Monday, May 28, 2018

ಒಂದು ಊರಿನ ಕಥೆ - 15 (ಹೊಕ್ಕಳಿಕೆ)


ವಾಸುದೇವಯ್ಯ
ತಿಮ್ಮಪ್ಪಯ್ಯನವರ ತಮ್ಮ ವಾಸುದೇವಯ್ಯನವರದು ತುಂಬಾ ಅಪರೂಪದ ವ್ಯಕ್ತಿತ್ವ. ಆಗಿನ ಕಾಲದಲ್ಲಿ ಹೆಬ್ಬಾರ್ ಸಮಾಜದ ವ್ಯಕ್ತಿಗಳು ಬೇಸಾಯವನ್ನು ಬಿಟ್ಟು ಬೇರೆ ವೃತ್ತಿಗಳನ್ನು ಮಾಡುವುದು ತುಂಬಾ ಅಪರೂಪವಾಗಿತ್ತು. ಆದರೆ ನಾನು ಹೊಕ್ಕಳಿಕೆಗೆ ಓದಲು ಹೋಗುವ ಮುನ್ನವೇ  ವಾಸುದೇವಯ್ಯನವರು ಊರನ್ನು ಬಿಟ್ಟು ಪ್ರಾಯಶಃ ಕೊಪ್ಪದಲ್ಲಿ ನೆಲಸಿ ಅಕ್ಕಿ-ಭತ್ತದ  ಹೋಲ್ ಸೇಲ್ ವ್ಯಾಪಾರದಲ್ಲಿ ತೊಡಗಿದ್ದರು. ಊರಿನ ಮಧ್ಯದಲ್ಲಿ ಅವರ ಒಂದೆಕರೆ ಅಡಿಕೆ ತೋಟವೂ ಇತ್ತು. ಭತ್ತದ ವ್ಯಾಪಾರಕ್ಕಾಗಿ ಆಗಾಗ ನಮ್ಮ ಭಾವನ ಮನೆಗೆ ಬರುತ್ತಿದ್ದರು. ಭತ್ತವನ್ನು ಲಾರಿಗಳಲ್ಲಿ ತುಂಬಿ ತೆಗೆದುಕೊಂಡು ಹೋಗುತ್ತಿದ್ದರು. ಅವರ ಪತ್ನಿ ಶೃಂಗೇರಿಯಿಂದ ಆಚೆಗಿದ್ದ ಜಕ್ಕಾರು ಕೊಡಿಗೆ ಎಂಬ ಊರಿನವರು. ತಮ್ಮ ವೃತ್ತಿಯಲ್ಲಿ ಚೆನ್ನಾಗಿ ಸಂಪಾದನೆ ಮಾಡಿದ ವಾಸುದೇವಯ್ಯನವರು ಅದನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಯೋಜನೆ ಹಾಕಿ ತಮ್ಮ ಸಂಸಾರ ಸಮೇತ ಶಿವಮೊಗ್ಗೆ ಸೇರಿದರು.

ಶಿವಮೊಗ್ಗೆಯ ದುರ್ಗಿಗುಡಿಯಲ್ಲಿ ಕವಿಲ್ಕೊಡಿಗೆ ಸಾಹುಕಾರರಿಗೆ ಸೇರಿದ ಮನೆಯೊಂದಿತ್ತು. ಅದರ  ಪಕ್ಕದಲ್ಲಿ ಅರುಣಾಚಲಂ ಮೇಷ್ಟರ ಮನೆಯಲ್ಲಿ ನಾನು ಹೈಸ್ಕೂಲ್ ಓದುವಾಗ ಕೆಲದಿನಗಳು ತಂಗಿದ್ದೆ. ನಾನು ೧೯೭೦ನೇ ಇಸವಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿ ಪುನಃ ಶಿವಮೊಗ್ಗೆಗೆ ಹೋದಾಗ ವಾಸುದೇವಯ್ಯನವರು ಕವಿಲ್ಕೊಡಿಗೆ ಸಾಹುಕಾರರ ಮನೆಯಲ್ಲಿ ಬಾಡಿಗೆಗೆ ಇದ್ದರು. ಅವರ ಅಕ್ಕಿ-ಭತ್ತದ  ಹೋಲ್ ಸೇಲ್ ವ್ಯಾಪಾರ ಬೇಗನೆ ಉನ್ನತ ಮಟ್ಟಕ್ಕೆ ಹೋಯಿತು. ಸಂಪಾದನೆ ಚೆನ್ನಾಗಿತ್ತು. ನಮ್ಮ ರುಕ್ಮಿಣಕ್ಕನ ಮಗ ಉಮೇಶನಿಗೆ ಕಿವಿಯಲ್ಲಿ ಸಮಸ್ಯೆ ಇತ್ತು. ಅದನ್ನು ಡಾಕ್ಟರಿಗೆ  ತೋರಿಸಲು ಆಗಾಗ ಅಕ್ಕ ಮತ್ತು ಭಾವ ಶಿವಮೊಗ್ಗೆಗೆ ಬಂದಾಗ ವಾಸುದೇವಯ್ಯನವರ ಮನೆಯಲ್ಲಿ ತಂಗುತ್ತಿದ್ದರು. ನಾನು ಅವರನ್ನು ನೋಡಲು ವಾಸುದೇವಯ್ಯನವರ ಮನೆಗೆ ಹಲವು ಬಾರಿ ಹೋಗಿದ್ದೆ.
ಮರಳಿ ಮಣ್ಣಿಗೆ
ವಾಸುದೇವಯ್ಯನವರಿಗೆ ಇದ್ದಕಿದ್ದಂತೆ ಮಲೆನಾಡಿನ ತೋಟ ಮತ್ತು ಗದ್ದೆಗಳ ನಡುವೆ ವಾಸಮಾಡುವ ಆಸೆ ಮರುಕಳಿಸಿತು. ಅವರು ನಮ್ಮ ಊರಿನ ಉತ್ತಮೇಶ್ವರದ ಸಮೀಪದಲ್ಲಿ ಜಮೀನು ಮತ್ತು ಮನೆ ಖರೀದಿ ಮಾಡಿ ಹಳ್ಳಿ ಜೀವನಕ್ಕೆ ಹಿಂದಿರುಗಿದರು. ಸಮಯದಲ್ಲಿ ಒಂದೆರಡು ಬಾರಿ ನಾನು ಊರಿಗೆ ಬಂದು ವಾಪಸ್ ಶಿವಮೊಗ್ಗೆಗೆ ಹೋಗುವಾಗ ಅವರ ಜೊತೆಯಲ್ಲಿ ಬಸ್ಸಿನ ಪ್ರಯಾಣ ಮಾಡಿದ್ದೆ. ಆದರೆ ದುರದೃಷ್ಟವಶಾತ್  ಅವರ ಹಳ್ಳಿ ಜೀವನ ಸುಖಕರವಾಗಲಿಲ್ಲ. ನಿರ್ವಾಹವಿಲ್ಲದೇ ಜಮೀನು ಮಾರಿ ಶಿವಮೊಗ್ಗೆಗೆ ವಾಪಸ್ ಬರಬೇಕಾಯಿತು. ನಾನು ಶಿವಮೊಗ್ಗೆಯಲ್ಲಿ ಇರುವಾಗಲೇ ಅವರು ತೀರಿಕೊಂಡರು. ಅವರ ಮಕ್ಕಳು ಚೆನ್ನಾಗಿರುವರೆಂದು ಮತ್ತು ಹೊಕ್ಕಳಿಕೆ ತೋಟ ಮಾರಾಟ ಮಾಡಿದರೆಂದೂ ತಿಳಿಯಿತು.
ಹೆಚ್ ವಿ ಕೃಷ್ಣಮೂರ್ತಿ
ಇವರು ತಿಮ್ಮಪ್ಪಯ್ಯನವರ ಇನ್ನೊಬ್ಬ ತಮ್ಮ. ಇವರದೂ ಸ್ವಲ್ಪ ಅಪರೂಪದ ವ್ಯಕ್ತಿತ್ವವೇ ಆಗಿತ್ತು. ಇವರೆಂದೂ ಧ್ವನಿ ಏರಿಸಿ ಮಾತನಾಡಿದವರಲ್ಲ. ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ತುಂಬಾ ಮೆಲು  ಧ್ವನಿಯಲ್ಲೇ ಹೇಳುವ ಕಲೆ ಇವರಿಗೆ ಸಾಧಿಸಿತ್ತು. ಅಣ್ಣ ತಿಮ್ಮಪ್ಪಯ್ಯನ ಮೇಲೆ ತುಂಬಾ ಗೌರವ ಇಟ್ಟುಕೊಂಡಿದ್ದರು. ಆದರೆ ಮನೆಯನ್ನು ತಿಮ್ಮಪ್ಪಯ್ಯನವರ 'ಹೊಸಮನೆ'ಗಿಂತಲೂ ತುಂಬಾ ಸುಂದರವಾಗಿ ಕಟ್ಟಿಸಿಕೊಂಡಿದ್ದರು! ಇವರ ಅಭಿರುಚಿ ತುಂಬಾ ಉನ್ನತ ಮಟ್ಟದ್ದೇ ಆಗಿತ್ತು. ತಮ್ಮ ಅಡಿಕೆ  ತೋಟವನ್ನು ಕೂಡಾ ತುಂಬಾಶ್ರೇಷ್ಠ ಮಟ್ಟದಲ್ಲಿ ಇಟ್ಟುಕೊಂಡಿದ್ದರು.  ಇವರ ಪತ್ನಿ ನಮ್ಮ ಸಂಬಂಧಿಗಳಾದ ಹೆಬ್ಬಿಗೆ ಶಿಂಗಪ್ಪಯ್ಯನವರ ಮಗಳಾದ ಕಮಲಾಕ್ಷಮ್ಮ. ಕೃಷ್ಣಮೂರ್ತಿಯವರು ಪ್ರತಿ ವರ್ಷ ಚೈತ್ರಮಾಸದಲ್ಲಿ ನಡೆಯುತ್ತಿದ್ದ ದೇವರ ಭಜನೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಭಜನಾಮಂಡಳಿ ಊರಿನ ಪ್ರತಿ ಮನೆಗೂ ಒಂದೊಂದು ದಿನ ದೇವರ ಮೂರ್ತಿಯನ್ನು  ತೆಗೆದುಕೊಂಡು ಹೋಗಿ ಮನೆಯಲ್ಲಿ ಅರ್ಚನೆ ಮತ್ತು ಪನಿವಾರ ಮುಗಿಸಿ ದೇವಸ್ಥಾನಕ್ಕೆ ಹಿಂದಿರುಗುತ್ತಿತ್ತು. ಕೃಷ್ಣಮೂರ್ತಿಯವರು ಒಂದು ಕೀರ್ತನೆಯನ್ನು ಸ್ವತಃ ಪ್ರಾರಂಭಿಸುತ್ತಿದ್ದರು. ಅದು ಸ್ವಲ್ಪ ಹೀಗಿತ್ತು:
