Tuesday, August 15, 2017

ಬಾಲ್ಯಕಾಲದ ವಿಸ್ಮಯ ಪ್ರಪಂಚ


ಮನುಷ್ಯನ ಜೀವನದಲ್ಲಿ ಬಾಲ್ಯಕಾಲ ಎಂಬುದು ಒಂದು ವಿಸ್ಮಯ ಪ್ರಪಂಚ. ಆ ವಿಸ್ಮಯಕ್ಕೆ ಕೊನೆ ಮೊದಲೆಂಬುದಿಲ್ಲ. ಮಗುವಿನ ಮನದಲ್ಲಾಗುವ ಭಯ,ಸಂತೋಷ ಮತ್ತು ಗೊಂದಲಗಳನ್ನು ಬೇರೆಯವರು ಅರಿಯಲಾರರು. ಅದು ತನ್ನದೇ ಆದ ಪ್ರಪಂಚದಲ್ಲಿರುತ್ತದೆ. ತನ್ನ ಸುತ್ತಮುತ್ತ ನಡೆಯುತ್ತಿರುವ ಪ್ರಸಂಗಗಳಿಗೆ ಅದಕ್ಕೆ ಕಾರಣ ತಿಳಿಯುವುದಿಲ್ಲ. ಕಿಟಕಿಯ ಹಿಂದೆ ಸದಾ ಭೂತವೊಂದು ಹೊಂಚು ಹಾಕುವಂತೆ ಅನಿಸುತ್ತದೆ. ಕಿಟಕಿ ಬಾಗಿಲುಗಳ ಕೀರಲು ಶಬ್ದಗಳು ಅದಕ್ಕೆ ಭಯವನ್ನು ತರುತ್ತವೆ. ಅದಕ್ಕೆ ಸದಾ ಕನಸುಗಳು ಬೀಳುತ್ತಿರುತ್ತವೆ. ಎಷ್ಟೋ ಬಾರಿ ಅದಕ್ಕೆ ಕನಸಿಗೂ ನಿಜ ಪ್ರಪಂಚಕ್ಕೂ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ತನಗೆ ಭಯ ಮತ್ತು ದುಃಖ  ಎನಿಸುವಾಗ  ಅದು ಅಳುತ್ತದೆ. ಹಾಗೆಯೇ ಸಂತಸವೆನಿಸಿದಾಗ ಮುಗುಳ್ನಗುತ್ತದೆ. ಅದಕ್ಕೆ ಅಮ್ಮನ ಮಡಿಲು ಮಾತ್ರಾ ಸದಾ ಕ್ಷೇಮವೆನಿಸುತ್ತದೆ.

ನನ್ನ ಬಾಲ್ಯದಲ್ಲಿ ನಡೆದ ಕೆಲವು ಸಂಗತಿಗಳು ನನ್ನ ಮನದಲ್ಲಿ ಬೇರೂರಿ ಬಿಟ್ಟಿವೆ. ಅವನ್ನು ನನ್ನಿಂದ ಅರ್ಥ ಮಾಡಿಕೊಳ್ಳಲಾಗಲೇ ಇಲ್ಲ. ಬಗ್ಗೆ ನನ್ನ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿದ್ದವು. ಆದರೆ ನನಗೆ ಅವುಗಳಿಗೆ ಉತ್ತರ ತಿಳಿಯಲೇ ಇಲ್ಲ.

ನನ್ನ ಅಮ್ಮನಿಗೆ ನಾನು ಐದನೇ ಮಗುವಾಗಿದ್ದರಿಂದ ಅವಳಿಗೆ ನನ್ನ ಕಡೆ ವಿಶೇಷ ಗಮನ ಕೊಡಲು ವೇಳೆ ಇರುತ್ತಿರಲಿಲ್ಲ. ಅವಳಿಗೆ ಅವಳದ್ದೇ ದಿನ ನಿತ್ಯದ ಕೆಲಸಗಳಿರುತ್ತಿದ್ದವು. ಬಿಡುವನ್ನೇ ಕಾಣದ ಜೀವ ಅವಳದು. ಹಾಗಾಗಿ ನನ್ನ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಇಬ್ಬರು ಅಕ್ಕಂದಿರಿಗೆ ವಹಿಸಲಾಗಿತ್ತು. ನನ್ನ ದೊಡ್ಡಕ್ಕನಾದ ಗೌರಕ್ಕ ಅತ್ಯಂತ ಶಾಂತ ಹಾಗು ತಾಳ್ಮೆಯ ವ್ಯಕ್ತಿ. ಆದರೆ ಚಿಕ್ಕಕ್ಕನಾದ ರುಕ್ಮಿಣಕ್ಕ ಶಿಸ್ತಿನ ಸಿಪಾಯಿ. ಅವಳ ಮುಂದೆ ಯಾವುದೇ ಪೋಲಿತನಕ್ಕೆ ಅವಕಾಶವಿರಲಿಲ್ಲ. ನನಗಿಂತ ಎರಡು ವರ್ಷ ದೊಡ್ಡವನಾದ ಪುಟ್ಟಣ್ಣ ನನಗೆ ಸರ್ವಜ್ಞನಂತೆ ಕಾಣಿಸುತ್ತಿದ್ದ. ಆದರೆ ನಮಗೆಲ್ಲರಿಗಿಂತ ದೊಡ್ಡವನಾದ "ಅಣ್ಣಯ್ಯ" ನಮಗೆಲ್ಲಾ ಸರ್ವಾಧಿಕಾರಿಯಾಗಿದ್ದ. ಅವನ ಮುಂದೆ ನಾವು ತುಟಿ ಪಿಟಕ್ ಎನ್ನುವಂತಿರಲಿಲ್ಲ. ಎಲ್ಲ ವಿಷಯಗಳಿಗೂ ಅವನದೇ ಅಂತಿಮ ತೀರ್ಮಾನವಾಗಿತ್ತು. ಅವನ ಆಸರೆಯಲ್ಲಿ ನಾವು ಯಾವಾಗಲೂ ಸುರಕ್ಷಿತರೆಂಬ ನೆಮ್ಮದಿ  ನಮಗಿತ್ತು.
------o----- --o--- -----o------o-------0-----0------0------0-------0------0-------0--
ಕಾಗಕ್ಕ ಗುಬ್ಬಕ್ಕನ ಕಥೆ
ಆಗಿನ ಕಾಲದ ಎಲ್ಲಾ ಮಕ್ಕಳಂತೆ ನನಗೂ ಅಕ್ಕಂದಿರು ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ನಿದ್ದೆ ಮಾಡಿಸುತ್ತಿದ್ದರು. ಕಥೆ ಕೇಳದೇ ನನಗೆ ನಿದ್ದೆ ಬರುವುದು ಸಾಧ್ಯವೇ ಇರಲಿಲ್ಲವಿಚಿತ್ರವೆಂದರೆ ಕಥೆಯನ್ನು ಪುನಃ ಪುನಃ ಕೇಳಲು ಹೇಗೆ ಸಾಧ್ಯವಾಗುತ್ತಿತ್ತೆಂದುಮತ್ತೂ ವಿಚಿತ್ರವೆಂದರೆ ಕಥೆಯ ಮಧ್ಯದಲ್ಲೇ ನಿದ್ದೆ ಬರುತ್ತಿದ್ದರಿಂದ ಅದರ ಕೊನೆಯನ್ನು ಎಂದೂ ಕೇಳದಿದ್ದುದು. ಆದರೆ ಕಥೆಯ ಉದ್ದೇಶವೇ ಮಕ್ಕಳಿಗೆ ನಿದ್ದೆ ಬರಿಸುವುದಾಗಿತ್ತು. ಹಾಗಾಗಿ ಅಕ್ಕಂದಿರಿಗೆ ಅದರ ಅಂತ್ಯವನ್ನು ಹೇಳುವ ಪ್ರಸಂಗವೇ ಬರುತ್ತಿರಲಿಲ್ಲ. ನನಗೆ ನೆನಪಿನಲ್ಲಿ ಉಳಿದಿರುವುದೂ ಕೂಡಾ ನಾನು ನಿದ್ದೆ ಮಾಡುವವರೆಗಿನ ಕಥೆ ಮಾತ್ರ. ಕಥೆ ಹೀಗಿತ್ತು:

ಕಾಗಕ್ಕ ಮತ್ತು ಗುಬ್ಬಕ್ಕ ನೆರೆಹೊರೆಯವರು. ಕಾಗಕ್ಕನ ಮನೆ ಸಗಣಿಯಿಂದ ಕಟ್ಟಲಾಗಿತ್ತು. ಗುಬ್ಬಕ್ಕನ ಮನೆ ಮೇಣದ್ದು. ಗುಬ್ಬಕ್ಕನಿಗೆ ಕಾಗಕ್ಕ ತನ್ನ ಶತ್ರುವೆಂದು ಗೊತ್ತಿತ್ತು. ಒಂದು ರಾತ್ರಿ ಭಾರೀ ಮಳೆ ಬಂದು ಕಾಗಕ್ಕನ ಸಗಣಿ ಮನೆ ಸಂಪೂರ್ಣವಾಗಿ ಕೊಚ್ಚಿ ಹೋಯಿತು. ಗುಬ್ಬಕ್ಕನ ಮನೆಗೆ ಯಾವುದೇ ಹಾನಿಯಾಗಲಿಲ್ಲ. ಅದು ನೆಮ್ಮದಿಯಿಂದ ನಿದ್ದೆ ಮಾಡುತ್ತಿತ್ತು. ಮನೆಯ ಮೂಲೆಯಲ್ಲಿ ಮೂರು ಮೊಟ್ಟೆಗಳನ್ನು ಹುಲ್ಲಿನೊಳಗೆ ಬೆಚ್ಚಗೆ ಜೋಡಿಸಿಟ್ಟಿತ್ತು.

ಕಾಗಕ್ಕ ಬಂದು ಗುಬ್ಬಕ್ಕನ ಮನೆಯ ಬಾಗಿಲನ್ನು ಪಟಪಟನೆ ಬಡಿದು ಅದರ ನಿದ್ರಾಭಂಗ ಮಾಡಿತು. ನಿರ್ವಾಹವಿಲ್ಲದೆ ಗುಬ್ಬಕ್ಕ ಬಾಗಿಲು ತೆರೆದು ತನ್ನ ಶತ್ರುವನ್ನು ಒಳಗೆ ಬಿಡಬೇಕಾಯಿತು. ಕಾಗಕ್ಕ ತುಂಬಾ ವಿನಯದಿಂದ ತನಗೆ ಮನೆಯ ಮೂಲೆಯಲ್ಲಿ ರಾತ್ರಿ ಮಲಗಿಕೊಳ್ಳಲು ಅವಕಾಶ ಕೇಳಿಕೊಂಡಿತು. ಗುಬ್ಬಕ್ಕ ಅದಕ್ಕೆ ಒಪ್ಪಿಗೆ ನೀಡಿ ಪುನಃ ನಿದ್ದೆ ಮಾಡಲಾರಂಭಿಸಿತು.

ಮಧ್ಯ ರಾತ್ರಿ ಗುಬ್ಬಕ್ಕನಿಗೆ "ಕುಟುಂ" ಎಂಬ ಶಬ್ದ ಕೇಳಿ ಎಚ್ಚರವಾಯಿತು. ಕಣ್ಣು ತೆರೆದು ನೋಡುವಾಗ ಕಾಗಕ್ಕ ಏನೋ ತಿನ್ನುತ್ತಿರುವುದು ಕಾಣಿಸಿತು. ಅದು ಗುಬ್ಬಕ್ಕನಿಗೆ ತಾನು ಬರುವಾಗ ನೆಲಗಡಲೆ ಕಾಯಿಗಳನ್ನು ತಂದಿದ್ದೆನೆಂದೂ ಅದರಲ್ಲಿ ಒಂದನ್ನು ತಿಂದುದಾಗಿಯೂ ತಿಳಿಸಿತು. ಗುಬ್ಬಕ್ಕ ಪುನಃ ನಿದ್ದೆ ಮಾಡಿತು. ಆದರೆ ಸ್ವಲ್ಪ ಸಮಯದ ನಂತರ ಅದಕ್ಕೆ ಪುನಃ "ಕುಟುಂ" ಎಂಬ ಶಬ್ದ ಕಿವಿಗೆ ಬಿದ್ದಿತು. ಕಾಗಕ್ಕ ತಾನು ಎರಡನೇ ನೆಲಗಡಲೆ ಕಾಯಿ ತಿಂದುದಾಗಿ ಹೇಳಿದ್ದರಿಂದ ಗುಬ್ಬಕ್ಕ ನಿದ್ದೆಗೆ ಹಿಂದಿರುಗಿತು. ಇದೇ  ಪ್ರಸಂಗ ಪುನಃ ಮುಂದುವರೆದು ಕಾಗಕ್ಕ ತಾನು ತಂದ ಮೂರನೇ ನೆಲಗಡಲೆ ಕಾಯಿ ತಿಂದು ಮುಗಿಸಿದ್ದಾಗಿ ಹೇಳುವುದರಲ್ಲಿ ಕೊನೆಗೊಂಡಿತು.

ಗುಬ್ಬಕ್ಕ ಬೆಳಿಗ್ಗೆ ಎದ್ದು ನೋಡುವಾಗ ಕಾಗಕ್ಕ ಹೊರಟು ಹೋಗಿರುವುದು ಗೊತ್ತಾಯಿತು. ಹಾಗೆಯೇ ಅದು ಮೂಲೆಯಲ್ಲಿಟ್ಟಿದ್ದ ಮೊಟ್ಟೆಗಳ ಕಡೆ ಕಣ್ಣು ಹಾಯಿಸಿದಾಗ ಅವು ಕಣ್ಮರೆ ಆಗಿರುವುದು ಗೊತ್ತಾಯಿತು. ತನ್ನ ವೈರಿಯನ್ನು ಮನೆ ಒಳಗೆ ಬಿಟ್ಟಿದ್ದಕ್ಕೆ ಅದಕ್ಕೆ ಸಿಕ್ಕ ಪ್ರತಿಫಲ ತನ್ನ ಮೊಟ್ಟೆಗಳ ನಾಶಒಂದೊಂದು "ಕುಟುಂಶಬ್ದಕ್ಕೆ ಒಂದೊಂದು ಮೊಟ್ಟೆ ಬಲಿಯಾಗಿತ್ತು!

ನನ್ನ ದೃಷ್ಟಿಯಲ್ಲಿ ಕಾಗಕ್ಕ ಗುಬ್ಬಕ್ಕನ ಕಥೆ ಕನ್ನಡ ಜಾನಪದ ಸಾಹಿತ್ಯದಲ್ಲಿ ಮಕ್ಕಳಿಗೆ ಹೇಳುವ ಪ್ರಪ್ರಥಮ ಹಾಗೂ ಅತ್ಯಮೂಲ್ಯ ಕಥೆ. ಅಜ್ಜಿ ತನ್ನ ಮೊಮ್ಮಕ್ಕಳಿಗೆ ಹೇಳುವ ಮೊಟ್ಟ  ಮೊದಲ ಕಥೆಯೇ ಕಥೆ. ಸ್ವಲ್ಪ ವರ್ಷಗಳ ಆಚೆ ನಾನು ನನ್ನ ಅಕ್ಕಂದಿರಿಬ್ಬರೊಡನೆ ಕಥೆಯ ಅಂತ್ಯ ಹೇಗಾಯಿತೆಂದು ಕೇಳಿದೆ. ನನ್ನ ದೃಷ್ಟಿಯಲ್ಲಿ ಗುಬ್ಬಕ್ಕ ಖಂಡಿತವಾಗಿ ಕಾಗಕ್ಕನ ಮೇಲೆ ಸೇಡು ತೀರಿಸಿಕೊಂಡಿರಬೇಕು. ಆಶ್ಚರ್ಯವೆಂದರೆ ಇಬ್ಬರೂ ಕೂಡ ತಮಗೆ ಕಥೆಯ ಅಂತ್ಯ ಖಂಡಿತವಾಗಿಯೂ ಗೊತ್ತಿಲ್ಲವೆಂದೂ ಹಾಗೆಯೇ ಅವರು ಅದನ್ನು ತಿಳಿಯುವ ಗೋಜಿಗೆ ಹೋಗಲಿಲ್ಲವೆಂದೂ ತಿಳಿಸಿಬಿಟ್ಟರು!

ಒಟ್ಟಿನಲ್ಲಿ ಕಥೆಯ ಅಂತ್ಯ  ಮಗುವಿನ ಎಳೇ ಮನಸ್ಸಿನ ತೀರ್ಮಾನಕ್ಕೆ ಬಿಡಲಾಗಿತ್ತು. ಅದು ಕನಸಿನ ಲೋಕಕ್ಕೆ ಹೋಗುವ ಮುನ್ನ ಅಪೂರ್ಣ ಕಥೆ ಮಾತ್ರ ಕೇಳಿರುತ್ತಿತ್ತು. ಹೀಗೆ ಅಂತ್ಯ ಕಾಣದ ಕಥೆ ತನ್ನ ಉದ್ದೇಶವನ್ನು ತೀರಿಸಿಕೊಳ್ಳುತ್ತಿತ್ತು.
ಹುಂ ಅಂದರೆ ಮೇಲೆ ಬರ್ತಾನೇನು?
ಕಾಗಕ್ಕ ಗುಬ್ಬಕ್ಕನ ಕಥೆ  ಅರ್ಧದಲ್ಲೇ ಮುಕ್ತಾಯಗೊಂಡರೆ ಇನ್ನೊಂದು ಕಥೆ ಪ್ರಾರಂಭದಲ್ಲೇ ಮುಕ್ತಾಯಗೊಳ್ಳುತ್ತಿತ್ತು ಕಥೆ ಉಂಟುಮಾಡುತ್ತಿದ್ದ ಹತಾಶೆ ಅಥವಾ ಕಿರಿಕಿರಿ ಅಷ್ಟಿಟ್ಟಲ್ಲ. ವಿಚಿತ್ರವೆಂದರೆ ಹತಾಶೆಯೇ  ಮಗುವು ನಿದ್ದೆಗೆ ಹೋಗಲು ಕಾರಣವಾಗುತ್ತಿತ್ತುಪ್ರಶ್ನೆಯಲ್ಲೇ ಮುಕ್ತಾಯಗೊಳ್ಳುತ್ತಿದ್ದ ಕಥೆ ನಿಜವಾಗಿಯೂ ಒಂದು ಕಥೆಯೇ ಎಂಬುದೂ ಕೂಡ ಒಂದು ಪ್ರಶ್ನೆಯಾಗಿತ್ತು!

ಅಕ್ಕ ಒಂದು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಹೇಳಲು ಪ್ರಾರಂಭಿಸುತ್ತಿದ್ದಳು. ನಾನು ಯಥಾಪ್ರಕಾರ ಹೂಗುಟ್ಟುತ್ತಾ ಹೋಗುತ್ತಿದ್ದೆ. ನಾನು ಕಥೆಯಲ್ಲಿ ಮಗ್ನನಾಗಿರುವಾಗ ಕಥಾನಾಯಕ ಅಕಸ್ಮಾತ್  ಒಂದು ಬಾವಿಯಲ್ಲಿ ಬಿದ್ದುಬಿಡುತ್ತಿದ್ದ. ಅಲ್ಲಿಗೆ ಅಕ್ಕ ಕಥೆ ನಿಲ್ಲಿಸಿ ಬಿಡುತ್ತಿದ್ದಳು. ನಾನು ಹೂಂ ಎಂದು ಹೇಳಿದಾಗ ಅಕ್ಕ ಹೂಂ ಅಂದರೆ ಅವನು ಮೇಲೆ ಬರ್ತಾನೇನು? ಎಂದು ಮರು ಪ್ರಶ್ನೆ ಹಾಕುವಳು. ಆಗ ನಾನು ಮುಂದೆ ಹೇಳಕ್ಕಾ ಎಂದರೆ ಅವಳು ಪುನಃ ಮುಂದೆ ಹೇಳಕ್ಕಾ ಎಂದರೆ ಅವನು ಮೇಲೆ ಬರ್ತಾನೇನು? ಎಂದು ಕೇಳುವಳು. ನಾನು ಗೊತ್ತಿಲ್ಲ ಎಂದರೆ ಪುನಃ ಗೊತ್ತಿಲ್ಲ ಎಂದರೆ ಅವನು ಮೇಲೆ ಬರ್ತಾನೇನು? ಎನ್ನುವಳು. ಹೀಗೆ ನಾನು ಯಾವುದೇ ಬಗೆಯಲ್ಲಿ ಕಥೆ ಮುಂದುವರಿಸಲು ಹೇಳಿದರೂ ಅದು ಪ್ರಶ್ನೆಯಲ್ಲಿ ಮುಕ್ತಾಯಗೊಳ್ಳುತ್ತಿತ್ತು.
ಐರಾವತದ ಕಥೆ
ನನ್ನ ದೊಡ್ಡ ಅಕ್ಕನಾದ ಗೌರಕ್ಕ ಮದುವೆಯಾಗಿ ಗಂಡನ ಮನೆಗೆ ತೆರಳಿದಾಗ ನಮಗಾದ ಬೇಸರ ಮತ್ತು ದುಃಖ ಅಷ್ಟಿಷ್ಟಲ್ಲ. ಪ್ರತಿ ಬಾರಿಯೂ ಅವಳು ತವರಿಗೆ ಬಂದು ವಾಪಾಸ್ ಹೋಗುವಾಗ ಅವಳ ಅಗಲಿಕೆ ಸಹಿಸಲಾಗದೆ ನಾವೆಲ್ಲ ಅಳತೊಡಗುತ್ತಿದ್ದೆವು. ಆಗ ಒಮ್ಮೆ ರುಕ್ಮಣಕ್ಕ ನಮ್ಮ ಬೇಸರ ಪರಿಹಾರಕ್ಕೆ ಒಂದು ಕಥೆ ಹೇಳಿದಳು. ನನ್ನ ಬಾಲ್ಯದಲ್ಲಿ ನಾನು ಕೇಳಿದ ಅತ್ಯಂತ ಸ್ವಾರಸ್ಯಕರ ಕಥೆ ಅದಾಗಿತ್ತು ಕಥೆ ಹೀಗಿತ್ತು:

ರಂಗಣ್ಣನೆಂಬ ರೈತ ತನ್ನ ಹೊಲದಲ್ಲಿ ಪ್ರತಿ ವರ್ಷವೂ ಕಬ್ಬು ಬೆಳೆಯುತ್ತಿದ್ದ. ಒಂದು ವರ್ಷ ಅವನ ಹೊಲದಲ್ಲಿ ಕಬ್ಬಿನ ಬಂಪರ್ ಬೆಳೆ ಬಂದಿತ್ತು. ಕೊಯ್ಲಿನ ಕಾಲ ಸಮೀಪಿಸುತ್ತಿದ್ದಂತೆ ರಂಗಣ್ಣನಿಗೆ ವರ್ಷ ಬರಲಿರುವ ಆದಾಯ ನೆನಸಿ ಸಂತಸ ಬರುತ್ತಿತ್ತು. ಆದರೆ ಒಂದು ಬೆಳಿಗ್ಗೆ ಹೊಲಕ್ಕೆ ಹೋದಾಗ ಅವನಿಗೊಂದು ಆಘಾತ ಕಾದಿತ್ತು. ಯಾವುದೊ ಪ್ರಾಣಿ ಸ್ವಲ್ಪ ಕಬ್ಬನ್ನು ತಿಂದು ಹೋದದ್ದು ಕಣ್ಣಿಗೆ ಬಿತ್ತು . ರಂಗಣ್ಣ ರಾತ್ರಿ ಹೊಲದಲ್ಲೇ ಕಾವಲಿರಬೇಕೆಂದು ತೀರ್ಮಾನಿಸಿದ.

ರಾತ್ರಿ ರಂಗಣ್ಣ ಹೊಲದ ಒಂದು ಎತ್ತರದ ಭಾಗದಲ್ಲಿ ಕೋವಿಯೊಡನೆ ಕುಳಿತು ಕಾಯುತ್ತಿದ್ದ. ಮಧ್ಯ ರಾತ್ರಿಯಲ್ಲಿ ಅವನಿಗೆ ಆಕಾಶದಿಂದ ಬೆಳ್ಳನೆ ಹೊಳೆಯುತ್ತಿದ್ದ ಆನೆಯೊಂದು ಅವನ ಹೊಲದ ಮಧ್ಯೆ ಇಳಿಯುತ್ತಿರುವುದು ಕಾಣಿಸಿತು. ಅದು ಕೂಡಲೇ ಕಬ್ಬನ್ನು ಮುರಿದು ಸವಿಯಲಾರಂಭಿಸಿತು. ರಂಗಣ್ಣ ಕೋವಿಯನ್ನು ಕೆಳಗಿಟ್ಟು ಆನೆಯ ಬಳಿಗೆ ಹೋಗಿ ಅದಕ್ಕೆ ನಮಸ್ಕಾರ ಮಾಡಿ ಬೆಳೆಯನ್ನು ನಾಶ ಮಾಡಬಾರದೆಂದು ವಿನಂತಿ ಮಾಡಿಕೊಂಡ. ಆನೆ ಅವನ ವರ್ತನೆಯಿಂದ ಖುಷಿಗೊಂಡು ತಾನು ದೇವೇಂದ್ರನ ವಾಹನವಾದ ಐರಾವತವೆಂದೂ ಮತ್ತು ಅವನ ಹೊಲದ ಕಬ್ಬು ಅದಕ್ಕೆ ತುಂಬಾ ಇಷ್ಟವಾಯಿತೆಂದೂ ಹೇಳಿತು. ಹಾಗೆಯೇ ಅವನಿಗೆ ತಾನು ಹಿಂತಿರುಗುವಾಗ ತನ್ನ ಬಾಲ  ಹಿಡಿದುಕೊಂಡು ಸ್ವರ್ಗಕ್ಕೆ ಬರುವಂತೆ ಆಹ್ವಾನಿಸಿತು.

ರಂಗಣ್ಣನ ಆನಂದಕ್ಕೆ ಪಾರವೇ ಇರಲಿಲ್ಲ. ಅವನು ಐರಾವತದ ಬಾಲವನ್ನು ಹಿಡಿದುಕೊಂಡು ಸ್ವರ್ಗಕ್ಕೆ ಭೇಟಿ ನೀಡಿದ. ಅಲ್ಲಿ ಅಷ್ಟ ದಿಕ್ಪಾಲಕರನ್ನು ಹಾಗೂ ಅಪ್ಸರೆಯರನ್ನು ನೋಡಿ ಅವನ ಖುಷಿಗೆ ಮಿಗಿಲಿರಲಿಲ್ಲ. ಐರಾವತ ಕುಬೇರನಿಂದ ರಂಗಣ್ಣನಿಗೆ ಒಂದು ಚೀಲ ತುಂಬಾ ಚಿನ್ನ ಮತ್ತು ವಜ್ರದ ಆಭರಣಗಳನ್ನು ಕೊಡಿಸಿತು. ಹಾಗೆಯೇ ಅವನನ್ನು ತನ್ನ ಬಾಲದಲ್ಲಿ ಜೋಡಿಸಿಕೊಂಡು ಪುನಃ ಹೊಲದೊಳಗೆ ಇಳಿಸಿ ಸ್ವರ್ಗಕ್ಕೆ ಹಿಂದಿರುಗಿತು.

ರಂಗಣ್ಣ ಬೆಳಗಾಗುವಾಗ ಮನೆ ತಲುಪಿದ. ಹೆಂಡತಿ ರಂಗಮ್ಮನ ಕೈಗೆ ಆಭರಣಗಳ ಚೀಲ ಕೊಟ್ಟು ರಾತ್ರಿ ನಡೆದ ಕಥೆಯನ್ನು ವಿಸ್ತಾರವಾಗಿ ಹೇಳಿದ. ಹಾಗೆಯೇ ವಿಷಯವನ್ನು ರಹಸ್ಯವನ್ನಾಗಿ ಇಡಬೇಕೆಂದೂ ಬೇರಾರಿಗೂ ತಿಳಿಸಬಾರದೆಂದೂ ಎಚ್ಚರಿಸಿದ. ಆದರೆ ರಂಗಮ್ಮನಿಗೆ ಗುಟ್ಟನ್ನು ಒಂದು ದಿನವೂ ತನ್ನಲ್ಲೇ ಇಟ್ಟುಕೊಳ್ಳಲು ಆಗಲಿಲ್ಲ. ಅವಳು ತನ್ನ ನೆರೆಮನೆಯ ನಿಂಗಮ್ಮನಿಗೆ ತಾನೊಂದು ಗುಟ್ಟನ್ನು ಹೇಳುವುದಾಗಿಯೂ ಅದನ್ನು ಬೇರಾರಿಗೂ ಹೇಳಬಾರದೆಂದೂ ಆಣೆ ಹಾಕಿಸಿಕೊಂಡು ಐರಾವತದ ಕಥೆಯನ್ನು ಹೇಳಿಬಿಟ್ಟಳು. ಹೀಗೆಯೇ ಗುಟ್ಟು ರಟ್ಟಾಗುತ್ತ ಸಂಜೆಯ ವೇಳೆಗೆ ಇಡೀ ಊರಿಗೆ ಹಬ್ಬಿ ಬಿಟ್ಟಿತು.

ರಂಗಮ್ಮನಿಗೆ ಇದ್ದಕಿದ್ದಂತೆ ಒಂದು ಐಡಿಯಾ ಹೊಳೆಯಿತು. ತಾನೂ ಕೂಡ ಏಕೆ ರಾತ್ರಿ ಗಂಡನೊಡನೆ ಸ್ವರ್ಗಕ್ಕೆ ಭೇಟಿ ಕೊಡಬಾರದೆಂದು. ಅವಳು ಗಂಡನೊಡನೆ ಅವನು ಆನೆಯ ಬಾಲವನ್ನು ಹಿಡಿದುಕೊಂಡಾಗ ತಾನು ಅವನ ಕಾಲು ಹಿಡಿದು ನೇತಾಡುತ್ತಾ ಸ್ವರ್ಗಕ್ಕೆ ಬರುತ್ತೇನೆಂದು ದಂಬಾಲು ಬಿದ್ದಳು. ರಂಗಣ್ಣ ನಿರ್ವಾಹವಿಲ್ಲದೆ ಒಪ್ಪಿಗೆ ನೀಡಿದ. ಅದನ್ನು ಪುನಃ ಗುಟ್ಟಾಗಿಡುವಂತೆ ಹೇಳಿದ. ಆದರೆ ಗುಟ್ಟು ಮೊದಲು ನಿಂಗಮ್ಮನಿಗೆ ರಟ್ಟಾಗಿ ನಂತರ ಇಡೀ ಊರಿಗೇ ರಟ್ಟಾಯಿತು. ಇಡೀ ಊರಿನ ಪ್ರತಿ ಮನೆಯಿಂದ ಒಬ್ಬ ಹೆಂಗಸು ಸ್ವರ್ಗ ಪ್ರಯಾಣಕ್ಕೆ ತಯಾರಾಗಿ ಬಿಟ್ಟಳು!

ಅಂದಿನ ಮಧ್ಯ ರಾತ್ರಿ ಐರಾವತ ಯಥಾ ಪ್ರಕಾರ ರಂಗಣ್ಣನ ಹೊಲದಲ್ಲಿ ಇಳಿದು ಕಬ್ಬನ್ನು ತಿನ್ನಲಾರಂಭಿಸಿತು. ಅದು ವಾಪಾಸ್ ತನ್ನ ಆಕಾಶ ಪ್ರಯಾಣ ಪ್ರಾರಂಭಿಸುವಾಗ  ರಂಗಣ್ಣ ಅದರ ಬಾಲ ಹಿಡಿದುಕೊಂಡ. ರಂಗಮ್ಮ ಅವನ ಕಾಲನ್ನು ಹಿಡಿದುಕೊಂಡರೆ ನಿಂಗಮ್ಮ ಅವಳ ಕಾಲನ್ನು ಹಿಡಿದುಕೊಂಡಳು. ಹೀಗೆ ಒಬ್ಬರ ಕಾಲನ್ನು ಒಬ್ಬರು ಹಿಡಿದುಕೊಂಡು ಊರಿನ ಹೆಂಗಸರೆಲ್ಲಾ ಸ್ವರ್ಗದತ್ತ ಪ್ರಯಾಣಿಸಿದರು.

ಆದರೆ ಹೆಂಗಸರ ಬಾಯಿಗೆ ಬೀಗ ಹಾಕುವರಾರು? ಸ್ವಲ್ಪ ಸಮಯದ ನಂತರ ಐರಾವತದ ಬಾಲಕ್ಕೆ ಅಂಟಿದ ಸರಮಾಲೆಯ ತುತ್ತ ತುದಿಯಲ್ಲಿದ್ದ ಹೆಂಗಸಿಗೆ ಒಂದು ಅನುಮಾನ ಬಂತು. ಅಷ್ಟೊಂದು ಮಂದಿಗೆಲ್ಲಾ ಕೊಡುವಷ್ಟು ಆಭರಣಗಳು ಕುಬೇರನ ಕಣಜದಲ್ಲಿ ಇರಬಹುದೇ ಎಂದು. ಅವಳ ಪ್ರಶ್ನೆ ಒಬ್ಬರಿಂದ ಒಬ್ಬರಿಗೆ ದಾಟುತ್ತಾ ರಂಗಣ್ಣನಿಗೆ ತಲುಪುತ್ತದೆ. ಅವನು ಎಲ್ಲರಿಗೂ ಸಿಗುವಷ್ಟು ಆಭರಣಗಳು ಕುಬೇರನ ಹತ್ತಿರ ಉಂಟೆಂದು ಹೇಳಿದ್ದು ಪುನಃ ಒಬ್ಬರಿಂದ ಒಬ್ಬರಿಗೆ ದಾಟುತ್ತಾ ತುದಿಯಲ್ಲಿದ್ದವಳಿಗೆ ತಲುಪುತ್ತದೆ.

ಆದರೆ ಹೆಂಗಸಿನ ಕುತೂಹಲ ಅಲ್ಲಿಗೇ ಮುಗಿಯಲಿಲ್ಲ. ಅವಳು ಪುನಃ ಕುಬೇರನ ಹತ್ತಿರ ಸುಮಾರು ಎಷ್ಟು ನಿಧಿ ಇರಬಹುದೆಂದು ಪ್ರಶ್ನೆ ಹಾಕುತ್ತಾಳೆ. ಅದು ಯಥಾ ಪ್ರಕಾರ ರಂಗಣ್ಣನಿಗೆ ತಲುಪಿದಾಗ ಅವನಿಗೆ ತುಂಬಾ ಕೋಪ ಬರುತ್ತದೆ. ಅವನು ಕೋಪದಲ್ಲಿ ಕುಬೇರನ ಹತ್ತಿರ ಪ್ರತಿಯೊಬ್ಬರೂ ತಮ್ಮ ಎರಡೂ ಕೈಗಳಲ್ಲಿ ಬಾಚಿಕೊಳ್ಳಲಾಗದಷ್ಟು ನಿಧಿ ಇರುವುದೆಂದು ಹೇಳಲು ಆನೆಯ ಬಾಲದಿಂದ ತನ್ನೆರಡೂ ಕೈಗಳನ್ನು ಹೊರ ತೆಗೆಯುತ್ತಾನೆ. ಮತ್ತೇನಿದೆ? ಬಾಲಕ್ಕೆ ಜೋಡಿಸಿದ್ದ ಸರಮಾಲೆ ಕಳಚಿ ಊರಿನ ಕೆರೆಯೊಳಗೆ ಬಿದ್ದು ಬಿಡುತ್ತದೆ. ಹೀಗೆ ಊರಿನವರ ಸ್ವರ್ಗಯಾತ್ರೆ ಕೆರೆಯಲ್ಲಿ ಕೊನೆಗೊಳ್ಳುತ್ತದೆ. ಐರಾವತ ಪುನಃ ಎಂದೂ ರಂಗಣ್ಣನ ಹೊಲದಲ್ಲಿ ಕಾಣಿಸಿಕೊಳ್ಳುವುದಿಲ್ಲ.


No comments: