Tuesday, July 23, 2024

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೭

 

ನಮ್ಮ ಕಾಲದ ಪಠ್ಯಪುಸ್ತಕಗಳು

ಅಧ್ಯಾಯ

ನಮ್ಮ ಪಠ್ಯಪುಸ್ತಕಗಳಲ್ಲಿದ್ದ ಒಂದು ತುಂಬಾ ಪ್ರಸಿದ್ಧವಾದ ಪದ್ಯವೆಂದರೆ ಚಕ್ರವರ್ತಿ ನೃಪತುಂಗ  ವಿರಚಿತ ಕವಿರಾಜಮಾರ್ಗದಿಂದ ಆಯ್ದ ಕೆಲವು ಭಾಗಗಳು. ಅಮೋಘವರ್ಷ ಎಂದು ಕೂಡ ಕರೆಯಲ್ಪಡುತ್ತಿದ್ದ ರಾಷ್ಟ್ರಕೂಟ ಸಾಮ್ರಾಟ್ ನೃಪತುಂಗ (೮೦೦-೮೭೪), ಭಾರತ ದೇಶದ ಅತ್ಯಂತ ಪ್ರಸಿದ್ಧ ಚಕ್ರವರ್ತಿಗಳಲ್ಲಿ ಒಬ್ಬನಾಗಿದ್ದ. ಅವನ ೬೪ ವರ್ಷಗಳ ಆಡಳಿತ ಕಾಲ ಭಾರತದಲ್ಲಿ ಆಳಿದ ಚಕ್ರವರ್ತಿಗಳಲ್ಲಿ ಒಂದು ಅತ್ಯಂತ  ಸುದೀರ್ಘ ಕಾಲದ ಆಡಳಿತವಾಗಿತ್ತು. ಚರಿತ್ರಕಾರರು  ಅತ್ಯಂತ ಶಾಂತಿಯುತ ಮತ್ತು ಧಾರ್ಮಿಕ ಆಡಳಿತ ನಡೆಸಿದ ಅವನನ್ನು ಅಶೋಕ ಚಕ್ರವರ್ತಿಗೆ ಹೋಲಿಸಿದ್ದಾರೆ. ಅವನು ತನ್ನ ರಾಜಧಾನಿಯನ್ನು ಬೀದರ್ ಜಿಲ್ಲೆಯ ಮಯೂರಖಂಡಿನಿಂದ ಗುಲ್ಬರ್ಗ ಜಿಲ್ಲೆಯ ಮಾನ್ಯಕೇತಕ್ಕೆ ವರ್ಗಾಯಿಸುತ್ತಾನೆ. ಹಳೆಗನ್ನಡದಲ್ಲಿ ಬರೆದ ಈ ಕಾವ್ಯ ಅಂದಿನ ಕಾಲದ ವಿಶಾಲ ಕರ್ನಾಟಕ ರಾಜ್ಯವು ಹೇಗೆ ಕಾವೇರಿಯಿಂದ ಗೋದಾವರಿ ನದಿಯವರೆಗೆ ಹಬ್ಬಿತ್ತೆಂದು ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿ ವರ್ಣಿಸುತ್ತದೆ. ನನ್ನ  ನೆನಪಿಗೆ ಬರುವ ಪದ್ಯದ ಮೊದಲ ಕೆಲವು ಸಾಲುಗಳು ಕೆಳಕಂಡಂತಿವೆ:

ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳೆಯ

ಭಾವಿಸೆ ಕರ್ನಾಟ ಜನಪದವ ಅದನಾವನೊಲಿದು ಬಣ್ಣಿಸುವನು?

ಭೂರಮೆಯುಟ್ಟಿಲ್ಲ ದಿಟ್ಟದುಕೂಲದ ಸೀರೆಗಳಂತೆ ಕಂಗೊಳಿಪ

ಭೂರಿನದಿಗಳಾ ಕರ್ಣಾಟ ಭೂಮಿಯೊಳೋರಂತೆ ಪರಿದೆಸೆದಿಹುದು

ಶರಧಿಯನೊಲಿದಮರ್ದಪ್ಪಲಾ ತೊರೆವನ್ಗಳಿರದೆ ನೀಡಿದಾ ಕೈಗಳೆನಲು

ಕರಮೆಸೆದಿರ್ಪುವು ಪರಿಕಾಲ್ಗಳಾ ನಾಡ ಸಿರಿಯನದೇನ ಬಣ್ಣಿಪೆನು?

