಡರ ಮನೆಯ ಕೋಳಿಯೊಂದನ್ನು ಕಚ್ಚಿ ಹಿಡಿದುಕೊಂಡು ಬರುತ್ತಿತ್ತು! ಕ್ಷೌರ ಮಾಡಿಸಿಕೊಳ್ಳಲೇ ದುಡ್ಡಿಲ್ಲದ ನಮಗೆ ಕೋಳಿಯ ಜೀವದ ಪರಿಹಾರ ಕೊಡಬೇಕಾದ ಪ್ರಸಂಗ ಬಂದು ಜಂಘಾಬಲವೇ ಉಡುಗಿ ಹೋಯಿತು. ಕೂಡಲೇ ಹಿಂತಿರುಗಿ ನೋಡದೇ ನಮ್ಮ ಕಾಲಿಗೆ ಬುದ್ಧಿ ಹೇಳಿದೆವು. ದೈವವಶಾತ್ ನಾವು ಯಾರ ದೃಷ್ಟಿಗೂ ಬೀಳಲಿಲ್ಲ. ಹಿಂತಿರುಗಿ ಬರುವಾಗ ಮನೆಯ ಮುಂದೆ ಬರಬಾರದೆಂದು ಆಗಲೇ ತೀರ್ಮಾನಿಸಿದೆವು.

ಸುಮಾರು ಒಂಬತ್ತು ಘಂಟೆಗೆ ನಾವು ಟಾಮಿ ಸಮೇತ ಜಯಪುರ ತಲುಪಿದೆವು. ನಾವು ಎಲೆ ಮಾರಿದ ನಂತರವೇ ಕಟ್ಟಿಂಗ್  ಸೆಲೂನಿಗೆ ಹೋಗಬೇಕಾಗಿತ್ತು. ಆದರೆ ಎಷ್ಟು ಅಂಗಡಿಗೆ ಹೋದರೂ ನಮ್ಮ ಎಲೆಗೆ ಗಿರಾಕಿಯೇ ಸಿಗಲಿಲ್ಲ. ತುಂಬಾ ನಿರಾಶೆಯಿಂದ ಅಚ್ಚಣ್ಣ ಶೆಟ್ಟಿ ಎಂಬುವರ ಅಂಗಡಿಯ ಹತ್ತಿರ ಬಂದೆವು. ಅಚ್ಚಣ್ಣ ಶೆಟ್ಟರಿಗೆ ನಮ್ಮ ತಂದೆಯ ಪರಿಚಯ ಇತ್ತುಮತ್ತೂ ನಮ್ಮನ್ನು ಪುರದಮನೆಯಲ್ಲಿ ನೋಡಿದ್ದರು. ಅವರು ನಮ್ಮ ಪರಿಸ್ಥಿತಿ ನೋಡಿ ಎಲೆ ಹೊತ್ಲೆಯನ್ನು ತೆಗೆದುಕೊಂಡು ಒಂದು ರೂಪಾಯಿಯನ್ನು ನಮ್ಮ ಕೈಮೇಲೆ ಇಟ್ಟರು. ನಾವು ಅಲ್ಲಿಂದ ಸೀದಾ  ಕಟಿಂಗ್ ಸೆಲೂನಿಗೆ ಕಾಲಿಟ್ಟೆವು. ಆದಿನಗಳಲ್ಲಿ ಕಟಿಂಗ್ ಚಾರ್ಜ್ ದೊಡ್ಡವರಿಗೆ ಆರು ಆಣೆ ಹಾಗೂ ಚಿಕ್ಕವರಿಗೆ ನಾಲ್ಕು ಆಣೆ ಇದ್ದಿತು. ಆದರೆ ನಾವು ಆರು ತಿಂಗಳಿಂದ ಕ್ಷೌರ ಮಾಡಿಸದಿದ್ದರಿಂದ ನಮಗೆ ಜಾಸ್ತಿ ಚಾರ್ಜ್ ಮಾಡುವ ಭಯವಿದ್ದಿತು. ನಮ್ಮ ಅದೃಷ್ಟಕ್ಕೆ ಎಂಟಾಣೆಗೆ ನಮ್ಮಿಬ್ಬರ ಕಟ್ಟಿಂಗ್ ಮುಗಿದು ಕೈಯಲ್ಲಿ ಎಂಟಾಣೆ ಉಳಿಯಿತು.

