Sunday, November 13, 2016

ನನ್ನ ಬಾಲ್ಯ


ಅಧ್ಯಾಯ ೪
ನಮ್ಮಣ್ಣ ಹಿಂದಿ ಭಾಷೆಯನ್ನು ಹೇಗೆ ಕಲಿತರೆಂಬುವ ಪ್ರಶ್ನೆಗೆ ನಮಗೆ ಒಂದು ದಿನ ಉತ್ತರ ಸಿಕ್ಕಿಬಿಟ್ಟಿತು. ನಾವೆಂದೂ ನೋಡದ ವ್ಯಕ್ತಿಯೊಬ್ಬರು ಆದಿನ ನಮ್ಮಮನೆಗೆ ಆಗಮಿಸಿದರು. ಖಾದಿ ಜುಬ್ಬಾ ಹಾಗೂ ಗಾಂಧಿಟೋಪಿ ಧರಿಸಿದ್ದ ವ್ಯಕ್ತಿಯ ಬಗಲಲ್ಲೊಂದು ಚೀಲ ನೇತಾಡುತ್ತಿತ್ತು. ಪಕ್ಕಾ ಗಾಂಧಿವಾದಿಯಂತಿದ್ದ  ಅವರ ವ್ಯಕ್ತಿತ್ವ ನಮಗೆ ತುಂಬಾ ಕುತೂಹಲಕಾರಿಯಾಗಿ ಕಂಡಿತು. ಅವರ ಹೆಸರು ರಘುಪತಿ ಹೆಬ್ಬಾರ್ ಎಂದೂ ಅವರು ಬೆಂಡೆಹಕ್ಕಲು ಎಂಬ ಊರಿನವರೆಂದೂ ತಿಳಿಯಿತು. ಅವರ ಹೆಂಡತಿಯ ತವರುಮನೆ ನಮ್ಮ ಪಕ್ಕದ ಮನೆಯಾದ ನಡುವಿನಮನೆಯಂತೆ. ಅಲ್ಲಿ ವಾಸಮಾಡುತ್ತಿದ್ದ ಫಣಿಯಪ್ಪಯ್ಯ ಎಂಬುವರ ತಂಗಿ ಪುಟ್ಟಮ್ಮ ಎಂಬುವರೇ ಅವರ  ಹೆಂಡತಿಯಂತೆ. ಬೆಂಡೆಹಕ್ಕಲಿನ ಕುಟುಂಬ ಆ ಕಾಲಕ್ಕೆ ನಮ್ಮ ಜನಾಂಗದಲ್ಲೇ ಅತಿದೊಡ್ಡ ಅವಿಭಕ್ತ ಕುಟುಂಬವೆಂದು ಹೆಸರು ಪಡೆದಿತ್ತು.

ಮಾಮೂಲಿನ ಉಭಯ ಕುಶಲೋಪರಿ ಮತ್ತು ಗಂಗೋದಕವಾದ ನಂತರ ನಮ್ಮಣ್ಣ ಅವನ  ಹಿಂದಿ ಪುಸ್ತಕವನ್ನು ಹೊರತೆಗೆದು ಹೆಬ್ಬಾರರ ಕೈಗೆ ಕೊಟ್ಟ. ಅವರು ಅದರಿಂದ ಅವನಿಗೆ ಕಷ್ಟವೆನಿಸಿದ ಕೆಲವು ಪಾಠಗಳನ್ನು ಓದಿ ಅರ್ಥ ಹೇಳತೊಡಗಿದರು. ಅವರು ರೀತಿ ವರ್ಷದಲ್ಲಿ ಎರಡು ಅಥವಾ ಮೂರುಬಾರಿ ನಮ್ಮೂರಿಗೆ ಆಗಮಿಸಿದಾಗ ಅಣ್ಣನಿಗೆ ಹಿಂದಿ ಭಾಷೆಯನ್ನು ಕಲಿಸುವ ಕ್ರಮ ಇಟ್ಟುಕೊಂಡಿದ್ದರು. ಅದೊಂದು ಏಕಲವ್ಯ-ದ್ರೋಣಾಚಾರ್ಯ ಸಂಬಂಧ ಎನ್ನಲೂ ಬಹುದು. ನಮ್ಮಣ್ಣನ ಜ್ಞಾನದಾಹ ಅಷ್ಟಿತ್ತು.

