Saturday, December 17, 2016

ನನ್ನ ಬಾಲ್ಯ


ಅಧ್ಯಾಯ
ನಮ್ಮೂರಿನ ಇತಿಹಾಸ
ನಮ್ಮೂರು ಆಗಿನ ಕಾಲದ ಮಲೆನಾಡಿನಲ್ಲೇ ಒಂದು ಅತ್ಯಂತ ಸುಂದರವಾದ ಊರಾಗಿತ್ತೆಂದರೆ ಅತಿಶಯೋಕ್ತಿಯಲ್ಲ. ಖಂಡಿತವಾಗಿಯೂ ನೂರಾರು ವರ್ಷಗಳ ಹಿಂದೆ ಯಾವನೋ ದೊಡ್ಡ ಇಂಜಿನಿಯರ್ ಒಂದು ಸ್ಕೆಚ್ ಹಾಕಿ ನಮ್ಮೂರನ್ನು ಒಂದು ಸುಂದರ ಕಣಿವೆಯಲ್ಲಿ ಕೆರೆ ಕಟ್ಟೆಗಳ ಹಾಗೂ ಅಡಿಕೆ ಮತ್ತು ಬಾಳೆ ತೋಟಗಳ ನಡುವೆ ತಯಾರು ಮಾಡಿರಬೇಕು. ತೋಟಗಳು ನಮ್ಮ ಗ್ರಾಮದ ಹೆಸರಾದ ಬೆಳವಿನಕೊಡಿಗೆ ಎಂಬ ಮನೆಯಿಂದ ಶುರುವಾಗಿ ಒಂದು ಕಾಲದಲ್ಲಿ ಪುರದಮನೆ ಎಂದು ಪ್ರಸಿದ್ಧವಾಗಿದ್ದ ಮನೆಯ ಮುಂದಕ್ಕೂ  ಸ್ವಲ್ಪ ದೂರಕ್ಕೆ ಹರಡಿದ್ದವು. ತೋಟದ ಇನ್ನೊಂದು ತುದಿಯಲ್ಲಿ ನಾವು ಚಿಕ್ಕಂದಿನಲ್ಲಿ ಕಂಡಂತೆ ಗೋಳಿಕಟ್ಟೆ ಎಂಬ ಮನೆಯನ್ನು ಸರಿ  ಸುಮಾರು ೧೯೫೫ ನೇ ಇಸವಿಯಲ್ಲಿ ಹೊಸದಾಗಿ ಕಟ್ಟಲಾಯಿತು. ತೋಟದ ಸಾಲಿನ ಮಧ್ಯದಲ್ಲಿ ಅಲ್ಲಲ್ಲಿ ನಡುವಿನಮನೆ, ಸಂಪಿಗೆಕೊಳಲು, ಅಡೇಖಂಡಿ  ಮತ್ತು ಮೊದಲಮನೆ ಎಂಬ ಮನೆಗಳು ಇದ್ದು ಅಲ್ಲಿ ಬೇರೆಬೇರೆ ಸಂಸಾರಗಳು ವಾಸಿಸುತ್ತಿದ್ದವು. ಊರಿನ ಮೂರು ಭಾಗದಲ್ಲೂ ಬೆಟ್ಟ ಗುಡ್ಡಗಳಿದ್ದು ಒಂದು ಬೆಟ್ಟದ ಕೆಳಭಾಗದಲ್ಲಿ ಪವಿತ್ರವಾದ ತುಂಗಾ ನದಿ ಹರಿಯುತ್ತಿತ್ತು.  ಊರಿನ ಇನ್ನೊಂದು ತುದಿಯಲ್ಲಿ ಬತ್ತದ ಗದ್ದೆಗಳಿದ್ದವು. ಮಕ್ಕಿಗದ್ದೆಯೆಂದು ಕರೆಯುತ್ತಿದ್ದ ಗದ್ದೆಯ ಮುಂದೆ ಊರಿಗೆ ಮುಖ್ಯವಾದ ಗಣಪತಿ ಕಟ್ಟೆ (ದೇವಸ್ಥಾನ) ಇತ್ತು. ನಮ್ಮ ಊರಿನ ಇತರ ಭಾಗಗಳೆಂದರೆ ಹೊಸಳ್ಳಿ, ಬಾಳೆಹಿತ್ಲು, ಕನಮಡ್ಲು, ಅರದಳ್ಳಿ, ಮೇಲಿನಕೊಡಿಗೆ, ಚಿಟ್ಟೆಮಕ್ಕಿ, ಬಾಳೆಹಕ್ಲು, ಕೆಳಕೊಡಿಗೆ, ಹುರುಳಿಹಕ್ಲು, ಇತ್ಯಾದಿ

ಮಕ್ಕಿಗದ್ದೆಯ ಅಂಚಿನಲ್ಲಿದ್ದ ಒಂದು ಜೈನ ಶಾಸನ ಒಂದು ಕಾಲದಲ್ಲಿ ನಮ್ಮೂರಿನಲ್ಲಿ ಜೈನರು ವಾಸಿಸುತ್ತಿದ್ದರೆಂದು ಸೂಚಿಸುತ್ತಿತ್ತು. ಪ್ರಾಯಶಃ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದಮೇಲೆ ಹೆಬ್ಬಾರರೆಂದು ಕರೆದುಕೊಳ್ಳುವ ಸ್ಮಾರ್ತ ಸಂಪ್ರದಾಯದ  ನಮ್ಮ ಜನಾಂಗ ಮಲೆನಾಡಿಗೆ ವಲಸೆ ಬಂದು ಹಾಗೆಯೇ ನಮ್ಮೂರಿಗೂ ಪ್ರವೇಶಿಸಿ ಅಡಿಕೆ ಮತ್ತು ಬತ್ತದ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರಬೇಕು. ಆದರೆ ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧವಾಗಿ ವಾರ್ಷಿಕ ಜಾತ್ರೆ ಮತ್ತು ತೇರು ನಡೆಯುತ್ತಿದ್ದ ನಮ್ಮೂರ  ದೇವಸ್ಥಾನ ಯಾವುದೊ ಕಾರಣಕ್ಕೆ ತನ್ನ ಹಿರಿಮೆಯನ್ನು ಕಳೆದುಕೊಂಡಿರಬೇಕು. ಅದಕ್ಕೆ ಸಾಕ್ಷಿಯಾಗಿ ನಾವು ಚಿಕ್ಕಂದಿನಲ್ಲಿ ಕಂಡಂತೆ ದೇವಸ್ಥಾನದ ಪಕ್ಕದಲ್ಲಿದ್ದ ಬಾವಿ  ಪಾಳುಬಿದ್ದಿತ್ತು. ದೇವಸ್ಥಾನದ ಇನ್ನೊಂದು ಬದಿಯಲ್ಲಿ ತುಂಬಾ ಹಳೆಯ  ಹಾಗೂ ಸುಂದರವಾದ ಮರದ ತೇರೊಂದು ಮುರಿದು ಬಿದ್ದಿತ್ತು. ಅದರಲ್ಲಿದ್ದ ಎಷ್ಟೋ ಸುಂದರವಾದ ಪ್ರಾಣಿ ಪಕ್ಷಿಗಳ ಗೊಂಬೆಗಳು ಹಲವರ ಮನೆಯಲ್ಲಿ ಮಕ್ಕಳ ಆಟದ ಸಾಮಾನುಗಳಾಗಿ ಗೋಚರಿಸುತ್ತಿದ್ದವು.

ಸರಿ ಸುಮಾರು ೧೯೬೭ನೇ ಇಸವಿಯಲ್ಲಿ ಶೃಂಗೇರಿ JCBM ಕಾಲೇಜಿನಿಂದ ಪ್ರೊಫೆಸರ್ ಸುಂದರ್ (History Professor) ಅವರ ನೇತೃತ್ವದಲ್ಲಿ ಒಂದು ಪುರಾತತ್ವ ಪರಿಶೋಧನಾ ತಂಡ ನಮ್ಮೂರಿಗೆ ಆಗಮಿಸಿತ್ತು. ತಂಡ ನಮ್ಮೂರಿನ ಗಣಪತಿ ದೇವಸ್ಥಾನದ ಸ್ವಲ್ಪ ಮುಂದಿನ ಜಾಗದಲ್ಲಿ ಉತ್ಕತನ  ಮಾಡಿ ಸಂಶೋಧನೆ ನಡೆಸಿತು. ಹಾಗೂ ಒಂದು ವರದಿಯನ್ನು ತಯಾರು ಮಾಡಿತು. ವರದಿ  ಅಂದಿನ ಪ್ರಜಾವಾಣಿ ಪತ್ರಿಕೆಯ ಮುಂದಿನ ಪುಟದಲ್ಲೇ ಚಿಕ್ಕ ಸಮಾಚಾರ ರೂಪದಲ್ಲಿ ಪ್ರಕಟವಾಗಿತ್ತು. ಅದರ ಪ್ರಕಾರ ನಮ್ಮೂರಿಗೆ ಪುರಾತನ ಸಂಸ್ಕೃತಿ ಹಾಗೂ ಚರಿತ್ರೆ ಇತ್ತು. ಆದರೆ ಸಂಶೋಧನೆ ಅಲ್ಲಿಗೇ ಮುಕ್ತಾಯಗೊಂಡಿದ್ದು ನಮ್ಮ ದುರಾದೃಷ್ಟ

ಊರಿನ ಒಂದು ಭಾಗದಲ್ಲಿದ್ದ ಬೆಟ್ಟದಮೇಲೆ ಓರಣಕಲ್ ಎಂಬ ದೊಡ್ಡ ಗುಹೆ ಇತ್ತು. ನಾವು ಚಿಕ್ಕವರಾಗಿದ್ದಾಗ ಪ್ರತಿ ವರ್ಷವೂ ಗುಹೆಗೆ ಹುಲಿಗಳು ಬೇರೆ ಬೇರೆ ಕಾಡಿನಿಂದ ಬಂದು ಕ್ಯಾಂಪ್ ಮಾಡುತ್ತಿದ್ದವು. ನಮ್ಮ ಎಷ್ಟೋ ಜಾನುವಾರುಗಳು ಹುಲಿಗಳಿಗೆ ಬಲಿಯಾಗುತ್ತಿದ್ದವು. ಬೆಟ್ಟದ ಕೆಳಭಾಗದಲ್ಲಿ ಹಾಗೂ  ತೋಟಗಳ ಕಣಿವೆಯ ಮೇಲ್ಭಾಗದಲ್ಲಿ ಒಂದು ಕಾಡುಕಲ್ಲುಗಳ ಕಟ್ಟಣೆಯ ಸಂದಿಯಿಂದ ನೀರು ದೊಡ್ಡದಾಗಿ ಹರಿದು ಬರುತ್ತಿತ್ತು. ನೀರಿಗೆ ಸ್ವಲ್ಪ ದೂರದಲ್ಲಿ ಒಂದು ಕೆರೆಕಟ್ಟಲಾಗಿದ್ದು ಅದಕ್ಕೆ ದೇವರಮನೆ ಕೆರೆ ಎಂದು ಕರೆಯಲಾಗುತ್ತಿತ್ತು. ಹಾಗೆ ಕರೆಯಲು ಒಂದು ವಿಶಿಷ್ಟ ಕಾರಣವಿತ್ತು.

ಕೆರೆಯ ಮೇಲ್ಭಾಗದಲ್ಲಿ ಹಾದು ಹೋಗುತ್ತಿದ್ದ ರಸ್ತೆಯ ಒಂದು ಪಕ್ಕದಲ್ಲಿ ನಾಗರ ಕಟ್ಟೆಯಿದ್ದರೆ ಇನ್ನೊಂದು ಪಕ್ಕದಲ್ಲಿ ಒಂದು ಕಲ್ಲಿನ ಪೀಠದ ಮೇಲೆ ಬ್ರಹ್ಮನ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಕೆರೆಯ ಇನ್ನೊಂದು ದಂಡೆಯ ಬದಿಯಲ್ಲಿ ಚೌಡೇಶ್ವರಿಯ ವಾಸಸ್ಥಾನವಿತ್ತು. ಬ್ರಹ್ಮನ ಮೂರ್ತಿಯಿದ್ದ ಜಾಗಕ್ಕೆ ಬ್ರಹ್ಮನಬನ ಎಂದೇ ಕರೆಯಲಾಗುತ್ತಿತ್ತು. ನಮಗೆ ತಿಳಿದಂತೆ ನಮ್ಮ ದೇಶದಲ್ಲಿ ರಾಜಸ್ಥಾನದ ಪುಷ್ಕರವೆಂಬ ಊರನ್ನು ಬಿಟ್ಟರೆ ಬೇರೆಲ್ಲ್ಲೂ ಬ್ರಹ್ಮನ ದೇವಸ್ಥಾನಗಳಿಲ್ಲ. ಅಲ್ಲೂ ಕೂಡ ಬ್ರಹ್ಮನಿಗೆ ಪೂಜೆ ಮಾಡುವುದಿಲ್ಲವಂತೆ. ಅದಕ್ಕೆ ಬ್ರಹ್ಮನ ಪತ್ನಿ ಸರಸ್ವತಿಯ ಶಾಪವೇ ಕಾರಣವಂತೆ. ಆದರೆ ಕಥೆ ಇಲ್ಲಿ ಅಪ್ರಸ್ತುತ. ಆದರೆ ನಮ್ಮೂರಿನಲ್ಲಿ ಬ್ರಹ್ಮನ ಮೂರ್ತಿ ಇದ್ದುದು ಮಾತ್ರವಲ್ಲ ಅದಕ್ಕೆ ಪೂಜೆ ಇಲ್ಲದಿದ್ದರೂ ಆಗಾಗ ಫಲಾರ್ಪಣೆ (ಹಣ್ಣು ನೈವೇದ್ಯ) ಮಾಡಲಾಗುತ್ತಿತ್ತು.
ನಮ್ಮೂರಿನ ವಿಶೇಷ ನೀರಾವರಿ ಯೋಜನೆಗಳು
ನಮ್ಮ ಊರಿನ ಒಂದೊಂದು ಮನೆಗೂ ವಿಶೇಷವಾದ ಕುಡಿಯುವ ನೀರಿನ ವ್ಯವಸ್ಥೆ  ಇತ್ತು. ಬೆಳವಿನಕೊಡಿಗೆ ಮನೆಗೆ ಒಂದು ಕೆರೆಯಿಂದ ನೀರು ಹರಿದು ಬರುತ್ತಿದ್ದರೆ ಸಂಪಿಗೆಕೊಳಲಿಗೆ ದೇವರಮನೆ ಕೆರೆಯಿಂದ ನೀರು ಬರುತ್ತಿತ್ತು. ನಡುವಿನಮನೆ ಸಮೀಪದಲ್ಲಿದ್ದ  ಒಂದು ಬಾವಿಯಿಂದ ನೀರು ಉಕ್ಕಿ ಅಡಿಕೆ ಮರದ ದೋಣಿಯ ಮೂಲಕ ಮನೆಯ ಬಚ್ಚಲಿಗೆ ಬಂದು ಬೀಳ್ಳುತ್ತಿದ್ದಲ್ಲದೇ ಹೆಚ್ಚಾದ ನೀರು ಮನೆಯ ಕೆಳಗಿದ್ದ ಕೆರೆಗೆ ಹರಿದು ಹೋಗುತ್ತಿತ್ತು. ಇನ್ನು ಅಡೇಖಂಡಿ ಮತ್ತು ಮೊದಲಮನೆಗಳಿಗೆ ಒರತೆಯ ನೀರು ಧಾರಾಳವಾಗಿ ಹರಿದು ಬರುತ್ತಿತ್ತು.

ನಾವು ನೋಡಿದಂತೆ ನಮ್ಮೂರೆಲ್ಲಾ ಅಡಿಕೆ ಬಾಳೆ ತೋಟಗಳಿಂದ ತುಂಬಿದ್ದರೂ ಒಂದು ಕಾಲದಲ್ಲಿ ಬೇರೆಬೇರೆ ಬೆಳೆಗಳನ್ನೂ ಬೆಳೆಯುತ್ತಿದ್ದಿರಬೇಕು. ಏಕೆಂದರೆ ನಮ್ಮ ಮನೆಯ ಮೇಲ್ಭಾಗದಲ್ಲಿದ್ದ ತೋಟಕ್ಕೆ ಕಬ್ಬಿನಹಕ್ಲು ಎಂದು ಹೆಸರಿದ್ದರೆ ನಡುವಿನಮನೆಯ ಮುಂದಿದ್ದ ತೋಟಕ್ಕೆ ಶುಂಠಿಹಕ್ಲು ಎಂಬ ಹೆಸರಿತ್ತು. ತೋಟದ ಬೇರೆಬೇರೆ ಭಾಗಗಳಿಗೆ ಬೇರೆಬೇರೆ ಹೆಸರುಗಳು ರೂಡಿಯಲ್ಲಿದ್ದುವು. ಉದಾಹರಣೆಗೆ ಗುಡ್ಡೇತೋಟ, ಬಾವಿಕಂಡು, ಶೇಷನ ತೋಟ, ಪುಟ್ಟಕಂಡು, ಮುರುಗನಮನೆ ಕಂಡು,ಇತ್ಯಾದಿ.

ನಮ್ಮ ತೋಟದ ಕಣಿವೆ ಒಂದೇ ಮಟ್ಟದಲ್ಲಿರಲಿಲ್ಲ. ಹಾಗಾಗಿ ಅಡಿಕೆ ಹಾಗೂ ಬಾಳೆಗಿಡಗಳನ್ನು ವಿವಿದ ಮಟ್ಟದಲ್ಲಿ ನೆಟ್ಟು ಬೆಳೆಸಲಾಗಿತ್ತು. ಈ ರೀತಿ ಬೆಳೆಸಿದ ತೋಟದ ವಿವಿಧ ಭಾಗಗಳಿಗೆ ನೀರು ತಲುಪುವಂತೆ ಮಾಡುವುದು ದೊಡ್ಡ ಸಮಸ್ಯೆಯಾಗಿತ್ತು. ಆದರೆ ತೋಟದ ಮಧ್ಯದಲ್ಲಿ ಅಲ್ಲಲ್ಲಿದ್ದ ಕೆರೆಗಳಿಂದ ತೋಟದ ಎಲ್ಲ ಭಾಗಗಳಿಗೂ ನೀರು ತಲುಪುವ ವ್ಯವಸ್ಥೆಯಿತ್ತು. ಪ್ರತಿಯೊಂದು ಕೆರೆಯ ನೀರು ಕೂಡ ತೋಟದ ಮೂಲೆಮೂಲೆಗೂ ತಲುಪುವಂತೆ ಕಾಲುವೆಗಳನ್ನು ರಚಿಸಲಾಗಿತ್ತು. ಕೆರೆಗಳಿಗೆ ವಿಶಿಷ್ಟವಾದ ಹೆಸರುಗಳನ್ನು ಇಡಲಾಗಿತ್ತು. ಆದರೆ ಮೂಲ ಹೆಸರುಗಳು ಬಳಕೆಯಲ್ಲಿ ಬದಲಾಗುತ್ತ ಹೋಗಿ ಕೆಲವಕ್ಕೆ ಯಾವ ಅರ್ಥವೂ ಇಲ್ಲದಂತಾಗಿತ್ತು. ರೀತಿಯ ಕೆಲವು ಹೆಸರುಗಳೆಂದರೆ ಅತ್ರಣೆ ಕೆರೆ, ಕೊಣದಣೆ ಕೆರೆ, ನೂರ್ಲ್ ಪಾರ್ಲ್ ಕೆರೆ ಮತ್ತು ಕಪ್ರಣೆ ಕೆರೆ. ಬೇಸಿಗೆ ಕಾಲ  ಬಂದಾಗ ಎಲ್ಲಾ ಕೆರೆಗಳಿಗೂ ಕಟ್ಟೆ  ಕಟ್ಟಿ ನೀರನ್ನು ಸರದಿಯಮೇಲೆ ಬೇರೆಬೇರೆ ಮನೆಗಳಿಗೆ ಸೇರಿದ ತೋಟಗಳಿಗೆ ಬಿಡಲಾಗುತ್ತಿತ್ತು.

ಪ್ರತಿಮನೆಯ ತೋಟಕ್ಕೂ ಅದರ ವಿಸ್ತೀರ್ಣದ ಆಧಾರದ ಮೇಲೆ ಎಷ್ಟು ದಿನ ನೀರು ಬಿಡಬಹುದೆಂದು ಯಾವುದೋ ಕಾಲದಲ್ಲಿ ನಿಗದಿ ಮಾಡಲಾಗಿತ್ತು. ಮಳೆಗಾಲ ಬರುವ ಮುನ್ನ ಎಲ್ಲಾ ಕೆರೆಗಳ ಕಟ್ಟೆ ಒಡೆದು ನೀರನ್ನು ಹಳ್ಳಕ್ಕೆ ಬಿಡಲಾಗುತ್ತಿತ್ತು. ಹಳ್ಳ ಮುಂದೆ ಹರಿದು ಮಕ್ಕಿ ಗದ್ದೆಗೆ ಮಳೆಗಾಲದ ಬತ್ತದ ಬೆಳೆಗೆ ಉಪಯೋಗವಾಗುತ್ತಿತ್ತು.

 ನಾನು ಮೊದಲೇ ಹೇಳಿದಂತೆ ಯಾವನೋ ದೊಡ್ಡ ಇಂಜಿನಿಯರ್ ವಿಶಿಷ್ಟ ರೀತಿಯ ನೀರಾವರಿ ಯೋಜನೆಯನ್ನು ನಮ್ಮೂರಿಗೆ ಅಳವಡಿಸಿರಬೇಕು. ಏಕೆಂದರೆ  ಇಷ್ಟಲ್ಲದೇ ಮೊದಲಮನೆಯ ಮುಂದೆ ಹರಿಯುತ್ತಿದ್ದ ಒಂದು ಹಳ್ಳದಿಂದ  ಒಂದು ಕಾಲದಲ್ಲಿ ಪುರದಮನೆಯ ಮೇಲ್ಭಾಗದಲ್ಲಿದ್ದ ಬಸವನಮಕ್ಕಿ ಮತ್ತು ಬೂರನಮಕ್ಕಿ ಎಂಬ ಗದ್ದೆಗಳಿಗೆ ನೀರು ಹೋಗುವಂತೆ ಕಾಲುವೆ ಮಾಡಲಾಗಿತ್ತುಪ್ರಕೃತಿಯ ವಿಕೋಪಕ್ಕೆ ಸಿಲುಕಿ ಕಾಲುವೆಯ ಅರ್ಧಭಾಗ ಕುಸಿದುಹೋಗಿ ನಾಶವಾಗಿದ್ದುದು ನಮ್ಮ ಕಣ್ಣಿಗೆ ಬೀಳುತ್ತಿತ್ತು. ನೀರಿನ ಆಧಾರ ತಪ್ಪಿದ್ದರಿಂದ ಎರಡು ಗದ್ದೆಗಳೂ ಶಾಶ್ವತವಾಗಿ ಹಾಳು  ಬಿದ್ದಿದ್ದವು.

ಇನ್ನೊಂದು ಅಪೂರ್ಣವಾದ ಮಹಾ ನೀರಾವರಿ ಯೋಜನೆ ನಮ್ಮೂರಿನ ಕಿತ್ಳೆಕಟ್ಟೆ ಗುಡ್ಡದ ಮೇಲೆ ಕಣ್ಣಿಗೆ ಬೀಳುತ್ತಿತ್ತು. ಅದೊಂದು ರೀತಿಯ ಭಗೀರಥ ಯೋಜನೆಯೇ ಅನ್ನಬಹುದು. ಯೋಜನೆಯಂತೆ ಗುಡ್ಡದ ಒಂದು ತಲೆಭಾಗದಿಂದ ಇಳಿಜಾರಿನಲ್ಲಿ ಬೇರೆಕಡೆ ಹರಿದು  ಹೋಗುತ್ತಿದ್ದ ಹಳ್ಳವನ್ನು ನಮ್ಮೂರಿನ ಕಡೆ ತಿರುಗಿಸಿ ಹರಿಸುವ ಪ್ರಯತ್ನವಿತ್ತು. ನೀರು ಹರಿದು ಹೋಗುತ್ತಿದ್ದ ಗುಡ್ಡದ ಇಳಿಜಾರಿನ ಭಾಗಕ್ಕೆ ಕೊಂಗನ  ಸರಳು ಎಂದು ಕರೆಯಲಾಗುತ್ತಿತ್ತು. ಆದರೆ ಯಾವುದೋ  ತಾಂತ್ರಿಕ ಕಾರಣದಿಂದ ಯೋಜನೆ ಅರ್ಧಕ್ಕೇ ನಿಂತು ಹೋಗಿ ಅಪೂರ್ಣವಾದ ಕಾಲುವೆಗಳು ತಮ್ಮ ಉದ್ದೇಶ ಸಾಧಿಸಲಾಗದೆ ಕೊರಗುತ್ತಿದ್ದುದು ನಮ್ಮ ಮನಮಿಡಿಯುವಂತಿತ್ತು.
ನಮ್ಮೂರ ಹುಲಿಯ ಮೈಸೂರು ಪಯಣ
ನಮ್ಮೂರಿಗೆ ಮಲೆನಾಡಿನ ಯಾವ  ಹಳ್ಳಿಗೂ ಸಿಗದಂತ ಸೌಭಾಗ್ಯವೊಂದು ಸಿಕ್ಕಿ ಅದು ನಮ್ಮೂರ ಇತಿಹಾಸಕ್ಕೆ ಸೇರ್ಪಡೆಯಾಗಿತ್ತು. ಪ್ರಸಂಗ ನಾವು ನಮ್ಮ ತಂದೆ-ತಾಯಿಯ ಬಾಯಿಂದ ಬಾಲ್ಯದಲ್ಲಿ ಕೇಳಿದ್ದುನಾನು ಆಗಲೇ  ಬರೆದಂತೆ ನಮ್ಮೂರಿನ ಬೆಟ್ಟದ ಮೇಲಿದ್ದ ಓರಣಕಲ್ ಎಂಬ ಗುಹೆಗೆ ಆಗಾಗ ಹುಲಿಗಳು ವಲಸೆ ಬಂದು ಕ್ಯಾಂಪ್ ಮಾಡುತ್ತಿದ್ದವು. ಒಮ್ಮೆ ಹಾಗೆ ಬಂದ ಹುಲಿಯೊಂದು ದೀರ್ಘಕಾಲ ತನ್ನ ಕ್ಯಾಂಪನ್ನು ಮುಂದುವರಿಸಿ ನಮ್ಮೂರ ಜಾನುವಾರುಗಳನ್ನು ಒಂದೊಂದಾಗಿ ಕಬಳಿಸ ತೊಡಗಿತ್ತಂತೆ. ಪುರದಮನೆ ಶಿಂಗಪ್ಪಯ್ಯನವರು ಕಾಲದಲ್ಲಿ ನಮ್ಮೂರಿನ ಶ್ರೀಮಂತ ಮತ್ತು ಧೀಮಂತ ವ್ಯಕ್ತಿಯಾಗಿದ್ದರು. ಊರ ಜನರೆಲ್ಲಾ ಒಟ್ಟಾಗಿ ಹುಲಿಯ ಕಾಟದಿಂದ ಹೇಗಾದರೂ ಬಿಡುಗಡೆ ಮಾಡಬೇಕೆಂದು ಅವರನ್ನು ಕೇಳಿಕೊಂಡರಂತೆ.

ಶಿಂಗಪ್ಪಯ್ಯನವರು ಕೂಡಲೇ ಕಾರ್ಯೋನ್ಮುಖರಾಗಿ ತುಂಬಾ ಪ್ರವೀಣರಾಗಿದ್ದ ಬಡಗಿಗಳನ್ನು ಕರೆಸಿ ಒಂದು  ದೊಡ್ಡ ಹುಲಿಯ ಬೋನನ್ನು ತಯಾರು ಮಾಡಿಸಿದರಂತೆ ಬೋನಿನ ಒಂದುಭಾಗದಲ್ಲಿ ಒಂದು ಸಣ್ಣ ಕರುವನ್ನು ಅದರ ಜೀವಕ್ಕೆ ಅಪಾಯವಾಗದಂತೆ ಇಟ್ಟು ಬೋನನ್ನು ಗಾಡಿಯಲ್ಲಿ ತೆಗೆದುಕೊಂಡು ಹೋಗಿ ಗುಹೆಯ ಸಮೀಪದಲ್ಲಿ ಇರಿಸಿದರಂತೆ ಪ್ರಯತ್ನ ಫಲಕಾರಿಯಾಗಿ ರಾತ್ರಿಯೇ ಹುಲಿ ಕರುವನ್ನು ತಿನ್ನಲು ಬೋನಿನೊಳಗೆ ಪ್ರವೇಶಿಸಿ ಅದರಲ್ಲಿ ಸಿಕ್ಕಿಹಾಕಿಕೊಂಡಿತಂತೆ. ಹೀಗೆ ಸಿಕ್ಕಿಕೊಂಡ ಹುಲಿರಾಯನ ಘರ್ಜನೆ ದೂರ ದೂರದ ಊರುಗಳಿಗೂ ಕೇಳತೊಡಗಿತಂತೆ.

ಹುಲಿಯ ಬಂಧನದ ಸಮಾಚಾರ ಇಡೀ ಕೊಪ್ಪ ಮತ್ತು ಶೃಂಗೇರಿ ತಾಲೂಕುಗಳಲ್ಲಿ ಹರಡಿ ಅದನ್ನು ವೀಕ್ಷಿಸಲು ನಮ್ಮೂರಿಗೆ ಜನಗಳ ಸಂತೆಯೇ ಬರತೊಡಗಿತಂತೆ. ಊರಿನಲ್ಲಿ ಒಂದು ದೊಡ್ಡ ಹಬ್ಬದ ವಾತಾವರಣ ಇತ್ತಂತೆ. ಆದರೆ ಊರಿನವರಿಗೆ ಎದುರಾದ  ಸಮಸ್ಯೆಯೆಂದರೆ ಹುಲಿರಾಯನನ್ನು ಮುಂದೇನು ಮಾಡಬೇಕೆನ್ನುವುದು. ಆದರೆ ಶಿಂಗಪ್ಪಯ್ಯನವರು ತುಂಬಾ ದೂರದೃಷ್ಟಿಯುಳ್ಳ ವ್ಯಕ್ತಿ. ಆಗಿನ ಕಾಲದಲ್ಲಿ ಯಾವುದೇ ಸಂಪರ್ಕ ಸಾಧನಗಳು (ಟೆಲಿಫೋನ್ ಇತ್ಯಾದಿ) ಇರಲಿಲ್ಲ. ಆದ್ದರಿಂದ ಅವರು ಒಬ್ಬ ಗಣ್ಯ ವ್ಯಕ್ತಿಯನ್ನು ಮೈಸೂರಿಗೆ ಶ್ರೀಮನ್ ಮಹಾರಾಜ ನಾಲ್ಮಡಿ ಕೃಷ್ಣರಾಜರನ್ನು ಭೇಟಿಮಾಡಲು ಕಳಿಸಿದರಂತೆ. ಅವರ ಪ್ರಭಾವ ಎಷ್ಟಿತ್ತೆಂದರೆ ಮಹಾರಾಜರು ಮೈಸೂರಿನ ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳಿಗೆ ಹುಲಿಯನ್ನು ಸಾಗಿಸಲು ಸೂಕ್ತವಾದ ವಾಹನವನ್ನು ನಮ್ಮೂರಿಗೆ ಕೂಡಲೇ ಕಳಿಸುವಂತೆ ಅಪ್ಪಣೆ ಮಾಡಿದರಂತೆ. ಶೀಘ್ರದಲ್ಲೇ ನಮ್ಮೂರು ತಲುಪಿದ ವಾಹನದಲ್ಲಿ ನಮ್ಮೂರ ಹುಲಿರಾಯ   ಸೂಕ್ತ ಬೀಳ್ಕೊಡಿಗೆ ಸಮಾರಂಭದ ನಂತರ ಆಗಿನ ರಾಜಧಾನಿಯಾದ ಮೈಸೂರಿಗೆ ಪ್ರಯಾಣ ಮಾಡಿದನಂತೆ.

ನಮ್ಮಮ್ಮನ  ಪ್ರಕಾರ ಆಮೇಲೆ ಎಷ್ಟೋ ವರ್ಷ ಪ್ರತೀ ತಿಂಗಳೂ ಮೈಸೂರು ಪ್ರಾಣಿ ಸಂಗ್ರಹಾಲಯದಿಂದ ಶಿಂಗಪ್ಪಯ್ಯನವರ  ಹೆಸರಿಗೆ ಒಂದು ಪತ್ರ  ಬರುತ್ತಿತ್ತಂತೆ. ಅದರಲ್ಲಿ ನಿಮ್ಮೂರಿನ ಹುಲಿ ನಮ್ಮಲ್ಲಿ ಕ್ಷೇಮವಾಗಿದೆ ಎಂದು ಬರೆದಿರುತ್ತಿತ್ತಂತೆ. ನಮ್ಮ ತಂದೆಯವರು ಶಿಂಗಪ್ಪಯ್ಯನವರ ಆಪ್ತರಾಗಿದ್ದರಿಂದ ಹುಲಿರಾಯನ ಪ್ರಸಂಗದಲ್ಲಿ ಪ್ರಮುಖ ಪಾತ್ರವಹಿಸಿದ್ದರಂತೆ.
----ಮುಂದುವರಿಯುವುದು ---



2 comments:

Unknown said...

Excellent description of your village.
The utilisation of river water for domestic as also for cultivation was planned so well
in those days. The diverted water flowing to the bath room, I have seen in some of the
villages like Killuru, Bangadi in Belthangady taluk in my younger days.

Planning and catching of the Tiger was courageous and excellent.

B.G. Rao

A V K Murthy said...

Thank you, Sir.