ಸೆಲೂನಿನಿಂದ ಹೊರಗೆ ಬರುವಾಗ ಅದರ ಮುಂದೆ ಅಂಬಾ ಭವನ ಎಂಬ ಬೋರ್ಡ್ ಕಣ್ಣಿಗೆ ಬಿತ್ತು. ಅದರೊಳಗೆ ತುಂಬಾ ಜನರು ತಿಂಡಿ ತಿನ್ನುವುದು ಹಾಗೂ ಕಾಫಿ ಕುಡಿಯುವುದೂ ಕಾಣಿಸಿತು. ಅದೇನೆಂದು ಪುಟ್ಟಣ್ಣನನ್ನು ಕೇಳಿದಾಗ ಅದು ಹೋಟೆಲ್ ಎಂದೂ ಹಾಗೂ ಅಲ್ಲಿ ದುಡ್ಡು ಕೊಟ್ಟರೆ ಕಾಫಿ ಮತ್ತು ತಿಂಡಿ ಕೊಡುತ್ತಾರೆಂದೂ ತಿಳಿಯಿತು. ವೇಳೆಗೆ ತುಂಬಾ ಹಸಿವಾಗಿದ್ದರಿಂದ ನಾನು ನಮ್ಮ ಕೈಯಲ್ಲಿದ್ದ ಎಂಟಾಣೆ ಕೊಟ್ಟು ತಿಂಡಿ ತಿನ್ನ ಬಯಸಿದೆ. ಆದರೆ ಪುಟ್ಟಣ್ಣನ ಪ್ರಕಾರ ಕ್ಷೌರ ಮಾಡಿಸಿಕೊಂಡವರು ಸ್ನಾನ ಮಾಡುವ ಒಳಗೆ ಯಾವುದೇ ಪದಾರ್ಥವನ್ನು ತಿನ್ನುವಂತಿರಲಿಲ್ಲ. ಹಾಗಾಗಿ ಮೊದಲ ಬಾರಿಗೆ ಹೋಟೆಲ್ ತಿಂಡಿ ತಿನ್ನುವ ನನ್ನ ಆಶೆ ಕೈಗೂಡಲಿಲ್ಲ. ನಿರಾಸೆಯಿಂದ ನಮ್ಮೂರಿಗೆ ಟಾಮಿ ಸಮೇತ ಮರು ಪ್ರಯಾಣ ಆರಂಭಿಸಿದೆವು.
ಉತ್ತಮೇಶ್ವರ ಪಯಣ
ನಮ್ಮ ಯಶಸ್ವೀ ಜಯಪುರ ಕಾಲುನಡಿಗೆ ಪ್ರಯಾಣ ನಮಗೆ ಇನ್ನೊಂದು ಹೊಸ ಕೆಲಸ ಅಂಟುವಂತೆ ಮಾಡಿತು. ದಿನಗಳಲ್ಲಿ ಅಕ್ಕಿ ಹಿಟ್ಟು ಅಥವಾ ತರಿ ಮಾಡಿಸಲು ನಮ್ಮೂರಿನಿಂದ ಎರಡು ಮೈಲಿ ದೂರದಲ್ಲಿದ್ದ ಉತ್ತಮೇಶ್ವರ ಎಂಬಲ್ಲಿದ್ದ ಅಕ್ಕಿ ಗಿರಣಿಗೆ ಹೋಗಬೇಕಾಗಿತ್ತು. ಗಿರಣಿ ಶೃಂಗೇರಿಯ ಹತ್ತಿರವಿದ್ದ ಹುಲ್ಗಾರ್ ಚಂದ್ರಮೌಳಿರಾವ್ ಎಂಬ ತುಂಬಾ ಶ್ರೀಮಂತ ಜಮೀನ್ದಾರರಿಗೆ ಸೇರಿತ್ತು. ಬರೇ ಮನೆಗೆಲಸದಲ್ಲಿ ಪಳಗಿದ್ದ  ನಮ್ಮಿಬ್ಬರನ್ನೂ ರುಕ್ಮಿಣಿ ಅಕ್ಕನ ಸಲಹೆಯಂತೆ ಅಕ್ಕಿ ಹಿಟ್ಟು ಮಾಡಿಸಿಕೊಂಡು ಬರುವ ಕೆಲಸಕ್ಕೆ ಕಳಿಸಲು ಅಮ್ಮ ತೀರ್ಮಾನಿಸಿದಳು.