“ವೇಣುನಾದನೆ ಬಾರೋ ಸೀತಾರಮಣನೇ ಬಾರೋ
ಬಾಣಾನ ಬಂಧಿಸಿದಂತಾ ಭಾವಜನಯ್ಯನೇ ಬಾರೋ
ಪೂತನಿಯಾ ಅಸುವಾನಳಿದಾ ನವನೀತ ಚೋರನೆ  ಬಾರೋ
ಶೇಷ ಶಯನ ವಾಸಾ ಮೂರುತಿ ಗೋಪಾಲ ಕೃಷ್ಣನೇ ಬಾರೋ”
ನಗರ ಜೀವನದ ಕಡೆಗೆ
ಕೃಷ್ಣಮೂರ್ತಿಯವರಿಗೆ ಯಾವುದೊ ಕಾರಣದಿಂದ ಬೇಸಾಯ ಮತ್ತು  ಹಳ್ಳಿ ಜೀವನ ಸಾಕೆನಿಸಿತು. ಅವರು ತಮ್ಮ ಅತ್ತ್ಯುತ್ತಮ ಜಮೀನು ಮತ್ತು ಮನೆಯನ್ನು ಮಾರಿ ಪೇಟೆಯ ಕಡೆ ಪ್ರಯಾಣ ಬೆಳೆಸಿದರು. ಅವರ ಹಿರಿಯ ಮಗ ರಾಮಚಂದ್ರ ಮಣಿಪಾಲದಲ್ಲೂ, ಗುರುಮೂರ್ತಿ ಬೆಂಗಳೂರಿನಲ್ಲೂ ಹಾಗೂ ಭಾಸ್ಕರ ಮಂಗಳೂರಿನಲ್ಲೂ ಇದ್ದರು. ನನಗೆ ತಿಳಿದಂತೆ ದಂಪತಿಗಳು ಮಂಗಳೂರಿನಲ್ಲಿ ನೆಲಸಿದರು. ಹೀಗೆ ಅವರ ಹೊಕ್ಕಳಿಕೆ ಜೀವನ ಮುಕ್ತಾಯ ಕಂಡಿತು.
ಮಂಜಪ್ಪಯ್ಯ
ಮಂಜಪ್ಪಯ್ಯನವರು ತಿಮ್ಮಪ್ಪಯ್ಯನವರ ತಮ್ಮಂದಿರಲ್ಲಿ ಎಲ್ಲರಿಗಿಂತ ಕಿರಿಯರು. ಅವರೊಬ್ಬ ದೃಢಕಾಯದ ವ್ಯಕ್ತಿ. ಹಾಗೆಯೇ  ಅವರದು ಕಂಚಿನ ಕಂಠವಾಗಿತ್ತು. ಚೈತ್ರಮಾಸದಲ್ಲಿ ನಡೆಯುತ್ತಿದ್ದ ದೇವರ ಭಜನೆಯಲ್ಲಿ ಅವರು ಏರು ಧ್ವನಿಯಲ್ಲಿ ಭಜನೆ ಮಾಡುತ್ತಿದ್ದರು. ಅವರು ಅವರಣ್ಣ   ಕೃಷ್ಣಮೂರ್ತಿಯವರೊಡನೆ ಕಾನೂರಿನಲ್ಲಿ ಸಂಸಾರ ಹೂಡಿ ಅವರ ಸಂಬಂಧಿಗಳೊಬ್ಬರ ಜಮೀನು  ಪಾರುಪತ್ಯ ಮಾಡಿಕೊಂಡಿದ್ದರಂತೆ. ಆದರೆ ಕಾರಣಾಂತರದಿಂದ ಅದನ್ನು ಬಿಟ್ಟು ಹೊಕ್ಕಳಿಕೆಗೆ ಹಿಂದಿರುಗಬೇಕಾಯಿತಂತೆ. ಅವರ ಹೊಸಮನೆಯನ್ನು  ೧೯೫೯ ನೇ ಇಸವಿಯಲ್ಲಿ ಮೇಲಿನಮನೆಯ (ಫಣಿಯಪ್ಪಯ್ಯನವರ ಮನೆ) ಮೇಲ್ಭಾಗದಲ್ಲಿ ರಸ್ತೆಯ ಪಕ್ಕಕ್ಕೆ ಕಟ್ಟಿ ಗೃಹ ಪ್ರವೇಶ ಮಾಡಲಾಯಿತು. ಮಂಜಪ್ಪಯ್ಯನವರ ಪತ್ನಿ ಭವಾನಮ್ಮ ಅಂಬುತೀರ್ಥದವರು. ಸಣ್ಣ ಗಣೇಶಯ್ಯ ಮತ್ತು ಅಚ್ಯುತಯ್ಯನವರಿಗೆ ಮಂಜಪ್ಪಯ್ಯನವರಲ್ಲಿ ತುಂಬಾ ಸಲಿಗೆ ಇತ್ತು. ಅವರಿಬ್ಬರೂ ಮಂಜಪ್ಪಯ್ಯನವರೊಡನೆ ತುಂಬಾ ತಮಾಷೆಯಾಗಿ ಮಾತನಾಡುತ್ತಿದ್ದರು.
ಸಣ್ಣ ಗಣೇಶಯ್ಯ
ಸಣ್ಣ ಗಣೇಶಯ್ಯ ಇಡೀ ಹೊಕ್ಕಳಿಕೆಯಲ್ಲಿ ಪ್ರಸಿದ್ಧಿ ಪಡೆದ ಮಾತುಗಾರ. ಹೊಸಮನೆ ತಿಮ್ಮಪ್ಪಯ್ಯನವರಿಗೂ ತಮಾಷೆ ಮಾಡುವಷ್ಟು ಚಾತುರ್ಯ ಹಾಗೂ ಸಲಿಗೆ ಅವರಿಗಿತ್ತು. ಅವರಿಗೆ ನಾನು ಹೊಕ್ಕಳಿಕೆಗೆ ಹೋದಾಗ ಅಂದರೆ ೧೯೫೯ನೇ ಇಸವಿಯಲ್ಲಿ  ಆಗ ತಾನೇ  ಮದುವೆಯಾಗಿತ್ತು.  ನಾನು ಈ  ಮೊದಲೇ ಬರೆದಂತೆ ಅವರ ಪತ್ನಿ ಸೀತಾಲಕ್ಷ್ಮಿ ಕಾನೂರು ಸುಬ್ಬರಾಯರ ಎರಡನೇ ಮಗಳು. ಅವರ ಹಿರಿಯ ಮಗಳು ಜಯಲಕ್ಷ್ಮಿಯವರನ್ನು ನಮ್ಮ ಭಾವನ  ತಮ್ಮ ದೊಡ್ಡ ಗಣೇಶಯ್ಯನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಾನೂರು ಸುಬ್ಬರಾಯರು ಒಂದು ಬಗೆಯ ಹ್ಯಾಟ್ರಿಕ್ ಸಾಧಿಸಿದ್ದರು. ಅದು ಹೇಗೆಂದರೆ ಅವರ ಸಹೋದರಿಯಾದ ಕಾವೇರಮ್ಮನನ್ನು ನಮ್ಮೂರಿನ ಬೆಳವಿನಕೊಡಿಗೆ ಗಣೇಶ ಹೆಬ್ಬಾರರಿಗೆ ಕೊಟ್ಟು ಮದುವೆ ಮಾಡಲಾಗಿತ್ತು!

ಸಣ್ಣ ಗಣೇಶಯ್ಯ ಬಸವಾನಿಯ ಮಿಡ್ಲ್ ಸ್ಕೂಲ್ ನಲ್ಲೇ ಎಂಟನೇ ತರಗತಿ ಓದಿದ್ದರಂತೆ. ಅವರು ನನ್ನ ಓದಿನ ಬಗ್ಗೆ  ಆಸಕ್ತಿ ವಹಿಸಿ ಆಗಾಗ ನನಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸರಿಯಾದ ಉತ್ತರ ಕೊಟ್ಟಾಗ ಭೇಷ್ ಎನ್ನುತ್ತಿದ್ದರು. ಹಾಗಾಗಿ ನನಗೆ  ಅವರಲ್ಲಿ ತುಂಬಾ ಗೌರವವಿತ್ತು. ಅವರೂ ಕೂಡ ಚೈತ್ರಮಾಸದಲ್ಲಿ ನಡೆಯುತ್ತಿದ್ದ ದೇವರ ಭಜನೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಕಾರ್ತೀಕ ಮಾಸದಲ್ಲಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ದೀಪಾವಳಿ ಪೂಜೆಯಲ್ಲೊಮ್ಮೆ ಅವರು   ಹೂಕುಂಡವೊಂದನ್ನು ಹಚ್ಚುತ್ತಿರುವಾಗ ಅದು  ಪಟಾಕಿಯಂತೆ ಸಿಡಿದು ಅವರ ಮುಂಗೈ ಸುಟ್ಟು ಹೋಯಿತು. ಅದು ನನ್ನ ಮುಂದೇ ನಡೆದ ಪ್ರಸಂಗ. ಅದರ ಕಲೆ ಅವರ ಕೈಯಲ್ಲಿ ಎದ್ದು ಕಾಣುತ್ತಿತ್ತು. ಸಣ್ಣ ಗಣೇಶಯ್ಯ ಸಾರ್ವಜನಿಕ ವಲಯದಲ್ಲೂ ತಮ್ಮ ಚಟುವಟಿಕೆಗಳಿಂದ ಪ್ರಸಿದ್ಧರಾಗಿದ್ದರೆಂದು ನನಗೆ ಆಮೇಲೆ ತಿಳಿದು ಬಂತು.
       ------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ-----

Thursday, May 17, 2018

ಒಂದು ಊರಿನ ಕಥೆ - 14 (ಹೊಕ್ಕಳಿಕೆ)


 (ಹೊಕ್ಕಳಿಕೆ)
ಪೇಪರ್ ಬಾಯ್ ಮತ್ತು ಒಂದಾಣೆ ಕಮಿಷನ್!
ದಿನಗಳಲ್ಲಿ ಬಸವಾನಿಯಲ್ಲಿ ಚಂದ್ರಶೇಖರ ಉಪಾಧ್ಯಾಯರ ಅಂಗಡಿಯ ಒಂದು ಮೂಲೆಯಲ್ಲಿ ಅಂಚೆ ಕಚೇರಿ ಇತ್ತು. ಅವರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪುಂಡಲೀಕ  ಎಂಬೊಬ್ಬರು ನ್ಯೂಸ್ ಪೇಪರ್ ಏಜನ್ಸಿ ಮಾಡುತ್ತಿದ್ದರು. ಅವರು ನನ್ನ ಮೂಲಕ  ಹೊಕ್ಕಳಿಕೆಗೆ ಮೂರು ಪೇಪರ್ ತಲುಪಿಸುವ ವ್ಯವಸ್ಥೆ ಮಾಡಿದರು. ನಾನು ಪ್ರತಿ ದಿನ ಸಂಜೆ ಅವರಿಂದ ಪೇಪರ್ ಪಡೆದು ದಾರಿಯಲ್ಲಿ ಅದನ್ನು ಓದುತ್ತಾ ಹೊಕ್ಕಳಿಕೆ ತಲುಪುತ್ತಿದ್ದೆ. ಒಂದು ಪೇಪರ್ ಕೃಷ್ಣ ಭಾವನವರ ಮನೆಗೆ ಕೊಡುತ್ತಿದ್ದುದು ನೆನಪಿದೆ. ಪುಂಡಲೀಕ ಆಗಾಗ ನನ್ನ ಕೈಮೇಲೆ ಅಂಗಡಿಯಲ್ಲಿದ್ದ ಬಿಸ್ಕತ್ ಅಥವಾ ಪೆಪ್ಪರಮಿಂಟ್ ಇಡುತ್ತಿದ್ದರು. ಇದಲ್ಲದೆ ಕೃಷ್ಣ ಭಾವ ತಿಂಗಳಿಗೆ ಒಂದಾಣೆ ಕಮಿಷನ್ ನನಗೆ ಒತ್ತಾಯ ಪೂರ್ವಕವಾಗಿ  ಗೋಪಿಯ ಮೂಲಕ ತಲುಪಿಸುತ್ತಿದ್ದರು!

ನಾನು ದಾರಿಯಲ್ಲಿ ಓದುತ್ತಾ  ಬರುತ್ತಿದ್ದ ಪೇಪರ್ ನಲ್ಲಿ ಬಂದ  ಎರಡು ಮುಖ್ಯ ಸಮಾಚಾರಗಳು ನನಗೆ ಇಂದೂ ನೆನಪಿನಲ್ಲಿವೆ. ಮೊದಲನೆಯದು ಆಗ ತುಂಬಾ ಪ್ರಸಿದ್ಧರಾಗಿದ್ದ ಯುನೈಟೆಡ್ ನೇಷನ್ಸ್ ಸೆಕ್ರೆಟರಿ ಜನರಲ್ ಡಾಗ್ ಹ್ಯಾಮ್ಮರ್ ಶೀಲ್ಡ್ ಅವರು ವಿಮಾನ ದುರಂತದಲ್ಲಿ ಮರಣ ಹೊಂದಿದ್ದು. ಇನ್ನೊಂದು ಭಾರತೀಯ ಸೇನೆ ೧೯೬೧ನೇ ಇಸವಿ ಡಿಸೆಂಬರ್ ನಲ್ಲಿ ಪೋರ್ಚುಗೀಸರ ವಶದಲ್ಲಿದ್ದ ಗೋವಾ ಪ್ರವೇಶ ಮಾಡಿ ಅದನ್ನು ಅವರಿಂದ ವಶಕ್ಕೆ ಪಡೆದುದು. ಮತ್ತು ಪೋರ್ಚುಗೀಸರು ಗೋವಾದಿಂದ ಪೋರ್ಚುಗಲ್ಲಿಗೆ ಓಡಿಹೋದದ್ದು! ಮೊದಲನೆಯದು ದುಃಖ ಸಮಾಚಾರವಾದರೆ ಎರಡನೆಯದು ಅಷ್ಟೇ ಸಂತಸದ ಸಮಾಚಾರವಾಗಿತ್ತು.
ಪೇಪರ್ ಬಾಯ್ ಮುಷ್ಕರ!
ನಾನು ಹೊಕ್ಕಳಿಕೆ ಹುಡುಗರ ಲೀಡರ್ ಆಗಿ ಪ್ರತಿ ಊಟದ ಮನೆಗಳಲ್ಲೂ ಊಟವಾದ ಮೇಲೆ ಕಬಡ್ಡಿ ಅಥವಾ ಕುಂಟಾಟದಲ್ಲಿ ತೊಡಗುತ್ತಿದ್ದುದು  ಕೆಲವು ಹಿರಿಯರಿಗೆ ಇಷ್ಟವಾಗುತ್ತಿರಲಿಲ್ಲ. ಅವರಲ್ಲಿ  ಕೃಷ್ಣಭಾವನೂ ಒಬ್ಬರಂತೆ. ಅಕ್ಕನಿಗೆ ಅದು ಗೊತ್ತಾಯಿತು. ಅವಳಿಗೆ ಅವಳ ತಮ್ಮನ ಬಗ್ಗೆ ಬೇರೆಯವರು ಟೀಕೆ ಮಾಡುವುದು ಏನೂ ಇಷ್ಟವಾಗುತ್ತಿರಲಿಲ್ಲ.

ಅವಳು ನನಗೆ ನನ್ನ ಆಟಗಳ ಬಗ್ಗೆ ಕಂಪ್ಲೇಂಟ್ ಬರುತ್ತಿದೆಯೆಂದು ಹೇಳಿದಳು. ಹಾಗೂ ನಾನು ಅದನ್ನು ನಿಲ್ಲಿಸಬೇಕೆಂದು ಆಜ್ಞೆ ಮಾಡಿದಳು. ಕಂಪ್ಲೇಂಟ್ ಮಾಡಿದವರಲ್ಲಿ ಕೃಷ್ಣ ಭಾವನ ಹೆಸರೂ ಇರುವುದನ್ನು ಕೇಳಿ ನನ್ನ ಮೈ ಉರಿಯಿತು. ನಾನು ಕೂಡಲೇ ಒಂದು ತೀರ್ಮಾನ ಮಾಡಿದೆ.  ಮಾರನೇ ದಿನವೇ ನಾನು ಪುಂಡಲೀಕ ಅವರಿಗೆ ನಾನು ಇನ್ನು  ಮುಂದೆ ಪೇಪರ್ ಕೊಂಡೊಯ್ಯುವದಿಲ್ಲವೆಂದು ಹೇಳಿ ಬಿಟ್ಟೆ. ಅವರು ಗಾಭರಿಯಿಂದ ನನ್ನ ಕೈಮೇಲೆ ಒಂದಷ್ಟು ಬಿಸ್ಕತ್ ಪ್ಯಾಕೆಟ್ ಮತ್ತು ಪೆಪ್ಪರಮಿಂಟ್  ಇಡಲು ನೋಡಿದರು. ನಾನು ಅವನ್ನು ಹಿಂದಿರುಗಿಸಿ ಬಿಟ್ಟೆ. ನಾನು ಆ ಸಂಜೆ ಪೇಪರ್ ಇಲ್ಲದೇ ಮನೆಗೆ ಬಂದು  ಅಕ್ಕನಿಗೆ ನನ್ನ ತೀರ್ಮಾನ ಹೇಳಿಬಿಟ್ಟೆ. ಅವಳಿಗೆ ಫಜೀತಿಯಾಯಿತು. ನನ್ನಿಂದ ಪೇಪರ್ ತೆಗೆದುಕೊಳ್ಳಲು ಬಂದ ಗೋಪಿಗೆ ನನ್ನ ತೀರ್ಮಾನ ಕೇಳಿ ಇನ್ನೂ ಗಾಬರಿಯಾಯಿತು. ಕೃಷ್ಣಭಾವನಿಗೆ ವಿಷಯ ತಿಳಿದಮೇಲೆ ನನ್ನನ್ನು ಕರೆದು ಗೋಪಿಯ ಮುಂದೆ ರಾಜಿ ಪಂಚಾಯಿತಿ ನಡೆಸಿದರು. ಮತ್ತೂ ನನ್ನ ಪೇಪರ್ ಬಾಯ್ ಕೆಲಸ ಯಥಾಪ್ರಕಾರ  ಮುಂದುವರೆಯಿತು. 
ಹೊಕ್ಕಳಿಕೆಯ ಹೆಸರು ಪೇಪರ್ ನಲ್ಲಿ  ಬಂತು!
ನಾರ್ವೆಯ ನಾಗೇಶ ಭಟ್ಟರು ಹೊಕ್ಕಳಿಕೆಗೆ ಮೇಷ್ಟರಾಗಿ ಬಂದ ಮೇಲೆ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಾರಂಭಿಸಿದವು.  ವರ್ಷ ಆಗಸ್ಟ್ ೧೫ನೇ ತಾರೀಕಿನಂದು ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಸಣ್ಣ ಗಣೇಶಯ್ಯನವರು ಅದರ ಬಗ್ಗೆ ವರದಿಯೊಂದನ್ನು ಬರೆದು ನನಗೆ ಕೊಟ್ಟು ಅದನ್ನು ಪುಂಡಲೀಕ ಅವರಿಗೆ ಕೊಟ್ಟು ಪ್ರಜಾವಾಣಿಯಲ್ಲಿ ಪ್ರಕಟಿಸುವಂತೆ ಹೇಳಬೇಕೆಂದು ತಿಳಿಸಿದರು. ನಾನು ಹಾಗೆಯೇ ಮಾಡಿದೆ. ಒಂದು ವಾರದ ಒಳಗೆ ವರದಿ ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ಅದನ್ನು ನೋಡಿ ಊರಿನವರಿಗೆ ಆದ ಖುಷಿ ಅಷ್ಟಿಷ್ಟಲ್ಲ.
ಮೂರನೇ ಮಹಾಚುನಾವಣೆ ೧೯೬೨
೧೯೬೨ನೇ ಇಸವಿಯಲ್ಲಿ ಭಾರತದಲ್ಲಿ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ಮೂರನೇ ಮಹಾಚುನಾವಣೆ ನಡೆಯಿತು. ನನಗೆ ಅಲ್ಲಿಯವರೆಗೆ ಚುನಾವಣೆಗಳ ಬಗ್ಗೆ ಯಾವುದೇ ಅರಿವಿರಲಿಲ್ಲ. ಮೈಸೂರಿನ ವಿಧಾನ ಸಭೆಗೆ ಶೃಂಗೇರಿ ಕ್ಷೇತ್ರದಿಂದ ಕಡಿದಾಳ್ ಮಂಜಪ್ಪನವರು ಕಾಂಗ್ರೆಸ್ ಪಕ್ಷದಿಂದ ಮೂರನೇ ಬಾರಿ ಸ್ಪರ್ಧಿಯಾಗಿದ್ದರು. ೧೯೫೭ನೇ ಇಸವಿಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರಂತೆ. ಮತ್ತು ಸ್ವಲ್ಪ ಕಾಲ ಮುಖ್ಯಮಂತ್ರಿಯೂ ಆಗಿದ್ದರಂತೆ. ಆದರೆ ಅವರು ಭೂಸುಧಾರಣೆ ತರಬೇಕೆಂದು  ಮಾಡಿದ ಪ್ರಯತ್ನ ಅವರನ್ನು ಜಮೀನನ್ನು ಗೇಣಿಗೆ ಕೊಟ್ಟ ಜಮೀನ್ದಾರರ ಶತ್ರುವನ್ನಾಗಿ ಮಾಡಿತ್ತು.

ಹೊಕ್ಕಳಿಕೆಯಲ್ಲಿ ನಮ್ಮೂರಿನಂತೆ ಯಾರೂ ಗೇಣೀದಾರರಿರಲಿಲ್ಲ. ಹಾಗೆಯೇ ದೊಡ್ಡ ಜಮೀನ್ದಾರರೂ ಇರಲಿಲ್ಲ. ಎಲ್ಲರೂ ಸಣ್ಣ ಹಿಡುವಳಿದಾರರೇ ಆಗಿದ್ದರು. ಅವರಲ್ಲಿ ಕೆಲವರು ಗದ್ದೆಯನ್ನು ಗೇಣಿಗೆ ಕೊಟ್ಟಿದ್ದರು. ಆದ್ದರಿಂದ ಎಲ್ಲರೂ ಭೂಸುಧಾರಣೆ  ಕಾನೂನು ತರಬೇಕಿಂದಿದ್ದ ಮಂಜಪ್ಪನವರ ವಿರೋಧಿಗಳೇ ಆಗಿದ್ದರು. ಮೇಷ್ಟ್ರು ನಾಗೇಶ ಭಟ್ಟರೂ ಮಂಜಪ್ಪನವರ ಕಡು ವಿರೋಧಿಯಾಗಿ ಮಾತನಾಡುತ್ತಿದ್ದುದು ನೆನಪಿಗೆ ಬರುತ್ತಿದೆ. ಮಂಜಪ್ಪನವರ  ವಿರುದ್ಧ ಸ್ಪರ್ದಿಸಲು ನರಸಿಂಹರಾಜಪುರದ ಏನ್ ಪಿ ಗೋವಿಂದೇ ಗೌಡ ಎಂಬುವರನ್ನು ನಿಲ್ಲಿಸಲಾಯಿತು. ಬಸವಾನಿ ಮತ್ತು ಗಡಿಕಲ್ಲಿನ ಸುತ್ತಮುತ್ತದ ಹಳ್ಳಿಗಳಲ್ಲಿ ಒಂದೇ ಮನೆಯಲ್ಲಿ ಅಣ್ಣ ಮಂಜಪ್ಪನವರ ಕಡೆ ಇದ್ದರೆ ತಮ್ಮ ಗೋವಿಂದೇ ಗೌಡರ ಕಡೆ ಪ್ರಚಾರ ಮಾಡುತ್ತಿದ್ದುದು ಕಾಣಿಸುತ್ತಿತ್ತು.

ಹೊಳೆಕೊಪ್ಪದ ಚಿನ್ನೇಗೌಡ ಎಂಬುವರು ಕಾಂಗ್ರೆಸ್ ಪರವಾಗಿದ್ದರೆ ಅವರ ತಮ್ಮ ಓಬೇ ಗೌಡರು ಗೋವಿಂದೇ ಗೌಡರ ಪರವಾಗಿದ್ದರು. ಚಿನ್ನೇಗೌಡರ ಮಗಳು ಲಲಿತ ಬಸವಾನಿ ಶಾಲೆಯಲ್ಲಿ ನನ್ನ ಸಹಪಾಠಿಯಾಗಿದ್ದಳು. ಚುನಾವಣೆಯ ಕಾವು ತುಂಬಾ ಏರಿಹೋಗಿತ್ತು. ನಾನು ಎಲ್ಲವನ್ನೂ ಆಸಕ್ತಿಯಿಂದ ಗಮನಿಸುತ್ತಿದ್ದೆ. ಎಷ್ಟೋ ಮಂದಿ ಕಡಿದಾಳರು ಬಾರಿ ಸೋಲುವುದು ಗ್ಯಾರಂಟಿ ಎಂದು ತಿಳಿದಿದ್ದರು.  ಚುನಾವಣೆಯ ದಿನ ಓಬೇ ಗೌಡರು ಹೊಕ್ಕಳಿಕೆಯವರಿಗೆ ಗಡಿಕಲ್ಲಿಗೆ ಹೋಗಿ ಓಟುಮಾಡಲು ಒಂದು ವ್ಯಾನಿನ ವ್ಯವಸ್ಥೆ ಕೂಡ ಮಾಡಿದ್ದರು. ಆದರೆ ಚುನಾವಣೆಯ ರಿಸಲ್ಟ್ ನೋಡಿದಾಗ ಕಡಿದಾಳರಿಗೆ ೨೫,೦೦೦ ಹತ್ತಿರ ಮತಗಳು  ಬಂದರೆ ಗೋವಿಂದೇ ಗೌಡರಿಗೆ ಕೇವಲ ,೫೦೦ ಮತಗಳು ಬಂದಿದ್ದವು!
ನನ್ನ ಮೊದಲ ಸ್ಕಾಲರ್ಷಿಪ್ ಮತ್ತು ರಾಮಯ್ಯನವರು ನನ್ನ ಪೋಷಕರಾದದ್ದು!
ನಾನು ಬಸವಾನಿ ಶಾಲೆಯಲ್ಲಿ ಯಾವಾಗಲೂ ತರಗತಿಗೆ ಪ್ರಥಮನಾಗಿರುತ್ತಿದ್ದರೂ ನನಗೆ ಅದಕ್ಕಾಗಿ ಯಾವುದೇ ಬಹುಮಾನಗಳು ಬಂದಿರಲಿಲ್ಲ. ಅಲ್ಲದೇ ನಾನು ಎಂದೂ ಐದು ರೊಪಾಯಿಯಷ್ಟು  ದೊಡ್ಡ ನೋಟನ್ನು ಕೈಯಲ್ಲಿ ಹಿಡಿದಿರಲಿಲ್ಲ. ರಜೆಗೆ ಊರಿಗೆ ಹೋಗಿ ಹಿಂತಿರುಗುವಾಗ ಅಮ್ಮ ಒಂದು ಅಥವಾ ಎರಡರ ನೋಟನ್ನು ಕೈಗಿಡುತ್ತಿದ್ದಳು.  ಹೀಗಿರುವಾಗ ಒಂದು ದಿನ ಹೆಡ್ಮಾಸ್ಟರ್ ರಾಮಪ್ಪನವರು ನನ್ನನ್ನು ಆಫೀಸಿಗೆ ಕರೆದು ನನಗೆ ಮೆರಿಟ್ ಸ್ಕಾಲರ್ಷಿಪ್ ಸರ್ಕಾರದಿಂದ ಬಂದಿದೆ ಎಂದು ತಿಳಿಸಿದಾಗ ನನಗಾದ ಆಶ್ಚರ್ಯ ಮತ್ತು ಸಂತೋಷ ಅಷ್ಟಿಟ್ಟಲ್ಲ. ಹೆಡ್ಮಾಸ್ಟರ್ ಅವರು ನಾನು ಮೈನರ್ ಆದ್ದರಿಂದ ಹಣವನ್ನು ಪಡೆಯಲು ತಂದೆಯವರನ್ನು ಕರೆತರುವಂತೆ ಹೇಳಿದರು. ನಾನು ನಮ್ಮ ತಂದೆ ಬೇರೆ ಊರಿನಲ್ಲಿ ಇದ್ದಾರೆ ಎಂದು ತಿಳಿಸಿದೆ. ಆದ್ದರಿಂದ ಯಾರಾದರೂ ಪೋಷಕರನ್ನು ಕರೆತರುವಂತೆ ಹೇಳಿದರು.

ಯಾವುದೋ ಕಾರಣಗಳಿಂದ ನಮ್ಮ ಭಾವನವರಿಗೆ ನನ್ನೊಡನೆ ಬಸವಾನಿಗೆ ಬರಲಾಗಲಿಲ್ಲ. ಒಂದು ದಿನ ಜನಾರ್ಧನಯ್ಯನವರ ತಮ್ಮ ರಾಮಯ್ಯನವರ ಮುಂದೆ ವಿಷಯ  ಹೇಳಿದಾಗ ಅವರು ತಾವು ಬಂದರೆ ಆಗುವುದೇ ಎಂದು ಕೇಳಿದರು. ಬಗ್ಗೆ ಯೋಚಿಸಿದಾಗ ರಾಮಯ್ಯನವರೇ ನಮ್ಮ ಭಾವನೆಂದು ಹೇಳಿದರೆ ಹೆಡ್ಮಾಸ್ಟರ್ ನಂಬುವರೆಂದು ಗೊತ್ತಾಯಿತು. ಮಾರನೇ ದಿನವೇ ರಾಮಯ್ಯನವರು ನಮ್ಮ ಶಾಲೆಗೆ ಬಂದು ನನ್ನ ಭಾವನೆಂದು ಹೇಳಿ ಸಹಿ ಮಾಡಿದರು. ನಂತರ ಹೆಡ್ಮಾಸ್ಟರ್ ಅವರು ಹಣವನ್ನು ಅವರ ಕೈಗೆ ಕೊಟ್ಟರು. ಅವರಿಂದ ಅದು ನನ್ನ ಕೈಗೆ ಬಂದಾಗ  ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಅವು ಮೂರು ೧೦ ರೂಪಾಯಿ ನೋಟುಗಳು! ಅಂದರೆ ಬರೋಬ್ಬರಿ ೩೦ ರೂಪಾಯಿಗಳು! ಮೇಷ್ಟ್ರು ನಾಗೇಶ ಭಟ್ಟರ ಒಂದು ತಿಂಗಳ ಸಂಬಳಕ್ಕೆ ಸಮ! ನನಗೆ ಲಾಟರಿ ಎದ್ದಷ್ಟು ಸಂತೋಷವಾಯಿತು. ಆಮೇಲೆ ಹಣವನ್ನು ಏನು ಮಾಡಿದೆನೆಂದು ಈಗ ಏನೂ ನೆನಪಿಗೆ ಬರುತ್ತಿಲ್ಲ.
----ಮುಂದುವರಿಯುವುದು ---