ಆದರೆ ನಮ್ಮ ಹಿಂದಿ ಭಾಷೆ ಕಲಿಯುವಿಕೆ ತುಂಬಾ ವಿಚಿತ್ರ ರೀತಿಯಲ್ಲಿ ಕೊನೆಗೊಂಡಿದ್ದು ಮಾತ್ರಾ ನಮ್ಮ ದುರಾದೃಷ್ಟವೆಂದು ಹೇಳಲೇ ಬೇಕು. ನಾನು ಮತ್ತು ಪುಟ್ಟಣ್ಣ ಕೆಲವುಬಾರಿ (ನಮ್ಮ ಅಣ್ಣ ಹೇಳುತ್ತಿದ್ದಂತೆ) ಶುದ್ಧ ಕಪಿಗಳಂತೆ ವರ್ತಿಸುತ್ತಿದ್ದೆವು. ನಮಗೆ ಕೆಲವು ಪ್ರಸಂಗಗಳಲ್ಲಿ ಸುಖಾಸುಮ್ಮನೆ ಇದ್ದಕ್ಕಿದ್ದಂತೆ ಕಿಟಿಕಿಟಿಯೆಂದು ನಗೆ ಬರುತ್ತಿತ್ತು. ಅದೆಷ್ಟೆಂದರೆ ಅದನ್ನು ತಡೆಯಲು ನಮ್ಮಿಂದ ಸಾಧ್ಯವಾಗುತ್ತಲೇ ಇರಲಿಲ್ಲ. ಅಣ್ಣನ ಭಯ ನಮಗೆ ತುಂಬಾ ಇದ್ದರೂ ಚಾಳಿ ಮಾತ್ರಾ ಮುಂದುವರಿಯುತ್ತಲೇ ಇತ್ತು.

ನಮ್ಮ ಒಂದು ಹಿಂದಿ ಪಾಠದಲ್ಲಿವೋ ಖಾನಾ ಖಾತಾ ಹೈ’ ಎಂಬ ವಾಕ್ಯವಿತ್ತು. ನಮಗೆ ಆಗಲೇ ಖಾನಾ (ಊಟ) ಖಾತಾ (ತಿನ್ನು) ಎಂಬ ಎರಡು ಪದಗಳ ಅರ್ಥ ತಿಳಿದಿತ್ತು. ಹಾಗಾಗಿ ನಾವು ವಾಕ್ಯದ ಅರ್ಥವನ್ನು 'ಅವನು ಊಟವನ್ನು ತಿನ್ನುತ್ತಾನೆ' ಎಂದು ಭಾವಿಸಿ ಜೋರಾಗಿ ಕಿಟಕಿಟನೆ  ನಗಲಾರಂಭಿಸಿದೆವು. ಅಣ್ಣ ಅದರ  ಅರ್ಥವನ್ನುಅವನು ಊಟಮಾಡುತ್ತಾನೆ’ ಎಂದು ಹೇಳುತ್ತಿದ್ದುದನ್ನು ನಾವು ಕಿವಿಯಲ್ಲಿ ಹಾಕಿಕೊಳ್ಳಲೇ ಇಲ್ಲ. ನಮ್ಮ ಪ್ರಕಾರ ಅದುವೋ ಖಾನಾ  (ಊಟ) ಕರ್ತಾ  ಹೈ' ಎಂದಿರಬೇಕಿತ್ತು! ಹಾಗಾಗಿ ನಮ್ಮ ನಗೆಗೆ ಬ್ರೇಕ್ ಹಾಕಲು ನಮಗೆ ಸಾಧ್ಯವಾಗಲೇ ಇಲ್ಲ. ಅಣ್ಣನಿಗೆ ಎಷ್ಟು ಸಿಟ್ಟು ಬಂತೆಂದರೆ ಅವನು ಪುಸ್ತಕವನ್ನು ತೆಗೆದು ನಮ್ಮಮೇಲೆ ಎಸೆದು ಬಿಟ್ಟ. ನಾವೆಂತಹ ಮೂರ್ಖರಾಗಿದ್ದೆವೆಂದರೆ ಅಲ್ಲಿಗೂ ನಮ್ಮ ನಗೆ ನಿಲ್ಲಿಸದೆ ಜಾಗದಿಂದಲೇ ಓಡಿಹೋಗಿ ಬಿಟ್ಟೆವು. ಅಲ್ಲಿಗೆ ಮುಕ್ತಾಯವಾಯಿತು ನಮ್ಮ ಹಿಂದಿ ಮನೆಪಾಠ.
ನಮ್ಮಣ್ಣನ ದೇಶಭಕ್ತಿ
ಆಗಿನ ಕಾಲದ ಎಲ್ಲಾ ಮಲೆನಾಡ ಮನೆಗಳಂತೆ ನಮ್ಮ ಮನೆಯ ಜಗಲಿಯ ಗೋಡೆಯ ಮೇಲೂ ರವಿವರ್ಮನ ಶ್ರೀರಾಮ,ಲಕ್ಷ್ಮಿ ಮತ್ತು ಸರಸ್ವತಿಯ ಫೋಟೋಗಳೊಡನೆ ಶೃಂಗೇರಿಯ ಜಗದ್ಗುರುಗಳ ಹಾಗೂ ಮೈಸೂರಿನ ಮಹಾರಾಜರ ಫೋಟೋಗಳಿದ್ದುವು. ನಮ್ಮಣ್ಣ ಜವಾಹರ್ಲಾಲ್ ನೆಹರೂವಿನ ಒಂದು ದೊಡ್ಡ ಫೋಟೋಗೆ ವಿಶೇಷ ರೀತಿಯ ಫ್ರೇಮ್ ಹಾಕಿಸಿ ಒಂದು ಕಂಬದ ಮೇಲೆ ಹಾಕಿಸಿದ. ಹಾಗೆಯೇ ಸುಭಾಶ್ಚಂದ್ರ ಬೋಸ್ ಅವರ ಒಂದು ಫೋಟೋ ಸಹ ಗೋಡೆಯಮೇಲೆ ಬಂದಿತು. ನಾವೂ  ಸಹ ಅನಕೃ ಅವರ ಅಮರ ಆಗಸ್ಟ್ ಎಂಬ ಕಾದಂಬರಿ ಓದಿ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದೆವು. ನಡುವೆ ಆಗ ಗೋವಾ ಚಳುವಳಿ ನಡೆಯುತ್ತಿತ್ತು. ನಮ್ಮಣ್ಣನ ಮೇಲೆ ಅದು ಎಷ್ಟು ಪ್ರಭಾವ ಬೀರಿತ್ತೆಂದರೆ ಅವನು ಒಂದು ದೊಡ್ಡ ಬ್ಯಾನರ್ ಸ್ವತಃ ತಯಾರಿಸಿದ. ಅದರಲ್ಲಿ ದೊಡ್ಡ ಅಕ್ಷರಗಳಲ್ಲಿ "ಪೋರ್ಚುಗೀಸರೇ ಗೋವಾವನ್ನು ಬಿಟ್ಟು ಹೊರಡಿರಿ" ಎಂದು ಬರೆದಿತ್ತು. ಬ್ಯಾನರ್ ಅನ್ನು ನಮ್ಮ ಮನೆಯ ಓಣಿಯಲ್ಲಿದ್ದ ಬೇಲಿಯ ಮೇಲೆ ಕಟ್ಟಲಾಯಿತು. ಅದೆಷ್ಟೋ ದಿನ ಬ್ಯಾನರ್ ಬೇಲಿಯ ಮೇಲೆ ನೇತಾಡುತ್ತಾ ಓಡಾಡುವರ ಗಮನ ಸೆಳೆಯುತ್ತಿತ್ತು.