ಅಮ್ಮನ ಆಜ್ಞೆಯಂತೆ ಒಂದು ಭಾನುವಾರ ಬೆಳಿಗ್ಗೆ ನಾನು ಮತ್ತು ಪುಟ್ಟಣ್ಣ ಎರಡು ಚೀಲಗಳಲ್ಲಿ ಅಕ್ಕಿ ಹಾಕಿ ತಲೆಯಮೇಲೆ ಹೊತ್ತುಕೊಂಡು ಜೇಬಿನಲ್ಲಿ ಎರಡಾಣೆ ಚಿಲ್ಲರೆ ಇಟ್ಟುಕೊಂಡು ಹೊರಟೆವು. ಮೊದಲಿಗೆ ನಮ್ಮ ತೋಟದ ಗಡಿದಾಟಿ ಒಂದು ಗುಡ್ಡವನ್ನೇರಿ ಒಂದು ರಸ್ತೆಯನ್ನು ತಲುಪಿದೆವು. ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋದಾಗ ಬಲಬಾಗದಲ್ಲಿ ಗೋಳಿಕಟ್ಟೆ ಮನೆ ಕಂಡಿತು. ನಮ್ಮ ಎಡಭಾಗದಲ್ಲಿ ಭುವನಕೋಟೆ ಎಂಬಲ್ಲಿಗೆ ಹೋಗುವ ಕಾಲುದಾರಿ ಗೋಚರಿಸಿತು. ಅಮ್ಮ ಹೇಳಿದಂತೆ ನಾವು ಸೀದಾ  ರಸ್ತೆಯಲ್ಲೇ ಮುಂದುವರೆದೆವು. ಮುಂದೆ ಬಲಭಾಗದಲ್ಲಿ ಹುಣಸೇಕೊಪ್ಪ ಎಂಬಲ್ಲಿಗೆ ಹೋಗುವ ರಸ್ತೆ ಇತ್ತು. ಇನ್ನೂ ಮುಂದುವರೆದಾಗ ನಮ್ಮ ಬಲಭಾಗಕ್ಕೆ ಉತ್ತಮೇಶ್ವರ ದೇವಸ್ಥಾನ ಗೋಚರಿಸಿತು.

ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ತುಂಬಾ ದೊಡ್ಡದಾಗಿದ್ದ ಅಕ್ಕಿ ಗಿರಣಿಯನ್ನು ಪ್ರವೇಶಿಸಿದೆವು. ಕಾಲದಲ್ಲಿ ನಮ್ಮ ಮಲೆನಾಡಿನ ಯಾವುದೇ ಗ್ರಾಮಗಳಿಗೂ ವಿದ್ಯುತ್ ಬಂದಿರಲಿಲ್ಲ. ಹಾಗಾಗಿ ಅಕ್ಕಿ ಗಿರಣಿ ಡೀಸೆಲ್ ಜನರೇಟರ್ ಆಧಾರದ ಮೇಲೆ ನಡೆಯುತ್ತಿತ್ತು. ಗಿರಣಿಯ ಚಾಲಕನ ಹೆಸರು ರಾಮ  ಹಾಗೂ ಮ್ಯಾನೇಜರ್ ಹೆಸರು ಶೃಂಗೇಶ್ವರಯ್ಯ ಎಂದಿತ್ತು

ಗಿರಣಿಯ ಮುಂದೆ ಬತ್ತ  ತುಂಬಿದ ಎರಡು ಗಾಡಿಗಳು ನಿಂತಿದ್ದುವುನಮ್ಮ ಕಣ್ಮುಂದೆಯೇ ರಾಮ ಗಿರಣಿಯನ್ನು ಚಾಲೂ ಮಾಡಿದ. ಅದರ ಶಬ್ದವನ್ನು ನೋಡಿ ನಾವು ಕಂಗಾಲಾದೆವು. ಶಬ್ದಕ್ಕೆ ಯಾರು ಮಾತಾಡಿದರೂ ಕೇಳದಂತಾಯಿತು. ಒಂದು ಮೂಟೆ ಬತ್ತವನ್ನು ಮೆಷಿನ್  ಒಂದರಲ್ಲಿ ಹಾಕಲಾಯಿತು. ಅದು ಬೇರೆಬೇರೆ ಮೆಷಿನ್ ಗಳ ಒಳಗೆ ಹೋಗಿ ಕೊನೆಗೆ ಅಕ್ಕಿಯಾಗಿ ಒಂದುಕಡೆ ಹೊರಬಂತು. ನಮಗೆ ಅಚ್ಚರಿಯೋ ಅಚ್ಚರಿ. ನಮ್ಮ ಅಕ್ಕಿಯನ್ನೂ ಹಾಗೇ ಮಷೀನ್ ಒಳಗೆ  ಸುರಿದು ಇನ್ನೊಂದು ಕಡೆಯಿಂದ ಹಿಟ್ಟು ಹೊರತೆಗೆದು ಕೊಡಲಾಯಿತು. ನಮ್ಮ ಕೈಯಲ್ಲಿದ್ದ ಎರಡಾಣೆ ಚಾರ್ಜ್ ಆಗಿ ಶೃಂಗೇಶ್ವರಯ್ಯತೆಗೆದುಕೊಂಡರು. ನಾವು ಹಿಟ್ಟಿನ ಚೀಲಗಳನ್ನು ಹೊತ್ತುಕೊಂಡು ದೊಡ್ಡ ದಿಗ್ವಿಜಯ ಮಾಡಿದವರಂತೆ ಮನೆ ಸೇರಿದೆವು.

ಆಮೇಲೆ ನಾವು ಆಗಾಗ ಉತ್ತಮೇಶ್ವರಕ್ಕೆ ಹೋಗಿ ಹಿಟ್ಟು ಅಥವಾ ತರಿ ಮಾಡಿಸಿಕೊಂಡು ಬರುತ್ತಿದ್ದೆವು. ಆಗ ನಮಗೆ ಒಂದು ವದಂತಿ ಕಿವಿಗೆ ಬಿತ್ತು. ಅದೇನೆಂದರೆ ಮಿಲ್ಲಿನೊಳಗೆ ಒಂದು ರಹಸ್ಯವಾದ ಸ್ಥಳವಿರುವದಂತೆ. ಪ್ರತಿಯೊಂದು ಮೂಟೆ ಬತ್ತ ಅಕ್ಕಿಯಾಗುವಾಗ ಅದರ ಒಂದು ಭಾಗ ಅಲ್ಲಿಗೆ ಹೋಗಿ ಬೀಳುವದಂತೆ. ಅದು ಮಿಲ್ಲಿನ ಮಾಲೀಕರ  (unaccounted) ಲಾಭವಂತೆ. ಅದರಲ್ಲಿ ಒಂದು ಪಾಲು ಚಾಲಕನಾದ ರಾಮನಿಗೆ ಸೇರುವುದಂತೆ. ಏಕೆಂದರೆ ಅವನೇ ಅದನ್ನು ಕಲೆಕ್ಟ್ ಮಾಡಿ ಮಾಲೀಕರಿಗೆ ಒಪ್ಪಿಸುವುದು. ಮಾತು ಸತ್ಯವೇ ಅಥವಾ ಸುಳ್ಳೇ ಎಂಬುದು ನಮಗೆ ಕೊನೆಗೂ ಗೊತ್ತಾಗಲಿಲ್ಲ.

ಸ್ಕೂಲ್ ಮಾಸ್ಟರ್ ಸಿನಿಮಾ ಮತ್ತು ನಮ್ಮ ಎರಡನೇ ಜಯಪುರ ಪ್ರಯಾಣ
ಆಗಿನ ಕಾಲದಲ್ಲಿ ಬಿ ಆರ್ ಪಂತುಲು ಅವರ ಸ್ಕೂಲ್ ಮಾಸ್ಟರ್ ಸಿನಿಮಾ ತುಂಬಾ ಪ್ರಸಿದ್ದಿ ಪಡೆಯಿತು. ಹಳ್ಳಿ ಜನಗಳೆಲ್ಲ ಪೇಟೆಗೆ ಹೋಗಿ ಅದನ್ನು ನೋಡಿ ಬರುವುದು ಪ್ರಾರಂಭವಾಯಿತು. ನಾನು ಪುಟ್ಟಣ್ಣ ಕೂಡ ಜಯಪುರಕ್ಕೆ ಸಿನಿಮಾ ಬಂದಾಗ ನೋಡಲೇ ಬೇಕೆಂದು ಹಠ ಪ್ರಾರಂಭಿಸಿದೆವು. ನಮ್ಮ ತಂದೆ ಅದಕ್ಕೆ ಏರ್ಪಾಟು ಮಾಡಿದರು. ಅವರ ಪ್ಲಾನ್ ಪ್ರಕಾರ ನಾವಿಬ್ಬರೂ ಗೋಳಿಕಟ್ಟೆಯ ಎತ್ತಿನ ಗಾಡಿಯಲ್ಲಿ ಬಿ ಜಿ ಕಟ್ಟೆ ಎಂಬಲ್ಲಿ ಸೀತಾ ನದಿಯ ಹತ್ತಿರ ಅವರಿಗೆ ಕಾಯ ಬೇಕಿತ್ತು. ಅವರು ಕೊಪ್ಪ ಸಂತೆಯಿಂದ ಹಿಂತಿರುಗಿ ಅಲ್ಲಿಗೆ ಬಂದು ನಮ್ಮನ್ನು ಬಸ್ಸಿನಲ್ಲಿ ಜಯಪುರಕ್ಕೆ ಕರೆದುಕೊಂಡು ಹೋಗಿ ಸಿನಿಮಾ ತೋರಿಸಬೇಕಿತ್ತು.

ಪ್ಲಾನ್ ಪ್ರಕಾರ ನಾವು ಗೋಳಿಕಟ್ಟೆಯ ಎತ್ತಿನ ಗಾಡಿಯಲ್ಲಿ ಕುಳಿತು ಸೀತಾ ನದಿಯ ದಡ ತಲುಪಿದೆವು. ಗಾಡಿ ಹೊಡೆಯುವ ಹಸನ್ ಸಾಬ್ ನಮ್ಮನ್ನು ಅಲ್ಲಿ ಬಿಟ್ಟು ಹತ್ತಿರದಲ್ಲೇ ಇದ್ದ ಕೊಂಡಿಬೈಲ್ ಎಂಬಲ್ಲಿಗೆ ಗಾಡಿಯನ್ನು ತೆಗೆದುಕೊಂಡು ಹೋದರು. ನಾವು ನದಿಯ ದಂಡೆಯಲ್ಲಿ ಕುಳಿತುಕೊಂಡು ತಂದೆಯವರು ಕೊಪ್ಪದಿಂದ ಬರುವುದನ್ನೇ ಕಾಯತೊಡಗಿದೆವು. ಆದರೆ ಎಷ್ಟು ಹೊತ್ತಾದರೂ ತಂದೆಯವರು ಬಾರದೇ ನಾವು ಕಂಗಾಲಾಗಿ ಬಿಟ್ಟೆವು. ನಮ್ಮ ಭಯ ಹೆಚ್ಚುತ್ತಲೇ ಹೋಗಿ ನಾವು ಜೋರಾಗಿ ಅಳಲಾರಂಭಿಸಿದೆವು. ಭೋರ್ಗರೆದು ಹರಿಯುತ್ತಿದ್ದ ಸೀತಾ ನದಿಯ ದಂಡೆಯಲ್ಲಿ ನಮ್ಮದು ಅರಣ್ಯ ರೋದನವಾಗಿ ನಮ್ಮನ್ನು ಕೇಳುವರೇ ಗತಿ ಇಲ್ಲವಾಗಿತ್ತು

