Monday, August 3, 2020

ಬಾಲ್ಯ ಕಾಲದ ನೆನಪುಗಳು – ೧೦೬

ಬಾಲ್ಯ ಕಾಲದ ನೆನಪುಗಳು – ೧೦೬

ಆಗಸ್ಟ್ ತಿಂಗಳ ಮೊದಲ ವಾರ ಪುಟ್ಟಣ್ಣ ಮತ್ತು ನಾನು ಪುನಃ ಬೆಂಗಳೂರಿಗೆ ಪ್ರಯಾಣ ಮಾಡಿದೆವು. ಪುಟ್ಟಣ್ಣ ಬೆಂಗಳೂರಿನಲ್ಲೇ ಇದ್ದು ಅಲ್ಲಿಯೇ ನೌಕರಿ ಹುಡುಕುವುದಾಗಿ ತೀರ್ಮಾನಿಸಿದ್ದ. ನಾನು ಇನ್ಸ್ಟಿಟ್ಯೂಟಿಗೆ ಸೇರುವ ತೀರ್ಮಾನ ಮಾಡಿದಾಗ ನನ್ನ ಖರ್ಚಿಗೆ ಪುಟ್ಟಣ್ಣನಿಗೆ ನೌಕರಿ ಸಿಕ್ಕಿ ಅವನಿಂದ ಸಿಗುವ ಸಹಾಯದ ಲೆಕ್ಕವನ್ನೂ ತೆಗೆದುಕೊಂಡಿದ್ದೆ. ನಾನು ಬೆಂಗಳೂರು ಸೇರಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು ೧೫೦೦ ರೂಪಾಯಿಗಳಿದ್ದವು. ಇನ್ಸ್ಟಿಟ್ಯೂಟಿನ ಅಡ್ಮಿಶನ್ ಫೀ, ಹಾಸ್ಟೆಲ್ ಫೀ ಅಡ್ವಾನ್ಸ್ ಫೀ ಮತ್ತು ನನ್ನ ಇತರ ಖರ್ಚುಗಳಿಗೆ ಸುಮಾರು ೧,೦೦೦ ರೂಪಾಯಿಗಳು ಬೇಕಾದವು. ಒಟ್ಟಿನಲ್ಲಿ ಸುಮಾರು ೫೦೦ ರೂಪಾಯಿ ಬ್ಯಾಂಕ್ ಖಾತೆಯಲ್ಲಿಟ್ಟುಕೊಂಡು ನಾನು ಹಾಸ್ಟೆಲ್ ಜೀವನ ಪ್ರಾರಂಭಿಸಿದೆ. ನಾನು ನನ್ನ ಕುಟುಂಬದಿಂದ ಯಾವುದೇ ಹಣದ ಸಹಾಯ ನಿರೀಕ್ಷಿಸುವಂತಿರಲಿಲ್ಲ. ಆದ್ದರಿಂದ ನನ್ನ ಸ್ಕಾಲರ್ಷಿಪ್ ಹಣ ತಿಂಗಳಿಗೆ ೧೦೦ ರೂಪಾಯಿ, ನನ್ನ ಮ್ಯಾಥಮ್ಯಾಟಿಕ್ಸ್ ಲೆಕ್ಚರರ್ ಎನ್.ಆರ್.ಭಟ್ ಅವರು ಭರವಸೆ ಇತ್ತ ತಿಂಗಳ ಕೊಡುಗೆ, ಮಣಿಪಾಲ್ ಅಕಾಡೆಮಿಯಿಂದ ಫೀ ಸಹಾಯ ಮತ್ತು ಪುಟ್ಟಣ್ಣನ ಸಂಬಳದಿಂದ ಸಹಾಯ ಇವುಗಳನ್ನು ಅವಲಂಭಿಸಿ ನನ್ನ ವಿದ್ಯಾಭ್ಯಾಸ ಮುಂದುವರಿಯ ಬೇಕಿತ್ತು.

ಇನ್ಸ್ಟಿಟ್ಯೂಟಿನಲ್ಲಿ ನನ್ನ ಮೊದಲ ದಿನ

ಇನ್ಸ್ಟಿಟ್ಯೂಟಿನಲ್ಲಿ ನನ್ನ ಮೊದಲ ದಿನ ತುಂಬಾ ಸಡಗರದ ದಿನವಾಗಿತ್ತು. ಇನ್ಸ್ಟಿಟ್ಯೂಟ್ ವರ್ಷ  ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಲ್ಲಿನ ಪರಿಚಯ ಮಾಡಿಸಲು ತುಂಬಾ ಉತ್ತಮ ವ್ಯವಸ್ಥೆ ಮಾಡಿತ್ತು. ಮೊದಲಿಗೆ ನಮಗೆ ನಮ್ಮ ಮೆಟಲರ್ಜಿ ಡಿಪಾರ್ಟ್ಮೆಂಟಿನ ಎಲ್ಲಾ ಅಧ್ಯಾಪಕರನ್ನು ಪರಿಚಯ ಮಾಡಿಸಲಾಯಿತು. ಆಗ ಡಿಪಾರ್ಟ್ಮೆಂಟ್ ಮುಖ್ಯಸ್ಥರಾದ ಕೃಷ್ಣನ್ ಅವರು ಬರ್ಮಿಂಗ್ ಹ್ಯಾಮ್  ಯೂನಿವೆರ್ಸಿಟಿಯಲ್ಲಿ ಪಿಹೆಚ್.ಡಿ. ಡಿಗ್ರಿ ಪಡೆದಿದ್ದರು. ಅವರು ಶೀಘ್ರದಲ್ಲೇ ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಅಬ್ರಹಾಂ ಅವರು ನೇಮಕವಾಗಲಿದ್ದರು. ಬನಾರಸ್ ಹಿಂದೂ ಯೂನಿವೆರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಅಬ್ರಹಾಂ ಅವರು ಇನ್ಸ್ಟಿಟ್ಯೂಟಿನಲ್ಲಿ ತುಂಬಾ ಹೆಸರು ಪಡೆದ ಪ್ರೊಫೆಸರ್ ಆಗಿದ್ದರು. ಇನ್ಸ್ಟಿಟ್ಯೂಟಿನ ಗ್ರಂಥಾಲಯ ತುಂಬಾ ಪ್ರಸಿದ್ದಿ ಪಡೆದಿತ್ತು. ಅದನ್ನು ಹಗಲು ಮತ್ತು ರಾತ್ರಿ ೨೪ ಗಂಟೆಗಳೂ ತೆರೆದಿಡಲಾಗುತ್ತಿತ್ತು. ಅಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಾದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ದೇಶವಿದೇಶಗಳಿಂದ ಸಂಗ್ರಹಿಸಿ ಇಡಲಾಗಿತ್ತು. ನಮ್ಮನ್ನು ಅಲ್ಲಿನ ಗ್ರಂಥಪಾಲಕರಿಗೆ ಪರಿಚಯ ಮಾಡಿಸಲಾಯಿತು. ನಂತರ ನಮ್ಮನ್ನು ಇನ್ಸ್ಟಿಟ್ಯೂಟಿನ ರಿಜಿಸ್ಟ್ರಾರ್ ಆಗಿದ್ದ ವೈದ್ಯನಾಥನ್ ಅವರಿಗೆ ಪರಿಚಯ ಮಾಡಿಸಲಾಯಿತು. ರಿಜಿಸ್ಟ್ರಾರ್ ಹುದ್ದೆಯು ಅತ್ಯಂತ ಶಕ್ತಿಯುತ ಹುದ್ದೆಯಾಗಿದ್ದು ಸಂಪೂರ್ಣ ಇನ್ಸ್ಟಿಟ್ಯೂಟಿನ ಆಡಳಿತವು ಅವರ ವ್ಯಾಪ್ತಿಯಲ್ಲಿತ್ತು. ದಿನದ ಅಂತ್ಯದಲ್ಲಿ ನಮ್ಮನ್ನು ಇನ್ಸ್ಟಿಟ್ಯೂಟಿನ ನಿರ್ದೇಶಕರಾದ ಡಾಕ್ಟರ್ ಸತೀಶ್ ಧಾವನ್ ಅವರಿಗೆ ಪರಿಚಯ ಮಾಡಿಸಲಾಯಿತು. ಡಾಕ್ಟರ್ ಧಾವನ್ ಅವರು ತುಂಬಾ ವಿನಯದಿಂದ ಪ್ರತಿ ವಿದ್ಯಾರ್ಥಿಯ ಪರಿಚಯ ಮಾಡಿಕೊಂಡು ತುಂಬಾ ಸಮಯವನ್ನು ನಮ್ಮೊಡನೆ ಕಳೆದದ್ದು ನಾವೆಂದೂ ಮರೆಯದ ಅನುಭವವಾಗಿತ್ತು.

ನನಗೆ ಕೊಠಡಿಯ ಅಲಾಟ್ಮೆಂಟ್

ನನಗೆ ಆಂಧ್ರ ಪ್ರದೇಶದ ಸುಬ್ಬರಾವ್ ಎಂಬ ಹಿರಿಯ ವಿದ್ಯಾರ್ಥಿ ಇದ್ದ ಕೊಠಡಿಯನ್ನು ನೀಡಲಾಯಿತು. ಸುಬ್ಬರಾವ್ ಇಂಟರ್ನಲ್ ಕಂಬಶ್ಚನ್ ಇಂಜಿನಿಯರಿಂಗ್ ವಿಭಾಗದಲ್ಲಿ ಫೈನಲ್ ವರ್ಷದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು. ಅಲ್ಲಿಯವರೆಗೆ ಒಂಟಿಯಾಗಿ ರೂಮಿನಲ್ಲಿದ್ದ ಅವರಿಗೆ ನನಗೂ ಅದೇ ರೂಮನ್ನು ನೀಡಿರುವುದು ಏನೂ ಇಷ್ಟವಾಗಲಿಲ್ಲ. ಅವರು ವಿಷಯದಲ್ಲಿ ವಾರ್ಡನ್ ಅವರೊಡನೆ ಮಾತನಾಡುವುದಾಗಿ ತಿಳಿಸಿದರು. ನನಗೆ ಮೊದಲು ಅವರ ಸಮಸ್ಯೆ ಏನೆಂದು ಗೊತ್ತಾಗಲಿಲ್ಲ. ಆದರೆ ಅವರು ನನಗೆ ವೈಯಕ್ತಿಕವಾಗಿ ಏನೂ ತಪ್ಪಾಗಿ ತಿಳಿದುಕೊಳ್ಳಬಾರದೆಂದು ಹೇಳಿದರು. ಅವರ ಪ್ರಕಾರ ಹಿರಿಯ ವಿದ್ಯಾರ್ಥಿಯಾದ ಅವರಿಗೆ ಒಂದು ರೂಮಿನಲ್ಲಿ ಒಂಟಿಯಾಗಿ ಇರುವ ಅವಕಾಶಕ್ಕೆ ಅರ್ಹತೆ ಇತ್ತಂತೆ. ಅದಕ್ಕಾಗಿ ಅವರು ಆಗಲೇ ತಮ್ಮ ಅರ್ಜಿ ಸಲ್ಲಿಸಿದ್ದರಂತೆ.

ಆಮೇಲೆ ವಾರ್ಡನ್ ಅವರು ಸುಬ್ಬರಾವ್ ಹತ್ತಿರ ಸಧ್ಯಕ್ಕೆ ಮಾತ್ರ ನಾನು ಅವರ ರೂಮಿನಲ್ಲಿ ಇರಬೇಕೆಂದೂ, ಮುಂದೆ ನನ್ನನ್ನು ಬೇರೆ ರೂಮಿಗೆ ಕಳಿಸಿ ಅವರಿಗೆ ಸಿಂಗಲ್ ರೂಮ್ ಅನುಕೂಲ ಮಾಡಿಕೊಡಲಾಗುವುದೆಂದೂ ತಿಳಿಸಿದರು. ಅವರಿಂದ ಭರವಸೆ ದೊರೆತ ಮೇಲೆ ಸುಬ್ಬರಾವ್ ನನ್ನೊಡನೆ ತುಂಬಾ ಆತ್ಮೀಯತೆಯಿಂದ ನಡೆದುಕೊಂಡರು. ಮುಂದೆ ನಾನು ಬೇರೆ ರೂಮಿಗೆ ಹೋಗುವವರೆಗೆ ಅವರು ನನ್ನನ್ನು ತಮ್ಮನಂತೆಯೇ ನೋಡಿಕೊಂಡರು. ಅವರಿಂದ ನಾನು ಇನ್ಸ್ಟಿಟ್ಯೂಟ್ ಮತ್ತು ಹಾಸ್ಟೆಲಿನ ಬಗ್ಗೆ ಎಷ್ಟೋ ವಿಷಯಗಳನ್ನು ತಿಳಿದುಕೊಂಡೆ. ಸುಬ್ಬರಾವ್ ಅವರು ಆಂಧ್ರದ ಕಡಲತೀರದ ಒಂದು ಗೌರವಾನ್ವಿತ ಕುಟುಂಬದಿಂದ ಬಂದವರಾಗಿದ್ದರು. ಅವರು ಕ್ರಮೇಣ ನನ್ನನ್ನು ಎಷ್ಟು ಹಚ್ಚಿಕೊಂಡರೆಂದರೆ ನಾನು ಕೊನೆಗೆ ಅವರ ರೂಮನ್ನು ಬಿಟ್ಟು ಬೇರೆ ರೂಮಿಗೆ ಹೋಗುವಾಗ ಅವರ ಕಣ್ಣುಗಳು ಒದ್ದೆಯಾದುದನ್ನು ಕಂಡೆ. ನನಗೂ ಅಷ್ಟೇ ಸಂಕಟವಾಯಿತು.

ನನ್ನ ಸಿಂಡಿಕೇಟ್ ಬ್ಯಾಂಕ್ ಖಾತೆ

ನನಗೆ ನನ್ನ ಸಿಂಡಿಕೇಟ್ ಬ್ಯಾಂಕ್ ಖಾತೆಯನ್ನು ಶೃಂಗೇರಿಯಿಂದ ಬೆಂಗಳೂರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಆಗ ಸಿಂಡಿಕೇಟ್ ಬ್ಯಾಂಕಿನ ಶಾಖೆ ಮಲ್ಲೇಶ್ವರಂನಲ್ಲಿ ಇರಲಿಲ್ಲ. ಇನ್ಸ್ಟಿಟ್ಯೂಟಿನ ಹೆಚ್ಚಿನ ವಿದ್ಯಾರ್ಥಿಗಳು ಕೆನರಾ ಬ್ಯಾಂಕ್ ಅಥವಾ ಇಂಡಿಯನ್ ಬ್ಯಾಂಕಿನ ಮಲ್ಲೇಶ್ವರಂ ಶಾಖೆಯಲ್ಲಿ ಖಾತೆಯನ್ನು ಇಟ್ಟುಕೊಂಡಿದ್ದರು. ನನಗೆ ಹತ್ತಿರವಿದ್ದ ಸಿಂಡಿಕೇಟ್ ಬ್ಯಾಂಕ್ ಶಾಖೆಯೆಂದರೆ ಶೇಷಾದ್ರಿಪುರಂ ಶಾಖೆಯಾಗಿತ್ತು. ನಾನು ಒಂದು ದಿನ ನೇರವಾಗಿ ಶಾಖೆಗೆ ಹೋದೆ. ಸಿಂಡಿಕೇಟ್ ಬ್ಯಾಂಕ್  ಶಾಖೆಯನ್ನು ಬೆಂಗಳೂರಿನಲ್ಲಿ ಒಂದು ವಿಶೇಷ ಶಾಖೆಯನ್ನಾಗಿ ತೆರೆದಿತ್ತು. ಅದರಲ್ಲಿ ಕೆಲಸ  ಮಾಡುತ್ತಿರುವವರೆಲ್ಲಾ (ಮ್ಯಾನೇಜರ್ ಅವರೂ ಕೂಡಿ) ಸ್ತ್ರೀಯರೇ ಆಗಿದ್ದರು. ಮ್ಯಾನೇಜರ್ ಶ್ರೀಮತಿ ಪಡಿಯಾರ್ ಅವರು ಕಾಲದ ಮೊಟ್ಟ ಮೊದಲ ಲೇಡಿ ಬ್ಯಾಂಕ್ ಮ್ಯಾನೇಜರ್ ಗಳಲ್ಲಿ ಒಬ್ಬರಾಗಿದ್ದರಂತೆ. ನಾನು ನೇರವಾಗಿ ಪಡಿಯಾರ್ ಅವರ ಕ್ಯಾಬಿನ್ ಒಳಗೆ ನನ್ನ ಶೃಂಗೇರಿ ಸಿಂಡಿಕೇಟ್ ಬ್ಯಾಂಕ್ ಖಾತೆಯ ಪಾಸ್ ಬುಕ್ ಮತ್ತು ಚೆಕ್ ಬುಕ್ ಹಿಡಿದುಕೊಂಡು ಹೋದೆ.

ಪಡಿಯಾರ್ ಅವರು ನನ್ನನ್ನು ತುಂಬಾ ಆದರದಿಂದ ಕಂಡು ಕುಳಿತುಕೊಳ್ಳುವಂತೆ ಹೇಳಿ ನನ್ನ ಪಾಸ್ ಬುಕ್ ಮತ್ತು ಚೆಕ್ ಬುಕ್ಕುಗಳನ್ನು ತೆಗೆದುಕೊಂಡರು. ನಾನು ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯೆಂದು ತಿಳಿದು ಅವರಿಗೆ ತುಂಬಾ ಸಂತೋಷವಾಯಿತು. ಇನ್ಸ್ಟಿಟ್ಯೂಟಿನ ಬಗ್ಗೆ ನನ್ನಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡು ಅಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಶಾಖೆಯಲ್ಲೇ ಖಾತೆಗಳನ್ನು ತೆರೆಯುವಂತೆ   ಮಾಡುವುದು ತಮ್ಮ ಉದ್ದೇಶವೆಂದು ತಿಳಿಸಿದರು. ಅವರೇ ಸ್ವತಃ ನನ್ನ ಖಾತೆಯನ್ನು ಬೆಂಗಳೂರಿಗೆ ಟ್ರಾನ್ಸ್ಫರ್ ಮಾಡಲು ಒಂದು ಅರ್ಜಿಗೆ ಸಹಿ ಹಾಕಿಸಿಕೊಂಡರು. ಕೇವಲ ಒಂದು ವಾರದಲ್ಲಿ ನನ್ನ ಖಾತೆ ಟ್ರಾನ್ಸ್ಫರ್ ಆಗಿ ನನಗೆ ಹೊಸ ಪಾಸ್ ಬುಕ್ ಮತ್ತು ಚೆಕ್ ಬುಕ್ ದೊರೆತವು.

ಬ್ಯಾಂಕಿನ ವಿಚಿತ್ರ ಗ್ರಾಹಕ ವರ್ಗ

ನಾನು  ಮೊದಲೇ ಹೇಳಿದಂತೆ ಶೇಷಾದ್ರಿಪುರಂ ಶಾಖೆ ಸಂಪೂರ್ಣ ಸ್ತ್ರೀಯರೇ ಕೆಲಸ ಮಾಡುತ್ತಿದ್ದ ಶಾಖೆಯಾಗಿತ್ತು. ಕಾಲದಲ್ಲಿ ಬೆಂಗಳೂರಿನಲ್ಲಿ ಕೂಡ ಯಾವುದೇ ಸಂಸ್ಥೆಗಳಲ್ಲಿ ಸ್ತ್ರೀಯರು ಹೆಚ್ಚಾಗಿ ಕೆಲಸ ಮಾಡುತ್ತಿರಲಿಲ್ಲ. ನಮ್ಮ ಮೆಟಲರ್ಜಿ ಡಿಪಾರ್ಟ್ಮೆಂಟಿನ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿನಿಯೂ ಇರಲಿಲ್ಲ. ಆದರೆ ಎಲ್ಕ್ಟ್ರಿಕಲ್ ಕಮ್ಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರಿದ್ದರು. ಸಿಂಡಿಕೇಟ್ ಬ್ಯಾಂಕ್ ತನ್ನ ಶಾಖೆಯಲ್ಲಿ ಚಿಕ್ಕ ವಯಸ್ಸಿನ ಸುಂದರ ತರುಣಿಯರನ್ನು ನೌಕರಿಗೆ ತೆಗೆದುಕೊಂಡಿತ್ತು. ತರುಣಿಯರು ನಗೆಮುಖದಿಂದ ತಮ್ಮ ಗ್ರಾಹಕರಿಗೆ ಶೀಘ್ರ ಸೇವೆಯನ್ನು ನೀಡುತ್ತಿದ್ದರು. ಪ್ರಾಯಶಃ ಇಂದು ನೀವು ಅದನ್ನು ನಂಬಲಾರಿರಿ. ತರುಣಿಯರ ಶೀಘ್ರ ಸೇವೆ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲೇ ಇಲ್ಲವಂತೆ! ಅವರೆಲ್ಲಾ ಪುರುಷ ಗ್ರಾಹಕರೇ ಆಗಿದ್ದರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಏಕೆಂದರೆ ಅವರಿಗೆ ಬ್ಯಾಂಕಿನ ಸೋಫಾದ ಮೇಲೆ ಆರಾಮವಾಗಿ ಕುಳಿತು ಶಾಖೆಯಲ್ಲಿ ಕಾರ್ಯನಿರತರಾಗಿದ್ದ ಸುಂದರ ತರುಣಿಯರನ್ನು ಆದಷ್ಟು ಹೊತ್ತು ನೋಡುವುದರಲ್ಲೇ ಹೆಚ್ಚು ಆಸಕ್ತಿ ಇರುತ್ತಿತ್ತಂತೆ!

ನನಗೆ ವಿಷಯದ ಬಗ್ಗೆ ಏನೂ ಅರಿವಿರಲಿಲ್ಲ. ಆದರೆ ನಾನು ಹೊಸ ಪಾಸ್ ಬುಕ್ ಮತ್ತು ಚೆಕ್ ಬುಕ್  ಪಡೆಯಲು ಮ್ಯಾನೇಜರ್ ಅವರ ಕ್ಯಾಬಿನ್ ಒಳಗೆ ಕುಳಿತಾಗಲೇ ನಡೆದ ಒಂದು ಘಟನೆ ವಿಷಯವನ್ನು ಸಾಬೀತುಗೊಳಿಸಿಬಿಟ್ಟಿತು. ಆಗ ಬ್ಯಾಂಕಿನ ಒಬ್ಬಳು ಆಫೀಸರ್ ಕ್ಯಾಬಿನ್ ಒಳಗೆ ಪ್ರವೇಶಿಸಿ ಮ್ಯಾನೇಜರ್ ಅವರ ಹತ್ತಿರ ಒಬ್ಬ ಮಹಾನುಭಾವ ಗ್ರಾಹಕ ತನ್ನ ಬ್ಯಾಂಕಿನ ಕೆಲಸ ಮುಗಿದುಹೋದ ಎಷ್ಟೋ ಸಮಯದ ಮೇಲೂ ಇನ್ನೂ ಸೋಫಾದ ಮೇಲೆ ಕುಳಿತು ಕೌಂಟರಿನೊಳಗೆ ಕೆಲಸ ಮಾಡುತ್ತಿದ್ದ ತರುಣಿಯರತ್ತ ದೃಷ್ಟಿ ಬೀರುತ್ತಿರುವುದಾಗಿ ವರದಿ ಮಾಡಿದಳು ಕಾಲದಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಯಾವುದೇ ವಾಚ್ ಮ್ಯಾನ್ ಅಥವಾ ಸೆಕ್ಯುರಿಟಿ ಮ್ಯಾನ್ ಇರುತ್ತಿರಲಿಲ್ಲ. ಆದ್ದರಿಂದ ಪಡಿಯಾರ್ ಅವರು ತಾವೇ ಕ್ಯಾಬಿನ್ ಹೊರಗೆ ಹೋಗಿ ಗ್ರಾಹಕನಿಗೆ ತನ್ನ ಕೆಲಸ ಮುಗಿದಿದ್ದರಿಂದ ಜಾಗ ಖಾಲಿ ಮಾಡುವಂತೆ ಹೇಳಿದರು. ಆದರೆ ಮಹಾನುಭಾವ ಅವರ ಮಾತಿನತ್ತ ಲಕ್ಷವೇ ತೋರದೇ ಕೌಂಟರಿನತ್ತ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತಲೇ ಇದ್ದ! ನಿರ್ವಾಹವಿಲ್ಲದೇ ಮ್ಯಾನೇಜರ್ ಅವರು ಇನ್ನೊಬ್ಬ ದೃಢಕಾಯ ಗ್ರಾಹಕನ ಸಹಾಯ ಪಡೆದು ಮಹಾನುಭಾವನನ್ನು ಹೊರತಳ್ಳಬೇಕಾಯಿತು! ಮ್ಯಾನೇಜರ್ ಅವರು ನನ್ನ ಹತ್ತಿರ ಇಂತಹ ಪ್ರಸಂಗ ಅವರಿಗೇನು ಹೊಸತಲ್ಲವೆಂದೂ ಹೇಳಿದರು! (ಆಮೇಲೆ ಎಷ್ಟೋ ವರ್ಷಗಳ ನಂತರ ಇದೇ ಶೇಷಾದ್ರಿಪುರಂನಲ್ಲಿ ಕೆನರಾ ಬ್ಯಾಂಕಿನ ಶಾಖೆಯ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಅವಕಾಶ ನನಗೆ  ಬಂತು. ಆಗ ನನಗೆ ಪ್ರಸಂಗದ ನೆನಪು ಮರುಕಳಿಸಿತ್ತು)

----ಮುಂದುವರಿಯುವುದು ---

ಫೋಟೋದಲ್ಲಿರುವವರು ಡಾಕ್ಟರ್ ಸತೀಶ್ ಧಾವನ್ ಅವರು 



No comments: