Monday, October 31, 2016

ನನ್ನ ಬಾಲ್ಯ

ಅಧ್ಯಾಯ
ಮಕ್ಕಳಿಗೆ ತಂದೆ ಬಾಲ್ಯದೊಳ್
ಅಕ್ಕರ ವಿದ್ಯೆಗಳನರಿಪದಿದ್ದರೆ ಕೊಂದಂ
ಲಕ್ಕಧನಮಿರಲು ಕೆಡಗುಂ
ಚಿಕ್ಕಂದಿನ ವಿದ್ಯೆ ಪೊರಗು ಚೂಡಾರತ್ನ
                                                         --ಸುಭಾಷಿತ
ನಮಗೆ ಚಿಕ್ಕಂದಿನಲ್ಲಿ ಯಾವಾಗಲೂ ತಂದೆಯವರು ದೆವ್ವಗಳ ಬಗ್ಗೆ ತೋರಿಸುತ್ತಿದ್ದ ನಿರ್ಭೀತಿ ಹಾಗೂ ಪರಾಕ್ರಮದ ಬಗ್ಗೆ ವಿಶೇಷ ಕುತೂಹಲವಿತ್ತು. ಬಗ್ಗೆ ಅವರನ್ನು ಆಗಾಗ್ಗೆ ಕೇಳುತ್ತಿದ್ದೆವು. ಅದಕ್ಕೆ ಅವರು ಅದಕ್ಕೆಲ್ಲಾ ಮನುಷ್ಯನ ಧೈರ್ಯ ಹಾಗೂ ಆತ್ಮಬಲವೇ ಮುಖ್ಯವೆಂದು ಹೇಳುತ್ತಿದ್ದರು. ಮತ್ತೂ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಕಥೆಯನ್ನೂ ಹೇಳಿದರು. ಕಥೆ  ಹೀಗಿತ್ತು:

ಹೊಸಳ್ಳಿ ಎಂಬ ಊರಿಗೆ ಹೋಗುವ ಮಾರ್ಗದಲ್ಲಿ ಒಂದು ದಟ್ಟವಾದ ಅರಣ್ಯವಿತ್ತು. ಊರಿಗೆ ಹೋಗುವ ಯಾರಿಗೂ ರಾತ್ರಿಯ ವೇಳೆ ಕಾಡಿನ ನಡುವೆ ಹೋಗುವ ಧೈರ್ಯವಿರಲಿಲ್ಲ. ಕಾರಣವಿಷ್ಟೇ. ದಾರಿಯಲ್ಲಿದ್ದ ಒಂದು ಅರಳೀ ಮರದಿಂದ ದೆವ್ವವೊಂದು ತಲೆಕೆಳಗಾಗಿ ನೇತಾಡುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಅಷ್ಟು ಮಾತ್ರವಲ್ಲ. ಅದು ಮರದ ಕೆಳಗೆ ಬರುವ ವ್ಯಕ್ತಿಗೆ ತನ್ನ ಗ್ರಾಮೀಣ ಭಾಷೆಯಲ್ಲಿ ಗಟ್ಟಿಯಾಗಿ "ಹೋತ್ರ್ಯಾ? ಹೋತ್ರ್ಯಾ? " (ಹೋಗುತ್ತೀರಾ?ಹೋಗುತ್ತೀರಾ?) ಎಂದು ಕೇಳುತ್ತಿತ್ತು. ಅದನ್ನು ಕೇಳಿದ ವ್ಯಕ್ತಿ ಮೈ ನಡುಗಿಕೊಂಡು ಅಲ್ಲಿಂದ ತಿರುಗಿ ನೋಡದೇ ಪರಾರಿ!

ಊರಿನಲ್ಲಿ ರುಕ್ಕಮ್ಮನೆಂಬ ಅಜ್ಜಿ ಒಬ್ಬಳಿದ್ದಳು. ಒಂದು ದಿನ ಅವಳ ಮನೆಗೆ ಮೊದಲ ಬಾರಿಗೆ ಅವಳ  ಮೊಮ್ಮಗನೊಬ್ಬ ಬಂದಿದ್ದ. ಅವನ ಹೆಸರು ಶೂರ. ಹೆಸರಿಗೆ ತಕ್ಕಂತೆ ತುಂಬಾ ಧರ್ಯವಂತ. ಅಜ್ಜಿಯ ಬಾಯಿಂದ ದೆವ್ವದ ಕಥೆ ಕೇಳಿದ ಶೂರ ಕೂಡಲೇ ಅದನ್ನು ನೋಡಿಯೇ ಬಿಡಬೇಕೆಂದು ತೀರ್ಮಾನಿಸಿದ. ಅಷ್ಟು ಮಾತ್ರವಲ್ಲ. ರಾತ್ರಿಯೇ ಕಾಡೊಳಗೆ ಪ್ರವೇಶ ಮಾಡಿಯೂ ಬಿಟ್ಟ. ಅವನೆಣಿಸಿದಂತೆ ದೆವ್ವ ಅವನ ಕಣ್ಣಿಗೆ ಬಿದ್ದೂ ಬಿಟ್ಟಿತು. ಮತ್ತೂ ಮಾಮೂಲಿನಂತೆ  "ಹೋತ್ರ್ಯಾ? ಹೋತ್ರ್ಯಾ? " ಎಂದು ಗಟ್ಟಿಯಾಗಿ ಕಿರುಚತೊಡಗಿತುಸ್ವಲ್ಪವೂ ಧೈರ್ಯಗೆಡದ ಶೂರ ಗಟ್ಟಿಯಾಗಿ " ಹೋತೀನಿ ಬತ್ತಿಯಾ " (ಹೌದು ನಾನು ಹೋಗುತ್ತೇನೆ. ನೀನೂ ಬರುತ್ತೀಯ?) ಎಂದು ಉತ್ತರಿಸುತ್ತಾ ಮುಂದೆ ಹೋದ. ಆಗ ಅವನಿಗೆ ಯಾರೋ ತನ್ನನ್ನು ಹಿಂಬಾಲಿಸುವುದು ಅರಿವಾಯಿತು. ಅವನು ತಿರುಗಿ ನೋಡದೆ ಸೀದಾ  ವಾಪಾಸ್ ಅಜ್ಜಿಯ ಮನೆ ಸೇರಿದ. ಅವನ ಹಿಂದೆ ಕೇಳುತ್ತಿದ್ದ ಕಾಲಿನ ಸಪ್ಪಳವೂ ನಿಂತು ಹೋದುದು ಅರಿವಾಯಿತು. ಅವನು ಹಿಂತಿರುಗಿ ನೋಡಿದಾಗ ಅವನಿಗೆ ಅಲ್ಲಿ ಚಿನ್ನದ ನಾಣ್ಯ ತುಂಬಿದ ಒಂದು ಮಡಿಕೆ ಕಾಣಿಸಿತು. ಅದು ಅವನ ಧೈರ್ಯಕ್ಕೆ ಸಿಕ್ಕಿದ ಉಡುಗರೆಯಾಗಿತ್ತು.

ನಮ್ಮ ತಂದೆಯವರ ಪ್ರಕಾರ ದೆವ್ವ ಒಬ್ಬ ಜಿಪುಣಾಗ್ರೇಸರನ ಆತ್ಮವಾಗಿತ್ತು. ಜಿಪುಣ ಯಾವುದೇ ದಾನ ಧರ್ಮ ಮಾಡದೆ ಹಣವನ್ನೆಲ್ಲ ಚಿನ್ನದ ನಾಣ್ಯವಾಗಿ ಪರಿವರ್ತಿಸಿ ಒಂದು ಮಡಿಕೆಯಲ್ಲಿ ಕೂಡಿಡುತ್ತಿದ್ದನು. ಅವನು ಸತ್ತಾಗ ದೇವರು ಅವನಿಗೆ ನಾಣ್ಯವನ್ನೆಲ್ಲಾ ಒಬ್ಬ ಧೈರ್ಯವಂತನಿಗೆ ಒಪ್ಪಿಸಬೇಕೆಂದೂ ಅಲ್ಲಿಯವರೆಗೆ ಅವನು ದೆವ್ವವಾಗಿಯೇ ಇರಬೇಕೆಂದು ಅಪ್ಪಣೆ ಮಾಡಿದನು. ಶೂರನ ಸಾಹಸಕ್ಕೆ ಮೆಚ್ಚಿ ದೆವ್ವ ನಾಣ್ಯದ ಮಡಿಕೆಯನ್ನು ಅವನ ಮನೆಗೆ ತಲುಪಿಸಿತು. ಆಗ ಅದರ ಆತ್ಮ  ದೆವ್ವದ ರೂಪದಿಂದ  ಬಿಡುಗಡೆ ಹೊಂದಿ ಸ್ವರ್ಗಕ್ಕೆ ಪ್ರಯಾಣ ಬೆಳೆಸಿತು.

ತಂದೆಯವರು ಹೇಳಿದ ಕಥೆ ನಮ್ಮನ್ನೂ ಧೈರ್ಯವಂತರಾಗಿರುವಂತೆ ಪ್ರೋತ್ಸಾಹಿಸಿತು. ನಾವೂ ಕೂಡ ಯಾವುದಾದರೂ ದೆವ್ವದಿಂದ ಚಿನ್ನದ ಮಡಿಕೆ ಸಂಪಾದಿಸಬಹುದೆಂಬ ಕನಸನ್ನು  ಕಾಣತೊಡಗಿದೆವು. ಆದರೆ ನಮ್ಮ ಧೈರ್ಯವೆಲ್ಲಾ ಕತ್ತಲಾಗುತ್ತಲೇ ಕರಗಿ ಹೋಗುತ್ತಿತ್ತು. ಹಾಗಾಗಿ ನಮಗೆ ಚಿನ್ನದ ನಾಣ್ಯ ಕೇವಲ ಕನಸಾಗಿ ಉಳಿಯಿತು!

ನಮ್ಮ ತಂದೆಯವರು  ಯಾವಾಗಲೂ ಜಿಪುಣತನವನ್ನು ದ್ವೇಷಿಸುತ್ತಿದ್ದರು. ಆದರೆ ಅವರು ತಮ್ಮ ಸಂಪಾದನೆಯಿಂದ ಯಾವುದೇ ಖರ್ಚು ಮಾಡುತ್ತಲೂ ಇರಲಿಲ್ಲಇದು ನಿಮಗೆ ಒಗಟಾಗಿ ಕಾಣಬಹುದು. ಕಾರಣವಿಷ್ಟೇ. ನಮ್ಮ ತಂದೆಯವರ ಹಣದ ವ್ಯವಹಾರ ಹೀಗಿತ್ತು:
ಸಾಲಮಾಡುಖರ್ಚುಮಾಡುದುಡಿಮೆಮಾಡುಸಾಲ ತೀರಿಸು
ಒಟ್ಟಿನಲ್ಲಿ ವಿಷಯವೇನೆಂದರೆ ತಂದೆಯವರ ದುಡಿಮೆಗಿಂತ ಸಾಲವೇ ಜಾಸ್ತಿಯಿದ್ದರಿಂದ ಅದೆಲ್ಲ ಸಾಲತೀರಿಸಲು ಹೋಗಿಬಿಡುತ್ತಿತ್ತು. ಹಾಗಾಗಿ ದುಡಿಮೆಯಿಂದ  ಖರ್ಚು ಮಾಡುವ ಪ್ರಶ್ನೆಯೇ  ಇರಲಿಲ್ಲ. ಹಾಗೂ ಜಿಪುಣತನದ ಸಮಸ್ಯೆಯೂ ಇರಲಿಲ್ಲ.
ನನ್ನ ವಿದ್ಯಾಭ್ಯಾಸ
ನಮ್ಮ ತಂದೆತಾಯಿಯವರಿಗೆ ನಾವು ಒಟ್ಟು ಒಂಬತ್ತು ಮಕ್ಕಳು (ಆರು ಗಂಡು ಹಾಗೂ ಮೂರು ಹೆಣ್ಣು). ಹೆಸರುಗಳು ಕ್ರಮವಾಗಿ ರಾಮಕೃಷ್ಣ , ಗೌರಿ, ರುಕ್ಮಿಣಿ, ಲಕ್ಷ್ಮೀ ನಾರಾಯಣ (ಪುಟ್ಟಣ್ಣ ), ಕೃಷ್ಣಮೂರ್ತಿ, ಲೀಲಾವತಿ, ಮಾಧವ, ಶ್ರೀನಿವಾಸ ಮತ್ತು ಶ್ರೀಧರ ಎಂದಿತ್ತು.

ನಮ್ಮ ಸಮಾಜದ ಕಟ್ಟಳೆಯಂತೆ ಮಕ್ಕಳ ವಿದ್ಯಾಭ್ಯಾಸ ನವರಾತ್ರಿಯ ವಿಜಯದಶಮಿಯ ದಿನವೇ ಆರಂಭವಾಗಬೇಕಿತ್ತು. ಅದರಂತೆ ನನ್ನ ತಂದೆಯವರು ನನ್ನನ್ನು  ಅವರ  ತೊಡೆಯಮೇಲೆ ಕೂರಿಸಿಕೊಂಡು ಒಂದು ಹರಿವಾಣದಲ್ಲಿ ಇಟ್ಟಿದ್ದ ಅಕ್ಕಿಯಮೇಲೆ ಅರಿಶಿನದ ಬೇರಿನಿಂದ "ಶ್ರೀ ಗಣೇಶಾಯ ನಮಃ " ಎಂದು ಬರೆಸಿದರು. ಆಮೇಲೆ ನನ್ನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನನ್ನ ದೊಡ್ಡಣ್ಣನಿಗೆ ವಹಿಸಲಾಯಿತು. ದೊಡ್ಡಣ್ಣನ ವಿದ್ಯಾಭ್ಯಾಸ ದುರದೃಷ್ಟವಶಾತ್ ೮ನೇ ತರಗತಿಗೇ ಮುಕ್ತಾಯವಾಗಿತ್ತು. ಮುಂದೆ ಓದಬೇಕೆಂಬ ಅವನ ಆಶೆಗೆ ತಂದೆಯವರಿಂದ ಪ್ರೋತ್ಸಾಹ ಸಿಗದೇ ಹೋಯಿತು. ನಿರಾಸೆಯ ನಡುವೆಯೂ ಅವನು ನಮ್ಮಿಬ್ಬರನ್ನೂ (ಪುಟ್ಟಣ್ಣ ಮತ್ತು ನಾನು) ಓದಿಸಿಯೇ ಬಿಡಬೇಕೆಂದು ಪಣ ತೊಟ್ಟಿರಬೇಕು. ಏಕೆಂದರೆ ಅವನೇ ನಮ್ಮಿಬ್ಬರಿಗೂ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಬರವಣಿಗೆ ಹಾಗೂ ಓದಲು ಕಲಿಸಿದ್ದನ್ನು ನಾವೆಂದಿಗೂ ಮರೆಯುವಂತಿಲ್ಲ. ನಮ್ಮೂರಿನಲ್ಲಿ  ಯಾರೂ ಅರಿಯದ ಹಿಂದಿ ಭಾಷೆಯನ್ನು ಸ್ವಪ್ರಯತ್ನದಿಂದ ಕಲಿತು ನಮಗೂ ಬೋಧಿಸಿ ನಮಗೆ ತ್ರಿಭಾಷಾ ಸೂತ್ರದ ತಳಹದಿ ಹಾಕಿದವ ನಮ್ಮ ಪ್ರೀತಿಯ ದೊಡ್ಡಣ್ಣ.

ನಮ್ಮಣ್ಣನ ಸಾಹಿತ್ಯ ಪ್ರಪಂಚ ತುಂಬಾ ದೊಡ್ಡದಾಗಿತ್ತು. ಅವನು ತನ್ನದೇ ಆದ  ಪುಸ್ತಕ ಭಂಡಾರವನ್ನು ಹೊಂದಿದ್ದಲ್ಲದೆ ಬೇರೆಬೇರೆ ಕಡೆಗಳಿಂದ ಪುಸ್ತಕಗಳನ್ನು ಓದಲು  ತರುತ್ತಿದ್ದ. ಸ್ವಾಭಾವಿಕವಾಗಿ ನಮಗೂ ಪುಸ್ತಕಗಳನ್ನೋದುವ ಅಭ್ಯಾಸ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು. ಮಕ್ಕಳ ಪತ್ರಿಕೆಗಳಾದ ಚಂದಮಾಮ ಮತ್ತು ಬಾಲಮಿತ್ರಗಳಲ್ಲದೆ ನಾವು ಎನ್ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು ಹಾಗೂ ಅನಕೃ ಮತ್ತು ತರಾಸು ಅವರ ಸಾಮಾಜಿಕ ಕಾದಂಬರಿಗಳನ್ನೆಲ್ಲಾ ಬಾಲ್ಯದಲ್ಲೇ ಓದಿ ಬಿಟ್ಟಿದ್ದೆವು. ಇಷ್ಟಲ್ಲದೆ ನಾವು ಅಣ್ಣನನ್ನೇ ಅನುಸರಿಸುತ್ತಾ ಕನ್ನಡ ಕವನಗಳು, ಹಾಡುಗಳು, ಪದ್ಯಗಳು, ಭಜನೆಗಳು ಹಾಗೂ ಸಿನಿಮಾ ಹಾಡುಗಳನ್ನೂ ಕಲಿತು ಬಿಟ್ಟೆವು.

ಇನ್ನೊಂದು ವಿಶೇಷವೆಂದರೆ ನಮ್ಮಣ್ಣ ಅವನ ಸ್ನೇಹಿತರಾದ ಪುರದಮನೆ ಕೃಷ್ಣರಾವ್ ಅವರಿಂದ ಹೆಚ್ ಎಂ ವಿ ಗ್ರಾಮೋಫೋನ್ ನಮ್ಮ ಮನೆಗೆ ಆಗಾಗ ತರುತ್ತಿದ್ದ. ಅವರ ಸಂಗ್ರಹದಲ್ಲಿ ವೀರ ಅಭಿಮನ್ಯು, ನಾಗಾನಂದ , ಗಯಚರಿತ್ರೆ , ವಿಶ್ವಾಮಿತ್ರ-ಮೇನಕಾ  ಮುಂತಾದ ಪ್ರಸಂಗಗಳಲ್ಲದೇ ಕನ್ನಡ ಮತ್ತು ಹಿಂದಿ ಸಿನಿಮಾ ಹಾಡುಗಳು ಇರುತ್ತಿದ್ದವು. ಬಾಯಿಪಾಠ ಮಾಡುವುದರಲ್ಲಿ ನಿಸ್ಸೀಮರಾಗಿದ್ದ ನಾನು ಮತ್ತು ಪುಟ್ಟಣ್ಣ ಕನ್ನಡ ಸಿನಿಮಾ ಹಾಡುಗಳಲ್ಲದೇ ಕೆ ಎಲ್ ಸೈಗಲ್ ಮತ್ತು ಮನ್ನಾಡೆ ಅವರ ಹಿಂದಿ ಸಿನಿಮಾ ಹಾಡುಗಳನ್ನೂ ಹಾಡತೊಡಗಿದೆವು! ನಾವಿಬ್ಬರೂ ನಮ್ಮದೇ ಆದ ವಿಸ್ಮಯ ಪ್ರಪಂಚದಲ್ಲಿದ್ದೆವೆಂದು ಈಗ ಅರಿವಾಗುತ್ತಿದೆ.