ರುಕ್ಮಿಣಕ್ಕ ಎಂಬ ಶಿಸ್ತಿನ ಸಿಪಾಯಿ
ನಮ್ಮ ಅಮ್ಮನಿಗೆ ಅವಳ ದೈನಂದಿನ ಕೆಲಸಗಳೇ ಕೈ ತುಂಬಾ ಇದ್ದುದರಿಂದ ನಮ್ಮ ಕಡೆ ವಿಶೇಷ ಗಮನ ಕೊಡಲಾಗುತ್ತಿರಲಿಲ್ಲ. ನಾವು ಆ ಸಂದರ್ಭವನ್ನು ಬಳಸಿಕೊಂಡು ವಿವಿಧ ಚೇಷ್ಟೆಗಳಲ್ಲಿ ನಮ್ಮ ಕಾಲ ಕಳೆಯತೊಡಗಿದೆವು. ನಮ್ಮ ತಂಟೆ ತಡೆಯಲಾರದೆ ಅಮ್ಮ ನಮ್ಮ ದೈನಂದಿನ ಜವಾಬ್ದಾರಿಯನ್ನು ನಮ್ಮ ಎರಡನೇ ಅಕ್ಕನಾದ ರುಕ್ಮಿಣಕ್ಕನಿಗೆ ವಹಿಸಿದಳು. ಅಲ್ಲಿಂದ ನಮ್ಮ ಮೇಲೆ ಕಠೋರ ಶಿಸ್ತಿನ ಆಡಳಿತ ಪ್ರಾರಂಭವಾಯಿತು. ಅಕ್ಕ  ಬೆಳಿಗ್ಗೆ ಎದ್ದು ಹಲ್ಲುಜ್ಜುವಿಕೆಯಿಂದ ಹಿಡಿದು ಸ್ನಾನ, ಬಟ್ಟೆಬರೆಗಳ ಸಮೇತ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತಳು ಮಾತ್ರವಲ್ಲ. ನಮಗೆ ಕೆಲವು ವಿಶಿಷ್ಟವಾದ ಮನೆಕೆಲಸಗಳನ್ನೂ ಮಾಡುವ ಜವಾಬ್ದಾರಿಯನ್ನೂ ಹೊರಿಸಿಬಿಟ್ಟಳು. ಅದರಲ್ಲಿ ಮುಖ್ಯವಾದವೆಂದರೆ ಮನೆಯನ್ನು ಗುಡಿಸುವುದು, ಊಟಕ್ಕೆ ಎಲೆ ಹಾಕುವುದು, ತೋಟದಿಂದ ಬಾಳೆ ಹಂಬೆ ಮತ್ತು ಅಡಿಕೆ ಹೊಂಬಾಳೆ ತರುವುದು (ಜಾನುವಾರುಗಳು ತಿನ್ನಲು), ದೇವರಿಗೆ ಹೂವು ಕೊಯ್ಯುವುದು, ದೇವರ ಪೂಜೆ ಮಾಡುವುದು, ಭಜನೆ ಮಾಡುವುದು, ವೀಳ್ಯದೆಲೆ ಕೌಳಿಗೆ ಮಾಡುವುದು, ಅಡಿಕೆ ಸುಲಿಯುವುದು, ಇತ್ಯಾದಿ. ಅವಳೇ ಸ್ವತಃ ನಮಗೆ ಸ್ನಾನ ಮಾಡಿಸತೊಡಗಿದಳು. ಸ್ನಾನಕ್ಕೆ ಆಗ ಸೀಗೆಕಾಯಿ ಪುಡಿಯನ್ನು ಬಳಸಲಾಗುತ್ತಿತ್ತು. ಅಕ್ಕ ನಮಗೆ ಕಣ್ಣಲ್ಲಿ ನೀರುಬರುವಷ್ಟು ಜೋರಾಗಿ ಸೀಗೆ ಪುಡಿಯಿಂದ ತಿಕ್ಕುತ್ತಿದ್ದುದು ನೆನಪಾಗುತ್ತದೆ. ಅದರಲ್ಲೂ ನನ್ನ ಚರ್ಮ ಸ್ವಲ್ಪ ಜಾಸ್ತಿ ಕಪ್ಪಗಿದ್ದರಿಂದ ಅದನ್ನು ಬೆಳ್ಳಗೆ ಮಾಡಬೇಕೆಂದು ವಿಶೇಷ ಶ್ರಮವಹಿಸಿ ತಿಕ್ಕುತ್ತಿದ್ದಳೆಂದು ಕಾಣುತ್ತದೆ. ಆದರೆ ನನ್ನ ಚರ್ಮದ ಬಣ್ಣದಲ್ಲಿ ಯಾವುದೇ ವಿಶೇಷ ಬದಲಾವಣೆ ಕಂಡುಬರದಿದ್ದು ನನ್ನ ದುರಾದೃಷ್ಟವೆನ್ನಲೇಬೇಕು!
ನಮ್ಮಣ್ಣನ ಹೂವಿನತೋಟ
ನಮ್ಮಣ್ಣನಿಗೆ ಇದ್ದಕಿದ್ದಂತೆ ಒಂದು ಹೂವಿನತೋಟ ಮಾಡಬೇಕೆಂಬ ಹುಚ್ಚು ಹಿಡಿಯಿತು. ಅದಕ್ಕಾಗಿ ನಮ್ಮ ದನದ ಕೊಟ್ಟಿಗೆಯ ಪಕ್ಕದಲ್ಲಿ ಒಂದು ಜಾಗಕ್ಕೆ ಸುತ್ತಾ ಬೇಲಿಹಾಕಲಾಯಿತು. ಅದರೊಂದಿಗೆ ನಮಗೊಂದು ಹೊಸ ಕೆಲಸ ಅಂಟಿಕೊಂಡಿತು. ಅಣ್ಣನ ಆಜ್ಞೆಯಂತೆ ನಾವಿಬ್ಬರೂ (ನಾನು ಮತ್ತು ಪುಟ್ಟಣ್ಣ) ಜಾಗದಲ್ಲಿದ್ದ ಕಳೆ ಕೀಳುವ ಕೆಲಸ ಪ್ರಾರಂಭಿಸಿದೆವು. ಕಳೆ ಕೀಳುವುದೇನು ಅಂತಹ ಸುಲಭದ ಕೆಲಸವಲ್ಲಅದರಲ್ಲೂ ತುಂಬಾ ಆಳವಾಗಿ ಬೇರುಬಿಟ್ಟ ಕಳೆಗಳನ್ನು  ಕೀಳುವಾಗ ಎಷ್ಟೋಬಾರಿ ಕೈಬೆರಳಿಗೆ ಗಾಯವಾಗುತ್ತಿತ್ತು. ಇನ್ನು ನಾಚಿಕೆಮುಳ್ಳು ಎಂಬ ಕಳೆಯನ್ನು ಕೀಳುವಾಗಲಂತೂ  ಕೈಬೆರಳಿನಿಂದ ರಕ್ತ ಸುರಿಯುತ್ತಿತ್ತು ಕಳೆಯ ವಿಶೇಷವೆಂದರೆ ಅದರ ಎಲೆಗೆ ಕೈ ಸ್ಪರ್ಶವಾದೊಡನೆ ಅದು ಒಂದು ಹೆಣ್ಣಿನಂತೆ ನಾಚಿಕೆಗೊಂಡು ಮುದುಡಿಕೊಂಡು ಬಿಡುತ್ತಿತ್ತು. ಇನ್ನೂ ಕೈಬಿಡದೆ ಕೀಳಲು ಹೋದರೆ ಕೋಪಗೊಂಡ ಹೆಣ್ಣಿನಂತೆ ಮುಳ್ಳು ಕೈಗೆ ಚುಚ್ಚಿ ಬಿಡುತ್ತಿತ್ತು! ನಡುನಡುವೆ ನಮ್ಮಣ್ಣನಕ್ವಾಲಿಟಿ ಇನ್ಸ್ಪೆಕ್ಷನ್’ ಬೇರೆ ಎದುರಿಸ ಬೇಕಿತ್ತು. ಒಟ್ಟಿನಲ್ಲಿ ತುಂಬಾ ಶ್ರಮವಹಿಸಿ ಇಡೀ ತೋಟದ ಕಳೆಯನ್ನು ಕಿತ್ತು ಬಿಟ್ಟೆವು.

ನಮ್ಮಣ್ಣ ಬೇರೆಬೇರೆ ಕಡೆಗಳಿಂದ ಹೂವಿನ ಗಿಡಗಳನ್ನು ತಂದು ನೆಡಲಾರಂಭಿಸಿದ. ಬಹುಬೇಗನೆ ನಮ್ಮಣ್ಣನ ಹೂವಿನತೋಟ ದೊಡ್ಡದಾಗಿ ಬೆಳೆಯಿತು. ಅದರಲ್ಲೂ ಅವನು ನೆಟ್ಟ ವಿವಿಧ ಬಗೆಯ ಕಮಲದ  (ಡೇಲಿಯ) ಹೂವುಗಳು ಅತ್ಯಂತ ಸುಂದರವಾಗಿ ಕಾಣುತ್ತಾ ಗಮನ ಸೆಳೆಯ ತೊಡಗಿದವು. ಅದನ್ನು ವೀಕ್ಷಿಸಲು ಊರಿನ ಜನರೆಲ್ಲಾ ಬರಲಾರಂಭಿಸಿದರು. ಬಂದವರೆಲ್ಲಾ ನಮ್ಮಣ್ಣನ ಹೂದೋಟದ ಸೌಂದರ್ಯವನ್ನು ಹೊಗಳುತ್ತಿದ್ದುದು ಮಾತ್ರವಲ್ಲ ಅವನ "ಕೈಗುಣವನ್ನೂ" ಹೊಗಳತೊಡಗಿದರುಆದರೆ ನಮ್ಮ ಕೈಬೆರಳುಗಳಿಗಾದ ಗಾಯಗಳ ಬಗ್ಗೆ ವಿಚಾರಿಸುವರೇ ಇರಲಿಲ್ಲ! ಇಷ್ಟಲ್ಲದೆ ನಮಗೆ ಹೂದೋಟದ ಕಳೆಯನ್ನು ಆಗಾಗ ಕೀಳುತ್ತಿರುವ ಜವಾಬ್ದಾರಿ ಶಾಶ್ವತವಾಗಿ ಅಂಟಿಕೊಂಡು ಬಿಟ್ಟಿತು!
ನಾಲಿಗೆ  ಇಲ್ಲದ ಮನುಷ್ಯ!
ನಮ್ಮ ತಂದೆಯವರು ತಮ್ಮ ಮಾತಿನಂತೆ ನಡೆಯದವರಿಗೆನಾಲಿಗೆ  ಇಲ್ಲದ ಮನುಷ್ಯ’ ಎಂದು ಬಯ್ಯುವುದನ್ನು  ನಾನು ಹಲವುಬಾರಿ ಕೇಳಿದ್ದೆ. ಆದರೆ ಒಂದು ಬಾರಿ ನನಗೆ ನಿಜವಾಗಿ ನಾಲಿಗೆ  ಇಲ್ಲದ ಮನುಷ್ಯನನ್ನು ನೋಡುವ ಪ್ರಸಂಗ ಬಂದುಬಿಟ್ಟಿತು. ನಮ್ಮ ಮನೆಗೆ ನಾಲ್ಕು ಮಂದಿ ಪರಊರಿನವರು ಬಂದಿದ್ದರು. ಅವರಲ್ಲಿ ಮೂರುಮಂದಿ ತುಂಬಾ ಗಟ್ಟಿಯಾಗಿ ಮಾತನಾಡುತ್ತಿದ್ದರೆ ಒಬ್ಬನು ಮಾತ್ರಾ ತುಟಿಪಿಟಕ್ ಎನ್ನಲಿಲ್ಲ. ಅವನನ್ನೇ ಗಮನಿಸುತ್ತಿದ್ದ ನನಗೆ ಅವನಿಗೆ ಏನೋ ಸಮಸ್ಯೆ ಇರಬೇಕೆನ್ನಿಸಿತು. ಅವರು ಹೊರಟುಹೋದಮೇಲೆ ನಾನು ಪುಟ್ಟಣ್ಣನೊಡನೆ ಆಬಗ್ಗೆ ವಿಚಾರಿಸಿದೆ. ಅದಕ್ಕೆ ಅವನು ಹೇಳಿದ ಕಾರಣ ಕೇಳಿ ನನಗೆ ತುಂಬಾ ಭಯವಾಯಿತು. ಅವನ ಪ್ರಕಾರ ಮನುಷ್ಯನಿಗೆ ನಾಲಿಗೆಯನ್ನು ಹಲ್ಲುಗಳ ನಡುವೆ ಇಟ್ಟುಕೊಂಡು ಓಡಾಡುವ ಅಭ್ಯಾಸವಿತ್ತಂತೆ. ಒಮ್ಮೆ ಹಾಗೆ ಹೋಗುವಾಗ ಎಡವಿ ಬಿದ್ದುಬಿಟ್ಟನಂತೆಆಗ ಅವನ ನಾಲಿಗೆ ಕತ್ತರಿಸಿ ಹೊರಗೆ ಹೋಗಿ ಬಿದ್ದಿತಂತೆ! ಅಂದಿನಿಂದ ಅವನು ಮಾತಾಡುವುದನ್ನೇ ನಿಲ್ಲಿಸಬೇಕಾಯಿತಂತೆ! ಪುಟ್ಟಣ್ಣ ಆಬಗ್ಗೆ ಹುಷಾರಾಗಿರಬೇಕೆಂದು ನನಗೆ ಎಚ್ಚರಿಕೆಯನ್ನೂ ಕೊಟ್ಟುಬಿಟ್ಟ. ನನಗೆ ಆಮೇಲೆ ನಾಲಿಗೆಯನ್ನು ಹಲ್ಲಿನ ಹತ್ತಿರ ತರಲೂ ಭಯವಾಗತೊಡಗಿತು. ಅಷ್ಟಲ್ಲದೇ ನನ್ನ ನಾಲಿಗೆಯೂ ಕತ್ತರಿಸಿಹೋದಂತೆ ಒಂದು ಕನಸೂ ಬಿದ್ದಿತು! ವಿಚಿತ್ರವೆಂದರೆ ಮತ್ತೊಂದು ವರ್ಷದ ನಂತರ ಅದೇ ನಾಲ್ಕುಮಂದಿ ನಮ್ಮ ಮನೆಗೆ ಪುನಃ ಬಂದಿದ್ದರು. ಬಾರಿ ನಾಲಿಗೆಯಿಲ್ಲದ ಮನುಷ್ಯ ಬಾಯಿತುಂಬಾ ಮಾತಾಡತೊಡಗಿದ! ಪುಟ್ಟಣ್ಣನ ಹತ್ತಿರ ಬಗ್ಗೆ ಕೇಳಿದಾಗ ಸರಿಯಾದ ಉತ್ತರ ಬರಲೇ ಇಲ್ಲ!
----ಮುಂದುವರಿಯುವುದು ---
      



1 comment:

ಹೊಸಮನೆ ವೆಂಕಟೇಶ said...

ನನ್ನ ಬಾಲ್ಯದ 'ಅಡೇಖಂಡಿ' ಎಂಬ ಸುಂದರ ಅಧ್ಯಾಯವನ್ನು ನೆನಪಿಸುತ್ತಿದೆ.......