ಅಧ್ಯಾಯ ೧
ನನ್ನ ಬಾಲ್ಯಕಾಲದ ಕಥೆಯನ್ನು ಬರೆಯಬೇಕೆಂದು ಅದೆಷ್ಟೋ ವರ್ಷಗಳಿಂದ ಎಣಿಸುತ್ತಿದ್ದೆ.
ಆದರೆ ಅದಕ್ಕೆ ಈವರೆಗೂ ಕಾಲಕೂಡಿ
ಬರಲಿಲ್ಲ. ಈಗ ಬರೆಯಲೇಬೇಕೆಂದು ತೀರ್ಮಾನಿಸಿ
ಬರೆಯುತ್ತಿದ್ದೇನೆ. ನನ್ನ ಮೇಲೆ ಶೃಂಗೇರಿ
ಶಾರದಾಂಬೆಯ ಕೃಪೆಯಿರಲಿ.
ನನಗೆ
ಇಲ್ಲಿ ಒಂದು ಸಮಸ್ಯೆ ಎದುರಾಗಿದೆ.
ನಾನೊಬ್ಬ ಕವಿಯಲ್ಲ ಮತ್ತು ಕಾದಂಬರಿಕಾರನೂ
ಅಲ್ಲ. ಹಾಗಿದ್ದರೆ ನನಗೆ ಪ್ರತಿಯೊಂದು ಘಟನೆಯನ್ನೂ
ವರ್ಣನೆಮಾಡಿ ಹೇಳುವ ಸಾಮರ್ಥ್ಯ ಇರುತ್ತಿತ್ತು.
ನನಗೆ ಅದಿಲ್ಲ. ಆದರೆ ನಾನೊಂದು
ಕೆಲಸ ಮಾಡಬಲ್ಲೆ. ಅದೆಂದರೆ ಇದ್ದದ್ದನ್ನು ಇದ್ದಂತೆ
ಹೇಳುವುದು. ದೇವರು ನನಗೆ ಬರೆಯುವ
ಶಕ್ತಿಯನ್ನು ಕರುಣಿಸಿದ್ದಾನೆ. ನನ್ನ ಮೆಚ್ಚಿನ ಪ್ರಸಿದ್ಧ
ಬಂಗಾಳಿ ಕಾದಂಬರಿ ಸಾರ್ವಭೌಮ ಶರಶ್ಚಂದ್ರರು
ಹೇಳುವಂತೆ "ಎರಡು ಕಾಲಿದ್ದವರೆಲ್ಲಾ ನಡೆಯಬಲ್ಲರು.
ಆದರೆ ಎರಡು ಕೈಇದ್ದವರೆಲ್ಲಾ ಬರೆಯಲಾರರು”. ಹೌದು.
ನನಗೆ ಆ ಶಕ್ತಿಯಿದೆ. ಆದ್ದರಿಂದ
ಬರವಣಿಗೆ ಮುಂದುವರಿಸುತ್ತೇನೆ.
ಇಲ್ಲಿ
ನಾನೊಂದು ವಿಷಯ ಹೇಳಲೇ ಬೇಕು.
ಅದು ನನ್ನ ಹೆಸರಿಗೆ ಸಂಬಂಧಪಟ್ಟಿದ್ದು.
ನನ್ನಮ್ಮಅವಳ ತಂದೆತಾಯಿಗೆ ಒಬ್ಬಳೇ ಮಗಳು. ಹಾಗಾಗಿ
ನಮಗೆ ಸೋದರಮಾವನೆಂದರೆ ಅವಳ ಚಿಕ್ಕಪ್ಪನ ಮಗ
ಕೃಷ್ಣಮೂರ್ತಿ ಎಂಬುವರು ಮಾತ್ರಾ. ನಮ್ಮಮ್ಮನಿಗೆ
ಅವರಮೇಲೆ ತುಂಬಾ ಪ್ರೀತಿ. ಅತ್ಯಂತ
ಸ್ಪುರದ್ರೂಪಿಯಾಗಿದ್ದ ಅವರಿಗೆ ಆಗ ಮದುವೆಯಾಗಿ
ಕೆಲವೇ ದಿನಗಳಾಗಿದ್ದವು. ನಾನು ಹುಟ್ಟಿದದಿನವೇ ನಮ್ಮಮನೆಗೆ
ಬಂದು ಮಗುವಿಗೆ ತಮ್ಮ ಹೆಸರನ್ನೇ
ಇಡಬೇಕೆಂದು ಅಮ್ಮನ ಹತ್ತಿರ ಹೇಳಿದರಂತೆ.
ವಿಚಿತ್ರವೆಂದರೆ ನನ್ನ ನಾಮಕರಣವಾದ ಕೆಲವೇ
ದಿನಗಳಲ್ಲಿ ಅವರು ತಮ್ಮ ಚಿಕ್ಕ
ವಯಸ್ಸಿನ ಪತ್ನಿಯನ್ನು ತೊರೆದು ಅಕಾಲ ಮರಣ
ಹೊಂದಿದರಂತೆ. ಅವರಿಗೆ ಆಗಲೇ ತಮ್ಮ
ಮರಣದ ಮುನ್ಸೂಚನೆ ಸಿಕ್ಕಿತ್ತೇ? ಅದಕ್ಕಾಗಿಯೇ
ತಮ್ಮ ಹೆಸರನ್ನು ನನಗೆ ಇಟ್ಟು ಹೋದರೇ?
ಇದು ಈಗ ಒಂದು ಯಕ್ಷಪ್ರಶ್ನೆಯಷ್ಟೇ.
ಆ
ಕಾಲದಲ್ಲಿ ಯಾವುದೇ ಹೆರಿಗೆ ಆಸ್ಪತ್ರೆಗಳಿರಲಿಲ್ಲ.
ನಮ್ಮೂರಿಗೆ ಸ್ವಲ್ಪ ದೂರದಲ್ಲಿದ್ದ ಕುಳುಗಾರು
ಎಂಬಲ್ಲಿ ಪುಟ್ಟು ಎಂಬ ಸೂಲಗಿತ್ತಿ
ಇದ್ದಳು. ಗರ್ಭಿಣಿಗೆ ಒಂಬತ್ತು ತಿಂಗಳು ಹತ್ತಿರ
ಬಂದಾಗ ಅವಳು ಮನೆಗೆ ಬಂದು
ಗರ್ಭಿಣಿಯನ್ನು ಪರೀಕ್ಷಿಸಿ ಮಗು ಹುಟ್ಟುವ ದಿನದ
ಅಂದಾಜುಮಾಡಿ ಹೇಳಿ ಹೋಗುತ್ತಿದ್ದಳು.
ಗರ್ಭಿಣಿಗೆ ಪ್ರಸವ ವೇದನೆ ಶುರುವಾದೊಡನೆ
ಅವಳಿಗೆ ವರ್ತಮಾನ ತಲುಪಿ
ಹಗಲಿರಲಿ ರಾತ್ರಿಯಿರಲಿ
ಹಾಜರಾಗುತ್ತಿದ್ದಳು. ಪುಟ್ಟುವಿನ ನೇತೃತ್ವದಲ್ಲಿ ನಡೆದ ಹೆರಿಗೆಗಳಲ್ಲಿ ಯಾವುದೇ
ಮಗುವಿನ ಅಥವಾ ತಾಯಿಯ ಜೀವಕ್ಕೆ
ಅಪಾಯವಾದ ಉದಾಹರಣೆಗಳಿರಲಿಲ್ಲ. ಅಷ್ಟೊಂದು ನಿಪುಣ ಸೂಲಗಿತ್ತಿಯವಳು. ತನ್ನ
ಕೊನೆಗಾಲದವರೆಗೂ ಈ ವೃತ್ತಿಯನ್ನು ಮುಂದುವರಿಸಿದ
ಅವಳು ಅದಕ್ಕೆ ಹಣವನ್ನು ತೆಗೆದುಕೊಳ್ಳುವ
ಕ್ರಮವನ್ನೇ ಇಟ್ಟಿರಲಿಲ್ಲ. ಆದರೆ ಅವಳು ಮೂರುತಿಂಗಳಿನ
ಮಗುವನ್ನು ನೋಡಲು ಬಂದಾಗ ಮನೆಯವರು
ಅವಳ ಮಡಿಲಿಗೆ ಒತ್ತಾಯದಿಂದ ಅಡಿಕೆ,
ಅಕ್ಕಿ ಮತ್ತು ಬಟ್ಟೆ ತುಂಬುತ್ತಿದ್ದರು.
ನನ್ನ ಜನನವೂ ಇದೇ ಪುಟ್ಟುವಿನ
ಕೈಯಲ್ಲೇ ಆಯಿತು.
ನಮ್ಮ
ಮನೆಯ ಮಾಮೂಲಿ ಕ್ರಮದಂತೆ ನನ್ನ ತಂದೆಯವರು ನನ್ನ ಹುಟ್ಟಿನ
ನೆನಪಿಗೆ ಒಂದು ಅಡಿಕೆ ಸಸಿಯನ್ನು ನಮ್ಮ ತೋಟದ ಕೆರೆಯದಂಡೆಯಲ್ಲಿ ನೆಟ್ಟಿದ್ದರು. ಅದು ಕೆಲವು ಅಡಚಣೆಗಳನಡುವೆ
ಚೆನ್ನಾಗಿಯೇ ಬೆಳೆದು ಫಲನೀಡಲಾರಂಭಿಸಿತು. ನಾನು ಊರಿಗೆ ಹೋದಾಗಲೆಲ್ಲಾ ಅದರ ಬೆಳವಣಿಗೆಯನ್ನು ಗಮನಿಸುತ್ತಿದ್ದೆ.
ಈಚೆಗೆ ಅದರ ಪರಿಸ್ಥಿಥಿ ತಿಳಿದಿಲ್ಲ.
ನನ್ನ
ಬಾಲ್ಯಕಾಲದ ನೆನಪುಗಳು ನನ್ನ ಯಾವ ವಯಸ್ಸಿನಿಂದ
ಶುರುವಾಗುತ್ತವೆಂದು ಈಗ ನಾನು ಹೇಳಲಾರೆ.
ಆದರೆ ನಾನು ನನಗೆ ತಿಳಿದಂತೆ
ಯಾವಾಗಲೂ ನನ್ನ ತಂದೆಯವರಿಗೆ ಅಂಟಿಕೊಂಡಿರುತ್ತಿದ್ದೆ.
ಅವರ ಹಾಸಿಗೆಯಲ್ಲೇ ಮಲಗಿ ಅವರಿಂದ ಬಾಯಿಪಾಠ
ಹೇಳಿಸಿಕೊಂಡ ನೆನಪು ಹಚ್ಚ ಹಸುರಾಗಿದೆ.
ಪ್ರತಿಯೊಂದು ವಾರದ , ತಿಥಿಗಳ, ತಿಂಗಳುಗಳ,ರಾಶಿಗಳ,ಸಂವತ್ಸರಗಳ , ನಕ್ಷತ್ರಗಳ
ಹಾಗೂ ಅಷ್ಟ ದಿಕ್ಪಾಲಕರ ಹೆಸರುಗಳನ್ನು
ರಾತ್ರಿ ಮಲಗುವ ಮುನ್ನ ಹೇಳಲೇ
ಬೇಕಿತ್ತು. ಇಷ್ಟಲ್ಲದೇ ನಿದ್ದೆಹೋಗುವ ಮೊದಲು "ರಾಮಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ-----
" ಹಾಗೂ "ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣೀಪೀಠ ಮುತ್ತಿನವುಂಡೆ ಹೊನ್ನೇಘಂಟೆ
-----" ಎಂಬ ಎರಡು ಮಂತ್ರಗಳನ್ನು ಹೇಳಬೇಕಿತ್ತು.
ಬೆಳಿಗ್ಗೆ ಯಾವಾಗಲೂ ಬಲ ಮಗ್ಗುಲಲ್ಲೇ
ಏಳಬೇಕಿತ್ತು. ಸ್ನಾನದ ಕೊನೆಯಲ್ಲಿ "ಗೋವಿಂದ
ಗೋವಿಂದ " ಎಂದು ಸ್ಮರಣೆ ಮಾಡಿ
ಕೊನೆಯ ಚೆಂಬಿನ ನೀರನ್ನು ಮೈಮೇಲೆ
ಎರೆದುಕೊಳ್ಳಬೇಕಿತ್ತು. ಊಟದ ಮುನ್ನ "ಅನ್ನಪೂರ್ಣೇ
ಸದಾಪೂರ್ಣೆ ಶಂಕರೇ ಪ್ರಾಣವಲ್ಲಭೆ " ಎಂಬ
ಮಂತ್ರ ಹೇಳಲೇ ಬೇಕಿತ್ತು. ತಂದೆಯವರು ಇಲ್ಲದಿದ್ದರೆ ನಾನು ದೊಡ್ಡಣ್ಣನ ಹಾಸಿಗೆಯಲ್ಲಿ
ಮಲಗಿ ಅವನಿಗೆ ಬಾಯಿಪಾಠ ಒಪ್ಪಿಸಬೇಕಿತ್ತು.
ನನಗೆ
ನನ್ನ ತಂದೆಯವರ ಪರಾಕ್ರಮಗಳ ಮೇಲೆ
ವಿಶೇಷ ಅಭಿಮಾನವಿತ್ತು. ಅವರ ಸಾಹಸಗಳಿಗೆ ಕೊನೆ
ಮೊದಲೇ ಇರಲಿಲ್ಲ. ಯಾವ ಸಿನಿಮಾ ಹೀರೋಗೂ
ಅವರನ್ನು ಮೀರಿಸುವ ಸಾಮರ್ಥ್ಯವಿರಲಿಲ್ಲ . ಅವರ
ಶಬ್ದಕೋಶದಲ್ಲಿ "ಭಯ" ಎಂಬ ಪದವೇ ಇರಲಿಲ್ಲ.
ಯಾವುದೇ ಮರವನ್ನು ಲೀಲಾಜಾಲವಾಗಿ ಏರಬಲ್ಲವರಾಗಿದ್ದರು.
ದಟ್ಟ ಮಳೆಗಾಲದಲ್ಲಿ ಅಡಿಕೆ ಮರಗಳನ್ನೇರಿ ಮರದಿಂದ
ಮರಕ್ಕೆ ದಾಟುತ್ತಾ ಔಷಧಿಯನ್ನು ಸಿಂಪಡಿಸುತ್ತಿದ್ದರು. ಅವರಿಗೆ ಸರ್ಪಗಳೆಂದರೆ ಯಾವುದೇ
ಭಯವಿರಲಿಲ್ಲ. ಆ ಕಾಲದಲ್ಲಿ ನಮ್ಮ
ಮಲೆನಾಡಿನ ಮನೆಗಳಲ್ಲಿ ಸರ್ಪಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು.
ನಾವು ಅವುಗಳನ್ನು ನೋಡಿ ಜೀವಭಯದಿಂದ ನಡುಗುತ್ತಿದ್ದೆವು.
ಆದರೆ ನಮ್ಮ ತಂದೆಯವರು ಅವುಗಳನ್ನು
ಕೊಲ್ಲುವುದರಲ್ಲಿ ನಿಸ್ಸೀಮರಾಗಿದ್ದರು. ಆದರೆ ನಾಗ ಸರ್ಪಗಳನ್ನು
ಮಾತ್ರಾ ಕೊಲ್ಲುತ್ತಿರಲಿಲ್ಲ. ಅವುಗಳ
ಹೆಡೆಯನ್ನು ಗಮನಿಸಿದಾಗ ಅದರಲ್ಲಿ ವಿಷ್ಣುಪಾದವಿದ್ದರೆ ನಾಗಸರ್ಪವೆಂದು
ತೀರ್ಮಾನಿಸಿ ಅದಕ್ಕೆ ಸಾಷ್ಟಾಂಗ ನಮಸ್ಕಾರಮಾಡಿ
ಯಾವುದೇ ಹಾನಿ ಮಾಡದೆ ತನ್ನ
ಹಾದಿ ಹಿಡಿದುಕೊಂಡು ಹೋಗುವಂತೆ ಬೇಡುತ್ತಿದ್ದರು. ಆಗ ಅದು ಸರಸರನೆ
ಹರಿದು ಕಣ್ಮರೆಯಾಗುತ್ತಿತ್ತು.
ನಮಗೆಲ್ಲರಿಗೂ
ಆ ದಿನಗಳಲ್ಲಿ ದೆವ್ವಗಳೆಂದರೆ
ತುಂಬಾ ಭಯ. ಅದರಲ್ಲೂ "ಕೊಳ್ಳಿ
ದೆವ್ವ " ಎಂದರೆ ವಿಶೇಷ ಭಯ.
ಈ ಹೆಣ್ಣು ಕೊಳ್ಳಿದೆವ್ವ
ನಮ್ಮ ಇಡೀ ಗ್ರಾಮದ ಸುತ್ತ
ಕೈಯಲ್ಲಿ ಉರಿಯುವ ಕೊಳ್ಳಿ
ಹಿಡಿದುಕೊಂಡು ರಾತ್ರಿ ಕಾಲದಲ್ಲಿ ಸುತ್ತು
ಹಾಕುತ್ತಿತ್ತಂತೆ. ಅದು ನಿಜವಾದ ದೆವ್ವ
ಹೌದೋ ಅಲ್ಲವೋ ಎಂದು ತಿಳಿಯಲು
ಒಂದೇ ದಾರಿಯೆಂದರೆ
ಅದರ ಪಾದಗಳನ್ನು
ಪರೀಕ್ಷಿಸುವುದು. ಅವು ಯಾವಾಗಲೂ ಹಿಂದಕ್ಕೆ
ತಿರುಗಿರುತ್ತಿದ್ದವಂತೆ. ನಮ್ಮ ತಂದೆ ಒಂದು
ಬಾರಿ ಅದಕ್ಕೆ ಸರಿಯಾಗಿ ಬುದ್ಧಿ
ಕಲಿಸಿದ್ದರಂತೆ. ಅವರೊಮ್ಮೆ ಕೊಪ್ಪದ ಸಂತೆ ಮುಗಿಸಿ
ಬರುವಾಗ ನಡು ರಾತ್ರಿಯಾಗಿತ್ತಂತೆ.
ಅದೊಂದು ಅಮಾವಾಸ್ಯೆಯ ಕಾಳರಾತ್ರಿ. ಆದರೆ ನಮ್ಮ ತಂದೆಗೆ
ಕಡುಕತ್ತಲೆಯಲ್ಲೂ ಕಣ್ಣುಗಳು ಕಾಣಿಸುತ್ತಿದ್ದವು. ಹಾಗೂ ಅವರಿಗೆ ಯಾವುದೇ
ಭಯಗಳಿರಲಿಲ್ಲ. ಆಗ ಇದ್ದಕ್ಕಿದ್ದಂತೆ ಅವರ
ಮುಂದೆ ವಯಸ್ಸಾದ ಹೆಣ್ಣಿನಂತೆ ಪ್ರತ್ಯಕ್ಷವಾದ
ಕೊಳ್ಳಿದೆವ್ವ ಅವರಿಂದ ಏನೋ ಸಹಾಯ
ಕೇಳುವಂತೆ ನಾಟಕ ಮಾಡಿತಂತೆ. ಅವರು
ಕೂಡಲೇ ಅದರ ಪಾದಗಳನ್ನು ಪರೀಕ್ಷಿಸಿದರಂತೆ.
ಆಗ ಅದರ ಬಣ್ಣ ಬಯಲಾಯಿತಂತೆ.
ಬೇರೆ ಯಾರಾಗಿದ್ದರೂ ಹೆದರಿ ನಡುಗುವ ಸನ್ನಿವೇಶ
ಅದು. ಆದರೆ ನಮ್ಮ ತಂದೆ
ಸ್ವಲ್ಪವೂ ಹೆದರದೇ ಅದರ ಕೈಯಲ್ಲಿದ್ದ
ಕೊಳ್ಳಿಗಳನ್ನು ಕಿತ್ತು ಅದರ ಮುಖದಮೇಲೆ
ಎರಚಿದರಂತೆ. ಕಕ್ಕಾಬಿಕ್ಕಿಯಾದ ದೆವ್ವ ತಿರುಗಿನೋಡದೆ ಪಲಾಯನ
ಮಾಡಿತಂತೆ.
ಈ ಕಥೆಯನ್ನು ನಾವು
ಬೇರೆಬೇರೆಯವರ ಬಾಯಿಂದ ಕೇಳಿದ್ದೆವು. ಹಾಗೂ
ಪ್ರತಿಬಾರಿಯೂ ನಮ್ಮ ತಂದೆಯವರ ಬಗ್ಗೆ
ಹೆಮ್ಮೆ ಪಟ್ಟಿದ್ದೆವು.
ನಮ್ಮ
ಮನೆಯ ಹತ್ತಿರವೇ ಇದ್ದ ಇನ್ನೊಂದು ದೆವ್ವದ
ಕಥೆ ಹೀಗಿತ್ತು. ಅದು ಪ್ರತಿ ರಾತ್ರಿ
ಒಂದು ಹಲಸಿನಮರದ ಕೆಳಗೆ ಒಂದು ನಿರ್ಧಿಷ್ಟ
ವೇಳೆಗೆ ಪ್ರತ್ಯಕ್ಷವಾಗುತ್ತಿತ್ತು. ಹಾಗೂ
ಸುಮಾರು ಒಂದು ಘಂಟೆ ಅದು
ಬೊಬ್ಬೆ ಹಾಕುತ್ತಿತ್ತು. ಅದರ ಕೂಗನ್ನು ಕೇಳಿ
ಚಿಕ್ಕ ಮಕ್ಕಳಾದ ನಾವೆಲ್ಲ ಹಾಸಿಗೆಯಲ್ಲೇ
ಹೆದರಿ ನಡುಗುತ್ತಿದ್ದೆವು. ನಮ್ಮ ತಂದೆ ಅದಕ್ಕೆ
ಬುದ್ಧಿ ಕಲಿಸಲು ತೀರ್ಮಾನಿಸಿದರು. ಅದಕ್ಕೆ
ಸರಿಯಾದ ತಿರುಮಂತ್ರ ಹಾಕಲು ಯೋಜನೆ ಮಾಡಿದರು.
ಆ ರಾತ್ರಿ ಅವರು
ದೆವ್ವ ಬರುವ ಮುಂಚೆಯೇ ಮರದ
ಕೆಳಗೆ ಹಾಜರಾದರು. ಹಾಗೂ ದೆವ್ವವನ್ನು ಅಣಕಿಸುವಂತೆ ಅದರ
ಧ್ವನಿಯಲ್ಲೇ ಕೂಗುಹಾಕತೊಡಗಿದರು. ಇದು ಗೊತ್ತಿಲ್ಲದ ದೆವ್ವ
ತನ್ನ ಮಾಮೂಲಿ ವೇಳೆಗೆ ಅಲ್ಲಿ
ಹಾಜರಾಯಿತು. ಆದರೆ
ತನ್ನ ಜಾಗದಲ್ಲಿ ಇನ್ನೊಂದು ದೆವ್ವವಿರುವುದನ್ನು ಕಂಡು ಅಚ್ಚರಿಗೊಂಡು ಕಾಲಿಗೆ
ಬುದ್ಧಿ ಹೇಳಿತು. ಪುನಃ ಅದು
ಅಲ್ಲಿಗೆ ಎಂದೂ ವಾಪಾಸ್ ಬರಲಿಲ್ಲ.
ನಮ್ಮ ತಂದೆಯವರ ಸಾಹಸಕ್ಕೆ ಮಿತಿಯೇ
ಇರಲಿಲ್ಲ.
ನಾನು
ಚಿಕ್ಕವನಾಗಿದ್ದಾಗ ಒಮ್ಮೆ ದೆವ್ವ ನನ್ನ
ಹತ್ತಿರವೇ ಓಡಾಡುತ್ತಿದ್ದುದು ನೆನಪಿಗೆ ಬರುತ್ತಿದೆ. ನಾನು
ನನ್ನ ದೊಡ್ಡಣ್ಣನೊಡನೆ ಒಮ್ಮೆ ಕೆಳಕೊಡಿಗೆ ಎಂಬಲ್ಲಿದ್ದ
ನನ್ನ ಅಮ್ಮನ ಸೋದರಮಾವನ ಮನೆಗೆ
ಹೋಗಿದ್ದೆ. ನಾವು
ಆ ರಾತ್ರಿ ಅಲ್ಲಿಯೇ
ತಂಗಬೇಕಾಯಿತು. ಅದೊಂದು ಕಗ್ಗತ್ತಲಿನ ಅಮಾವಾಸ್ಯೆಯ
ರಾತ್ರಿಯಾಗಿತ್ತು. ನಾವು ಮಲಗುವ ಮುಂಚೆ
ನಮಗೊಂದು ಎಚ್ಚರಿಕೆ ನೀಡಲಾಯಿತು. ಆ ಮನೆಗೆ ಸಮೀಪದಲ್ಲೇ
ಇದ್ದ ಒಂದು ದಿಂಡಿನ ಮರದಲ್ಲಿ
ಒಂದು ದೆವ್ವ ವಾಸವಾಗಿದ್ದು ರಾತ್ರಿ
ಮನೆಯ ಸುತ್ತಾ ಗಸ್ತು ತಿರುಗುವ
ಅಭ್ಯಾಸ ಇಟ್ಟುಕೊಂಡಿತ್ತಂತೆ. ಮನೆಗೆ ಯಾರಾದರೂ ಹೊಸಬರು
ಬಂದರೆ ರಾತ್ರಿ ಅವರ ಹಾಸಿಗೆಯ
ಹತ್ತಿರ ಬಂದು ಅವರ ಹೆಸರು
ಹೇಳಿ ಕರೆಯುವುದಂತೆ. ನಾವು ಮಾತ್ರ ಅದರ
ಕರೆಗೆ ಓಗೊಡಲೇ ಕೂಡದಂತೆ! ಅಷ್ಟನ್ನು ಕೇಳುತ್ತಿದ್ದಂತೆ ಹಾಸಿಗೆಗೆ ಹೋಗುವ ಮುನ್ನವೇ ನನ್ನ
ಮೈ ನಡುಗಲಾರಂಭಿಸಿತು. ನಮ್ಮ ಸಮಸ್ಯೆ ಎಂದರೆ
ನಾವು ಜಗಲಿಯ ಮೇಲೆ ಮಲಗಬೇಕಾಗಿತ್ತು.
ಹಾಗೂ ಅದಕ್ಕೆ ನಮ್ಮ ಅದೇಖಂಡಿ
ಮನೆಯಂತೆ ಯಾವುದೇ ಬಾಗಿಲಿರಲಿಲ್ಲ.
ನಾನು
ಅಣ್ಣನ ಪಕ್ಕದಲ್ಲೇ ಹಾಸಿಗೆಯಲ್ಲಿ ಮಲಗಿ ಮುಖದ ಮೇಲೆ
ಗಟ್ಟಿಯಾಗಿ ಮುಸುಕೆಳೆದುಕೊಂಡೆ. ಮೊದಲೇ ಹೇಳಿದಂತೆ ಅರ್ಧ
ರಾತ್ರಿಯಲ್ಲಿ ದೆವ್ವದ ಗಸ್ತು ಪ್ರಾರಂಭವಾಗಿದ್ದು
ಅನುಭವಕ್ಕೆ ಬಂತು. ಅಷ್ಟು ಮಾತ್ರವಲ್ಲ.
ಅದು ನನ್ನ ಹಾಸಿಗೆಯ ಹತ್ತಿರಬಂದು
ನನ್ನ ಹೆಸರು ಹೇಳಿ ಕರೆಯಲಾರಂಭಿಸಿತು.
ನಾನು ನನ್ನಣ್ಣನನ್ನು ಗಟ್ಟಿಯಾಗಿ ತಬ್ಬಿಕೊಂಡು ರಾಮನಾಮ ಜಪ ಮಾಡಲಾರಂಭಿಸಿದೆ. ರಾಮನಾಮ
ದೆವ್ವದ ಕಿವಿಗೆ ಬೀಳುತ್ತಿದ್ದಂತೆ ಅದು
ಕಾಲಿಗೆ
ಬುದ್ಧಿ ಹೇಳಿದ್ದು ಗೊತ್ತಾಯಿತು.
ದೆವ್ವವನ್ನು
ಬಿಟ್ಟರೆ ನಮಗೆ ತುಂಬಾ ಭಯ
ಹುಟ್ಟಿಸುತ್ತಿದ್ದ ವಿಷಯವೆಂದರೆ ನಾವು ಎಂದೂ ಕಣ್ಣಾರೆ
ನೋಡದ ಗುಮ್ಮನದು. ನಾವು ಊಟಮಾಡದೇ ತೊಂದರೆ
ಕೊಟ್ಟರೆ ಅಥವಾ ಅಳುವುದನ್ನು ನಿಲ್ಲಿಸದಿದ್ದರೆ
ಗುಮ್ಮನನ್ನು ಕರೆದು ಬಿಡುವುದಾಗಿ ಹೆದರಿಸುವುದು
ಮಾಮೂಲಿಯಾಗಿ ಬಿಟ್ಟಿತ್ತು. ಈ ಗುಮ್ಮ ನಡು
ರಾತ್ರಿಯಲ್ಲಿ ಕೂಗುತ್ತಿರುವುದನ್ನು ನಾವು ಎಷ್ಟೋ ಬಾರಿ
ಕೇಳಿ ಭಯಪಟ್ಟಿದ್ದೆವು. ಇಷ್ಟು ಮಾತ್ರವಲ್ಲ. ಆ
ಶ್ರೀಕೃಷ್ಣ ಪರಮಾತ್ಮನೇ ಗುಮ್ಮನಿಗೆ ಹೆದರುತ್ತಿದ್ದನೆಂದು ನಮಗೆ ಗೊತ್ತಿತ್ತು. ಏಕೆಂದರೆ
ನಮ್ಮ ಅಕ್ಕಂದಿರು ನಮಗೆ ತೊಟ್ಟಿಲಲ್ಲಿ ಜೋಗುಳ
ಹಾಡುವಾಗ "ಅಮ್ಮಾ ನೀನು ಗುಮ್ಮನಾ
ಕರೆಯದಿರೇ " ಎಂಬ ದಾಸರ ಪದವನ್ನು
ಹಾಡುವುದನ್ನು ನಾವು ಕೇಳಿದ್ದೆವು. ದೇವರೇ
ಈ ರೀತಿ ಗುಮ್ಮನಿಗೆ ಹೆದರುತ್ತಿದ್ದನ್ನು ಕೇಳಿದ
ನಮಗೆ ಗುಮ್ಮನ ಬಗ್ಗೆ ತುಂಬಾ
ಭಯವಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ನಾವು ದೊಡ್ಡವರಾದ ನಂತರವೇ
ನಮಗೆ ಗುಮ್ಮನೆಂದರೆ ಕೇವಲ ಯಾರಿಗೂ ಹಾನಿಮಾಡದ
ಹಾಗೂ ರಾತ್ರಿ ಮಾತ್ರ ಕಣ್ಣು
ಕಾಣುವ ಗೂಗೆಯೆಂದು ಗೊತ್ತಾಯಿತು.
----ಮುಂದುವರಿಯುವುದು ----
No comments:
Post a Comment