ನಮ್ಮ ಬಾಲ್ಯ ಪ್ರಪಂಚದಲ್ಲಿ ನಮಗೆ ನಾವು ಓದಿದ್ದೆಲ್ಲಾ ಪರಮ ಸತ್ಯವೆಂಬ ಭಾವನೆ ಇರುತ್ತಿತ್ತು. ಹಾಗೂ ಎಷ್ಟೋ ವಿಷಯಗಳನ್ನು ನಮ್ಮದೇ ಆದ  ರೀತಿಯಲ್ಲಿ ವಿಪರೀತ ಅರ್ಥ ಮಾಡಿಕೊಂಡು ಪ್ರಯೋಗ ಮಾಡಲು ತೊಡಗುತ್ತಿದ್ದೆವು.

ನಮ್ಮ ಚರಿತ್ರೆ ಪುಸ್ತಕದಲ್ಲಿ ಆರ್ಯರು ಮಧ್ಯ ಏಷ್ಯಾದ ಅತ್ಯಂತ ಛಳಿ  ಪ್ರದೇಶದಿಂದ ಬಂದವರಾದ್ದರಿಂದ ತುಂಬಾ ಗಟ್ಟಿಮುಟ್ಟಾದ ಶರೀರವನ್ನು ಹೊಂದಿದ್ದರು ಎಂದು ಬರೆದಿತ್ತು. ಅದನ್ನು ಓದಿದ ಪುಟ್ಟಣ್ಣ ತಾನೂ ಸಹಾ ತನ್ನ ದೇಹವನ್ನು ಛಳಿಯಲ್ಲಿರುವಂತೆ ನೋಡಿಕೊಂಡರೆ ಆರ್ಯರಂತೆ ಧೃಢಕಾಯನಾಗಿ ಬಿಡಬಹುದೆಂದು ಭಾವಿಸಿ ಬಿಟ್ಟಅದರಂತೆ ಅವನು ರಾತ್ರಿ ಮಲಗುವಾಗ ಅಂಗಿಯನ್ನು ತೆಗೆದುಬಿಟ್ಟು ಹೊದಿಕೆ ಹಾಕಿಕೊಳ್ಳದೇ ನಿದ್ದೆ ಮಾಡತೊಡಗಿದ. ಆಗ ನನಗೆ ನಿಜವಾಗಿ ಭಯವಾಗತೊಡಗಿತು. ಕಾರಣವಿಷ್ಟೇ. ನಮ್ಮ ದೈನಂದಿನ ಜಗಳಗಳಲ್ಲಿ ಅವನ ಕೈ ಯಾವಾಗಲೋ ಮೇಲಿರುತ್ತಿತ್ತು. ಅವನು ನನಗಿಂತ ಎರಡು ವರ್ಷ ದೊಡ್ಡವನು ಮಾತ್ರವಲ್ಲ. ಹೆಚ್ಚು ದೇಹಶಕ್ತಿಯನ್ನೂ ಹೊಂದಿದ್ದ. ಇನ್ನು ಅವನು ಆರ್ಯರಷ್ಟು ಧೃಢಕಾಯನಾಗಿ ಬಿಟ್ಟರೆ ನನ್ನ ಕಥೆ ಮುಗಿದಂತೆಯೇ ಎಂದು ಭಾವಿಸಿದೆ. ನನ್ನ ಅದೃಷ್ಟಕ್ಕೆ ಅದು ಛಳಿಗಾಲವಾಗಿತ್ತು. ಹಾಗಾಗಿ ಮೂರು ದಿನಕ್ಕೇ ಪುಟ್ಟಣ್ಣನಿಗೆ ಶೀತ ಪ್ರಾರಂಭವಾಯಿತು. ಅಮ್ಮನಿಗೆ ತುಂಬಾ ಕೋಪ ಬಂದು ರಾತ್ರಿಯಲ್ಲಿ ಅವನ ಮೇಲೆ ಹೊದಿಕೆ ಹಾಕತೊಡಗಿದಳು. ಅಲ್ಲಿಗೆ ಆರ್ಯನಾಗುವ ಅವನ ಕನಸು ಕೊನೆಗೊಂಡಿತು.
----ಮುಂದುವರಿಯುವುದು ----

No comments: