Tuesday, August 11, 2020

ಬಾಲ್ಯ ಕಾಲದ ನೆನಪುಗಳು – ೧೦೮

 ನಾನು ಇನ್ಸ್ಟಿಟ್ಯೂಟಿನಲ್ಲಿ ಇರುವಾಗಲೇ ಭಾರತದ ರಾಜಕೀಯದ ಒಂದು ವಿಶೇಷ ಬೆಳವಣಿಗೆ  ಬೆಂಗಳೂರಿನಲ್ಲೇ ನಡೆಯಿತು. ಇಂಡಿಯನ್ ನ್ಯಾಷನಲ್  ಕಾಂಗೆಸ್ಸಿನ ಚಾರಿತ್ರಿಕ ಅಧಿವೇಶನ ಬೆಂಗಳೂರಿನ ಲಾಲ್ ಭಾಗ್ ಗ್ಲಾಸ್ ಹೌಸ್ ನಲ್ಲಿ ೧೯೬೯ನೇ ಇಸವಿಯಲ್ಲಿ ನಡೆದು ನಿಜಲಿಂಗಪ್ಪನವರ ನೇತೃತ್ವದ್ಲಲಿದ್ದ ಅದರ ಹಳೆಯ ಕಾಂಗೆಸ್ಸಿನ ಆಡಳಿತವರ್ಗವನ್ನು ಅಧಿಕಾರದಿಂದ ತೆಗೆದೆಸೆಯಿತು. ಸಿಂಡಿಕೇಟ್ ಎಂದು ಕರೆಯಲಾಗುತ್ತಿದ್ದ ಆ ಹಳೆಯ ಆಡಳಿತವರ್ಗ ಮುಂಬರಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ನೀಲಂ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ಸಿನ ಅಧಿಕೃತ ಅಧಿಕೃತ ಅಭ್ಯರ್ಥಿಯಾಗಿ ಆರಿಸಿತ್ತು. ಆದರೆ ಇಂದಿರಾ ಗಾಂಧಿ ನೇತೃತ್ವದ ಸಿಡಿದು ಹೋದ ಕಾಂಗೆಸ್ಸಿನ ಗುಂಪು ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ತನ್ನಕಡೆಯಿಂದ ಅಧಿಕೃತ ಅಭ್ಯರ್ಥಿಯಾಗಿ ಆರಿಸಿತು. ಇನ್ಸ್ಟಿಟ್ಯೂಟಿನ ವಿದ್ಯಾರ್ಥಿಗಳು ಆ ರಾಜಕೀಯ ಬೆಳವಣಿಗೆಯನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತಿದ್ದರು. ಅಂತ್ಯದಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್  ಅವರು ರಾಷ್ಟ್ರಪತಿ ಚುನಾವಣೆಯಲ್ಲಿ  ಗೆಲ್ಲುವುದರೊಡನೆ ಇಂದಿರಾ ಗಾಂಧಿ ನೇತೃತ್ವದ ಗುಂಪಿನ ಕೈಮೇಲಾಯಿತು. ಹೀಗೆ ಭಾರತದ ರಾಜಕೀಯ ಒಂದು ದೊಡ್ಡ ತಿರುವನ್ನೇ ಕಂಡಿತು.

ಕೈ ಎತ್ತಿದ ಎನ್.ಆರ್.ಭಟ್ 

ಒಂದು ದಿನ ಇನ್ಸ್ಟಿಟ್ಯೂಟಿನ ಪೋಸ್ಟ್ ಆಫೀಸಿನಲ್ಲಿ ನನಗೊಂದು ರಿಜಿಸ್ಟರ್ಡ್ ಕವರ್ ಬಂತೆಂದು ತಿಳಿದು ನಾನು ಹೋಗಿ ಅದನ್ನು ತೆಗೆದುಕೊಂಡೆ. ಅದು ನನ್ನ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾದ ಎನ್.ಆರ್.ಭಟ್  ಅವರಿಂದ ಬಂದ ಕವರ್ ಆಗಿತ್ತು. ಅದರೊಳಗೆ ಒಂದು ಪತ್ರ ಮತ್ತು ನನ್ನ ಹೆಸರಿಗೆ ೧೦೦ ರೂಪಾಯಿಗಳ ಒಂದು ಬ್ಯಾಂಕ್ ಡ್ರಾಫ್ಟ್ ಇತ್ತು. ನನಗೆ ಒಮ್ಮೆಗೇ ಸಂತೋಷವಾದರೂ ಅದು ಕೇವಲ  ಕ್ಷಣಿಕವಾಗಿತ್ತು. ಅದರಲ್ಲಿ ಭಟ್ ಅವರು ನನಗೆ ಹಣ ಅಷ್ಟೊಂದು ಅರ್ಜೆಂಟಾಗಿ ಬೇಕೆಂದು ಗೊತ್ತಾಗದುದರಿಂದ ನನ್ನ ಮೊದಲ ಪತ್ರಕ್ಕೆ ಉತ್ತರ ಬರೆದಿರಲಿಲ್ಲವೆಂದೂ ಮತ್ತೂ ನಾನು ನೌಕರಿಗೆ ಸೇರಿದಮೇಲೆ ಅವರು ಕಳಿಸಿದ ೧೦೦ ರೂಪಾಯಿಗಳನ್ನು ಹಿಂದಿರುಗಿಸಬಹುದೆಂದೂ ಬರೆದಿದ್ದರು.  ಒಟ್ಟಿನಲ್ಲಿ ಅದರ ಅರ್ಥ ಇಷ್ಟೇ ಆಗಿತ್ತು. ಏನೆಂದರೆ ನಾನು ಇನ್ನು ಮುಂದೆ ಅವರಿಂದ ಹಣ ಸಹಾಯವನ್ನು ನಿರೀಕ್ಷಿಸಬಾರದೆಂದು. ನಾನು ಪ್ರತಿ ತಿಂಗಳೂ ಅವರಿಂದ ಸ್ವಲ್ಪ ಹಣದ ಸಹಾಯವನ್ನು ನಿರೀಕ್ಷಿಸಿದ್ದು ಎಂತಹ ಮೂರ್ಖತನವಾಗಿತ್ತೆಂದು ನನಗೆ ಅರಿವಾಯಿತು. ಒಮ್ಮೆ ನನಗೆ ಆ ಡ್ರಾಫ್ಟನ್ನು ಕೂಡಲೇ ಅವರಿಗೆ ಹಿಂತಿರುಗಿಸಬೇಕೆಂದು ಅನಿಸಿತು, ಆದರೆ ನಾನಿದ್ದ ಪರಿಸ್ಥಿತಿಯಲ್ಲಿ ಅದು ಸರಿಯೆನಿಸಲಿಲ್ಲ. ಒಟ್ಟಿನಲ್ಲಿ ನಾನು ನಿರೀಕ್ಷಿಸಿದ ಮುಖ್ಯ ಹಣಕಾಸಿನ ಮೂಲವೊಂದು ಅದೃಶ್ಯವಾಗಿಬಿಟ್ಟಿತ್ತು.

ಮಣಿಪಾಲ್ ಅಕಾಡೆಮಿಯ ಪತ್ರದಿಂದ ಆಘಾತ

ನನ್ನ ಸಂಕಟಗಳು ಅಲ್ಲಿಗೇ  ಮುಗಿದಿರಲಿಲ್ಲ. ಮಣಿಪಾಲ್ ಅಕಾಡೆಮಿಯಿಂದ ಬಂದ ಪತ್ರವೊಂದು ನನ್ನ ಇನ್ನೊಂದು ಹಣಕಾಸಿನ ಮೂಲವನ್ನು ಇಲ್ಲವಾಗಿಸಿದ್ದು ಮಾತ್ರವಲ್ಲ, ಅದು ನನ್ನ ನಿದ್ದೆಯನ್ನೇ ಕೆಡಿಸಿಬಿಟ್ಟಿತು.  ಅದರಲ್ಲಿ ನಾನು ಅಕಾಡೆಮಿಯ ಯಾವುದೇ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿಲ್ಲವಾದ್ದರಿಂದ ಮಾಮೂಲಿನಂತೆ ಫೀಸ್ ಹಣವನ್ನು ಕಳಿಸಲಾಗುವುದಿಲ್ಲವೆಂದು ಬರೆಯಲಾಗಿತ್ತು. ಅಷ್ಟು ಮಾತ್ರವಲ್ಲ. ಅದರಲ್ಲಿ ನನಗೊಂದು ಆಘಾತಗೊಳ್ಳುವ ವಿಷಯವಿತ್ತು. ಅಕಾಡೆಮಿಯು ತಾನು ಅದುವರೆಗೆ ನನಗೆ ಮಾಡಿದ ಧನ ಸಹಾಯವನ್ನು ಕೂಡಲೇ ಬಡ್ಡಿ ಸಮೇತ ಹಿಂದಿರುಗಿಸುವಂತೆ ಸೂಚನೆ ನೀಡಿತ್ತು!

ನನ್ನ ಓದುಗರಿಗೆ ಈ ಹಿಂದೆ ನಮ್ಮ ಕಾಲೇಜಿನ ಪ್ರಿನ್ಸಿಪಾಲರು ನನಗೆ ನೀಡಿದ್ದ ಭರವಸೆಯನ್ನು ಇಲ್ಲಿ ನೆನಪಿಸುತ್ತೇನೆ. ನಾನು ಫೀಸ್ ಹಣಕ್ಕೆ ಪ್ರಾಮಿಸರಿ ನೋಟಿಗೆ ಸಹಿ ಹಾಕಲು ಹಿಂದೆ ಮುಂದೆ ನೋಡಿದಾಗ ಅವರು ಅದು ಕೇವಲ ಹಣಕ್ಕೆ ರಶೀದಿಯೆಂದೂ ಮತ್ತು ನಾನು ಎಂದಿಗೂ ಆ ಹಣವನ್ನು ಅಕಾಡೆಮಿಗೆ ಹಿಂದಿರುಗಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿದ್ದರು. ಆದರೆ ಈಗ ಅಕಾಡೆಮಿಯು ನನ್ನಿಂದ ಬಡ್ಡಿ ಸಮೇತ ಹಣವನ್ನು ವಾಪಾಸ್ ಮಾಡುವಂತೆ ನೋಟೀಸ್ ಕೊಟ್ಟಿತ್ತು. ಆದರೆ ಆ ಮಹನೀಯರು ಈಗ ನನ್ನ ಪರಿಸ್ಥಿತಿಯ ಯಾವುದೇ ಅರಿವಿಲ್ಲದೇ ಮಾನಸ ಗಂಗೋತ್ರಿಯಲ್ಲಿ ಹಿಂದೂ ತತ್ವಶಾಸ್ತ್ರದ ಪಾಠ ಹೇಳುವುದರಲ್ಲಿ ನಿರತರಾಗಿದ್ದರು. ಅವರ ಭರವಸೆ ಎಷ್ಟು ಹುಸಿಯಾಗಿತ್ತೆಂದು ಅವರಿಗೆ ಅರಿವಿರಲಿಲ್ಲ. ನಾನು ಅಕಾಡೆಮಿಗೆ ಪ್ರಿನ್ಸಿಪಾಲರು ನನಗೆ ನೀಡಿದ್ದ ಭರವಸೆಯ ಬಗ್ಗೆ ತಿಳಿಸಿ ಒಂದು ಪತ್ರ ಬರೆದೆ. ಹಾಗೆಯೇ ಅಕಾಡೆಮಿಯು ಒಬ್ಬ ವಿದ್ಯಾರ್ಥಿಯು ತನ್ನ ಓದಿನ ನಡುವೆ ಒಂದು ಹಣಸಹಾಯವನ್ನು ಬಡ್ಡಿ ಸಮೇತ ಹೇಗೆ ತೀರಿಸಲು ಸಾಧ್ಯವೆಂದು ಅದರಲ್ಲಿ ಪ್ರಶ್ನಿಸಿದ್ದೆ.

ಪಾರ್ಟ್-ಟೈಮ್ ನೌಕರಿ ಅಸಾಧ್ಯ

ಈ ನಡುವೆ ಇನ್ನೊಂದು ತಿಂಗಳು ಕಳೆದು ನಾನು ಹಾಸ್ಟೆಲಿನ ಫೀಸನ್ನು ಕಟ್ಟುವುದಕ್ಕಾಗಿ ಬ್ಯಾಂಕಿನಿಂದ ಹಣ ತೆಗೆಯಬೇಕಾಯಿತು. ಬ್ಯಾಂಕಿನಲ್ಲಿದ್ದ ನನ್ನ ಹಣ ಕರಗುತ್ತಿದ್ದಂತೆಯೇ ನನ್ನ ಪರಿಸ್ಥಿತಿ ಒಂದು ನಿರ್ಣಾಯಕ ಘಟ್ಟವನ್ನು ತಲುಪುತ್ತಿದೆಯೆಂದು ನನಗನಿಸತೊಡಗಿತು. ನಾನು ನನ್ನ ಸಮಸ್ಯೆಯನ್ನು ಪ್ರೊಫೆಸರ್ ಭಟ್ ಅವರೊಡನೆ ಹೇಳಿಕೊಳ್ಳುವುದು ಒಳ್ಳೆಯದೆಂದು ಅವರ ಬಳಿಗೆ ಹೋದೆ. ಅವರು ತುಂಬಾ ಸಹಾನುಭೂತಿಯಿಂದ ನನ್ನೊಡನೆ ಮಾತನಾಡಿ ನಾನು ಯಾವುದಾದರೂ ಪಾರ್ಟ್-ಟೈಮ್ ನೌಕರಿ ಮಾಡಲು ತಯಾರಿದ್ದೇನೆಯೇ ಎಂದು ಕೇಳಿದರು. ನಾನು ಕೂಡಲೇ ಒಪ್ಪಿಗೆ ನೀಡಿದೆ. ಅವರು ನನ್ನನ್ನು ಅವರಿಗೆ ಪರಿಚಯವಿದ್ದ ಮಲ್ಲೇಶ್ವರಂನಲ್ಲಿದ್ದ ಒಂದು ಟುಟೋರಿಯಲ್ ಕಾಲೇಜಿನ ಪ್ರಿನ್ಸಿಪಾಲರನ್ನು ಭೇಟಿ ಮಾಡಲು ಕಳಿಸಿದರು. ನಾನು ತುಂಬಾ ಉತ್ಸಾಹದಿಂದ ಅವರ ಬಳಿ ಹೋದೆ. ಅವರೇನೋ ನನಗೆ ಅವಕಾಶಕೊಡಲು ತಯಾರಿದ್ದರು.  ಆದರೆ ಅದು ಸಾಧ್ಯವಿರಲಿಲ್ಲ. ಏಕೆಂದರೆ ಆ ಟುಟೋರಿಯಲ್ ಕಾಲೇಜು ಟ್ಯೂಷನ್ ನೀಡುತ್ತಿದ್ದ ಯಾವುದೇ ಸಬ್ಜೆಕ್ಟುಗಳನ್ನು ನಾನು ಅಲ್ಲಿಯವರೆಗೆ ಎಲ್ಲಿಯೂ ಕಲಿತಿರಲಿಲ್ಲ. ನಾನು ಸಂಪೂರ್ಣ ನಿರಾಶೆಯಿಂದ ಹಿಂತಿರುಗಬೇಕಾಯಿತು.

ಊರು ಸೇರುವ ಅಂತಿಮ ತೀರ್ಮಾನ

ಇನ್ಸ್ಟಿಟ್ಯೂಟಿನಲ್ಲಿ ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದುಬಿಟ್ಟಿದೆಯೆಂದು ನನಗನಿಸತೊಡಗಿತು. ಆ ವಾರದ ಕೊನೆಯಲ್ಲಿ ಪುಟ್ಟಣ್ಣ ನನ್ನನ್ನು ನೋಡಲು ಮಾಮೂಲಿನಂತೆ ಹಾಸ್ಟೆಲಿಗೆ  ಬಂದ. ಅವನ ನೌಕರಿ ಹುಡುಕಾಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿರಲಿಲ್ಲ. ಹಾಗಾಗಿ ಅವನ ದೈನಂದಿನ ಖರ್ಚುಗಳಿಗೆ ವ್ಯವಸ್ಥೆ ಮಾಡುವುದು ಅವನಿಗೆ ಕಷ್ಟಕರವಾಗಿತ್ತು. ನನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣ ಇನ್ನೊಂದು ತಿಂಗಳ ಹಾಸ್ಟೆಲ್ ಫೀಗೆ ಸಾಕಾಗುವಷ್ಟು ಮಾತ್ರ ಇತ್ತು. ನಾವು ತುಂಬಾ ಚರ್ಚೆ ಮಾಡಿ ಸಾದ್ಯವಿದ್ದ  ಕೇವಲ ಒಂದೇ ಒಂದು ತೀರ್ಮಾನಕ್ಕೆ ಬಂದೆವು. ಅದೇನೆಂದರೆ ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಿ ಊರು ಸೇರುವುದು. ಏಕೆಂದರೆ ನಾವು ಊರಿಗೆ ಹಿಂತಿರುಗಲು ಬಸ್ ಚಾರ್ಜ್ ಹಣ ಕೂಡ ಇಲ್ಲವಾಗುವ ಮೊದಲೇ ಹಾಗೆ ಮಾಡಲೇ ಬೇಕಾಗಿತ್ತು.

ಇಂದು ನನ್ನ ಬಾಲ್ಯ ಕಾಲದ ನೆನಪುಗಳ ಕೊನೆಯ ಅಧ್ಯಾಯವನ್ನು ಬರೆಯುತ್ತಿರುವಾಗ ನನಗೆ ನನ್ನ ವಿದ್ಯಾರ್ಥಿ ಜೀವನದ ಆ ನೋವಿನ ದಿನಗಳ ನೆನಪು ಮರುಕಳಿಸಿಬರುತ್ತಿದೆ. ಹೀಗೆ ನನ್ನ ವಿದ್ಯಾರ್ಥಿ ಜೀವನ ಒಂದು ದುರಂತದಲ್ಲಿ  ಕೊನೆಗಾಣುವುದೆಂದು  ನಾನು ಕನಸಿನಲ್ಲೂ ಎಣಿಸಿರಲಿಲ್ಲ. ವಿಶ್ವವಿಖ್ಯಾತವಾದ ಇನ್ಸ್ಟಿಟ್ಯೂಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ನನ್ನ ಅಭಿಲಾಷೆ ಹೀಗೆ ಮಣ್ಣುಮುಕ್ಕಿಹೋಗಿತ್ತು. ನನ್ನ ಮೆಂಟರ್ ಆದ ಕೃಷ್ಣಪ್ಪಯ್ಯನವರು ನಾನು ಮೆಟರ್ಜಿಯಲ್ಲಿ ಇಂಜಿನಿಯರಿಂಗ್ ಡಿಗ್ರಿ ಪಡೆದು ಅಮೇರಿಕಾ ಸೇರುವೆನೆಂದು ಎಣಿಸಿದ್ದರು. ಆದರೆ ನಾನೀಗ  ಕೇವಲ ನಾಲ್ಕು ತಿಂಗಳಿಗೇ ಇನ್ಸ್ಟಿಟ್ಯೂಟಿನ ವಿದ್ಯಾಭ್ಯಾಸಕ್ಕೆ ಕೈಮುಗಿದು ವಾಪಾಸ್ ಊರು ಸೇರುವುದರಲ್ಲಿದ್ದೆ!

ನನ್ನ ಕ್ಲಾಸ್ ಮೇಟ್ ಗಳು ಯಾರಿಗೂ ತಿಳಿಯದಂತೆ ಸದ್ದಿಲ್ಲದೇ ಇನ್ಸ್ಟಿಟ್ಯೂಟನ್ನು ಬಿಟ್ಟು ಹೋಗಲು ನಾನು ತಯಾರಿ ಮಾಡತೊಡಗಿದೆ. ನಾನು ಒಂದು ತಿಂಗಳ ಹಾಸ್ಟೆಲ್ ಫೀಸನ್ನು ಅಡ್ವಾನ್ಸ್ ಡೆಪಾಸಿಟ್ ಮಾಡಿದ್ದರಿಂದ ಆ ತಿಂಗಳ ಫೀಸ್ ಕಟ್ಟಬೇಕಾಗಿರಲಿಲ್ಲ. ನಾನು ಲೈಬ್ರರಿಯಿಂದ ತೆಗೆದುಕೊಂಡಿದ್ದ ಪುಸ್ತಕಗಳನ್ನೆಲ್ಲಾ ವಾಪಾಸ್ ಮಾಡಿ, ಯಾವುದೋ ನೆವ ಹೇಳಿ ನನ್ನ ಒರಿಜಿನಲ್ ಸರ್ಟಿಫಿಕೇಟ್ ಗಳನ್ನೆಲ್ಲಾ ಇನ್ಸ್ಟಿಟ್ಯೂಟಿನಿಂದ ವಾಪಾಸ್ ಪಡೆದುಬಿಟ್ಟೆ. ಹಾಗೆಯೇ ನನ್ನ ರೂಮ್ ಮೇಟಿಗೆ ಗೊತ್ತಾಗದಂತೆ ನನ್ನ ವಸ್ತುಗಳನ್ನು ಪ್ಯಾಕ್ ಮಾಡತೊಡಗಿದೆ. ನನ್ನ ನಡತೆ ಅವರಿಗೆ ಸ್ವಲ್ಪ ವಿಚಿತ್ರವಾಗಿ ಕಾಣಿಸಿರಬೇಕು. ಆದರೆ ಅವರಿಗೆ ನನ್ನ ನಿರ್ಣಯ ತಿಳಿಸಿದರೆ ಅವರಿಂದ ಅದು ನನ್ನ ಕ್ಲಾಸ್ ಮೇಟುಗಳಿಗೆ ಗೊತ್ತಾಗಿ ಅವರು ನನ್ನ ನಿರ್ಣಯವನ್ನು ಬದಲಿಸುವಂತೆ ಒತ್ತಾಯ ಮಾಡುವರೆಂದು ನನಗೆ ತಿಳಿದಿತ್ತು.

ನಾನು ಇನ್ಸ್ಟಿಟ್ಯೂಟಿನಿಂದ ಹೊರಡುವ ಹಿಂದಿನ ರಾತ್ರಿ ನನ್ನ ರೂಮ್ ಮೇಟ್ ಸುಬ್ರಮಣಿಯನ್ ಅವರಿಗೆ ನನ್ನ ತೀರ್ಮಾನವನ್ನು ತಿಳಿಸಿದೆ. ತುಂಬಾ ಸ್ನೇಹಮಯ ವ್ಯಕ್ತಿತ್ವದ ಅವರಿಗೆ ನನ್ನ ಮಾತನ್ನು ನಂಬಲಾಗಲಿಲ್ಲ. ಅವರಿಗೆ ದೊಡ್ಡ ಆಘಾತವಾದಂತಾಗಿ ಒಮ್ಮೆ ಮೂಕರಂತಾಗಿ ಬಿಟ್ಟರು. ಆದರೆ ಹಾಗೆ ಮಾಡದೇ ಇನ್ಸ್ಟಿಟ್ಯೂಟಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವಂತೆ ನನಗೆ ಮನವರಿಕೆ ಮಾಡುವ ಅವರ ಪ್ರಯತ್ನಗಳೆಲ್ಲಾ ವಿಫಲವಾದವು. ನಾನು ನನ್ನ ಅಂತಿಮ ತೀರ್ಮಾನದಿಂದ ವಿಚಲಿತನಾಗಲಿಲ್ಲ.

ಮರಳಿ ಊರಿಗೆ ಪಯಣ

ಪುಟ್ಟಣ್ಣ ಮತ್ತು ನಾನು ಮಾರನೇ ದಿನ ಬೆಳಿಗ್ಗೆ ಸುಭಾಷ್ ನಗರದ ಬಸ್ ನಿಲ್ದಾಣದಲ್ಲಿ ಶೃಂಗೇರಿ ಬಸ್ಸನ್ನೇರಿಬಿಟ್ಟೆವು. ನಾವು ಬೆಂಗಳೂರು ನಗರಕ್ಕೆ ನಮ್ಮ ವಿದಾಯ ಹೇಳಿಬಿಟ್ಟಿದ್ದೆವು. ಇದೇ ಸುಂದರ ನಗರಕ್ಕೆ ಕೇವಲ ನಾಲ್ಕು ತಿಂಗಳ ಕೆಳಗೆ ನಾವಿಬ್ಬರೂ ತುಂಬಾ ಆಶಾವಾದಿಗಳಾಗಿ ಪ್ರವೇಶ ಮಾಡಿದ್ದೆವು. ಆದರೆ ನಾವೀಗ ನಮ್ಮ ಸುಂದರ ಸ್ವಪ್ನಗಳೆಲ್ಲಾ ಕೇವಲ ಕನಸುಗಳಷ್ಟೇ ಎಂಬುದರ ಅರಿವಾಗಿ ನಿರಾಶೆಯಿಂದ ಊರಿಗೆ ಹಿಂತಿರುಗಿ ಹೋಗುತ್ತಿದ್ದೆವು.

ಬ್ಯಾಗುಗಳನ್ನು ಹೊತ್ತು ಮನೆಗೆ ಹಿಂತಿರುಗಿ ಬಂದ ತಮ್ಮಿಬ್ಬರು ಪದವೀಧರ ಮಕ್ಕಳನ್ನು ನೋಡಿ ನಮ್ಮ ತಂದೆ ಮತ್ತು ತಾಯಿಯವರಿಗೆ ಆದ ದಿಗ್ಬ್ರಮೆ ಮತ್ತು ಸಂಕಟ ಅಷ್ಟಿಷ್ಟಲ್ಲ. ತುಂಬಾ ಹೊತ್ತು ಅವರಿಗೆ ನಾವೇನು ಹೇಳುತ್ತಿರುವೆವೆಂದೇ ಅರ್ಥವಾಗಲಿಲ್ಲ. ಒಮ್ಮೆ ಅವರಿಗೆ ನಮ್ಮ ಪರಿಸ್ಥಿತಿ ಅರ್ಥವಾದ ಮೇಲೆ ಅವರು ಮೂಕರಾಗಿಬಿಟ್ಟರು. ನಮ್ಮ ನೆರೆಹೊರೆಯವರು ಮತ್ತು ಊರಿನ ಬೇರೆ ಜನಗಳಿಗೂ ಕೂಡ ನಾವು ಬೆಂಗಳೂರಿನಿಂದ ಹೀಗೆ ವಾಪಾಸ್ ಊರುಸೇರಿದ್ದು ತುಂಬಾ ಸಂಕಟವನ್ನುಂಟು ಮಾಡಿತು. ನಮಗೆ ಗತ್ಯಂತರವಿಲ್ಲದೇ ನಾವು ಊರಿಗೆ ಹಿಂತಿರುಗಿದುದಾಗಿ ನಾವೆಷ್ಟು ವಿವರಿಸಿದರೂ ಅವರಿಗೆ ಅದು ಒಪ್ಪಿಗೆಯಾಗಲಿಲ್ಲ.

ಕ್ಲಾಸ್ ಮೇಟುಗಳ ಮನವಿ ಪತ್ರ

ಕೇವಲ ಒಂದು ವಾರದ  ನಂತರ ನನ್ನ ಹೆಸರಿಗೊಂದು  ದೊಡ್ಡ ಲಕೋಟೆ ಇನ್ಸ್ಟಿಟ್ಯೂಟಿನಿಂದ ಉತ್ತಮೇಶ್ವರ ಅಂಚೆ ಕಚೇರಿಗೆ ಬಂತು. ನನ್ನ ಕ್ಲಾಸ್ ಮೇಟುಗಳೆಲ್ಲಾ ಒಟ್ಟಿಗೆ ಸಹಿ ಹಾಕಿ ನನಗೆ ಬರೆದ ಪತ್ರವೊಂದು ಅದರಲ್ಲಿತ್ತು. ಅವರಿಗೆ ನನ್ನ ರೂಮ್ ಮೇಟ್ ಸುಬ್ರಮಣಿಯನ್ ಅವರ ಮೂಲಕ ನಾನು ಹಣಕಾಸಿನ ತೊಂದರೆಯಿಂದ ಇನ್ಸ್ಟಿಟ್ಯೂಟನ್ನು ತೊರೆದು ಊರು ಸೇರಿದುದು ಗೊತ್ತಾಗಿತ್ತು. ಅವರಿಗೆಲ್ಲಾ ನಾನು ನನ್ನ ಆತ್ಮೀಯ ಸ್ನೇಹಿತ ಕೃಷ್ಣಕುಮಾರನಿಗೂ ಸೇರಿ ಯಾರಿಗೂ ತಿಳಿಸದೇ ಊರು ಸೇರಿದ್ದು ತುಂಬಾ ಬೇಸರದ ವಿಷಯವಾಗಿತ್ತು. ಅವರೆಲ್ಲಾ  ನನ್ನನ್ನು ಆ ಪತ್ರ ತಲುಪಿದ ಮಾರನೇ ದಿನವೇ ಊರಿನಿಂದ ಹೊರಟು ಬೆಂಗಳೂರಿಗೆ ಹಿಂದಿರುಗುವಂತೆ ಕೇಳಿಕೊಂಡಿದ್ದರು. ನನ್ನ ಖರ್ಚು ವೆಚ್ಚಗಳನ್ನೆಲ್ಲಾ ಯಾವುದೇ ಕಷ್ಟವಿಲ್ಲದೇ ತಾವೆಲ್ಲಾ ಹಂಚಿಕೊಳ್ಳುವುದಾಗಿ ಅವರು ಬರೆದಿದ್ದರು. ಆ ಬಗೆಯ ಭಾವನಾತ್ಮಕ ಪತ್ರವನ್ನು ನನ್ನ ಕ್ಲಾಸ್ ಮೇಟುಗಳಿಂದ ನಾನು ಖಂಡಿತವಾಗಿಯೂ ನಿರೀಕ್ಷಿರಲಿಲ್ಲ. ನನ್ನ ಕಣ್ಣುಗಳಿಂದ ನೀರು ಹರಿಯತೊಡಗಿತು. ಪತ್ರವನ್ನು ಓದಿದ ನಮ್ಮ ಅಮ್ಮನೂ ಅಳತೊಡಗಿದಳು. ಹಾಗೂ ಸಾಧ್ಯವೆನಿಸಿದರೆ ನಾನು ನನ್ನ ಕ್ಲಾಸ್ ಮೇಟುಗಳು ಕೇಳಿಕೊಂಡಂತೆ ಬೆಂಗಳೂರಿಗೆ ಹಿಂದಿರುಗಬೇಕೆಂದು ಸಲಹೆ ಮಾಡಿದಳು.

ಆದರೆ ನನ್ನ ಮುಂದೆ ಆ ಪ್ರಶ್ನೆಯೇ ಇರಲಿಲ್ಲ. ಆ ವೇಳೆಗೆ ನಾನು ಇನ್ನು ಮುಂದೆ ನನ್ನ ಹಣಕಾಸಿನ ಖರ್ಚಿಗೆ ಬೇರೆ ಯಾರ ಮೇಲೂ ಅವಲಂಬಿಸುವುದಿಲ್ಲವೆಂದು ಅಂತಿಮ ತೀರ್ಮಾನ ಮಾಡಿಬಿಟ್ಟಿದ್ದೆ. ಒಟ್ಟಿನಲ್ಲಿ ಇನ್ಸ್ಟಿಟ್ಯೂಟಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಬೇಕೆಂಬ ನನ್ನ ಗುರಿ ಮತ್ತು ಅಭಿಲಾಷೆ ಕೇವಲ ಒಂದು ಮರೀಚಿಕೆಯಾಗಿ ಬಿಟ್ಟಿತ್ತು. ಮಾತ್ರವಲ್ಲ. ಆಗ ನನಗೆ ಅರಿವಿಲ್ಲದಿದ್ದರೂ, ನನ್ನ ವಿದ್ಯಾಭ್ಯಾಸದ ಹೋರಾಟ ಅಲ್ಲಿಗೇ ಕೊನೆಗೊಂಡಿತ್ತು.

--------ಮುಕ್ತಾಯ--------

No comments: