Tuesday, July 23, 2024

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೮

 

ನಮ್ಮ ಕಾಲದ ಪಠ್ಯಪುಸ್ತಕಗಳು

ಅಧ್ಯಾಯ

ಕಂತಿ ಮತ್ತು ಹಂಪನ ಕಥೆ

ನಾನು ಮೊದಲೇ ಬರೆದಂತೆ ಕನ್ನಡದ ಕೆಲವೇ ಕವಯಿತ್ರಿಗಳಲ್ಲಿ ಒಬ್ಬಳಾದ ಕಂತಿ ಎಂಬುವವಳ ಕಥೆ ತುಂಬಾ ಕುತೂಹಲಕಾರಿಯಾಗಿದೆ. ನಮ್ಮ ೮ನೇ ತರಗತಿಯ ಕನ್ನಡದ ಪಠ್ಯಪುಸ್ತಕದಲ್ಲಿದ್ದ ಕಂತಿ ಮತ್ತು ಹಂಪ ಜೋಡಿಯ ಕಥೆ ತುಂಬಾ ಸ್ವಾರಸ್ಯಕರವೂ ಆಗಿತ್ತು. ಜೋಡಿಯು ೧೩ನೇ ಶತಮಾನದಲ್ಲಿ ದ್ವಾರಸಮುದ್ರದ (ಇಂದಿನ ಹಳೆಯಬೀಡು) ಹೊಯ್ಸಳ ದೊರೆ ವೀರ ಬಲ್ಲಾಳನ ಆಸ್ಥಾನದಲ್ಲಿತ್ತು. ದುರದೃಷ್ಟವೆಂದರೆ ಕಂತಿ ಬರೆದಳೆನ್ನಲಾದ ಯಾವುದೇ ಕವನಗಳು ಲಭ್ಯವಾಗಿಲ್ಲ. ಆದರೆ ಜೋಡಿಯ ಕಥೆಯಲ್ಲಿ  ಬರುವ ಹಂಪನು, ಕಂತಿಗೆ ಒಡ್ಡಿದ ಒಗಟುಗಳು ಮತ್ತು ಅವುಗಳಿಗೆ ಅತಿ ಜಾಣ್ಮೆಯಿಂದ ಕಂತಿ ನೀಡಿದ ಉತ್ತರಗಳು, ಅವಳ ಕಾವ್ಯ ಪರಿಣತೆಯ ಸಾಕ್ಷಿಯಾಗಿವೆ. ಇಷ್ಟೊಂದು ವರ್ಷಗಳ ನಂತರವೂ ನನ್ನ ನೆನಪಿಗೆ ಬರುವ ಜೋಡಿಯ ಕಥೆ ಕೆಳಕಂಡಂತಿದೆ:

ಹಂಪನ ಮೂಲ ಹೆಸರು ನಾಗಚಂದ್ರ. ವೀರ ಬಲ್ಲಾಳನ ಆಸ್ಥಾನದಲ್ಲಿ ಅವನೊಬ್ಬ ಪ್ರಖ್ಯಾತ ಕವಿ ಮತ್ತು ಗುರುವಾಗಿದ್ದ. ಅವನನ್ನು ಅಭಿನವ ಪಂಪ ಎಂದು ಕೂಡ ಕರೆಯಲಾಗುತ್ತಿದ್ದು ಅವನು ರಾಮಚಂದ್ರ ಚರಿತ ಪುರಾಣವನ್ನು ಬರೆದಿದ್ದ. ನಾಗಚಂದ್ರನ ಗುರುಕುಲದಲ್ಲಿ ತುಂಬಾ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು. ಆದರೆ ಅವರಲ್ಲಿ ಕೆಲವರು ನಿರೀಕ್ಷಿತ ಮಟ್ಟದ ಅಭ್ಯಾಸ ಮಾಡಲು ಕಷ್ಟಪಡುತ್ತಿರುವುದು ನಾಗಚಂದ್ರನ ಗಮನಕ್ಕೆ ಬಂತು. ಅವರ ತಿಳುವಳಿಕೆಯ ಮಟ್ಟವನ್ನು ಸುಧಾರಿಸಲು ನಾಗಚಂದ್ರನು ಜ್ಯೋತಿಷ್ಮತಿ ತೈಲ ಎಂಬ ಕಷಾಯವನ್ನು ತಯಾರಿಸಿದ. ಆ ತೈಲ ಎಷ್ಟು ಶಕ್ತಿಯುತವಾಗಿತ್ತೆಂದರೆ, ಅದರ ಒಂದೆರಡು ಹನಿಗಳನ್ನು  ಕುಡಿದೊಡನೆ  ವಿದ್ಯಾರ್ಥಿಗಳ ತಿಳುವಳಿಕೆಯ ಮಟ್ಟ ಒಮ್ಮೆಗೇ ಸುಧಾರಿಸುತ್ತಿತ್ತು. 

ಕಂತಿ ಗುರುಕುಲದಲ್ಲಿ ಒಬ್ಬ ಸೇವಕಿಯಾಗಿದ್ದಳು. ತುಂಬಾ ಬುದ್ಧಿವಂತೆ ಮತ್ತು ಪ್ರತಿಭಾವಂತೆಯಾಗಿದ್ದ ಆಕೆ ನಾಗಚಂದ್ರನು ಶಿಷ್ಯರಿಗೆ ಬೋಧನೆ ಮಾಡುವಾಗ ಮರೆಯಲ್ಲಿ ನಿಂತು ಗಮನವಿಟ್ಟು ಕೇಳುತ್ತಿರುತ್ತಾಳೆ. ಗುರುವಿನ ಪಾಠಗಳನ್ನೆಲ್ಲಾ ಚೆನ್ನಾಗಿ ಕೇಳಿ ಅರಿತುಕೊಂಡ ಆಕೆ ತನ್ನನ್ನೂ ಒಬ್ಬ ಶಿಷ್ಯೆಯಾಗಿ ಸ್ವೀಕರಿಸುವಂತೆ ನಾಗಚಂದ್ರನನ್ನು ಕೇಳಿಕೊಳ್ಳುತ್ತಾಳೆ. ಆದರೆ ನಾಗಚಂದ್ರನಿಗೆ ಅವಳಿಗೆ ತನ್ನ ಬೋಧನೆಗಳು ಅರ್ಥವಾಗುವುದೆಂದು ಅನಿಸುವುದಿಲ್ಲ. ಅಂತೆಯೇ ಅವನು ಅವಳ ಕೋರಿಕೆಯನ್ನು ನಿರಾಕರಿಸುತ್ತಾನೆ.

ಕಂತಿಗೆ ನಾಗಚಂದ್ರನು ಜ್ಯೋತಿಷ್ಮತಿ ತೈಲವನ್ನು ಕುಡಿಸಿ ತನ್ನ ಶಿಷ್ಯರನ್ನು ಬುದ್ಧಿವಂತರನ್ನಾಗಿ ಮಾಡುತ್ತಿರುವ ರಹಸ್ಯದ ಅರಿವಾಗಿರುತ್ತದೆ. ಹಾಗೆಯೇ ಅವನು ಕೇವಲ ಒಂದು ಹನಿಯಷ್ಟು ತೈಲವನ್ನು ಕುಡಿಸಿ ಅವರ ತಿಳುವಳಿಕೆಯನ್ನು ಸುಧಾರಿಸುವುದೂ ಗೊತ್ತಿರುತ್ತದೆ. ಆದ್ದರಿಂದ ತಾನೂ ಕೂಡ ಅದನ್ನು ಸೇವಿಸಿ ಬುದ್ಧಿವಂತಳಾಗಬೇಕೆಂದು ಬಯಸುತ್ತಾಳೆ. ಗುರುವು ಆ ತೈಲದ ಪಾತ್ರೆಯನ್ನು ಪೂಜಾ ಕೊಠಡಿಯಲ್ಲಿ ಇಟ್ಟಿರುವುದೂ ಅವಳಿಗೆ ಗೊತ್ತಿರುತ್ತದೆ. ಒಂದು ದಿನ ಗುರುವು ಮನೆಯಲ್ಲಿಲ್ಲದ ಸಮಯ ನೋಡಿ ಆಕೆ ತೈಲ ಪಾತ್ರೆಯನ್ನೆತ್ತಿಕೊಂಡು ಹೊರಗೆ ಓಡಿಹೋಗುತ್ತಾಳೆ.

ಪಾತ್ರೆಯಲ್ಲಿದ್ದ ತೈಲದ ಒಂದು ಹನಿಯನ್ನು ಕಂತಿ ಸೇವಿಸುತ್ತಾಳೆ. ಆಗ ಇದ್ದಕ್ಕಿದ್ದಂತೇ ಅವಳಿಗೊಂದು ಅದ್ಭುತ ಐಡಿಯಾ ಹೊಳೆಯುತ್ತದೆ. ನಾಗಚಂದ್ರನ ಶಿಷ್ಯರಲ್ಲೇ ತಾನು ಅತ್ಯಂತ ಬುದ್ಧಿವಂತಳಾಗಿಬಿಡಬೇಕೆಂದು! ಮರುಯೋಚನೆ ಮಾಡದೇ ಆಕೆ ಒಮ್ಮೆಗೇ ಪಾತ್ರೆಯಲ್ಲಿದ್ದ ತೈಲವನ್ನೆಲ್ಲಾ ತನ್ನ ಬಾಯಿಯೊಳಗೆ ಸುರಿದುಕೊಂಡು ಗಟಗಟನೆ ಕುಡಿದುಬಿಡುತ್ತಾಳೆ!

ಪಾಪ. ಆ ಬಡಪಾಯಿ ಹುಡುಗಿಯ ಗಂಟಲು ಮತ್ತು ಹೊಟ್ಟೆ ಆ ಪ್ರಬಲ ಕಷಾಯವಷ್ಟನ್ನೂ ಒಮ್ಮೆಗೇ ನುಂಗಿದ ಪರಿಣಾಮವಾಗಿ ಅತೀವವಾಗಿ ಉರಿಯತೊಡಗುತ್ತದೆ. ಉರಿಯನ್ನು ಸಹಿಸಲಾರದೇ ಅವಳು ಹತ್ತಿರವೇ ಇದ್ದ ಬಾವಿಯೊಂದರೊಳಗೆ ಹಾರಿಬಿಡುತ್ತಾಳೆ. ಅದೃಷ್ಟವಶಾತ್ ಬಾವಿಯಲ್ಲಿ ಹೆಚ್ಚು ನೀರಿಲ್ಲದ ಕಾರಣ ಅವಳು ಸೊಂಟದವರೆಗೆ ಮಾತ್ರ ಮುಳುಗುತ್ತಾಳೆ.  ಓಹ್! ಜ್ಯೋತಿಷ್ಮತಿ ತೈಲ ಅಷ್ಟರಲ್ಲೇ ಅವಳ ಬುದ್ಧಿಯ ಮೇಲೆ ತನ್ನ ಪ್ರಭಾವವನ್ನು ಬೀರಿರುತ್ತದೆ. ಅವಳನ್ನು ಬಾವಿಯಿಂದ ಮೇಲೆತ್ತಲು ಬಂದ ಜನಗಳಿಗೆ ಅವಳು ಬಾವಿಯೊಳಗೆ ನಿಂತೇ ಹೊಸ ಹೊಸ ಕವನಗಳನ್ನು ಕಟ್ಟಿ ಹಾಡುತ್ತಿರುವ ದೃಶ್ಯ ಆಶ್ಚರ್ಯವನ್ನು ತರುತ್ತದೆ. ಸಮಾಚಾರ ತಿಳಿದು ಓಡುತ್ತಾ ಬಂದ ನಾಗಚಂದ್ರನಿಗೆ ಕಂತಿ ಬಾವಿಯೊಳಗೆ ನಿಂತೇ ಒಂದಾದ ಮೇಲೊಂದು ಅತ್ಯಂತ ವಿಶಿಷ್ಟವಾದ ಕವನಗಳನ್ನು ರಚಿಸಿ ಹಾಡುತ್ತಿರುವುದನ್ನು ಗಮನಿಸಿ ತನ್ನ ಕಣ್ಣುಗಳನ್ನೇ ನಂಬಲಾಗುವುದಿಲ್ಲ. 

ನಾಗಚಂದ್ರನು ಕೂಡಲೇ ಕಂತಿಯನ್ನು ಬಾವಿಯಿಂದ ಹೊರತೆಗೆಸಿ ತನ್ನ ಶಿಷ್ಯೆಯಾಗಿ ಸ್ವೀಕರಿಸುತ್ತಾನೆ. ಜ್ಯೋತಿಷ್ಮತಿ ತೈಲದ ಪರಿಣಾಮದಿಂದ ಆಕೆ ಬಹುಬೇಗನೆ ಕವನ ಮತ್ತು ಕಾವ್ಯಗಳ ರಚನೆಯ ಮರ್ಮವನ್ನು ತನ್ನ ಗುರುವಿನಿಂದ ಕಲಿತುಬಿಡುತ್ತಾಳೆ. ಅವಳ ಪರಿಣತೆ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, ಆಕೆ ಗುರುವಿನ ರಚನೆಗಳನ್ನೇ ಟೀಕಿಸತೊಡಗುತ್ತಾಳೆ!

ಸ್ವಲ್ಪ ಕಾಲದಲ್ಲೇ ಕಂತಿಯ ಪಾಂಡಿತ್ಯ ಯಾವ ಮಟ್ಟ ತಲುಪಿತೆಂದರೆ, ನಾಗಚಂದ್ರನಿಗೆ ಆಕೆ ತನ್ನನ್ನು ಗುರುವೆಂದು ಗೌರವಿಸುತ್ತಾಳೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಅದನ್ನು ಪರೀಕ್ಷಿಸಲು ಅವನು ಒಂದು ದಿನ ತಾನು ತೀರಿಕೊಂಡಂತೆ ಸುದ್ಧಿ ಹಬ್ಬಿಸುತ್ತಾನೆ. ತನ್ನ ನೆಚ್ಚಿನ ಗುರು ತೀರಿಕೊಂಡ ಸಮಾಚಾರ ಕೇಳಿದ ಕಂತಿ ಅತಿ ದುಃಖದಿಂದ ಧಾವಿಸಿ ಬರುತ್ತಾಳೆ. ತನ್ನ ಗುರುವು ಹಾಸಿಗೆಯಲ್ಲಿ ಮಲಗಿರುವುದನ್ನು ನೋಡಿ ಅದು ಅವನ ಹೆಣವೆಂದೇ ಭಾವಿಸಿಬಿಡುತ್ತಾಳೆ.

ತನ್ನ ಪ್ರೀತಿಯ ಗುರುವಿನ ಅಗಲಿಕೆಯನ್ನು ಸಹಿಸಲಾರದೇ ಕಂತಿ ಒಮ್ಮೆಗೇ ತನ್ನ ದುಃಖವನ್ನು ಕವನಗಳ ಮೂಲಕ ಹೇಳತೊಡಗುತ್ತಾಳೆ. ಅವನಿಗಾಗಿಯೇ ಒಂದು ಕವನವನ್ನು ರಚಿಸಿ ಅದರಲ್ಲಿ  ಗುರುವಿನ ಅಕಾಲ ಮರಣದಿಂದ ಸಾಹಿತ್ಯಲೋಕಕ್ಕಾದ ನಷ್ಟವನ್ನು ವರ್ಣಿಸುತ್ತಾಳೆ. ಶಿಷ್ಯೆಯ ಬಾಯಿಂದ ತನ್ನ ಪಾಂಡಿತ್ಯದ ವರ್ಣನೆ ಕೇಳುತ್ತಿದ್ದಂತೆಯೇ, ಹಾಸಿಗೆಯಲ್ಲಿ ಸತ್ತಂತೆ ಮಲಗಿದ್ದ ಗುರುವು ಎದ್ದು ಕುಳಿತುಬಿಡುತ್ತಾನೆ! ಕಂತಿಯ ಆನಂದಕ್ಕೆ ಪಾರವೇ ಇರುವುದಿಲ್ಲ.

ಈಗ ನಾವು ನಾಗಚಂದ್ರನು ಕಂತಿಯ ಕವಿತ್ವದ ಸಾಮರ್ಥ್ಯವನ್ನು ಪರೀಕ್ಷಿಸಲು ಅವಳಿಗಾಗಿ ಕೊಟ್ಟ ಕೆಲವು ವಿಚಿತ್ರವೆನಿಸುವ ಒಗಟುಗಳನ್ನು ನೋಡೋಣ. ನನಗೆ ಕೇವಲ ಎರಡು ಒಗಟುಗಳಿಗೆ ಕಂತಿ ನೀಡಿದ ಕವನ ಸ್ವರೂಪದ  ಪೂರ್ಣ ಉತ್ತರಗಳು ನೆನಪಿಗೆ ಬಂದಿವೆ. ಅಲ್ಲದೇ ಉಳಿದ ಕೆಲವಕ್ಕೆ ಅವಳು ರಚಿಸಿದ ಕವನಗಳು ನೆನಪಿಲ್ಲವಾದರೂ ಜಾಣ್ಮೆಯಿಂದ ಒಗಟನ್ನು ಬಿಡಿಸಿದುದೂ ನೆನಪಿಗೆ ಬರುತ್ತಿದೆ:

ನಾಗಚಂದ್ರನ ಮೊದಲ ಒಗಟು -- ಸತ್ತವಳೆದ್ದು ತವರೂರಿಗೆ ಪೋಗುತಿರ್ದಳ್!

ಅಸಾಧ್ಯವೆನಿಸಿದ ಈ ಒಗಟಿಗೆ ಕಂತಿಯ ಉತ್ತರ:

ಅತ್ತೆಯ ಕಾಟವೂ ಅಧಿಕಂ, ಮತ್ತಿನ ಸವತಿಯರ ಕಾಟವು

ನಾದಿನಿ ಬೈವಳು, ಪೆತ್ತ ಮಕ್ಕಳ್ ಅಳಲ್ಕೆ

ಬೇಸತ್ತವಳೆದ್ದು ತವರೂರಿಗೆ ಪೋಗುತಿರ್ದಳ್!

ನಾಗಚಂದ್ರನ ಎರಡನೇ ಒಗಟು -- ಇಲಿಯಂ ಮುರಿಮುರಿದು ತಿನ್ನುತಿರ್ಪರ್!

ಅಸಾಧ್ಯವೆನಿಸಿದ ಈ ಒಗಟಿಗೆ ಕಂತಿಯ ಉತ್ತರ:

ಸರಸಿಜಾಕ್ಷಿಯರ ಹಸ್ತದೋಳ್ ತಿಲ ತೈಲದಿ ಮಾಳ್ಪ

ಚೆಕ್ಕಿಲಿಯಂ ಮುರಿಮುರಿದು ತಿನ್ನುತಿರ್ಪರ್!

ಇನ್ನೊಂದು ಅಸಾಧ್ಯವೆನಿಸುವ ಒಗಟು:

ದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್!

ಕಂತಿಯ ಉತ್ತರ:

ಸಚ್ಛಂದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್!

ಇನ್ನೊಂದು ಅಸಾಧ್ಯವೆನಿಸುವ ಒಗಟು:

ಇಸಮಂ ಸವಿಸವಿದು ತಿನ್ನುತಿರ್ಪರ್!

ಕಂತಿಯ ಉತ್ತರ:

ಪಾಯಿಸಮಂ ಸವಿಸವಿದು ತಿನ್ನುತಿರ್ಪರ್!

ಇನ್ನೊಂದು ಅಸಾಧ್ಯವೆನಿಸುವ ಒಗಟು:

ಗಜಮಂ ಕಟ್ಟಿ ಒಯ್ಯುತಿರ್ದರ್!

ಕಂತಿಯ ಉತ್ತರ:

ಕಾಗಜಮಂ ಕಟ್ಟಿ ಒಯ್ಯುತಿರ್ದರ್!

ದುರದೃಷ್ಟವೆಂದರೆ ನಾನು ಈ ಮೊದಲೇ ಬರೆದಂತೆ ಅತ್ಯಂತ ಮೇಧಾವಿಯಾಗಿದ್ದ ಕಂತಿ ಬರೆದಳೆನ್ನಲಾದ ಯಾವುದೇ ಕವನಗಳು ನಮಗೆ ಲಭ್ಯವಾಗಿಲ್ಲ.  ಆದರೆ ನಾಗಚಂದ್ರ-ಕಂತಿ ಎಂಬ ಗುರು-ಶಿಷ್ಯೆ ಜೋಡಿಯ ಕಥೆ, ಕಂತಿಯ ಕವಿತ್ವದ ಸಾಮರ್ಥ್ಯವನ್ನು ನಮಗೆ ಹೇಳುತ್ತದೆ. ಈ ಅಪೂರ್ವ ಜೋಡಿಯ ಕಥೆಯು ಇಂದಿನ ತರುಣ ಕವಿಗಳಿಗೆ ಮತ್ತು ಕವಯತ್ರಿಗಳಿಗೆ ಪ್ರೋತ್ಸಾಹದಾಯಕ ಮತ್ತು ಮಾದರಿಯಾಗಿದೆ.

--------------------ಮುಕ್ತಾಯ -------------------------


 

 

 

 

 

 

 

 

 

 

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೭

 

ನಮ್ಮ ಕಾಲದ ಪಠ್ಯಪುಸ್ತಕಗಳು

ಅಧ್ಯಾಯ

ನಮ್ಮ ಪಠ್ಯಪುಸ್ತಕಗಳಲ್ಲಿದ್ದ ಒಂದು ತುಂಬಾ ಪ್ರಸಿದ್ಧವಾದ ಪದ್ಯವೆಂದರೆ ಚಕ್ರವರ್ತಿ ನೃಪತುಂಗ  ವಿರಚಿತ ಕವಿರಾಜಮಾರ್ಗದಿಂದ ಆಯ್ದ ಕೆಲವು ಭಾಗಗಳು. ಅಮೋಘವರ್ಷ ಎಂದು ಕೂಡ ಕರೆಯಲ್ಪಡುತ್ತಿದ್ದ ರಾಷ್ಟ್ರಕೂಟ ಸಾಮ್ರಾಟ್ ನೃಪತುಂಗ (೮೦೦-೮೭೪), ಭಾರತ ದೇಶದ ಅತ್ಯಂತ ಪ್ರಸಿದ್ಧ ಚಕ್ರವರ್ತಿಗಳಲ್ಲಿ ಒಬ್ಬನಾಗಿದ್ದ. ಅವನ ೬೪ ವರ್ಷಗಳ ಆಡಳಿತ ಕಾಲ ಭಾರತದಲ್ಲಿ ಆಳಿದ ಚಕ್ರವರ್ತಿಗಳಲ್ಲಿ ಒಂದು ಅತ್ಯಂತ  ಸುದೀರ್ಘ ಕಾಲದ ಆಡಳಿತವಾಗಿತ್ತು. ಚರಿತ್ರಕಾರರು  ಅತ್ಯಂತ ಶಾಂತಿಯುತ ಮತ್ತು ಧಾರ್ಮಿಕ ಆಡಳಿತ ನಡೆಸಿದ ಅವನನ್ನು ಅಶೋಕ ಚಕ್ರವರ್ತಿಗೆ ಹೋಲಿಸಿದ್ದಾರೆ. ಅವನು ತನ್ನ ರಾಜಧಾನಿಯನ್ನು ಬೀದರ್ ಜಿಲ್ಲೆಯ ಮಯೂರಖಂಡಿನಿಂದ ಗುಲ್ಬರ್ಗ ಜಿಲ್ಲೆಯ ಮಾನ್ಯಕೇತಕ್ಕೆ ವರ್ಗಾಯಿಸುತ್ತಾನೆ. ಹಳೆಗನ್ನಡದಲ್ಲಿ ಬರೆದ ಈ ಕಾವ್ಯ ಅಂದಿನ ಕಾಲದ ವಿಶಾಲ ಕರ್ನಾಟಕ ರಾಜ್ಯವು ಹೇಗೆ ಕಾವೇರಿಯಿಂದ ಗೋದಾವರಿ ನದಿಯವರೆಗೆ ಹಬ್ಬಿತ್ತೆಂದು ಚರಿತ್ರೆಯಲ್ಲಿ ಮೊಟ್ಟ ಮೊದಲ ಬಾರಿ ವರ್ಣಿಸುತ್ತದೆ. ನನ್ನ  ನೆನಪಿಗೆ ಬರುವ ಪದ್ಯದ ಮೊದಲ ಕೆಲವು ಸಾಲುಗಳು ಕೆಳಕಂಡಂತಿವೆ:

ಕಾವೇರಿಯಿಂದ ಗೋದಾವರಿವರೆಗಮಿರ್ದಾ ವಸುಧಾತಳವಳೆಯ

ಭಾವಿಸೆ ಕರ್ನಾಟ ಜನಪದವ ಅದನಾವನೊಲಿದು ಬಣ್ಣಿಸುವನು?

ಭೂರಮೆಯುಟ್ಟಿಲ್ಲ ದಿಟ್ಟದುಕೂಲದ ಸೀರೆಗಳಂತೆ ಕಂಗೊಳಿಪ

ಭೂರಿನದಿಗಳಾ ಕರ್ಣಾಟ ಭೂಮಿಯೊಳೋರಂತೆ ಪರಿದೆಸೆದಿಹುದು

ಶರಧಿಯನೊಲಿದಮರ್ದಪ್ಪಲಾ ತೊರೆವನ್ಗಳಿರದೆ ನೀಡಿದಾ ಕೈಗಳೆನಲು

ಕರಮೆಸೆದಿರ್ಪುವು ಪರಿಕಾಲ್ಗಳಾ ನಾಡ ಸಿರಿಯನದೇನ ಬಣ್ಣಿಪೆನು?

ನಂದನದಂತೆ ನೋಳ್ಪರಾ ಕಣ್ಗಳಿಗಾನಂದವನಿರದೆ ಪುಟ್ಟಿಸುವ

ಕುಂದದ ಫಲತತಿಯಿಂದ ಮೆರೆವ ವನವೃಂದದಿಂದೆಸುವದಾ ಭೂಮಿ

ನಾರಿಕೇಳಾಮ್ರ ಪನಸ ಕದಳಿ ಖರ್ಜೂರ ಚಂಪಕ ಚಂದನಾದಿಗಳಿಂದ

ಆರಾಮದಿಂದ ರಂಜಿಸುತಿಹುದು ಕಣ್ಗೆ ಪಾರಣೆಯನು ಪಾಂಥಜನದ

ದೇವನದೀ ಮಾತೃ ಕೋರ್ವದೆಯಿಂದದು ದೇವಲೋಕವನೇಳಿಸುತ

ಭೂವನಿತೆಯ ಧಾನ್ಯ ದಕ್ಷಯ ನಿಧಿಯಂ ತಾವಗಮೆಸೆದಿರುತಿಹುದು

ಇನ್ನೊಂದು ಶ್ರೇಷ್ಠ ಪದ್ಯವೆಂದರೆ ಸಂಚಿಯ ಹೊನ್ನಮ್ಮ ಎಂಬುವವರು ಬರೆದ ಹದಿಬದೆಯ ಧರ್ಮ. ಆ ಕಾಲದ ಕನ್ನಡ ಸಾಹಿತ್ಯದಲ್ಲಿ  ಕೈಬೆರಳಿನಲ್ಲೆಣಿಸುವಷ್ಟು ಮಾತ್ರ ಕವಯಿತ್ರಿಗಳಿದ್ದು ಅವರಲ್ಲಿ ಹೊನ್ನಮ್ಮನು ಬಹುಮುಖ್ಯಳಾಗಿದ್ದಳು. ಆಕೆ ಮೈಸೂರು ದೊರೆ ಚಿಕದೇವರಾಯನ  (೧೬೭೩-೧೭೦೪) ಆಸ್ಥಾನದಲ್ಲಿದ್ದಳಂತೆ. ನನಗೆ ನೆನಪಿಗೆ ಬರುವ ಕೆಲವು ಸಾಲುಗಳು ಹೀಗಿವೆ:

ಹದಿಬದೆಯ ಧರ್ಮ   

ಪೆಣ್ಣಲ್ಲವೇ ನಮ್ಮ್ಮನೆಲ್ಲ ಹಡೆದ ತಾಯಿ

ಪೆಣ್ಣಲ್ಲವೇ ನಮ್ಮನೆಲ್ಲ ಪೊರೆದವಳು

ಪೆಣ್ಣು ಪೆಣ್ಣೆಂದೇಕೆ ಬೀಳುಗಳೆವರು

ಕಣ್ಣು ಕಾಣದ ಗಾವಿಲರು?

ಕುವರನಾದೊಡೆ ಬಂದ ಗುಣವೇನದರಿಂದೆ?

ಕುವರಿಯಾದೊಡನೆ ಕುಂದೇನು?

ಇವರೀರ್ವರಳೊಗೇಳ್ಗೆ ಪಡೆದರೆ

ಪವಡಿಪುದು ಇಹಪರ ಸೌಖ್ಯ

ನನ್ನ ನೆನಪಿಗೆ ಬರುವ ಇತರ ಮುಖ್ಯ ಪದ್ಯಗಳಲ್ಲಿ  ಪಂಜೆ ಮಂಗೇಶ್ ರಾವ್, ಮತ್ತು ರಾಷ್ಟ್ರಕವಿ ಎಂ ಗೋವಿಂದ ಪೈ ಮತ್ತು ಕುವೆಂಪು ಅವರ ರಚನೆಗಳು ಮುಖ್ಯವಾಗಿವೆ.

ಹುತ್ತರಿಯ ಹಾಡು

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ?

ಎಲ್ಲಿ ಮೋಹನ ಗಿರಿಯ ಬೆಡಗಿನ ರೂಪಿನಿಂದಲೆ ನಿಂದಳೋ?

ಅಲ್ಲೆ ಆಕಡೆ ನೋಡೆಲಾ ಅಲ್ಲೇ ಕೊಡವರ ನಾಡೆಲಾ

ಅಲ್ಲೆ ಕೊಡವರ ಬೀಡೆಲಾ

                         --- ಪಂಜೆ ಮಂಗೇಶ್ ರಾವ್

ಸುಂಟರ ಗಾಳಿ

ಬರುತಿದೆ ಅಹಹಾ ದೂರದಿ ಬರುತಿದೆ

ಬುಸುಗುಟ್ಟುವ ಪಾತಾಳದ ಹಾವೋ

ಹಸಿವಿನ ಭೂತವು ಕೂಗುವ ಓವೋ

ಹೊಸತಿದು ಕಾಲನ ಕೋಣನ ಓವೋ?

                         --- ಪಂಜೆ ಮಂಗೇಶ್ ರಾವ್

ಕನ್ನಡ ಮಾತೆ

ತಾಯೆ ಬಾರ ಮೊಗವ ತೋರ

ಕನ್ನಡಿಗರ ಮಾತೆಯೇ

ಹರಸು ತಾಯೆ ಸುತರ ಕಾಯೆ

ನಮ್ಮ ಜನ್ಮದಾತೆಯೇ

           -------ಎಂ ಗೋವಿಂದ ಪೈ

ಕುಮಾರ ವ್ಯಾಸ

ಕುಮಾರ ವ್ಯಾಸನು ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು

ಭಾರತ ಕಣ್ಣಲಿ ಕುಣಿಯುವುದು

ಮೈಯಲಿ ಮಿಂಚಿನ ಹೊಳೆ ತುಳುಕಾಡುವುದು

ಆ ಕುರುಭೂಮಿಯು ತೋರುವುದು

                --------------ಕುವೆಂಪು

  ಸುಗ್ಗಿಯ ಹಾಡು

ಅಡಿಯ ಗೆಜ್ಜೆ ನಡುಗೆ ಹೆಜ್ಜೆ

ಇಡುತ ಸುಗ್ಗಿ ಬರುತಿದೆ

ಸುಗ್ಗಿ ಬರೇ ಹಿಗ್ಗಿ ತೆರೆ

ಸಗ್ಗ ಸೊಗವ ತರುತಿದೆ

                --------------ಕುವೆಂಪು

ಸನ್ಮಾನ್ಯ ಡಿ ವಿ ಗುಂಡಪ್ಪನವರು  (ಡಿವಿಜಿ) ಮತ್ತು ಕುವೆಂಪು ಅವರು ಬರೆದ ಕೆಳಗಿನ ಎರಡು ಪದ್ಯಗಳು ನಮ್ಮ ಮುಂದಿನ ಬಾಳಿನ ಬಗ್ಗೆ ವಿಶೇಷ ಸಂದೇಶ ನೀಡುವವಾಗಿದ್ದವು. ಆದರೆ ದುರದೃಷ್ಟವಶಾತ್ ನಮ್ಮ ಆಗಿನ ಶಾಲಾ ಮೇಷ್ಟ್ರುಗಳಿಗೆ ಅವುಗಳ ಅರ್ಥವನ್ನಾಗಲೀ ಅಥವಾ ಅವು ಕೊಡುವ ಸಂದೇಶವನ್ನಾಗಲೀ ನಮಗೆ ತಿಳಿಸುವ ಸಾಮರ್ಥ್ಯವೇ ಇರಲಿಲ್ಲ. ನಮಗೆ ಅವುಗಳನ್ನು ಕಂಠಪಾಠ ಮಾಡಿ ಹೇಳುವಂತೆ ಮಾತ್ರ ಸೂಚಿಸಲಾಯಿತು. ನಾವೇನೋ ಅವುಗಳನ್ನು ಚೆನ್ನಾಗಿಯೇ ಕಂಠಪಾಠ ಮಾಡಿಕೊಂಡೆವು ಎಂದು ಹೇಳಲೇಬೇಕು. ಏಕೆಂದರೆ ಇಂದಿಗೂ ಅವುಗಳ ಪ್ರತಿ ಸಾಲುಗಳೂ ನಮಗೆ ನೆನಪಿಗೆ ಬರುತ್ತಿವೆ.  ಆದರೆ ಅವುಗಳಲ್ಲಿರುವ ಸಂದೇಶ ನಮಗೆ ಅರ್ಥವಾಗಲು ತುಂಬಾ ಸಮಯವೇ ಬೇಕಾಯಿತು. ಈ ಎರಡು ಪದ್ಯಗಳ ಕೆಲವು ಸಾಲುಗಳು:

ವನಸುಮ

ವನಸುಮದೊಲ್ ಎನ್ನ ಜೀವನವು

ವಿಕಸಿಸುವಂತೆ ಮನವನನುಗೊಳಿಸು

ಗುರುವೇ ಹೇ ದೇವ

ಕಾನನದಿ ಮಲ್ಲಿಗೆಯು ಮೌನದಿಂ ಬಿರಿದು

ನಿಜ ಸೌರಭವ ಸೂಸಿ ನಲವಿಂ

ತಾನೆಲೆಯ ಪಿಂತಿರ್ದು ದೀನತೆಯ ತೋರಿ

ಅಭಿಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ

               -----ಡಿ ವಿ ಗುಂಡಪ್ಪ (ಡಿವಿಜಿ)

ಜೀವ ರಥೋತ್ಸವ

ಜೀವ ರಥೋತ್ಸವವಿದನಣಕಿಸದಿರು ಎಲೆ ಸನ್ಯಾಸಿ

ಸಾರಥಿಯನು ನೋಡಾದರು ಬಾ

ತೇರನು ಎಳೆಯುವ ಸನ್ಯಾಸಿ

ಓಡುವೆ ಎಲ್ಲಿಗೆ ಸನ್ಯಾಸಿ?

ಆಗುವೆಯಾ ನೀ ಶೂನ್ಯ ನಿವಾಸಿ?

ಸಾರಥಿ ಬಲ್ಲನು ಸತ್ಪತವಾ

ಕುಳಿತಿಹನಾತನೆ ನಡೆಸಲು ರಥವ

               -------ಕುವೆಂಪು

--------------------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ--------

 

 

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೬

 

ನಮ್ಮ ಕಾಲದ ಪಠ್ಯಪುಸ್ತಕಗಳು

ಅಧ್ಯಾಯ

ನಮ್ಮ ಪಠ್ಯಪುಸ್ತಕದಲ್ಲಿದ್ದ ಪದ್ಯಗಳಲ್ಲಿ ನಮ್ಮಮನಸ್ಸಿನ ಮೇಲೆ ಅತ್ಯಂತ ಪರಿಣಾಮ ಬೀರಿದ ಪದ್ಯವೆಂದರೆ ಕೋಳೂರು ಕೊಡಗೂಸು ಎಂಬ ಸ್ವಾರಸ್ಯಕರವಾದ ಕಥೆಯ ಒಂದು ಪದ್ಯವೆಂದು  ಹೇಳಲೇ ಬೇಕು. ಅಜ್ಞಾತ ಕವಿಯೊಬ್ಬನು ಬರೆದ ಈ ಪದ್ಯ ಕೋಳೂರು ಎಂಬ ಊರಿನಲ್ಲಿದ್ದ ಅರ್ಚಕನೊಬ್ಬನ ಇನ್ನೂ ಎಳೆಯ ವಯಸ್ಸಿನ ಕನ್ಯೆಯೊಬ್ಬಳನ್ನು (ಕೊಡಗೂಸು) ಕುರಿತಾದದ್ದು.

ಕೋಳೂರು ಎಂಬ ಊರಿನಲ್ಲಿ ಒಂದು ಶಿವಮಂದಿರವಿದ್ದು. ಅದರ ಅರ್ಚಕನು ಹತ್ತಿರವೇ ಇದ್ದ ಮನೆಯೊಂದರಲ್ಲಿ ವಾಸಿಸುತ್ತಿರುತ್ತಾನೆ. ದೇವಾಲಯದ ನಡುವೆ ದೊಡ್ಡದಾದ ಶಿವಲಿಂಗವಿದ್ದು, ಅದಕ್ಕೆ ಕಲ್ಲಿನಾಥ ಎಂಬ ಹೆಸರಿನಿಂದಲೂ ಪೂಜೆ ಸಲ್ಲಿಸಲಾಗುತ್ತಿರುತ್ತದೆ. ಅರ್ಚಕನು ದಿನನಿತ್ಯವೂ ಬೆಳಿಗ್ಗೆ ಹಸುವಿನ ಹಾಲು ಕರೆದು ಅದನ್ನು ಲಿಂಗಕ್ಕೆ ಎರೆದು ಪೂಜೆ ಮಾಡುವ ಕ್ರಮವಿಟ್ಟುಕೊಂಡಿರುತ್ತಾನೆ.

ಒಂದು ದಿನ ಅರ್ಚಕನಿಗೆ ತನ್ನ ಪತ್ನಿಯೊಡನೆ ಬೇರೊಂದು ಊರಿಗೆ ಸ್ವಲ್ಪ ದಿನ ಹೋಗಲೇಬೇಕಾದ ಪರಿಸ್ಥಿತಿ ಬರುತ್ತದೆ. ಅವನು ತನ್ನ ಎಳೇ ವಯಸ್ಸಿನ ಪ್ರೀತಿಯ ಮಗಳನ್ನು ಕರೆದು, ತಾವಿಬ್ಬರೂ ಹಿಂದಿರುಗುವವರೆಗೆ ನಿತ್ಯವೂ ತಪ್ಪದೇ ಕಲ್ಲಿನಾಥನ ಪೂಜೆಯನ್ನು ಕ್ಷೀರಾಭಿಷೇಕ ಮಾಡಿ ನಡೆಸಬೇಕೆಂದು ಹೇಳುತ್ತಾನೆ. ಹಾಗೆಯೇ ಮನೆಯನ್ನೆಂದೂ ಬಿಟ್ಟುಹೋಗದೆ ಬೇರೆ ಮಕ್ಕಳೊಡನೆ ಆಡಲು ಕೂಡ ಹೋಗದೆ ಕೇವಲ ಶಿವನ ಪೂಜೆಯತ್ತ ಗಮನಕೊಡಬೇಕೆಂದು ಹೇಳುತ್ತಾನೆ. ತಾನು ಹಿಂತಿರುಗಿ ಬರುವಾಗ ಅವಳಿಗೆ ಚೆಂದದ ಓಲೆ, ಮೂಗುತಿ, ಕಾಲಕಡಗ, ಬಣ್ಣದ ಸರ, ತೋಳಬಂಧಿ, ಇತ್ಯಾದಿ ಆಭರಣಗಳನ್ನು ತರುವುದಲ್ಲದೆ, ಮಕ್ಕಳು ಆಡುವಂತಹ ಕೀಲುಬೊಂಬೆಯನ್ನು ಕೂಡ ತರುವುದಾಗಿ ವಚನ ನೀಡುತ್ತಾನೆ.

ಮಾರನೇ ದಿನ ಬೆಳಿಗ್ಗೆ ಬೇಗನೆ ಎದ್ದ ಕೊಡಗೂಸು ಸ್ನಾನ ಮಾಡಿ ಹಸುವಿನ ಹಾಲನ್ನು ಕರೆದು ಕುದಿಸಿ ಒಂದು ಬಟ್ಟಲಲ್ಲಿ ಹಾಕಿಕೊಂಡು ಅದನ್ನು ಸೀರೆಯ ಸೆರಗಿನಲ್ಲಿ ಮುಚ್ಚಿಕೊಂಡು ದೇವಾಲಯ ತಲುಪುತ್ತಾಳೆ. ಅಲ್ಲಿ ಹಾಲಿನ ಬಟ್ಟಲನ್ನು ಶಿವಲಿಂಗದ ಮುಂದಿಟ್ಟು ಅದನ್ನು ಸೇವನೆ ಮಾಡುವಂತೆ ಪ್ರಾರ್ಥಿಸುತ್ತಾಳೆ. ಶಿವನಿಗೆ ಹಾಲನ್ನು ಸೇವಿಸಲು ಸ್ವಲ್ಪ ಸಮಯ ಬೇಕಾಗುವುದೆಂದು, ಕೊಡಗೂಸು ಸ್ವಲ್ಪ ಹೊತ್ತು ಹೊರಗಡೆ ಇದ್ದು ಪುನಃ ಒಳಗೆ ಬಂದು ನೋಡುತ್ತಾಳೆ. ಆದರೆ ಬಟ್ಟಲಿನ ಹಾಲು ಮೊದಲಿನಂತೆ ಇರುವುದನ್ನು ನೋಡಿ ತುಂಬಾ ಬೇಸರ ಪಡುತ್ತಾಳೆ.  ಶಿವನು ತಾನಿಟ್ಟ ಹಾಲನ್ನು ಸೇವಿಸದಿರುವುದಕ್ಕೆ ತನ್ನಿಂದ ಏನೋ ಅಪಚಾರ ನಡೆದಿರಬೇಕೆಂದು ಭಾವಿಸಿ ಬಗೆಬಗೆಯಾಗಿ ತನ್ನಿಂದಾದ ತಪ್ಪನ್ನು ತಿಳಿಸಿಸಬೇಕೆಂದು ಕೋರಿಕೊಳ್ಳುತ್ತಾಳೆ. (ಹಾಲು ಕಾದಿಲ್ಲವೇ?, ಪರಿಮಳವಿಲ್ಲವೇ? ಹೆಚ್ಚು ಬಿಸಿಯಾಗಿದೆಯೇ?  ಒಡೆದುಹೋಗಿದೆಯೇ? ತುಪ್ಪವನ್ನು ಸೇರಿಸಿಲ್ಲವೆಂದು ಬೇಸರವೇ?ಅಥವಾ ಕುಡಿಯುವ ವೇಳೆಯಾಗಿಲ್ಲವೇ? ಅಥವಾ ತುಂಬಾ ತಡವಾಯಿತೇ? ನಾನಿನ್ನೂ ಚಿಕ್ಕವಳಾದ್ದರಿಂದ ನೈವೇದ್ಯ ನೀಡಲು ಅನರ್ಹಳೇ?)

ಬಾಲಿಕೆಯ ಮುಗ್ಧ ಮನಸ್ಸು, ತಲ್ಲೀನತೆ,   ಭಕ್ತಿ ಮತ್ತು ಪರಿಶುದ್ಧತೆಯನ್ನು  ನೋಡಿ ಬೆರಗಾದ  ಶಿವನು ಲಿಂಗದಿಂದ ಹೊರಬಂದು ಪ್ರತ್ಯಕ್ಷನಾಗಿ ಬಟ್ಟಲಿನಲ್ಲಿದ್ದ ಹಾಲನ್ನು ಸೇವಿಸಿ ಅಂತರ್ಧಾನಗೊಳ್ಳುತ್ತಾನೆ. ಬಾಲಿಕೆಯ ಸಂತೋಷಕ್ಕೆ ಮಿತಿ ಇರುವುದಿಲ್ಲ. ಆಮೇಲಿನ ಪ್ರತಿನಿತ್ಯವೂ ಬಾಲಿಕೆ ತಂದ  ಹಾಲನ್ನು ಶಿವನು ಅವಳ ಮುಂದೆ ಪ್ರತ್ಯಕ್ಷನಾಗಿ ಸೇವಿಸುತ್ತಾನೆ.

ಸ್ವಲ್ಪ ದಿನಗಳಲ್ಲೇ ಊರಿಗೆ ಹಿಂದಿರುಗಿದ ಅರ್ಚಕನು ಬಾಲಿಕೆಯೊಡನೆ ನಿತ್ಯವೂ ಶಿವನಿಗೆ ಹಾಲೆರೆಯುತ್ತಿದ್ದೆಯೇ  ಎಂದು ಪ್ರಶ್ನಿಸುತ್ತಾನೆ. ಆಕೆ ತುಂಬಾ ಸಂಭ್ರಮದಿಂದ ತಾನು ನಿತ್ಯವೂ ಕಲ್ಲಿನಾಥನಿಗೆ ಹಾಲಿನ ಸೇವೆ ಸಲ್ಲಿಸಿದುದಾಗಿ ಹೇಳುತ್ತಾಳೆ. ಹಾಗೆಯೇ ಶಿವನು ತನ್ನ ಮುಂದೆ  ಪ್ರತ್ಯಕ್ಷನಾಗಿ ಬಟ್ಟಲಿನ ಹಾಲನ್ನು ಸೇವಿಸುತ್ತಿದ್ದನೆಂದು ಹೇಳುತ್ತಾಳೆ.  ಅರ್ಚಕನು ನಂಬಲಾರದ ಅವಳ ಮಾತನ್ನು ಕೇಳಿ, ಆಕೆ ನಿತ್ಯ ಅರ್ಚನೆ ಮಾಡದೇ ತನ್ನ ಮುಂದೆ ಸುಳ್ಳನ್ನು ಹೇಳುತ್ತಿದ್ದಾಳೆಂದು ಭಾವಿಸುತ್ತಾನೆ. ಅವನು ತಾನಿಲ್ಲದಾಗ ಶಿವನ ನಿತ್ಯ ಪೂಜೆ ನಡೆದಿಲ್ಲವೆಂದು ಭಾವಿಸಿ ತುಂಬಾ ಕೋಪದಿಂದ ಬಾಲಿಕೆಗೆ ಬಯ್ಯತೊಡಗುತ್ತಾನೆ. ಆದರೆ ಬಾಲಿಕೆ ತಾನು ನಿಸ್ಸಂದೇಹವಾಗಿ ನಿತ್ಯವೂ ಶಿವನಿಗೆ ಹಾಲೆರೆದುದು ಮತ್ತು ಅವನು ಪ್ರತ್ಯಕ್ಷನಾಗಿ ಅದನ್ನು ಸೇವಿಸಿದುದೂ ನಿಜವೆಂದು ಪುನಃ ಪುನಃ ಹೇಳುತ್ತಾಳೆ.

ಅವಳ ತಂದೆ ಅದನ್ನು ತಾನೇ ಪರೀಕ್ಷಿಸಿ ನೋಡುವುದಾಗಿ ಹೇಳಿ ಮಾರನೇ ದಿನ ಅವಳಿಗೆ ಹಾಲನ್ನು ತೆಗೆದುಕೊಂಡು ಹೋಗುವಂತೆ ಹೇಳಿ ಅವಳ ಹಿಂದೆ ಶಿವಾಲಯಕ್ಕೆ ಹೋಗಿ ಬಾಗಿಲ ಹಿಂದೆ ಅಡಗಿಕೊಳ್ಳುತ್ತಾನೆ. ಕೊಡಗೂಸು ಮಾಮೂಲಿನಂತೆ ಹಾಲಿನ ಬಟ್ಟಲನ್ನು ಶಿವಲಿಂಗದ ಮುಂದಿಟ್ಟು ಹಾಲನ್ನು ಸೇವಿಸುವಂತೆ ಪ್ರಾರ್ಥಿಸುತ್ತಾಳೆ. ಅರ್ಚಕನು ತನ್ನ ಮಗಳು ಖಂಡಿತವಾಗಿ ಸುಳ್ಳು ಹೇಳಿದ್ದಾಳೆಂದು ಭಾವಿಸಿ ಹಿಂದಿನಿಂದ ನೋಡುತ್ತಲೇ ಇರುತ್ತಾನೆ. ಆದರೆ ಬಾಲಿಕೆ  ಎಷ್ಟು ಬೇಡಿಕೊಂಡರೂ ಶಿವನು ಮಾಮೂಲಿನಂತೆ ಪ್ರತ್ಯಕ್ಷನಾಗಿ ಹಾಲನ್ನು ಸೇವಿಸುವುದೇ ಇಲ್ಲ. ಅರ್ಚಕನ ಕೋಪ ಮಿತಿ  ಮೀರಿ ಹೋಗಿ ಅವನು ಮಗಳು ಶಿವನಿಗೆ ಹಾಲನ್ನೀಯದಿದ್ದುದು ಮಾತ್ರವಲ್ಲ, ಸುಳ್ಳನ್ನೂ ಹೇಳಿದ್ದಾಳೆಂದು ಅವಳನ್ನು ಬೆನ್ನಟ್ಟಿ ಓಡಿಸಿಕೊಂಡು ಹೋಗುತ್ತಾನೆ. ಬಾಲಿಕೆಯು ಅವನಿಂದ ತಪ್ಪಿಸಿಕೊಂಡು ಓಡುತ್ತಾ ಶಿವಲಿಂಗವನ್ನು ಕೈಗಳಲ್ಲಿ ಅಪ್ಪಿಕೊಂಡು ತನ್ನನ್ನು ಕೋಪಿಷ್ಠ ತಂದೆಯ ಕೈಯಿಂದ ತಪ್ಪಿಸುವಂತೆ ಕೇಳಿಕೊಳ್ಳುತ್ತಾಳೆ.

ಅರ್ಚಕನು ನೋಡುತ್ತಿದ್ದಂತೆಯೇ, ಶಿವನು ಲಿಂಗದಿಂದ ಪ್ರತ್ಯಕ್ಷನಾಗಿ, ಕೊಡಗೂಸಿನ ಕೈ ಹಿಡಿದು ಅವಳೊಡನೆ ಲಿಂಗದೊಳಗೈಕ್ಯನಾಗತೊಡಗುತ್ತಾನೆ. ತಂದೆಗೆ ತನ್ನ ಕಣ್ಣುಗಳನ್ನೇ ನಂಬಲಾಗುವುದಿಲ್ಲ. ತನ್ನ ಮುದ್ದಿನ ಮಗಳು ಸುಳ್ಳು ಹೇಳಿರಲಿಲ್ಲವೆಂದು ತಿಳಿದು ಅವನು ಪಶ್ಚಾತ್ತಾಪಗೊಳ್ಳುತ್ತಾನೆ. ಅವನು ಆಘಾತದಿಂದ ಹೊರಬರುವಷ್ಟರಲ್ಲಿ ಮಗಳು ಲಿಂಗದೊಳಗೆ ಐಕ್ಯಗೊಳ್ಳುತ್ತಿರುವುದು ಗೋಚರಿಸಿ ಕೇವಲ ಅವಳ ತಲೆ ಮಾತ್ರ ಸ್ವಲ್ಪ ಹೊರಗೆ ಕಾಣುತ್ತಿರುತ್ತದೆ. ಅವನು ವೇಗವಾಗಿ ಹೋಗಿ ಅವಳ ಜಡೆಯನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಅದನ್ನುಳಿದ ಆಕೆಯ ದೇಹವೆಲ್ಲ ಲಿಂಗದೊಳಗೆ ಅದೃಶ್ಯವಾಗಿಬಿಟ್ಟಿರುತ್ತದೆ. ಮಹಾಶಿವನು ತನ್ನ ಮುಗ್ಧ ಪ್ರೀತಿಯ ಭಕ್ತೆಯನ್ನು ತನ್ನ ಕೈಲಾಸ ಲೋಕಕ್ಕೆ ಕೊಂಡೊಯ್ದುಬಿಟ್ಟಿರುತ್ತಾನೆ. ಮಗಳ ಜಡೆ  ಮಾತ್ರ ತಂದೆಯ ಕೈಯಲ್ಲಿ ಉಳಿದಿರುತ್ತದೆ. ಈ ಸಮಾಚಾರ ಬಲುಬೇಗನೆ ಊರಿನಲ್ಲೆಲ್ಲಾ ಹರಡಿ ಜನರು ಗುಂಪಾಗಿ ಪವಾಡದಂತೆ ಲಿಂಗದ ಹೊರಗೆ ಕಾಣುತ್ತಿದ್ದ ಕೊಡಗೂಸಿನ ಜಡೆಯನ್ನು ವೀಕ್ಷಿಸಲು ಬರುತ್ತಾರೆ. ವಿಚಿತ್ರವೆಂದರೆ ಕೊಡಗೂಸಿನ ಜಡೆಯು ಒಬ್ಬ ಜೀವಂತ ಬಾಲಿಕೆಯ  ಜಡೆಯಂತೆ ಬೆಳೆದು  ಹೊರಗೆ ಬರುತ್ತಿರುತ್ತದೆ. ಊರಿನ ಜನರೆಲ್ಲಾ ಸೇರಿ ಪ್ರತಿವರ್ಷವೂ ಕೊಡಗೂಸು ಲಿಂಗದೊಳಗೆ ಐಕ್ಯಗೊಂಡ ದಿನ ಜಾತ್ರೆಯೊಂದನ್ನು ನಡೆಸುತ್ತಾರೆ. ಕೊಡಗೂಸಿನ ಕಥೆ ಒಂದು ದಂತಕಥೆಯಾಗಿಬಿಡುತ್ತದೆ.

ನನಗೆ ನೆನಪಿರುವ ಪದ್ಯದ ಮೊದಲ ಭಾಗ ಕೆಳಕಂಡಂತಿದೆ:

ಒಂದು ದಿವಸಂ ದೇವಕಾರ್ಯಕ್ಕೆಂದು ನೆರೆವೂರಿಂಗೆ ಪೋಗುತೆ

ತಂದೆ ತನ್ನಯ ಕಿರಿಯಮಗಳಂ ಕರೆದು ಮೈದಡವಿ

ಮಂದಿರದ ಕಾಪಿರಿಸಿ ಮತ್ತಿಂತೆಂದನೆಲ್ಲಿಗು ಮಿಸುಕದಿರು

ಮನೆಯಿಂದಗಲದಿರು ತರುವಲಿಗಳನೊಡದಾಡದಿರು ತಾಯೆ

ನಿರುತವಾದೆಮ್ಮ ವ್ರತವನಂತರಿಸದೊಬ್ಬಳೆ ಹಾಲನಗಜಾವರನ

ನಿಲಯಕ್ ಒಯ್ದು ಶಂಭುವಿಗೂಣಬಡಿಸು ಕಂದ

ಪರಿವಿಡಿಯ ದಿನವೇಳೆ ತಪ್ಪಿಸದಿರು ಮರೆಯದಿರು ನೀನಗಲದಿರು

ತರಳೆ ನಿನ್ನಂ ನಂಬಿ ಪೋದೆಪೆವಕ್ಕ ಚನ್ನಕ್ಕ

 

ಓಲೆ ಚೌಕುಳಿ ಕಡಕು ಮೂಗುತಿ ಕಾಲ ಕಡಗಂ

 ಬಣ್ಣ ಸರವೂಮ್ ತೋಳಬಂದಿಎನಿಪ್ಪ ಚೆಲುವಿನ ಬಾಲದುಡುಗೆಗಳ

ಬಾಲೆಯರು ಹಿಡಿದಾಡು ಒಳ್ಳೆಯ ಕೀಲು ಬೊಂಬೆಯಂ ಅದರುಡುಗೆಯಂ

ಬಾಲೆ  ತಂದೆಪೆವೆನುತ ಮನೆಯಿಂದೊಪ್ಪಯಿಸಿ ಪೋಗೆ

 

ಇಂತುವರ ಕೊಡಗೂಸುವಾಗಲೆ ದಂತದಾವನ ಗೈದು

ಮಿಂದೋಲವಾಂತು ದಣಿಬವನಿಟ್ಟು ಬಸಿತವನಿಟ್ಟು ಬಾಳದಲಿ

ಕಾಂತೆ ಮಡಗಿದ ಜನ್ನಿಗೆಯ ಪಾಲಂ ತೆಗೆದು ಚೆನ್ನಾಗಿ ಕಾಸಿದ

ನಂತರದೊಳಾ ತರುಣಿ ಒಬ್ಬಳವಳೆದು   ಬಟ್ಟಲಲಿ

ಪಿಡಿದುಕೊಂಡು ಸೆರಗಿನಿಮ್ಮಡಿಸಿ ಮುಚ್ಚಿ ಕಡಂಗಿ ಭೋರನೆ

ನಡೆದು ಹೊಕ್ಕಾ ದೇಗುಲದೊಳಿರ್ಪಭವನಂ ಕಂಡು

ಪೊಡಮಡುತ್ತಂ ಬಟ್ಟಲಂ ಮುಂಗಡೆಯೊಳಿಟ್ಟಾರೋಗಿಸೈ

ಎನ್ನೊಡಯನೇ ಗುರು ಕಲ್ಲಿನಾಥ ಎಂದು ಭಿನ್ನವಿಸಿ

 

ಒಂದಿನಿತು ಹಿಮ್ಮೆಟ್ಟಿ ಮರೆಯಲಿ ನಿಂದು ಮತ್ತೈತಂದು ನೋಡಲು

ಮುಂದೆ ಬಟ್ಟಲು ತರುಣಿ ತಾ ಮುನ್ನಿರಿಸಿದಂತಿರಲು

ಕುಂದಿ ಮನದಲಿ ತಾಪದಿಂ ತನು ಕುಂದಿ ಎಲೆ ನಾ ತಂದ  ಪಾಲಂ

ತಂದೆ ನೀನಾರೋಗಿಸದ ಕಾರಣವದೇನಯ್ಯ?

 

ಪಾಲು ಕಾಯದೋ ಪರಿಮಳಿಸದೋ ಪಾಲು ಕಡುಬಿಸಿಯಾದುದೋ?

ಚಿಲು ಪಾಲಿದೆಲ್ಲವು ಒಡೆದುದೋ ಆರೋಗಿಸುವ ಬುದ್ಧಿ

ವೇಳೆಯಾಗದೋ ನಿನ್ನ ಮೀಸಲು ಪಾಲು ಬೇಸರವಾಯಿತೋ?

ನಾ ಬಾಲೆಯೆಂದೊಲ್ಲೆಯೋ ತರಲ್ ಕಾರಕ್ಕೆ ನೋಡಿದರೋ

ಬಟ್ಟಲನು ನಾ ಬೆಳಗೆನೋ ಮನವಿಟ್ಟು ಪಾಲಿಂಗೆ

 ಪಾಲ್ಕೆನೆಗಟ್ಟದೋ ನೀರ್ಬೆರಸಿದವೋ ಆರೋಗಿಸುವ ಬುದ್ಧಿ

ಪುಟ್ಟದೋ ಸೀಯಿತ್ತೋ ತುಪ್ಪವ ನಟ್ಟೆನೆಂದು ಕುಡಿಯಲರಿಯೆಯೋ

ಹೊಟ್ಟೆಗೈದುದು ಮಧುರವಿಲ್ಲವೋ ಹೊತ್ತು ಪೋಯಿತ್ತೋ?

 

ವೀರಭದ್ರನ ಹಲಗೆ ಮೊರೆವುದು ವೀರ ಭಕ್ತರ

ತಿಂತಿಣಿಯಲತಿ ವೀರಮಂ ತೋರಿದೇಪೆನೇಳಾರೋಗಿಸೈ ಪಾಲ

ಕ್ಷೀರದಲಿ ನಾ ಕವಲನಾದೊಡೆ ತಾರೇನೆ ಬೇಕೆಂದೊಡಂ

ಶಿಶುಹಾರಿಯಿವಳೆಂದೆನ್ನದಿರು ನಾ ಉಸಿರು ಮೊಂದಾಗಿ

 

ಈ ಬರವಣಿಗೆ ಮಾಡುವಾಗ ನಾನು ಆ ಕಾಲದಲ್ಲಿ ನಮ್ಮ ೧ನೇ ತರಗತಿಯಿಂದ ೮ನೇ ತರಗತಿಯ ವರೆಗಿನ ಕನ್ನಡ ಪಠ್ಯಪುಸ್ತಕಗಳಲ್ಲಿ ನನ್ನ ನೆನಪಿಗೆ ಬರುವ ಪದ್ಯಗಳನ್ನು ಗಮನಿಸಿದಾಗ ಕಥೆಯನ್ನು ಹೇಳುವ  ದೃಷ್ಟಿಯಿಂದಾಗಲೀ ಅಥವಾ ಕವಿತ್ವದ  ದೃಷ್ಟಿಯಿಂದಾಗಲೀ ಕೋಳೂರು ಕೊಡಗೂಸು ಮೊದಲ ಸ್ಥಾನದಲ್ಲಿತ್ತೆಂದು ಅನಿಸುತ್ತಿದೆ. ಅಷ್ಟು ಮಾತ್ರವಲ್ಲ. ನಾನು ಮುಂದೆ ಒಂದು ದಿನ ಕೋಳೂರಿಗೆ ಹೋಗಿ ಅಲ್ಲಿನ ಶಿವಾಲಯದಲ್ಲಿ ಕೊಡಗೂಸಿನ ತಲೆಯ ಕೂದಲು ಲಿಂಗದಿಂದ ಹೊರಗೆ ಬಂದಿರುವುದನ್ನು ನೋಡಲೇ ಬೇಕೆಂದು ತೀರ್ಮಾನಿಸಿದ್ದೆ!

ನನ್ನ ದುರಾದೃಷ್ಟಕ್ಕೆ ನನಗೆ ಪದ್ಯದ ಮೊದಲ ಅರ್ಧ ಭಾಗ ಮಾತ್ರ ನೆನಪಿನಲ್ಲಿದೆ ಮತ್ತು ಉಳಿದ ಭಾಗ ನನಗೆಲ್ಲಿಯೂ ದೊರೆಯಲಿಲ್ಲ. ಈ ಕಥೆ ಎಷ್ಟು ಪ್ರಸಿದ್ಧಿ ಪಡೆದಿದೆಯೆಂದರೆ, ಇದನ್ನು ಮಾನ್ಯ ಹರಿಕಥಾ ವಿದ್ವಾನ್ ಗುರುರಾಜುಲು ನಾಯ್ಡು ಅವರು ಹರಿಕಥೆಯಾಗಿ ಹೇಳಿದ್ದಾರೆ. ಆಸಕ್ತಿ ಇರುವ ನನ್ನ ಓದುಗರು ಅದನ್ನು ಕೆಳಕಂಡ ಲಿಂಕ್ ಮೂಲಕ ಓದಬಹುದು:

https://www.youtube.com/watch?v=wTrsTDRfDb8

-----------------------------ಮುಂದುವರಿಯುವುದು-------------------------

 

 

 

ನಮ್ಮ ಕಾಲದ ಪಠ್ಯಪುಸ್ತಕಗಳು - ಅಧ್ಯಾಯ ೫

 


ಅಧ್ಯಾಯ

ನಾನು ನಮ್ಮ ಪಠ್ಯಪುಸ್ತಕಗಳ ಬಗ್ಗೆ ಬರೆಯುವಾಗ ಸನ್ಮಾನ್ಯ ಬಿ ಎಂ ಶ್ರೀಕಂಠಯ್ಯನವರು (ಬಿಎಂಶ್ರೀ) ಬರೆದ ಎರಡು ಅತ್ಯಂತ ಶ್ರೇಷ್ಠ ಪದ್ಯಗಳ ಬಗ್ಗೆ ಬರೆಯಲೇಬೇಕು. ಅವುಗಳೆಂದರೆ ಕಾರಿ ಹೆಗ್ಗಡೆಯ ಮಗಳು ಮತ್ತು ಕರುಣಾಳು ಬಾ ಬೆಳಕೆ. ಮೊದಲನೆಯದು ಥಾಮಸ್ ಕ್ಯಾಮ್ಪ್ ಬೆಲ್ ಅವರ  ಲಾರ್ಡ್ ಉಲಿನ್ಸ್ ಡಾಟರ್ ಮತ್ತು ಎರಡನೆಯದು ನ್ಯೂಮನ್ ಅವರ  ಲೀಡ್ ಕೈಂಡ್ಲಿ ಲೈಟ್ ಇಂಗ್ಲಿಷ್ ಕವನಗಳ ಕನ್ನಡ ರೂಪಾಂತರಗಳು. ಮೊದಲ ಪದ್ಯ ನಮ್ಮ ಆರನೇ ತರಗತಿಯ ಪುಸ್ತಕದಲ್ಲಿದ್ದರೆ, ಎರಡನೆಯದು ನಮ್ಮ ಅಕ್ಕಂದಿರ ನಾಲ್ಕನೇ ತರಗತಿಯ ಪುಸ್ತಕದಲ್ಲಿತ್ತು. ಆಗಿನ್ನೂ ಚಿಕ್ಕವರಾಗಿದ್ದ ನಾವು,ನಮಗೆ ತುಂಬಾ ಇಷ್ಟಕರವಾಗಿದ್ದ ಅವುಗಳನ್ನು ಬಾಯಿಪಾಠ ಮಾಡಿ ನಮ್ಮ ತಮ್ಮಂದಿರು ಮತ್ತು  ಅಕ್ಕಂದಿರ ಮಕ್ಕಳನ್ನು ತೊಟ್ಟಿಲಲ್ಲಿ ತೂಗುವಾಗ ಜೋಗುಳವಾಗಿ ಹಾಡುತ್ತಿದ್ದೆವು.   ಹಾಗೆಯೇ ಈ ಎರಡು ಪದ್ಯಗಳ ಪ್ರತಿ ಸಾಲುಗಳೂ ಇಂದಿಗೂ ನಮ್ಮ ನೆನಪಿನಲ್ಲಿವೆ.

ಸನ್ಮಾನ್ಯ ಬಿಎಂಶ್ರೀ (೧೮೮೪-೧೯೪೬) ಅವರನ್ನು, ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಾಡಿದ ಪ್ರಯತ್ನಗಳನ್ನು ಪರಿಗಣಿಸಿ, “ಕನ್ನಡದ ಕಣ್ವ” ಎಂದು ಕರೆಯಲಾಗುತ್ತಿತ್ತು. ಅವರ ಸಾಹಿತ್ಯ ಪ್ರೌಢಿಮೆ ಮತ್ತು ಕವಿತ್ವದ ಸಾಮರ್ಥ್ಯ ಯಾವ ಮಟ್ಟದ್ದಾಗಿತ್ತೆಂದರೆ, ಎರಡು ಕವನಗಳು ಅವುಗಳ ಇಂಗ್ಲಿಷ್ ಮೂಲಕ್ಕಿಂತಲೂ ತುಂಬಾ ಉತ್ತಮವಾಗಿವೆಯೆಂದು ಎಲ್ಲರ ಅಭಿಪ್ರಾಯವಾಗಿತ್ತು. ನಾನು ಎರಡು ಮೂಲ ಇಂಗ್ಲಿಷ್ ಕವನಗಳನ್ನು ಮತ್ತು ಬಿಎಂಶ್ರೀ ಅವರು ಮಾಡಿದ ಅವುಗಳ ರೂಪಾಂತರಗಳನ್ನು, (ಓದುಗರು ಶ್ರೀಯವರ ಸಾಹಿತ್ಯ ಹಿರಿಮೆಯನ್ನು ಅರಿಯುವಂತಾಗಲು) ಕೆಳಗೆ  ಕೊಟ್ಟಿರುತ್ತೇನೆ. ಶ್ರೀ ಅವರ ಇಂಗ್ಲಿಷ್ ಗೀತೆಗಳು ಎಂಬ ಕವನ ಸಂಕಲನ ಅಂದಿನ ಎಷ್ಟೋ ಉದಯೋನ್ಮುಖ ಕವಿಗಳಿಗೆ ಪ್ರೋತ್ಸಾಹ ನೀಡಿದುದು ಮಾತ್ರವಲ್ಲ, ಒಂದು ಹೊಸ ಬಗೆಯ ಭಾವನಾತ್ಮಕ ಶೈಲಿಯ ಕವನಗಳ ರಚನೆಗೆ ಒಂದು ಭದ್ರ ಬುನಾದಿಯನ್ನು ಹಾಕಿತೆಂದು ಹೇಳಲೇಬೇಕು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದ ಬಿಎಂಶ್ರೀ  ಅವರು, ಕುವೆಂಪು ಮತ್ತು ಜಿ ಪಿ ರಾಜರತ್ನಂ ಅವರಿಗೆ ಕನ್ನಡದಲ್ಲಿ ಬರವಣಿಗೆ ಮಾಡಲು ಪ್ರೋತ್ಸಾಹ ನೀಡಿದ್ದನ್ನು ಮರೆಯುವಂತಿಲ್ಲ. ಕರುಣಾಳು ಬಾ ಬೆಳಕೆ ಎಂಬ ಗೀತೆ ಇಂದಿಗೂ ಎಷ್ಟು ಪ್ರಸಿದ್ಧಿ ಹೊಂದಿದೆಯೆಂದರೆ, ಯಾವುದೇ ಕನ್ನಡ ಭಾವಗೀತೆ ಕಾರ್ಯಕ್ರಮ ಕವನವನ್ನು ಹಾಡಿಸದೇ ಪೂರ್ಣಗೊಳ್ಳಲಾಗದು ಎಂದು ಹೇಳಲೇಬೇಕು.

ಕಾರಿ ಹೆಗ್ಗಡೆಯ ಮಗಳು ನಮ್ಮ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರಿತ್ತೆಂದರೆ, ನಮಗೆ ಇಂದಿಗೂ ಕೂಡ ಕಾರಿ ಹೆಗ್ಗಡೆಯ ಮಗಳು ತನ್ನ ಪ್ರೀತಿಯ ತಂದೆ ಮತ್ತು ಪ್ರಿಯಕರ ಇವರ ನಡುವೆ ಯಾರನ್ನು ಅಗಲಬೇಕು ಮತ್ತು ಯಾರನ್ನು ಆರಿಸಿಕೊಳ್ಳಬೇಕು ಎಂಬ ಸಂದಿಗ್ದತೆಯನ್ನು  ಎದುರಿಸಬೇಕಾದ ಸನ್ನಿವೇಶ ಕಣ್ಣಮುಂದೆ ಕಟ್ಟಿದಂತಿದೆ. ನಮ್ಮ ಪುಸ್ತಕದಲ್ಲಿದ್ದ ಚಿತ್ರವೊಂದರಲ್ಲಿ ಕಾರಿ ಹೆಗ್ಗಡೆಯ ಮಗಳು ಕಡಲಿನ ನಡುವೆ  ಹಾಯುತ್ತಿದ್ದ ದೋಣಿಯೊಂದರಲ್ಲಿ ನಿಂತು, ತನ್ನ ಒಂದು ಕೈಯಿಂದ  ಪ್ರಿಯಕರನ ಸೊಂಟವನ್ನು ಬಳಸಿ, ಇನ್ನೊಂದು ಕೈ ಚಾಚಿ ತನ್ನ ತಂದೆಗೆ ನಿರ್ವಾಹವಿಲ್ಲದೇ  ವಿದಾಯ ಹೇಳುತ್ತಿರುವ ದೃಶ್ಯ ಇಂದಿಗೂ ನಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಹಾಗೆಯೇ ಕಡಲಿನ ಪ್ರವಾಹದ ಅಲೆಗಳು ದೋಣಿಯನ್ನು ತಂದೆಯಿಂದ ದೂರ ಒಯ್ಯುತ್ತಿರುವ ಸನ್ನಿವೇಶ ತುಂಬಾ ಪರಿಣಾಮಕಾರಿಯಾಗಿತ್ತು.

ಕಾರಿ ಹೆಗ್ಗಡೆಯ ಮಗಳು

 

ಪಡುವ ದಿಬ್ಬದ ಗೌಡನೊಬ್ಬನು

ಬಿಡದೆ ತೊರೆಯನ ಕೂಗಿಕೊಂಡನು

ತಡೆಯದೀಗಲೆ ಗಡುವ ಹಾಯಿಸು

ಕೊಡುವೆ ಕೇಳಿದ ಹೊನ್ನನು

 

ಆರು ನೀವೀ ಕರುಗಿ ಮೊರೆಯುವ

ನೀರ ಕಾಯಲ ಹಾಯುವರು

ಪಡುವ ದಿಬ್ಬದ ಗೌಡ ನಾನೀ

ಮಡದಿ ಕಾರಿಯ ಕುವರಿಯು

 

ಓಡಿ ಬಂದೆವು ಮೂರು ದಿವಸ

ಜಾಡ ಹಿಡಿದು ಹಿಂದೆ ಬಂದರು

ನಮ್ಮನೀ ಕಣಿವೆಯಲಿ ಕಂಡರೆ

ಚಿಮ್ಮಿ ಹರಿವುದು ನೆತ್ತರು

 

ಹತ್ತಿ ಕುದುರೆಯ ತರುಬಿ ಬರುವರು

ಮುತ್ತಿ ಕೊಂಡರೆ ನನ್ನ ಕೊಲುವರು

ಘೋರ ದುಃಖದ ನಾರಿಯನು ಬಳಿ

ಕಾರು ನಗಿಸಲು ಬಲ್ಲರು?

