Sunday, December 11, 2016

ನನ್ನ ಬಾಲ್ಯ


ಅಧ್ಯಾಯ
ಆಲೆಮನೆ ಮತ್ತು ನಮ್ಮ " ಸವಿ" ದಿನಗಳು 
ನನ್ನ ಬಾಲ್ಯಕಾಲದಲ್ಲಿ ನಾನು ಕಂಡ ಅತ್ಯಂತಸವಿ” ದಿನಗಳೆಂದರೆ ನಮ್ಮ ಮನೆಯವರೇ ಸೇರಿ ಕಬ್ಬು ಬೆಳೆದು ಆಲೆಮನೆ ಮಾಡಿ ಮನೆಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ಬೆಲ್ಲವನ್ನು ತಯಾರಿ ಮಾಡಿದ ದಿನಗಳು. ನಮಗೆ ಅವಕಾಶ ಒದಗಿಸಿ ಕೊಟ್ಟವರು ಪುರದಮನೆ ಶ್ರೀನಿವಾಸಯ್ಯ. ಅವರು ಕೊಟ್ಟ ಜಮೀನಿನಲ್ಲಿ ಯಾರೋ ಆಗಲೇ ಕಬ್ಬಿನ ಒಂದು ಬೆಳೆ ತೆಗೆದಿದ್ದರು. ಆದ್ದರಿಂದ ನಮಗೆ ಅದೇ ಕೂಳೆಗಳಿಗೆ  ನೀರೆರೆದು ಇನ್ನೊಂದು ಬೆಳೆ ತೆಗೆಯಲು ಸಾಧ್ಯವಾಯಿತು. ಹಾಗಾಗಿ ನಮಗೆ ಹೆಚ್ಚು ಖರ್ಚು ಬರಲಿಲ್ಲ. ಅಷ್ಟಲ್ಲದೇ ತಯಾರಾದ ಪೂರ್ತಿ ಬೆಲ್ಲವನ್ನು ನಾವೇ ಇಟ್ಟುಗೊಳ್ಳುವಂತೆ ಶ್ರೀನಿವಾಸಯ್ಯನವರು ಮೊದಲೇ ಹೇಳಿಬಿಟ್ಟಿದ್ದರುನಮ್ಮ  ಸಡಗರಕ್ಕೆ ಮಿತಿಯೇ ಇರಲಿಲ್ಲ.

ನಮ್ಮ ಕೆಲಸ ಪ್ರತಿದಿನ ಕಬ್ಬಿನ ಕೂಳೆಗಳಿಗೆ ನೀರುಣಿಸುವ ಕೆಲಸದಿಂದ ಪ್ರಾರಂಭವಾಯಿತು. ಜಾಗ ನಮ್ಮ ಮನೆಯಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿತ್ತು. ನಾವು ಶ್ರೀನಿವಾಸಯ್ಯನವರ ತೋಟ ದಾಟಿ ಒಂದು ಸಣ್ಣ ಅರಣ್ಯವನ್ನು ಹಾದು  ಜಾಗ ತಲುಪಬೇಕಿತ್ತುನಯನ  ಮನೋಹರವಾದ ಪ್ರದೇಶಕ್ಕೆ ದಿನ ನಿತ್ಯ ಪಯಣವೇ ಚಿಕ್ಕ ಮಕ್ಕಳಾದ ನಮಗೆ ಅತ್ಯಂತ ಉಲ್ಲಾಸದಾಯಕವಾಗಿತ್ತು. ಪ್ರತಿದಿನ ಬೆಳಿಗ್ಗೆ ಬೇಗನೆ ತಿಂಡಿ ಮುಗಿಸಿ ಕಬ್ಬಿನ ಗದ್ದೆಗೆ ಹೋಗಲು ತಯಾರಾಗಿ ಬಿಡುತ್ತಿದ್ದೆವು. ಅಲ್ಲಿಗೆ ತಲುಪಿದ ನಂತರ ದೊಡ್ಡವರು ಕೆಲಸ ಮಾಡುತ್ತಿದ್ದರೆ ನಾವೆಲ್ಲಾ ನಮ್ಮದೇ ಆದ ಆಟಗಳಲ್ಲಿ ತೊಡಗಿರುತ್ತಿದ್ದೆವು.

ಕಬ್ಬಿನ ಕೂಳೆಗಳು ಬೆಳೆದು ಮೇಲೇರುತ್ತಿದ್ದಂತೆ ಮುಂದೆ ಬರಲಿದ್ದ ಆಲೆಮನೆಯನ್ನು ನೆನೆಸಿಕೊಂಡು ನಮ್ಮ ಉತ್ಸಾಹವೂ ಮೇಲೇರತೊಡಗಿತು. ನಾವು ಅಲ್ಲಿಯವರೆಗೆ ಕೇವಲ ಆಲೆಮನೆಯ ಬಗ್ಗೆ ಕೇಳಿದ್ದೆವು. ಆದರೆ ನಮಗೆ ಈಗ ನಮ್ಮದೇ ಆದ ಆಲೆಮನೆಯನ್ನು ನೋಡುವ ಸೌಭಾಗ್ಯ ಬಂದಿತ್ತು.

ಆದರೆ ಅಷ್ಟರಲ್ಲೇ ಒಂದು ಸಮಸ್ಯೆ ಪ್ರಾರಂಭವಾಯಿತು. ನಮ್ಮ ಕಬ್ಬಿನ ಗದ್ದೆ ಕಾಡಿಗೆ ಸಮೀಪದಲ್ಲಿದ್ದುದರಿಂದ ಕಾಡು ಹಂದಿಗಳ ಕಾಟ ಶುರುವಾಯಿತು. ಅವು ರಾತ್ರಿ ಬಂದು ಕಬ್ಬಿನ  ಏರಿಗಳನ್ನು ಬುಡಮೇಲು ಮಾಡತೊಡಗಿದವು. ನಾವು ಬೆಳಿಗ್ಗೆ ಹೋಗಿ ನೋಡಿದಾಗ ನಾಶವಾಗಿದ್ದ ಬೆಳೆಯನ್ನು ನೋಡಿ ಹುಚ್ಚರಂತಾದೆವು. ಆದ್ದರಿಂದ ರಾತ್ರಿ ಕಾವಲಿಗೆ ಬಂದೂಕದಾರಿ ಕಾವಲುಗಾರನೊಬ್ಬನನ್ನು ನೇಮಿಸಬೇಕಾಯಿತು. ಶ್ರೀನಿವಾಸಯ್ಯನವರ ಹತ್ತಿರ ಲೈಸನ್ಸ್ ಇದ್ದ ಬಂದೂಕವಿತ್ತು. ನಮ್ಮ ತಂದೆಯವರು ಅವರಿಂದ ಅದನ್ನು ತೆಗೆದುಕೊಂಡು ಪೇಟೆಯಿಂದ  ಮದ್ದು ಗುಂಡುಗಳನ್ನೂ ಕೊಂಡುಕೊಂಡು ಮನೆಗೆ ತಂದರು. ನಾವು ನಮ್ಮ ಜೀವನದಲ್ಲಿ  ಮೊಟ್ಟ ಮೊದಲ  ಬಾರಿ  ಬಂದೂಕವನ್ನು ನೋಡಿ ಹಾಗೂ ಅದರಿಂದ ಹಂದಿಗಳನ್ನು ಗುಂಡು ಹಾರಿಸಿ ಕೊಲ್ಲಲಾಗುವುದೆಂದು ತಿಳಿದು ರೋಮಾಂಚನಗೊಂಡೆವು. ಬಂದೂಕವನ್ನು ನಮ್ಮೂರಿನ ದನ  ಎಮ್ಮೆಗಳನ್ನು ಮೇಯಿಸುವ ಗೊಲ್ಲ ಚೌಡನ ಕೈಗೆ ಕೊಡಲಾಯಿತು. ಅವನನ್ನು ನಮ್ಮ ಕಬ್ಬಿನ ಗದ್ದೆಯ ರಾತ್ರಿ ಕಾವಲುಗಾರನನ್ನಾಗಿ ನೇಮಕ ಮಾಡಲಾಯಿತು.

ನಾವೆಣಿಸಿದಂತೆ ಬಂದೂಕದಾರಿ ಚೌಡನ ರಾತ್ರಿ ಕಾವಲುಗಾರಿಕೆ ನಮ್ಮ ಕಬ್ಬಿನ ಗದ್ದೆಗೆ ಧಾಳಿ ಇಡುತ್ತಿದ್ದ ಹಂದಿಗಳ ಕಾಟವನ್ನು ಸ್ವಲ್ಪವೂ ಕಡಿಮೆ ಮಾಡಲಾಗಲಿಲ್ಲ. ಆದರೆ ವಿಚಿತ್ರವೆಂದರೆ ಅವನ ಕೈಗೆ ಕೊಟ್ಟಿದ್ದ ಮದ್ದು ಗುಂಡುಗಳು ಮಾತ್ರ ಕಡಿಮೆಯಾಗತೊಡಗಿದವು. ಚೌಡನಿಂದ ಅದಕ್ಕೆ ಸರಿಯಾದ ಕಾರಣಗಳನ್ನು ತಿಳಿಸಲಾಗಲಿಲ್ಲ. ಸೂಕ್ಷ್ಮ ಪರಿಶೋಧನೆಯ ನಂತರ ತಿಳಿದದ್ದೆಂದರೆ ಚೌಡ ಮದ್ದು ಗುಂಡುಗಳನ್ನು ಕಾಡು ಹಕ್ಕಿಗಳನ್ನು ಬೇಟೆಮಾಡಲು ಬಳಕೆ ಮಾಡುತ್ತಿದ್ದ. ಹಾಗೂ ರಾತ್ರಿ ಪಟ್ಟಾಗಿ ಹಕ್ಕಿ ಮಾಂಸದ ಸಾರಿನ ಊಟ ಮುಗಿಸಿ ನಮ್ಮ ಕಬ್ಬಿನ  ಗದ್ದೆಯಲ್ಲೇ ಗಡದ್ದಾಗಿ ನಿದ್ದೆ ಮಾಡುತ್ತಿದ್ದ. ಹಂದಿಗಳು ತನ್ನ ಪಕ್ಕದಲ್ಲೇ ಓಡಾಡುವುದು ಕೂಡಾ ಅವನ ಗಮನಕ್ಕೆ ಬರುತ್ತಿರಲಿಲ್ಲ. ಕೊನೆಗೆ ನಮ್ಮ ತಂದೆ ಅಥವಾ ಅಣ್ಣ ರಾತ್ರಿಯೆಲ್ಲಾ ಕಬ್ಬಿನ ಗದ್ದೆಯಲ್ಲೇ ಕ್ಯಾಂಪ್ ಮಾಡಿ ಚೌಡನ ಮೇಲೆ ಉಸ್ತುವಾರಿ ಮಾಡಬೇಕಾಯಿತು. ಅವರ ಎದುರಿಗೆ ಚೌಡ ಒಂದೆರಡು ಹಂದಿಗಳ ಮೇಲೆ ಗುಂಡು ಹಾರಿಸಿಯೂ ಬಿಟ್ಟ. ಆಮೇಲೆ ಹಂದಿ ಕಾಟ ಸಂಪೂರ್ಣವಾಗಿ ನಿಂತು ಹೋಯಿತು.

ಬೆಳೆ  ಕಟಾವಿಗೆ ಬರುತ್ತಿದ್ದಂತೆ ಅದರಿಂದ ಹಾಲು ಬೆಲ್ಲ ತಯಾರಿಸಲು ಆಲೆಮನೆಯನ್ನು ಸ್ಥಾಪಿಸುವ ಕೆಲಸ ಪ್ರಾರಂಭ ಮಾಡಲಾಯಿತು. ಒಂದು ದೊಡ್ಡ ಚಪ್ಪರ ಹಾಕಿ ಅದರೊಳಗೆ ಒಂದು ದೊಡ್ಡ ಒಲೆಯನ್ನು ತಯಾರಿ ಮಾಡಿ ಅದರ ಮೇಲೆ ಬೆಲ್ಲ ಮಾಡುವ ಕೊಪ್ಪರಿಗೆಯನ್ನು ಏರಿಸಲಾಯಿತು. ಒಲೆಯನ್ನು ಉರಿಸಲು ಬೇಕಾದ ಕುಂಟೆಗಳನ್ನು (ಕಟ್ಟಿಗೆ) ಸಮೀಪದ ಕಾಡಿನಿಂದ ಮೊದಲೇ ಒದಗಿಸಲಾಗಿತ್ತು. ಕಬ್ಬಿನಿಂದ ಹಾಲು ತೆಗೆಯುವ ಮಷೀನ್ (crusher) ಕೂಡ ಗಾಡಿಯಲ್ಲಿ ತಂದು ಸ್ಥಾಪನೆ ಮಾಡಲಾಯಿತು. ಅಷ್ಟರಲ್ಲೇ ಆಲೆಮನೆ ನಡೆಸುವುದರಲ್ಲಿ ಪ್ರವೀಣರಾಗಿದ್ದ ನಾಲ್ಕು ಜನಗಳ ಒಂದು ತಂಡ ಕಾರ್ಡೀಪುರದ ಸಿದ್ಧ ಎಂಬವನ ನೇತೃತ್ವದಲ್ಲಿ ಎರಡು ಜೊತೆ ಎತ್ತುಗಳೊಡನೆ ಆಗಮಿಸಿತು.

ಒಂದು ಶುಭ ಮುಹೂರ್ತದಲ್ಲಿ ಪೂಜೆಯೊಡನೆ ನಮ್ಮ ಆಲೆಮನೆ ಪ್ರಾರಂಭ ಮಾಡಲಾಯಿತು. ಅಲ್ಲಿ ಕೆಲಸ ಮಾಡುವವರಿಗೆಲ್ಲ  ನಮ್ಮ ಮನೆಯಿಂದ ಊಟ ತಿಂಡಿ ಬರುತ್ತಿತ್ತು. ನಾವು ನಮ್ಮ ದಿನದ ಹೆಚ್ಚಿನ ವೇಳೆಯನ್ನು ಆಲೆಮನೆಯಲ್ಲೇ ಕಳೆಯತೊಡಗಿದೆವು. ಸರದಿಯ ಮೇಲೆ ಎರಡು ಜೊತೆ ಎತ್ತುಗಳು ಮಷೀನ್ ಎಳೆಯುತ್ತಾ ಕಬ್ಬಿನಿಂದ ಹಾಲು ಹಿಂಡಿ ತೆಗೆಯುವುದೂ ಹಾಗೂ ಹಾಲನ್ನು ಒಲೆಯ ಮೇಲಿದ್ದ ಕೊಪ್ಪರಿಗೆಯೊಳಗೆ ಸುರಿಯುವುದನ್ನೂ ನೋಡುತ್ತಾ ನಮಗೆ  ವೇಳೆ ಹೋಗುವುದೇ ಗೊತ್ತಾಗುತ್ತಿರಲಿಲ್ಲ. ಎಷ್ಟೋ ಬಾರಿ ನಾವು ರಾತ್ರಿ ಕೂಡ ಆಲೆಮನೆಯಲ್ಲೇ ತಂಗಿದ್ದು ನೆನಪಿಗೆ ಬರುತ್ತಿದೆ. ಒಬ್ಬ ಮನುಷ್ಯ ಒಲೆಯಲ್ಲಿ ಬೆಂಕಿ ಒಂದೇ ರೀತಿ ಉರಿಯುತ್ತಿರುವಂತೆ ಕಟ್ಟಿಗೆ ಹಾಕುತ್ತಿರಬೇಕಿತ್ತು. ಪಾಕಪ್ರವೀಣನಾಗಿದ್ದ  ಸಿದ್ಧ ಕೊಪ್ಪರಿಗೆಯಲ್ಲಿದ್ದ ಹಾಲನ್ನು ಒಂದು ದೊಡ್ಡ ಮರದ ಸೌಟಿನಲ್ಲಿ ಕದಡುತ್ತಾ ಅದು ಸರಿಯಾಗಿ ಪಾಕಗೊಳ್ಳುವಂತೆ ನೋಡಿಕೊಳ್ಳುತ್ತಿದ್ದ. ಅವನ ಕೆಲಸ ತುಂಬಾ ಜವಾಬ್ದಾರಿಯುತವಾಗಿತ್ತು. ಏಕೆಂದರೆ ಅಂತಿಮವಾಗಿ ತಯಾರಾದ ಬೆಲ್ಲದ ಗುಣಮಟ್ಟ ಅವನ ಕೆಲಸದ ಮೇಲೆ ನಿರ್ಧಾರವಾಗುತ್ತಿತ್ತು.

ನಾವು ಬಗೆಬಗೆಯ ರೀತಿಯ ಕಬ್ಬಿನ ಹಾಲನ್ನು ಕುಡಿದು ಆನಂದಿಸತೊಡಗಿದೆವುಕಬ್ಬಿನ ಹಾಲಿನೊಡನೆ ನಿಂಬೆ ಹಣ್ಣಿನ ರಸ ಹಾಗೂ ಶುಂಠಿ ಇತ್ಯಾದಿಗಳನ್ನು ಬೆರೆಸಿ ಕುಡಿದಾಗ ಅದರ ರುಚಿ ವರ್ಣಿಸಲಸದಳ. ಇಷ್ಟಲ್ಲದೆ ನಾವು ಸುಲಿದ ಬಾಳೆಹಣ್ಣನ್ನು ಒಂದು ಹಗ್ಗದಲ್ಲಿ ಕಟ್ಟಿ ಕೊಪ್ಪರಿಗೆಯಲ್ಲಿ ಮುಳುಗಿಸಿ  ಅದರ ಮೇಲೆ ಬೆಲ್ಲದ ಪಾಕದ ಒಂದು ಪದರ ಬರುವಂತೆ ಮಾಡಿ ತಿನ್ನುತ್ತಿದ್ದೆವು. ಅದರ ರುಚಿಯನ್ನು ಹೇಳಲಸಾಧ್ಯ. ಇನ್ನು ಸಿದ್ಧ ಆಗಾಗ ನಮಗೆ ಸುಡುತ್ತಿದ್ದ ಪಾಕದ ಮೇಲೆ ಉಂಟಾಗುವ ನೊರೆಯನ್ನು ಒಂದು ಪಾತ್ರೆಯಲ್ಲಿ  ತೆಗೆದು ತಿನ್ನಲು ಕೊಡುತ್ತಿದ್ದ. ಅದರ ರುಚಿಯನ್ನು ಮೀರಿಸಲು ಯಾವುದೇ ಬೇರೆ ಸಿಹಿ ತಿಂಡಿಗೆ ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ ನಮ್ಮ ದಿನಗಳು ತುಂಬಾ ಸಿಹಿಸಿಹಿಯಾಗಿ ಕಳೆಯತೊಡಗಿದವು.

ಅಂದಿನ ನಮ್ಮ ಮಲೆನಾಡಿನ ಸಂಸ್ಕೃತಿಯಂತೆ ಊರಿನ ಜನರೆಲ್ಲಾ ಯಾವುದೇ ಆಮಂತ್ರಣವಿಲ್ಲದೆ ಆಲೆಮನೆಗೆ ಬಂದು ಕಬ್ಬಿನ  ಹಾಲನ್ನು ಕುಡಿದು ಹೋಗಬೇಕಿತ್ತು. ಯಾವುದೇ ಮನೆಯಿಂದ ಎಲ್ಲರೂ ಬರಲಾಗದಿದ್ದರೆ ಬಂದವರು  ಒಂದು ಪಾತ್ರೆಯಲ್ಲಿ ಹಾಲನ್ನು ಅವರಿಗಾಗಿ ತೆಗೆದುಕೊಂಡು ಹೋಗಬೇಕಿತ್ತು ಪಾತ್ರೆಯನ್ನು ಅವರು ಯಾವುದೇ ಸಂಕೋಚವಿಲ್ಲದೆ ಮನೆಯಿಂದಲೇ ತೆಗೆದುಕೊಂಡು ಬರಬೇಕಿತ್ತು. ಅಷ್ಟಲ್ಲದೇ ಕಬ್ಬಿನ ತುಂಡುಗಳ ಒಂದು ಕಟ್ಟನ್ನು ಮನೆಯಲ್ಲಿ ತಿನ್ನಲು ಕೊಡುವ ಕ್ರಮವಿತ್ತು. ರೀತಿ ಧಾರಾಳ ಮನೋವೃತ್ತಿ ಅನುಕರಿಸುವುದರಿಂದ ಕಬ್ಬಿನಿಂದ ಹಾಲಿನ ಉತ್ಪನ್ನ ಹೆಚ್ಚಾಗುವುದೆಂಬ ನಂಬಿಕೆ ಅಂದಿನ ಕಾಲದಲ್ಲಿತ್ತು. ಇಂದಿನ ವ್ಯಾಪಾರೀ ಮನೋಭಾವ ಆಗಿನ ಮಲೆನಾಡಿನಲ್ಲಿ ಇನ್ನೂ ಪ್ರವೇಶಿಸಿರಲಿಲ್ಲ.

ಕೊಪ್ಪರಿಗೆಯಿಂದ ತೆಗೆದ ಬೆಲ್ಲವನ್ನು ಬೇರೆಬೇರೆ ಡಬ್ಬಿಗಳಿಗೆ ತುಂಬಿಡಲಾಯಿತು. ಹೆಚ್ಚಿನ ಬೆಲ್ಲ ಘಟ್ಟಿ ರೂಪದಲ್ಲಿದ್ದರೆ ಕೆಲವು  ಡಬ್ಬಗಳಲ್ಲಿ ಜೋನಿ ಬೆಲ್ಲವನ್ನು ತುಂಬಿಡಲಾಯಿತು. ಆಗಿನ ಮಲೆನಾಡಿನಲ್ಲಿ ಸಕ್ಕರೆಯ ಬಳಕೆ ರೂಢಿಯಲ್ಲಿರಲಿಲ್ಲ. ಕಾಫಿ ಮಾಡಲು ಕೂಡ ಬೆಲ್ಲವನ್ನೇ ಬಳಸಲಾಗುತ್ತಿತ್ತು. ಜೋನಿ ಬೆಲ್ಲವನ್ನು ತುಪ್ಪದೊಡನೆ ದೋಸೆ ಇತ್ಯಾದಿ ಬೆಳಗಿನ ತಿಂಡಿಯೊಟ್ಟಿಗೆ ತಿನ್ನಲಾಗುತ್ತಿತ್ತು. ಎಲ್ಲಾ ಬೆಲ್ಲದ ಡಬ್ಬಗಳು ನಮ್ಮ  ಮನೆ ತಲುಪಿದಾಗ ನಮಗಾದ ಸಂತೋಷ ಅಷ್ಟಿಟ್ಟಲ್ಲ. ಅವನ್ನೆಲ್ಲ ಮನೆಯ ಅಟ್ಟದ ಮೇಲೆ ಇಡಲಾಯಿತು. ನಾವು ಪ್ರತಿದಿನವೂ ಅದನ್ನು ಎಣಿಸಿ ಖುಷಿ ಪಡುತ್ತಿದ್ದೆವು. ಅವು ನಮ್ಮ ಒಂದು ವರ್ಷದ ಬಳಕೆಗೆ ಬೇಕಾಗುವಷ್ಟು ಇದ್ದುವೆಂದು ನೆನಪು.

ಆಲೆಮನೆ ಮುಗಿದು ಸಿದ್ಧ ಮತ್ತು ಅವನ  ಸಂಗಡಿಗರು ಹೊರಟು  ನಿಂತಾಗ ನಮಗಾದ ದುಃಖ ಅಷ್ಟಿಟ್ಟಲ್ಲ. ನಮಗೆ ಒಂದು ದೊಡ್ಡ ಹಬ್ಬ ಮುಗಿದು ಹೋದಂತೆ ಅನಿಸಿತು. ಸಿದ್ಧ ಮತ್ತು ಅವನ ಬಳಗ ನಮ್ಮ ಕುಟುಂಬದ ಒಂದು ಭಾಗದಂತಿದ್ದು ಅದು ನಮ್ಮಿಂದ ಕಳಚಿ ಹೋದಂತೆ ನಮಗನಿಸಿತು. ನಮಗೆ  ತಿಳಿದಂತೆ ಆಮೇಲೆ ನಮ್ಮೂರಿನಲ್ಲಿ ಯಾವುದೇ ಆಲೆಮನೆ ನಡೆಯಲಿಲ್ಲ. ಇಷ್ಟು ವರ್ಷಗಳ ನಂತರವೂ ನನಗೆ ನಮ್ಮ ಏಕೈಕ ಆಲೆಮನೆಯನ್ನು ಹಾಗೂ ಸಿದ್ಧನ ಬಳಗವನ್ನೂ ಮರೆಯಲಾಗುತ್ತಿಲ್ಲ. ಆದರೆ ಕಳೆದು ಹೋದ ಸಿಹಿ ಬಾಲ್ಯದಿನಗಳು ಎಂದೂ ಮರುಕಳಿಸಲಾರವು.
----ಮುಂದುವರಿಯುವುದು ---
ವಿ ಕೃಷ್ಣಮೂರ್ತಿ
೧೧ನೇ  ಡಿಸೆಂಬರ್ ೨೦೧೬



No comments: