ಅಧ್ಯಾಯ ೩೧
ಮೇಲ್ಕೊಪ್ಪ ಮಂಜುನಾಥ ಮತ್ತು ಚಾರಣಬೈಲ್
ಲಕ್ಷ್ಮೀನಾರಾಯಣ ಬೇಗನೆ ನನ್ನ ಸ್ನೇಹಿತರಾಗಿಬಿಟ್ಟರು.
ಮಂಜು ಸ್ವಲ್ಪ ದಿನ ತನ್ನ ಅಕ್ಕನ ಮನೆಯಾದ ಹುಂಚ ಎಂಬಲ್ಲಿ ಇದ್ದವನಾದ್ದರಿಂದ ಅಲ್ಲಿನ ವಿಷಯ ತುಂಬಾ
ಹೇಳುತ್ತಿದ್ದ. ಜೈನರ ಯಾತ್ರಾಕ್ಷೇತ್ರವಾದ ಹುಂಚ ಶಿವಮೊಗ್ಗೆಯ ಸಮೀಪವಿದ್ದು ಅಲ್ಲಿಂದ ಗಾಜನೂರ್ ತುಂಗಾ
ಅಣೆಕಟ್ಟು ತುಂಬಾ ಹತ್ತಿರವಂತೆ. ನನಗೆ ಹೊರಪ್ರಪಂಚದ ಅರಿವು ತುಂಬಾ ಕಡಿಮೆಯಿದ್ದರಿಂದ ಅವನು ಹೇಳುತ್ತಿದ್ದದ್ದನ್ನು
ಕುತೂಹಲದಿಂದ ಕೇಳುತ್ತಿದ್ದೆ. ಆದರೆ ಮಾರನೇ ವರ್ಷ ಮಂಜು ಓದಲು ಹುಂಚಕ್ಕೆ ಹೋಗಿ ಬಿಟ್ಟ. ಅಲ್ಲಿಗೆ
ನನ್ನ ಅವನ ಸ್ನೇಹ ಕೊನೆಗೊಂಡಿತು. ಲಕ್ಷ್ಮೀನಾರಾಯಣನ ತಂದೆಗೆ ಸಾಕಷ್ಟು ಜಮೀನು ಇತ್ತು. ಹಿರಿಯ ಮಗನಾದ
ಅವನಿಗೆ ಮನೆಯ ಸ್ವಲ್ಪ ಜವಾಬ್ದಾರಿಯೂ ಇತ್ತು. ಅವನು ೬ನೇ ತರಗತಿಯಲ್ಲಿ ಫೈಲ್ ಆಗಿ ಅವನ ವಿದ್ಯಾಭ್ಯಾಸ
ಅಲ್ಲಿಗೆ ಮುಕ್ತಾಯವಾಯಿತು. ಹೀಗೆ ನನ್ನ ಮತ್ತೊಬ್ಬ ಸ್ನೇಹಿತನೂ ನನ್ನಿಂದ ಕಳಚಿಕೊಂಡ. ಪುಟ್ಟಪ್ಪ ನಾಯಕ,
ವೆಂಕಟಯ್ಯ, ಪುಟ್ಟಪ್ಪ ಮತ್ತು ಗೋಪಾಲ ಜಗಳಗಂಟಿಗಳಾಗಿದ್ದು ವಿನಾ ಕಾರಣ ಜಗಳಕ್ಕೆ
ಬರುತ್ತಿದ್ದರು. ಆದರೆ ಶಂಕರಪ್ಪ ಮತ್ತು ತಿಮ್ಮಪ್ಪ ಆಗ ನಮ್ಮ ಸಹಾಯಕ್ಕೆ ಬರುತ್ತಿದ್ದರು. ಅಲ್ಲದೆ
ಈ ಜಗಳಗಂಟಿಗಳಿಗೆ ವಿಷ್ಣುವಿನ ದೃಢಕಾಯ ವ್ಯಕ್ತಿತ್ವ ಸ್ವಲ್ಪ ಭಯ ಹುಟ್ಟಿಸುತ್ತಿತ್ತು. ಆದರೆ ವಿಷ್ಣು
ಮತ್ತು ಶಂಕರಪ್ಪ ತುಂಬಾ ದೃಢಕಾಯರಾಗಿದ್ದರೂ ವಾಸ್ತವದಲ್ಲಿ ತುಂಬಾ ಸಾಧುಗಳಾಗಿದ್ದರು. ಆದರೆ ಜಗಳಗಂಟಿಗಳು
ಅವರ ತಂಟೆಗೆ ಬರುತ್ತಿರಲಿಲ್ಲ.
ಪುಟ್ಟಪ್ಪನಾಯಕನ ತಂದೆ ವಾಸಪ್ಪ ನಾಯಕರು
ಶ್ರೀಮಂತರಾಗಿದ್ದು ಮೇಲ್ಕೊಪ್ಪ ಶಾಲೆಯ ಹತ್ತಿರ ಮನೆ ಮತ್ತು ಒಂದು ಅಂಗಡಿಯ ಬಿಲ್ಡಿಂಗ್ ಕಟ್ಟಿಸಿದರು.
ಅಲ್ಲಿ ಹೊಕ್ಕಳಿಕೆಯ ಪುರೋಹಿತರಾಗಿದ್ದ ಚಾರಣ ಬೈಲ್ ವೆಂಕಟಗಿರಿ ಭಟ್ಟರ ತಮ್ಮ ಒಂದು ಅಂಗಡಿ ತೆರೆದ.
ನಾವು ಬೇಗನೆ ಅವನ ಸ್ನೇಹಿತರಾಗಿ ಒಮ್ಮೊಮ್ಮೆ ಅವನ ಅಂಗಡಿಯಲ್ಲಿ ಪೆಪ್ಪರ್ ಮಿಂಟ್ ಮತ್ತು ಸೋಡಾ
ಖರೀದಿಸುತ್ತಿದ್ದೆವು. ಪುಟ್ಟಪ್ಪ ನಾಯಕ ೬ನೇ ತರಗತಿಯಲ್ಲಿ ಫೈಲ್ ಆಗಿ ಅವನ ವಿದ್ಯಾಭ್ಯಾಸವೂ ಅಲ್ಲಿಗೆ ಮುಕ್ತಾಯವಾಯಿತು. ಆ ದಿನಗಳಲ್ಲಿ ಮೇಷ್ಟರುಗಳು ಚೆನ್ನಾಗಿ ಓದದ ಹುಡುಗರನ್ನು ನಿರ್ದಾಕ್ಷಣ್ಯದಿಂದ ಫೈಲ್ ಮಾಡಿಬಿಡುತ್ತಿದ್ದರು. ಅವರು ಅದೇ ತರಗತಿಯಲ್ಲಿ ಪುನಃ
ಓದಬೇಕಾಗಿತ್ತು.
ಗಿನ್ನೆಸ್ ರೆಕಾರ್ಡ್ ಕನಸು ಭಗ್ನ!
ನನ್ನ ತರಗತಿಯಲ್ಲಿ ನಾಗಭೂಷಣ ಎಂಬ ವಿದ್ಯಾರ್ಥಿ
ಇದ್ದ. ಅವನ ಆತ್ಮೀಯ ಸ್ನೇಹಿತ ನಾನು ಈ ಹಿಂದೆಯೇ ಹೇಳಿದ ಕಬಡ್ಡಿ ಕ್ಯಾಪ್ಟನ್ ವಾಸಾಚಾರಿ. ಈ ಜೋಡಿಯ ವಯಸ್ಸಿಗೂ ಮತ್ತು ನಮ್ಮ ಗುರುಶಾಂತಪ್ಪ ಮೇಷ್ಟರ
ವಯಸ್ಸಿಗೂ ಹೆಚ್ಚು ವ್ಯತ್ಯಾಸ ಕಾಣುತ್ತಿರಲಿಲ್ಲ. ಅವರಿಬ್ಬರಲ್ಲೂ ಒಂದು ಸಾಮ್ಯವಿತ್ತು. ಅವರಿಗೆ ತಾವು
ಒಂದೊಂದು ತರಗತಿಯಲ್ಲೂ ಎಷ್ಟು ವರ್ಷ ಓದಿದ್ದೇವೆಂದು ಮರೆತು ಹೋಗಿತ್ತು! ನಾನು ಶಾಲೆಗೆ ಸೇರಿದಾಗ ವಾಸಾಚಾರಿ
ಎಂಟನೇ ತರಗತಿಗೂ ಮತ್ತು ನಾಗಭೂಷಣ ಆರನೇ ತರಗತಿಗೂ ಅಂಟಿಕೊಂಡು ಬಿಟ್ಟಿದ್ದರು. ಬಸವಾನಿ ಶಾಲೆಯಲ್ಲಿ ಅವರಿಬ್ಬರೂ ಒಂದು ಗಿನ್ನೆಸ್ ರೆಕಾರ್ಡ್ ಮಾಡಲು
ತೀರ್ಮಾನಿಸಿದಂತಿತ್ತು! ಆದರೆ ನಾಗಭೂಷಣನ ರೆಕಾರ್ಡ್ ಒಂದು ವಿಪರೀತ ಪರಿಸ್ಥಿತಿಯ ಕಾರಣ ಸಮಾಪ್ತಿಗೊಂಡಿತು.
ನಾಗಭೂಷಣನ ಗಾಡಿಯ ಚಕ್ರ ಆರನೇ ತರಗತಿಯಲ್ಲೇ ಗಿರ್ಗುಟ್ಟೆ ಹೊಡೆಯುತ್ತಿರುವಾಗ ಅವನ
ನಾಲ್ಕು ವರ್ಷ ಕಿರಿಯ ತಂಗಿ ಶಾಂತಕುಮಾರಿ ಕೂಡಾ ಆರನೇ ತರಗತಿಗೆ ಪ್ರವೇಶ ಮಾಡಿಬಿಟ್ಟಳು! ನಾಗಭೂಷಣನಿಗೆ
ಅದು ತುಂಬಾ ಮುಜುಗರ ತಂದಿತು. ಅವನು ಹೇಗೋ ಅದನ್ನು ಸಹಿಸಿಕೊಂಡಿರಲು ಪ್ರಯತ್ನಿಸುತ್ತಿದ್ದ. ಆದರೆ
ನಮ್ಮ ಕ್ಲಾಸ್ ಟೀಚರ್ ಗುರುಶಾಂತಪ್ಪನವರು ಅದಕ್ಕೆ ಅವಕಾಶ ಕೊಡಲಿಲ್ಲ. ಆ ದಿನಗಳಲ್ಲಿ ಶಾಲೆಗಳಲ್ಲಿ
ಒಂದು ವಿಚಿತ್ರ ಮತ್ತು ಕ್ರೂರ ಶಿಕ್ಷಾ ಕ್ರಮವಿತ್ತು. ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡದ ವಿದ್ಯಾರ್ಥಿಗೆ
ಸರಿಯಾದ ಉತ್ತರ ಕೊಟ್ಟ ವಿದ್ಯಾರ್ಥಿಯಿಂದ ಮೂಗು ಹಿಡಿದು ಕೆನ್ನೆಗೆ ಹೊಡೆಸಲಾಗುತ್ತಿತ್ತು. ಗುರುಶಾಂತಪ್ಪನವರು
ನಾಗಭೂಷಣ ಮತ್ತು ಅವನ ತಂಗಿಗೆ ಒಂದೇ ಪ್ರಶ್ನೆ ಕೇಳುತ್ತಿದ್ದರು. ತಂಗಿ ಸರಿಯಾಗಿ ಉತ್ತರ ಕೊಟ್ಟಾಗ
ಅವಳು ನಾಗಭೂಷಣನ ಕೆನ್ನೆಗೆ ಹೊಡೆಯ ಬೇಕಾಗಿತ್ತು.
ಈ ಬಗೆಯ ಅವಮಾನವನ್ನು ತಾಳಲಾರದೆ ನಾಗಭೂಷಣ ತನ್ನ ವಿದ್ಯಾಭ್ಯಾಸವನ್ನು ಆರನೇ ತರಗತಿಗೇ ನಿಲ್ಲಿಸಬೇಕಾಯಿತು.
ಹೀಗೆ ಅವನ ಗಿನ್ನೆಸ್ ರೆಕಾರ್ಡ್ ಕನಸು ಭಗ್ನಗೊಂಡಿತು!
ಝೇಂಡು
ಝೇಂಡು ಝೇಂಡು ಗುಡು ಗುಡು!
ಕಿರಿಯ ವಿದ್ಯಾರ್ಥಿಗಳಾದ ನಮಗೆ ಎಂಟನೇ
ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ವಿಶೇಷ ಗೌರವ ಹಾಗೂ ಭಯ ಇದ್ದಿತು. ಆ ತರಗತಿಯಲ್ಲಿ ಓದುತ್ತಿದ್ದ ತಿಮ್ಮಪ್ಪ ಮತ್ತು
ಫಣಿಯಪ್ಪ ಎಂಬ ವಿದ್ಯಾರ್ಥಿಗಳು ಒಂದು ಬ್ಯುಸಿನೆಸ್
ನಲ್ಲಿ ಪೈಪೋಟಿ ನಡೆಸುತ್ತಿದ್ದರು. ನಾನು ಶಾಲೆಗೆ ಸೇರಿದ ದಿನವೇ ಅವರಿಬ್ಬರೂ ನನ್ನನ್ನು ಪ್ರತ್ಯೇಕವಾಗಿ
ಭೇಟಿಮಾಡಿ ನನ್ನ “ಆರ್ಡರ್” ಅವರಿಗೇ ಕೊಡಬೇಕೆಂದು ಹೇಳಿ ಹೋಗಿಬಿಟ್ಟರು. ನನಗೆ ಏನೂ ಅರ್ಥವಾಗಲಿಲ್ಲ.
ಆಮೇಲೆ ಶ್ರೀಧರಮೂರ್ತಿಯಿಂದ ವಿಷಯ ಏನೆಂದು ತಿಳಿಯಿತು. ಅವರಿಬ್ಬರೂ ತೀರ್ಥಹಳ್ಳಿಯಿಂದ ಟೆಕ್ಸ್ಟ್ ಪುಸ್ತಕಗಳನ್ನು
ತಂದು ವಿದ್ಯಾರ್ಥಿಗಳಿಗೆ ಮಾರುತ್ತಿದ್ದರಂತೆ. ಒಂದೊಂದು ಪುಸ್ತಕಕ್ಕೂ ಅವರಿಗೆ ಒಂದಾಣೆ ಕಮಿಷನ್ ಕೊಡಬೇಕಿತ್ತಂತೆ.
ನನ್ನ ಅಣ್ಣ ನನಗೆ ಬೇಕಾದ ಎಲ್ಲಾ ಪುಸ್ತಕಗಳನ್ನು
ಮೊದಲೇ ತಂದು ಬಿಟ್ಟಿದ್ದ. ಆದ್ದರಿಂದ ನನಗೆ ಕೇವಲ ಹಿಂದಿ ಪುಸ್ತಕದ ಅಗತ್ಯ ಇತ್ತು. ಆದರೆ ಅದನ್ನು
ಇಬ್ಬರಲ್ಲಿ ಯಾರ ಮೂಲಕ ತರಿಸಬೇಕೆಂದು ನನಗೆ ತೀರ್ಮಾನಿಸಲಾಗಲಿಲ್ಲ. ಫಣಿಯಪ್ಪ ತುಂಬಾ ಸಭ್ಯ ಮತ್ತು
ಸಾಧು ವ್ಯಕ್ತಿಯಾಗಿದ್ದರೆ ತಿಮ್ಮಪ್ಪ ಒಬ್ಬ ಒರಟ ಉಂಡಾಡಿ ಗುಂಡನಂತೆ ಕಾಣುತ್ತಿದ್ದ. ಅವನ ಮುಖದಲ್ಲಿ
ಎಂದೂ ನಗೆ ಕಾಣುತ್ತಿರಲಿಲ್ಲ. ಎಲ್ಲರೂ ಕಬಡ್ಡಿ ಆಡುವಾಗ "ಕಬಡ್ಡಿ ಕಬಡ್ಡಿ " ಎಂದು ಹೇಳುತ್ತಿದ್ದರೆ ತಿಮ್ಮಪ್ಪ ಮಾತ್ರ
" ಝೇಂಡು ಝೇಂಡು ಝೇಂಡು ಗುಡು ಗುಡು! ತ್ರೇತ ತ್ರೇತ ತ್ರೇತ ಗುಡು ಗುಡು!" ಎಂದು ರಣಭೈರವನಂತೆ
ಕೂಗುತ್ತ ಆಕ್ರಮಣ ಮಾಡುತ್ತಿದ್ದ! ಅವನಿಗೆ ಆರ್ಡರ್
ಕೊಡದಿದ್ದರೆ ನನ್ನ ಮೇಲೆಯೇ “ಝೇಂಡು ಗುಡು ಗುಡು” ಎಂದು ಆಕ್ರಮಣ ಮಾಡಿಯಾನೆಂದು ನನಗೆ ಭಯವಾಯಿತು.
ಆದರೆ ಸಮಸ್ಯೆ ಇದ್ದಕಿದ್ದಂತೆ ಸುಸೂತ್ರವಾಗಿ ಬಗೆ ಹರಿಯಿತು. ಏಕೆಂದರೆ ತೀರ್ಥಹಳ್ಳಿಯಲ್ಲಿ ಹಿಂದಿ
ಪುಸ್ತಕಗಳೆಲ್ಲಾ ಆಗಲೇ ಮಾರಾಟವಾಗಿ ಬಿಟ್ಟಿದ್ದವಂತೆ. ನನಗಾಗಿ ಒಂದು ಪುಸ್ತಕ ತರಿಸುವ ಸಂಭವವಿರಲಿಲ್ಲ. ನಾನು ಆಗಲೇ ಬರೆದಿರುವಂತೆ ನಾಗೇಶ ಭಾವನವರ ಹಳೆಯ ಪುಸ್ತಕ
ನನಗೆ ದೊರೆಯಿತು.
ದೇವಪ್ಪನ
ಪ್ರಣಯ ಪ್ರಸಂಗ
ಎಂಟನೇ ತರಗತಿಯಲ್ಲಿ ದೇವಪ್ಪನೆಂಬ ಚೆಂದದ
ವಿದ್ಯಾರ್ಥಿ ಒಬ್ಬನಿದ್ದ. ಅವನೂ ನಮ್ಮ ಜಗದೀಶನಂತೆ ಲಕ್ಷ್ಮೀಪುರ ಎಂಬ ಹಳ್ಳಿಯವನು. ಆ ಹಳ್ಳಿಯ ಹೆಸರಿನಂತೆ
ಅಲ್ಲಿಯವರೆಲ್ಲಾ ಲಕ್ಷ್ಮೀ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶ್ರೀಮಂತರಾಗಿದ್ದರು. ದೇವಪ್ಪನು ಶ್ರೀಮಂತರ
ಮಗ ಮಾತ್ರವಲ್ಲ ಓದುವುದರಲ್ಲೂ ಮುಂದಿದ್ದನು. ಆದರೆ ದೇವಪ್ಪ ಇದ್ದಕಿದ್ದಂತೆ ಬೇರೊಂದು ಕಾರಣಕ್ಕಾಗಿ
ಪ್ರಸಿದ್ಧಿ ಪಡೆದು ಬಿಟ್ಟನು.
ದೇವಪ್ಪನ ತರಗತಿಯಲ್ಲಿ ಶಾರದೆ ಎಂಬ
ಚೆಂದದ ವಿದ್ಯಾರ್ಥಿನಿ ಒಬ್ಬಳಿದ್ದಳು. ಅವಳೂ ಕೂಡ ಶ್ರೀಮಂತ ಮನೆತನದವಳೇ ಆಗಿದ್ದಳು. ಒಂದು ದಿನ ಹೆಡ್
ಮಾಸ್ಟರ್ ವರದಾಚಾರ್ ಅವರು ದೇವಪ್ಪ ಮತ್ತು ಶಾರದೆ ಇಬ್ಬರನ್ನೂ ಆಫೀಸಿಗೆ ಕರೆಸಿ ವಿಚಾರಣೆ ಮಾಡಿದರಂತೆ.
ಏಕೆಂದರೆ ಈ ಜೋಡಿಯ ನಡುವೆ ಏನೋ ಚೆಲ್ಲಾಟ ನಡೆಯುತ್ತಿದೆಯೆಂದು ಅವರಿಗೆ ಅಧಿಕೃತ ಮೂಲಗಳಿಂದ ತಿಳಿದು
ಬಂದಿತ್ತಂತೆ. ವರದಿಯ ಪ್ರಕಾರ ಈ ಜೋಡಿ ಸಂಜೆ ಶಾಲೆಯಿಂದ ಹಿಂದಿರುಗುವಾಗ ಗುಪ್ತ ಸ್ಥಳವೊಂದರಲ್ಲಿ ಭೇಟಿಯಾಗುತ್ತಿದ್ದರಂತೆ!
ಹೆಡ್ ಮಾಸ್ಟರ್ ಅವರು ಈ ಜೋಡಿಗೆ ಹೇಗೆ
ಎಚ್ಚರಿಕೆ ನೀಡಿ ಕಳಿಸಿದರೆಂದು ಯಾರಿಗೂ ತಿಳಿಯಲಿಲ್ಲ. ಆದರೆ ದೇವಪ್ಪ-ಶಾರದೆಯರ ಪ್ರಣಯ ಪ್ರಸಂಗ ಮಿಂಚಿನ
ವೇಗದಲ್ಲಿ ಇಡೀ ಶಾಲೆಗೆ ಹಬ್ಬಿ ಬಿಟ್ಟಿತು. ಅದಕ್ಕೆ ಕಾರಣ ಜವಾನ ನಾಗಪ್ಪನೆಂದು ಬೇರೆ ಹೇಳ ಬೇಕಿಲ್ಲ.
ಆದರೆ ಶಾಲೆಯಲ್ಲಿ ಪಾಠ ನಡೆಯುತ್ತಿದ್ದರಿಂದ ಸಮಾಚಾರ ಗುಟ್ಟಾಗಿ ಹರಡಿದರೂ ವಿವರಗಳು ಯಾರಿಗೂ ತಿಳಿದಿರಲಿಲ್ಲ.
ನಮ್ಮೊಟ್ಟಿಗೆ ಶಾಲೆಗೆ ಬರುತ್ತಿದ್ದ
ಅತ್ತಿಕೊಡಿಗೆ ಗಣಪೆ ಗೌಡರ ಮಗ ತಿಮ್ಮಪ್ಪನೂ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ನಾವೆಲ್ಲಾ ಅವನಿಂದ ದೇವಪ್ಪ-ಶಾರದೆಯರ ಪ್ರಣಯ ಪ್ರಸಂಗದ ಪೂರ್ಣ ವಿವರಗಳನ್ನು ಪಡೆಯಲು ಕಾಯುತ್ತಿದ್ದೆವು. ಅವನಿಗೂ
ನಮಗೆಲ್ಲ ಅದನ್ನು ಹೇಳುವುದರಲ್ಲಿ ಆಸಕ್ತಿಯಿತ್ತು. ಆದರೆ ನಾವು ನಮ್ಮ ಕುತೂಹಲವನ್ನು ನಮ್ಮೊಡನೆ ಶಾಲೆಗೆ
ಬರುತ್ತಿದ್ದ ಏಕೈಕ ವಿದ್ಯಾರ್ಥಿನಿ ವಿಶಾಲಾಕ್ಷಿ ಅವಳ ಮನೆ ತಲುಪುವರೆಗೆ ತಡೆದುಕೊಳ್ಳಬೇಕಾಯಿತು. ಅವಳು ಹೋದ ಕೂಡಲೇ ತಿಮ್ಮಪ್ಪ ಪೂರ್ತಿ ಪ್ರಸಂಗವನ್ನು ವಿವರವಾಗಿ
ಹೇಳತೊಡಗಿದ.
ತಿಮ್ಮಪ್ಪನ ಪ್ರಕಾರ ಇಡೀ ಪ್ರಕರಣವನ್ನು
ಬಯಲಿಗೆಳೆದವನು ಏಳನೇ ತರಗತಿಯಲ್ಲಿ ಓದುತ್ತಿದ್ದ ಮಂಜಪ್ಪ ಎಂಬ ವಿದ್ಯಾರ್ಥಿ. ಈ ಮಂಜಪ್ಪ ಮಾಡಿದ ಕೆಲಸ ಪ್ರಖ್ಯಾತ ಪತ್ತೇದಾರಿ ಕಾದಂಬರಿ ಲೇಖಕ ಎನ್ ನರಸಿಂಹಯ್ಯನವರ ಕಥೆಯಲ್ಲಿ ಬರುತ್ತಿದ್ದ ಪತ್ತೇದಾರ ಪುರುಷೋತ್ತಮನಿಗೇನೂ
ಕಡಿಮೆ ಇರಲಿಲ್ಲ. ಏಳನೇ ಮತ್ತು ಎಂಟನೇ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದರಿಂದ ಮಂಜಪ್ಪ
ಈ ಜೋಡಿಯ ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದನಂತೆ. ಬಹು ಬೇಗನೆ ಅವನಿಗೆ ಈ ಜೋಡಿಯ ನಡುವೆ
ಏನೋ ಚೆಲ್ಲಾಟ ನಡೆಯುತ್ತಿದೆಯೆಂದು ಗುಮಾನಿ ಬಂದು ಬಿಟ್ಟಿತಂತೆ.
ಮಂಜಪ್ಪ ಶಾಲೆ ಬಿಟ್ಟ ಮೇಲೆ ಈ ಜೋಡಿ
ಎಲ್ಲೋ ಸೇರುತ್ತಾರೆಂದು ತೀರ್ಮಾನಿಸಿ ಅವರನ್ನು ಗುಪ್ತವಾಗಿ ಹಿಂಬಾಲಿಸುತ್ತಿದ್ದನಂತೆ. ಅವನ ಅದೃಷ್ಟಕ್ಕೆ
ಒಂದು ದಿನ ದೇವಪ್ಪ ಲಕ್ಷ್ಮೀಪುರದ ದಾರಿ ಬಿಟ್ಟು ಬೇರೆ ದಾರಿ ಹಿಡಿದುದು ಕಾಣಿಸಿತಂತೆ. ಅವನನ್ನು ಗುಪ್ತವಾಗಿ
ಹಿಂಬಾಲಿಸಿದಾಗ ಸ್ವಲ್ಪ ದೂರದಲ್ಲಿ ಶಾರದೆ ಕಾಯುತ್ತಿರುವುದು ಕಣ್ಣಿಗೆ ಬಿತ್ತಂತೆ . ಅವರಿಬ್ಬರೂ ಕೈ
ಕೈ ಹಿಡಿದುಕೊಂಡು ನಿರ್ಜನ ಪ್ರದೇಶದತ್ತ ತೆರಳಿದರಂತೆ.
ತಿಮ್ಮಪ್ಪ ಅಷ್ಟು ಹೇಳಿ ಕಥೆಯನ್ನು ನಿಲ್ಲಿಸಿದ. ಅವನ ಪ್ರಕಾರ ಒಂದು ಹೆಣ್ಣು ಮತ್ತು ಗಂಡು ಕೈ ಕೈ
ಹಿಡಿದು ಕೊಳ್ಳುವುದೇ ದೊಡ್ಡ ಅಪರಾಧವಾಗಿತ್ತು.
ಆದರೆ ಮುಂದೇನಾಯಿತೆಂದು ತಿಳಿಯಲು ನಮ್ಮ
ಕುತೂಹಲ ಮುಗಿಲು ಮುಟ್ಟಿತ್ತು. ತಿಮ್ಮಪ್ಪನ ಪ್ರಕಾರ ಮಂಜಪ್ಪನಿಗೆ ಅಲ್ಲಿಂದ ಮುಂದೆ ಜೋಡಿಯನ್ನು ಹಿಂಬಾಲಿಸುವುದು ಅಸಾಧ್ಯವಾದ್ದರಿಂದ
ಅವನು ಒಂದು ಮರವನ್ನೇರಿದನಂತೆ. ಅವನಿಗೆ ದೂರದಿಂದಲೇ ಆ ಜೋಡಿ ಒಬ್ಬರನ್ನೊಬ್ಬರು ಆಲಂಗಿಸುವುದು ಕಣ್ಣಿಗೆ
ಬಿತ್ತಂತೆ. ಅಷ್ಟರಲ್ಲೇ ಮಂಜಪ್ಪನಿಗೆ ತಾನು ಹತ್ತಿದ ಮರದ
ಒಂದು ಕೊಂಬೆಯಲ್ಲಿ ಕರಡಿಯೊಂದು ಕುಳಿತಂತೆ ಕಾಣಿಸಿ ಭಯಪಟ್ಟು ಮರದಿಂದ ಹಾರಿ ಕಾಲಿಗೆ ಬುದ್ಧಿ
ಹೇಳಿದನಂತೆ!
-----ಮುಂದುವರೆಯುವುದು-----