 

ಆಗ ಅಂಜದೆ ತೊರೆಯನೆಂದನು

ಬೇಗ ಜೀಯಾ ಓಡ ತರುವೆನು

ಸುಡಲಿ ಹೊನ್ನು ಬೆಡಗಿ ನಿನ್ನೀ

ಮಡದಿಗೋಸುಗ ಬರುವೆನು

 

ಆದುದಾಗಲಿ ಮುದ್ದಿನರಗಿಣಿ

ಗಾದ ಗಂಡವ ಕಾದು ಕೊಡುವೆನು

ಕಡಲು ನೊರೆಗಡೆದೆದ್ದು ಕುದಿಯಲಿ

ಗಡುವ ಹಾಯಿಸಿ ಬಿಡುವೆನು

 

ತೂರು ಗಾಳಿಗೆ ಕಡಲು ಕುದಿಯಿತು

ನೀರ ದೆವ್ವಗಳರಚಿಕೊಂಡವು

ಹೆಪ್ಪು ಮೋಡದ ಹುಬ್ಬು ಗಂಟಿಗೆ

ಕಪ್ಪಗಾದವು ಮುಖಗಳು

 

ಕೆರಳಿ ಕೆರಳಿ ಗಾಳಿ ಚೆಚ್ಚಿತು

ಇರುಳು ಕತ್ತಲೆ ಕವಿದು ಮುಚ್ಚಿತು

ಕಣಿವೆ ಇಳಿವರ ಕುದುರೆ ಕತ್ತಿಯ

ಖಣಿಖಣಿ ಧ್ವನಿ ಕೇಳಿತು

 

ಏಳು ಬೇಗೇಳಣ್ಣ ಎಂದಳು

ಹೂಳಿಕೊಳಲಿ ನನ್ನ ಕಡಲು

ಮುಳಿದ ಮುಗಿಲ ತಡೆಯಬಲ್ಲೆ

ಮುಳಿದ ತಂದೆಯ ತಡೆಯೆನು

 

ಇತ್ತ ಕರೆಮೊರೆ ಹಿಂದಕಾಯಿತು

ಅತ್ತ ತೆರೆಮೊರೆ ಸುತ್ತಿಕೊಂಡಿತು

ಆಳ ಕೈಯಲಿ ತಾಳಬಹುದೇ

ಏಳು ಬೀಳಿನ ಕಡಲದು

 

ಅಲೆಗಳಬ್ಬರದಲ್ಲಿ ಮೀಟಿ

ಮುಳಗುತಿಹರು ಏಳುತಿಹರು

ಕರೆಗೆ ಬಂದ ಕಾರಿ ಹೆಗ್ಗಡೆ

ಕರಗಿ ಮುಳಿಸು ಅತ್ತನು

 

ತೊಂಡು ತೆರೆಗಳ ಮುಸುಕಿನಲ್ಲಿ

ಕಂಡು ಮಗಳ ಕರಗಿ ಹೋದ

ಒಂದು ಕೈ ನೀಡಿದಳು ನೆರವಿಗೆ

ಒಂದು ತಬ್ಬಿತು ನಲ್ಲನ

 

ಮರಳು ಮರಳು ಮಗಳೆ ಎಂದ

ಮೊರೆಯುವ ಕಾಯಲ ಗಂಟಲಿಂದ

ಮರೆತೆ ಒಪ್ಪಿದೆ ನಿನ್ನ ನಲ್ಲನ

ಮರಳು ಕಂದಾ ಎಂದನು

 

ಮರಳಬಹುದೇ? ಹೋಗಬಹುದೇ?

ಕರೆಯ ತೆರೆಯಪ್ಪಳಿಸಿ ಹೊಯ್ದು

ಹೊರಳಿ ಹೋದವು ಮಗಳ ಮೇಲೆ

ಕೊರಗಿನಲಿ ಅವನುಳಿದನು

                 ------ಬಿ. ಎಂ. Shree

ಕರುಣಾಳು ಬಾ ಬೆಳಕೆ ಒಂದು ಭಾವಗೀತೆಯಾಗಿ ಹಾಡಲ್ಪಡುತ್ತಿದ್ದರೂ, ಅದು ನಿಜದಲ್ಲಿ ಒಂದು ಪ್ರಾರ್ಥನಾ ಗೀತೆಯಾಗಿದೆ. ಅಲ್ಲದೇ ಅದು ಯಾವುದೇ ಧರ್ಮವನ್ನು ಪ್ರತಿನಿಧಿಸುವುದಿಲ್ಲ ಮತ್ತು ಕೇವಲ ಬೆಳಕನ್ನು ಧ್ಯಾನಿಸಿ ಬರೆದ ಗೀತೆಯಾಗಿದೆ.

ಪ್ರಾರ್ಥನೆ

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ,

ಕೈ ಹಿಡಿದು ನಡೆಸೆನ್ನನು.

ಇರುಳು ಕತ್ತಲೆಯ ಗವಿ; ಮನೆ ದೂರ; ಕನಿಕರಿಸಿ,

ಕೈ ಹಿಡಿದು ನಡೆಸೆನ್ನನು.

ಹೇಳಿ ನನ್ನಡಿಯಿಡಿಸು; ಬಲು ದೂರ ನೋಟವನು

ಕೇಳೆನೊಡನೆಯೆ - ಸಾಕು ನನಗೊಂದು ಹೆಜ್ಜೆ

 

ಮುನ್ನ ಇಂತಿರದಾದೆ; ನಿನ್ನ ಬೇಡದೆ ಹೋದೆ,

ಕೈ ಹಿಡಿದು ನಡೆಸು ಎನುತ.

ನನ್ನ ದಾರಿಯ ನಾನೆ ನೋಡಿ ಹಿಡಿದೆನು ಇನ್ನು

ಕೈ ಹಿಡಿದು ನಡೆಸು ನೀನು

ಮಿರುಗು ಬಣ್ಣಕೆ ಬೆರೆತು, ಭಯ ಮರೆತು ಕೊಬ್ಬಿದೆನು;

ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ

 

ಇಷ್ಟು ದಿನ ಸಲಹಿರುವೆ ಮೂರ್ಖನನು; ಮುಂದೆಯೂ

ಕೈ ಹಿಡಿದು ನಡೆಸದಿಹೆಯಾ?

ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾಯ್ಡು

ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೇ ಹಿಂದೊಮ್ಮೆ ನಾನೊಲಿದು

ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ?

---ಬಿ. ಎಂ. Shree

 

ಗೀತೆ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ, ಏಕಾಂತತೆಯಲ್ಲಿ ಅದನ್ನು ಕೇಳುತ್ತಿದ್ದರೆ ನಮ್ಮನ್ನು ಅದು ಬೇರೊಂದು ಲೋಕಕ್ಕೇ ಒಯ್ದಂತೆ ಭಾಸವಾಗುತ್ತದೆ. ಈ ಗೀತೆ ತುಂಬಾ ಗಾಯಕಿಯರಿಂದ  ಸುಶ್ರಾವ್ಯವಾಗಿ ಹಾಡಲ್ಪಟ್ಟಿದೆ. ಅದರಲ್ಲಿ ಮುಖ್ಯವಾಗಿ ನೆನಪಿಗೆ ಬರುವ ಪ್ರಸಿದ್ಧ ಹೆಸರುಗಳೆಂದರೆ ರತ್ನಮಾಲ ಪ್ರಕಾಶ್, ಎಂ ಡಿ ಪಲ್ಲವಿ, ಬಿ ಆರ್ ಛಾಯ ಮತ್ತು ಜಯಂತಿ ನಾಡಿಗ್.  ಇವರ ಹಾಡುಗಳನ್ನು ಯೂ ಟ್ಯೂಬಿನಲ್ಲಿ ಈ ಕೆಳಕಂಡ ಲಿಂಕ್ ಗಳ ಮೂಲಕ ಕೇಳಬಹುದು:

1.   https://www.youtube.com/watch?v=R7ILuJ6inaI

2.  https://sonichits.com/video/MD_Pallavi/Karunalu_ba_belake

3.  https://gaana.com/song/karunaalu-baa-belake-3

4. https://www.youtube.com/watch?v=-KmsiqfzN7M

 

ವಿಚಿತ್ರವೆಂದರೆ, ಈ ಎಲ್ಲಾ ಗಾಯಕಿಯರು ಗೀತೆಯ ಕೆಳಕಂಡ ಸಾಲುಗಳನ್ನು ನಿರ್ಲಕ್ಷಿಸಿದ್ದಾರೆ (ಹಾಡಿಲ್ಲ):

ನನ್ನ ದಾರಿಯ ನಾನೆ ನೋಡಿ ಹಿಡಿದೆನು ಇನ್ನು

ಕೈ ಹಿಡಿದು ನಡೆಸು ನೀನು

ಮಿರುಗು ಬಣ್ಣಕೆ ಬೆರೆತು, ಭಯ ಮರೆತು ಕೊಬ್ಬಿದೆನು;

ಮೆರೆದಾಯ್ತು; ನೆನೆಯದಿರು ಹಿಂದಿನದೆಲ್ಲ

ಮಾನ್ಯ  ಬಿಎಂಶ್ರೀ ಅವರ ಗೀತೆಯ ಮುಖ್ಯ ಸಾಲುಗಳನ್ನು ಗಾಯಕಿಯರು ನಿರ್ಲಕ್ಷಿಸಿರುವುದಕ್ಕೆ ಕಾರಣಗಳು ತಿಳಿಯುವುದಿಲ್ಲ. ಮಾತ್ರವಲ್ಲ. ಈ ಎಲ್ಲಾ ಗಾಯಕಿಯರು  ಬಲು ದೂರ ನೋಟವನು ಕೇಳನೊಡನೆಯೆ - ಸಾಕು ನನಗೊಂದು ಹೆಜ್ಜೆ ಅಥವಾ ಕೇಳಿದೊಡನೆಯೆ ಸಾಕು ನನಗೊಂದು ಹೆಜ್ಜೆ ಎಂದು ಕವಿತೆಯ ಸಾಲೊಂದನ್ನು ತಪ್ಪಾಗಿ ಹೇಳಿರುವುದಕ್ಕೂ ಯಾವುದೇ ಕಾರಣಗಳು ಕಾಣುವುದಿಲ್ಲ. ಅದನ್ನು ಬಲು ದೂರ ನೋಟವನು ಕೇಳೆನೊಡನೆಯೆ - ಸಾಕು ನನಗೊಂದು ಹೆಜ್ಜೆ ಎಂದು ಹಾಡಬೇಕಿತ್ತು. ಗೀತೆಯ ಇಂಗ್ಲಿಷ್ ಮೂಲದಲ್ಲಿರುವ “I donot ask to see the distant scene – One step is enough for me” ಎಂಬ ಸಾಲುಗಳು ಈ ಅರ್ಥವನ್ನು ಬಲು ಸ್ಪಷ್ಟವಾಗಿ ನೀಡುತ್ತವೆ.

ನಾನು ಈ ಅಧ್ಯಾಯವನ್ನು ಮೇಲಿನ ಎರಡು ಮೇರುಕೃತಿಗಳನ್ನು ರಚಿಸಿದ ಸನ್ಮಾನ್ಯ ಕವಿವರ್ಯ ಬಿ.ಎಂ.ಶ್ರೀಕಂಠಯ್ಯ (ಬಿಎಂಶ್ರೀ ) ಅವರ ಮುಡಿಗಳಿಗೆ ಅರ್ಪಿಸುತ್ತಿದ್ದೇನೆ.

----------------------ಮುಂದುವರಿಯುವುದು----------------