ನಮ್ಮ ಕಾಲದ ಪಠ್ಯಪುಸ್ತಕಗಳು
ಅಧ್ಯಾಯ ೬
ನಮ್ಮ ಪಠ್ಯಪುಸ್ತಕದಲ್ಲಿದ್ದ
ಪದ್ಯಗಳಲ್ಲಿ ನಮ್ಮಮನಸ್ಸಿನ ಮೇಲೆ ಅತ್ಯಂತ ಪರಿಣಾಮ ಬೀರಿದ ಪದ್ಯವೆಂದರೆ ಕೋಳೂರು ಕೊಡಗೂಸು ಎಂಬ ಸ್ವಾರಸ್ಯಕರವಾದ
ಕಥೆಯ ಒಂದು ಪದ್ಯವೆಂದು ಹೇಳಲೇ ಬೇಕು. ಅಜ್ಞಾತ ಕವಿಯೊಬ್ಬನು
ಬರೆದ ಈ ಪದ್ಯ ಕೋಳೂರು ಎಂಬ ಊರಿನಲ್ಲಿದ್ದ ಅರ್ಚಕನೊಬ್ಬನ ಇನ್ನೂ ಎಳೆಯ ವಯಸ್ಸಿನ ಕನ್ಯೆಯೊಬ್ಬಳನ್ನು
(ಕೊಡಗೂಸು) ಕುರಿತಾದದ್ದು.
ಕೋಳೂರು
ಎಂಬ ಊರಿನಲ್ಲಿ ಒಂದು ಶಿವಮಂದಿರವಿದ್ದು. ಅದರ ಅರ್ಚಕನು ಹತ್ತಿರವೇ ಇದ್ದ ಮನೆಯೊಂದರಲ್ಲಿ ವಾಸಿಸುತ್ತಿರುತ್ತಾನೆ.
ದೇವಾಲಯದ ನಡುವೆ ದೊಡ್ಡದಾದ ಶಿವಲಿಂಗವಿದ್ದು, ಅದಕ್ಕೆ ಕಲ್ಲಿನಾಥ ಎಂಬ ಹೆಸರಿನಿಂದಲೂ ಪೂಜೆ ಸಲ್ಲಿಸಲಾಗುತ್ತಿರುತ್ತದೆ. ಅರ್ಚಕನು
ದಿನನಿತ್ಯವೂ ಬೆಳಿಗ್ಗೆ ಹಸುವಿನ ಹಾಲು ಕರೆದು ಅದನ್ನು ಲಿಂಗಕ್ಕೆ ಎರೆದು ಪೂಜೆ ಮಾಡುವ ಕ್ರಮವಿಟ್ಟುಕೊಂಡಿರುತ್ತಾನೆ.
ಒಂದು ದಿನ
ಅರ್ಚಕನಿಗೆ ತನ್ನ ಪತ್ನಿಯೊಡನೆ ಬೇರೊಂದು ಊರಿಗೆ ಸ್ವಲ್ಪ ದಿನ ಹೋಗಲೇಬೇಕಾದ ಪರಿಸ್ಥಿತಿ ಬರುತ್ತದೆ.
ಅವನು ತನ್ನ ಎಳೇ ವಯಸ್ಸಿನ ಪ್ರೀತಿಯ ಮಗಳನ್ನು ಕರೆದು, ತಾವಿಬ್ಬರೂ ಹಿಂದಿರುಗುವವರೆಗೆ ನಿತ್ಯವೂ ತಪ್ಪದೇ
ಕಲ್ಲಿನಾಥನ ಪೂಜೆಯನ್ನು ಕ್ಷೀರಾಭಿಷೇಕ ಮಾಡಿ ನಡೆಸಬೇಕೆಂದು ಹೇಳುತ್ತಾನೆ. ಹಾಗೆಯೇ ಮನೆಯನ್ನೆಂದೂ
ಬಿಟ್ಟುಹೋಗದೆ ಬೇರೆ ಮಕ್ಕಳೊಡನೆ ಆಡಲು ಕೂಡ ಹೋಗದೆ ಕೇವಲ ಶಿವನ ಪೂಜೆಯತ್ತ ಗಮನಕೊಡಬೇಕೆಂದು ಹೇಳುತ್ತಾನೆ. ತಾನು ಹಿಂತಿರುಗಿ
ಬರುವಾಗ ಅವಳಿಗೆ ಚೆಂದದ ಓಲೆ, ಮೂಗುತಿ, ಕಾಲಕಡಗ, ಬಣ್ಣದ ಸರ, ತೋಳಬಂಧಿ, ಇತ್ಯಾದಿ ಆಭರಣಗಳನ್ನು ತರುವುದಲ್ಲದೆ,
ಮಕ್ಕಳು ಆಡುವಂತಹ ಕೀಲುಬೊಂಬೆಯನ್ನು ಕೂಡ ತರುವುದಾಗಿ ವಚನ ನೀಡುತ್ತಾನೆ.
ಮಾರನೇ ದಿನ
ಬೆಳಿಗ್ಗೆ ಬೇಗನೆ ಎದ್ದ ಕೊಡಗೂಸು ಸ್ನಾನ ಮಾಡಿ ಹಸುವಿನ ಹಾಲನ್ನು ಕರೆದು ಕುದಿಸಿ ಒಂದು ಬಟ್ಟಲಲ್ಲಿ
ಹಾಕಿಕೊಂಡು ಅದನ್ನು ಸೀರೆಯ ಸೆರಗಿನಲ್ಲಿ ಮುಚ್ಚಿಕೊಂಡು ದೇವಾಲಯ ತಲುಪುತ್ತಾಳೆ. ಅಲ್ಲಿ ಹಾಲಿನ ಬಟ್ಟಲನ್ನು
ಶಿವಲಿಂಗದ ಮುಂದಿಟ್ಟು ಅದನ್ನು ಸೇವನೆ ಮಾಡುವಂತೆ ಪ್ರಾರ್ಥಿಸುತ್ತಾಳೆ. ಶಿವನಿಗೆ
ಹಾಲನ್ನು ಸೇವಿಸಲು ಸ್ವಲ್ಪ ಸಮಯ ಬೇಕಾಗುವುದೆಂದು, ಕೊಡಗೂಸು ಸ್ವಲ್ಪ ಹೊತ್ತು ಹೊರಗಡೆ ಇದ್ದು ಪುನಃ
ಒಳಗೆ ಬಂದು ನೋಡುತ್ತಾಳೆ. ಆದರೆ ಬಟ್ಟಲಿನ ಹಾಲು ಮೊದಲಿನಂತೆ ಇರುವುದನ್ನು ನೋಡಿ ತುಂಬಾ ಬೇಸರ ಪಡುತ್ತಾಳೆ. ಶಿವನು ತಾನಿಟ್ಟ ಹಾಲನ್ನು ಸೇವಿಸದಿರುವುದಕ್ಕೆ ತನ್ನಿಂದ
ಏನೋ ಅಪಚಾರ ನಡೆದಿರಬೇಕೆಂದು ಭಾವಿಸಿ ಬಗೆಬಗೆಯಾಗಿ ತನ್ನಿಂದಾದ ತಪ್ಪನ್ನು ತಿಳಿಸಿಸಬೇಕೆಂದು ಕೋರಿಕೊಳ್ಳುತ್ತಾಳೆ.
(ಹಾಲು ಕಾದಿಲ್ಲವೇ?, ಪರಿಮಳವಿಲ್ಲವೇ? ಹೆಚ್ಚು ಬಿಸಿಯಾಗಿದೆಯೇ? ಒಡೆದುಹೋಗಿದೆಯೇ? ತುಪ್ಪವನ್ನು ಸೇರಿಸಿಲ್ಲವೆಂದು ಬೇಸರವೇ?ಅಥವಾ
ಕುಡಿಯುವ ವೇಳೆಯಾಗಿಲ್ಲವೇ? ಅಥವಾ ತುಂಬಾ ತಡವಾಯಿತೇ? ನಾನಿನ್ನೂ ಚಿಕ್ಕವಳಾದ್ದರಿಂದ ನೈವೇದ್ಯ ನೀಡಲು
ಅನರ್ಹಳೇ?)
ಬಾಲಿಕೆಯ
ಮುಗ್ಧ ಮನಸ್ಸು, ತಲ್ಲೀನತೆ, ಭಕ್ತಿ ಮತ್ತು ಪರಿಶುದ್ಧತೆಯನ್ನು ನೋಡಿ ಬೆರಗಾದ
ಶಿವನು ಲಿಂಗದಿಂದ ಹೊರಬಂದು ಪ್ರತ್ಯಕ್ಷನಾಗಿ ಬಟ್ಟಲಿನಲ್ಲಿದ್ದ ಹಾಲನ್ನು ಸೇವಿಸಿ ಅಂತರ್ಧಾನಗೊಳ್ಳುತ್ತಾನೆ. ಬಾಲಿಕೆಯ
ಸಂತೋಷಕ್ಕೆ ಮಿತಿ ಇರುವುದಿಲ್ಲ. ಆಮೇಲಿನ ಪ್ರತಿನಿತ್ಯವೂ ಬಾಲಿಕೆ ತಂದ ಹಾಲನ್ನು ಶಿವನು ಅವಳ ಮುಂದೆ ಪ್ರತ್ಯಕ್ಷನಾಗಿ ಸೇವಿಸುತ್ತಾನೆ.
ಸ್ವಲ್ಪ
ದಿನಗಳಲ್ಲೇ ಊರಿಗೆ ಹಿಂದಿರುಗಿದ ಅರ್ಚಕನು ಬಾಲಿಕೆಯೊಡನೆ ನಿತ್ಯವೂ ಶಿವನಿಗೆ ಹಾಲೆರೆಯುತ್ತಿದ್ದೆಯೇ ಎಂದು ಪ್ರಶ್ನಿಸುತ್ತಾನೆ. ಆಕೆ ತುಂಬಾ ಸಂಭ್ರಮದಿಂದ ತಾನು
ನಿತ್ಯವೂ ಕಲ್ಲಿನಾಥನಿಗೆ ಹಾಲಿನ ಸೇವೆ ಸಲ್ಲಿಸಿದುದಾಗಿ ಹೇಳುತ್ತಾಳೆ. ಹಾಗೆಯೇ ಶಿವನು ತನ್ನ ಮುಂದೆ ಪ್ರತ್ಯಕ್ಷನಾಗಿ ಬಟ್ಟಲಿನ ಹಾಲನ್ನು ಸೇವಿಸುತ್ತಿದ್ದನೆಂದು
ಹೇಳುತ್ತಾಳೆ. ಅರ್ಚಕನು ನಂಬಲಾರದ ಅವಳ ಮಾತನ್ನು ಕೇಳಿ,
ಆಕೆ ನಿತ್ಯ ಅರ್ಚನೆ ಮಾಡದೇ ತನ್ನ ಮುಂದೆ ಸುಳ್ಳನ್ನು ಹೇಳುತ್ತಿದ್ದಾಳೆಂದು ಭಾವಿಸುತ್ತಾನೆ. ಅವನು
ತಾನಿಲ್ಲದಾಗ ಶಿವನ ನಿತ್ಯ ಪೂಜೆ ನಡೆದಿಲ್ಲವೆಂದು ಭಾವಿಸಿ ತುಂಬಾ ಕೋಪದಿಂದ ಬಾಲಿಕೆಗೆ ಬಯ್ಯತೊಡಗುತ್ತಾನೆ. ಆದರೆ ಬಾಲಿಕೆ
ತಾನು ನಿಸ್ಸಂದೇಹವಾಗಿ ನಿತ್ಯವೂ ಶಿವನಿಗೆ ಹಾಲೆರೆದುದು ಮತ್ತು ಅವನು ಪ್ರತ್ಯಕ್ಷನಾಗಿ ಅದನ್ನು ಸೇವಿಸಿದುದೂ
ನಿಜವೆಂದು ಪುನಃ ಪುನಃ ಹೇಳುತ್ತಾಳೆ.
ಅವಳ ತಂದೆ
ಅದನ್ನು ತಾನೇ ಪರೀಕ್ಷಿಸಿ ನೋಡುವುದಾಗಿ ಹೇಳಿ ಮಾರನೇ ದಿನ ಅವಳಿಗೆ ಹಾಲನ್ನು ತೆಗೆದುಕೊಂಡು ಹೋಗುವಂತೆ
ಹೇಳಿ ಅವಳ ಹಿಂದೆ ಶಿವಾಲಯಕ್ಕೆ ಹೋಗಿ ಬಾಗಿಲ ಹಿಂದೆ ಅಡಗಿಕೊಳ್ಳುತ್ತಾನೆ. ಕೊಡಗೂಸು ಮಾಮೂಲಿನಂತೆ
ಹಾಲಿನ ಬಟ್ಟಲನ್ನು ಶಿವಲಿಂಗದ ಮುಂದಿಟ್ಟು ಹಾಲನ್ನು ಸೇವಿಸುವಂತೆ ಪ್ರಾರ್ಥಿಸುತ್ತಾಳೆ. ಅರ್ಚಕನು
ತನ್ನ ಮಗಳು ಖಂಡಿತವಾಗಿ ಸುಳ್ಳು ಹೇಳಿದ್ದಾಳೆಂದು ಭಾವಿಸಿ ಹಿಂದಿನಿಂದ ನೋಡುತ್ತಲೇ ಇರುತ್ತಾನೆ. ಆದರೆ
ಬಾಲಿಕೆ ಎಷ್ಟು ಬೇಡಿಕೊಂಡರೂ ಶಿವನು ಮಾಮೂಲಿನಂತೆ
ಪ್ರತ್ಯಕ್ಷನಾಗಿ ಹಾಲನ್ನು ಸೇವಿಸುವುದೇ ಇಲ್ಲ. ಅರ್ಚಕನ ಕೋಪ ಮಿತಿ ಮೀರಿ ಹೋಗಿ ಅವನು ಮಗಳು ಶಿವನಿಗೆ ಹಾಲನ್ನೀಯದಿದ್ದುದು ಮಾತ್ರವಲ್ಲ,
ಸುಳ್ಳನ್ನೂ ಹೇಳಿದ್ದಾಳೆಂದು ಅವಳನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಗುತ್ತಾನೆ. ಬಾಲಿಕೆಯು
ಅವನಿಂದ ತಪ್ಪಿಸಿಕೊಂಡು ಓಡುತ್ತಾ ಶಿವಲಿಂಗವನ್ನು ಕೈಗಳಲ್ಲಿ ಅಪ್ಪಿಕೊಂಡು ತನ್ನನ್ನು ಕೋಪಿಷ್ಠ ತಂದೆಯ
ಕೈಯಿಂದ ತಪ್ಪಿಸುವಂತೆ ಕೇಳಿಕೊಳ್ಳುತ್ತಾಳೆ.
ಅರ್ಚಕನು
ನೋಡುತ್ತಿದ್ದಂತೆಯೇ, ಶಿವನು ಲಿಂಗದಿಂದ ಪ್ರತ್ಯಕ್ಷನಾಗಿ, ಕೊಡಗೂಸಿನ ಕೈ ಹಿಡಿದು ಅವಳೊಡನೆ ಲಿಂಗದೊಳಗೈಕ್ಯನಾಗತೊಡಗುತ್ತಾನೆ. ತಂದೆಗೆ
ತನ್ನ ಕಣ್ಣುಗಳನ್ನೇ ನಂಬಲಾಗುವುದಿಲ್ಲ. ತನ್ನ ಮುದ್ದಿನ ಮಗಳು ಸುಳ್ಳು ಹೇಳಿರಲಿಲ್ಲವೆಂದು ತಿಳಿದು
ಅವನು ಪಶ್ಚಾತ್ತಾಪಗೊಳ್ಳುತ್ತಾನೆ. ಅವನು ಆಘಾತದಿಂದ ಹೊರಬರುವಷ್ಟರಲ್ಲಿ ಮಗಳು ಲಿಂಗದೊಳಗೆ
ಐಕ್ಯಗೊಳ್ಳುತ್ತಿರುವುದು ಗೋಚರಿಸಿ ಕೇವಲ ಅವಳ ತಲೆ ಮಾತ್ರ ಸ್ವಲ್ಪ ಹೊರಗೆ ಕಾಣುತ್ತಿರುತ್ತದೆ. ಅವನು
ವೇಗವಾಗಿ ಹೋಗಿ ಅವಳ ಜಡೆಯನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಅದನ್ನುಳಿದ ಆಕೆಯ ದೇಹವೆಲ್ಲ ಲಿಂಗದೊಳಗೆ
ಅದೃಶ್ಯವಾಗಿಬಿಟ್ಟಿರುತ್ತದೆ. ಮಹಾಶಿವನು ತನ್ನ ಮುಗ್ಧ ಪ್ರೀತಿಯ ಭಕ್ತೆಯನ್ನು ತನ್ನ
ಕೈಲಾಸ ಲೋಕಕ್ಕೆ ಕೊಂಡೊಯ್ದುಬಿಟ್ಟಿರುತ್ತಾನೆ. ಮಗಳ ಜಡೆ ಮಾತ್ರ ತಂದೆಯ ಕೈಯಲ್ಲಿ ಉಳಿದಿರುತ್ತದೆ. ಈ ಸಮಾಚಾರ
ಬಲುಬೇಗನೆ ಊರಿನಲ್ಲೆಲ್ಲಾ ಹರಡಿ ಜನರು ಗುಂಪಾಗಿ ಪವಾಡದಂತೆ ಲಿಂಗದ ಹೊರಗೆ ಕಾಣುತ್ತಿದ್ದ ಕೊಡಗೂಸಿನ
ಜಡೆಯನ್ನು ವೀಕ್ಷಿಸಲು ಬರುತ್ತಾರೆ. ವಿಚಿತ್ರವೆಂದರೆ ಕೊಡಗೂಸಿನ ಜಡೆಯು ಒಬ್ಬ ಜೀವಂತ ಬಾಲಿಕೆಯ ಜಡೆಯಂತೆ ಬೆಳೆದು ಹೊರಗೆ ಬರುತ್ತಿರುತ್ತದೆ. ಊರಿನ ಜನರೆಲ್ಲಾ ಸೇರಿ ಪ್ರತಿವರ್ಷವೂ
ಕೊಡಗೂಸು ಲಿಂಗದೊಳಗೆ ಐಕ್ಯಗೊಂಡ ದಿನ ಜಾತ್ರೆಯೊಂದನ್ನು ನಡೆಸುತ್ತಾರೆ. ಕೊಡಗೂಸಿನ
ಕಥೆ ಒಂದು ದಂತಕಥೆಯಾಗಿಬಿಡುತ್ತದೆ.
ನನಗೆ ನೆನಪಿರುವ
ಪದ್ಯದ ಮೊದಲ ಭಾಗ ಕೆಳಕಂಡಂತಿದೆ:
ಒಂದು ದಿವಸಂ
ದೇವಕಾರ್ಯಕ್ಕೆಂದು ನೆರೆವೂರಿಂಗೆ ಪೋಗುತೆ
ತಂದೆ ತನ್ನಯ
ಕಿರಿಯಮಗಳಂ ಕರೆದು ಮೈದಡವಿ
ಮಂದಿರದ
ಕಾಪಿರಿಸಿ ಮತ್ತಿಂತೆಂದನೆಲ್ಲಿಗು ಮಿಸುಕದಿರು
ಮನೆಯಿಂದಗಲದಿರು
ತರುವಲಿಗಳನೊಡದಾಡದಿರು ತಾಯೆ
ನಿರುತವಾದೆಮ್ಮ
ವ್ರತವನಂತರಿಸದೊಬ್ಬಳೆ ಹಾಲನಗಜಾವರನ
ನಿಲಯಕ್
ಒಯ್ದು ಶಂಭುವಿಗೂಣಬಡಿಸು ಕಂದ
ಪರಿವಿಡಿಯ
ದಿನವೇಳೆ ತಪ್ಪಿಸದಿರು ಮರೆಯದಿರು ನೀನಗಲದಿರು
ತರಳೆ ನಿನ್ನಂ
ನಂಬಿ ಪೋದೆಪೆವಕ್ಕ ಚನ್ನಕ್ಕ
ಓಲೆ ಚೌಕುಳಿ
ಕಡಕು ಮೂಗುತಿ ಕಾಲ ಕಡಗಂ
ಬಣ್ಣ ಸರವೂಮ್ ತೋಳಬಂದಿಎನಿಪ್ಪ ಚೆಲುವಿನ ಬಾಲದುಡುಗೆಗಳ
ಬಾಲೆಯರು
ಹಿಡಿದಾಡು ಒಳ್ಳೆಯ ಕೀಲು ಬೊಂಬೆಯಂ ಅದರುಡುಗೆಯಂ
ಬಾಲೆ ತಂದೆಪೆವೆನುತ ಮನೆಯಿಂದೊಪ್ಪಯಿಸಿ ಪೋಗೆ
ಇಂತುವರ
ಕೊಡಗೂಸುವಾಗಲೆ ದಂತದಾವನ ಗೈದು
ಮಿಂದೋಲವಾಂತು
ದಣಿಬವನಿಟ್ಟು ಬಸಿತವನಿಟ್ಟು ಬಾಳದಲಿ
ಕಾಂತೆ ಮಡಗಿದ
ಜನ್ನಿಗೆಯ ಪಾಲಂ ತೆಗೆದು ಚೆನ್ನಾಗಿ ಕಾಸಿದ
ನಂತರದೊಳಾ
ತರುಣಿ ಒಬ್ಬಳವಳೆದು ಬಟ್ಟಲಲಿ
ಪಿಡಿದುಕೊಂಡು
ಸೆರಗಿನಿಮ್ಮಡಿಸಿ ಮುಚ್ಚಿ ಕಡಂಗಿ ಭೋರನೆ
ನಡೆದು ಹೊಕ್ಕಾ
ದೇಗುಲದೊಳಿರ್ಪಭವನಂ ಕಂಡು
ಪೊಡಮಡುತ್ತಂ
ಬಟ್ಟಲಂ ಮುಂಗಡೆಯೊಳಿಟ್ಟಾರೋಗಿಸೈ
ಎನ್ನೊಡಯನೇ
ಗುರು ಕಲ್ಲಿನಾಥ ಎಂದು ಭಿನ್ನವಿಸಿ
ಒಂದಿನಿತು
ಹಿಮ್ಮೆಟ್ಟಿ ಮರೆಯಲಿ ನಿಂದು ಮತ್ತೈತಂದು ನೋಡಲು
ಮುಂದೆ ಬಟ್ಟಲು
ತರುಣಿ ತಾ ಮುನ್ನಿರಿಸಿದಂತಿರಲು
ಕುಂದಿ ಮನದಲಿ
ತಾಪದಿಂ ತನು ಕುಂದಿ ಎಲೆ ನಾ ತಂದ ಪಾಲಂ
ತಂದೆ ನೀನಾರೋಗಿಸದ ಕಾರಣವದೇನಯ್ಯ?
ಪಾಲು ಕಾಯದೋ
ಪರಿಮಳಿಸದೋ ಪಾಲು ಕಡುಬಿಸಿಯಾದುದೋ?
ಚಿಲು ಪಾಲಿದೆಲ್ಲವು
ಒಡೆದುದೋ ಆರೋಗಿಸುವ ಬುದ್ಧಿ
ವೇಳೆಯಾಗದೋ
ನಿನ್ನ ಮೀಸಲು ಪಾಲು ಬೇಸರವಾಯಿತೋ?
ನಾ ಬಾಲೆಯೆಂದೊಲ್ಲೆಯೋ
ತರಲ್ ಕಾರಕ್ಕೆ ನೋಡಿದರೋ
ಬಟ್ಟಲನು
ನಾ ಬೆಳಗೆನೋ ಮನವಿಟ್ಟು ಪಾಲಿಂಗೆ
ಪಾಲ್ಕೆನೆಗಟ್ಟದೋ ನೀರ್ಬೆರಸಿದವೋ ಆರೋಗಿಸುವ ಬುದ್ಧಿ
ಪುಟ್ಟದೋ
ಸೀಯಿತ್ತೋ ತುಪ್ಪವ ನಟ್ಟೆನೆಂದು ಕುಡಿಯಲರಿಯೆಯೋ
ಹೊಟ್ಟೆಗೈದುದು
ಮಧುರವಿಲ್ಲವೋ ಹೊತ್ತು ಪೋಯಿತ್ತೋ?
ವೀರಭದ್ರನ
ಹಲಗೆ ಮೊರೆವುದು ವೀರ ಭಕ್ತರ
ತಿಂತಿಣಿಯಲತಿ
ವೀರಮಂ ತೋರಿದೇಪೆನೇಳಾರೋಗಿಸೈ ಪಾಲ
ಕ್ಷೀರದಲಿ
ನಾ ಕವಲನಾದೊಡೆ ತಾರೇನೆ ಬೇಕೆಂದೊಡಂ
ಶಿಶುಹಾರಿಯಿವಳೆಂದೆನ್ನದಿರು
ನಾ ಉಸಿರು ಮೊಂದಾಗಿ
ಈ ಬರವಣಿಗೆ
ಮಾಡುವಾಗ ನಾನು ಆ ಕಾಲದಲ್ಲಿ ನಮ್ಮ ೧ನೇ ತರಗತಿಯಿಂದ ೮ನೇ ತರಗತಿಯ ವರೆಗಿನ ಕನ್ನಡ ಪಠ್ಯಪುಸ್ತಕಗಳಲ್ಲಿ
ನನ್ನ ನೆನಪಿಗೆ ಬರುವ ಪದ್ಯಗಳನ್ನು ಗಮನಿಸಿದಾಗ ಕಥೆಯನ್ನು ಹೇಳುವ ದೃಷ್ಟಿಯಿಂದಾಗಲೀ ಅಥವಾ ಕವಿತ್ವದ ದೃಷ್ಟಿಯಿಂದಾಗಲೀ ಕೋಳೂರು ಕೊಡಗೂಸು ಮೊದಲ ಸ್ಥಾನದಲ್ಲಿತ್ತೆಂದು
ಅನಿಸುತ್ತಿದೆ. ಅಷ್ಟು ಮಾತ್ರವಲ್ಲ. ನಾನು ಮುಂದೆ ಒಂದು ದಿನ ಕೋಳೂರಿಗೆ ಹೋಗಿ ಅಲ್ಲಿನ ಶಿವಾಲಯದಲ್ಲಿ
ಕೊಡಗೂಸಿನ ತಲೆಯ ಕೂದಲು ಲಿಂಗದಿಂದ ಹೊರಗೆ ಬಂದಿರುವುದನ್ನು ನೋಡಲೇ ಬೇಕೆಂದು ತೀರ್ಮಾನಿಸಿದ್ದೆ!
ನನ್ನ ದುರಾದೃಷ್ಟಕ್ಕೆ
ನನಗೆ ಪದ್ಯದ ಮೊದಲ ಅರ್ಧ ಭಾಗ ಮಾತ್ರ ನೆನಪಿನಲ್ಲಿದೆ ಮತ್ತು ಉಳಿದ ಭಾಗ ನನಗೆಲ್ಲಿಯೂ ದೊರೆಯಲಿಲ್ಲ.
ಈ ಕಥೆ ಎಷ್ಟು ಪ್ರಸಿದ್ಧಿ ಪಡೆದಿದೆಯೆಂದರೆ, ಇದನ್ನು ಮಾನ್ಯ ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು
ಅವರು ಹರಿಕಥೆಯಾಗಿ ಹೇಳಿದ್ದಾರೆ. ಆಸಕ್ತಿ ಇರುವ ನನ್ನ ಓದುಗರು ಅದನ್ನು ಕೆಳಕಂಡ ಲಿಂಕ್ ಮೂಲಕ ಓದಬಹುದು:
https://www.youtube.com/watch?v=wTrsTDRfDb8
-----------------------------ಮುಂದುವರಿಯುವುದು-------------------------
No comments:
Post a Comment