Monday, August 31, 2020

ನನ್ನ ಚಂದಮಾಮ ದಿನಗಳು – ೩





 ಆಗಿನ ಚಂದಮಾಮದ ಮೊದಲ ಪುಟದಲ್ಲಿ ಸಾಮಾನ್ಯವಾಗಿ ಸ೦ಕ್ಷಿಪ್ತ ರೂಪದ ಸಂಪಾದಕೀಯ ಇರುತ್ತಿತ್ತು. ಒಮ್ಮೊಮ್ಮೆ ಹಬ್ಬ ಮತ್ತಿತರ ವಿಶೇಷ ಸಮಯಗಳಲ್ಲಿ ಸಂದರ್ಭಕ್ಕೆ ಸೂಕ್ತವಾದ ಕವನ ಒಂದಿರುತ್ತಿತ್ತು. ಉದಾಹರಣೆಗೆ,  "ನವ ಯುಗಾದಿಯು ನಲಿದು ಬರುತಿದೆ", ಗುರುವ ನಿಂದಿಸಬೇಡ ಓ ಮುದ್ದು ತಮ್ಮಾ" ಎಂಬ ಪ್ರಾಸಬದ್ಧ ಅರ್ಥಯುಕ್ತ ಕವನಗಳಿರುತ್ತಿದ್ದವು. ಪ್ರಾಯಶಃ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಮುದ್ರಿತವಾಗಿದ್ದ ಕವನವೊಂದು ನನ್ನ ನೆನಪಿನಲ್ಲಿದೆ:

ಶಾರದಾಂಬೆಯೆ ವಿಧಿಯ ರಾಣಿಯೆ

ವಂದಿಸುವೆ ನಾ ನಿನ್ನನು

ದಾರಿ ಕಾಣದೆ ಬಳಲುತಿರುವೆನು

ತೋರಿಸೈ ಸತ್ಪಥವನು

ಓದುಬಾರದ ಬರಹವರಿಯದ

ಮಂದ ಬುದ್ಧಿಯ ನನ್ನನು

ಓದು ಬರಹಗಳನ್ನೆ ನೀಡುತ

ಹರಸು ನಿನ್ನಯ ಮಗುವನು

ಸತ್ಯ ಧರ್ಮಗಳಲ್ಲೆ ನಡೆಯುವ

ಭಾವವೆನ್ನೊಳು ರೂಪಿಸೈ

ನಿತ್ಯ ನಿನ್ನಯ ಸೇವೆಗಯ್ಯುವ

ಭಾಗ್ಯವೆನೆಗೆ ಕರುಣಿಸೈ

 

ಗುರುಹಿರಿಯರನು ಭಕ್ತಿಭಾವದಿ

ನೋಡಿಕೊಳ್ಳುವ ಶೃದ್ಧೆಯ

ವರದೆ ಶಾರದೆ ಬೇಡುವೆನು ನಾ

ಹಾನಿಯಿಲ್ಲದ ವಿದ್ಯೆಯ

 

ಅರಳೀಮರದ ಆತ್ಮ!

ಚಂದಮಾಮದ ಎಲ್ಲಾ ಕಥೆಗಳೂ ಮಕ್ಕಳ ಮನೋಭೂಮಿಕೆಗೆ ಅನುಗುಣವಾಗಿ ಸುಖಾಂತ್ಯವಾಗೇ ಇರುತ್ತಿದ್ದವು. ಆದರೆ ಒಂದು ಕಥೆ ಮಾತ್ರಾ ದುರಂತದಲ್ಲಿ ಕೊನೆಗೊಂಡು ನಮ್ಮ ಮನಸ್ಸನ್ನು ಘಾಸಿಗೊಳಿಸಿದ್ದು ಈಗಲೂ ಹಾಗೆಯೇ ಉಳಿದಿದೆ. ಕಥೆಯ ಹೆಸರು "ಅರಳೀಮರದ ಆತ್ಮ"!

ಸೋಮಣ್ಣ ಕಷ್ಟಪಟ್ಟು ಕೆಲಸ ಮಾಡುವ ಒಬ್ಬ ಯುವಕ. ತಂದೆ ತಾಯಿಯರನ್ನು ಕಳೆದುಕೊಂಡಿದ್ದ ಆತ ಮನೆಯಲ್ಲಿ ಒಂಟಿಯಾಗಿದ್ದ. ಹಾಗೂ ಮದುವೆಯಾಗಲು ಯೋಗ್ಯಳಾದ ಕನ್ಯೆಯೊಬ್ಬಳನ್ನು ಹುಡುಕುತ್ತಿದ್ದ. ಆ ಹಳ್ಳಿಯ  ನಡುವೆ ನೂರಾರು  ಪಕ್ಷಿಗಳಿಗೆ ಆಶ್ರಯದ ಬೀಡಾದ ಒಂದು ದೊಡ್ಡ ಅರಳೀಮರವಿತ್ತು. ಸುಡು ಬೇಸಿಗೆಯಲ್ಲಿ ನೂರಾರು ಮಂದಿ ಪ್ರಯಾಣಿಕರಿಗೆ ತಂಪನ್ನು ನೀಡುತ್ತಿದ್ದ ಈ ಮರ ಬಹುತೇಕ ಹಳ್ಳಿಯ ಜನರು ಸಂಧಿಸುವ ಜಾಗವೂ ಆಗಿತ್ತು.

ಒಂದು ಸಂಜೆ ಸೋಮಣ್ಣ ಒಂಟಿಯಾಗಿ ಮರದ ಕೆಳಗೆ ಅರೆತೆರೆದ ಕಣ್ಣಲ್ಲಿ ಏನೋ ಯೋಚಿಸುತ್ತಾ ಕುಳಿತಿದ್ದ. ಎದುರಿಗೆ ಯಾರೋ ಬಂದಂತಾಗಿ ಕಣ್ಣರಳಿಸಿ ನೋಡಿದರೆ ಸ್ಪುರದ್ರೂಪಿಯಾದ ಹೆಣ್ಣೊಬ್ಬಳು ನಿಂತಿದ್ದು ಕಾಣಿಸಿತು. ಆಕೆಯೊಡನೆ ಮಾತನಾಡಿದ ಸೋಮಣ್ಣ ಆವಳಿಗೆ ಮನಸೋತು ಹೋದ. ಆದರೆ ಅವಳ ಮನದಲ್ಲೂ ಅದೇ ಭಾವನೆ ಮೂಡಿತೇ ಎಂಬುದರ ಅರಿವಾಗಲಿಲ್ಲ. ಹೀಗೆ ಮುಂದೆಷ್ಟೋ ದಿನ ಪರಸ್ಪರ ಸಂಧಿಸಿದ ಮೇಲೆ, ಸೋಮಣ್ಣ ತನ್ನ ಮನದ ಇಂಗಿತವನ್ನು ಆಕೆಗೆ ಹೇಳಿಯೇ ಬಿಟ್ಟ. ಒಂದು ಶರತ್ತಿನ ಮೇಲೆ ಆಕೆ ಮದುವೆಗೆ ಒಪ್ಪಿಗೆ ನೀಡಿದಳು. ಅದೇನೆಂದರೆ ಆಕೆ ಯಾರು, ಅವಳ ಮೂಲವೇನು ಎಂದು ಯಾವತ್ತೂ ಕೇಳಕೂಡದೆಂದು.

ಮದುವೆ ಆಗಿ ಹೊಸ ದಾಂಪತ್ಯದ ಸುಖ, ಸಂತೃಪ್ತಿಯಲ್ಲಿ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಗಂಡುಮಗನೊಬ್ಬ  ಜನಿಸಿದ ಮೇಲೆ ದಂಪತಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಹೀಗೆಯೇ ಕೆಲವು ವರ್ಷಗಳು ಕಳೆದುಹೋದವು.

ಒಂದು ಸಂಜೆ ಊರಿನ ಕೆಲ ಜನರು ಅರಳೀಮರದ ಕೆಳಗೆ ಕುಳಿತು ಏನೋ ಚರ್ಚಿಸುತ್ತಿರುವುದು ಸೋಮಣ್ಣನ ಕಣ್ಣಿಗೆ ಬಿತ್ತು. ಅವರುಗಳ ಮಾತಿನ ಸಾರಾಂಶ ಇಷ್ಟೇ. ರಸ್ತೆಯ ಅಗಲೀಕರಣ ನಡೆಯುತ್ತಿದ್ದು ಅದಕ್ಕಾಗಿ ಈ ಅರಳೀಮರವನ್ನು ಕಡಿಯಲಾಗುವುದು. 

ಸೋಮಣ್ಣನ ಮನಸ್ಸು ಮುದುಡಿಹೋಯಿತು. ಅರಳೀಮರ ಅವನ ದೇಹದ ಒಂದು ಆತ್ಮೀಯ ಭಾಗವೇ ಆಗಿಬಿಟ್ಟಿತ್ತು. ಮನೆಗೆ ಬಂದು ನೋಡಿದರೆ ಪತ್ನಿಯೂ ಖಿನ್ನಳಾಗಿದ್ದುದು ಕಾಣಿಸಿತು. ಸೋಮಣ್ಣ ಆಕೆಗೆ ಎಲ್ಲ ವಿಚಾರವನ್ನು ಹೇಳಿದ. ಆದರೆ ಆ ವಿಚಾರ ಆಕೆಗೆ ಮೊದಲೇ ತಿಳಿದಂತಿತ್ತು. ತನಗಿಂತಲೂ ಅವಳು ಹೆಚ್ಚಿನ ವೇದನೆಯನ್ನು ಅನುಭವಿಸುತ್ತಿರುವುದನ್ನು ಅವನು ಗಮನಿಸಿದ.

ಮತ್ತೆ ಕೆಲವು ದಿನಗಳಲ್ಲಿ ರಸ್ತೆಯ ಅಗಲೀಕರಣ ಪ್ರಾರಂಭವಾಗಿಯೇ ಬಿಟ್ಟಿತು. ಹತ್ತಾರು ಆಳುಗಳು ಕೂಡಿಕೊಂಡು ಅರಳೀಮರವನ್ನು ಕಡಿಯತೊಡಗಿದರು. ಕೊಡಲಿ ಪೆಟ್ಟುಗಳು ಮರಕ್ಕೆ ಬೀಳುವುದನ್ನು ನೋಡಿ ಸೋಮಣ್ಣ ತನ್ನ ದೇಹವನ್ನೇ ಯಾರೋ ಕತ್ತರಿಸುತ್ತಿದ್ದಾರೆಂದು ಅನ್ನಿಸಿ ವಿಷಯ ತಿಳಿಸಲು ಮನೆಗೆ ಓಡಿಬಂದ.  ಅಲ್ಲಿ ನೋಡಿದರೆ ಹೆಂಡತಿ ತಾಳಲಾರದ ನೋವು ಅನುಭವಿಸುತ್ತಾ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಾಳೆ. ಹಾಗೆಯೇ ತಾನು "ಅರಳೀಮರದ ಆತ್ಮ" ಎಂಬ ಸತ್ಯವನ್ನು  ಗಂಡನಿಗೆ ತಿಳಿಸುತ್ತಾಳೆ. ಸೋಮಣ್ಣನಿಗೆ ತಾನು ಮೊದಲು ಆಕೆಯನ್ನು ಸಂಧಿಸಿದ ನಂತರ ನಡೆದ ಎಲ್ಲಾ ಘಟನೆಗಳೂ ಕಣ್ಣಮುಂದೆ ಹಾದುಹೋದಂತಾಗಿ ಪರಿಸ್ಥಿತಿಯ ಸಂಪೂರ್ಣ ಅರಿವಾಗುತ್ತದೆ.

ಸೋಮಣ್ಣ ಮತ್ತೆ ಅದೇ ಸ್ಥಳಕ್ಕೆ ಧಾವಿಸಿ ಮರ ಕಡಿಯುವುದನ್ನು ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಂಡ. ಅವನ ಕಣ್ಣಿಂದ ನೀರು ಸುರಿಯುತ್ತಿತ್ತು. ಆದರೆ ಯಾರೂ ಅವನ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನೋಡು ನೋಡುತ್ತಿದ್ದಂತೆಯೇ ಆ ಬೃಹತ್ ಅರಳೀಮರ ಭೋರಿಡುತ್ತಾ ನೆಲಕ್ಕೆ ಉರುಳಿತು. ಸೋಮಣ್ಣ ಕಂಗಾಲಾಗಿ ಮನೆಗೆ ಬಂದು ನೋಡುವಾಗ ಹೆಂಡತಿ ಹೆಣವಾಗಿ ಮಲಗಿದ್ದು ಕಾಣಿಸಿತು. ಪುಟ್ಟ ಮಗು ಅತ್ತು ಅತ್ತು ಅಮ್ಮನನ್ನು ಎಬ್ಬಿಸಲು ನೋಡುತ್ತಿತ್ತು.

ಮಾರನೇ ದಿನ ಕಡಿದುಬಿದ್ದ ಅರಳೀಮರದ ದಿಮ್ಮಿಯನ್ನು ದೂರ ಸಾಗಿಸಲು ಗಾಡಿಗೆ  ತುಂಬುವುದಕ್ಕಾಗಿ ಪ್ರಯತ್ನ ಪ್ರಾರಂಭವಾಯಿತು. ದಪ್ಪ ನೇಣು ಕಟ್ಟಿ ಎಳೆಯಲು ಹತ್ತಾರು ಆಳುಗಳು ಶತಪ್ರಯತ್ನ ಮಾಡಿದರೂ ದಿಮ್ಮಿ ಸೂಜಿಮೊನೆಯಷ್ಟೂ ಜರುಗಲಿಲ್ಲ. ಕಡೆಗೆ ಆನೆಯನ್ನೂ ಕರೆಸಿ ಎಳೆಸಲು ನೋಡಿದರೂ ಪ್ರಯೋಜನವಾಗಲಿಲ್ಲ. ಆನೆಯೂ ಸೋತು ಸುಣ್ಣವಾಯಿತು.

ಅದೇ ಸಮಯಕ್ಕೆ ಸೋಮಣ್ಣ ಮತ್ತು ಅವನ  ಮಗ ಅಲ್ಲಿಗೆ ಬಂದರು. ಮರದ ದಿಮ್ಮಿಯನ್ನು ನೋಡಿದ ಮಗು ಅದು ತನ್ನ ತಾಯಿಯ ದೇಹವೋ ಎಂಬಂತೆ "ಅಮ್ಮಾ" ಎಂದು ಅಳುತ್ತಾ ಅದನ್ನು ಅಲುಗಾಡಿಸಲು ಪ್ರಯತ್ನಿಸಿತು. ಎಂತಹಾ ವಿಸ್ಮಯ! ಅಲ್ಲಿ ನೆರೆದವರು ಆಶ್ಚರ್ಯಚಕಿತರಾಗಿ ಕಣ್ಣುಜ್ಜಿ ನೋಡಿದರು. ಆನೆ ಎಳೆದಾಗಲೂ ಅಲುಗಾಡದ ದಿಮ್ಮಿ ಸರಾಗವಾಗಿ ಚಲಿಸತೊಡಗಿತ್ತು! ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಆಳುಗಳು ದಿಮ್ಮಿಯನ್ನು ಗಾಡಿಯೊಳಗೆ ತಳ್ಳಿಬಿಟ್ಟರು.

ಕಥೆಯೇನೋ ಅಲ್ಲಿಗೆ ಮುಗಿದುಹೋಗಿತ್ತು. ಆದರೆ ನಮ್ಮ ಆಗಿನ ಎಳೆಯ ವಯಸ್ಸಿನ ಮನಸಿನಮೇಲೆ ಅದು ಒತ್ತಿದ ನೋವಿನ ಮುದ್ರೆ ಎಂದೂ ಮಾಸಲಾಗದ್ದಾಗಿತ್ತು. ಆಮೇಲೆ ಎಷ್ಟೋ ದಿನಗಳವರೆಗೆ ಅರಳೀಮರದ ಆತ್ಮ ದುಃಸ್ವಪ್ನವಾಗಿ ನಮ್ಮನ್ನು ಕಾಡುತ್ತಲೇ ಇತ್ತು. 

ಜಿನೀಯೊಂದು ಮತ್ತು ಡೊಂಕು ಬಾಲದ ನಾಯಿ!

ನನ್ನ ಮೆಚ್ಚಿನ ಚಂದಮಾಮ ದಿನಗಳ ಬಗೆಗಿನ ಈ ಬರಹವನ್ನು ಒಂದು ಸಂಚಿಕೆಯಲ್ಲಿ ಬಂದಿದ್ದ ತಮಾಷೆಯ ಕಥೆಯೊಂದಿಗೆ ಮುಗಿಸಲಿಚ್ಛಿಸುತ್ತೇನೆ. ಒಬ್ಬ ಯುವಕನಿಗೆ ಬಾಲ್ಯದಿಂದಲೂ ಸೋಮಾರಿತನದ ಅಭ್ಯಾಸವಾಗಿಬಿಟ್ಟಿತ್ತು. ತಾನು ಸ್ವತಃ ಮಾಡಬೇಕಾದ ಕೆಲಸಗಳನ್ನೂ ಕೂಡ ಬೇರೆ ಯಾರಾದರೂ ಮಾಡಲಿ ಎಂದು ಅವನು ಬಯಸುತ್ತಿದ್ದ. ಒಂದು ದಿನ ಯಾರೋ ಅವನಿಗೆ ಜಿನೀಯೊಂದು ದೊರೆತರೆ ಅದು ಅವನಿಗೆ ಬೇಕಾದ ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಿಕೊಟ್ಟುಬಿಡುವುದೆಂದು ಹೇಳಿದರು.

ಅವನು ಕೂಡಲೇ ಭಕ್ತಿಯಿಂದ ದೇವರನ್ನು ಬೇಡಿಕೊಂಡ ಕೆಲ ನಿಮಿಷಗಳಲ್ಲೇ ಜಿನೀಯೊಂದು ಅವನ ಮುಂದೆ ಪ್ರತ್ಯಕ್ಷವಾಗುತ್ತದೆ. ಕೂಡಲೇ ತನಗೇನು ಅಪ್ಪಣೆಯೆಂದು ಯುವಕನನ್ನು ಕೇಳುತ್ತದೆ. ಯುವಕನು ಅತೀವ ಸಂತೋಷದಿಂದ ತನಗಿಷ್ಟವಾದ ಕೆಲವು ತಿಂಡಿಗಳನ್ನು ತರುವಂತೆ ಹೇಳುತ್ತಾನೆ. ಕ್ಷಣಮಾತ್ರದಲ್ಲಿ ಆ ತಿಂಡಿಗಳು ಅವನ ಮುಂದಿರುತ್ತವೆ. ಆಮೇಲೆ ಅವನು ತನಗೊಂದು ಸುಂದರವಾದ ಹೊಸ ಮನೆ ಬೇಕೆನ್ನುತ್ತಾನೆ. ಮರುಕ್ಷಣವೇ ಅವನು ಬಯಸಿದ ಹೊಸ ಮನೆಯೊಂದು ಅವನ ಮುಂದೆ ಗೋಚರಿಸುತ್ತದೆ.

ಯುವಕನು ತುಂಬಾ ಸಡಗರ  ಮತ್ತು ಸಂತೋಷದಿಂದ ತನ್ನ ನವಗೃಹವನ್ನು ವೀಕ್ಷಿಸುತ್ತಿರುವಷ್ಟರಲ್ಲೇ ಜಿನೀ ಅವನಿಗೆ ತನ್ನ ಮುಂದಿನ ಆದೇಶವೇನೆಂದು ಕೇಳುತ್ತದೆ. ಅದು ತಾನು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲವೆಂದೂ ಮತ್ತೂ ತನಗೆ ಒಂದರ ನಂತರ ಮತ್ತೊಂದು ಆದೇಶಗಳನ್ನು ನೀಡಲೇ ಬೇಕಾಗುವುದೆಂದು ಯುವಕನಿಗೆ ಸ್ಪಷ್ಟಪಡಿಸುತ್ತದೆ! ಆಗ ಯುವಕನಿಗೆ ತಾನೆಂತಹ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡೆನೆಂದು ಅರಿವಾಗುತ್ತದೆ. ಅಷ್ಟರಲ್ಲಿ ಅವನಿಗೊಂದು ಐಡಿಯಾ ಹೊಳೆಯುತ್ತದೆ. ಅವನು ಕೂಡಲೇ ಜಿನೀಗೆ ತನ್ನ  ಮನೆಯ ಪಕ್ಕದಲ್ಲೊಂದು ಆಳವಾದ ಬಾವಿಯೊಂದನ್ನು ತೋಡುವಂತೆ ಹೇಳುತ್ತಾನೆ.

ಜಿನಿ ಕೂಡಲೇ ಬಾವಿ ತೋಡಲು  ಪ್ರಾರಂಭ ಮಾಡುತ್ತದೆ. ಆ ಕೆಲಸ ಮುಗಿಯಲು ತುಂಬಾ ಸಮಯ ಬೇಕಾಗುವುದೆಂದು ತಿಳಿದು ಯುವಕ ಆರಾಮದಿಂದ ಮಲಗಿ ನಿದ್ದೆಮಾಡತೊಡಗುತ್ತಾನೆ. ಆದರೆ ಸ್ವಲ್ಪ ಸಮಯದಲ್ಲೇ ಅವನ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿ ಅವನನ್ನು ನಿದ್ದೆಯಿಂದ ಎಬ್ಬಿಸುತ್ತಾರೆ. ಎಚ್ಚತ್ತು ಅವನು ನೋಡಿದಾಗ ಜಿನಿ ಬೃಹದಾಕಾರದ ಬಾವಿಯೊಂದನ್ನು ತೋಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಆ ಬಾವಿಯ ಸುತ್ತಮುತ್ತಲಿನ ಮನೆಗಳ ಅಡಿಪಾಯ ಕುಸಿಯುವಂತಾದರೂ ಜಿನಿ ಇನ್ನೂ ಬಾವಿಯನ್ನು ತೋಡುತ್ತಲೇ ಇರುತ್ತದೆ!

ಯುವಕನು ಗಾಬರಿಯಿಂದ ಜಿನಿಗೆ ಕೆಲಸ ನಿಲ್ಲಿಸಲು ಹೇಳಿ ಅಗೆದ ಮಣ್ಣನ್ನೆಲ್ಲಾ ಪುನಃ ಬಾವಿಯೊಳಗೆ ತುಂಬುವಂತೆ ಆಜ್ಞೆ ನೀಡುತ್ತಾನೆ. ಅಷ್ಟರಲ್ಲೇ ಅದಕ್ಕೆ ಕೊಡಬಹುದಾದ ಮುಂದಿನ ಆಜ್ಞೆಯ ಬಗ್ಗೆ ಯೋಚಿಸತೊಡಗುತ್ತಾನೆ. ಆಗ ಅವನ ಮುಂದೆ ನಾಯಿಯೊಂದು ಹೋಗುತ್ತಿರುವುದು ಕಣ್ಣಿಗೆ ಬೀಳುತ್ತದೆ. ಕೂಡಲೇ ಅವನಿಗೊಂದು ಐಡಿಯಾ ಹೊಳೆಯುತ್ತದೆ. ಅಷ್ಟರಲ್ಲೇ ಜಿನಿ ಬಾವಿಯನ್ನು ಮುಚ್ಚಿ ಹಾಕಿ ಮುಂದಿನ ಕೆಲಸವೇನೆಂದು ಕೇಳುತ್ತದೆ. ಕೂಡಲೇ ಯುವಕ ಅದಕ್ಕೆ ಆ ನಾಯಿಯ ಡೊಂಕು ಬಾಲವನ್ನು ನೇರವಾಗಿರುವಂತೆ ಮಾಡುವಂತೆ ಆಜ್ಞೆ ನೀಡುತ್ತಾನೆ. ಜಿನಿಯು ಕೂಡಲೇ ನಾಯಿಯ ಬಾಲವನ್ನು ನೇರವಾಗಿ ಸ್ವಲ್ಪ ಕಾಲ ಹಿಡಿದು ಯುವಕನ ಬಳಿಗೆ ಹಿಂದಿರುಗಿ ಕೆಲಸ ಮುಗಿಸಿದುದಾಗಿ ಹೇಳುತ್ತದೆ.

ಆಗ ಯುವಕ ಅದಕ್ಕೆ ನಾಯಿಯ ಬಾಲ ಪುನಃ ಡೊಂಕಾಗಿರುವತ್ತ ಗಮನ ಸೆಳೆಯುತ್ತಾನೆ. ಜಿನಿಗೆ ತುಂಬಾ ಕೋಪ ಬಂದು ಪುನಃ ನಾಯಿಯ ಬಾಲವನ್ನು ಕೈಯಲ್ಲಿ ನೇರವಾಗಿ ಒತ್ತಿ ಒತ್ತಿ ಹಿಡಿದು ಒಂದು ಕೋಲಿನಾಕಾರ ಮಾಡಲು ಹೆಣಗಾಡುತ್ತದೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಬಾಲ ಪುನಃ ಡೊಂಕಾಗುತ್ತಲೇ ಇರುತ್ತದೆ. ಆಗ ಯುವಕ ಜಿನಿಗೆ ಅದರ ಪ್ರಯತ್ನವನ್ನು ಮುಂದುವರಿಸುತ್ತಾ, ಕಾರ್ಯ ಮುಗಿದೊಡನೆ ತನ್ನ ಹತ್ತಿರ ಮುಂದಿನ ಆಜ್ಞೆ ಪಡೆಯಲು ಬರುವಂತೆ ಹೇಳಿ ತಾನು ಪುನಃ ನಿದ್ರಿಸಲು ಹೋಗಿಬಿಡುತ್ತಾನೆ. ಪಾಪ! ಬಡಪಾಯಿ ಜಿನಿ ಇಂದಿಗೂ ನಾಯಿಯ ಬಾಲವನ್ನು ನೇರಮಾಡುತ್ತಲೇ ಇದೆಯಂತೆ!

-------- ಮುಗಿಯಿತು------



No comments: