Monday, August 31, 2020

ನನ್ನ ಚಂದಮಾಮ ದಿನಗಳು – ೩





 ಆಗಿನ ಚಂದಮಾಮದ ಮೊದಲ ಪುಟದಲ್ಲಿ ಸಾಮಾನ್ಯವಾಗಿ ಸ೦ಕ್ಷಿಪ್ತ ರೂಪದ ಸಂಪಾದಕೀಯ ಇರುತ್ತಿತ್ತು. ಒಮ್ಮೊಮ್ಮೆ ಹಬ್ಬ ಮತ್ತಿತರ ವಿಶೇಷ ಸಮಯಗಳಲ್ಲಿ ಸಂದರ್ಭಕ್ಕೆ ಸೂಕ್ತವಾದ ಕವನ ಒಂದಿರುತ್ತಿತ್ತು. ಉದಾಹರಣೆಗೆ,  "ನವ ಯುಗಾದಿಯು ನಲಿದು ಬರುತಿದೆ", ಗುರುವ ನಿಂದಿಸಬೇಡ ಓ ಮುದ್ದು ತಮ್ಮಾ" ಎಂಬ ಪ್ರಾಸಬದ್ಧ ಅರ್ಥಯುಕ್ತ ಕವನಗಳಿರುತ್ತಿದ್ದವು. ಪ್ರಾಯಶಃ ಸರಸ್ವತಿ ಪೂಜೆಯ ಸಂದರ್ಭದಲ್ಲಿ ಮುದ್ರಿತವಾಗಿದ್ದ ಕವನವೊಂದು ನನ್ನ ನೆನಪಿನಲ್ಲಿದೆ:

ಶಾರದಾಂಬೆಯೆ ವಿಧಿಯ ರಾಣಿಯೆ

ವಂದಿಸುವೆ ನಾ ನಿನ್ನನು

ದಾರಿ ಕಾಣದೆ ಬಳಲುತಿರುವೆನು

ತೋರಿಸೈ ಸತ್ಪಥವನು

ಓದುಬಾರದ ಬರಹವರಿಯದ

ಮಂದ ಬುದ್ಧಿಯ ನನ್ನನು

ಓದು ಬರಹಗಳನ್ನೆ ನೀಡುತ

ಹರಸು ನಿನ್ನಯ ಮಗುವನು

ಸತ್ಯ ಧರ್ಮಗಳಲ್ಲೆ ನಡೆಯುವ

ಭಾವವೆನ್ನೊಳು ರೂಪಿಸೈ

ನಿತ್ಯ ನಿನ್ನಯ ಸೇವೆಗಯ್ಯುವ

ಭಾಗ್ಯವೆನೆಗೆ ಕರುಣಿಸೈ

 

ಗುರುಹಿರಿಯರನು ಭಕ್ತಿಭಾವದಿ

ನೋಡಿಕೊಳ್ಳುವ ಶೃದ್ಧೆಯ

ವರದೆ ಶಾರದೆ ಬೇಡುವೆನು ನಾ

ಹಾನಿಯಿಲ್ಲದ ವಿದ್ಯೆಯ

 

ಅರಳೀಮರದ ಆತ್ಮ!

ಚಂದಮಾಮದ ಎಲ್ಲಾ ಕಥೆಗಳೂ ಮಕ್ಕಳ ಮನೋಭೂಮಿಕೆಗೆ ಅನುಗುಣವಾಗಿ ಸುಖಾಂತ್ಯವಾಗೇ ಇರುತ್ತಿದ್ದವು. ಆದರೆ ಒಂದು ಕಥೆ ಮಾತ್ರಾ ದುರಂತದಲ್ಲಿ ಕೊನೆಗೊಂಡು ನಮ್ಮ ಮನಸ್ಸನ್ನು ಘಾಸಿಗೊಳಿಸಿದ್ದು ಈಗಲೂ ಹಾಗೆಯೇ ಉಳಿದಿದೆ. ಕಥೆಯ ಹೆಸರು "ಅರಳೀಮರದ ಆತ್ಮ"!

ಸೋಮಣ್ಣ ಕಷ್ಟಪಟ್ಟು ಕೆಲಸ ಮಾಡುವ ಒಬ್ಬ ಯುವಕ. ತಂದೆ ತಾಯಿಯರನ್ನು ಕಳೆದುಕೊಂಡಿದ್ದ ಆತ ಮನೆಯಲ್ಲಿ ಒಂಟಿಯಾಗಿದ್ದ. ಹಾಗೂ ಮದುವೆಯಾಗಲು ಯೋಗ್ಯಳಾದ ಕನ್ಯೆಯೊಬ್ಬಳನ್ನು ಹುಡುಕುತ್ತಿದ್ದ. ಆ ಹಳ್ಳಿಯ  ನಡುವೆ ನೂರಾರು  ಪಕ್ಷಿಗಳಿಗೆ ಆಶ್ರಯದ ಬೀಡಾದ ಒಂದು ದೊಡ್ಡ ಅರಳೀಮರವಿತ್ತು. ಸುಡು ಬೇಸಿಗೆಯಲ್ಲಿ ನೂರಾರು ಮಂದಿ ಪ್ರಯಾಣಿಕರಿಗೆ ತಂಪನ್ನು ನೀಡುತ್ತಿದ್ದ ಈ ಮರ ಬಹುತೇಕ ಹಳ್ಳಿಯ ಜನರು ಸಂಧಿಸುವ ಜಾಗವೂ ಆಗಿತ್ತು.

ಒಂದು ಸಂಜೆ ಸೋಮಣ್ಣ ಒಂಟಿಯಾಗಿ ಮರದ ಕೆಳಗೆ ಅರೆತೆರೆದ ಕಣ್ಣಲ್ಲಿ ಏನೋ ಯೋಚಿಸುತ್ತಾ ಕುಳಿತಿದ್ದ. ಎದುರಿಗೆ ಯಾರೋ ಬಂದಂತಾಗಿ ಕಣ್ಣರಳಿಸಿ ನೋಡಿದರೆ ಸ್ಪುರದ್ರೂಪಿಯಾದ ಹೆಣ್ಣೊಬ್ಬಳು ನಿಂತಿದ್ದು ಕಾಣಿಸಿತು. ಆಕೆಯೊಡನೆ ಮಾತನಾಡಿದ ಸೋಮಣ್ಣ ಆವಳಿಗೆ ಮನಸೋತು ಹೋದ. ಆದರೆ ಅವಳ ಮನದಲ್ಲೂ ಅದೇ ಭಾವನೆ ಮೂಡಿತೇ ಎಂಬುದರ ಅರಿವಾಗಲಿಲ್ಲ. ಹೀಗೆ ಮುಂದೆಷ್ಟೋ ದಿನ ಪರಸ್ಪರ ಸಂಧಿಸಿದ ಮೇಲೆ, ಸೋಮಣ್ಣ ತನ್ನ ಮನದ ಇಂಗಿತವನ್ನು ಆಕೆಗೆ ಹೇಳಿಯೇ ಬಿಟ್ಟ. ಒಂದು ಶರತ್ತಿನ ಮೇಲೆ ಆಕೆ ಮದುವೆಗೆ ಒಪ್ಪಿಗೆ ನೀಡಿದಳು. ಅದೇನೆಂದರೆ ಆಕೆ ಯಾರು, ಅವಳ ಮೂಲವೇನು ಎಂದು ಯಾವತ್ತೂ ಕೇಳಕೂಡದೆಂದು.

ಮದುವೆ ಆಗಿ ಹೊಸ ದಾಂಪತ್ಯದ ಸುಖ, ಸಂತೃಪ್ತಿಯಲ್ಲಿ ಕಾಲ ಕಳೆದದ್ದೇ ಗೊತ್ತಾಗಲಿಲ್ಲ. ಗಂಡುಮಗನೊಬ್ಬ  ಜನಿಸಿದ ಮೇಲೆ ದಂಪತಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಹೀಗೆಯೇ ಕೆಲವು ವರ್ಷಗಳು ಕಳೆದುಹೋದವು.

ಒಂದು ಸಂಜೆ ಊರಿನ ಕೆಲ ಜನರು ಅರಳೀಮರದ ಕೆಳಗೆ ಕುಳಿತು ಏನೋ ಚರ್ಚಿಸುತ್ತಿರುವುದು ಸೋಮಣ್ಣನ ಕಣ್ಣಿಗೆ ಬಿತ್ತು. ಅವರುಗಳ ಮಾತಿನ ಸಾರಾಂಶ ಇಷ್ಟೇ. ರಸ್ತೆಯ ಅಗಲೀಕರಣ ನಡೆಯುತ್ತಿದ್ದು ಅದಕ್ಕಾಗಿ ಈ ಅರಳೀಮರವನ್ನು ಕಡಿಯಲಾಗುವುದು. 

ಸೋಮಣ್ಣನ ಮನಸ್ಸು ಮುದುಡಿಹೋಯಿತು. ಅರಳೀಮರ ಅವನ ದೇಹದ ಒಂದು ಆತ್ಮೀಯ ಭಾಗವೇ ಆಗಿಬಿಟ್ಟಿತ್ತು. ಮನೆಗೆ ಬಂದು ನೋಡಿದರೆ ಪತ್ನಿಯೂ ಖಿನ್ನಳಾಗಿದ್ದುದು ಕಾಣಿಸಿತು. ಸೋಮಣ್ಣ ಆಕೆಗೆ ಎಲ್ಲ ವಿಚಾರವನ್ನು ಹೇಳಿದ. ಆದರೆ ಆ ವಿಚಾರ ಆಕೆಗೆ ಮೊದಲೇ ತಿಳಿದಂತಿತ್ತು. ತನಗಿಂತಲೂ ಅವಳು ಹೆಚ್ಚಿನ ವೇದನೆಯನ್ನು ಅನುಭವಿಸುತ್ತಿರುವುದನ್ನು ಅವನು ಗಮನಿಸಿದ.

ಮತ್ತೆ ಕೆಲವು ದಿನಗಳಲ್ಲಿ ರಸ್ತೆಯ ಅಗಲೀಕರಣ ಪ್ರಾರಂಭವಾಗಿಯೇ ಬಿಟ್ಟಿತು. ಹತ್ತಾರು ಆಳುಗಳು ಕೂಡಿಕೊಂಡು ಅರಳೀಮರವನ್ನು ಕಡಿಯತೊಡಗಿದರು. ಕೊಡಲಿ ಪೆಟ್ಟುಗಳು ಮರಕ್ಕೆ ಬೀಳುವುದನ್ನು ನೋಡಿ ಸೋಮಣ್ಣ ತನ್ನ ದೇಹವನ್ನೇ ಯಾರೋ ಕತ್ತರಿಸುತ್ತಿದ್ದಾರೆಂದು ಅನ್ನಿಸಿ ವಿಷಯ ತಿಳಿಸಲು ಮನೆಗೆ ಓಡಿಬಂದ.  ಅಲ್ಲಿ ನೋಡಿದರೆ ಹೆಂಡತಿ ತಾಳಲಾರದ ನೋವು ಅನುಭವಿಸುತ್ತಾ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಾಳೆ. ಹಾಗೆಯೇ ತಾನು "ಅರಳೀಮರದ ಆತ್ಮ" ಎಂಬ ಸತ್ಯವನ್ನು  ಗಂಡನಿಗೆ ತಿಳಿಸುತ್ತಾಳೆ. ಸೋಮಣ್ಣನಿಗೆ ತಾನು ಮೊದಲು ಆಕೆಯನ್ನು ಸಂಧಿಸಿದ ನಂತರ ನಡೆದ ಎಲ್ಲಾ ಘಟನೆಗಳೂ ಕಣ್ಣಮುಂದೆ ಹಾದುಹೋದಂತಾಗಿ ಪರಿಸ್ಥಿತಿಯ ಸಂಪೂರ್ಣ ಅರಿವಾಗುತ್ತದೆ.

ಸೋಮಣ್ಣ ಮತ್ತೆ ಅದೇ ಸ್ಥಳಕ್ಕೆ ಧಾವಿಸಿ ಮರ ಕಡಿಯುವುದನ್ನು ನಿಲ್ಲಿಸುವಂತೆ ಪರಿಪರಿಯಾಗಿ ಬೇಡಿಕೊಂಡ. ಅವನ ಕಣ್ಣಿಂದ ನೀರು ಸುರಿಯುತ್ತಿತ್ತು. ಆದರೆ ಯಾರೂ ಅವನ ಬೇಡಿಕೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ನೋಡು ನೋಡುತ್ತಿದ್ದಂತೆಯೇ ಆ ಬೃಹತ್ ಅರಳೀಮರ ಭೋರಿಡುತ್ತಾ ನೆಲಕ್ಕೆ ಉರುಳಿತು. ಸೋಮಣ್ಣ ಕಂಗಾಲಾಗಿ ಮನೆಗೆ ಬಂದು ನೋಡುವಾಗ ಹೆಂಡತಿ ಹೆಣವಾಗಿ ಮಲಗಿದ್ದು ಕಾಣಿಸಿತು. ಪುಟ್ಟ ಮಗು ಅತ್ತು ಅತ್ತು ಅಮ್ಮನನ್ನು ಎಬ್ಬಿಸಲು ನೋಡುತ್ತಿತ್ತು.

ಮಾರನೇ ದಿನ ಕಡಿದುಬಿದ್ದ ಅರಳೀಮರದ ದಿಮ್ಮಿಯನ್ನು ದೂರ ಸಾಗಿಸಲು ಗಾಡಿಗೆ  ತುಂಬುವುದಕ್ಕಾಗಿ ಪ್ರಯತ್ನ ಪ್ರಾರಂಭವಾಯಿತು. ದಪ್ಪ ನೇಣು ಕಟ್ಟಿ ಎಳೆಯಲು ಹತ್ತಾರು ಆಳುಗಳು ಶತಪ್ರಯತ್ನ ಮಾಡಿದರೂ ದಿಮ್ಮಿ ಸೂಜಿಮೊನೆಯಷ್ಟೂ ಜರುಗಲಿಲ್ಲ. ಕಡೆಗೆ ಆನೆಯನ್ನೂ ಕರೆಸಿ ಎಳೆಸಲು ನೋಡಿದರೂ ಪ್ರಯೋಜನವಾಗಲಿಲ್ಲ. ಆನೆಯೂ ಸೋತು ಸುಣ್ಣವಾಯಿತು.

ಅದೇ ಸಮಯಕ್ಕೆ ಸೋಮಣ್ಣ ಮತ್ತು ಅವನ  ಮಗ ಅಲ್ಲಿಗೆ ಬಂದರು. ಮರದ ದಿಮ್ಮಿಯನ್ನು ನೋಡಿದ ಮಗು ಅದು ತನ್ನ ತಾಯಿಯ ದೇಹವೋ ಎಂಬಂತೆ "ಅಮ್ಮಾ" ಎಂದು ಅಳುತ್ತಾ ಅದನ್ನು ಅಲುಗಾಡಿಸಲು ಪ್ರಯತ್ನಿಸಿತು. ಎಂತಹಾ ವಿಸ್ಮಯ! ಅಲ್ಲಿ ನೆರೆದವರು ಆಶ್ಚರ್ಯಚಕಿತರಾಗಿ ಕಣ್ಣುಜ್ಜಿ ನೋಡಿದರು. ಆನೆ ಎಳೆದಾಗಲೂ ಅಲುಗಾಡದ ದಿಮ್ಮಿ ಸರಾಗವಾಗಿ ಚಲಿಸತೊಡಗಿತ್ತು! ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಆಳುಗಳು ದಿಮ್ಮಿಯನ್ನು ಗಾಡಿಯೊಳಗೆ ತಳ್ಳಿಬಿಟ್ಟರು.

ಕಥೆಯೇನೋ ಅಲ್ಲಿಗೆ ಮುಗಿದುಹೋಗಿತ್ತು. ಆದರೆ ನಮ್ಮ ಆಗಿನ ಎಳೆಯ ವಯಸ್ಸಿನ ಮನಸಿನಮೇಲೆ ಅದು ಒತ್ತಿದ ನೋವಿನ ಮುದ್ರೆ ಎಂದೂ ಮಾಸಲಾಗದ್ದಾಗಿತ್ತು. ಆಮೇಲೆ ಎಷ್ಟೋ ದಿನಗಳವರೆಗೆ ಅರಳೀಮರದ ಆತ್ಮ ದುಃಸ್ವಪ್ನವಾಗಿ ನಮ್ಮನ್ನು ಕಾಡುತ್ತಲೇ ಇತ್ತು. 

ಜಿನೀಯೊಂದು ಮತ್ತು ಡೊಂಕು ಬಾಲದ ನಾಯಿ!

ನನ್ನ ಮೆಚ್ಚಿನ ಚಂದಮಾಮ ದಿನಗಳ ಬಗೆಗಿನ ಈ ಬರಹವನ್ನು ಒಂದು ಸಂಚಿಕೆಯಲ್ಲಿ ಬಂದಿದ್ದ ತಮಾಷೆಯ ಕಥೆಯೊಂದಿಗೆ ಮುಗಿಸಲಿಚ್ಛಿಸುತ್ತೇನೆ. ಒಬ್ಬ ಯುವಕನಿಗೆ ಬಾಲ್ಯದಿಂದಲೂ ಸೋಮಾರಿತನದ ಅಭ್ಯಾಸವಾಗಿಬಿಟ್ಟಿತ್ತು. ತಾನು ಸ್ವತಃ ಮಾಡಬೇಕಾದ ಕೆಲಸಗಳನ್ನೂ ಕೂಡ ಬೇರೆ ಯಾರಾದರೂ ಮಾಡಲಿ ಎಂದು ಅವನು ಬಯಸುತ್ತಿದ್ದ. ಒಂದು ದಿನ ಯಾರೋ ಅವನಿಗೆ ಜಿನೀಯೊಂದು ದೊರೆತರೆ ಅದು ಅವನಿಗೆ ಬೇಕಾದ ಯಾವುದೇ ಕೆಲಸವನ್ನು ಕ್ಷಣಮಾತ್ರದಲ್ಲಿ ಮಾಡಿಕೊಟ್ಟುಬಿಡುವುದೆಂದು ಹೇಳಿದರು.

ಅವನು ಕೂಡಲೇ ಭಕ್ತಿಯಿಂದ ದೇವರನ್ನು ಬೇಡಿಕೊಂಡ ಕೆಲ ನಿಮಿಷಗಳಲ್ಲೇ ಜಿನೀಯೊಂದು ಅವನ ಮುಂದೆ ಪ್ರತ್ಯಕ್ಷವಾಗುತ್ತದೆ. ಕೂಡಲೇ ತನಗೇನು ಅಪ್ಪಣೆಯೆಂದು ಯುವಕನನ್ನು ಕೇಳುತ್ತದೆ. ಯುವಕನು ಅತೀವ ಸಂತೋಷದಿಂದ ತನಗಿಷ್ಟವಾದ ಕೆಲವು ತಿಂಡಿಗಳನ್ನು ತರುವಂತೆ ಹೇಳುತ್ತಾನೆ. ಕ್ಷಣಮಾತ್ರದಲ್ಲಿ ಆ ತಿಂಡಿಗಳು ಅವನ ಮುಂದಿರುತ್ತವೆ. ಆಮೇಲೆ ಅವನು ತನಗೊಂದು ಸುಂದರವಾದ ಹೊಸ ಮನೆ ಬೇಕೆನ್ನುತ್ತಾನೆ. ಮರುಕ್ಷಣವೇ ಅವನು ಬಯಸಿದ ಹೊಸ ಮನೆಯೊಂದು ಅವನ ಮುಂದೆ ಗೋಚರಿಸುತ್ತದೆ.

ಯುವಕನು ತುಂಬಾ ಸಡಗರ  ಮತ್ತು ಸಂತೋಷದಿಂದ ತನ್ನ ನವಗೃಹವನ್ನು ವೀಕ್ಷಿಸುತ್ತಿರುವಷ್ಟರಲ್ಲೇ ಜಿನೀ ಅವನಿಗೆ ತನ್ನ ಮುಂದಿನ ಆದೇಶವೇನೆಂದು ಕೇಳುತ್ತದೆ. ಅದು ತಾನು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲವೆಂದೂ ಮತ್ತೂ ತನಗೆ ಒಂದರ ನಂತರ ಮತ್ತೊಂದು ಆದೇಶಗಳನ್ನು ನೀಡಲೇ ಬೇಕಾಗುವುದೆಂದು ಯುವಕನಿಗೆ ಸ್ಪಷ್ಟಪಡಿಸುತ್ತದೆ! ಆಗ ಯುವಕನಿಗೆ ತಾನೆಂತಹ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡೆನೆಂದು ಅರಿವಾಗುತ್ತದೆ. ಅಷ್ಟರಲ್ಲಿ ಅವನಿಗೊಂದು ಐಡಿಯಾ ಹೊಳೆಯುತ್ತದೆ. ಅವನು ಕೂಡಲೇ ಜಿನೀಗೆ ತನ್ನ  ಮನೆಯ ಪಕ್ಕದಲ್ಲೊಂದು ಆಳವಾದ ಬಾವಿಯೊಂದನ್ನು ತೋಡುವಂತೆ ಹೇಳುತ್ತಾನೆ.

ಜಿನಿ ಕೂಡಲೇ ಬಾವಿ ತೋಡಲು  ಪ್ರಾರಂಭ ಮಾಡುತ್ತದೆ. ಆ ಕೆಲಸ ಮುಗಿಯಲು ತುಂಬಾ ಸಮಯ ಬೇಕಾಗುವುದೆಂದು ತಿಳಿದು ಯುವಕ ಆರಾಮದಿಂದ ಮಲಗಿ ನಿದ್ದೆಮಾಡತೊಡಗುತ್ತಾನೆ. ಆದರೆ ಸ್ವಲ್ಪ ಸಮಯದಲ್ಲೇ ಅವನ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿ ಅವನನ್ನು ನಿದ್ದೆಯಿಂದ ಎಬ್ಬಿಸುತ್ತಾರೆ. ಎಚ್ಚತ್ತು ಅವನು ನೋಡಿದಾಗ ಜಿನಿ ಬೃಹದಾಕಾರದ ಬಾವಿಯೊಂದನ್ನು ತೋಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಆ ಬಾವಿಯ ಸುತ್ತಮುತ್ತಲಿನ ಮನೆಗಳ ಅಡಿಪಾಯ ಕುಸಿಯುವಂತಾದರೂ ಜಿನಿ ಇನ್ನೂ ಬಾವಿಯನ್ನು ತೋಡುತ್ತಲೇ ಇರುತ್ತದೆ!

ಯುವಕನು ಗಾಬರಿಯಿಂದ ಜಿನಿಗೆ ಕೆಲಸ ನಿಲ್ಲಿಸಲು ಹೇಳಿ ಅಗೆದ ಮಣ್ಣನ್ನೆಲ್ಲಾ ಪುನಃ ಬಾವಿಯೊಳಗೆ ತುಂಬುವಂತೆ ಆಜ್ಞೆ ನೀಡುತ್ತಾನೆ. ಅಷ್ಟರಲ್ಲೇ ಅದಕ್ಕೆ ಕೊಡಬಹುದಾದ ಮುಂದಿನ ಆಜ್ಞೆಯ ಬಗ್ಗೆ ಯೋಚಿಸತೊಡಗುತ್ತಾನೆ. ಆಗ ಅವನ ಮುಂದೆ ನಾಯಿಯೊಂದು ಹೋಗುತ್ತಿರುವುದು ಕಣ್ಣಿಗೆ ಬೀಳುತ್ತದೆ. ಕೂಡಲೇ ಅವನಿಗೊಂದು ಐಡಿಯಾ ಹೊಳೆಯುತ್ತದೆ. ಅಷ್ಟರಲ್ಲೇ ಜಿನಿ ಬಾವಿಯನ್ನು ಮುಚ್ಚಿ ಹಾಕಿ ಮುಂದಿನ ಕೆಲಸವೇನೆಂದು ಕೇಳುತ್ತದೆ. ಕೂಡಲೇ ಯುವಕ ಅದಕ್ಕೆ ಆ ನಾಯಿಯ ಡೊಂಕು ಬಾಲವನ್ನು ನೇರವಾಗಿರುವಂತೆ ಮಾಡುವಂತೆ ಆಜ್ಞೆ ನೀಡುತ್ತಾನೆ. ಜಿನಿಯು ಕೂಡಲೇ ನಾಯಿಯ ಬಾಲವನ್ನು ನೇರವಾಗಿ ಸ್ವಲ್ಪ ಕಾಲ ಹಿಡಿದು ಯುವಕನ ಬಳಿಗೆ ಹಿಂದಿರುಗಿ ಕೆಲಸ ಮುಗಿಸಿದುದಾಗಿ ಹೇಳುತ್ತದೆ.

ಆಗ ಯುವಕ ಅದಕ್ಕೆ ನಾಯಿಯ ಬಾಲ ಪುನಃ ಡೊಂಕಾಗಿರುವತ್ತ ಗಮನ ಸೆಳೆಯುತ್ತಾನೆ. ಜಿನಿಗೆ ತುಂಬಾ ಕೋಪ ಬಂದು ಪುನಃ ನಾಯಿಯ ಬಾಲವನ್ನು ಕೈಯಲ್ಲಿ ನೇರವಾಗಿ ಒತ್ತಿ ಒತ್ತಿ ಹಿಡಿದು ಒಂದು ಕೋಲಿನಾಕಾರ ಮಾಡಲು ಹೆಣಗಾಡುತ್ತದೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಬಾಲ ಪುನಃ ಡೊಂಕಾಗುತ್ತಲೇ ಇರುತ್ತದೆ. ಆಗ ಯುವಕ ಜಿನಿಗೆ ಅದರ ಪ್ರಯತ್ನವನ್ನು ಮುಂದುವರಿಸುತ್ತಾ, ಕಾರ್ಯ ಮುಗಿದೊಡನೆ ತನ್ನ ಹತ್ತಿರ ಮುಂದಿನ ಆಜ್ಞೆ ಪಡೆಯಲು ಬರುವಂತೆ ಹೇಳಿ ತಾನು ಪುನಃ ನಿದ್ರಿಸಲು ಹೋಗಿಬಿಡುತ್ತಾನೆ. ಪಾಪ! ಬಡಪಾಯಿ ಜಿನಿ ಇಂದಿಗೂ ನಾಯಿಯ ಬಾಲವನ್ನು ನೇರಮಾಡುತ್ತಲೇ ಇದೆಯಂತೆ!

-------- ಮುಗಿಯಿತು------



Saturday, August 22, 2020

ನನ್ನ ಚಂದಮಾಮ ದಿನಗಳು – ೨

 

ನನಗೆ  ನೆನಪಿರುವ ಮುಖ್ಯ ಧಾರಾವಾಹಿಗಳಲ್ಲಿ ಮೊದಲನೆಯದು ಅವಳಿ ಮಕ್ಕಳು, ನಂತರ ಅಪೂರ್ವ ಸ್ಟಂಭ, ರತ್ನ ಕಿರೀಟ, ಧೂಮಕೇತು, ಮಕರ ದೇವತೆ, ಮೂವರು ಮಾಂತ್ರಿಕರು ಮತ್ತು ಕಂಚಿನಕೋಟೆ. ಈ ಎಲ್ಲಾ ಧಾರಾವಾಹಿಗಳೂ ಕೊನೆಯ ಕಂತಿನ ತುತ್ತತುದಿಯವರೆಗೆ ನಮ್ಮ ಆತಂಕಪೂರ್ಣ ಕುತೂಹಲವನ್ನು ಹಿಡಿದಿಟ್ಟುಕೊಳ್ಳುತ್ತಿದ್ದ ಸಾಹಸಮಯ ಕಥೆಗಳು. ಪ್ರತಿಯೊಂದು ಕಂತಿನ ಅಂತ್ಯವೂ :ಮುಂದೇನಾಯಿತು?" ಎಂದು ತುದಿಗಾಲಮೇಲೆ ಕಾಯುವಂತೆ ಮಾಡುವ ಘಟನೆಯೊಂದಿಗೆ ಧುತ್ತನೆ ನಿಂತುಹೋಗಿಬಿಡುತ್ತಿತ್ತು. ನಾವು ಉಸಿರು ಬಿಗಿಹಿಡಿದು ಜಾತಕ   ಪಕ್ಷಿಯಂತೆ ಕನಿಷ್ಠ ಮೂವತ್ತು ದಿನಗಳು ಕಾಯಬೇಕಿತ್ತು.

ಜಾತಕ ಕಥೆಗಳು

ಚಂದಮಾಮದಲ್ಲಿ ನಮಗೆ ತುಂಬಾ ಇಷ್ಟವಾಗಿ ಸುದೀರ್ಘಕಾಲ ಪ್ರಕಟವಾದ ಕಥೆಗಳಲ್ಲಿ ಗೌತಮ ಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿದ ಜಾತಕ ಕಥೆಗಳೂ ಸೇರಿದ್ದವು. "ಬ್ರಹ್ಮದತ್ತನು ಕಾಶಿ ರಾಜ್ಯವನ್ನು ಅಳುತ್ತಿದ್ದ ಕಾಲದಲ್ಲಿ ಬೋಧಿಸತ್ವನು --------ಆಗಿ ಜನ್ಮ ತಾಳಿದನು". ಇದು ಪ್ರತಿಕಥೆಯ ಪ್ರಾರಂಭ ವಾಕ್ಯವಾಗಿತ್ತು. ಮೊದಲಿನ ಚಿತ್ರದಲ್ಲಿ ಬುದ್ಧನು ತನ್ನ ಶಿಷ್ಯರಿಗೆ ಕಥೆ ಹೇಳುವ ದೃಶ್ಯ ಇರುತ್ತಿತ್ತು. ಕಥೆಗಳು ಕುತೂಹಲಕಾರಿಯಾಗಿರುತ್ತಿದ್ದುದು ಮಾತ್ರವಲ್ಲ ಮಕ್ಕಳಾದ ನಾವು ಕೂಡ ಮೆಚ್ಚುವಂತ ನೈತಿಕ ಮೌಲ್ಯಗಳನ್ನೊಡಗೊಂಡಿರುತ್ತಿತ್ತು.

ಪಂಚತಂತ್ರ ಮತ್ತು ಬೇತಾಳ ಕಥೆಗಳು

ಪದ್ಯರೂಪದಲ್ಲಿ ಪ್ರಕಟವಾಗುತ್ತಿದ್ದ ಪಂಚತಂತ್ರ ಕಥೆಗಳು ಇನ್ನೊಂದು ಮುಖ್ಯ ಆಕರ್ಷಣೆ. ಒಂದಿಷ್ಟು ತಿಂಗಳು ಮಾರಂಗ ಎಂಬ ಲೇಖಕರು ಮತ್ತು ಇನ್ನು ಕೆಲವು ತಿಂಗಳು ಮದ್ವಗಿರಿ ಜಲನಾಭತನಯ ಎಂಬುವರೂ ಬರೆಯುತ್ತಿದ್ದರು. ಪ್ರತಿಭಾಪೂರ್ಣವಾಗಿ ನೇಯ್ದ ಪದ್ಯಗಳು. ನಾವು ಎರಡು ಬಾರಿ ಗಟ್ಟಿಯಾಗಿ ಓದಿಕೊಂಡರೆ ಸಾಕು ಬಾಯಿಪಾಠವಾಯಿತೆಂದೇ ಲೆಕ್ಕ. ಸರಳವಾದ ಪದಪ್ರಯೋಗದಿಂದ ಕೂಡಿರುತ್ತಿದ್ದವು.

ಮತ್ತೊಂದು ಕುತೂಹಲಕಾರಿ ಧಾರಾವಾಹಿಯೆಂದರೆ "ಬೇತಾಳ ಕಥೆಗಳು". ಸ್ಮಶಾನದಲ್ಲಿ ತ್ರಿವಿಕ್ರಮನು ಹೆಗಲಮೇಲೆ ಶವ ಹೊತ್ತುಕೊಂಡು ಹೋಗುತ್ತಿದ್ದ ಎಂದಿಗೂ ಮರೆಯಲಾರದ ಆ ಕೌತುಕಮಯ ಅಪೂರ್ವ ಚಿತ್ರ ಶಂಕರ್ ಅವರ ಕುಂಚದಿಂದ ಮೂಡಿ ಬಂದಿತ್ತು.

ಕಥೆಯ ಅಂತ್ಯದಲ್ಲಿ ಬೇತಾಳ ಶವದೊಂದಿಗೆ ಸೇರಿ ತ್ರಿವಿಕ್ರಮನ ಕೈಯಿಂದ ಜಾರಿ ಮರದತ್ತ ಸಾಗುತ್ತಿರುವ ಅಪೂರ್ವ ಚಿತ್ರಗಳೂ ಕೂಡ ನೆನಪನ್ನು ಕಾಡುತ್ತಾ ಉಳಿದುಕೊಂಡುಬಿಟ್ಟಿವೆ. ಹೇಳಲೇ ಬೇಕಾದ ಇನ್ನೊಂದು ವಿಚಾರವೆಂದರೆ ಪ್ರತಿ ಕಥೆಯ ಕೊನೆಗೂ ಅದೇ ತ್ರಿವಿಕ್ರಮ, ಅದೇ ಶವ, ಅದೇ ಸ್ಮಶಾನ ಮತ್ತು ಅದೇ ಮರ. ಆದರೆ ಪ್ರತಿ ಬಾರಿಯೂ ವಿಭಿನ್ನವಾಗಿ, ಹೊಸ ಹೊಸ ದೃಶ್ಯ ಸೃಷ್ಟಿಸುತ್ತಿದ್ದ ಶಂಕರ್ ಅವರ ಪ್ರತಿಭೆ ಬೆರಗು ಹುಟ್ಟಿಸುವಂಥದ್ದು.

ಶವವನ್ನು ಸ್ಮಶಾನದಿಂದ ಹಿಂದೆ ತರುವಾಗ ಒಂದೂ ಮಾತನಾಡದೆ ಮೌನವಾಗಿರಬೇಕೆಂಬುದು  ನಿಯಮ. ಮಾತನಾಡಿದರೆ ಮತ್ತೆ ಬೇತಾಳ ಶವದೊಂದಿಗೆ ಮರ ಸೇರಿ ನೇತಾಡತೊಡಗುತ್ತದೆ. ರಾಜನ ಮೌನಭಂಗ ಮಾಡುವ ದುರುದ್ದೇಶದಿಂದ ಬೇತಾಳ ಪ್ರತಿಬಾರಿಯೂ ಚಿತ್ರವಿಚಿತ್ರವಾದ, ಆದರೆ ಅಷ್ಟೇ ಕುತೂಹಲಕಾರಿ ಕಥೆಯನ್ನು ಹೇಳಿ ಕಡೆಯಲ್ಲಿ ಒಗಟಿನಂತ ಒಂದು ಪ್ರಶ್ನೆ ಕೇಳುತ್ತದೆ. "ಈ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ ಸಿಡಿದು ಸಹಸ್ರಹೋಳಾದೀತು” ಎಂಬ ಧಮಿಕಿ ಬೇರೆ ಹಾಕುತ್ತದೆ!

ರಾಜಾ ತ್ರಿವಿಕ್ರಮ ಮಹಾ ಮೇಧಾವಿ. ಅವನಿಗೆ ಉತ್ತರ ಹೊಳೆಯದಿರುವುದುಂಟೇ? ಛಲಬಿಡದ ತ್ರಿವಿಕ್ರಮ ಮತ್ತೆಮತ್ತೆ ಶವ ಸಾಗಿಸಲು ಪ್ರಯತ್ನಿಸುತ್ತಾನೆ. ಬೇತಾಳ ಮತ್ತೆಮತ್ತೆ ಕಥೆ ಹೇಳುತ್ತಲೇ ಇರುತ್ತೆ!

ಎಂತಹ ಕಥೆಯೇ ಆಗಲಿ ಒಂದಲ್ಲ ಒಂದು ದಿನ ಮುಗಿಯಲೇ ಬೇಕಲ್ಲ. ರಾಜನಿಗೆ ಉತ್ತರ ಹೇಳಲಾಗದ ಆ ಕೊನೆಯ ಕಥೆಗಾಗಿ ನಾವು ತುದಿಗಾಲಿನಲ್ಲಿ ಕಾಯುತ್ತಲೇ ಇದ್ದೆವು. ಆದರೆ ಎಂತಹ ಅನಾಹುತ ಆಯಿತು ನೋಡಿ! ಇನ್ನೇನು ಕಥೆಗಳು ಮುಗಿಯುತ್ತಾ ಬಂದವು ಎಂಬ ಸೂಚನೆ ನಮಗೆ ಸಿಗುತ್ತಿರುವಾಗಲೇ ಸಂಪಾದಕರು ಒಂದು ಪ್ರಕಟಣೆಯಲ್ಲಿ ಓದುಗರಿಗೆ ಒಂದು ಅವಕಾಶ ಕಲ್ಪಿಸಿದರು - "ಆಸಕ್ತರು ತಮ್ಮದೇ ಕಲ್ಪನೆಯ ಬೇತಾಳ ಕಥೆಯನ್ನು ಸೃಷ್ಟಿಸಿ ಕಳಿಸಿ ಕೊಡಬಹುದು". ಪರಿಣಾಮ ಏನಾಯಿತೆಂದರೆ ಬೇತಾಳ ಸಂಪಾದಕರ ಬೆನ್ನು ಬಿಡಲೇ ಇಲ್ಲ! ಪತ್ರಿಕೆಯ ಕಚೇರಿ ಕಥೆಗಳ ಪ್ರವಾಹದಿಂದ ತುಂಬಿಹೋಗಿರಬೇಕು!  ಇವತ್ತಿಗೂ ಅವು ಎಂದೂಮುಗಿಯದ ಕಥೆಗಳಾಗಿಯೇ  ಉಳಿದುಹೋಗಿವೆ!

ಈ ಎಲ್ಲಾ ಬೆಳವಣಿಗೆಗಳಿಂದಾಗಿ ಚಂದಮಾಮದಲ್ಲಿ ಮೇಧಾವಿ ತ್ರಿವಿಕ್ರಮನಿಗೆ ಉತ್ತರ  ಹೇಳಲಾಗದ ಕೊನೆಯ ಕಥೆಯನ್ನು ಓದುವ ಅವಕಾಶದಿಂದ ನಾವು ಶಾಶ್ವತವಾಗಿ ವಂಚಿತರಾಗಬೇಕಾಯಿತು. ನಾವೇನೋ ಕುತೂಹಲ ತಾಳಲಾರದೇ ಆ ಕಥೆಯನ್ನು ಬೇರೆಲ್ಲೋ ಓದಿದೆವೆನ್ನಿ. ಆದರೆ ಈಗ ಅದರ ಅಸ್ಪಷ್ಟ ನೆನಪು ಮಾತ್ರ ಉಳಿದಿದೆ. ಅದನ್ನೇ ಪ್ರಾಯಶಃ ಶಂಕರ್  ಅವರ ಚಿತ್ರದೊಂದಿಗೆ ಬಾಲ್ಯದಲ್ಲೇ ಓದಿದ್ದರೆ ಜನ್ಮ ಜನ್ಮಾಂತರಕ್ಕೂ  ಮರೆಯುತ್ತಿರಲಿಲ್ಲವೇನೋ!

ಪರೋಪಕಾರಿ ಪಾಪಣ್ಣ ಮತ್ತು ಗುಂಡು ಭೀಮಣ್ಣನ ಕಥೆಗಳು

೧೯೬೨ರಿಂದ ಅನೇಕ ತಿಂಗಳ  ಕಾಲ  ಪ್ರಕಟವಾಗುತ್ತಿದ್ದ "ಪರೋಪಕಾರಿ ಪಾಪಣ್ಣ", ಸರಳ ಸ್ವಭಾವದ ಹುಡುಗನೊಬ್ಬ ಸಿಕ್ಕಿಸಿಕ್ಕಿದವರಿಗೆಲ್ಲಾ ಸಹಾಯ ಮಾಡಲು ಹೋಗಿ ತೊಂದರೆಗೆ ಒಳಗಾಗುತ್ತಿದ್ದ ಕಥೆ. ಬರೆಹಗಾರ್ತಿ ಸುನಂದ. ತುಂಬಾ ಮೋಜಿನಿಂದ ಓದಿಸಿಕೊಂಡು ಹೋಗುತ್ತಿದ್ದ ಕಥೆ. ಇದಾದ ನಂತರ ಇದೇ ಸುನಂದ ಅವರ "ಗುಂಡು ಭೀಮಣ್ಣನ ಕಥೆಗಳು" ಹಲವಾರು ತಿಂಗಳು ಪ್ರಕಟವಾಗುತ್ತಿದ್ದವು. ಪಾಪಣ್ಣನದೇ ಇನ್ನೊಂದು ಅವತಾರ. ಅಷ್ಟೇ ಸೊಗಸು.

ಪದ್ಯರೂಪದ ಕಥೆಗಳು

ಧಾರಾವಾಹಿಗಳಲ್ಲದ ಉಳಿದ ಬರಹಗಳ ಬಗ್ಗೆ ಹೇಳುವ ಮೊದಲು ಪ್ರತಿ ಸಂಚಿಕೆಯ ಪ್ರಾರಂಭದಲ್ಲಿ ಮುದ್ರಿತವಾಗುತ್ತಿದ್ದ ಪದ್ಯರೂಪದ ಕಥೆಗಳ ಬಗ್ಗೆಯೂ ಹೇಳಲೇ ಬೇಕು. ಹೆಚ್ಚಿನ ಪದ್ಯಗಳು ನವಗಿರಿನಂದ ಎಂಬ ಲೇಖಕರದು. ತೆಲುಗಿನಿಂದ ಅನುವಾದಗೊಂಡವೇ ಹೆಚ್ಚು. ಲೇಖಕರ ಹೆಸರೂ ಸೇರಿ ನಮಗೆ ಎಲ್ಲಾ ಪದ್ಯಗಳೂ ಕಂಠಪಾಠವಾಗಿಬಿಟ್ಟಿದ್ದವು. ಪದ್ಯದ ಕೊನೆಯಲ್ಲಿ 'ನವಗಿರಿನಂದ, ತೆಲುಗಿನಿಂದ'  ಎಂಬ ಸಾಲನ್ನೂ ರಾಗವಾಗಿ ಹೇಳುತ್ತಿದ್ದೆವು. 'ನವಗಿರಿನಂದ, ತೆಲುಗಿನಿಂದ'  ಏನು ಲಯ; ಎಂಥ ಪ್ರಾಸ. ಮತ್ತೆ ಕೆಲವು ಪದ್ಯಗಳಲ್ಲಿ 'ಕಮಲಪ್ರಿಯ' ಮದರಾಸು ಎಂದಿರುತ್ತಿತ್ತು. ನನ್ನ ನೆನಪಿನಿಂದ ಒಂದು ಪದ್ಯವನ್ನು ಕೆಳಗೆ ಬರೆದಿದ್ದೇನೆ:

ಇಲಿಮರಿಯ ಮದುವೆ!

ಮುನಿವರನೊಬ್ಬನು ದಾರಿಯೊಳ್ ನಡೆಯುತ

ಇಲಿಮರಿಯೊಂದನು ನೋಡಿದನು

ಮನದಲಿ ಮರುಗಿ ತಪದ ಪ್ರಭಾವದಿ

ಇಲಿಯನು ಚಲುಬಾಲೆಯ ಮಾಡಿದನು

ಮಾನವ ಕುಲದ ಮಾನಿನಿ ತೆರದಿ

 ಮುದ್ದಿನಿಂದಲೇ ಪಾಲಿಸಿದ

ಮೋಹಕ ರೂಪದಿ ಯೊವ್ವನವೇರಲು

ಮದುವೆಗೆ ವರನನು ಶೋಧಿಸಿದ


ರವಿಗಿಂತಲೂ ಬಲಶಾಲಿಯ ಕಾಣೆನು

ಆತನೆ ಕುವರಿಗೆ ಸರಿವರನು

ಎಂದೆನ್ನುತ್ತಲಿ ಸೂರ್ಯನ ಧ್ಯಾನಿಸಿ

ಕುವರಿಯ ಕರವಿಡಿ ಎಂದುಸುರಿದನು


ರವಿ ಇಂತರುಹಿದ ಕುವರಿಯ ನೋಡಿ

 ಮೇಘನು ನನಗಿಂತಲು ಗಟ್ಟಿ

ಆತನ ಮುಂದೆ ನನ್ನ ಪ್ರಭಾವವು

ವ್ಯರ್ಥವು ಕೇಳಾತನ ಮನಮುಟ್ಟಿ


ಮೇಘನ ಕುರಿತು ಮುನಿ ಬೇಡಿದನು

ಮೇಘನು ಗಾಭರಿ ಹೊಂದಿದನು

ನೋಡೆಲೆ ಮುನಿವರ ನಿನ್ನೀ ಕುವರಿಗೆ

 ಮಾರುತನೇ ಸರಿ ಗುಡುಗಿದನು


ನಿಜ ನಿಜ ಮಾರುತ ಬಲಯುತನು

ಆತನು ಬೀಸಲು ಮೇಘನು ನಿಲ್ಲನು

ಗಾವುದ ದೂರಕೆ ಓಡುವನು

ಎನುತಲೆ ಮುನಿವರ ಸಾಗಿದನು


ವಾಯುದೇವನೇ ಲೋಕಪಾಲನೇ

ನೀನೆ ಕುವರಿಗೆ ಸರಿವರನು

ತಕ್ಕ ವರನಿಹೆ ಕರುಣೆ ತೋರೈ

ಎಂದತಿ ದೈನ್ಯದಿ ಮುನಿ ಬೇಡಿದನು


ವಾಯು ಕರುಣದಿ ಮುನಿಗೆ ನಮಿಸಿ

ದೀರ್ಘ ದಂಡದಿ ನುಡಿದನು

ಸ್ವಾಮಿ ಗೋಡೆಯೇ ಶೂರನಿಹನು

ಆತನೆಡೆ ನಾ ದೀನನು


ವಾಯು ಮಾತನು ಮುನಿಯು ನಂಬಿ

 ಗೋಡೆಯನೇ ತಾ ಬೇಡಿದನು

ಬಿಡಬೇಡ ಎನುತಲೆ ಗೋಡೆಯು

ಇಲಿಯ ಹಿರಿಮೆಯ ತೋರಿದನು


ಇಲಿಯೊಂದಲ್ಲಿ ಗೋಡೆಯ ಛೇದಿಸೆ

ಇಲಿಯ ಶೌರ್ಯಕೆ ಮುನಿ ಮೆಚ್ಚಿದನು

ಇಲಿಗೆ ಇಲಿಯೇ ಸಾಟಿಯೆನುತ್ತಲಿ

ಇಲಿಗೆ ಇಲಿ ಬಾಲವ ಕಟ್ಟಿದನು!

ಅತಿ ವಿನೋದಮಯವಾದ ಈ ಕಥೆ ಪ್ರಾಯಶಃ ಪಂಚತಂತ್ರದ ಕಥೆಯೇ ಇರಬೇಕು. ಆದರೆ ಅದನ್ನು ಅತ್ಯಂತ ಪ್ರಾಸಬದ್ಧವಾಗಿ ಕವನವನ್ನಾಗಿ ಪರಿವರ್ತಿಸಿದ ಲೇಖಕನ ಜಾಣ್ಮೆಯನ್ನು ಮೆಚ್ಚಲೇ ಬೇಕು.

ಶೃಂಗೇರಿ ಕೆರೆಮನೆಯ ದಿವಂಗತ ಕೆ ಟಿ ಲಕ್ಷ್ಮೀನಾರಾಯಣ

ನಮ್ಮ ದೂರದ ಸಂಬಂಧಿಗಳೇ ಆದ ಶೃಂಗೇರಿ ಕೆರೆಮನೆಯ ದಿವಂಗತ ಕೆ ಟಿ ಲಕ್ಷ್ಮೀನಾರಾಯಣ ಅವರು ಬರೆದ ಅನೇಕ ಕಥೆಗಳು ಚಂದಮಾಮದಲ್ಲಿ ಪ್ರಕಟವಾಗುತ್ತಿದ್ದವು. ಅದರಲ್ಲಿ ತಮಾಷೆಯ ಒಂದು ಪುಟ್ಟ ಕಥೆ ಹೀಗಿತ್ತು:

ರಾಮೇಗೌಡ ಒಂಟೆತ್ತಿನ ಗಾಡಿ ಇಟ್ಟಿದ್ದ. ಒಂದು ದಿನ ಅವನು ಪಟ್ಟಣಕ್ಕೆ ಗಾಡಿ ಹೊಡೆದುಕೊಂಡು ಹೋದ. ಕಟ್ಟೆಯಲ್ಲಿ ಸುಂಕದ ಅಧಿಕಾರಿ "ಎಂಟಾಣೆ ಟೋಲ್ (ಸುಂಕ) ಕೊಡು" ಎಂದು ಕೇಳಿದ. ರಾಮೇಗೌಡ "ದಮ್ಮಯ್ಯ, ಇದೊಂದ್ಸಾರಿ ಬುಟ್ ಬಿಡು" ಎಂದ. ಆತ ಕೇಳಲಿಲ್ಲ. ಹೇಳಿದ : "ಬೋರ್ಡ್ ನೋಡು. ಗಾಡಿ ಹೊಡೆಯುವವರು ಗಾಡಿಗೆ ಎಂಟಾಣೆ ಟೋಲ್ ಕೊಡಬೇಕು ಎಂದಿದೆ. ನೋಡಿದೆಯಾ?”

ರಾಮೇಗೌಡ ಗಾಡಿ ಹಿಂದಿರುಗಿಸಿದ. ಏನಾದರೂ ಒಂದು ಫಾರ್ಲೊಂಗ್ ಹಿಂದೆ ಬಂದಿರಬಹುದು. ಅಷ್ಟರಲ್ಲಿ ಒಂದು ಪ್ಲಾನ್ ಹೊಳೆಯಿತು. ತಕ್ಷಣ ಎತ್ತನ್ನು ಬಿಚ್ಚಿ ಗಾಡಿ ಒಳಕ್ಕೆ ಹಾಕಿದ. ಬಾರುಕೋಲನ್ನು ಅದರ ಬಾಯಲ್ಲಿ ಇಟ್ಟ  ತಾನೇ ಎತ್ತಿನಂತೆ ಗಾಡಿಯನ್ನು ಎಳೆದುಕೊಂಡು ಹೊರಟ.

ಪೇಟೆಯಲ್ಲಿ ಎಲ್ಲರೂ ನಗುವವರೇ. ಸುಂಕದ ಅಧಿಕಾರಿಯೂ ನಗಲಾರಂಭಿಸಿದ. ರಾಮೇಗೌಡನನ್ನು ಕೇಳಿದ. "ಎಂಟಾಣೆ ಕೊಡು". ರಾಮೇಗೌಡ ಹೇಳಿದ: "ಗಾಡಿ ಹೊಡೆಯುವನನ್ನು ಕೇಳಿರಿ!" ಸುಂಕದವ ಹೊಟ್ಟೆ ತುಂಬಾ ನಕ್ಕು ಅವನನ್ನು ಹಾಗೇ ಬಿಟ್ಟ. ಹೇಗಿದೆ, ರಾಮೇಗೌಡನ ಬುದ್ಧಿವಂತಿಕೆ?

----ಮುಂದುವರಿಯುವುದು ---


Friday, August 21, 2020

ನನ್ನ ಚಂದಮಾಮ ದಿನಗಳು -೧

 ನಿನ್ನ ಬಾಲ್ಯದ ಯಾವ ದಿನಗಳು ಅತ್ಯಂತ ಸುಖೀ ದಿನಗಳಾಗಿದ್ದವು ಎಂದು ಯಾರಾದರೂ ಕೇಳಿದರೆ ನಾನು ಚಂದಮಾಮ ಓದುತ್ತಾ ಕಳೆದ ದಿನಗಳು ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ. ನನ್ನ ತಲೆಮಾರಿನ ಹೆಚ್ಚು ಮಂದಿ ಇದೇ ಉತ್ತರ ಹೇಳುತ್ತಾರೆಂದೂ ಕೂಡ ನನಗೆ ಗೊತ್ತು. ನಿಜ ಹೇಳಬೇಕೆಂದರೆ ಚಂದಮಾಮ ನಮ್ಮ ಬಾಲ್ಯ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿತ್ತು. ಮಕ್ಕಳಾದ ನಾವು ಬೇಕಾದರೆ ಒಂದು ಹೊತ್ತಿನ ಊಟ ತಿಂಡಿಯನ್ನು ಬಿಡಲು ತಯಾರಿದ್ದೆವೇ ಹೊರತು ಚಂದಮಾಮದ ರೋಚಕ ಕಥೆಗಳನ್ನು ಓದುವುದರಿಂದ ವಂಚಿತರಾಗಲು ಯಾವತ್ತೂ ಸಿದ್ಧರಿರಲಿಲ್ಲ. 

ಈ ಚಂದಮಾಮ ಎಂಬ ಅದ್ಭುತ ಪತ್ರಿಕೆ ಯಾವ ಮಧುರ ಕ್ಷಣದಲ್ಲಿ ನನ್ನ ಬಾಲ್ಯವನ್ನು ಹೊಕ್ಕಿತೋ ಎಂಬುದು ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿಲ್ಲ. ಆದರೆ ಅದು ಸದಾಕಾಲವೂ ನನ್ನ ಜೊತೆಯಾಗೇ ಇದ್ದಂತಿದೆ. ನಮ್ಮ ತಂದೆಯವರೇನು ಈ ಮಾಸಿಕ ಪತ್ರಿಕೆಗೆ ಚಂದಾದಾರರಾಗಿರಲಿಲ್ಲ. ಆದರೆ ನಾವು ಹೊಸ ಚಂದಮಾಮ ಬಂತೆಂದು ಗೊತ್ತಾದೊಡನೆ ಅದು ಹೇಗಾದರೂ ನಮ್ಮ ಕೈಗೆ ಓದಲು ಸಿಗುವಂತೆ ಶತಪ್ರಯತ್ನ ಮಾಡುತ್ತಿದ್ದೆವು. ಪುಟ್ಟಣ್ಣ ಮತ್ತು ನಾನು ಒಮ್ಮೆ ಕೆಳಕೊಡಿಗೆ  ಎಂಬಲ್ಲಿದ್ದ ನಮ್ಮ ಅಮ್ಮನ ಸೋದರಮಾವ ಶೇಷಗಿರಿ ಅಜ್ಜಯ್ಯನವರ ಮನೆಗೆ ಹೋಗಿದ್ದುದು ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ.

ಅವರ ಒಬ್ಬಳೇ ಮಗಳು ಲಕ್ಷ್ಮಿಗೆ ಮದುವೆಯಾಗಿ ಅವಳು ಪುರದಮನೆ ಎಂಬ ಗಂಡನ  ಮನೆಯಲ್ಲಿದ್ದಳು.  ಹಾಗಾಗಿ ಮನೆಯಲ್ಲಿ ಅಜ್ಜಯ್ಯ ಮತ್ತು ಅವರ ಪತ್ನಿ ಗೌರಮ್ಮ ಮಾತ್ರ ವಾಸಿಸುತ್ತಿದ್ದರು. ನಮ್ಮ ಜೊತೆಯಲ್ಲಿ ಆಡಲು ಯಾವುದೇ ಮಕ್ಕಳಿರದಿದ್ದರಿಂದ ನಮಗಾದ ಬೇಸರ ಅಷ್ಟಿಷ್ಟಲ್ಲ. ನಮ್ಮ ಗೋಳನ್ನು ನೋಡಲಾರದೇ ಅಜ್ಜಯ್ಯನವರು ನಮ್ಮ ಕೈಗೆ ಬೈಂಡ್ ಮಾಡಿದ ಎರಡು ಸಂಪುಟಗಳನ್ನು ಕೊಟ್ಟರು. ಅವನ್ನು ತೆರೆದು ನೋಡಿದಾಗ ನಮಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವು ಕ್ರಮಾನುಸಾರ ಬೈಂಡ್ ಮಾಡಿಸಿದ್ದ ಹಳೆಯ ಚಂದಮಾಮಗಳ ಸಂಪುಟಗಳಾಗಿದ್ದವು. ಆಮೇಲೆ ಅಲ್ಲಿ ನಮ್ಮ ಸಮಯ ಅಲ್ಲಿ ಹೇಗೆ ಕಳೆಯಿತೆಂದು ನಮಗೇ ಅರಿವಾಗಲಿಲ್ಲ. ಹಸಿದ ಸಾಕುಪ್ರಾಣಿಗಳು ಕೊಟ್ಟ ತಿಂಡಿಯನ್ನು ಗಬಗಬನೆ ತಿನ್ನುವಂತೆ ನಾವು ನಮ್ಮ ಒಲವಿನ ಚಂದಮಾಮಗಳ ಪುಟ ತಿರುಗಿಸುತ್ತಾ ಹೋದೆವು.

ಮತ್ತೆರಡು ದಿನಗಳ  ನಂತರ ನಮ್ಮ ಅಮ್ಮ ನಮ್ಮನ್ನು ಮನೆಗೆ ಕರೆದೊಯ್ಯಲು ಬಂದಾಗ ನಮಗೆ ಅವಳು ಯಾತಕ್ಕಾದರೂ ಬಂದಳೋ ಅನ್ನಿಸಿತು. ನಾವಿನ್ನೂ ಅವುಗಳಲ್ಲಿದ್ದ ಎಲ್ಲಾ ಕಥೆಗಳನ್ನು ಓದಲಾಗಿರಲಿಲ್ಲ. ಆದ್ದರಿಂದ ಚಂದಮಾಮಗಳ ಆ ಸಂಪುಟಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಶೇಷಗಿರಿ ಅಜ್ಜಯ್ಯನವರ ಅನುಮತಿ  ಕೇಳುವಂತೆ ನಾವು ಅಮ್ಮನನ್ನು ಪೀಡಿಸಿದೆವು. ಅವುಗಳಲ್ಲಿರುವ ಎಲ್ಲಾ ಕಥೆಗಳನ್ನು ಇನ್ನೂ ಒಂದೆರಡು ಬಾರಿ ಓದಿ ಹಿಂದಿರುಗಿಸುವುದು ನಮ್ಮ ಉದ್ದೇಶವಾಗಿತ್ತು. ಶೇಷಗಿರಿ ಅಜ್ಜಯ್ಯ ತೀರಾ ಗಂಭೀರ ಸ್ವಭಾವದ ವ್ಯಕ್ತಿಯಾಗಿದ್ದರು. ನಮ್ಮ ಅಮ್ಮನಿಗೆ ಕೂಡ ಅವರೊಡನೆ ಹೆಚ್ಚು ಮಾತಾಡುವಷ್ಟು ಸಲಿಗೆ ಇರಲಿಲ್ಲ. ಆದರೆ ನಮ್ಮ ಓದಿನ ಗೀಳನ್ನು ಬಲ್ಲ ಆಕೆಗೆ ನಮ್ಮನ್ನು ನಿರಾಶೆಗೊಳಿಸಲೂ ಇಷ್ಟವಿರಲಿಲ್ಲ. ಅಂತೂ ಇಂತೂ ಇದ್ದ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಅಜ್ಜಯ್ಯನವರನ್ನು ಕೇಳಿಯೇ ಬಿಟ್ಟಳು.

ನೋಡಿ. ಇದಪ್ಪ ಆಶ್ಚರ್ಯ! ಅಜ್ಜಯ್ಯನವರು ಪುಸ್ತಕಗಳನ್ನು ಕೊಡಲು ಒಪ್ಪಿಯೇ ಬಿಟ್ಟರು. ಆದರೆ ಒಂದು ನಿಬಂಧನೆಗೆ ಒಳಪಟ್ಟು. ಯಾವುದೇ ಕಾರಣಕ್ಕೂ ಪುಸ್ತಕಗಳು ಕೊಂಚವೂ ಹಾಳಾಗಿರಬಾರದು. ಅಮ್ಮ ನಮ್ಮ ಪರವಾಗಿ ಗ್ಯಾರಂಟಿ ನೀಡುತ್ತಿದ್ದಂತೇ ಅವು ನಮ್ಮ ಕೈಗೆ ಬಂದವು. ನಾವು ಅಪೂರ್ವ ನಿಧಿಯೊಂದನ್ನು ಸಾಗಿಸುವಂತೆ ಸಂಭ್ರಮದಿಂದ ಎರಡು ಸಂಪುಟಗಳನ್ನು ಕೈಯಲ್ಲಿ ಹಿಡಿದು ನಮ್ಮ ಮನೆಯತ್ತ ಹೊರಟೆವು. ಮೂರು ಮೈಲಿ ದೂರದಲ್ಲಿದ್ದ ನಮ್ಮ ಮನೆಗೆ ನಾವು ಗಾಳಿಯಲ್ಲಿ ತೇಲಿಹೋಗುತ್ತಿದ್ದಂತೇ ನಮಗನ್ನಿಸುತ್ತಿತ್ತು!

ಮತ್ತೆ ನಮಗೆ ಚಂದಮಾಮದ ನಿಧಿ ದೊರೆತದ್ದು ನಮ್ಮೂರಿನ ಅತ್ಯಂತ ಶ್ರೀಮಂತ ಜಮೀನ್ದಾರರಾದ ಬೆಳವಿನಕೊಡಿಗೆ ಗಣೇಶ ಹೆಬ್ಬಾರರ ಮನೆಯಲ್ಲಿ. ಅಲ್ಲಿ ಮೊದಲ ಬಾರಿಗೆ ನಾವು ಈ ನಿಧಿಯನ್ನು ಕಂಡು ಹಿಡಿದುದು ನನಗೆ ಈಗಲೂ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ:

ಅವರ ಮನೆಯಲ್ಲಿ ಹಬ್ಬ ಹರಿದಿನ ಅಂತ ಯಾವಾಗಲೂ ಏನಾದರೂ ಸಮಾರಂಭವಿದ್ದೇ ಇರುತ್ತಿತ್ತು. ಅವುಗಳಲ್ಲಿ ಮುಖ್ಯವಾದವು ನವರಾತ್ರಿ ಸಮಾರಾಧನೆ, ಅನಂತನ ವ್ರತ ಮತ್ತು ರಾಮ ನವಮಿ. ಆಗ ಇಡೀ ಊರಿಗೆ ಆಮಂತ್ರಣವಿರುತ್ತಿತ್ತು. ಆಹ್ವಾನಿತರು ಸುಮಾರು ೧೦ ಗಂಟೆಗೆ ಬರತೊಡಗಿದಂತೆ ಅವರಿಗೆ ಸಕ್ಕರೆ ಮತ್ತು ನಿಂಬೆ ಹಣ್ಣಿನ ಪಾನಕ ನೀಡಲಾಗುತ್ತಿತ್ತು.  ಅಲ್ಲಿಂದ ಸುಮಾರು ಮೂರು ಗಂಟೆಗಳ ಕಾಲ ಅತಿಥಿಗಳಿಗೆ ಬಿಡುವಿನ ಸಮಯ. ಆಗ ಹಿರಿಯರಾದವರ ಒಂದು ಗುಂಪು ವೃತ್ತಾಕಾರದಲ್ಲಿ ಕುಳಿತು ಇಸ್ಪೇಟಿನ ಆಟ ಆಡುವುದು ವಾಡಿಕೆ. ಕೇವಲ ಇಪ್ಪತ್ತೆಂಟರ ಆಟ. ದುಡ್ಡುಗಿಡ್ಡು ಪಣಕ್ಕಿಡುವಂತಿರಲಿಲ್ಲ. ಹಾಗಿದ್ದರೆ ಮಾತ್ರ ಅನುಮತಿ. ಮಕ್ಕಳಾದ ನಾವು ಏನಾದರೂ ಆಟವಾಡುತ್ತಾ  ಅಥವಾ ಎರಡು ಗುಂಪು ಮಾಡಿಕೊಂಡು ಪರಸ್ಪರ ಕಿತ್ತಾಡುತ್ತಾ ಸಮಯ ಕಳೆಯುತ್ತಿದ್ದೆವು.

ಅಂತಹುದೇ ಒಂದು ಸನ್ನಿವೇಶ. ದೊಡ್ಡವರಲ್ಲಿ ಕೆಲವರು ಇಸ್ಪೇಟಿನ ಆಟವಾಡದವರೂ ಇದ್ದರು. ಒಂದು ಸಂದರ್ಭದಲ್ಲಿ ಅಂತಹವರೆಲ್ಲಾ ಪಂಚೆ ಎತ್ತಿಕಟ್ಟಿಕೊಂಡು ಉಪ್ಪರಿಗೆ ಮೆಟ್ಟಲು ಹತ್ತುತ್ತಿರುವುದು ನಮಗೆ ಕಾಣಿಸಿತು. ಆ ಕಾಲದ ನಮ್ಮೂರಿನಲ್ಲಿ ಉಪ್ಪರಿಗೆಯ ವೈಭವ ಇರುತ್ತಿದ್ದುದು ಕೇವಲ ಶ್ರೀಮಂತರ ಮನೆಯಲ್ಲಿ ಮಾತ್ರ. ಸಾಮಾನ್ಯವಾಗಿ ನಮಗೆ ಅಂತಹ ಉಪ್ಪರಿಗೆಗೆ ಪ್ರವೇಶವಿರುತ್ತಿರಲಿಲ್ಲ. ಹಾಗಾಗಿ ನಮ್ಮ ಮಟ್ಟಿಗೆ ಅದೊಂದು ನಿಗೂಢ ಸ್ಥಳ. ಅಸಲು ಸಂಗತಿ ಏನೆಂದರೆ ಶ್ರೀಮಂತರ ಮನೆಯ ಉಪ್ಪರಿಗೆಯಲ್ಲಿ ಹಣದ ಕೊಪ್ಪರಿಗೆ ಅಡಗಿಸಿಟ್ಟಿರುತ್ತಾರೆಂದು ನಮ್ಮ ಬಾಲ್ಯ ಕಾಲದ ನಂಬಿಕೆ!

ಕೆಲವರು ಉಪ್ಪರಿಗೆಗೆ ಹೋಗುತ್ತಿರುವುದನ್ನು ನೋಡಿ ನನ್ನ ಅಣ್ಣ ಮತ್ತು ನಾನು ಕುತೂಹಲದಿಂದ ಅವರನ್ನು ಹಿಂಬಾಲಿಸಿದೆವು. ಅಲ್ಲಿ ಕೊಪ್ಪರಿಗೆ ಇದ್ದದ್ದಂತೂ ನಿಜ. ಆದರೆ ಹಣದ ಕೊಪ್ಪರಿಗೆಯಲ್ಲ. ಇತ್ತೀಚಿನ ಹೊಸ ಸಂಚಿಕೆಯ ಜೊತೆಗೆ ನಾಲ್ಕೈದು ವರ್ಷಗಳ ಹಳೆಯ ಚಂದಮಾಮಗಳ ಕೊಪ್ಪರಿಗೆ. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಲ್ಲಿ ಸೇರಿದವರೆಲ್ಲಾ ಒಂದೊಂದು ಸಂಚಿಕೆಯನ್ನು ಕೈಯಲ್ಲಿ ಹಿಡಿದು ಮಾತಿಲ್ಲದೇ ಓದತೊಡಗಿದರು. ನಾವೂ ಕೂಡ ಚಂದಮಾಮ ಓದುಗರ ಬಳಗ ಸೇರಿದೆವು. ಮತ್ತೆಂದೂ ನಾವು ಹಿಂತಿರುಗಿ ನೋಡಲೇ ಇಲ್ಲ!

ಅಂದಿನಿಂದ ನಾವು ಬೆಳವಿನಕೊಡಿಗೆಗೆ ಹೋದಾಗಲೆಲ್ಲಾ ಸಕ್ಕರೆ ನಿಂಬೆ ಪಾನಕ ಕುಡಿದ ನಂತರ ಧಾವಿಸುತ್ತಿದ್ದುದು ಸೀದಾ ಉಪ್ಪರಿಗೆಗೇ. ಒಂದಾದ ಮೇಲೆ ಒಂದು ಸಂಚಿಕೆ ತಿರುವಿ ಹಾಕುತ್ತಿದ್ದರೆ ಎಂತಹಾ ರೋಮಾಂಚನ! ಸಮಯ ಹೋದದ್ದೇ ಅರಿವಾಗುತ್ತಿರಲಿಲ್ಲ. ನಂತರದ ಭರ್ಜರಿ ಸಂತರ್ಪಣೆ ಊಟಕ್ಕೆ ಕರೆ ಬಂದರೆ ಅದು ಕೂಡ ನಮಗೆ ಕರ್ಕಶವಾಗಿ ಕೇಳುತ್ತಿತ್ತು ಎಂದರೆ ನಮಗಿದ್ದ ಚಂದಮಾಮದ ಆಕರ್ಷಣೆಯನ್ನು ನೀವೇ ಊಹಿಸಿಕೊಳ್ಳಿ!

ಆ ಕಾಲದ ಚಂದಮಾಮ ನಿಜಕ್ಕೂ ಒಂದು ಪರಿಪೂರ್ಣ ಮಾಸಪತ್ರಿಕೆಯಾಗಿತ್ತು. ಪತ್ರಿಕೆಯ ಪ್ರತಿ ಪುಟವನ್ನೂ, ಪ್ರತಿ ಸಾಲನ್ನೂ ನಾವು ಆಸ್ವಾದಿಸುತ್ತಿದ್ದೆವು - ವಿಖ್ಯಾತ ಚಿತ್ರ ಕಲಾವಿದ ಎಂ.ಟಿ.ವಿ.ಆಚಾರ್ಯ ಅವರ ಮಹಾಭಾರತದ ಆಖ್ಯಾಯಿಕೆಗಳ ವರ್ಣರಂಜಿತ ಮುಖಪುಟದಿಂದ ಆರಂಭಿಸಿ ರಕ್ಷಾಪತ್ರದ ಕೊನೆಯ ಪುಟದ ತನಕ.  ಒಳಪುಟದ ಜಾಹೀರಾತುಗಳೂ ಕೂಡ ತಮ್ಮದೇ ಆದ ಆಕರ್ಷಣೆಯಿಂದ ನಮ್ಮನ್ನು ಮೋಡಿ ಮಾಡಿಬಿಡುತ್ತಿದ್ದವು. ನಮ್ಮ ಬಾಲ್ಯದ ನೆನಪುಗಳು ಚಿರಸ್ಮರಣೀಯವಾಗಿರುವಂತೆ ಮಾಡಿದ ನಾಗಿರೆಡ್ಡಿ ಮತ್ತು ಚಕ್ರಪಾಣಿದ್ವಯರಿಗೆ ನಮೋ ನಮಃ!  ನಿಜ ಹೇಳಬೇಕೆಂದರೆ ನಮ್ಮ ಜೀವನದ ಪ್ರಮುಖ ಗುರಿ ಮುಂದೊಂದು ದಿನ ಮದರಾಸಿನ ವಡಪಳನಿಯ ಚಂದಮಾಮ ಕಾರ್ಯಾಲಯಕ್ಕೆ ಭೇಟಿಕೊಟ್ಟು ಕೈತಪ್ಪಿಹೋದ ಎಲ್ಲಾ ಹಳೆಯ ಸಂಚಿಕೆಗಳನ್ನು ಓದುವುದೇ ಆಗಿತ್ತು!

ಮಕ್ಕಳನ್ನು ರಂಜಿಸುವುದಕ್ಕೆ, ಅವರ ಕಲ್ಪನೆಯ ಗರಿಗೆದರಿಸುವುದಕ್ಕೆ ಬೇಕಾದ ಸಕಲ ಸಂಪತ್ತುಗಳೂ ಚಂದಮಾಮದಲ್ಲಿದ್ದವು. ಸಾಹಸ ಕಥೆಗಳು, ಪುರಾಣದ ಆಖ್ಯಾಯಿಕೆಗಳು,ಅರೇಬಿಯನ್ ನೈಟ್ಸ್, ಗ್ರೀಕ್ ಮೈತಾಲಜಿಗಳನ್ನೊಳಗೊಂಡಂತೆ ನೀತಿಬೋಧಕ, ರಹಸ್ಯಮಯ, ಸಾಹಸಪ್ರಧಾನ ಬರಹಗಳು, ಶೇಕ್ಸ್ ಪೀಯರ್ನ ಬಹುತೇಕ ನಾಟಕಗಳ ಸರಳ ಗದ್ಯರೂಪಾಂತರ, ಪಾತ್ರಗಳ ಭಾರತೀಯ  ಹೆಸರಿನೊಂದಿಗೆ ಪ್ರಕಟವಾಗುತ್ತಿದ್ದವು.

ಒಂದು ದೊಡ್ಡ ಧಾರಾವಾಹಿ ಎಂಟು ತ್ರಿವರ್ಣ ರಂಜಿತ ಪುಟಗಳಲ್ಲಿ ಯಾವಾಗಲೂ ಇರುತ್ತಿತ್ತು.  ಇದು ಸಾಧಾರಣವಾಗಿ ಹದಿನೆಂಟು ಸಂಚಿಕೆಗಳಲ್ಲಿ ಕ್ರಮವಾಗಿ ಪ್ರಕಟವಾಗುತ್ತಿತ್ತು. ಉಳಿದ ಧಾರಾವಾಹಿಗಳು ಎರಡರಿಂದ ಒಂಬತ್ತು ಸಂಚಿಕೆಗಳವರೆಗೆ ಮುಂದುವರಿಯುತ್ತಿದ್ದವು. ಅವುಗಳೆಂದರೆ ನಾವಿಕ ಸಿಂದಾಬಾದ್, ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು, ಅಲ್ಲಾದೀನನ ಅದ್ಭುತ ದೀಪ, ಭುವನ ಸುಂದರಿ, ರೂಪಧರನ  ಯಾತ್ರೆಗಳು, ಇತ್ಯಾದಿ.  ಕೊನೆಯ ಎರಡು ಹೋಮರ್ನ ಗ್ರೀಕ್  ಮಹಾಕಾವ್ಯ ಇಲಿಯಡ್ ಮತ್ತು ಒಡಿಸ್ಸಿಯನ್ನು ಆಧಾರಿಸಿ, ಪಾತ್ರಗಳಿಗೆ ಭಾರತೀಯ ಹೆಸರನ್ನಿಟ್ಟು ನಿರೂಪಿಸಿದ ಅದ್ಭುತ ಕಥಾನಕಗಳು.

ಆಶ್ಚರ್ಯವೆಂದರೆ ಈ ಧಾರಾವಾಹಿಗಳಿಗೆ ಲೇಖಕರ ಹೆಸರುಗಳೇ ಇರುತ್ತಿರಲಿಲ್ಲ. ಕೇವಲ "ಚಂದಮಾಮ" ಎಂದು ಮಾತ್ರ ಸೂಚಿಸಲಾಗುತ್ತಿತ್ತು. ಭುವನಸುಂದರಿ ಮತ್ತು ರೂಪಧರನ ಯಾತ್ರೆಗಳಿಗೆ "ಒಂದು ಗ್ರೀಕ್ ಪುರಾಣ ಕತೆಯ ಆಧಾರದಿಂದ" ಎಂದಷ್ಟೇ ಮುದ್ರಿಸಲಾಗಿರುತ್ತಿತ್ತು. ಚಂದಮಾಮದ ಆ ಪ್ರತಿಭಾನ್ವಿತ ಅಜ್ಞಾತ ಲೇಖಕರು ಅಲ್ಲಿನ ಕಥೆಗಳ ಪಾತ್ರಗಳಷ್ಟೇ ನಿಗೂಢ ವ್ಯಕ್ತಿಗಳಾಗಿರುತ್ತಿದ್ದರು!

ಪ್ರತಿಯೊಂದು ಕಥೆ, ಕವನಗಳಿಗೂ ಅದರ ಪರಿಣಾಮವನ್ನು ದ್ವಿಗುಣಗೊಳಿಸಲು ಪೂರಕವಾದ ನಯನಮನೋಹರ ಚಿತ್ರಗಳಿರುತ್ತಿದ್ದವು. ಮುಖಪುಟದಲ್ಲಿ ಎಂ.ಟಿ.ವಿ.ಆಚಾರ್ಯ ಅವರ ಮಹಾಭಾರತದ ಚಿತ್ರಗಳದ್ದೇ ಪ್ರಾಬಲ್ಯ. ಪ್ರಮುಖ ಧಾರಾವಾಹಿಯ ಕಲಾವಿದರ ಹೆಸರು "ಚಿತ್ರ" ಎಂದಿರುತ್ತಿತ್ತು. ಅವರ ಮೂಲ ಹೆಸರು ಕೆ.ವಿ.ರಾಘವನ್ ಎಂದು ಆಮೇಲಷ್ಟೇ ನಮಗೆ ಅರಿವಾಗಿದ್ದು.

ಸಾಮಾನ್ಯವಾಗಿ ಉಳಿದ ಎಲ್ಲಾ ಕಥೆಗಳಿಗೆ ಜೀವ ತುಂಬುತ್ತಿದ್ದ ಶಂಕರ್ ಅವರ ರಚನೆಗಳೇ ನಿಜಕ್ಕೂ ಅತುತ್ತಮ ಚಿತ್ರಗಳು. ಆ ಚಿತ್ರಗಳು ಅದೆಷ್ಟು ಸೌಂದರ್ಯಪೂರ್ಣವಾಗಿ, ಚೇತೋಹಾರಿಯಾಗಿ  ಇರುತ್ತಿದ್ದವೆಂದರೆ ಶಂಕರ್ ಅವರು ಬಿಡಿಸುತ್ತಿದ್ದ ಎಷ್ಟೋ ಮೋಹಕ ಯುವತಿಯರ ಪ್ರೇಮಪಾಶದಲ್ಲಿ, ಕಥಾನಾಯಕರಿಗಿಂತ ಹೆಚ್ಚಾಗಿ ನಾವೇ ಸಿಲುಕಿಬಿಡುತ್ತಿದ್ದೆವೆಂದು ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ!

----ಮುಂದುವರಿಯುವುದು ---

ಎ ವಿ ಕೃಷ್ಣಮೂರ್ತಿ


Tuesday, August 11, 2020

ಬಾಲ್ಯ ಕಾಲದ ನೆನಪುಗಳು – ೧೦೮

 ನಾನು ಇನ್ಸ್ಟಿಟ್ಯೂಟಿನಲ್ಲಿ ಇರುವಾಗಲೇ ಭಾರತದ ರಾಜಕೀಯದ ಒಂದು ವಿಶೇಷ ಬೆಳವಣಿಗೆ  ಬೆಂಗಳೂರಿನಲ್ಲೇ ನಡೆಯಿತು. ಇಂಡಿಯನ್ ನ್ಯಾಷನಲ್  ಕಾಂಗೆಸ್ಸಿನ ಚಾರಿತ್ರಿಕ ಅಧಿವೇಶನ ಬೆಂಗಳೂರಿನ ಲಾಲ್ ಭಾಗ್ ಗ್ಲಾಸ್ ಹೌಸ್ ನಲ್ಲಿ ೧೯೬೯ನೇ ಇಸವಿಯಲ್ಲಿ ನಡೆದು ನಿಜಲಿಂಗಪ್ಪನವರ ನೇತೃತ್ವದ್ಲಲಿದ್ದ ಅದರ ಹಳೆಯ ಕಾಂಗೆಸ್ಸಿನ ಆಡಳಿತವರ್ಗವನ್ನು ಅಧಿಕಾರದಿಂದ ತೆಗೆದೆಸೆಯಿತು. ಸಿಂಡಿಕೇಟ್ ಎಂದು ಕರೆಯಲಾಗುತ್ತಿದ್ದ ಆ ಹಳೆಯ ಆಡಳಿತವರ್ಗ ಮುಂಬರಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ನೀಲಂ ಸಂಜೀವ ರೆಡ್ಡಿಯವರನ್ನು ಕಾಂಗ್ರೆಸ್ಸಿನ ಅಧಿಕೃತ ಅಧಿಕೃತ ಅಭ್ಯರ್ಥಿಯಾಗಿ ಆರಿಸಿತ್ತು. ಆದರೆ ಇಂದಿರಾ ಗಾಂಧಿ ನೇತೃತ್ವದ ಸಿಡಿದು ಹೋದ ಕಾಂಗೆಸ್ಸಿನ ಗುಂಪು ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ತನ್ನಕಡೆಯಿಂದ ಅಧಿಕೃತ ಅಭ್ಯರ್ಥಿಯಾಗಿ ಆರಿಸಿತು. ಇನ್ಸ್ಟಿಟ್ಯೂಟಿನ ವಿದ್ಯಾರ್ಥಿಗಳು ಆ ರಾಜಕೀಯ ಬೆಳವಣಿಗೆಯನ್ನು ತುಂಬಾ ಆಸಕ್ತಿಯಿಂದ ಗಮನಿಸುತ್ತಿದ್ದರು. ಅಂತ್ಯದಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್  ಅವರು ರಾಷ್ಟ್ರಪತಿ ಚುನಾವಣೆಯಲ್ಲಿ  ಗೆಲ್ಲುವುದರೊಡನೆ ಇಂದಿರಾ ಗಾಂಧಿ ನೇತೃತ್ವದ ಗುಂಪಿನ ಕೈಮೇಲಾಯಿತು. ಹೀಗೆ ಭಾರತದ ರಾಜಕೀಯ ಒಂದು ದೊಡ್ಡ ತಿರುವನ್ನೇ ಕಂಡಿತು.

ಕೈ ಎತ್ತಿದ ಎನ್.ಆರ್.ಭಟ್ 

ಒಂದು ದಿನ ಇನ್ಸ್ಟಿಟ್ಯೂಟಿನ ಪೋಸ್ಟ್ ಆಫೀಸಿನಲ್ಲಿ ನನಗೊಂದು ರಿಜಿಸ್ಟರ್ಡ್ ಕವರ್ ಬಂತೆಂದು ತಿಳಿದು ನಾನು ಹೋಗಿ ಅದನ್ನು ತೆಗೆದುಕೊಂಡೆ. ಅದು ನನ್ನ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾದ ಎನ್.ಆರ್.ಭಟ್  ಅವರಿಂದ ಬಂದ ಕವರ್ ಆಗಿತ್ತು. ಅದರೊಳಗೆ ಒಂದು ಪತ್ರ ಮತ್ತು ನನ್ನ ಹೆಸರಿಗೆ ೧೦೦ ರೂಪಾಯಿಗಳ ಒಂದು ಬ್ಯಾಂಕ್ ಡ್ರಾಫ್ಟ್ ಇತ್ತು. ನನಗೆ ಒಮ್ಮೆಗೇ ಸಂತೋಷವಾದರೂ ಅದು ಕೇವಲ  ಕ್ಷಣಿಕವಾಗಿತ್ತು. ಅದರಲ್ಲಿ ಭಟ್ ಅವರು ನನಗೆ ಹಣ ಅಷ್ಟೊಂದು ಅರ್ಜೆಂಟಾಗಿ ಬೇಕೆಂದು ಗೊತ್ತಾಗದುದರಿಂದ ನನ್ನ ಮೊದಲ ಪತ್ರಕ್ಕೆ ಉತ್ತರ ಬರೆದಿರಲಿಲ್ಲವೆಂದೂ ಮತ್ತೂ ನಾನು ನೌಕರಿಗೆ ಸೇರಿದಮೇಲೆ ಅವರು ಕಳಿಸಿದ ೧೦೦ ರೂಪಾಯಿಗಳನ್ನು ಹಿಂದಿರುಗಿಸಬಹುದೆಂದೂ ಬರೆದಿದ್ದರು.  ಒಟ್ಟಿನಲ್ಲಿ ಅದರ ಅರ್ಥ ಇಷ್ಟೇ ಆಗಿತ್ತು. ಏನೆಂದರೆ ನಾನು ಇನ್ನು ಮುಂದೆ ಅವರಿಂದ ಹಣ ಸಹಾಯವನ್ನು ನಿರೀಕ್ಷಿಸಬಾರದೆಂದು. ನಾನು ಪ್ರತಿ ತಿಂಗಳೂ ಅವರಿಂದ ಸ್ವಲ್ಪ ಹಣದ ಸಹಾಯವನ್ನು ನಿರೀಕ್ಷಿಸಿದ್ದು ಎಂತಹ ಮೂರ್ಖತನವಾಗಿತ್ತೆಂದು ನನಗೆ ಅರಿವಾಯಿತು. ಒಮ್ಮೆ ನನಗೆ ಆ ಡ್ರಾಫ್ಟನ್ನು ಕೂಡಲೇ ಅವರಿಗೆ ಹಿಂತಿರುಗಿಸಬೇಕೆಂದು ಅನಿಸಿತು, ಆದರೆ ನಾನಿದ್ದ ಪರಿಸ್ಥಿತಿಯಲ್ಲಿ ಅದು ಸರಿಯೆನಿಸಲಿಲ್ಲ. ಒಟ್ಟಿನಲ್ಲಿ ನಾನು ನಿರೀಕ್ಷಿಸಿದ ಮುಖ್ಯ ಹಣಕಾಸಿನ ಮೂಲವೊಂದು ಅದೃಶ್ಯವಾಗಿಬಿಟ್ಟಿತ್ತು.

ಮಣಿಪಾಲ್ ಅಕಾಡೆಮಿಯ ಪತ್ರದಿಂದ ಆಘಾತ

ನನ್ನ ಸಂಕಟಗಳು ಅಲ್ಲಿಗೇ  ಮುಗಿದಿರಲಿಲ್ಲ. ಮಣಿಪಾಲ್ ಅಕಾಡೆಮಿಯಿಂದ ಬಂದ ಪತ್ರವೊಂದು ನನ್ನ ಇನ್ನೊಂದು ಹಣಕಾಸಿನ ಮೂಲವನ್ನು ಇಲ್ಲವಾಗಿಸಿದ್ದು ಮಾತ್ರವಲ್ಲ, ಅದು ನನ್ನ ನಿದ್ದೆಯನ್ನೇ ಕೆಡಿಸಿಬಿಟ್ಟಿತು.  ಅದರಲ್ಲಿ ನಾನು ಅಕಾಡೆಮಿಯ ಯಾವುದೇ ವಿದ್ಯಾಸಂಸ್ಥೆಗಳಲ್ಲಿ ಓದುತ್ತಿಲ್ಲವಾದ್ದರಿಂದ ಮಾಮೂಲಿನಂತೆ ಫೀಸ್ ಹಣವನ್ನು ಕಳಿಸಲಾಗುವುದಿಲ್ಲವೆಂದು ಬರೆಯಲಾಗಿತ್ತು. ಅಷ್ಟು ಮಾತ್ರವಲ್ಲ. ಅದರಲ್ಲಿ ನನಗೊಂದು ಆಘಾತಗೊಳ್ಳುವ ವಿಷಯವಿತ್ತು. ಅಕಾಡೆಮಿಯು ತಾನು ಅದುವರೆಗೆ ನನಗೆ ಮಾಡಿದ ಧನ ಸಹಾಯವನ್ನು ಕೂಡಲೇ ಬಡ್ಡಿ ಸಮೇತ ಹಿಂದಿರುಗಿಸುವಂತೆ ಸೂಚನೆ ನೀಡಿತ್ತು!

ನನ್ನ ಓದುಗರಿಗೆ ಈ ಹಿಂದೆ ನಮ್ಮ ಕಾಲೇಜಿನ ಪ್ರಿನ್ಸಿಪಾಲರು ನನಗೆ ನೀಡಿದ್ದ ಭರವಸೆಯನ್ನು ಇಲ್ಲಿ ನೆನಪಿಸುತ್ತೇನೆ. ನಾನು ಫೀಸ್ ಹಣಕ್ಕೆ ಪ್ರಾಮಿಸರಿ ನೋಟಿಗೆ ಸಹಿ ಹಾಕಲು ಹಿಂದೆ ಮುಂದೆ ನೋಡಿದಾಗ ಅವರು ಅದು ಕೇವಲ ಹಣಕ್ಕೆ ರಶೀದಿಯೆಂದೂ ಮತ್ತು ನಾನು ಎಂದಿಗೂ ಆ ಹಣವನ್ನು ಅಕಾಡೆಮಿಗೆ ಹಿಂದಿರುಗಿಸುವ ಪ್ರಶ್ನೆಯೇ ಬರುವುದಿಲ್ಲವೆಂದು ಹೇಳಿದ್ದರು. ಆದರೆ ಈಗ ಅಕಾಡೆಮಿಯು ನನ್ನಿಂದ ಬಡ್ಡಿ ಸಮೇತ ಹಣವನ್ನು ವಾಪಾಸ್ ಮಾಡುವಂತೆ ನೋಟೀಸ್ ಕೊಟ್ಟಿತ್ತು. ಆದರೆ ಆ ಮಹನೀಯರು ಈಗ ನನ್ನ ಪರಿಸ್ಥಿತಿಯ ಯಾವುದೇ ಅರಿವಿಲ್ಲದೇ ಮಾನಸ ಗಂಗೋತ್ರಿಯಲ್ಲಿ ಹಿಂದೂ ತತ್ವಶಾಸ್ತ್ರದ ಪಾಠ ಹೇಳುವುದರಲ್ಲಿ ನಿರತರಾಗಿದ್ದರು. ಅವರ ಭರವಸೆ ಎಷ್ಟು ಹುಸಿಯಾಗಿತ್ತೆಂದು ಅವರಿಗೆ ಅರಿವಿರಲಿಲ್ಲ. ನಾನು ಅಕಾಡೆಮಿಗೆ ಪ್ರಿನ್ಸಿಪಾಲರು ನನಗೆ ನೀಡಿದ್ದ ಭರವಸೆಯ ಬಗ್ಗೆ ತಿಳಿಸಿ ಒಂದು ಪತ್ರ ಬರೆದೆ. ಹಾಗೆಯೇ ಅಕಾಡೆಮಿಯು ಒಬ್ಬ ವಿದ್ಯಾರ್ಥಿಯು ತನ್ನ ಓದಿನ ನಡುವೆ ಒಂದು ಹಣಸಹಾಯವನ್ನು ಬಡ್ಡಿ ಸಮೇತ ಹೇಗೆ ತೀರಿಸಲು ಸಾಧ್ಯವೆಂದು ಅದರಲ್ಲಿ ಪ್ರಶ್ನಿಸಿದ್ದೆ.

ಪಾರ್ಟ್-ಟೈಮ್ ನೌಕರಿ ಅಸಾಧ್ಯ

ಈ ನಡುವೆ ಇನ್ನೊಂದು ತಿಂಗಳು ಕಳೆದು ನಾನು ಹಾಸ್ಟೆಲಿನ ಫೀಸನ್ನು ಕಟ್ಟುವುದಕ್ಕಾಗಿ ಬ್ಯಾಂಕಿನಿಂದ ಹಣ ತೆಗೆಯಬೇಕಾಯಿತು. ಬ್ಯಾಂಕಿನಲ್ಲಿದ್ದ ನನ್ನ ಹಣ ಕರಗುತ್ತಿದ್ದಂತೆಯೇ ನನ್ನ ಪರಿಸ್ಥಿತಿ ಒಂದು ನಿರ್ಣಾಯಕ ಘಟ್ಟವನ್ನು ತಲುಪುತ್ತಿದೆಯೆಂದು ನನಗನಿಸತೊಡಗಿತು. ನಾನು ನನ್ನ ಸಮಸ್ಯೆಯನ್ನು ಪ್ರೊಫೆಸರ್ ಭಟ್ ಅವರೊಡನೆ ಹೇಳಿಕೊಳ್ಳುವುದು ಒಳ್ಳೆಯದೆಂದು ಅವರ ಬಳಿಗೆ ಹೋದೆ. ಅವರು ತುಂಬಾ ಸಹಾನುಭೂತಿಯಿಂದ ನನ್ನೊಡನೆ ಮಾತನಾಡಿ ನಾನು ಯಾವುದಾದರೂ ಪಾರ್ಟ್-ಟೈಮ್ ನೌಕರಿ ಮಾಡಲು ತಯಾರಿದ್ದೇನೆಯೇ ಎಂದು ಕೇಳಿದರು. ನಾನು ಕೂಡಲೇ ಒಪ್ಪಿಗೆ ನೀಡಿದೆ. ಅವರು ನನ್ನನ್ನು ಅವರಿಗೆ ಪರಿಚಯವಿದ್ದ ಮಲ್ಲೇಶ್ವರಂನಲ್ಲಿದ್ದ ಒಂದು ಟುಟೋರಿಯಲ್ ಕಾಲೇಜಿನ ಪ್ರಿನ್ಸಿಪಾಲರನ್ನು ಭೇಟಿ ಮಾಡಲು ಕಳಿಸಿದರು. ನಾನು ತುಂಬಾ ಉತ್ಸಾಹದಿಂದ ಅವರ ಬಳಿ ಹೋದೆ. ಅವರೇನೋ ನನಗೆ ಅವಕಾಶಕೊಡಲು ತಯಾರಿದ್ದರು.  ಆದರೆ ಅದು ಸಾಧ್ಯವಿರಲಿಲ್ಲ. ಏಕೆಂದರೆ ಆ ಟುಟೋರಿಯಲ್ ಕಾಲೇಜು ಟ್ಯೂಷನ್ ನೀಡುತ್ತಿದ್ದ ಯಾವುದೇ ಸಬ್ಜೆಕ್ಟುಗಳನ್ನು ನಾನು ಅಲ್ಲಿಯವರೆಗೆ ಎಲ್ಲಿಯೂ ಕಲಿತಿರಲಿಲ್ಲ. ನಾನು ಸಂಪೂರ್ಣ ನಿರಾಶೆಯಿಂದ ಹಿಂತಿರುಗಬೇಕಾಯಿತು.

ಊರು ಸೇರುವ ಅಂತಿಮ ತೀರ್ಮಾನ

ಇನ್ಸ್ಟಿಟ್ಯೂಟಿನಲ್ಲಿ ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಮಯ ಬಂದುಬಿಟ್ಟಿದೆಯೆಂದು ನನಗನಿಸತೊಡಗಿತು. ಆ ವಾರದ ಕೊನೆಯಲ್ಲಿ ಪುಟ್ಟಣ್ಣ ನನ್ನನ್ನು ನೋಡಲು ಮಾಮೂಲಿನಂತೆ ಹಾಸ್ಟೆಲಿಗೆ  ಬಂದ. ಅವನ ನೌಕರಿ ಹುಡುಕಾಟದಲ್ಲಿ ಯಾವುದೇ ಪ್ರಗತಿ ಕಾಣುತ್ತಿರಲಿಲ್ಲ. ಹಾಗಾಗಿ ಅವನ ದೈನಂದಿನ ಖರ್ಚುಗಳಿಗೆ ವ್ಯವಸ್ಥೆ ಮಾಡುವುದು ಅವನಿಗೆ ಕಷ್ಟಕರವಾಗಿತ್ತು. ನನ್ನ ಬ್ಯಾಂಕ್ ಖಾತೆಯಲ್ಲಿದ್ದ ಹಣ ಇನ್ನೊಂದು ತಿಂಗಳ ಹಾಸ್ಟೆಲ್ ಫೀಗೆ ಸಾಕಾಗುವಷ್ಟು ಮಾತ್ರ ಇತ್ತು. ನಾವು ತುಂಬಾ ಚರ್ಚೆ ಮಾಡಿ ಸಾದ್ಯವಿದ್ದ  ಕೇವಲ ಒಂದೇ ಒಂದು ತೀರ್ಮಾನಕ್ಕೆ ಬಂದೆವು. ಅದೇನೆಂದರೆ ಬೆಂಗಳೂರಿನಿಂದ ಗಂಟು ಮೂಟೆ ಕಟ್ಟಿ ಊರು ಸೇರುವುದು. ಏಕೆಂದರೆ ನಾವು ಊರಿಗೆ ಹಿಂತಿರುಗಲು ಬಸ್ ಚಾರ್ಜ್ ಹಣ ಕೂಡ ಇಲ್ಲವಾಗುವ ಮೊದಲೇ ಹಾಗೆ ಮಾಡಲೇ ಬೇಕಾಗಿತ್ತು.

ಇಂದು ನನ್ನ ಬಾಲ್ಯ ಕಾಲದ ನೆನಪುಗಳ ಕೊನೆಯ ಅಧ್ಯಾಯವನ್ನು ಬರೆಯುತ್ತಿರುವಾಗ ನನಗೆ ನನ್ನ ವಿದ್ಯಾರ್ಥಿ ಜೀವನದ ಆ ನೋವಿನ ದಿನಗಳ ನೆನಪು ಮರುಕಳಿಸಿಬರುತ್ತಿದೆ. ಹೀಗೆ ನನ್ನ ವಿದ್ಯಾರ್ಥಿ ಜೀವನ ಒಂದು ದುರಂತದಲ್ಲಿ  ಕೊನೆಗಾಣುವುದೆಂದು  ನಾನು ಕನಸಿನಲ್ಲೂ ಎಣಿಸಿರಲಿಲ್ಲ. ವಿಶ್ವವಿಖ್ಯಾತವಾದ ಇನ್ಸ್ಟಿಟ್ಯೂಟಿನಲ್ಲಿ ವಿದ್ಯಾಭ್ಯಾಸ ಮಾಡಬೇಕೆಂಬ ನನ್ನ ಅಭಿಲಾಷೆ ಹೀಗೆ ಮಣ್ಣುಮುಕ್ಕಿಹೋಗಿತ್ತು. ನನ್ನ ಮೆಂಟರ್ ಆದ ಕೃಷ್ಣಪ್ಪಯ್ಯನವರು ನಾನು ಮೆಟರ್ಜಿಯಲ್ಲಿ ಇಂಜಿನಿಯರಿಂಗ್ ಡಿಗ್ರಿ ಪಡೆದು ಅಮೇರಿಕಾ ಸೇರುವೆನೆಂದು ಎಣಿಸಿದ್ದರು. ಆದರೆ ನಾನೀಗ  ಕೇವಲ ನಾಲ್ಕು ತಿಂಗಳಿಗೇ ಇನ್ಸ್ಟಿಟ್ಯೂಟಿನ ವಿದ್ಯಾಭ್ಯಾಸಕ್ಕೆ ಕೈಮುಗಿದು ವಾಪಾಸ್ ಊರು ಸೇರುವುದರಲ್ಲಿದ್ದೆ!

ನನ್ನ ಕ್ಲಾಸ್ ಮೇಟ್ ಗಳು ಯಾರಿಗೂ ತಿಳಿಯದಂತೆ ಸದ್ದಿಲ್ಲದೇ ಇನ್ಸ್ಟಿಟ್ಯೂಟನ್ನು ಬಿಟ್ಟು ಹೋಗಲು ನಾನು ತಯಾರಿ ಮಾಡತೊಡಗಿದೆ. ನಾನು ಒಂದು ತಿಂಗಳ ಹಾಸ್ಟೆಲ್ ಫೀಸನ್ನು ಅಡ್ವಾನ್ಸ್ ಡೆಪಾಸಿಟ್ ಮಾಡಿದ್ದರಿಂದ ಆ ತಿಂಗಳ ಫೀಸ್ ಕಟ್ಟಬೇಕಾಗಿರಲಿಲ್ಲ. ನಾನು ಲೈಬ್ರರಿಯಿಂದ ತೆಗೆದುಕೊಂಡಿದ್ದ ಪುಸ್ತಕಗಳನ್ನೆಲ್ಲಾ ವಾಪಾಸ್ ಮಾಡಿ, ಯಾವುದೋ ನೆವ ಹೇಳಿ ನನ್ನ ಒರಿಜಿನಲ್ ಸರ್ಟಿಫಿಕೇಟ್ ಗಳನ್ನೆಲ್ಲಾ ಇನ್ಸ್ಟಿಟ್ಯೂಟಿನಿಂದ ವಾಪಾಸ್ ಪಡೆದುಬಿಟ್ಟೆ. ಹಾಗೆಯೇ ನನ್ನ ರೂಮ್ ಮೇಟಿಗೆ ಗೊತ್ತಾಗದಂತೆ ನನ್ನ ವಸ್ತುಗಳನ್ನು ಪ್ಯಾಕ್ ಮಾಡತೊಡಗಿದೆ. ನನ್ನ ನಡತೆ ಅವರಿಗೆ ಸ್ವಲ್ಪ ವಿಚಿತ್ರವಾಗಿ ಕಾಣಿಸಿರಬೇಕು. ಆದರೆ ಅವರಿಗೆ ನನ್ನ ನಿರ್ಣಯ ತಿಳಿಸಿದರೆ ಅವರಿಂದ ಅದು ನನ್ನ ಕ್ಲಾಸ್ ಮೇಟುಗಳಿಗೆ ಗೊತ್ತಾಗಿ ಅವರು ನನ್ನ ನಿರ್ಣಯವನ್ನು ಬದಲಿಸುವಂತೆ ಒತ್ತಾಯ ಮಾಡುವರೆಂದು ನನಗೆ ತಿಳಿದಿತ್ತು.

ನಾನು ಇನ್ಸ್ಟಿಟ್ಯೂಟಿನಿಂದ ಹೊರಡುವ ಹಿಂದಿನ ರಾತ್ರಿ ನನ್ನ ರೂಮ್ ಮೇಟ್ ಸುಬ್ರಮಣಿಯನ್ ಅವರಿಗೆ ನನ್ನ ತೀರ್ಮಾನವನ್ನು ತಿಳಿಸಿದೆ. ತುಂಬಾ ಸ್ನೇಹಮಯ ವ್ಯಕ್ತಿತ್ವದ ಅವರಿಗೆ ನನ್ನ ಮಾತನ್ನು ನಂಬಲಾಗಲಿಲ್ಲ. ಅವರಿಗೆ ದೊಡ್ಡ ಆಘಾತವಾದಂತಾಗಿ ಒಮ್ಮೆ ಮೂಕರಂತಾಗಿ ಬಿಟ್ಟರು. ಆದರೆ ಹಾಗೆ ಮಾಡದೇ ಇನ್ಸ್ಟಿಟ್ಯೂಟಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವಂತೆ ನನಗೆ ಮನವರಿಕೆ ಮಾಡುವ ಅವರ ಪ್ರಯತ್ನಗಳೆಲ್ಲಾ ವಿಫಲವಾದವು. ನಾನು ನನ್ನ ಅಂತಿಮ ತೀರ್ಮಾನದಿಂದ ವಿಚಲಿತನಾಗಲಿಲ್ಲ.

ಮರಳಿ ಊರಿಗೆ ಪಯಣ

ಪುಟ್ಟಣ್ಣ ಮತ್ತು ನಾನು ಮಾರನೇ ದಿನ ಬೆಳಿಗ್ಗೆ ಸುಭಾಷ್ ನಗರದ ಬಸ್ ನಿಲ್ದಾಣದಲ್ಲಿ ಶೃಂಗೇರಿ ಬಸ್ಸನ್ನೇರಿಬಿಟ್ಟೆವು. ನಾವು ಬೆಂಗಳೂರು ನಗರಕ್ಕೆ ನಮ್ಮ ವಿದಾಯ ಹೇಳಿಬಿಟ್ಟಿದ್ದೆವು. ಇದೇ ಸುಂದರ ನಗರಕ್ಕೆ ಕೇವಲ ನಾಲ್ಕು ತಿಂಗಳ ಕೆಳಗೆ ನಾವಿಬ್ಬರೂ ತುಂಬಾ ಆಶಾವಾದಿಗಳಾಗಿ ಪ್ರವೇಶ ಮಾಡಿದ್ದೆವು. ಆದರೆ ನಾವೀಗ ನಮ್ಮ ಸುಂದರ ಸ್ವಪ್ನಗಳೆಲ್ಲಾ ಕೇವಲ ಕನಸುಗಳಷ್ಟೇ ಎಂಬುದರ ಅರಿವಾಗಿ ನಿರಾಶೆಯಿಂದ ಊರಿಗೆ ಹಿಂತಿರುಗಿ ಹೋಗುತ್ತಿದ್ದೆವು.

ಬ್ಯಾಗುಗಳನ್ನು ಹೊತ್ತು ಮನೆಗೆ ಹಿಂತಿರುಗಿ ಬಂದ ತಮ್ಮಿಬ್ಬರು ಪದವೀಧರ ಮಕ್ಕಳನ್ನು ನೋಡಿ ನಮ್ಮ ತಂದೆ ಮತ್ತು ತಾಯಿಯವರಿಗೆ ಆದ ದಿಗ್ಬ್ರಮೆ ಮತ್ತು ಸಂಕಟ ಅಷ್ಟಿಷ್ಟಲ್ಲ. ತುಂಬಾ ಹೊತ್ತು ಅವರಿಗೆ ನಾವೇನು ಹೇಳುತ್ತಿರುವೆವೆಂದೇ ಅರ್ಥವಾಗಲಿಲ್ಲ. ಒಮ್ಮೆ ಅವರಿಗೆ ನಮ್ಮ ಪರಿಸ್ಥಿತಿ ಅರ್ಥವಾದ ಮೇಲೆ ಅವರು ಮೂಕರಾಗಿಬಿಟ್ಟರು. ನಮ್ಮ ನೆರೆಹೊರೆಯವರು ಮತ್ತು ಊರಿನ ಬೇರೆ ಜನಗಳಿಗೂ ಕೂಡ ನಾವು ಬೆಂಗಳೂರಿನಿಂದ ಹೀಗೆ ವಾಪಾಸ್ ಊರುಸೇರಿದ್ದು ತುಂಬಾ ಸಂಕಟವನ್ನುಂಟು ಮಾಡಿತು. ನಮಗೆ ಗತ್ಯಂತರವಿಲ್ಲದೇ ನಾವು ಊರಿಗೆ ಹಿಂತಿರುಗಿದುದಾಗಿ ನಾವೆಷ್ಟು ವಿವರಿಸಿದರೂ ಅವರಿಗೆ ಅದು ಒಪ್ಪಿಗೆಯಾಗಲಿಲ್ಲ.

ಕ್ಲಾಸ್ ಮೇಟುಗಳ ಮನವಿ ಪತ್ರ

ಕೇವಲ ಒಂದು ವಾರದ  ನಂತರ ನನ್ನ ಹೆಸರಿಗೊಂದು  ದೊಡ್ಡ ಲಕೋಟೆ ಇನ್ಸ್ಟಿಟ್ಯೂಟಿನಿಂದ ಉತ್ತಮೇಶ್ವರ ಅಂಚೆ ಕಚೇರಿಗೆ ಬಂತು. ನನ್ನ ಕ್ಲಾಸ್ ಮೇಟುಗಳೆಲ್ಲಾ ಒಟ್ಟಿಗೆ ಸಹಿ ಹಾಕಿ ನನಗೆ ಬರೆದ ಪತ್ರವೊಂದು ಅದರಲ್ಲಿತ್ತು. ಅವರಿಗೆ ನನ್ನ ರೂಮ್ ಮೇಟ್ ಸುಬ್ರಮಣಿಯನ್ ಅವರ ಮೂಲಕ ನಾನು ಹಣಕಾಸಿನ ತೊಂದರೆಯಿಂದ ಇನ್ಸ್ಟಿಟ್ಯೂಟನ್ನು ತೊರೆದು ಊರು ಸೇರಿದುದು ಗೊತ್ತಾಗಿತ್ತು. ಅವರಿಗೆಲ್ಲಾ ನಾನು ನನ್ನ ಆತ್ಮೀಯ ಸ್ನೇಹಿತ ಕೃಷ್ಣಕುಮಾರನಿಗೂ ಸೇರಿ ಯಾರಿಗೂ ತಿಳಿಸದೇ ಊರು ಸೇರಿದ್ದು ತುಂಬಾ ಬೇಸರದ ವಿಷಯವಾಗಿತ್ತು. ಅವರೆಲ್ಲಾ  ನನ್ನನ್ನು ಆ ಪತ್ರ ತಲುಪಿದ ಮಾರನೇ ದಿನವೇ ಊರಿನಿಂದ ಹೊರಟು ಬೆಂಗಳೂರಿಗೆ ಹಿಂದಿರುಗುವಂತೆ ಕೇಳಿಕೊಂಡಿದ್ದರು. ನನ್ನ ಖರ್ಚು ವೆಚ್ಚಗಳನ್ನೆಲ್ಲಾ ಯಾವುದೇ ಕಷ್ಟವಿಲ್ಲದೇ ತಾವೆಲ್ಲಾ ಹಂಚಿಕೊಳ್ಳುವುದಾಗಿ ಅವರು ಬರೆದಿದ್ದರು. ಆ ಬಗೆಯ ಭಾವನಾತ್ಮಕ ಪತ್ರವನ್ನು ನನ್ನ ಕ್ಲಾಸ್ ಮೇಟುಗಳಿಂದ ನಾನು ಖಂಡಿತವಾಗಿಯೂ ನಿರೀಕ್ಷಿರಲಿಲ್ಲ. ನನ್ನ ಕಣ್ಣುಗಳಿಂದ ನೀರು ಹರಿಯತೊಡಗಿತು. ಪತ್ರವನ್ನು ಓದಿದ ನಮ್ಮ ಅಮ್ಮನೂ ಅಳತೊಡಗಿದಳು. ಹಾಗೂ ಸಾಧ್ಯವೆನಿಸಿದರೆ ನಾನು ನನ್ನ ಕ್ಲಾಸ್ ಮೇಟುಗಳು ಕೇಳಿಕೊಂಡಂತೆ ಬೆಂಗಳೂರಿಗೆ ಹಿಂದಿರುಗಬೇಕೆಂದು ಸಲಹೆ ಮಾಡಿದಳು.

ಆದರೆ ನನ್ನ ಮುಂದೆ ಆ ಪ್ರಶ್ನೆಯೇ ಇರಲಿಲ್ಲ. ಆ ವೇಳೆಗೆ ನಾನು ಇನ್ನು ಮುಂದೆ ನನ್ನ ಹಣಕಾಸಿನ ಖರ್ಚಿಗೆ ಬೇರೆ ಯಾರ ಮೇಲೂ ಅವಲಂಬಿಸುವುದಿಲ್ಲವೆಂದು ಅಂತಿಮ ತೀರ್ಮಾನ ಮಾಡಿಬಿಟ್ಟಿದ್ದೆ. ಒಟ್ಟಿನಲ್ಲಿ ಇನ್ಸ್ಟಿಟ್ಯೂಟಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆಯಬೇಕೆಂಬ ನನ್ನ ಗುರಿ ಮತ್ತು ಅಭಿಲಾಷೆ ಕೇವಲ ಒಂದು ಮರೀಚಿಕೆಯಾಗಿ ಬಿಟ್ಟಿತ್ತು. ಮಾತ್ರವಲ್ಲ. ಆಗ ನನಗೆ ಅರಿವಿಲ್ಲದಿದ್ದರೂ, ನನ್ನ ವಿದ್ಯಾಭ್ಯಾಸದ ಹೋರಾಟ ಅಲ್ಲಿಗೇ ಕೊನೆಗೊಂಡಿತ್ತು.

--------ಮುಕ್ತಾಯ--------

Thursday, August 6, 2020

ಬಾಲ್ಯ ಕಾಲದ ನೆನಪುಗಳು – ೧೦೭

 

ನಾವು ಇನ್ಸ್ಟಿಟ್ಯೂಟಿಗೆ ಸೇರಿದ ಮಾರನೇ ದಿನದಿಂದಲೇ ನಮ್ಮ ತರಗತಿಗಳು ಪ್ರಾರಂಭವಾದುವು. ಆ ದಿನಗಳಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳೂ ವಾರ್ಷಿಕ ಪರೀಕ್ಷೆ ನಡೆಸುತ್ತಿದ್ದವು. ಆದರೆ ಇನ್ಸ್ಟಿಟ್ಯೂಟಿನಲ್ಲಿ ಮಾತ್ರಾ ಆಗಲೇ ಸೆಮಿಸ್ಟರ್ ಪದ್ಧತಿ ಜಾರಿಯಲ್ಲಿತ್ತು. ಅಷ್ಟು ಮಾತ್ರವಲ್ಲ. ಇನ್ಸ್ಟಿಟ್ಯೂಟಿನಲ್ಲಿ ಮಾಸಿಕ ಟೆಸ್ಟ್ ಗಳನ್ನೂ ಮಾಡುವುದಲ್ಲದೇ ಅದರಲ್ಲಿ ಬಂದ ಅಂಕಗಳನ್ನೂ ಪರಿಗಣಿಸಿ ಸೆಮಿಸ್ಟರ್ ಪರೀಕ್ಷೆಯ ನಂತರ ಗ್ರೇಡೇಷನ್ ಮಾಡಲಾಗುತ್ತಿತ್ತು. ಒಟ್ಟಿನಲ್ಲಿ ವಿದ್ಯಾರ್ಥಿಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಮೊದಲೇ ಅವರ ಮೇಲೆ ಪರೀಕ್ಷೆಗಳ ಒತ್ತಡ ಹೇರಲಾಗುತ್ತಿತ್ತು. ಮೊದಲ ಎರಡು ಸೆಮಿಸ್ಟರ್ ಗಳಲ್ಲಿ ಇನ್ಸ್ಟಿಟ್ಯೂಟಿನ ಮೂರು ಇಂಜಿನಿಯರಿಂಗ್ ವಿಭಾಗಗಳಿಗೂ ಕೆಲವು ಕಾಮನ್ ಸಬ್ಜೆಕ್ಟುಗಳು ಇದ್ದವು. ಈ ಸಬ್ಜೆಕ್ಟುಗಳ ತರಗತಿಗಳನ್ನು ಒಂದು ವಿಶಾಲವಾದ  ಸಭಾಂಗಣದಲ್ಲಿ ನಡೆಸಲಾಗುತ್ತಿತ್ತು. ಏಕೆಂದರೆ ಅದರಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿರುತ್ತಿದ್ದರು.

ನಮ್ಮ ಮೆಟಲರ್ಜಿ ವಿಭಾಗದಲ್ಲಿ ಸುಮಾರು ೧೨ ವಿದ್ಯಾರ್ಥಿಗಳು ಕನ್ನಡಿಗರೇ ಆಗಿದ್ದರು. ಉಳಿದವರು ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದರು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ತಮಿಳುನಾಡಿನವರಾಗಿದ್ದರು. ಕನ್ನಡಿಗರಲ್ಲಿ ಹೆಚ್ಚಿನವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ Rank ಪಡೆದವರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಂದ ಮೂರು ವಿದ್ಯಾರ್ಥಿಗಳಲ್ಲಿ ನಾನು ಮಾತ್ರಾ Rank ಪಡೆದವನಾಗಿದ್ದೆ. ಉಳಿದಿಬ್ಬರು ಮೊದಲ ತರಗತಿಯಲ್ಲಿ ಉನ್ನತ ಅಂಕಗಳನ್ನು ಪಡೆದವರಾಗಿದ್ದರು.

ನಮ್ಮ ಹಾಸ್ಟೆಲಿನಲ್ಲಿ ಮೂರು ಮೆಸ್ಸುಗಳಿದ್ದವು. ಅವುಗಳೆಂದರೆ  - ಸೌತ್ ಇಂಡಿಯನ್ ವೆಜೆಟೇರಿಯನ್ ಮೆಸ್, ನಾರ್ತ್ ಇಂಡಿಯನ್ ವೆಜೆಟೇರಿಯನ್ ಮೆಸ್ ಮತ್ತು ನಾನ್-ವೆಜೆಟೇರಿಯನ್ ಮೆಸ್. ನಾನು ಸೌತ್ ಇಂಡಿಯನ್ ವೆಜೆಟೇರಿಯನ್ ಮೆಸ್ ಸೇರಿಕೊಂಡೆ. ಈ ಮೆಸ್ಸಿನ ಊಟ ಮತ್ತು ತಿಂಡಿಗಳು ತುಂಬಾ ರುಚಿಕರ ಮತ್ತು ಉನ್ನತ ಮಟ್ಟದ್ದಾಗಿದ್ದವು. ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಸಮೃದ್ಧಿಯಾಗಿ ದೊರೆಯುತ್ತಿದ್ದವು. ನಮ್ಮ ಮೆಸ್ಸಿನ ಬಿಸಿಬಿಸಿ ಮಸಾಲೆ ದೋಸೆ ಮತ್ತು ಪರೋಟ ತುಂಬಾ ಪ್ರಸಿದ್ಧಿ ಪಡೆದಿದ್ದವು. ಸ್ವಚ್ಛತೆಗೆ ಹೆಸರಾಗಿದ್ದ ಈ ಮೆಸ್ಸಿನಲ್ಲಿ ನಾವು ತೆಗೆದುಕೊಳ್ಳುತ್ತಿದ್ದ ಊಟ ಮತ್ತು ತಿಂಡಿಗಳಿಗೆ ಯಾವುದೇ ಮಿತಿ ಇರುತ್ತಿರಲಿಲ್ಲ. ಊಟ ಮುಗಿದ ನಂತರ ನಮ್ಮಿಚ್ಛೆಯಷ್ಟು ತಿನ್ನಲು ತಾಜಾ ಹಣ್ಣುಗಳು ಅವಲಭ್ಯವಿದ್ದವು. ಒಟ್ಟಿನಲ್ಲಿ ಆಹಾರದ ಮಟ್ಟ ಹೇಗಿತ್ತೆಂದರೆ ಕೇವಲ ಸ್ವಲ್ಪ ದಿನಗಳಲ್ಲೇ ನನ್ನ ದೇಹದ ತೂಕ ಜಾಸ್ತಿಯಾಗಲಾರಂಭಿಸಿತು!

ನಾನು ಇನ್ಸ್ಟಿಟ್ಯೂಟಿನ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಂತೆ ಎರಡು ಮುಖ್ಯ ಕೆಲಸಗಳಿಗೆ ಆದ್ಯತೆ ನೀಡಿದೆ. ಮೊದಲನೆಯದಾಗಿ ನನಗೆ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾಗಿದ್ದು ಆಗ ಸಿಂಡಿಕೇಟ್ ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದ ಎನ್.ಆರ್.ಭಟ್ ಅವರಿಗೆ ಅವರು ನೀಡಿದ್ದ ಹಣಕಾಸಿನ ಸಹಾಯದ ಭರವಸೆಯನ್ನು ನೆನಪಿಸಿ ಒಂದು ಪತ್ರ ಬರೆದೆ. ಆಗ ಅವರು ಬ್ಯಾಂಕಿನ ಕಾರವಾರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವರಿಂದ ಪ್ರತಿ ತಿಂಗಳೂ ಸ್ವಲ್ಪ ಹಣವನ್ನು ನಿರೀಕ್ಷಿಸುತ್ತಿದ್ದೆ. ಆದರೆ ನಾನು ಪತ್ರ ಬರೆದು ಒಂದು ತಿಂಗಳಾದರೂ ಅವರಿಂದ ಯಾವುದೇ ಉತ್ತರ ಬರಲಿಲ್ಲ.

ನನ್ನ ಎರಡನೇ ಪತ್ರ ಮಣಿಪಾಲ್ ಅಕಾಡೆಮಿಗೆ ಬರೆದ ಪತ್ರವಾಗಿತ್ತು. ಅದರಲ್ಲಿ ನಾನು ಹಿಂದೆಯೇ ತಿಳಿಸಿದಂತೆ ಟಾಟಾ ಇನ್ಸ್ಟಿಟ್ಯೂಟಿಗೆ ಸೇರಿರುವುದಾಗಿಯೂ ಮತ್ತು ಹಿಂದೆ ನನಗೆ ಪ್ರಿನ್ಸಿಪಾಲರ ಮೂಲಕ ನೀಡಿದ ಭರವಸೆಯ ಪ್ರಕಾರ ಇನ್ಸ್ಟಿಟ್ಯೂಟಿನ ಫೀ ಮೊತ್ತವನ್ನು ಕಳಿಸಿಕೊಡುವಂತೆಯೂ ಕೇಳಿಕೊಂಡಿದ್ದೆ. ಆದರೆ ಅಲ್ಲಿಂದಲೂ ನನ್ನ ಪತ್ರಕ್ಕೆ ಒಂದು ತಿಂಗಳ ಮೇಲಾದರೂ ಕೂಡ ಯಾವುದೇ ಉತ್ತರ ಬರಲಿಲ್ಲ. ಆಗ ನನ್ನ ಮನಸ್ಸಿನಲ್ಲಿ ಸ್ವಲ್ಪ ಕಸಿವಿಸಿಯಾಗಲಾರಂಭಿಸಿತು.

ಈ ನಡುವೆ ಪುಟ್ಟಣ್ಣ ತನ್ನ ನೌಕರಿ ಹುಡುಕಾಟವನ್ನು ಮುಂದುವರಿಸಿದ್ದ. ಆದರೆ ಯಶಸ್ಸಿನ  ಯಾವುದೇ ಸೂಚನೆಗಳು ಕಾಣುತ್ತಿರಲಿಲ್ಲ. ಒಟ್ಟಿನಲ್ಲಿ ನನ್ನ ಹಣಕಾಸಿನ ವ್ಯವಸ್ಥೆ ಬಗೆಹರಿಯುವ ಯಾವುದೇ ಸಾಧ್ಯತೆ ಗೋಚರಿಸುತ್ತಿರಲಿಲ್ಲ. ನನ್ನ ಹಾಸ್ಟೆಲ್ ವಾಸದ ಒಂದು ತಿಂಗಳು ಅಷ್ಟುಹೊತ್ತಿಗೆ ಕಳೆದು ಹೋಗಿತ್ತು. ನಾನು ಬ್ಯಾಂಕಿನಿಂದ ಹಣ ತೆಗೆದು ಆ ತಿಂಗಳ ಫೀ ಕಟ್ಟಿದೆ. ಬ್ಯಾಂಕಿನಲ್ಲಿದ್ದ ನನ್ನ ಹಣ ಅತಿ ವೇಗವಾಗಿ ಕರಗುತ್ತಿದ್ದಂತೆ ನನಗನ್ನಿಸತೊಡಗಿತು.

ನಮಗೆ ಮೊದಲ ತಿಂಗಳ ಟೆಸ್ಟ್ ಗಳನ್ನು ನಡೆಸಲಾಯಿತು. ನಾನು ಅವುಗಳಲ್ಲಿ ಸಾಕಷ್ಟು ಚೆನ್ನಾಗಿಯೇ ಉತ್ತರಗಳನ್ನು ಬರೆದಿದ್ದೆ. ಈ ನಡುವೆ ನಾನು ನನ್ನ ಅನೇಕ ಸಹಪಾಠಿಗಳೊಡನೆ ಸ್ನೇಹ ಬೆಳೆಸಿದ್ದೆ. ಎಲ್ಲರಿಗಿಂತಲೂ ಹೆಚ್ಚಾಗಿ ಕೃಷ್ಣಕುಮಾರನೆಂಬ ನಗೆಮೊಗದ ಕೊಯಮುತ್ತೂರಿನ ಹುಡುಗ ಬೇಗನೆ ನನ್ನ ಆತ್ಮೀಯ ಮಿತ್ರನಾಗಿಬಿಟ್ಟ. ನನಗೆ ಅವನೊಡನೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಯಿತು. ವೀರರಾಘವನ್ ಎಂಬ ಇನ್ನೊಬ್ಬ  ಹುಡುಗ ತುಂಬಾ ಮೇಧಾವಿ ಮತ್ತು ತೀಕ್ಷ್ಣ ಮತಿಯಾಗಿದ್ದ. ಎಂತಹ ಕಠಿಣ ಸಮಸ್ಯೆಯೇ ಇರಲೀ, ಅದನ್ನು ಬೇಗನೆ ಬಗೆಹರಿಸುವ ಮೇಧಾವಿತನ ಅವನಲ್ಲಿತ್ತು. ನನಗೆ ಅವನ ಬಗ್ಗೆ ತುಂಬಾ ಮೆಚ್ಚುಗೆ ಉಂಟಾಯಿತು. ಇನ್ನು ಕನ್ನಡಿಗನೇ ಆದ ಕೋಲಾರದ ಕೇಶವಮೂರ್ತಿ ಎಂಬ ಹುಡುಗನೂ ಬೇಗನೆ ನನ್ನ ಆತ್ಮೀಯ ಮಿತ್ರನಾಗಿಬಿಟ್ಟ. ಈ ನಡುವೆ ನನ್ನ ಮೆಂಟರ್ ಆಗಿದ್ದ ಪ್ರೊಫೆಸರ್ ಕೆ. ಐ. ವಾಸು ಅವರು ಆಗಾಗ ನನ್ನ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಆದರೆ ನಾನು ಅವರ ಹತ್ತಿರ ನನ್ನ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಏನೂ ಹೇಳಲಿಲ್ಲ.

ಹಾಸ್ಟೆಲಿನಲ್ಲಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನನಗೆ ಇನ್ನೊಂದು ಕೊಠಡಿಗೆ ಶಿಫ್ಟ್ ಮಾಡುವಂತೆ ವಾರ್ಡನ್ ಅವರಿಂದ ಆದೇಶ ಬಂತು. ಆ ವೇಳೆಗೆ ನನ್ನ ರೂಮ್ ಮೇಟ್ ಸುಬ್ಬರಾವ್ ಅವರಿಗೆ ನಾನು ಕಿರಿಯ ಸಹೋದರನಂತಾಗಿಬಿಟ್ಟಿದ್ದೆ. ಹಾಗಾಗಿ ನಾನು ರೂಮ್ ಬಿಟ್ಟು ಹೊರಡುವಾಗ ಸ್ವಲ್ಪ ಭಾವನಾತ್ಮಕ ಸನ್ನಿವೇಶ ಉಂಟಾಯಿತು. ನನ್ನ ಹೊಸ ರೂಮ್ ಮೇಟ್ ಸುಬ್ರಮಣಿಯನ್ ತಮಿಳುನಾಡಿನವರಾಗಿದ್ದು ಎಲ್ಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ತುಂಬಾ ಧಾರ್ಮಿಕ ಸ್ವಭಾವದ ಸುಬ್ರಮಣಿಯನ್ ಅಷ್ಟೇ ಸ್ನೇಹಜೀವಿಯೂ ಆಗಿದ್ದರು. ನಾನು ಅವರೊಡನೆ ಬಹು ಬೇಗನೆ ಹೊಂದಿಕೊಂಡೆ.

ಇನ್ಸ್ಟಿಟ್ಯೂಟಿನಲ್ಲಿ ಒಂದು ಪ್ರತ್ಯೇಕ ಇಂಗ್ಲಿಷ್ ಡಿಪಾರ್ಟ್ಮೆಂಟ್ ಇದ್ದು ಅಮೆರಿಕಾದ ಪ್ರೊಫೆಸರ್ ಎಲ್.ಐ.ಲೆವಿಸ್ ಎನ್ನುವರು ಅದರ ಮುಖ್ಯಸ್ಥರಾಗಿದ್ದರು. ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಲ್ಲಾ ಒಂದು ಇಂಗ್ಲಿಷ್ ಟೆಸ್ಟ್ ನಲ್ಲಿ ಭಾಗವಹಿಸಬೇಕಿತ್ತು. ಅದರಲ್ಲಿ ಉತ್ತೀರ್ಣರಾಗದವರು ಇಂಗ್ಲಿಷ್ ಡಿಪಾರ್ಟ್ಮೆಂಟ್ ನಡೆಸುತ್ತಿದ್ದ ಒಂದು ಸ್ಪೆಷಲ್ ಕೋರ್ಸಿಗೆ ಸೇರಿಕೊಳ್ಳಬೇಕಾಗಿತ್ತು. ವಿಚಿತ್ರವೆಂದರೆ ನಮ್ಮಲ್ಲಿ ಅನೇಕರು ಅದರಲ್ಲಿ ಪಾಸಾಗದೇ ಕೋರ್ಸಿಗೆ ಸೇರಿಕೊಳ್ಳಬೇಕಾಯಿತು. ನಾನು ಆ ಟೆಸ್ಟಿನಲ್ಲಿ ತುಂಬಾ ಉತ್ತಮ ಅಂಕಗಳನ್ನು ಪಡೆದು ಪ್ರೊಫೆಸರ್ ಎಲ್.ಐ.ಲೆವಿಸ್  ಅವರಿಂದ ಒಂದು ಸರ್ಟಿಫಿಕೇಟ್ ಪಡೆದುಕೊಂಡೆ. ನನಗೆ ಆ ಬಗ್ಗೆ ತುಂಬಾ ಹೆಮ್ಮೆಯೂ ಆಯಿತು.

ಇನ್ಸ್ಟಿಟ್ಯೂಟಿನ ವಿದ್ಯಾರ್ಥಿಗಳಿಗೆ ಅವರ ಮೆರಿಟ್ ಆಧಾರದ ಮೇಲೆ ಸ್ಕಾಲರ್ಷಿಪ್ ನೀಡಲಾಗುತ್ತಿದ್ದು ನಾನು ಅದಕ್ಕೆ ಅರ್ಹನೂ ಆಗಿದ್ದೆ. ಆದರೆ ಸರ್ಕಾರದ ಸ್ಕಾಲರ್ಷಿಪ್ ಬರುತ್ತಿರುವವರಿಗೆ ಅದಕ್ಕೆ ಅರ್ಹತೆ ಇರಲಿಲ್ಲ. ನನಗೆ Rank ಪಡೆದುದಕ್ಕೆ ತಿಂಗಳಿಗೆ ೧೦೦ ರೂಪಾಯಿ ಸ್ಕಾಲರ್ಷಿಪ್ ಸಿಗುವ ಭರವಸೆ ಸಿಕ್ಕಿತ್ತು. ಅಲ್ಲದೇ ಇನ್ಸ್ಟಿಟ್ಯೂಟಿನ ಸ್ಕಾಲರ್ಷಿಪ್ ಮೊತ್ತ ತಿಂಗಳಿಗೆ ೭೫ ರೂಪಾಯಿ ಮಾತ್ರ ಆಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಂದ ವಿದ್ಯಾರ್ಥಿಗಳಿಗೆ ಅವರು ಮನೆಯಿಂದಲೇ ಬರುತ್ತಿದ್ದರಿಂದ ಹಾಸ್ಟೆಲಿನ ಖರ್ಚು ಇರಲಿಲ್ಲ. ಇನ್ನು ಬೇರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ಅವರ ಪೋಷಕರಿಂದ ಸಾಕಷ್ಟು ಹಣ ಪ್ರತಿ ತಿಂಗಳೂ ಬ್ಯಾಂಕಿಗೆ ಬರುತ್ತಿತ್ತು. ಅವರು ಬೆಂಗಳೂರಿನಲ್ಲಿ ಸಿನಿಮಾ, ಹೋಟೆಲ್, ಇತ್ಯಾದಿಗಳಿಗೆ ಧಾರಾಳವಾಗಿಯೇ ಖರ್ಚು ಮಾಡುತ್ತಿದ್ದರು. ನನ್ನ ರೂಮ್ ಮೇಟ್ ಬಳಿಗೆ ತುಂಬಾ ಸ್ನೇಹಿತರು ಮಾತನಾಡಲು ಬರುತ್ತಿದ್ದರು. ಅವರ ಸಂಭಾಷಣೆಯಿಂದ ಒಂದು ವಿಷಯ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಅವರೆಲ್ಲಾ ತಮ್ಮ ಮುಂದಿನ ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಂಬಳದ ಬಗ್ಗೆ ಸ್ಪಷ್ಟ ಗುರಿಯನ್ನು ಹೊಂದಿದ್ದರು. ಒಬ್ಬ ವಿದ್ಯಾರ್ಥಿಯಂತೂ ತನ್ನ ಮುಂದಿನ ಗಳಿಕೆಯ ಬಗ್ಗೆ ಒಂದು ಚಾರ್ಟನ್ನೇ ತಯಾರು ಮಾಡಿಬಿಟ್ಟಿದ್ದನ್ನೂ ನಾನು ನೋಡಿದೆ! ಉಳಿದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಮೆಟಲರ್ಜಿ ವಿದ್ಯಾರ್ಥಿಗಳ ಬಗ್ಗೆ ತುಂಬಾ ಅಸೂಯೆ ಇತ್ತು. ಏಕೆಂದರೆ ಆ ದಿನಗಳಲ್ಲಿ ಮೆಟಲರ್ಜಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಅಮೇರಿಕಾದಲ್ಲಿ ತುಂಬಾ ಬೇಡಿಕೆ ಇತ್ತಂತೆ. ಆದ್ದರಿಂದ ಅವರು ಅಮೇರಿಕಾ ತಲುಪುವ  ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲವಂತೆ! ಇನ್ನುಳಿದವರಿಗೆ ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿಯಲ್ಲಿ (TISCO) ಕೆಲಸದ ಗ್ಯಾರಂಟಿ ಇತ್ತು.

ಇನ್ಸ್ಟಿಟ್ಯೂಟಿನಲ್ಲಿ ನನ್ನ ವಾಸದ ಮತ್ತೊಂದು ತಿಂಗಳು ಕಳೆದು ಹೋಯಿತು. ಹಾಸ್ಟೆಲಿನ ಫೀ  ಕಟ್ಟಿದ ನಂತರ ನನ್ನ ಬ್ಯಾಂಕ್ ಖಾತೆಯಲ್ಲಿನ ಹಣದ ಮೊತ್ತ ಕೆಳಗೆ ಹೋಗುತ್ತಿರುವುದನ್ನು ನೋಡಿ ನನ್ನ ತಲೆ ಬಿಸಿಯಾಗತೊಡಗಿತು. ಮಣಿಪಾಲ್ ಅಕಾಡೆಮಿಗೆ ನಾನು ಪುನಃ ಒಂದು ಪತ್ರ ಬರೆದೆ ಮತ್ತು ಎನ್.ಆರ್.ಭಟ್ ಅವರಿಗೆ ಅವರು ನೀಡಿದ್ದ ಹಣಕಾಸಿನ ಸಹಾಯದ ಭರವಸೆಯನ್ನು ನೆನಪಿಸಿ ಇನ್ನೂ ಒಂದು ಪತ್ರ ಬರೆದೆ.  ಹಾಗೆಯೇ ಫಿಸಿಕ್ಸ್ ಡಿಪಾರ್ಟ್ಮೆಂಟಿನ ಅಸೋಸಿಯೇಟ್ ಪ್ರೊಫೆಸರ್ ಭಟ್ ಅವರನ್ನು ಇನ್ನೊಮ್ಮೆ ಭೇಟಿ ಮಾಡಿ ನನ್ನ ಹಣಕಾಸಿನ ಸಮಸ್ಯೆಯನ್ನು ಹೇಳಿಕೊಂಡೆ. ಅವರು ನನಗೆ ಆ ದಿನದ ನ್ಯೂಸ್ ಪೇಪರಿನಲ್ಲಿ ಕೆನರಾ ಬ್ಯಾಂಕಿನವರು ಪ್ರಕಟಿಸಿದ್ದ ಒಂದು ಅನೌನ್ಸಮೆಂಟನ್ನು ತೋರಿಸಿದರು. ಆ ಪ್ರಕಟಣೆಯಲ್ಲಿ ಕೆನರಾ ಬ್ಯಾಂಕ್ ಗೋಲ್ಡನ್ ಜ್ಯೂಬಿಲಿ ಸ್ಕಾಲರ್ಷಿಪ್ ಗೆ ಅರ್ಹರಾದ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿತ್ತು. ಭಟ್ ಅವರಿಗೆ ಆ ಸ್ಕಾಲರ್ಷಿಪ್ ಕಮಿಟಿಗೆ ಸೆಕ್ರೆಟರಿಯಾಗಿದ್ದ ಎಸ್. ಆರ್.  ಪ್ರಭು ಅವರ ಪರಿಚಯವಿತ್ತಂತೆ. ಅವರನ್ನು ಹೋಗಿ ಭೇಟಿ ಮಾಡುವಂತೆ ನನಗೆ ಸಲಹೆ ಕೊಟ್ಟರು.

ನಾನು ಮಾರನೇ ದಿನವೇ ಜೆ. ಸಿ. ರಸ್ತೆಯಲ್ಲಿದ್ದ ಕೆನರಾ ಬ್ಯಾಂಕಿನ ಹೆಡ್ ಆಫೀಸಿಗೆ ಹೋದೆ. ಅದರ ಒಂದು ಮಹಡಿಯಲ್ಲಿದ್ದ ಸ್ಕಾಲರ್ಷಿಪ್ ವಿಭಾಗಕ್ಕೆ ನನ್ನನ್ನು ಕಳಿಸಲಾಯಿತು. ಅಲ್ಲಿದ್ದ ಒಬ್ಬ ವ್ಯಕ್ತಿಯ ಬಳಿಗೆ ನಾನು ಹೋಗಿ ನಾನು  ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಲು ಬಂದುದಾಗಿ ತಿಳಿಸಿದೆ. ಆ ವ್ಯಕ್ತಿ ನಾನು ಎಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ಪ್ರಶ್ನಿಸಿದರು. ನಾನು ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ನಲ್ಲಿ (IISc) ಮೆಟಲರ್ಜಿ ಇಂಜಿನಿಯರಿಂಗ್ ಓದುತ್ತಿರುವುದಾಗಿ ತಿಳಿಸಿದೆ. ಆದರೆ ಆ ವ್ಯಕ್ತಿ ನನ್ನ ಮಾತನ್ನು ನಂಬಲಿಲ್ಲ! ಅವರ ಪ್ರಕಾರ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ಸ್ಥಾಪಿಸಿದ ಉದ್ದೇಶವೇ ಸೈನ್ಸ್ ಅಥವಾ ವಿಜ್ಞಾನದ ಶಿಕ್ಷಣ ನೀಡುವುದಕ್ಕೆ. ಆದ್ದರಿಂದ ಅಲ್ಲಿ ಇಂಜಿನಿಯರಿಂಗ್ ಅಭ್ಯಾಸಕ್ಕೆ ಆಸ್ಪದ ಇರುವುದೇ ಸಾದ್ಯವಿರಲಿಲ್ಲ! ನಾನು  ಬೇರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದರೆ ಅರ್ಜಿ ಸಲ್ಲಿಸಬಹುದಿತ್ತೆಂದು ಸ್ಪಷ್ಟಪಡಿಸಿಬಿಟ್ಟರು. ನನಗೆ ಆ ವ್ಯಕ್ತಿಯ ಮಾತನ್ನು ಕೇಳಿ ಪರಮಾಶ್ಚರ್ಯವಾಯಿತು. ಆ ಮಹಾನುಭಾವ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿದ್ದ ಇನ್ಸ್ಟಿಟ್ಯೂಟ್ ನೀಡುತ್ತಿದ್ದ ಇಂಜಿನಿಯರಿಂಗ್ ಕೋರ್ಸ್ ಒಂದಕ್ಕೆ ಸ್ಕಾಲರ್ಷಿಪ್ ಮಂಜೂರು ಮಾಡಲು ತಯಾರಿರಲಿಲ್ಲ! 

ನನಗೆ ಇದ್ದಕ್ಕಿದಂತೇ ನಾನೊಂದು ದೊಡ್ಡ ತಪ್ಪನ್ನು ಮಾಡಿಬಿಟ್ಟೆನೆಂದು ಅರಿವಾಯಿತು. ಭಟ್ ಅವರು ನನಗೆ ಅವರ ಪರಿಚಯಸ್ತರಾದ ಎಸ್. ಆರ್.  ಪ್ರಭು  ಅವರನ್ನು ಭೇಟಿ ಮಾಡಲು ಹೇಳಿದ್ದರು. ಆದರೆ ನಾನು ಇನ್ಸ್ಟಿಟ್ಯೂಟಿನ ಬಗ್ಗೆ ಏನೂ ಅರಿವಿಲ್ಲದೇ  ತನ್ನದೇ ಪ್ರಪಂಚದಲ್ಲಿದ್ದ ವ್ಯಕ್ತಿಯೊಬ್ಬನೊಡನೆ ವ್ಯರ್ಥವಾಗಿ ಮಾತನಾಡಿದೆನೆಂದು ಅನಿಸಿತು. ನಾನು ಕೂಡಲೇ ಆ ವ್ಯಕ್ತಿಯ ಹತ್ತಿರ ಎಸ್. ಆರ್.  ಪ್ರಭು  ಅವರು ಎಲ್ಲಿರುವರೆಂದು ಕೇಳಿದೆ. ಆಗ ಆ ವ್ಯಕ್ತಿ ತಾನೇ  ಎಸ್. ಆರ್.  ಪ್ರಭು ಎಂದು ಹೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ! ನಾನು ಪ್ರೊಫೆಸರ್ ಭಟ್ ಅವರು ನನ್ನನ್ನು ಅವರ ಬಳಿಗೆ ಕಳಿಸಿದ್ದಾಗಿ ಹೇಳಿದಾಗ ಅವರು ತಮಗೆ ಭಟ್ ಅವರು ಗೊತ್ತೆಂದು ಹೇಳಿದರು. ಆದರೆ ಇನ್ಸ್ಟಿಟ್ಯೂಟಿನಲ್ಲಿ  ನಡೆಸುವ ಮೂರು ವರ್ಷದ ಇಂಜಿನಿಯರಿಂಗ್ ಕೋರ್ಸ್ ಒಂದಕ್ಕೆ ತಾವು ಸ್ಕಾಲರ್ಷಿಪ್ ಮಂಜೂರು ಮಾಡಲು ಸಾಧ್ಯವಿಲ್ಲವೆಂದು ಪುನಃ ಸ್ಪಷ್ಟಪಡಿಸಿದರು. ಅದು ಕೆನರಾ ಬ್ಯಾಂಕಿನಲ್ಲಿ ನನ್ನ ಮೊಟ್ಟ ಮೊದಲ ಅನುಭವವಾಗಿತ್ತು.

ಆಮೇಲೆ ನಾನು ಡೈರೆಕ್ಟರ್ ಅಫ್ ಕೊಲಿಜಿಯೇಟ್ ಎಜುಕೇಶನ್ ಅವರ ಆಫೀಸಿಗೆ ಹೋಗಿ ನನಗೆ ಬರಬೇಕಾದ ಮೆರಿಟ್ ಸ್ಕಾಲರ್ಷಿಪ್ ಬಗ್ಗೆ ವಿಚಾರಿಸಿದೆ. ಆ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ Rank ಪಡೆದ ವಿದ್ಯಾರ್ಥಿಗಳ ಪಟ್ಟಿ ಅಲ್ಲಿಗೆ ತಲುಪಿತ್ತು. ಅದರಲ್ಲಿ ನನ್ನ ಹೆಸರು ಇರುವುದಾಗಿಯೂ ಮತ್ತು ಶೀಘ್ರದಲ್ಲೇ ನನಗೆ ಸ್ಕಾಲರ್ಷಿಪ್ ಮಂಜೂರು ಮಾಡಿದ ಪತ್ರ  ಕಳಿಸುವುದಾಗಿಯೂ ಡೈರೆಕ್ಟರ್ ಅವರು ನನಗೆ ಭರವಸೆ ಕೊಟ್ಟರು. ಆದರೆ ನನಗೊಂದು ಆಘಾತ ಕಾದಿತ್ತು. ಅವರ ಪ್ರಕಾರ ಸ್ಕಾಲರ್ಷಿಪ್ ನ ಪೂರ್ತಿ ಹಣವನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಮ್ಮೆಗೇ ಕೊಡಲಾಗುವುದಂತೆ.  ಅಲ್ಲಿಯವರೆಗೆ ಅದು ನನ್ನ ಕೈಸೇರುವ ಸಾಧ್ಯತೆಯೇ ಇಲ್ಲವಂತೆ!

ಹೀಗೆ ಒಂದಾದ ಮೇಲೆ ಒಂದರಂತೆ ಆತಂಕದ ಬೆಳವಣಿಗೆಗಳನ್ನು ಕಂಡು ನನಗೆ  ದಿಕ್ಕೇ ತೋಚದಂತಾಯಿತು. ಅದೇ ವೇಳೆ ಪುಟ್ಟಣ್ಣನ ನೌಕರಿ ಹುಡುಕಾಟದಲ್ಲಿ ಕೂಡ ಯಾವುದೇ  ಯಶಸ್ಸಿನ ಸೂಚನೆಗಳು ಕಾಣುತ್ತಿರಲಿಲ್ಲ. ಬ್ಯಾಂಕಿನ ಶಾಖೆಯಲ್ಲಿ  ನನ್ನ ಖಾತೆಯಲ್ಲಿದ್ದ  ಹಣ ಕರಗುತ್ತಾ ಹೋಗುತ್ತಿದ್ದಂತೇ ನನ್ನ ಆತಂಕ ಹೆಚ್ಚುತ್ತಲೇ ಹೋಯಿತು. ನಾನು ನಿಧಾನವಾಗಿ  ಖಾಲಿ ಜೇಬಿನ ಪರಿಸ್ಥಿತಿಯತ್ತ ವಾಪಾಸ್ ಹೋಗತೊಡಗಿದ್ದೆ.

--------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ--------

Monday, August 3, 2020

ಬಾಲ್ಯ ಕಾಲದ ನೆನಪುಗಳು – ೧೦೬

ಬಾಲ್ಯ ಕಾಲದ ನೆನಪುಗಳು – ೧೦೬

ಆಗಸ್ಟ್ ತಿಂಗಳ ಮೊದಲ ವಾರ ಪುಟ್ಟಣ್ಣ ಮತ್ತು ನಾನು ಪುನಃ ಬೆಂಗಳೂರಿಗೆ ಪ್ರಯಾಣ ಮಾಡಿದೆವು. ಪುಟ್ಟಣ್ಣ ಬೆಂಗಳೂರಿನಲ್ಲೇ ಇದ್ದು ಅಲ್ಲಿಯೇ ನೌಕರಿ ಹುಡುಕುವುದಾಗಿ ತೀರ್ಮಾನಿಸಿದ್ದ. ನಾನು ಇನ್ಸ್ಟಿಟ್ಯೂಟಿಗೆ ಸೇರುವ ತೀರ್ಮಾನ ಮಾಡಿದಾಗ ನನ್ನ ಖರ್ಚಿಗೆ ಪುಟ್ಟಣ್ಣನಿಗೆ ನೌಕರಿ ಸಿಕ್ಕಿ ಅವನಿಂದ ಸಿಗುವ ಸಹಾಯದ ಲೆಕ್ಕವನ್ನೂ ತೆಗೆದುಕೊಂಡಿದ್ದೆ. ನಾನು ಬೆಂಗಳೂರು ಸೇರಿದಾಗ ನನ್ನ ಬ್ಯಾಂಕ್ ಖಾತೆಯಲ್ಲಿ ಸುಮಾರು ೧೫೦೦ ರೂಪಾಯಿಗಳಿದ್ದವು. ಇನ್ಸ್ಟಿಟ್ಯೂಟಿನ ಅಡ್ಮಿಶನ್ ಫೀ, ಹಾಸ್ಟೆಲ್ ಫೀ ಅಡ್ವಾನ್ಸ್ ಫೀ ಮತ್ತು ನನ್ನ ಇತರ ಖರ್ಚುಗಳಿಗೆ ಸುಮಾರು ೧,೦೦೦ ರೂಪಾಯಿಗಳು ಬೇಕಾದವು. ಒಟ್ಟಿನಲ್ಲಿ ಸುಮಾರು ೫೦೦ ರೂಪಾಯಿ ಬ್ಯಾಂಕ್ ಖಾತೆಯಲ್ಲಿಟ್ಟುಕೊಂಡು ನಾನು ಹಾಸ್ಟೆಲ್ ಜೀವನ ಪ್ರಾರಂಭಿಸಿದೆ. ನಾನು ನನ್ನ ಕುಟುಂಬದಿಂದ ಯಾವುದೇ ಹಣದ ಸಹಾಯ ನಿರೀಕ್ಷಿಸುವಂತಿರಲಿಲ್ಲ. ಆದ್ದರಿಂದ ನನ್ನ ಸ್ಕಾಲರ್ಷಿಪ್ ಹಣ ತಿಂಗಳಿಗೆ ೧೦೦ ರೂಪಾಯಿ, ನನ್ನ ಮ್ಯಾಥಮ್ಯಾಟಿಕ್ಸ್ ಲೆಕ್ಚರರ್ ಎನ್.ಆರ್.ಭಟ್ ಅವರು ಭರವಸೆ ಇತ್ತ ತಿಂಗಳ ಕೊಡುಗೆ, ಮಣಿಪಾಲ್ ಅಕಾಡೆಮಿಯಿಂದ ಫೀ ಸಹಾಯ ಮತ್ತು ಪುಟ್ಟಣ್ಣನ ಸಂಬಳದಿಂದ ಸಹಾಯ ಇವುಗಳನ್ನು ಅವಲಂಭಿಸಿ ನನ್ನ ವಿದ್ಯಾಭ್ಯಾಸ ಮುಂದುವರಿಯ ಬೇಕಿತ್ತು.

ಇನ್ಸ್ಟಿಟ್ಯೂಟಿನಲ್ಲಿ ನನ್ನ ಮೊದಲ ದಿನ

ಇನ್ಸ್ಟಿಟ್ಯೂಟಿನಲ್ಲಿ ನನ್ನ ಮೊದಲ ದಿನ ತುಂಬಾ ಸಡಗರದ ದಿನವಾಗಿತ್ತು. ಇನ್ಸ್ಟಿಟ್ಯೂಟ್ ವರ್ಷ  ಹೊಸದಾಗಿ ಸೇರಿದ ವಿದ್ಯಾರ್ಥಿಗಳಿಗೆ ಅಲ್ಲಿನ ಪರಿಚಯ ಮಾಡಿಸಲು ತುಂಬಾ ಉತ್ತಮ ವ್ಯವಸ್ಥೆ ಮಾಡಿತ್ತು. ಮೊದಲಿಗೆ ನಮಗೆ ನಮ್ಮ ಮೆಟಲರ್ಜಿ ಡಿಪಾರ್ಟ್ಮೆಂಟಿನ ಎಲ್ಲಾ ಅಧ್ಯಾಪಕರನ್ನು ಪರಿಚಯ ಮಾಡಿಸಲಾಯಿತು. ಆಗ ಡಿಪಾರ್ಟ್ಮೆಂಟ್ ಮುಖ್ಯಸ್ಥರಾದ ಕೃಷ್ಣನ್ ಅವರು ಬರ್ಮಿಂಗ್ ಹ್ಯಾಮ್  ಯೂನಿವೆರ್ಸಿಟಿಯಲ್ಲಿ ಪಿಹೆಚ್.ಡಿ. ಡಿಗ್ರಿ ಪಡೆದಿದ್ದರು. ಅವರು ಶೀಘ್ರದಲ್ಲೇ ನಿವೃತ್ತರಾಗಲಿದ್ದು ಅವರ ಸ್ಥಾನಕ್ಕೆ ಅಬ್ರಹಾಂ ಅವರು ನೇಮಕವಾಗಲಿದ್ದರು. ಬನಾರಸ್ ಹಿಂದೂ ಯೂನಿವೆರ್ಸಿಟಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದ ಅಬ್ರಹಾಂ ಅವರು ಇನ್ಸ್ಟಿಟ್ಯೂಟಿನಲ್ಲಿ ತುಂಬಾ ಹೆಸರು ಪಡೆದ ಪ್ರೊಫೆಸರ್ ಆಗಿದ್ದರು. ಇನ್ಸ್ಟಿಟ್ಯೂಟಿನ ಗ್ರಂಥಾಲಯ ತುಂಬಾ ಪ್ರಸಿದ್ದಿ ಪಡೆದಿತ್ತು. ಅದನ್ನು ಹಗಲು ಮತ್ತು ರಾತ್ರಿ ೨೪ ಗಂಟೆಗಳೂ ತೆರೆದಿಡಲಾಗುತ್ತಿತ್ತು. ಅಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯವಾದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ದೇಶವಿದೇಶಗಳಿಂದ ಸಂಗ್ರಹಿಸಿ ಇಡಲಾಗಿತ್ತು. ನಮ್ಮನ್ನು ಅಲ್ಲಿನ ಗ್ರಂಥಪಾಲಕರಿಗೆ ಪರಿಚಯ ಮಾಡಿಸಲಾಯಿತು. ನಂತರ ನಮ್ಮನ್ನು ಇನ್ಸ್ಟಿಟ್ಯೂಟಿನ ರಿಜಿಸ್ಟ್ರಾರ್ ಆಗಿದ್ದ ವೈದ್ಯನಾಥನ್ ಅವರಿಗೆ ಪರಿಚಯ ಮಾಡಿಸಲಾಯಿತು. ರಿಜಿಸ್ಟ್ರಾರ್ ಹುದ್ದೆಯು ಅತ್ಯಂತ ಶಕ್ತಿಯುತ ಹುದ್ದೆಯಾಗಿದ್ದು ಸಂಪೂರ್ಣ ಇನ್ಸ್ಟಿಟ್ಯೂಟಿನ ಆಡಳಿತವು ಅವರ ವ್ಯಾಪ್ತಿಯಲ್ಲಿತ್ತು. ದಿನದ ಅಂತ್ಯದಲ್ಲಿ ನಮ್ಮನ್ನು ಇನ್ಸ್ಟಿಟ್ಯೂಟಿನ ನಿರ್ದೇಶಕರಾದ ಡಾಕ್ಟರ್ ಸತೀಶ್ ಧಾವನ್ ಅವರಿಗೆ ಪರಿಚಯ ಮಾಡಿಸಲಾಯಿತು. ಡಾಕ್ಟರ್ ಧಾವನ್ ಅವರು ತುಂಬಾ ವಿನಯದಿಂದ ಪ್ರತಿ ವಿದ್ಯಾರ್ಥಿಯ ಪರಿಚಯ ಮಾಡಿಕೊಂಡು ತುಂಬಾ ಸಮಯವನ್ನು ನಮ್ಮೊಡನೆ ಕಳೆದದ್ದು ನಾವೆಂದೂ ಮರೆಯದ ಅನುಭವವಾಗಿತ್ತು.

ನನಗೆ ಕೊಠಡಿಯ ಅಲಾಟ್ಮೆಂಟ್

ನನಗೆ ಆಂಧ್ರ ಪ್ರದೇಶದ ಸುಬ್ಬರಾವ್ ಎಂಬ ಹಿರಿಯ ವಿದ್ಯಾರ್ಥಿ ಇದ್ದ ಕೊಠಡಿಯನ್ನು ನೀಡಲಾಯಿತು. ಸುಬ್ಬರಾವ್ ಇಂಟರ್ನಲ್ ಕಂಬಶ್ಚನ್ ಇಂಜಿನಿಯರಿಂಗ್ ವಿಭಾಗದಲ್ಲಿ ಫೈನಲ್ ವರ್ಷದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಯಾಗಿದ್ದರು. ಅಲ್ಲಿಯವರೆಗೆ ಒಂಟಿಯಾಗಿ ರೂಮಿನಲ್ಲಿದ್ದ ಅವರಿಗೆ ನನಗೂ ಅದೇ ರೂಮನ್ನು ನೀಡಿರುವುದು ಏನೂ ಇಷ್ಟವಾಗಲಿಲ್ಲ. ಅವರು ವಿಷಯದಲ್ಲಿ ವಾರ್ಡನ್ ಅವರೊಡನೆ ಮಾತನಾಡುವುದಾಗಿ ತಿಳಿಸಿದರು. ನನಗೆ ಮೊದಲು ಅವರ ಸಮಸ್ಯೆ ಏನೆಂದು ಗೊತ್ತಾಗಲಿಲ್ಲ. ಆದರೆ ಅವರು ನನಗೆ ವೈಯಕ್ತಿಕವಾಗಿ ಏನೂ ತಪ್ಪಾಗಿ ತಿಳಿದುಕೊಳ್ಳಬಾರದೆಂದು ಹೇಳಿದರು. ಅವರ ಪ್ರಕಾರ ಹಿರಿಯ ವಿದ್ಯಾರ್ಥಿಯಾದ ಅವರಿಗೆ ಒಂದು ರೂಮಿನಲ್ಲಿ ಒಂಟಿಯಾಗಿ ಇರುವ ಅವಕಾಶಕ್ಕೆ ಅರ್ಹತೆ ಇತ್ತಂತೆ. ಅದಕ್ಕಾಗಿ ಅವರು ಆಗಲೇ ತಮ್ಮ ಅರ್ಜಿ ಸಲ್ಲಿಸಿದ್ದರಂತೆ.

ಆಮೇಲೆ ವಾರ್ಡನ್ ಅವರು ಸುಬ್ಬರಾವ್ ಹತ್ತಿರ ಸಧ್ಯಕ್ಕೆ ಮಾತ್ರ ನಾನು ಅವರ ರೂಮಿನಲ್ಲಿ ಇರಬೇಕೆಂದೂ, ಮುಂದೆ ನನ್ನನ್ನು ಬೇರೆ ರೂಮಿಗೆ ಕಳಿಸಿ ಅವರಿಗೆ ಸಿಂಗಲ್ ರೂಮ್ ಅನುಕೂಲ ಮಾಡಿಕೊಡಲಾಗುವುದೆಂದೂ ತಿಳಿಸಿದರು. ಅವರಿಂದ ಭರವಸೆ ದೊರೆತ ಮೇಲೆ ಸುಬ್ಬರಾವ್ ನನ್ನೊಡನೆ ತುಂಬಾ ಆತ್ಮೀಯತೆಯಿಂದ ನಡೆದುಕೊಂಡರು. ಮುಂದೆ ನಾನು ಬೇರೆ ರೂಮಿಗೆ ಹೋಗುವವರೆಗೆ ಅವರು ನನ್ನನ್ನು ತಮ್ಮನಂತೆಯೇ ನೋಡಿಕೊಂಡರು. ಅವರಿಂದ ನಾನು ಇನ್ಸ್ಟಿಟ್ಯೂಟ್ ಮತ್ತು ಹಾಸ್ಟೆಲಿನ ಬಗ್ಗೆ ಎಷ್ಟೋ ವಿಷಯಗಳನ್ನು ತಿಳಿದುಕೊಂಡೆ. ಸುಬ್ಬರಾವ್ ಅವರು ಆಂಧ್ರದ ಕಡಲತೀರದ ಒಂದು ಗೌರವಾನ್ವಿತ ಕುಟುಂಬದಿಂದ ಬಂದವರಾಗಿದ್ದರು. ಅವರು ಕ್ರಮೇಣ ನನ್ನನ್ನು ಎಷ್ಟು ಹಚ್ಚಿಕೊಂಡರೆಂದರೆ ನಾನು ಕೊನೆಗೆ ಅವರ ರೂಮನ್ನು ಬಿಟ್ಟು ಬೇರೆ ರೂಮಿಗೆ ಹೋಗುವಾಗ ಅವರ ಕಣ್ಣುಗಳು ಒದ್ದೆಯಾದುದನ್ನು ಕಂಡೆ. ನನಗೂ ಅಷ್ಟೇ ಸಂಕಟವಾಯಿತು.

ನನ್ನ ಸಿಂಡಿಕೇಟ್ ಬ್ಯಾಂಕ್ ಖಾತೆ

ನನಗೆ ನನ್ನ ಸಿಂಡಿಕೇಟ್ ಬ್ಯಾಂಕ್ ಖಾತೆಯನ್ನು ಶೃಂಗೇರಿಯಿಂದ ಬೆಂಗಳೂರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಆಗ ಸಿಂಡಿಕೇಟ್ ಬ್ಯಾಂಕಿನ ಶಾಖೆ ಮಲ್ಲೇಶ್ವರಂನಲ್ಲಿ ಇರಲಿಲ್ಲ. ಇನ್ಸ್ಟಿಟ್ಯೂಟಿನ ಹೆಚ್ಚಿನ ವಿದ್ಯಾರ್ಥಿಗಳು ಕೆನರಾ ಬ್ಯಾಂಕ್ ಅಥವಾ ಇಂಡಿಯನ್ ಬ್ಯಾಂಕಿನ ಮಲ್ಲೇಶ್ವರಂ ಶಾಖೆಯಲ್ಲಿ ಖಾತೆಯನ್ನು ಇಟ್ಟುಕೊಂಡಿದ್ದರು. ನನಗೆ ಹತ್ತಿರವಿದ್ದ ಸಿಂಡಿಕೇಟ್ ಬ್ಯಾಂಕ್ ಶಾಖೆಯೆಂದರೆ ಶೇಷಾದ್ರಿಪುರಂ ಶಾಖೆಯಾಗಿತ್ತು. ನಾನು ಒಂದು ದಿನ ನೇರವಾಗಿ ಶಾಖೆಗೆ ಹೋದೆ. ಸಿಂಡಿಕೇಟ್ ಬ್ಯಾಂಕ್  ಶಾಖೆಯನ್ನು ಬೆಂಗಳೂರಿನಲ್ಲಿ ಒಂದು ವಿಶೇಷ ಶಾಖೆಯನ್ನಾಗಿ ತೆರೆದಿತ್ತು. ಅದರಲ್ಲಿ ಕೆಲಸ  ಮಾಡುತ್ತಿರುವವರೆಲ್ಲಾ (ಮ್ಯಾನೇಜರ್ ಅವರೂ ಕೂಡಿ) ಸ್ತ್ರೀಯರೇ ಆಗಿದ್ದರು. ಮ್ಯಾನೇಜರ್ ಶ್ರೀಮತಿ ಪಡಿಯಾರ್ ಅವರು ಕಾಲದ ಮೊಟ್ಟ ಮೊದಲ ಲೇಡಿ ಬ್ಯಾಂಕ್ ಮ್ಯಾನೇಜರ್ ಗಳಲ್ಲಿ ಒಬ್ಬರಾಗಿದ್ದರಂತೆ. ನಾನು ನೇರವಾಗಿ ಪಡಿಯಾರ್ ಅವರ ಕ್ಯಾಬಿನ್ ಒಳಗೆ ನನ್ನ ಶೃಂಗೇರಿ ಸಿಂಡಿಕೇಟ್ ಬ್ಯಾಂಕ್ ಖಾತೆಯ ಪಾಸ್ ಬುಕ್ ಮತ್ತು ಚೆಕ್ ಬುಕ್ ಹಿಡಿದುಕೊಂಡು ಹೋದೆ.

ಪಡಿಯಾರ್ ಅವರು ನನ್ನನ್ನು ತುಂಬಾ ಆದರದಿಂದ ಕಂಡು ಕುಳಿತುಕೊಳ್ಳುವಂತೆ ಹೇಳಿ ನನ್ನ ಪಾಸ್ ಬುಕ್ ಮತ್ತು ಚೆಕ್ ಬುಕ್ಕುಗಳನ್ನು ತೆಗೆದುಕೊಂಡರು. ನಾನು ಇನ್ಸ್ಟಿಟ್ಯೂಟ್ ವಿದ್ಯಾರ್ಥಿಯೆಂದು ತಿಳಿದು ಅವರಿಗೆ ತುಂಬಾ ಸಂತೋಷವಾಯಿತು. ಇನ್ಸ್ಟಿಟ್ಯೂಟಿನ ಬಗ್ಗೆ ನನ್ನಿಂದ ಅನೇಕ ವಿಚಾರಗಳನ್ನು ತಿಳಿದುಕೊಂಡು ಅಲ್ಲಿನ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಶಾಖೆಯಲ್ಲೇ ಖಾತೆಗಳನ್ನು ತೆರೆಯುವಂತೆ   ಮಾಡುವುದು ತಮ್ಮ ಉದ್ದೇಶವೆಂದು ತಿಳಿಸಿದರು. ಅವರೇ ಸ್ವತಃ ನನ್ನ ಖಾತೆಯನ್ನು ಬೆಂಗಳೂರಿಗೆ ಟ್ರಾನ್ಸ್ಫರ್ ಮಾಡಲು ಒಂದು ಅರ್ಜಿಗೆ ಸಹಿ ಹಾಕಿಸಿಕೊಂಡರು. ಕೇವಲ ಒಂದು ವಾರದಲ್ಲಿ ನನ್ನ ಖಾತೆ ಟ್ರಾನ್ಸ್ಫರ್ ಆಗಿ ನನಗೆ ಹೊಸ ಪಾಸ್ ಬುಕ್ ಮತ್ತು ಚೆಕ್ ಬುಕ್ ದೊರೆತವು.

ಬ್ಯಾಂಕಿನ ವಿಚಿತ್ರ ಗ್ರಾಹಕ ವರ್ಗ

ನಾನು  ಮೊದಲೇ ಹೇಳಿದಂತೆ ಶೇಷಾದ್ರಿಪುರಂ ಶಾಖೆ ಸಂಪೂರ್ಣ ಸ್ತ್ರೀಯರೇ ಕೆಲಸ ಮಾಡುತ್ತಿದ್ದ ಶಾಖೆಯಾಗಿತ್ತು. ಕಾಲದಲ್ಲಿ ಬೆಂಗಳೂರಿನಲ್ಲಿ ಕೂಡ ಯಾವುದೇ ಸಂಸ್ಥೆಗಳಲ್ಲಿ ಸ್ತ್ರೀಯರು ಹೆಚ್ಚಾಗಿ ಕೆಲಸ ಮಾಡುತ್ತಿರಲಿಲ್ಲ. ನಮ್ಮ ಮೆಟಲರ್ಜಿ ಡಿಪಾರ್ಟ್ಮೆಂಟಿನ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿನಿಯೂ ಇರಲಿಲ್ಲ. ಆದರೆ ಎಲ್ಕ್ಟ್ರಿಕಲ್ ಕಮ್ಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿನಿಯರಿದ್ದರು. ಸಿಂಡಿಕೇಟ್ ಬ್ಯಾಂಕ್ ತನ್ನ ಶಾಖೆಯಲ್ಲಿ ಚಿಕ್ಕ ವಯಸ್ಸಿನ ಸುಂದರ ತರುಣಿಯರನ್ನು ನೌಕರಿಗೆ ತೆಗೆದುಕೊಂಡಿತ್ತು. ತರುಣಿಯರು ನಗೆಮುಖದಿಂದ ತಮ್ಮ ಗ್ರಾಹಕರಿಗೆ ಶೀಘ್ರ ಸೇವೆಯನ್ನು ನೀಡುತ್ತಿದ್ದರು. ಪ್ರಾಯಶಃ ಇಂದು ನೀವು ಅದನ್ನು ನಂಬಲಾರಿರಿ. ತರುಣಿಯರ ಶೀಘ್ರ ಸೇವೆ ಹೆಚ್ಚಿನ ಗ್ರಾಹಕರಿಗೆ ಇಷ್ಟವಾಗಲೇ ಇಲ್ಲವಂತೆ! ಅವರೆಲ್ಲಾ ಪುರುಷ ಗ್ರಾಹಕರೇ ಆಗಿದ್ದರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಏಕೆಂದರೆ ಅವರಿಗೆ ಬ್ಯಾಂಕಿನ ಸೋಫಾದ ಮೇಲೆ ಆರಾಮವಾಗಿ ಕುಳಿತು ಶಾಖೆಯಲ್ಲಿ ಕಾರ್ಯನಿರತರಾಗಿದ್ದ ಸುಂದರ ತರುಣಿಯರನ್ನು ಆದಷ್ಟು ಹೊತ್ತು ನೋಡುವುದರಲ್ಲೇ ಹೆಚ್ಚು ಆಸಕ್ತಿ ಇರುತ್ತಿತ್ತಂತೆ!

ನನಗೆ ವಿಷಯದ ಬಗ್ಗೆ ಏನೂ ಅರಿವಿರಲಿಲ್ಲ. ಆದರೆ ನಾನು ಹೊಸ ಪಾಸ್ ಬುಕ್ ಮತ್ತು ಚೆಕ್ ಬುಕ್  ಪಡೆಯಲು ಮ್ಯಾನೇಜರ್ ಅವರ ಕ್ಯಾಬಿನ್ ಒಳಗೆ ಕುಳಿತಾಗಲೇ ನಡೆದ ಒಂದು ಘಟನೆ ವಿಷಯವನ್ನು ಸಾಬೀತುಗೊಳಿಸಿಬಿಟ್ಟಿತು. ಆಗ ಬ್ಯಾಂಕಿನ ಒಬ್ಬಳು ಆಫೀಸರ್ ಕ್ಯಾಬಿನ್ ಒಳಗೆ ಪ್ರವೇಶಿಸಿ ಮ್ಯಾನೇಜರ್ ಅವರ ಹತ್ತಿರ ಒಬ್ಬ ಮಹಾನುಭಾವ ಗ್ರಾಹಕ ತನ್ನ ಬ್ಯಾಂಕಿನ ಕೆಲಸ ಮುಗಿದುಹೋದ ಎಷ್ಟೋ ಸಮಯದ ಮೇಲೂ ಇನ್ನೂ ಸೋಫಾದ ಮೇಲೆ ಕುಳಿತು ಕೌಂಟರಿನೊಳಗೆ ಕೆಲಸ ಮಾಡುತ್ತಿದ್ದ ತರುಣಿಯರತ್ತ ದೃಷ್ಟಿ ಬೀರುತ್ತಿರುವುದಾಗಿ ವರದಿ ಮಾಡಿದಳು ಕಾಲದಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಯಾವುದೇ ವಾಚ್ ಮ್ಯಾನ್ ಅಥವಾ ಸೆಕ್ಯುರಿಟಿ ಮ್ಯಾನ್ ಇರುತ್ತಿರಲಿಲ್ಲ. ಆದ್ದರಿಂದ ಪಡಿಯಾರ್ ಅವರು ತಾವೇ ಕ್ಯಾಬಿನ್ ಹೊರಗೆ ಹೋಗಿ ಗ್ರಾಹಕನಿಗೆ ತನ್ನ ಕೆಲಸ ಮುಗಿದಿದ್ದರಿಂದ ಜಾಗ ಖಾಲಿ ಮಾಡುವಂತೆ ಹೇಳಿದರು. ಆದರೆ ಮಹಾನುಭಾವ ಅವರ ಮಾತಿನತ್ತ ಲಕ್ಷವೇ ತೋರದೇ ಕೌಂಟರಿನತ್ತ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುತ್ತಲೇ ಇದ್ದ! ನಿರ್ವಾಹವಿಲ್ಲದೇ ಮ್ಯಾನೇಜರ್ ಅವರು ಇನ್ನೊಬ್ಬ ದೃಢಕಾಯ ಗ್ರಾಹಕನ ಸಹಾಯ ಪಡೆದು ಮಹಾನುಭಾವನನ್ನು ಹೊರತಳ್ಳಬೇಕಾಯಿತು! ಮ್ಯಾನೇಜರ್ ಅವರು ನನ್ನ ಹತ್ತಿರ ಇಂತಹ ಪ್ರಸಂಗ ಅವರಿಗೇನು ಹೊಸತಲ್ಲವೆಂದೂ ಹೇಳಿದರು! (ಆಮೇಲೆ ಎಷ್ಟೋ ವರ್ಷಗಳ ನಂತರ ಇದೇ ಶೇಷಾದ್ರಿಪುರಂನಲ್ಲಿ ಕೆನರಾ ಬ್ಯಾಂಕಿನ ಶಾಖೆಯ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುವ ಅವಕಾಶ ನನಗೆ  ಬಂತು. ಆಗ ನನಗೆ ಪ್ರಸಂಗದ ನೆನಪು ಮರುಕಳಿಸಿತ್ತು)

----ಮುಂದುವರಿಯುವುದು ---

ಫೋಟೋದಲ್ಲಿರುವವರು ಡಾಕ್ಟರ್ ಸತೀಶ್ ಧಾವನ್ ಅವರು