ಅಧ್ಯಾಯ
೨೩
ಬೆಳವಿನಕೊಡಿಗೆಯವರಿಗೆ
ಅಡಿಕೆ ತೋಟದೊಂದಿಗೆ ಕಾಫಿ ತೋಟ ಮತ್ತು
ಬತ್ತದ ಗದ್ದೆಗಳೂ ಇದ್ದುವು. ಹೆಚ್ಚಿನ ಗದ್ದೆಗಳು ಗೇಣಿಗೆ ಕೊಡಲ್ಪಟ್ಟಿದ್ದುವು
. ಅದರಲ್ಲಿ ಹೆಚ್ಚಿನವು ಚಿಟ್ಟೆಮಕ್ಕಿ ಎಂಬಲ್ಲಿದ್ದುವು. ಈ ಚಿಟ್ಟೆಮಕ್ಕಿಯ ಬಗ್ಗೆ
ಬರೆಯದಿದ್ದರೆ ಬೆಳವಿನಕೊಡಿಗೆ ಕಥೆಯೇ ಅಪೂರ್ಣ ಎಂದು
ಹೇಳಲೇ ಬೇಕು.
ಚಿಟ್ಟೆಮಕ್ಕಿಯ
ಸಂಸಾರಗಳೆಲ್ಲಾ ಮಡಿವಾಳ (ದೋಬಿ) ಕುಲಕ್ಕೆ
ಸೇರಿದ್ದುವು. ಈ
ಸಂಸಾರಗಳು ತಲೆತಲಾಂತರದಿಂದ ಬೆಳವಿನಕೊಡಿಗೆ ಜಮೀನನ್ನು ಗೇಣಿ ಮಾಡುತ್ತ ಅವರ
ಅಡಿಕೆ ತೋಟದ ಆಕಾರ ಅಂದರೆ
ಅಡಿಕೆ ಕೊಯ್ಲಿನ ಸಂಪೂರ್ಣ ಜವಾಬ್ದಾರಿಯನ್ನು
ಹೊತ್ತಿದ್ದವು. ಅದಕ್ಕೆ ಅವರಿಗೆ ನಿಗದಿಯಾದ
ಹಣವನ್ನು ನೀಡಲಾಗುತ್ತಿತ್ತು. ಕೇವಲ ಬತ್ತ ಬೆಳೆದು
ಜೀವನ ಸಾಗಿಸಲಾಗದ್ದರಿಂದ
ಅವರು ತಮ್ಮ ಕುಲ ಕಸುಬಾದ
ಬಟ್ಟೆ ಒಗೆದು ಕೊಡುವುದು ಮಾತ್ರವಲ್ಲದೆ
ನಮ್ಮೂರಿನ ಬೇರೆ ಬೇರೆ ಮನೆಗಳಲ್ಲಿ
ಜಮೀನಿಗೆ ಸಂಬಂಧಿಸಿದ ಕೂಲಿ ಕೆಲಸವನ್ನು ಕೂಡ
ಮಾಡುತ್ತಿದ್ದರು. ಸಾಮಾನ್ಯವಾಗಿ ಇವರ ಹೆಸರುಗಳು ಕೇವಲ
ಎರಡು ಅಕ್ಷರಗಳಲ್ಲಿ ಇರುತ್ತಿದ್ದವು. ಉದಾಹರಣೆಗೆ ಮಂಜ, ತಿಮ್ಮ, ಹೂವ, ರುದ್ರ,
ದುಗ್ಗ, ನಾಗ, ಸೂರ ಮತ್ತು
ಸಿಂಗ ಹಾಗೂ
ಶೇಷಿ, ರುಕ್ಕಿ, ಬೆಳ್ಳಿ, ಲೋಕಿ,
ಚಿನ್ನಿ ಮತ್ತು ಸುಬ್ಬಿ.
ಈ
ಸಂಸಾರಗಳಿಗೆ ಮಂಜ ಎಂಬುವನು ಮುಖ್ಯಸ್ಥನಾಗಿದ್ದ.
ಅವನಿಗೆ ಉಳಿದೆಲ್ಲರಿಗಿಂತ ಹೆಚ್ಚು ಗೇಣಿ ಜಮೀನು ಇತ್ತು. ಮಂಜನೊಬ್ಬ
ಪರಿಣಿತ ಬೇಟೆಗಾರನೂ ಆಗಿದ್ದ. ನಮ್ಮ ನೆರೆಮನೆಯ
ಕಿಟ್ಟಜ್ಜಯ್ಯನವರ ಮೇಲೆ ಕಾಡು ಹಂದಿಯೊಂದು ಆಕ್ರಮಣ ಮಾಡಿದಾಗ ಅದು
ಮಂಜನ ಕೋವಿಗೆ ಬಲಿಯಾಗಿತ್ತು. ನಾವು
ನೋಡುವ ವೇಳೆಗೆ ಮಂಜ ಎಂಬತ್ತು
ವರ್ಷದ ಮುದುಕನಾಗಿದ್ದ. ಮಂಜನ ಹೆಂಡತಿ ಶೇಷಿ.
ಅವರಿಗೆ ರುಕ್ಕಿ ಮತ್ತು ಸುಬ್ಬಿ
ಎಂಬ ಹೆಣ್ಣು ಮಕ್ಕಳು. ಅವರ ಒಬ್ಬನೇ
ಮಗ ತಿಮ್ಮ ತಂದೆಗೆ ಯಾವುದೇ
ರೀತಿಯಲ್ಲಿ ಸರಿ ಸಾಟಿಯಾಗಿರಲಿಲ್ಲ.
ಹಾಗಾಗಿ ಈ
ಸಂಸಾರ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡಿತ್ತು.
ಆದರೆ ಅದನ್ನು ಪುನಃ ಪಡೆಯಲು
ಹೋರಾಟ ಮಾಡುತ್ತಲೇ ಇತ್ತು.
ನಮ್ಮ
ಬಾಲ್ಯದಲ್ಲಿ ನಾವು ಮಂಜನ ಸಂಸಾರಕ್ಕೂ
ಮತ್ತು ಚಿಟ್ಟೆಮಕ್ಕಿಯ ಉಳಿದ ಸಂಸಾರಗಳಿಗೂ ಆಗಾಗ
ನಡೆಯುತ್ತಿದ್ದ ಕದನದ ಕಥೆಗಳನ್ನು ಕೇಳಿ
ಖುಷಿಪಡುತ್ತಿದ್ದೆವು. ಆ
ಕಥೆಗಳನ್ನು ಅದರಲ್ಲಿ
ಪಾತ್ರವಹಿಸಿದ ಪ್ರಮುಖ ವ್ಯಕ್ತಿಗಳ ಬಾಯಿಂದಲೇ
ಕೇಳಿದಾಗ ನಮಗಾಗುತ್ತಿದ್ದ ರೋಮಾಂಚನ ಅಷ್ಟಿಟ್ಟಲ್ಲ. ನಾವು
ಆ ಕಥೆಗಳಿಗೆ ಚಿಟ್ಟೆಮಕ್ಕಿಯ
ಮೊದಲನೇ ಮತ್ತು ಎರಡನೇ ಮಹಾ ಯುದ್ಧಗಳೆಂದು
(ಪಾಣಿಪಟ್ ಯುದ್ಧಗಳಂತೆ) ಹೇಳುತ್ತಿದ್ದೆವು.
ಅಡಿಕೆ ಸುಲಿತ ನಡೆಯುತ್ತಿರುವಾಗ ರಾತ್ರಿಯಲ್ಲಿ
ಆ ಕಥೆಗಳನ್ನು ಕೇಳುವುದೇ
ಒಂದು ಸಂಭ್ರಮದ ವಿಷಯವಾಗಿತ್ತು.
ಚಿಟ್ಟೆಮಕ್ಕಿಯ
ಮೊದಲನೇ ಮಹಾಯುದ್ಧ ತುಂಬಾ
ವಿಶಿಷ್ಟದ್ದಾಗಿತ್ತು. ಏಕೆಂದರೆ ಅದು ಸುಬ್ಬನೆಂಬ
ಒಂಟಿ ಮಹಾಯೋಧನ ವಿರುದ್ಧ ತುಂಬಾ
ಬಲಶಾಲಿಯಾಗಿದ್ದ ಮಂಜನ ಕುಟುಂಬ ನಡೆಸಿದ
ಮಹಾಯುದ್ಧವಾಗಿತ್ತು. ನೀವು ಪ್ರಾಯಶಃ ನಂಬಲಾರಿರಿ.
ಏಕೆಂದರೆ ಅದರಲ್ಲಿ ವಿಜಯಿಯಾದವನು ಒಂಟಿ
ಯೋಧನಾದ ಸುಬ್ಬನೇ!
ಆದರೆ ಆ ಯುದ್ಧದಲ್ಲಿ ಸೋತುಹೋದ ಮಂಜನ
ಪ್ರಬಲ ಸೇನೆಯ
ಸೋಲಿಗೆ ಕಾರಣ ಕಂಡು
ಹಿಡಿಯಲು ಯಾವುದೇ ಸಮಿತಿಯನ್ನು ನೇಮಕ
ಮಾಡುವ ಅವಶ್ಯಕತೆ ಇರಲಿಲ್ಲ. ಕಾರಣ ತುಂಬಾ ಸ್ಪಷ್ಟವಾಗಿತ್ತು.
ಏಕೆಂದರೆ ಮಂಜನ ಸೇನೆ ಯುದ್ಧಕ್ಕೆ
ಬರಿಯ ಕೈ ಕಾಲುಗಳನ್ನು ಬಳಸಿದರೆ,
ಪರಮವೀರನಾದ ಸುಬ್ಬ ಆ ಕಾಲಕ್ಕೆ
ತುಂಬಾ ಪ್ರಸಿದ್ಧ ಅಸ್ತ್ರವಾಗಿದ್ದ ದೊಣ್ಣೆಯನ್ನು ಬಳಸಿದ್ದ! ಇಲ್ಲಿ ಕಥೆಯನ್ನು ಸ್ವಲ್ಪ
ವಿಶದವಾಗಿ ಹೇಳುವುದು ಒಳಿತೆಂದು ಅನ್ನಿಸುತ್ತಿದೆ.
ಸುಬ್ಬನೊಬ್ಬ ಆರಡಿ
ಎತ್ತರದ ದೃಢಕಾಯ ತರುಣ. ಅವನಿಗೆ
ಸಮೀಪದ ಇನ್ನೊಂದು ಊರಿನ ಲೋಕಿ ಎಂಬುವಳೊಡನೆ
ಆಗ ತಾನೇ ವಿವಾಹವಾಗಿತ್ತು. ನವದಂಪತಿಗಳು ವಿವಾಹದ ಮೊದಲ
ದಿನಗಳನ್ನು ತುಂಬಾ ಸಂಭ್ರಮದಿಂದ ಕಳೆಯುತ್ತಿದ್ದರು.
ಇದು ಮಂಜನ ಕುಟುಂಬದ ಉರಿಗಣ್ಣಿಗೆ
ಬಿತ್ತು. ಹೊಟ್ಟೆ ಕಿಚ್ಚನ್ನು ಸಹಿಸಲಾರದ
ಈ ಕುಟುಂಬ ಒಂದು
ರಾತ್ರಿ ಯಾವುದೇ ಕಾರಣವಿಲ್ಲದೇ ಸುಬ್ಬನ
ಮನೆಯ ಮುಂದೆ ಒಟ್ಟಾಗಿ ಸೇರಿ
ಕಾಲ್ಕೆರೆದು ಜಗಳ ಪ್ರಾರಂಭಿಸಿತು. ಈ
ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸುವ
ಮಟ್ಟಕ್ಕೆ ತಲುಪಿತು.
ತಮ್ಮ
ಮಹಾ ಸೇನೆಯ ಮುಂದೆ ಒಂಟಿ
ಸುಬ್ಬ ಏನೂ ಮಾಡಲಾರನೆಂದು ಮಂಜನ
ಕುಟುಂಬ ಭಾವಿಸಿತ್ತು. ಆದರೆ ಅವರಿಗೆ ಸುಬ್ಬನ
ಸಿಟ್ಟಿನ ಹಾಗೂ ಶಕ್ತಿಯ ಅರಿವಿರಲಿಲ್ಲ.
ತಾಳ್ಮೆ ಕಳೆದುಕೊಂಡ ಸುಬ್ಬ ಯಾವುದಾದರೂ ಅಸ್ತ್ರ
ಸಿಗುವುದೇ ಎಂದು ಆಚೀಚೆ ನೋಡಿದ.
ಆದರೆ ಏನೂ ಸಿಗದಿದ್ದಾಗ ನಿರಾಶನಾಗದೇ
ಪಕ್ಕದಲ್ಲಿದ್ದ ಬೇಲಿಯಿಂದ ಒಂದು ಬಲವಾದ ಗೂಟವನ್ನು
ಕಿತ್ತು ಹೊರತೆಗೆದ. ಅದನ್ನು ಮಿಂಚಿನ ವೇಗದಲ್ಲಿ
ತಿರುಗಿಸುತ್ತಾ ಮಂಜನ ಸೇನೆಯ ಮೇಲೆ
ಪ್ರತಿ ದಾಳಿ ಮಾಡಿದ. ಮಂಜನ
ಸೇನೆಯ ಮುಂದಿದ್ದ ಒಬ್ಬೊಬ್ಬ ಗಂಡಸಿಗೂ ಸುಬ್ಬನ ದೊಣ್ಣೆಯ
ರುಚಿ ತಗಲ ತೊಡಗಿತು. ಸೇನೆಯ
ಹಿಂದಿದ್ದ ಹೆಂಗಸರ ಮೇಲೆ ದೊಣ್ಣೆ
ಬೀಸುವ ಪ್ರಸಂಗವೇ ಬರಲಿಲ್ಲ. ಏಕೆಂದರೆ ಅವರೆಲ್ಲ ಮನೆ
ಸೇರಿ ಬಾಗಿಲು ಭದ್ರ ಮಾಡಿಕೊಂಡರು.
ಹೇಡಿಗಳಾದ ಗಂಡಸರು ದೊಣ್ಣೆಯ
ಪೆಟ್ಟಿನ ರುಚಿ ನೋಡುತ್ತಾ ಕಾಲಿಗೆ
ಬುದ್ಧಿ ಹೇಳಿದರು. ಏಕಾಂಗಿಯಾದ ಸುಬ್ಬನ ಪರಾಕ್ರಮ ವೀರ
ಅಭಿಮನ್ಯುವಿನ ಹೋರಾಟಕ್ಕೇನೂ ಕಡಿಮೆ ಇತ್ತೆಂದು ನಮಗನ್ನಿಸಲಿಲ್ಲ.
ಆದರೆ ವೀರ ಅಭಿಮನ್ಯು ತನ್ನ
ಪ್ರಾಣವನ್ನೇ ತೆತ್ತಿದ್ದರೆ ಸುಬ್ಬ ಯುದ್ಧದಲ್ಲಿ ಸಂಪೂರ್ಣ
ವಿಜಯ ಗಳಿಸಿದ್ದ!
ಚಿಟ್ಟೆಮಕ್ಕಿಯ
ಎರಡನೇ ಮಹಾಯುದ್ಧ ಕೂಡ
ತುಂಬಾ ರೋಚಕವಾಗಿತ್ತು. ಈ ಬಾರಿ ಮಂಜನ ಕುಟುಂಬದ ವೈರಿಗಳ
ಸಂಖ್ಯೆ ಎರಡರಷ್ಟಾಗಿತ್ತು! ಈ ಯುದ್ಧದಲ್ಲಿ ಮಂಜನ ಸೇನೆ
ಅಣ್ಣ ತಮ್ಮಂದಿರಿಬ್ಬರ ಜಂಟಿ ಸೇನೆಯ ಮೇಲೆ
ಕಾಳಗ ಮಾಡಿತ್ತು. ಹೂವ ಎಂಬ ಹೆಸರಿನ
ಮಧ್ಯ ವಯಸ್ಕನೊಬ್ಬನಿಗೆ ಮಕ್ಕಳಿರಲಿಲ್ಲ. ಅವನು ತನ್ನ ಸಹೋದರಿಯ
ಮಕ್ಕಳಿಬ್ಬರನ್ನು ದತ್ತು ಪಡೆದು ಸಾಕಿದ್ದ.
ದೊಡ್ಡವನಿಗೆ ಸಿಂಗ (ಸಿಂಹ) ಎಂದು
ಮತ್ತು ಚಿಕ್ಕವನಿಗೆ ಸೂರ ಎಂದೂ ನಾಮಕರಣ
ಮಾಡಿದ್ದ. ಯಾವುದೊ ಕಾರಣದಿಂದ ಮಂಜನ
ಕುಟುಂಬಕ್ಕೆ ಈ ಹೂವನ ಮೇಲೆ ದ್ವೇಷ
ಇತ್ತು.
ಒಂದು
ರಾತ್ರಿ ಈ ಕುಟುಂಬಗಳ ನಡುವಿನ
ಕಲಹ ವಿಪರೀತಕ್ಕೇರಿತು. ಆರಂಭದ ಮಾತಿನ
ಜಗಳದಲ್ಲಿ ಮಂಜನ ಕುಟುಂಬದ ಕೈ
ಮೇಲಾಯಿತು. ಕಾರಣವಿಷ್ಟೇ. ಹೂವನಿಗೆ ಗಂಟಲಿನ ಕಾಯಿಲೆ
ಇದ್ದರಿಂದ ಅವನಿಗೆ ತನ್ನ ಧ್ವನಿ
ಏರಿಸಿ ಮಾತನಾಡಲು ಆಗುತ್ತಿರಲಿಲ್ಲ. ಮಂಜನ ಕುಟುಂಬ ತಾವು
ಗೆದ್ದೆವೆಂದೇ ಭಾವಿಸಿತು.
ಆದರೆ ಆ ಕುಟುಂಬಕ್ಕೆ ಹೂವನ ಸಾಕು ಮಕ್ಕಳಿಬ್ಬರ
ಶೌರ್ಯದ ಅರಿವಿರಲಿಲ್ಲ. ಸಿಂಗ-ಸೂರ ಜೋಡಿಗೆ
ತಮ್ಮ ಮಾವನಿಗಾಗುತ್ತಿದ್ದ ಅಪಮಾನವನ್ನು ಸಹಿಸಲಾಗಲಿಲ್ಲ. ಸಿಂಗನು ಸಿಂಹದಂತೆ ಗರ್ಜನೆ
ಮಾಡುತ್ತಾ ಶತ್ರುಗಳ ಮೇಲೆ ಜಿಗಿದರೆ,
ಸೂರನು ಶೌರ್ಯದಿಂದ ಅವರ ಮೇಲೆ ಎಗರಿದ!
ಅಣ್ಣ ತಮ್ಮಂದಿರು ತಮ್ಮ ಕೈಗೆ ಸಿಕ್ಕಿದ
ವಸ್ತುಗಳನ್ನೇ (ಪೊರಕೆಗಳೂ ಸೇರಿ) ಅಸ್ತ್ರವಾಗಿ
ಬಳಸಿ ನಡೆಸಿದ
ದಾಳಿಗೆ ಮಂಜನ ಸೇನೆ ಬೆದರಿ
ಹಿಮ್ಮೆಟ್ಟಿತು. ಅದು ಯಾವ ಬಗೆಯ
ಏಟು ತಿಂದಿತ್ತೆಂದರೆ ಪುನಃ ಆ ಸೇನೆ
ಒಂದಾಗಲೇ ಇಲ್ಲ. ಹಾಗಾಗಿ ಪಾಣಿಪಟ್
ಯುದ್ಧದ ಹಾಗೆ ಮೂರನೇ ಚಿಟ್ಟೆಮಕ್ಕಿ
ಯುದ್ಧ ನಡೆಯುವ ಪ್ರಸಂಗವೇ ಬರಲಿಲ್ಲ.
ಅದು ಎರಡಕ್ಕೆ ಮುಕ್ತಾಯವಾಗಿ ಮಂಜನ
ಕುಟುಂಬದ ಪ್ರಾಮುಖ್ಯತೆ ಕೊನೆಗೊಂಡಿತು.
---------0-----------0------------0------------0-----------0-----------------0-------------0------------0-----------0-
೧೯೫೦ನೇ
ದಶಕದ ಕೊನೆಯ ಭಾಗದಲ್ಲಿ ನಮ್ಮ
ಬೆಳವಿನಕೊಡಿಗೆ ಗ್ರಾಮದ ಪುನರುಜ್ಜೀವನ ಆಯಿತೆಂದು
ಹೇಳಬೇಕು. ವಯಸ್ಕರ ಶಿಕ್ಷಣ ಸಮಿತಿಯಿಂದ
ನಮ್ಮೂರಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆದುವು.
ನಮ್ಮೂರಿನ ಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ವಯಸ್ಕರಿಗಾಗಿ ಒಂದು ರಾತ್ರಿ ಶಾಲೆಯನ್ನೂ
ಸ್ವಲ್ಪ ದಿನ ನಡೆಸಲಾಯಿತು. ಶ್ರೀ
ವಿದ್ಯಾತೀರ್ಥ ಪುಸ್ತಕ ಭಂಡಾರ ಎಂಬ
ಹೆಸರಿನಲ್ಲಿ ಸಾರ್ವಜನಿಕ ಪುಸ್ತಕ ಭಂಡಾರವನ್ನು ಬೆಳವಿನಕೊಡಿಗೆ
ಮನೆಯಲ್ಲಿ ಸ್ಥಾಪನೆ ಮಾಡಲಾಯಿತು. ಅದಕ್ಕೆ
ಪುಸ್ತಕಗಳನ್ನು ದಾನಮಾಡಿದವರಲ್ಲಿ ಮುಖ್ಯರೆಂದರೆ ಹುರುಳಿಹಕ್ಲು ಲಕ್ಷ್ಮೀನಾರಾಯಣ ರಾವ್, ಬೆಳವಿನಕೊಡಿಗೆ ಎಲ್ಲಪ್ಪಯ್ಯ,
ಹೊಸಳ್ಳಿ ತಿಮ್ಮಪ್ಪ ಮತ್ತು ಅದೇಖಂಡಿ ರಾಮಕೃಷ್ಣ
ರಾವ್ (ನಮ್ಮಣ್ಣ). ಈ
ಬಗ್ಗೆ ಪ್ರಜಾವಾಣಿಯಲ್ಲಿ ಒಂದು ವರದಿ ಕೂಡ
ಬಂತು. ನಮಗೆ ನಮ್ಮಣ್ಣನ ಹೆಸರನ್ನು
ಪೇಪರಿನಲ್ಲಿ ಓದಿ
ಆದ ಸಂತೋಷ
ಅಷ್ಟಿಟ್ಟಲ್ಲ.
ನಮಗೆ
ಬೆಳವಿನಕೊಡಿಗೆ ಎಲ್ಲಪ್ಪಯ್ಯನವರ
ಹೆಸರನ್ನು ಮರೆಯದಿರಲು ಅನೇಕ ಕಾರಣಗಳಿವೆ. ನಾವು
ಚಿಕ್ಕವರಾಗಿದ್ದಾಗ ಅವರಿನ್ನೂ ೨೫ ವರ್ಷದ ತರುಣ. ಬೆಳವಿನಕೊಡಿಗೆ ಮನೆಯ
ಸಮೀಪದ ಬೆಟ್ಟದ ಬುಡದಲ್ಲಿ ಒಂದು
ವಿಶಾಲವಾಗಿ ಹರಡಿದ ಸಂಪಿಗೆ ಮರವಿತ್ತು.
ನೆಲದಿಂದ ಕಡಿಮೆ ಎತ್ತರದಲ್ಲಿದ್ದ ಅದರ
ಕೊಂಬೆಗಳನ್ನೇರಿ ಹೂವು ಕೊಯ್ಯುವುದು ನಮಗೆ
ತುಂಬಾ ಸಂತೋಷದ ಕೆಲಸವಾಗಿತ್ತು. ಒಂದು
ದಿನ ಬೆಳಿಗ್ಗೆ ನಾನೂ ಪುಟ್ಟಣ್ಣನೂ ಒಟ್ಟಿಗೆ
ಹೂವು ಕೊಯ್ಯುತ್ತಿದ್ದೆವು. ನಾನು ಇದ್ದಕ್ಕಿದ್ದಂತೆ ಕಾಲು
ಜಾರಿ ಮರದಿಂದ ಕೆಳಗೆ ಬಿದ್ದೆ.
ಬಿದ್ದ ರಭಸಕ್ಕೆ ನನ್ನ ಪ್ರಜ್ಞೆ
ತಪ್ಪಿತು. ಪುಟ್ಟಣ್ಣನಿಗೆ ಗಾಬರಿಯಾಗಿ ಮನೆಯವರಿಗೆ
ತಿಳಿಸಲು ಓಡಿ ಹೋದ. ಯಾರಿಂದಲೋ
ವಿಷಯ ತಿಳಿದ ಎಲ್ಲಪ್ಪಯ್ಯನವರು ನನ್ನ
ಮುಖಕ್ಕೆ ನೀರು ಚಿಮುಕಿಸಿ ಎಚ್ಚರಗೊಳಿಸಿ ಹೆಗಲಮೇಲೆ ಹಾಕಿಕೊಂಡು ಮನೆಗೆ ಎತ್ತಿಕೊಂಡು ಹೋದರು.
ಆಮೇಲೆ ನನ್ನ ಎಡಕೈನಲ್ಲಿ ಮೂಳೆ
ಮುರಿದದ್ದು ಗೊತ್ತಾಗಿ ಕೊಪ್ಪದ ಆಸ್ಪತ್ರೆಗೆ ಹೋಗಬೇಕಾಯಿತು.
ಅಲ್ಲಿ ಆಗ ಮುಂದೆ ತುಂಬಾ
ಪ್ರಸಿದ್ಧಿ ಪಡೆದ ಡಾಕ್ಟರ್ ಕಾಂತರಾಜ್
ಅವರು ನನ್ನ ಕೈಗೆ ಬ್ಯಾಂಡೇಜ್
ಸುತ್ತಿದ್ದರು. ಅದು ಆಸ್ಪತ್ರೆಗೆ ನನ್ನ
ಮೊದಲ ಭೇಟಿಯಾಗಿತ್ತು.
ನಮಗೆ
ಬಾಲ್ಯದಲ್ಲಿ ಚಂದಮಾಮ ಕೊಟ್ಟಷ್ಟು ಖುಷಿ
ಬೇರೆಯಾವುದರಿಂದಲೂ ದೊರೆತಿರಲಿಲ್ಲ. ನಮ್ಮ ಇಡೀ ಊರಿನಲ್ಲಿ
ಕೇವಲ ಎಲ್ಲಪ್ಪಯ್ಯನವರು ಮಾತ್ರ ಅದರ ಚಂದಾದಾರರಾಗಿದ್ದರು.
ಅದನ್ನು ಕೊಪ್ಪದಲ್ಲಿದ್ದ ನ್ಯಾಷನಲ್
ಸ್ಟೋರ್ಸ್ ನಿಂದ ತರಬೇಕಾಗಿತ್ತು. ಎಷ್ಟೋ
ಬಾರಿ ನಮ್ಮಣ್ಣ ಅದನ್ನು ಕೊಪ್ಪದಿಂದ
ತರುತ್ತಿದ್ದರು. ನಾವು ಅದನ್ನು ಓದಿದ
ನಂತರ ಬೆಳವಿನಕೊಡಿಗೆಗೆ ತಲುಪಿಸುತ್ತಿದ್ದೆವು.
ಹಾಗೂ ಅಲ್ಲಿ ನಡೆಯುತ್ತಿದ್ದ ಸಮಾರಂಭಗಳಿಗೆ
ಹೋದಾಗ ಉಪ್ಪರಿಗೆಯ ಮೇಲಿದ್ದ ಬೀರುವಿನಿಂದ ಎಲ್ಲಾ
ಹಳೆಯ ಚಂದಮಾಮಗಳನ್ನು ತೆಗೆದು ಓದುತ್ತಿದ್ದೆವು.
ನಮ್ಮೂರಿನಲ್ಲಿ
ಮೊಟ್ಟ ಮೊದಲ ಟರ್ಲಿನ್ ಶರ್ಟ್
ಧರಿಸಿದವರು ಎಲ್ಲಪ್ಪಯ್ಯ. ಅದು ಆ ಕಾಲದಲ್ಲಿ
ಕೇವಲ ಶ್ರೀಮಂತರು ಮಾತ್ರ ಧರಿಸಬಲ್ಲ ವಸ್ತುವಾಗಿತ್ತು.
ಎಲ್ಲಪ್ಪಯ್ಯನವರು ಆ ಸ್ಟೈಲಾದ ಶರ್ಟ್
ಧರಿಸಿ ಜೇಬಿನಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ
ಒಂದು ನೂರು ರೂಪಾಯಿನ ನೋಟ್
ಇಟ್ಟುಕೊಂಡು ಓಡಾಡುತ್ತಿದ್ದುದು ಈಗಲೂ ನನ್ನ ಕಣ್ಣಿಗೆ
ಬಿದ್ದಂತಾಗುತ್ತಿದೆ. ಹಾಗೆಯೇ ಎಲ್ಲಪ್ಪಯ್ಯನವರ ಮದುವೆ ಹೊಸನಗರದ
ಬೈಸೆಮನೆ ಮಾಧವ ರಾವ್ ಅವರ
ಮಗಳಾದ ಲಕ್ಷ್ಮಿಯೊಡನೆ ನಿಶ್ಚಯವಾದಾಗ ನಮ್ಮೂರಿನಿಂದ ದಿಬ್ಬಣ ಎತ್ತಿನ ಗಾಡಿಯಲ್ಲಿ
ಬೆಳವಿನಕೊಡಿಗೆಯಿಂದ ಹೊರಟಿದ್ದೂ ನೆನಪಿಗೆ ಬರುತ್ತಿದೆ.
ಇಂದು
ಎಲ್ಲಪ್ಪಯ್ಯನವರು ನಮ್ಮೊಂದಿಗಿಲ್ಲ.ಅವರ ವ್ಯಕ್ತಿತ್ವ ನಮ್ಮಿಂದ
ಕಣ್ಮರೆಯಾಗಿ ಹೋಗಿದೆ. ಹಾಗೆಯೇ ಎಲ್ಲಪ್ಪಯ್ಯ
ಎಂಬ ಹೆಸರೂ
ಕೂಡ ಕೊನೆಗೊಂಡಂತೆ ಅನಿಸುತ್ತಿದೆ. ಮೊಮ್ಮಗನಿಗೆ ಅಜ್ಜನ ಹೆಸರಿನ್ನಿಡುವ ಸಂಪ್ರದಾಯ
ಈಗ ಇಲ್ಲ. ಹಾಗೆಯೇ ಇಂದಿನ
ಹೊಸ ಯುಗದಲ್ಲಿ ಎಲ್ಲಪ್ಪಯ್ಯ ಎಂಬ ಹೆಸರು ಯಾವ
ತಂದೆ ತಾಯಿಗಳಿಗೂ ಇಷ್ಟವಾಗುವುದು ಎಂದೂ ಅನಿಸುವುದಿಲ್ಲ.
ಬೆಳವಿನಕೊಡಿಗೆ ಮನೆಯ ತಲೆತಲಾಂತರ ಸಂಪ್ರದಾಯ
ಇಲ್ಲಿಗೇ ಕೊನೆಗೊಂಡಿರಬಹುದೇ? ಇದನ್ನು ಕಾಲವೇ ನಿರ್ಧರಿಸಬಲ್ಲುದು. ದೇವರು
ಎಲ್ಲಪ್ಪಯ್ಯನವರ ಆತ್ಮಕ್ಕೆ ಶಾಂತಿಯನ್ನೀಯಲಿ.
----ಮುಂದುವರಿಯುವುದು ---
2 comments:
ಇದೇ ಮಂಜನ ಮನೆಯವರು ನಮ್ಮ ಗೇಣಿದಾರರು ಸಹ ಆಗಿದ್ದರು. ನಮ್ಮ ಅಪ್ಪನಿಗೆ ಬಂದ ದಾನದ ಒಂದು ಖಂಡುಗ ಗದ್ದೆಯನ್ನು ಅವನಿಗೆ ಗೇಣಿಗೆ ಕೊಟ್ಟು ನಾವು ಜಮೀನ್ದಾರರು ಆಗಿದ್ದೆವು . ಭೂಸುಧಾರಣೆ ಕಾನೂನು ಬಂದಾಗ ನಾವು ನಮ್ಮ ಗೇಣಿ ಜಮೀನಿಗೆ ಡಿಕ್ಲೆರೇಷನ್ ಕೊಟ್ಟು ಜಮೀನನ್ನು ನಮ್ಮ ಸ್ವಾಧೀನಕ್ಕೆ ಪಡೆದರು ಅವನಿಗೆ ಮಾತ್ರ ಅದಕ್ಕೆ ಅವಕಾಶ ಕೊಡಲಿಲ್ಲ. ಭವಿಷ್ಯ ಭೂಸುಧಾರಣೆ ಕಾನೂನು ಬಂದಾಗ ನಮ್ಮ ಊರಿನಲ್ಲಿ ಗೇಣಿಗೆ ಕೊಟ್ಟ ಜಾಮೀನು ಉಳಿಸಿಕೊಂಡವರು ನಾವು ಮಾತ್ರ ಎಂದು ಕಾಣುತ್ತದೆ.
ನೀನು ಬರೆದಿರುವುದು ಸತ್ಯ. ಗೇಣಿ ಮಾಡಿದ ಜಮೀನಿಗೆ ಡಿಕ್ಲೆರೇಷನ್ ಕೊಡದೇ ಇದ್ದ ಬೇರೆ ಯಾವ ಉದಾಹರಣೆಗಳೂ ಪ್ರಾಯಶಃ ಇಲ್ಲ. ನಾವು ಅದಕ್ಕೆ ಮಂಜನ ಮಗ ತಿಮ್ಮ ಮತ್ತು ಮೊಮ್ಮಗ ಗಣಪನಿಗೆ ಋಣಿಗಳಾಗಿದ್ದೇವೆ.
Post a Comment