ನಂದನದಂತೆ ನೋಳ್ಪರಾ ಕಣ್ಗಳಿಗಾನಂದವನಿರದೆ ಪುಟ್ಟಿಸುವ

ಕುಂದದ ಫಲತತಿಯಿಂದ ಮೆರೆವ ವನವೃಂದದಿಂದೆಸುವದಾ ಭೂಮಿ

ನಾರಿಕೇಳಾಮ್ರ ಪನಸ ಕದಳಿ ಖರ್ಜೂರ ಚಂಪಕ ಚಂದನಾದಿಗಳಿಂದ

ಆರಾಮದಿಂದ ರಂಜಿಸುತಿಹುದು ಕಣ್ಗೆ ಪಾರಣೆಯನು ಪಾಂಥಜನದ

ದೇವನದೀ ಮಾತೃ ಕೋರ್ವದೆಯಿಂದದು ದೇವಲೋಕವನೇಳಿಸುತ

ಭೂವನಿತೆಯ ಧಾನ್ಯ ದಕ್ಷಯ ನಿಧಿಯಂ ತಾವಗಮೆಸೆದಿರುತಿಹುದು

ಇನ್ನೊಂದು ಶ್ರೇಷ್ಠ ಪದ್ಯವೆಂದರೆ ಸಂಚಿಯ ಹೊನ್ನಮ್ಮ ಎಂಬುವವರು ಬರೆದ ಹದಿಬದೆಯ ಧರ್ಮ. ಆ ಕಾಲದ ಕನ್ನಡ ಸಾಹಿತ್ಯದಲ್ಲಿ  ಕೈಬೆರಳಿನಲ್ಲೆಣಿಸುವಷ್ಟು ಮಾತ್ರ ಕವಯಿತ್ರಿಗಳಿದ್ದು ಅವರಲ್ಲಿ ಹೊನ್ನಮ್ಮನು ಬಹುಮುಖ್ಯಳಾಗಿದ್ದಳು. ಆಕೆ ಮೈಸೂರು ದೊರೆ ಚಿಕದೇವರಾಯನ  (೧೬೭೩-೧೭೦೪) ಆಸ್ಥಾನದಲ್ಲಿದ್ದಳಂತೆ. ನನಗೆ ನೆನಪಿಗೆ ಬರುವ ಕೆಲವು ಸಾಲುಗಳು ಹೀಗಿವೆ:

ಹದಿಬದೆಯ ಧರ್ಮ   

ಪೆಣ್ಣಲ್ಲವೇ ನಮ್ಮ್ಮನೆಲ್ಲ ಹಡೆದ ತಾಯಿ

ಪೆಣ್ಣಲ್ಲವೇ ನಮ್ಮನೆಲ್ಲ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು?

ಕುವರನಾದೊಡೆ ಬಂದ ಗುಣವೇನದರಿಂದೆ?

ಕುವರಿಯಾದೊಡನೆ ಕುಂದೇನು?

ಇವರೀರ್ವರಳೊಗೇಳ್ಗೆ ಪಡೆದರೆ

ಪವಡಿಪುದು ಇಹಪರ ಸೌಖ್ಯ

ನನ್ನ ನೆನಪಿಗೆ ಬರುವ ಇತರ ಮುಖ್ಯ ಪದ್ಯಗಳಲ್ಲಿ  ಪಂಜೆ ಮಂಗೇಶ್ ರಾವ್, ಮತ್ತು ರಾಷ್ಟ್ರಕವಿ ಎಂ ಗೋವಿಂದ ಪೈ ಮತ್ತು ಕುವೆಂಪು ಅವರ ರಚನೆಗಳು ಮುಖ್ಯವಾಗಿವೆ.

ಹುತ್ತರಿಯ ಹಾಡು

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?

ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲೆ ನಿಂದಳೋ?

ಅಲ್ಲೆ ಆಕಡೆ ನೋಡೆಲಾ ಅಲ್ಲೇ ಕೊಡವರ ನಾಡೆಲಾ

ಅಲ್ಲೆ ಕೊಡವರ ಬೀಡೆಲಾ

                         --- ಪಂಜೆ ಮಂಗೇಶ್ ರಾವ್

ಸುಂಟರ ಗಾಳಿ

ಬರುತಿದೆ ಅಹಹಾ ದೂರದಿ ಬರುತಿದೆ

ಬುಸುಗುಟ್ಟುವ ಪಾತಾಳದ ಹಾವೋ

ಹಸಿವಿನ ಭೂತವು ಕೂಗುವ ಓವೋ

ಹೊಸತಿದು ಕಾಲನ ಕೋಣನ ಓವೋ?

                         --- ಪಂಜೆ ಮಂಗೇಶ್ ರಾವ್

ಕನ್ನಡ ಮಾತೆ

ತಾಯೆ ಬಾರ ಮೊಗವ ತೋರ

ಕನ್ನಡಿಗರ ಮಾತೆಯೇ

ಹರಸು ತಾಯೆ ಸುತರ ಕಾಯೆ

ನಮ್ಮ ಜನ್ಮದಾತೆಯೇ

           -------ಎಂ ಗೋವಿಂದ ಪೈ

ಕುಮಾರ ವ್ಯಾಸ

ಕುಮಾರ ವ್ಯಾಸನು ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು

ಭಾರತ ಕಣ್ಣಲಿ ಕುಣಿಯುವುದು

ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು

ಆ ಕುರುಭೂಮಿಯು ತೋರುವುದು

                --------------ಕುವೆಂಪು

  ಸುಗ್ಗಿಯ ಹಾಡು

ಅಡಿಯ ಗೆಜ್ಜೆ ನಡುಗೆ ಹೆಜ್ಜೆ

ಇಡುತ ಸುಗ್ಗಿ ಬರುತಿದೆ

ಸುಗ್ಗಿ ಬರೇ ಹಿಗ್ಗಿ ತೆರೆ

ಸಗ್ಗ ಸೊಗವ ತರುತಿದೆ

                --------------ಕುವೆಂಪು

ಸನ್ಮಾನ್ಯ ಡಿ ವಿ ಗುಂಡಪ್ಪನವರು  (ಡಿವಿಜಿ) ಮತ್ತು ಕುವೆಂಪು ಅವರು ಬರೆದ ಕೆಳಗಿನ ಎರಡು ಪದ್ಯಗಳು ನಮ್ಮ ಮುಂದಿನ ಬಾಳಿನ ಬಗ್ಗೆ ವಿಶೇಷ ಸಂದೇಶ ನೀಡುವವಾಗಿದ್ದವು. ಆದರೆ ದುರದೃಷ್ಟವಶಾತ್ ನಮ್ಮ ಆಗಿನ ಶಾಲಾ ಮೇಷ್ಟ್ರುಗಳಿಗೆ ಅವುಗಳ ಅರ್ಥವನ್ನಾಗಲೀ ಅಥವಾ ಅವು ಕೊಡುವ ಸಂದೇಶವನ್ನಾಗಲೀ ನಮಗೆ ತಿಳಿಸುವ ಸಾಮರ್ಥ್ಯವೇ ಇರಲಿಲ್ಲ. ನಮಗೆ ಅವುಗಳನ್ನು ಕಂಠಪಾಠ ಮಾಡಿ ಹೇಳುವಂತೆ ಮಾತ್ರ ಸೂಚಿಸಲಾಯಿತು. ನಾವೇನೋ ಅವುಗಳನ್ನು ಚೆನ್ನಾಗಿಯೇ ಕಂಠಪಾಠ ಮಾಡಿಕೊಂಡೆವು ಎಂದು ಹೇಳಲೇಬೇಕು. ಏಕೆಂದರೆ ಇಂದಿಗೂ ಅವುಗಳ ಪ್ರತಿ ಸಾಲುಗಳೂ ನಮಗೆ ನೆನಪಿಗೆ ಬರುತ್ತಿವೆ.  ಆದರೆ ಅವುಗಳಲ್ಲಿರುವ ಸಂದೇಶ ನಮಗೆ ಅರ್ಥವಾಗಲು ತುಂಬಾ ಸಮಯವೇ ಬೇಕಾಯಿತು. ಈ ಎರಡು ಪದ್ಯಗಳ ಕೆಲವು ಸಾಲುಗಳು:

ವನಸುಮ

ವನಸುಮದೊಲ್ ಎನ್ನ ಜೀವನವು

ವಿಕಸಿಸುವಂತೆ ಮನವನನುಗೊಳಿಸು

ಗುರುವೇ ಹೇ ದೇವ

ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು

ನಿಜ ಸೌರಭವ ಸೂಸಿ ನಲವಿಂ

ತಾನೆಲೆಯ ಪಿಂತಿರ್ದು ದೀನತೆಯ ತೋರಿ

ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

               -----ಡಿ ವಿ ಗುಂಡಪ್ಪ (ಡಿವಿಜಿ)

ಜೀವ ರಥೋತ್ಸವ

ಜೀವ ರಥೋತ್ಸವವಿದನಣಕಿಸದಿರು ಎಲೆ ಸನ್ಯಾಸಿ

ಸಾರಥಿಯನು ನೋಡಾದರು ಬಾ

ತೇರನು ಎಳೆಯುವ ಸನ್ಯಾಸಿ

ಓಡುವೆ ಎಲ್ಲಿಗೆ ಸನ್ಯಾಸಿ?

ಆಗುವೆಯಾ ನೀ ಶೂನ್ಯ ನಿವಾಸಿ?

ಸಾರಥಿ ಬಲ್ಲನು ಸತ್ಪತವಾ

ಕುಳಿತಿಹನಾತನೆ ನಡೆಸಲು ರಥವ

               -------ಕುವೆಂಪು

--------------------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ--------

 

 

No comments: