Friday, December 18, 2020

ಗಡ್ಡದ ಶಾಮಯ್ಯ

 ನಮ್ಮ ಬಾಲ್ಯದ ಹೀರೋ ಗಡ್ಡದ ಶಾಮಯ್ಯನವರ ಕಥೆಯನ್ನು ನಾನು ೧೨ ವರ್ಷಕ್ಕೂ ಹಿಂದೆ ಇಂಗ್ಲೀಷಿನಲ್ಲಿ ಬರೆದಿದ್ದೆ. ನನ್ನ ಅಣ್ಣ ಎ ವಿ ಎಲ್ ರಾವ್ ಮಾಡಿದ್ದ ಅದರ ಭಾವಾನುವಾದ ಕನ್ನಡ ಮ್ಯಾಗಜಿನ್ ಒಂದರಲ್ಲಿ ಪ್ರಕಟವಾಗಿತ್ತು. ನಾನೀಗ ಅದನ್ನು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಪ್ರಕಟಿಸುತ್ತಿದ್ದೇನೆ:


ಎಷ್ಟೋ ಬಾರಿ ಫ್ಯಾಂಟಮ್, ಮಾಂಡ್ರೇಕ್ ಅಥವಾ ಬ್ಯಾಟ್ಮ್ಯಾನ್ ಕತೆಗಳನ್ನೋದುವಾಗ, ನನ್ನ ಬಾಲ್ಯದಲ್ಲಿ ಕಾಲ್ಪನಿಕ ಹೀರೋಗಳನ್ನು ಮೀರಿಸಿದ ಅಲೌಕಿಕ ವ್ಯಕ್ತಿ ಇದ್ದರೇ? ಎಂಬ ಯೋಚನೆ ಮನಸ್ಸಿನಲ್ಲಿ ಹಾದುಹೋಗುವುದುಂಟು. ಹೌದು. ಅಂತಹ ವ್ಯಕ್ತಿ ಇದ್ದದ್ದು ಖಂಡಿತ ನಿಜ! ಮತ್ತೆ  ಹೀರೋ ಯಾರದ್ದೋ ಹುಚ್ಚು ಮನಸ್ಸಿನಲ್ಲಿ ತಯಾರಾದ ಕಾಲ್ಪನಿಕ ಕಥಾನಾಯಕ ಕೂಡ ಅಲ್ಲ! ರಕ್ತ, ಮಾಂಸ ತುಂಬಿಕೊಂಡು ನೆಲದ ಮೇಲೆ ಓಡಾಡಿದ ನರಮಾನವ!

ಅದ್ಬುತ ಮನುಷ್ಯನನ್ನು ನಾನು ಮೊದಲ ಬಾರಿ ನೋಡಿದ್ದು ಒಂದು ತುರ್ತು ಸನ್ನಿವೇಶದಲ್ಲಿ. ಯಾವುದೇ ಮಲೆನಾಡಿನ ಹಳ್ಳಿಯಲ್ಲಿರುವಂತೆ ನಮ್ಮದೂ ಕೂಡ, ಕಾಡು ಮತ್ತು ತೋಟದ ನಡುವಿನಲ್ಲಿರುವ ಒಂದು ಒಂಟಿ ಮನೆ. ಒಂದು ನಡು ಮದ್ಯಾಹ್ನ ಒಬ್ಬ ಸಾಧು ಭಿಕ್ಷೆ ಬೇಡಲು ನಮ್ಮ ಮನೆಯ ಮುಂದಿದ್ದ ಅಂಗಳಕ್ಕೆ ಬಂದಿದ್ದ. ಸಾಧು ಸನ್ಯಾಸಿಗಳು ಭಿಕ್ಷೆ ಬೇಡುತ್ತಾ ಊರೂರು ಸುತ್ತುವುದು ಆಗಿನ ಕಾಲದ ದಿನನಿತ್ಯದ ವಿದ್ಯಮಾನ. ಬಂದವರು ಹಿರಿಯರ ಮನ ಮೆಚ್ಚುವಂತೆ ಮಾತನಾಡಿ, ಒಳ್ಳೆಯದಾಗಲಿ ಎಂದು ಹರಸಿ, ಉಪಾಯವಾಗಿ ಒಂದಿಷ್ಟು ಅಕ್ಕಿಯನ್ನೋ ಅಥವಾ ಅಡಿಕೆಯನ್ನೋ ಗಿಟ್ಟಿಸಿಕೊಂಡು ಎತ್ತಲೋ ಹೋಗಿಬಿಡುತ್ತಿದ್ದರು.

ಆದರೆ ಕರಾಳ ರೂಪಿನ ಸನ್ಯಾಸಿ ಮಾತ್ರ ಸಿಕ್ಕಿದ್ದನ್ನು ಲಪಟಾಯಿಸಿಕೊಂಡು ಹೋಗುವ ದುರುದ್ದೇಶದಿಂದಲೇ ಬಂದಂತಿತ್ತು. ದುರದೃಷ್ಟವಶಾತ್ ಸಮಯದಲ್ಲಿ ಅಪ್ಪ ಮತ್ತು ದೊಡ್ಡಣ್ಣ ಇಬ್ಬರೂ ಮನೆಯಲ್ಲಿರಲಿಲ್ಲ. ಇನ್ನೂ ಚಿಕ್ಕ ಮಕ್ಕಳಾಗಿದ್ದ ನಾವು, ಮಾಂತ್ರಿಕನಂತಿರುವ ಸಾಧು ಯಾವುದೋ ಮೋಡಿ ಮಾಡಿ ಮನೆಗೆ ವಿಪತ್ತನ್ನು ತಂದೇ ತರುತ್ತಾನೆಂದು ಭಯಭೀತರಾಗಿದ್ದೆವು. ಕಣ್ಣಿಗೆ ಹೊಡೆಯುವಂತೆ ಕಾಣುತ್ತಿದ್ದ ನಮ್ಮ ಅಸಹಾಯಕತೆಯನ್ನು ದುರುಪಯೋಗಿಸಿಕೊಂಡ ಸನ್ಯಾಸಿ, ಅಮ್ಮ ಧರಿಸಿಕೊಂಡ ಒಡವೆಗಳನ್ನೆಲ್ಲಾ ಬಿಚ್ಚಿ ಕೊಡುವಂತೆ ಒಮ್ಮೆಗೇ ಬೆದರಿಕೆ ಹಾಕಿದ. ನಾವೆಲ್ಲಾ ಕಂಗಾಲಾಗಿ ಹೋ ಎಂದು ಅಳುತ್ತಾ ಸಹಾಯಕ್ಕಾಗಿ ಕೂಗಿಕೊಂಡೆವು. ಆದರೆ ಅದು ಅಕ್ಷರಶಃ ಅರಣ್ಯ ರೋದನವೇ ಆಗಿತ್ತು.

ಆಗ ನೋಡಿ; ಇದ್ದಕ್ಕಿದ್ದ ಹಾಗೆ ಆಕಾಶದಿಂದ ಧರೆಗಿಳಿದು ಬಂದ ಹಾಗೆ ಒಬ್ಬ ಮಹಾ ಪುರುಷ ಪ್ರತ್ಯಕ್ಷನಾದ! ಎದೆಯ ಮಟ್ಟಕ್ಕೆ ಬಿಟ್ಟಿದ್ದ ಗಡ್ಡ, ವಿಸ್ತಾರವಾಗಿ ಹರಡಿದ ಭುಜಗಳು, ಕೈಯಲ್ಲೊಂದು ಮಾರುದ್ದದ ನಾಗರ ಬೆತ್ತ; ಆಜಾನುಬಾಹು! ಎಲ್ಲವೂ ಅಸಹಾಯಕರಾದ ನಮ್ಮ್ರ ರಕ್ಷಣೆಗಾಗಿ ಬಂದ "ಹೀರೋ"  ಲಕ್ಷಣಗಳೇ! ರೆಪ್ಪೆ ಮುಚ್ಚಿ ತೆಗೆಯುವುದರೊಳಗಾಗಿ  ಧೂರ್ತ ಸನ್ಯಾಸಿಗೆ ಹಿಗ್ಗಾಮುಗ್ಗಾ ಧರ್ಮದೇಟು ಬಿತ್ತು! ದುಷ್ಟ ಶಿಕ್ಷಣವೆಂದರೆ ಇದೇ  ಅಲ್ಲವೇ? ಕ್ಷಣ ಮಾತ್ರದಲ್ಲಿ ನಡೆದು ಹೋದ ಅಸಾಮಾನ್ಯ ಘಟನೆ, ಅದು ನೀಡಿದ ಸಂತೃಪ್ತಿ, ಇವನ್ನು ಮತ್ತೆ ನನ್ನ ಜೀವಮಾನದಲ್ಲಿ ಅನುಭವಿಸಿಯೇ ಇಲ್ಲವೆಂದು ಹೇಳಲೇಬೇಕು.

ಅಸದೃಶ ವ್ಯಕ್ತಿಯ ಬಗ್ಗೆ ಅಮ್ಮನಿಂದ ಇನ್ನಷ್ಟು ತಿಳಿದುಕೊಳ್ಳುವ ಕುತೂಹಲ, ಹುಡುಗರಾಗಿದ್ದ ನಮ್ಮೆಲ್ಲರಿಗೆ. ಅಮ್ಮನ ಪ್ರಕಾರ ಆಪದ್ ಬಾಂಧವನೇ ಗಡ್ಡದ ಶಾಮಯ್ಯ! ಸುದೀರ್ಘವಾಗಿದ್ದ ಗಡ್ಡ ಅವರಿಗೆ ಅಂಟಿಕೊಂಡಂತೆಯೇ ಅವರ ಹೆಸರಿಗೂ ಅಂಟಿಕೊಂಡಿತ್ತು. ಸದಾ ಒಂದು ಬಲವಾದ ದೊಣ್ಣೆಯನ್ನು ಕೈಯಲ್ಲಿ ಹಿಡಿದು ಸಂಚಾರ ಮಾಡುತ್ತಿದ್ದ ಅಲೆಮಾರಿ. ಮೇಲಿನ ಸನ್ನಿವೇಶದಲ್ಲಿ ಉಪಯೋಗವಾದ ಹಾಗೆ ಅನೇಕ ವೇಳೆ ದೊಣ್ಣೆಯೇ ಆತನ ವಜ್ರಾಯುಧ ಕೂಡ! ಅಮಾಯಕರನ್ನು, ನಿಜಕ್ಕೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಂಡವರನ್ನು ಎಷ್ಟೋ ಬಾರಿ ಅಪಾಯದಿಂದ ಪಾರುಮಾಡಿದ್ದ ಮಹಾಪುರುಷ!

ಅಮ್ಮನಿಗೆ ನಮ್ಮ ಅಜ್ಜನಿಂದ ತಿಳಿದ ಪ್ರಕಾರ ಶಾಮಯ್ಯ ತುಂಬಾ ಶ್ರೀಮಂತ ಮನೆತನದಿಂದ ಬಂದ ವ್ಯಕ್ತಿಯಂತೆ. ಆದರೆ ಅವರು ಯಾವೂರಿನವರು, ತಂದೆ ತಾಯಿ ಯಾರು ಎನ್ನುವ ವಿವರಗಳು ಯಾರಿಗೂ ಅರಿವಿರಲಿಲ್ಲ. ಇನ್ನೂ ಯುವಕನಾಗಿದ್ದಾಗಿನಿಂದಲೇ ಮೂರು ಹೊತ್ತೂ ಊರೂರು ಅಲೆಯುವುದು ಅವರ ಮುಖ್ಯ ಉದ್ಯೋಗವಾಗಿತ್ತಂತೆ. ನಮ್ಮ ಹಳ್ಳಿಯ ಯಾವುದಾದರೂ ಒಂದು ಮನೆಗೆ ಇದ್ದಕ್ಕಿದ್ದಂತೆ ಬಂದು ಇಳಿದುಬಿಡುತ್ತಿದ್ದರಂತೆ. ಬಂದವರು ಜಾಸ್ತಿಯೆಂದರೆ ಎರಡು ದಿನ ಇದ್ದು ನಂತರ ಯಾವುದೋ ಅಪರಿಚಿತ ಸ್ಥಳಕ್ಕೆ ಹೊರಟು ಬಿಡುತ್ತಿದ್ದರಂತೆ. ಒಂದು ಜಾಗ ತಲುಪುವವರೆಗೆ ತಾವು ಎಲ್ಲಿಗೆ ಹೋಗುತ್ತಿದ್ದೇವೆಂದು ಅವರಿಗೇ ಗೊತ್ತಿರಲಿಲ್ಲವಂತೆ.

ಶಾಮಯ್ಯ ಎಲ್ಲಾ ಚಟುವಟಿಕೆಗಳಿಗಿಂತ ಹೆಚ್ಚಾಗಿ ಪ್ರಸಿದ್ದಿ ಪಡೆದುದು ನಿಗೂಢ ಕಾಯಿಲೆಗಳನ್ನು ಗುಣಪಡಿಸಬಲ್ಲ ತನ್ನ ಮಾಂತ್ರಿಕ ಶಕ್ತಿಯಿಂದಾಗಿ! ನೀವು ಪ್ರಾಯಶಃ ಇದನ್ನು ನಂಬಲಾರಿರಿಆದರೆ ಅವರ ಔಷಧಿಗಳು ಸಂಬಂಧಪಟ್ಟ ರೋಗಗಳನ್ನು ವಾಸಿ ಮಾಡುತ್ತಿದ್ದುದು ಮಾತ್ರವಲ್ಲ; ಅದರಿಂದ ಆಶ್ಚರ್ಯಕರ ಸೈಡ್ ಎಫೆಕ್ಟ್ ಗಳು ಗ್ಯಾರಂಟಿಯಾಗಿದ್ದವು! ಆದರೆ ಅವು ಈಗಿನ ಕಾಲದ ಔಷದಗಳು ಉಂಟು ಮಾಡುವಂತಹ ಅಪಾಯಕಾರಿ ನೆಗೆಟಿವ್ ಸೈಡ್ ಎಫೆಕ್ಟ್ ಗಳಿಗೆ ತೀರಾ ವಿರುದ್ಧವಾದುವು!

ಮೊದಲೇ ಹೇಳಿದ ಹಾಗೆ, ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. ಎಷ್ಟೋ ಮಂದಿ ಹಳ್ಳಿಯವರು ತಮಗೂ ಯಾವುದೋ ಕಾಯಿಲೆ ಬರಬಾರದೇ ಎಂದು ಹಂಬಲಿಸುತ್ತಿದ್ದರಂತೆಉದ್ದೇಶ ಇಷ್ಟೇ. ಶಾಮಯ್ಯನ ಔಷಧಿಯಿಂದ ತಮಗೂ ಒಂದಿಷ್ಟು ಸೈಡ್ ಎಫೆಕ್ಟ್ ಸಿಕ್ಕೀತು ಎಂಬ ಅದಮ್ಯ ಬಯಕೆ!

ಇಷ್ಟೆಲ್ಲಾ ಪೀಠಿಕೆ ಯಾಕೆ? ನಮ್ಮ ಅಜ್ಜ ಅಮ್ಮನಿಗೆ ಹೇಳಿದ ಒಂದು ಪ್ರತ್ಯಕ್ಷ ನಿದರ್ಶನವನ್ನೇ ತೆಗೆದುಕೊಳ್ಳೋಣ. ನಮ್ಮ ಪಕ್ಕದ ಊರಿನಲ್ಲಿ ಚೆನ್ನಿಗರಾಯ ಎಂಬ ಶ್ರೀಮಂತ ಜಮೀನ್ದಾರರಿದ್ದರಂತೆ. ದುರದೃಷ್ಟವಶಾತ್ ಅವರ ಮೊದಲ ಮೂವರು ಪತ್ನಿಯರು ಸಾಲಾಗಿ ಒಂದಲ್ಲ, ಒಂದು ಕಾಯಿಲೆಯ ಕಾರಣ ಪರಲೋಕವಾಸಿಗಳಾಗಿ ಬಿಟ್ಟರಂತೆ.

ಅವರಿಗೆ ಐದು ಮಕ್ಕಳನ್ನು ಹಡೆದು ಕೊಟ್ಟ ನಾಲ್ಕನೇ ಹೆಂಡತಿ ಗಟ್ಟಿಮುಟ್ಟಾಗಿಯೇ ಇದ್ದರಂತೆ. ಆದರೆ ಚಪಲ ಚೆನ್ನಿಗರಾಯ ಎಂದೇ ಕರೆಯಲ್ಪಡುತ್ತಿದ್ದ ಜಮೀನ್ದಾರರು ಇನ್ನು ಮುಂದೆ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲವೆಂದು ತೀರ್ಮಾನಿಸಿಬಿಟ್ಟಿದ್ದರಂತೆ! ಆದ್ದರಿಂದ ಸ್ಟಾಂಡ್ ಬೈ ಎಂದು ಬಡಪಾಯಿಯೊಬ್ಬನ ಹೆಂಡತಿಯನ್ನು ಹಾಡು ಹಗಲೇ ಹಾರಿಸಿಕೊಂಡು ಬಂದು ಮನೆಯಲ್ಲಿ ರಿಸರ್ವ್  ಇರಿಸಿಕೊಂಡು ಬಿಟ್ಟಿದ್ದರಂತೆ! ತಮಗೆ ಐದನೇ ಸಂಬಂಧಕ್ಕೆ ಹೆಣ್ಣು ಕೊಡಲು ಯಾರೂ ತಯಾರಿರುವುದಿಲ್ಲವೆಂದು ಅವರಿಗೆ ಹಿಂದಿನ ಕಹಿ ಅನುಭವದಿಂದ ಅರಿವಾಗಿತ್ತಂತೆ.

ಹೆಣ್ಣಿನ ಒರಿಜಿನಲ್ ಪತಿ ಅಪರೂಪಕ್ಕೊಮ್ಮೆ ಅವರ ಮನೆಗೆ  ಬಂದು ದೂರದಿಂದಲೇ ತನ್ನ ಪತ್ನಿಯ ದರ್ಶನ ಪಡೆದು ಹೋಗಬಹುದಿತ್ತಂತೆ! ಸ್ವಭಾವತಃ ಕರುಣಾಳುವಾಗಿದ್ದ ಚೆನ್ನಿಗರಾಯರು ತಾವೇ ಮುಂದೆ ನಿಂತು ಆತನಿಗೆ ಒಂದು ಸೌಕರ್ಯವನ್ನು ಧಾರಾಳವಾಗಿಯೇ ಒದಗಿಸಿ ಕೊಟ್ಟಿದ್ದರಂತೆ!

ಇಲ್ಲಿ ನಾನು ನಿಮಗೆ ಕಾಲದ ಹಳ್ಳಿ ಸಮಾಜದ, ಆಶ್ಚರ್ಯಕರವಾದ, ಆದರೆ ಅಷ್ಟೇ ಉದಾರವಾದ ಮನೋಭಾವದ ಬಗ್ಗೆ ಹೇಳಲೇ ಬೇಕು! ಶ್ರೀಮಂತ ಜಮೀನ್ದಾರನೊಬ್ಬ ಬಡಪಾಯಿಯೊಬ್ಬನ ಹೆಂಡತಿಯನ್ನು ಅಪಹರಿಸಿಕೊಂಡು ಬಂದದ್ದು ಅತ್ಯಂತ ಮಾಮೂಲಿ ಘಟನೆಯೆಂದು ಇಡೀ ಹಳ್ಳಿಯ ಜನ ಭಾವಿಸಿಬಿಟ್ಟರಂತೆ!ಅವರಿಂದ ಚೆನ್ನಿಗರಾಯರಿಗೆ ಒಂದಿಷ್ಟೂ ವಿರೋಧ ಬರಲೇ ಇಲ್ಲವಂತೆ!

ಒಂದು ಸಾರಿ ಊರಿಗೆ ಹೊಸದಾಗಿ ಬಂದ ಯುವಕನೊಬ್ಬ ಊರಿನ ಒಬ್ಬ ಹಿರಿಯರೊಡನೆ ಅದೂ ಇದೂ ಮಾತನಾಡುತ್ತಾ, ಊರಿನ ಜನ ಅಷ್ಟೊಂದು ವಿಶಾಲಹೃದಯದವರಾಗಿದ್ದು ಸರಿಯೇ ಮಾರಾಯ್ರೆ? ಎಂದು ಪ್ರಶ್ನಿಸಿದನಂತೆ. ಅದಕ್ಕೆ ಅವರು ಹೇಳಿದ ಉತ್ತರ: “ ತರದ್ದು ಯಂತಾದ್ರೂ ನಡೀದೆ ಇದ್ರೆ ನಮ್ಮೂರಾಗೆ ಬೇಜಾರು ಕಳೀಕೆ ಯಂತಾದ್ದಿರೂತ್ತ್ತೆ ಮಾಣಿಯಕ್ಷಗಾನದಲ್ಲಿ ನೋಡಿದ್ಯಲ್ವಾ? ರಾವಣ ಸೀತೇನ ಲಂಕೆಗೆ ಹಾರಿಸಿಕೊಂಡು ಹೋಗದಿದ್ರೆ, ಭಾಗವತರಿಗೆ ರಾತ್ರಿ ಹತ್ತು ಗಂಟೆಯಿಂದ ಬೆಳಗಾಗುವವರೆಗೆ ಏನು ಕಥೆ ಹೇಳಾಕಾಗ್ತಿತ್ತು? ನೀನೇ ಹೇಳು! ಎಂದು ಬಿಟ್ಟರಂತೆ.

ಅವರು ಹೇಳಿದ ಪ್ರಕಾರ ಚೆನ್ನಿಗರಾಯರ ಒಂದು ಕೆಲಸ ಎಷ್ಟು ಗುಸುಗುಸು, ಎಷ್ಟು ಕಾಡು ಹರಟೆ ಮತ್ತು ಎಷ್ಟು ಪಟ್ಟಾಂಗ ಹೊಡಿಯೋಕ್ಕೆ ಸಹಾಯ ಮಾಡಿತು ಅಂದರೆ, ಇಡೀ ಒಂದು ತಲೆಮಾರಿನವರಿಗೆ ಅದೊಂದೇ ವಿಷಯ ಸಾಕಾಗಿತ್ತು! ಮುಂದೆ ಅನೇಕ ವರ್ಷಗಳ ಕಾಲ, ಎಲ್ಲೇ, ಏನೇ ಮೀಟಿಂಗ್ ನಡೆಯಲಿ, ನಾಲ್ಕು ಜನ ಸೇರಿದರೆ ಸಾಕು ಪ್ರಸಂಗ ಚರ್ಚೆಗೆ ಬರದೇ ಇದ್ದದ್ದೇ  ಇಲ್ಲ! ಜನ ಘಟನೆಯ ಕಣ ಕಣವನ್ನೂ ಮತ್ತೆ ಮತ್ತೆ ರಂಜಕವಾಗಿ ವರ್ಣಿಸಿ ನಾಲಗೆಯ ಚಪಲ ತೀರಿಸಿಕೊಳ್ಳುತ್ತಿದ್ದರಂತೆ!

ಇಲ್ಲಿ ಸ್ವಲ್ಪ ವಿಷಯಾಂತರ ಮಾಡಿದ್ದಕ್ಕೆ ಕ್ಷಮಿಸಿ. ಖಂಡಿತವಾಗಿ ನಮ್ಮ ಕಥಾನಾಯಕ ಶಾಮಯ್ಯನೇ ಹೊರತು ಚೆನ್ನಿಗರಾಯನಲ್ಲ! ಒಂದು ಸುಂದರ ಬೆಳಗ್ಗೆ, ಕ್ಷಮಿಸಿ, ಒಂದು ದುರದೃಷ್ಟದ ಬೆಳಗ್ಗೆ, ಚೆನ್ನಿಗರಾಯರ ಮೂತ್ರದ್ವಾರ ಬಂದ್ ಆಗಿ ಮುಷ್ಕರ ಹೂಡಿಬಿಟ್ಟಿತಂತೆ. ಇಡೀ ದಿನ ಎಷ್ಟೇ ಒದ್ದಾಡಿದರೂ ಪ್ರಯೋಜನವಾಗಲಿಲ್ಲವಂತೆ. ಶೃಂಗೇರಿಯ ಇಬ್ಬರು ಭಟ್ ಡಾಕ್ಟರ್ ಗಳ ಟ್ರೀಟ್ಮೆಂಟ್ ಏನೇನೂ ಪರಿಣಾಮ ಬೀರಲಿಲ್ಲವಂತೆ. ಕೊನೆಗೆ ಕೊಪ್ಪದ ಮಿಲಿಟರಿ ಡಾಕ್ಟರ್ ತಮ್ಮ ರಾಯಲ್ ಎನ್ ಫೀಲ್ಡ್ ಮೋಟಾರಿನಲ್ಲಿ ಗುಡುಗುಡು ಎಂದು ಬಂದು ಕೊಟ್ಟ ಇಂಜೆಕ್ಷನ್ ಕೂಡ ಏನೂ ಪರಿಣಾಮ ಮಾಡಲೇ ಇಲ್ಲವಂತೆ! ಚೆನ್ನಿಗರಾಯರ ನರಕ  ಯಾತನೆ ಹೆಚ್ಚುತ್ತಲೇ ಹೋಗಿ ದೇಹ ಪ್ರಕೃತಿ ತೀರಾ ಕೆಟ್ಟು ಹೋಯಿತಂತೆ. ಪರಿಸ್ಥಿತಿ ಹೀಗೇ ಮೂರು ದಿನ ಮುಂದುವರಿಯಿತಂತೆ.

ಅವರ  ಶತ್ರುಗಳ ಪ್ರಕಾರ, ಇದುವರೆಗೆ, ದುಡ್ಡು ಉಳಿಸಿ, ಉಳಿಸಿ ಜಿಪುಣತನ ತೋರಿಸುತ್ತಿದ್ದ ಚೆನ್ನಿಗರಾಯರು ಈಗ ಉಚ್ಚೆ ಹೊಯ್ಯುವುದಕ್ಕೂ ಜಿಪುಣತನ ತೋರಿಸುತ್ತಾ, ಅದರ ಹನಿಹನಿಯನ್ನೂ ಉಳಿಸಲು ಶುರು ಮಾಡಿದ್ದರು!

ಪರಿಸ್ಥಿತಿ ಹೀಗೆ ತೀರಾ ಹದಗೆಟ್ಟಿರುವಾಗ, ಯಥಾಪ್ರಕಾರ ಶಾಮಯ್ಯ ಗಡ್ಡಸಹಿತ, ಅದೃಶ್ಯ ಲೋಕದಿಂದ ಪ್ರತ್ಯಕ್ಷರಾಗಿಬಿಟ್ಟರಂತೆ! ಎಲ್ಲರಿಗೂ ಗೊತ್ತಿರುವಂತೆ, ಅವರ  ಬಳಿ ಸಕಲ ರೋಗಗಳಿಗೂ ಮಾಮೂಲಿ ಔಷದಿ ಇದ್ದದ್ದೇ. ಅಂತಹ ಮದ್ದನ್ನು ಯಾರೂ ಕೊಟ್ಟಾರು! ಆದರೆ ನಿಗೂಢ ರೋಗಗಳ ವಿಷಯಕ್ಕೆ ಬಂದರೆ ಅವರನ್ನು ಬಿಟ್ಟರೆ ಯಾರೂ ಇಲ್ಲ ಎಂದು ಇಡೀ ಮಲೆನಾಡಿನಲ್ಲಿ "ವರ್ಲ್ಡ್ ಫೇಮಸ್" ಆಗಿದ್ದರಂತೆ

ಚೆನ್ನಿಗರಾಯರಿಗೆ ಆಗ ಡಬ್ಬಲ್ ಬೆನಿಫಿಟ್! ಯಾಕೆಂದರೆ ಒಂದು: ಶಾಮಯ್ಯನವರಿಂದ ಅವರ ಯಾತನೆಗೆ ಮುಕ್ತಿ ಸಿಗುವುದಂತೂ ಗ್ಯಾರಂಟಿಇನ್ನೊಂದುಅವರು  ಕಾಯಿಲೆ ವಾಸಿ ಮಾಡಿದ್ದಕ್ಕೆ ಯಾರಿಂದಲೂ ಒಂದು ಪೈಸೆಯನ್ನೂ ತೆಗೆದುಕೊಂಡವರಲ್ಲ! ಚೆನ್ನಿಗರಾಯರ ಪಾಲಿಗೆ ಒದಗಿ ಬಂದ ಅನಿರೀಕ್ಷಿತ ಅದೃಷ್ಟದಿಂದಾಗಿ ಅವರ ಶತ್ರುಗಳಿಗೆ ತೀರಾ ಮುಖಬಂಗವಾಯಿತಂತೆ!

ಊರೂರು ಅಲೆಯುವಾಗ ಸದಾ ತಮ್ಮ ಸಂಗಾತಿಯಂತಿದ್ದ ಮಾಂತ್ರಿಕ ಔಷದಿ ಚೀಲವನ್ನು ಶಾಮಯ್ಯನವರು ಹೊರತೆಗೆದರಂತೆ. ಸಾಮಾನ್ಯವಾಗಿ ಅದರಿಂದ ಔಷದಿ ಸಿದ್ಧಪಡಿಸಲು ಅವರಿಗೆ ಅರೆಘಳಿಗೆ ಸಾಕಾಗುತ್ತಿತ್ತಂತೆ! ಆದರೆ ಬಾರಿ ಅದರಲ್ಲಿ ಯಾವುದೋ ಒಂದು ವಸ್ತು ಇರಲಿಲ್ಲವಂತೆ. ಬೇರು ತರಬೇಕಾದರೆ ಕಿತ್ಲೆಕಟ್ಟೆ ಗುಡ್ಡಕ್ಕೇ ಹೋಗಬೇಕೆಂದು ಹೇಳಿದ ಶಾಮಯ್ಯ ಮುಂಡುಪಂಚೆ ಎತ್ತಿಕಟ್ಟಿ ಅಂಗಳಕ್ಕೆ ಇಳಿದೇ ಬಿಟ್ಟರಂತೆ

ಕಿತ್ಲೆಕಟ್ಟೆ ಗುಡ್ಡವೊಂದು ದಟ್ಟವಾದ ಕಾಡು. ಅದಿದ್ದದ್ದು ಪಕ್ಕದ ಇನ್ನೊಂದು ಗ್ರಾಮದಲ್ಲಿ. ಮೈಲುಗಟ್ಟಲೆ ದೂರ ಕಾಲುನಡಿಗೆಯಲ್ಲಿಯೇ ಕ್ರಮಿಸಬೇಕು. ಒಂಟಿಯಾಗಿಯೇ ಹೋಗಬೇಕು. ಜೊತೆಗೆ ಬೇರೊಬ್ಬರು ಹೋಗುವಂತೂ ಇಲ್ಲ. ಬೇರು ಯಾವುದು ಎಂದು ಬೇರೆ ಯಾರಿಗೋ ಹೇಳಿಬಿಟ್ಟರೆ ಅದು ತನ್ನ ಔಷದಿಯ ಗುಣ ಕಳೆದುಕೊಂಡು ಬಿಡುತ್ತದೆಯೆಂದು ಲಾಗಾಯ್ತಿನಿಂದ ಬಂದ ನಂಬಿಕೆ. ಒಟ್ಟಿನಲ್ಲಿ ಶಾಮಯ್ಯನವರು ಗಡಿಬಿಡಿಯಿಂದ ಹೊರಟೇ ಬಿಟ್ಟರಂತೆ. ಗುಡ್ಡದಿಂದ ಹಿಂತಿರುಗಿದ ಮೇಲೆ ಶಾಮಯ್ಯ ಕ್ಷಣಮಾತ್ರದಲ್ಲಿ ಬೇರು ಅರೆದು ಮದ್ದು ತಯಾರಿಸಿಯೇ ಬಿಟ್ಟರಂತೆ. ಒಂದು ಸೀಮೇಬೆಳ್ಳಿ ಲೋಟದ ತುಂಬಾ ಕಷಾಯವನ್ನು ಚೆನ್ನಿಗರಾಯರಿಗೆ ಕುಡಿಸಲಾಯಿತಂತೆ. ಪುರಾಣಪುರುಷ ಶಾಮಯ್ಯನವರ ಔಷದಿಯ, ಪವಾಡ ಸದೃಶ ಪರಿಣಾಮ ನೋಡಲು ಮನೆಯ ಮುಂದೆ ಊರಿಗೆ ಊರೇ ನೆರೆದಿತ್ತಂತೆ!

ಜನಸ್ತೋಮ ಹೆಚ್ಚು ಹೊತ್ತು ಕಾಯುವ ಪ್ರಸಂಗವೇ ಬರಲಿಲ್ಲವಂತೆ! ಇನ್ನೂ ಒಂದು ಗಂಟೆ ಕೂಡ ಕಳೆದಿರಲಿಲ್ಲವಂತೆ! ಔಷದಿ ಸ್ಪಷ್ಟವಾಗಿ ಕೆಲಸ ಶುರು ಮಾಡಿಬಿಟ್ಟಿತ್ತಂತೆ. ಕೇಶವಯ್ಯ ಎಡಗೈ ಎತ್ತಿ ಹೆಂಡತಿಯ ಕಡೆ ಕಿರು ಬೆರಳು ತೋರಿಸಿಯೇ ಬಿಟ್ಟರಂತೆ!

ಮನೆಯ ಮುಂದೆ ಜಮಾಯಿಸಿದ್ದ ಇಡೀ ಹಳ್ಳಿಯವರ ಸಂತೋಷ ಮೇರೆಮೀರಿ ಅವರ ವಿಸ್ಮಯಕ್ಕೆ ಪಾರವೇ ಇಲ್ಲದಂತಾಯಿತಂತೆ! ಜನರ  ಆನಂದಾತಿರೇಕ ವರ್ಣನಾತೀತವಾಗಿತ್ತಂತೆ! ಅಲ್ಲಿ ಹಾಜರಿದ್ದ ಹಿರಿಯರೊಬ್ಬರ ಪ್ರಕಾರಮದ್ಯಾಹ್ನ ಉಚ್ಚೆ ಹೊಯ್ಯಲು ಶುರು ಮಾಡಿದ ಚೆನ್ನಿಗರಾಯರು ಮದ್ಯರಾತ್ರಿಯಾದರೂ ಟಾಯ್ಲೆಟ್ಟಿನಿಂದ ಹೊರಬರುವ ಲಕ್ಷಣವೇ ಕಾಣಲಿಲ್ಲವಂತೆ! ಅವರು ನಿರಂತರವಾಗಿ ಉಚ್ಚೆ ಹೊಯ್ಯುತ್ತಲೇ ಇದ್ದರಂತೆ!

ಅಪರೂಪದ ಪ್ರಸಂಗವನ್ನು ಪ್ರಸಾರ ಮಾಡುವ ಯಾವ ಮಾಧ್ಯಮವೂ ಕಾಲದಲ್ಲಿ ಇರಲಿಲ್ಲ. ಈಗಲಾದರೆ ದೇಶ ವಿದೇಶದ ಟಿವಿ ಚಾನೆಲ್ ಗಳು ಇಡೀ ಎಪಿಸೋಡನ್ನು ಲೈವ್ ಟೆಲಿಕ್ಯಾಸ್ಟ್ ಮಾಡುತ್ತಿದ್ದವು!

ಮಧ್ಯಾಹ್ನದಿಂದ ಮಧ್ಯರಾತ್ರಿಯವರೆಗೆ ಚೆನ್ನಿಗರಾಯರು ಊಟ, ತಿಂಡಿ ಏನೂ ಮಾಡಲೇ ಇಲ್ಲವೇ ಎಂದು ಕೇಳಬೇಡಿ. ಉಪ್ಪಿಟ್ಟು, ಕಾಫಿ ಎಲ್ಲಾ ಅಲ್ಲಿಗೆ ಸಪ್ಲೈ ಆಗುತ್ತಿತ್ತಂತೆ! ಆದರೆ ಸಂಭ್ರಮ, ಸಂತೋಷದ ಮಧ್ಯದಲ್ಲಿ ನಿಜವಾದ ಹೀರೋ ಶಾಮಯ್ಯ ಕಾಣದಂತೆ ಮಾಯವಾದದ್ದು ಯಾರ ಗಮನಕ್ಕೂ ಬರಲೇ ಇಲ್ಲವಂತೆ. ಎಂದಿನಂತೆ ಅವರು ಮತ್ತೊಂದು ನಿಗೂಢ ಸ್ಥಳದತ್ತ ಹೊರಟು ಹೋಗಿಬಿಟ್ಟಿದ್ದರಂತೆ!

ಚೆನ್ನಿಗರಾಯರ ವೈಟಿಂಗ್ ಲಿಸ್ಟಿನಲ್ಲಿದ್ದ ಇನ್ನೊಬ್ಬ ಹೆಣ್ಣಿನ ಬಗ್ಗೆ ನಿಮಗೆ ಮೊದಲೇ ತಿಳಿಸಿದ್ದೇನೆ. ತಮ್ಮ ನಾಲ್ಕನೇ ಪತ್ನಿ ಪರಲೋಕ ಪ್ರಯಾಣ ಮಾಡುವ ಯಾವುದೇ ಸೂಚನೆ ಕೊಡದೇ ಗಟ್ಟಿಮುಟ್ಟಾಗಿದ್ದು, ದಿನದಿಂದ ದಿನಕ್ಕೆ ಇನ್ನಷ್ಟು ಆರೋಗ್ಯವಂತಳಾಗುವಂತೆ ಕಾಣತೊಡಗಿದಾಗ, ಚೆನ್ನಿಗರಾಯರು ದಿಕ್ಕೇ ತೋಚದೆ ರಿಸೆರ್ವನಲ್ಲಿದ್ದ ಹೆಣ್ಣನ್ನು ತಮ್ಮ ಎರಡನೇ ಜೀವಂತ ಹೆಂಡತಿ ಎಂದು ಘೋಷಿಸಿಯೇ ಬಿಟ್ಟರಂತೆ! ಅನೌಪಚಾರಿಕವಾಗಿ!

ಊರಿನವರ ಪ್ರಕಾರ ಚೆನ್ನಿಗರಾಯರು ಇಳಿ ವಯಸ್ಸಿನಲ್ಲೂ ಎರಡೆರಡು ಹೆಂಡತಿಯರನ್ನು ಲೀಲಾಜಾಲವಾಗಿ ಸುಧಾರಿಸಿದರೆಂದರೆ ಅದಕ್ಕೆ ಕಾರಣ, ಶಾಮಯ್ಯನವರ ಔಷಧಿಯ ಮಾಂತ್ರಿಕ "ಸೈಡ್ ಎಫೆಕ್ಟ್" ! ಆದರೆ ಕಾಲದ ಮಲ್ಟಿ ನ್ಯಾಷನಲ್ ಕಂಪನಿಗಳು ಶಾಮಯ್ಯನವರ ಔಷಧಿಗಳು ಇಂತಹ ಪರಿಣಾಮವನ್ನು ಉಂಟು ಮಾಡುತ್ತಿದ್ದವೆಂದು ಖಂಡಿತ ಒಪ್ಪಿಕೊಳ್ಳಲಿಕ್ಕಿಲ್ಲ! ಏಕೆಂದರೆ ಅವುಗಳೇ ಇಂತಹ ಔಷಧಿಗಳನ್ನು ಕಂಡುಹಿಡಿದು ಮಾರುತ್ತಿರುವುದಲ್ಲದೇ ರಾಯಲ್ಟಿಯನ್ನೂ ಕೂಡ ವಸೂಲು ಮಾಡುತ್ತಿವೆಯಲ್ಲವೇ!

ಕಟ್ಟ ಕಡೆಯ ಬಾರಿ ನಾನು ಶಾಮಯ್ಯನವರನ್ನು ನೋಡಿದ್ದು ನಮ್ಮ ಮನೆಯ ಒಂದು ತುಂಬಾ ಸಂಕಟದ ಸಮಯದಲ್ಲಿ. ನನ್ನ ಇಬ್ಬರು ತಮ್ಮಂದಿರು ಯಾವುದೋ ಗುರುತಿಸಲಾಗದ ಬೇನೆಯಿಂದ ನರಳುತ್ತಿದ್ದರು. ನಾಟಿ ಮದ್ದು ಆಯಿತು. ಕೊಪ್ಪ, ಶೃಂಗೇರಿಯ ಡಾಕ್ಟರುಗಳಿಂದ ಎಲ್ಲಾ ತರದ ಔಷಧಿಗಳನ್ನು ತಂದು ಕುಡಿಸಿದ್ದೂ ಆಯಿತುತಿಂಗಳು ಕಳೆಯುತ್ತಾ ಬಂದರೂ ಕಣ್ಣಿಗೆ ಕಾಣುವಂತಹ ಯಾವುದೇ ಸುಧಾರಣೆ ತೋರಲಿಲ್ಲ. ಪುಟ್ಟ ಹುಡುಗರ ನರಳುವಿಕೆಯನ್ನು ನೋಡಲಾಗುತ್ತಿರಲಿಲ್ಲ. ಎಲ್ಲರೂ ದೇವರಿಗೆ ಹರಕೆ ಹೊತ್ತುಕೊಂಡು ಪ್ರಾರ್ಥಿಸುತ್ತಿದ್ದರೆ, ನನ್ನ ಮನಸ್ಸಿಗೆ ಮಾತ್ರ ಅದೇಕೋ ಕಾಣೆ, ಶಾಮಯ್ಯನವರನ್ನು  ನೆನೆಸಿಕೊಳ್ಳೋಣ ಅಂತ ಅನ್ನಿಸಿತು! ಆದರೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು, ಊರೂರು ಸುತ್ತುತ್ತಲೇ ಇರುತ್ತಿದ್ದ ಬೈರಾಗಿ ಎಲ್ಲಿದ್ದಾರೆಂದು ಕಂಡು ಹಿಡಿಯುವ ಬಗೆಯಾದರೂ ಹೇಗೆ?

ನಾನೀಗ ಹೇಳುವುದನ್ನು ನೀವು ಪ್ರಾಯಶಃ ನಂಬಲಾರಿರಿ! ನನ್ನ ಪ್ರಾರ್ಥನೆ ಇನ್ನೂ ಪೂರಾ ಮುಗಿದಿರಲಿಲ್ಲ. ಶಾಮಯ್ಯನವರ ಹೆಜ್ಜೆ ಸಪ್ಪಳ ಕಿವಿಗೆ ತಟ್ಟಿತು! ಅಂಗಳದ ಕೊನೆಯ ಮೆಟ್ಟಿಲ ಮೇಲೆ ಶಾಮಯ್ಯನವರ ಗಡ್ಡದ ನೆರಳು ಬಿದ್ದೇ ಬಿಟ್ಟಿತು! ಅವರ ಸಿದ್ದೌಷಧಿಯಿಂದ ತಮ್ಮಂದಿರು ಶೀಘ್ರದಲ್ಲಿಯೇ ಸಂಪೂರ್ಣ ಗುಣಮುಖರಾದರೆಂದು ನಿಮಗೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ ಅಲ್ಲವೇ?

ಮೊದಲೇ ಹೇಳಿದ ಹಾಗೆ, ಶಾಮಯ್ಯನವರ ಆದಿ ಗೊತ್ತಿಲ್ಲಅಷ್ಟೇ ಅಲ್ಲ ಅವರ ಅಂತ್ಯ ಕೂಡ ಹೇಗಾಯಿತೆಂಬುದು ಹಳ್ಳಿಯಲ್ಲಿ ಯಾರಿಗೂ ಗೊತ್ತಾಗಲೇ ಇಲ್ಲ. ಆದರೆ ಅವರ ಪವಾಡ ಸದೃಶ ಕಥೆಗಳು ಊರಿನಲ್ಲಷ್ಟೇ ಅಲ್ಲ, ಸುತ್ತಮುತ್ತಲ ಹಳ್ಳಿಗಳಲ್ಲೂ ಸದಾಕಾಲ ಜನರ ಬಾಯಲ್ಲಿ ನಲಿಯುತ್ತಲೇ ಹೋದವು. ನನ್ನ ಬಾಲ್ಯದ ನೆನಪಿನ ಶಾಮಯ್ಯನವರ ಬದುಕಿನ ತುಣುಕೊಂದನ್ನು ನಿಮ್ಮ ಮುಂದೆ ತಂದು ನಿಲ್ಲಿಸಿದ ಕ್ಷಣ, ಮನಸ್ಸಿಗೆ ಎಷ್ಟೋ ಹಗುರ ಅನ್ನಿಸುತ್ತಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ!



1 comment:

Krushnapura said...

ಅಂದಿನ ಕಾಲದ ಕರ್ನಾಟಕ ರಾಜ್ಯದ ಮಲೆನಾಡಿನ ಬದುಕಿನ ಚಿತ್ರಣ.