ಹೀಗೆ ಸುಮಾರು ಒಂದು ಗಂಟೆ ಕಳೆದ ನಂತರ ನದಿಯ ಆಚೆ ದಡದಿಂದ ಪುರೋಹಿತರ ಒಂದು  ಗುಂಪು ಬರುತ್ತಿರುವುದು ನಮ್ಮ ಕಣ್ಣಿಗೆ ಬಿತ್ತುನಾವು ನೋಡುತ್ತಿದ್ದಂತೆಯೇ ಅವರು ನದಿ ದಾಟಿ ನಮ್ಮೆಡೆಗೆ ಬಂದರು. ಅವರನ್ನು ನೋಡುತ್ತಾ ನಾವು ನಮ್ಮ ರೋದನವನ್ನು ತಾರಕಕ್ಕೇರಿಸಿ ಬಿಟ್ಟೆವು. ಅವರು ನಮ್ಮ ಅಳುವಿಗೆ ಕಾರಣ ಕೇಳಿದಾಗ ನಾವು ನದಿಯಾಚೆ ಕೈ ತೋರಿಸುತ್ತಾ "ಅಪ್ಪಾ ಅಪ್ಪಾ " ಎಂದು ಇನ್ನೂ ಜೋರಾಗಿ ಅಳತೊಡಗಿದೆವು. ಅವರು ಸ್ವಾಭಾವಿಕವಾಗಿ ನಮ್ಮ ತಂದೆ ನದಿಯಲ್ಲಿ ಮುಳುಗಿರಬೇಕೆಂದು ತೀರ್ಮಾನಿಸಿ ನದಿಯತ್ತ ಗಮನಿಸಿದರು. ಅವರಲ್ಲಿ ಈಜು ತಿಳಿದವರಿಬ್ಬರು ನದಿಗೆ ಹಾರಿ ನಮ್ಮ ತಂದೆಯ ಪರಿಶೋಧನೆ ಮಾಡಲೂ ಪ್ರಾರಂಭಿಸಿದರು! ಅಲ್ಲಿ ಏನೂ ಕಾಣದೆ ಪುನಃ ನಮ್ಮ ಹತ್ತಿರ ಕೇಳಿದಾಗ ನಾವು ನಮ್ಮ ತಂದೆ ಕೊಪ್ಪದಿಂದ ಬಾರದಿರುವುದನ್ನು ವಿವರಿಸಿ ಹೇಳಿದೆವು. ಅವರು ನಮ್ಮನ್ನು ತಮ್ಮೊಡನೆ ಕೊಂಡಿಬೈಲಿಗೆ ಕರೆದುಕೊಂಡು ಹೋದರು.ಹಸನ್  ಸಾಬ್ ಅಲ್ಲಿಯೇ ಇದ್ದವರು ನಮಗೆ ಪುನಃ ಗಾಡಿ ಹತ್ತುವಂತೆ ಹೇಳಿದರು. ನಮ್ಮ ತಂದೆಯವರಿಂದ ಅವರಿಗೆ ನಮ್ಮನ್ನು ಅವರೇ ಜಯಪುರಕ್ಕೆ ಕರೆದುಕೊಂಡು ಹೋಗುವಂತೆ ಯಾರ ಮೂಲಕವೋ ಮೆಸೇಜ್ ಬಂದಿತ್ತಂತೆ. ತಂದೆಯವರು ಕಾರಣಾಂತರದಿಂದ ಕೊಪ್ಪದಲ್ಲಿಯೇ ಉಳಿಯ ಬೇಕಾಯಿತಂತೆ.

ಆಮೇಲೆ ನಾವು ತುಂಬಾ ಸಂಭ್ರಮದಿಂದ ಜಯಪುರಕ್ಕೆ ಗಾಡಿ ಪ್ರಯಾಣ ಮುಂದುವರಿಸಿ ಸಿನಿಮಾ ಶುರುವಾಗುವ ಒಳಗೆ ಅಲ್ಲಿಗೆ ತಲುಪಿದೆವು. ಸ್ಕೂಲ್ ಮಾಸ್ಟರ್ ಸಿನಿಮಾ ನಾವೆಣಿಸಿದ್ದಕ್ಕಿಂತಲೂ ತುಂಬಾ ಚೆನ್ನಾಗಿತ್ತು. ಅದರ ಹಾಡುಗಳು ನಮಗೆ ತುಂಬಾ ಇಷ್ಟವಾಗಿ ಅರ್ಧಾಣೆ ಕೊಟ್ಟು ಒಂದು ಪುಸ್ತಕವನ್ನು ಸಿನಿಮಾ ಟೆಂಟ್ನಲ್ಲಿಯೇ ಕೊಂಡುಕೊಂಡೆವು. ಬಿ ಆರ್ ಪಂತುಲು, ಎಂ ವಿ ರಾಜಮ್ಮ, ನರಸಿಂಹರಾಜು,  ಡಿಕ್ಕಿ ಮಾಧವ ರಾವ್ ಹಾಗೂ ಗೆಸ್ಟ್ ಪಾತ್ರದಲ್ಲಿ ಶಿವಾಜಿ ಗಣೇಶನ್ ಅವರ ಪಾತ್ರಗಳು ನಮಗೆ ಇಷ್ಟವಾದವು. ಸಿನಿಮಾ ನೋಡಿದ ನಂತರ ಪುನಃ ಗಾಡಿಯಲ್ಲೇ ನಮ್ಮೂರಿಗೆ ವಾಪಾಸ್ ಬಂದೆವು. ನಮಗೆ  ಅದೊಂದು ಎಂದೂ ಮರೆಯಲಾಗದ ಅನುಭವವಾಗಿತ್ತು.

----ಮುಂದುವರಿಯುವುದು -----

2 comments:

ಹೊಸಮನೆ ವೆಂಕಟೇಶ said...
This comment has been removed by the author.
ಹೊಸಮನೆ ವೆಂಕಟೇಶ said...

ನನಗೆ ವಾಸುವಿನ ಕೈಯಿಂದ ಚೌರ ಮಾಡಿಸಿಕೊಂಡ ನೆನಪಿದೆ.... ಅದೂ ದುಡ್ಡು ಕೊಡದೇ..... ಯಾಕೆಂದರೆ ಅಡೇಖಂಡಿ ಲೆಕ್ಕದಲ್ಲಿ ಅವನಿಗೆ ವರ್ಷಕ್ಕೊಮ್ಮೆ ಅವನಿಗೆ ಅಕ್ಕಿಯನ್ನೋ, ಅಡಿಕೆಯನ್ನೋ ಕೊಡುತ್ತಿತ್ತಲ್ಲ. ಆತ ಪನ್ನವನ್ನು ನಮ್ಮೂರ ಕುಪ್ಪನಿಗಿಂತ ಉದ್ದ ಬಿಡುತ್ತಿದ್ದ. ಅದೇ ನಮಗೆ ಅವನ ಮೇಲೆ ಗೌರವ ಹೆಚ್ಚುವಂತೆ ಮಾಡುತ್ತಿತ್ತು.