ಅಧ್ಯಾಯ ೨೪
ನಮ್ಮೂರಿನ
ಶಾಲೆಗೆ ಶ್ರೀಕಂಠ ಜೋಯಿಸರ ನಂತರ
ಯಾವುದೇ ಮೇಷ್ಟರು ಬಾರದಿದ್ದರಿಂದ ನನ್ನ
ಓದು ಎರಡನೇ ತರಗತಿಗೇ ಮುಕ್ತಾಯವಾಗಿತ್ತು.
ಪುಟ್ಟಣ್ಣ ನಾಲ್ಕನೇ ತರಗತಿ ಮುಗಿಸಿ
ಮನೆ ಸೇರಿದ್ದ. ಅವನ ಮುಂದಿನ ಓದಿನ
ಬಗ್ಗೆ ತೀರ್ಮಾನವಾಗಿರಲಿಲ್ಲ. ಅಣ್ಣಯ್ಯನ ಮನೆ ಪಾಠದ ಮೂಲಕ
ನಾನು ಮನೆಯಲ್ಲಿದ್ದ ಪುಟ್ಟಣ್ಣನ ನಾಲ್ಕನೇ ತರಗತಿಯ ಪುಸ್ತಕಗಳನ್ನೂ
ಓದಿ ಮುಗಿಸಿದ್ದೆ. ನಮಗೆ
ತಿಳಿಯದಂತೆ ನಮ್ಮೂರಿಗೆ ವರ್ಗವಾಗಿದ್ದ ಕೆಲವು ಮೇಷ್ಟರುಗಳು ಶಾಲೆಗೆ
ಒಂದು ಬಾರಿಯೂ ಭೇಟಿ ಮಾಡದೇ
ಹಾಗೇ ಸಂಬಳವನ್ನು ಪಡೆಯುತ್ತಿದ್ದರಂತೆ. ನಮ್ಮಣ್ಣ ಪ್ರಜಾವಾಣಿಯ ವಾಚಕರವಾಣಿಗೆ
ಒಂದು ಪತ್ರ ಬರೆದಾಗ
ಈ ವಿಷಯ ಹೊರಬಂತು.
ನಾವು
ನಮ್ಮೂರಿನಲ್ಲಿ ಒಂದು ಶಾಲೆ ಇತ್ತೆಂಬುದನ್ನೇ
ಮರೆಯುವ ಸ್ಥಿತಿಗೆ ತಲುಪಿದ್ದೆವು. ಆಗ ಇದ್ದಕಿದ್ದಂತೆ ನಮ್ಮ
ಶಾಲೆಗೆ ಸುಬ್ಬಾಭಟ್ಟ ಎಂಬ ಮೇಷ್ಟರ ಆಗಮನವಾಯಿತು.
ಹರಿಹರಪುರದ ಜೆಮಟಿಗೆ ಎಂಬ ಊರಿನ
ಸುಬ್ಬಾಭಟ್ಟರು ತಮ್ಮ ಸಂಸಾರದೊಡನೆ ಆಗಮಿಸಿದ್ದರಿಂದ
ಅವರು ನಮ್ಮ ಊರಿನಲ್ಲಿ ನೆಲೆವೂರುವರೆಂದು
ನಮಗೆ ಸಂತೋಷವಾಯಿತು. ಅವರಿಗೆ ಪುರದಮನೆಯ ಔಟ್
ಹೌಸ್ ನಲ್ಲಿ ನಿಲ್ಲುವ ವ್ಯವಸ್ಥೆಯಾಯಿತು. ನಾನು ನನ್ನ ತಂಗಿ
ಲೀಲಾಳ ಒಟ್ಟಿಗೆ ಬೇರೆ ಹುಡುಗರೊಡನೆ
ಪುನಃ ಶಾಲೆಗೆ ಹೋಗತೊಡಗಿದೆ. ನಾನು
ಮೊದಲೇ ಬರೆದಂತೆ ಪುರದಮನೆಯ ಮುಂಭಾಗದಲ್ಲೆ ನಮ್ಮ
ಶಾಲೆ ಇತ್ತು.
ಸಬ್ಬಾಭಟ್ಟರು
ಒಬ್ಬ ಅತ್ಯಂತ ಅನುಭವೀ ಮೇಷ್ಟರಾಗಿದ್ದರು.
ಅವರಿಗೆ ಹಿಂದಿನ ಶಾಲೆಗಳಲ್ಲಿ ಒಳ್ಳೆ
ಹೆಸರಿತ್ತು. ನನ್ನ ಹೆಸರನ್ನು ಮೂರನೇ
ತರಗತಿಯ ಹಾಜರಿ ಪುಸ್ತಕದಲ್ಲಿ ನಮೂದಿಸಲಾಗಿತ್ತು.
ಬಹು ಬೇಗನೆ ಸುಬ್ಬಾಭಟ್ಟರಿಗೆ ನನ್ನ
ಓದಿನ ಮಟ್ಟದ ಅರಿವಾಯಿತು.
ಅವರು ಹಾಜರಿ ಪುಸ್ತಕದಲ್ಲಿ ಏನೋ
ಗೋಲ್ಮಾಲ್ ಮಾಡಿ ನನ್ನ ಹೆಸರನ್ನು
ನಾಲ್ಕನೇ ತರಗತಿಗೆ ಬದಲಾಯಿಸಿ ಬಿಟ್ಟರು.
ಅವರು ಅದು ಯಾರ ಕಣ್ಣಿಗೂ
ಬೀಳದಂತೆ ನೋಡಿಕೊಂಡಿದ್ದರು. ಆದರೆ ನನ್ನ ದುರಾದೃಷ್ಟಕ್ಕೆ
ನಮ್ಮ ಶಾಲೆಗೆ ಭೇಟಿ ನೀಡಿದ
ಇನ್ಸ್ಪೆಕ್ಟರ್ ಒಬ್ಬರ
ಕಣ್ಣಿಗೆ ಅದು ಬಿದ್ದು ಬಿಟ್ಟಿತು. ಅವರು
ಮೇಷ್ಟರನ್ನು ಜೋರಾಗಿ ತರಾಟೆಗೆ ತೆಗೆದುಕೊಂಡರು. ನಾನು
ನನಗೆ ಪುನಃ ಮೂರನೇ ತರಗತಿಯೇ
ಗತಿಯೆಂದು ಭಾವಿಸಿದೆ!
ಆದರೆ
ಸುಬ್ಬಾಭಟ್ಟರೇನು ಸಾಮಾನ್ಯ ಮೇಷ್ಟರಾಗಿರಲಿಲ್ಲ. ಅವರು
ಇನ್ಸ್ಪೆಕ್ಟರ್ ಅವರಿಗೆ ನನ್ನ ಓದಿನ
ಮಟ್ಟವನ್ನು ಸ್ವತಃ ಪರೀಕ್ಷಿಸುವಂತೆ ಚಾಲೆಂಜ್
ಮಾಡಿದರು. ಇನ್ಸ್ಪೆಕ್ಟರ್ ಅವರು ಸ್ವತಃ ಮಾಡಿದ
ಪರೀಕ್ಷೆಯಿಂದ ಅವರಿಗೆ ಸುಬ್ಬಾಭಟ್ಟರ ಅಭಿಪ್ರಾಯ
ನೂರಕ್ಕೆ ನೂರು ನಿಜವೆಂದು ಅರಿವಾಯಿತು.
ಅವರು ನನಗೆ ನಾಲ್ಕನೇ ತರಗತಿಯಲ್ಲಿ
ಮುಂದುವರಿಯಲು ಅನಧಿಕೃತವಾಗಿ ಅನುಮತಿ ನೀಡಿದರು. ಆದರೆ
ಸುಬ್ಬಾಭಟ್ಟರಿಗೆ ಈ ವಿಷಯವನ್ನು ಬೇರೆಯಾರಿಗೂ
ತಿಳಿಸದಂತೆ ಎಚ್ಚರಿಕೆ ನೀಡಿದರು. ನನಗೆ
ಆಮೇಲೆ ತುಂಬಾ
ದಿನ ಬೇರೊಬ್ಬ ಇನ್ಸ್ಪೆಕ್ಟರ್ ಬಂದು
ನನಗೆ ಪುನಃ ಮೂರನೇ ತರಗತಿಗೆ
ತಳ್ಳಿದಂತೆ ಕನಸು ಬೀಳುತ್ತಿತ್ತು.
ಸುಬ್ಬಾಭಟ್ಟರಿಗೆ
ನಮ್ಮ ಕುಟುಂಬದ ವಿದ್ಯಾಭ್ಯಾಸ ಮತ್ತು
ಓದಿನಲ್ಲಿನ ಆಸಕ್ತಿ ತುಂಬಾ ಹಿಡಿಸಿತು.
ಅವರಿಗೆ ಆಗ ಚಂದ್ರಮತಿ ಮತ್ತು
ಶಶಿಕಲಾ ಎಂಬ ಚಿಕ್ಕ ಹೆಣ್ಣು
ಮಕ್ಕಳಿದ್ದರು. ಬಹು
ಬೇಗನೆ ಅವರ ಕುಟುಂಬಕ್ಕೂ ನಮ್ಮ
ಕುಟುಂಬಕ್ಕೂ ಸ್ನೇಹ ಬೆಳೆಯಿತು. ಅವರು ನಮ್ಮ ಬಗ್ಗೆ
ತೋರಿದ ಆದರ ನೋಡಿ ನಮಗೆ
ತುಂಬಾ ಸಂತೋಷವಾಯಿತು. ಅವರು ನಮಗೆ ಪಾಠಗಳಲ್ಲದೆ
ಬೇರೆ ಕೆಲವು ಚಟುವಟಿಕೆಗಳನ್ನೂ ಕಲಿಸತೊಡಗಿದರು.
ನಮ್ಮ ಅಣ್ಣನ ಕೋರಿಕೆಯ ಮೇಲೆ
ಅವರು ನನಗೆ ವಾರ್ಷಿಕ ಪರೀಕ್ಷೆಯ
ನಂತರ ೫ ನೇ ತರಗತಿಗೆ
ಟ್ಯೂಷನ್ ಹೇಳಲೂ ಒಪ್ಪಿಕೊಂಡರು. ಒಟ್ಟಿನಲ್ಲಿ ಆ
ಸಮಯದಲ್ಲಿ ನನ್ನ ಓದಿನ ಉತ್ಸಾಹ
ಆಕಾಶಕ್ಕೇರಿತ್ತು.
ಆದರೆ
ಇದ್ದಕಿದ್ದಂತೆ ಬರಸಿಡಿಲಿನಂತ ಸಮಾಚಾರವೊಂದು ನಮ್ಮ ಕಿವಿಗೆ ಬಿತ್ತು.
ಸುಬ್ಬಾಭಟ್ಟರಿಗೆ ಎರಡು
ವರ್ಷ ಟ್ರೈನಿಂಗ್ ಎಂದು ಬೆಳ್ಳಾರೆ ಎಂಬಲ್ಲಿಗೆ
ವರ್ಗಾವಣೆ ಮಾಡಲಾಗಿತ್ತು. ಸುಬ್ಬಾಭಟ್ಟರು ಕೇವಲ ಲೋಯರ್ ಸೆಕೆಂಡರಿ
ಪಾಸಾಗಿದ್ದರಿಂದ ಅವರಿಗೆ ಆ ಟ್ರೈನಿಂಗ್
ಅವಶ್ಯವಾಗಿ ಮಾಡಲೇ ಬೇಕಿತ್ತು. ಆ ಟ್ರೈನಿಂಗ್ ಯಾವುದೇ
ರೀತಿಯಲ್ಲಿ ರದ್ದಾಗುವಂತಿರಲಿಲ್ಲ. ನಮ್ಮ ಕುಟುಂಬಕ್ಕೆ ಇದು
ಅತ್ಯಂತ ದುಃಖ್ಖದ ವಿಷಯವಾಗಿತ್ತು. ನಾವೆಲ್ಲರೂ
ಕಣ್ಣೀರಿಡುತ್ತಲೇ ಅವರನ್ನು ಬೀಳ್ಕೊಟ್ಟೆವು. ನಮ್ಮ
ಶಾಲೆಯ ಬಾಗಿಲು ಪುನಃ ಮುಚ್ಚಿ
ಹೋಯಿತು.
---------------------o------------------------o----------------------------------o---------------------------0------------------0------
ನಾನು
ಈ ಹಿಂದೆಯೇ ಬರೆದಂತೆ
ನಮ್ಮ ತಂದೆಯವರು ತಮಗೆ ಶಿಂಗಪ್ಪಯ್ಯನವರು ದಾನವಾಗಿ ಕೊಟ್ಟಿದ್ದ
ಒಂದು ಎಕರೆ ಅಡಿಕೆ ತೋಟ
ಮತ್ತು ಒಂದು ಖಂಡುಗ ಗದ್ದೆಯನ್ನು
ಶ್ರೀನಿವಾಸಯ್ಯನವರ ಹೆಸರಿಗೆ "ನಂಬಿಕೆ ಖರೀದಿ ಪತ್ರ
" ಮಾಡಿ ರಿಜಿಸ್ಟರ್ ಮಾಡಿದ್ದರು. ಅದಕ್ಕೆ ಬದಲಾಗಿ ಶ್ರೀನಿವಾಸಯ್ಯ
ನಮ್ಮ ಸಂಸಾರದ ಸಂಪೂರ್ಣ ವಾರ್ಷಿಕ
ಖರ್ಚನ್ನು ಹೊರಬೇಕೆಂದು ಒಂದು ಒಳ ಒಪ್ಪಂದ
ಮಾಡಿಕೊಂಡಿದ್ದರು. ಈ ಒಪ್ಪಂದದಲ್ಲಿ
ತಂದೆಯವರು ನಮ್ಮ ದೊಡ್ಡಣ್ಣನೊಡನೆ ಪ್ರತಿದಿನ
ಪುರದಮನೆಗೆ ಹೋಗಿ ಜಮೀನಿನ ಮೇಲ್ವಿಚಾರಣೆ
ಇತ್ಯಾದಿಗಳನ್ನು ನೋಡಬೇಕೆಂದೂ ಇತ್ತು. ತೋಟ
ನಮ್ಮ ಸುಪರ್ದಿನಲ್ಲಿಯೇ ಇದ್ದು ನಾವು ಬೆಳೆದ ಅಡಿಕೆಯನ್ನು
ಶ್ರೀನಿವಾಸಯ್ಯನವರಿಗೆ ಕೊಡುತ್ತಿದ್ದೆವು. ಆದರೆ ನಮ್ಮ ಜಮೀನಿನ
ವಾರ್ಷಿಕ ಬೇಸಾಯ ಮಾಡುವುದನ್ನೇ ನಿಲ್ಲಿಸಲಾಯಿತು.
ಬಿದ್ದುಹೋದ ಹಳೇ ಮರಗಳ ಬದಲಿಗೆ
ಹೊಸ ಅಡಿಕೆ ಸಸಿಗಳನ್ನು ನೆಡದಿದ್ದರಿಂದ
ತೋಟ ಸಂಪೂರ್ಣವಾಗಿ ಹಾಳು ಬಿದ್ದಿತ್ತು. ನಮ್ಮ
ಸಂಸಾರಕ್ಕೆ ತಕ್ಕಷ್ಟು ದಿನಸಿ ಇತ್ಯಾದಿಗಳನ್ನು ಪುರದಮನೆಯಿಂದ
ನಮಗೆ ಕೊಡಲಾಗುತ್ತಿತ್ತು. ಈ ವ್ಯವಸ್ಥೆ ಕೆಲವು
ವರ್ಷ ಚೆನ್ನಾಗಿಯೇ ನಡೆಯಿತು. ಗದ್ದೆಯ ಗೇಣಿಯಾಗಿ ನಮಗೆ
೫ ಖಂಡುಗ ಬತ್ತ
ಬರುತ್ತಿತ್ತು. ಇದಲ್ಲದೆ ನಮಗೆ ಗೇಣಿಗೆ
ಬೆಳವಿನಕೊಡಿಗೆಯವರ ಅರ್ಧ ಎಕರೆ ತೋಟವಿತ್ತು.
ಆದರೆ ಅದಕ್ಕೂ ಸರಿಯಾಗಿ
ಬೇಸಾಯ ಮಾಡುತ್ತಿರಲಿಲ್ಲ. ಅದಕ್ಕೆ ನಮ್ಮ ತಂದೆಯ
ನಿರಾಸಕ್ತಿಯೇ ಕಾರಣ.
ಶ್ರೀನಿವಾಸಯ್ಯನವರ
ಯಜಮಾನಿಕೆಯಲ್ಲಿ ನಮ್ಮ ಗೌರಕ್ಕನ ಮದುವೆ ಮತ್ತು
ಪುಟ್ಟಣ್ಣನ ಉಪನಯನ ಎರಡೂ ಕ್ರಮವಾಗಿ
ಆಗುಂಬೆ ಮತ್ತು ಹೊರನಾಡಿನಲ್ಲಿ ವಿಜೃಂಭಣೆಯಿಂದ
ನೆರವೇರಿತ್ತು. ಆದರೆ ಅವರ ಮನೆಯಿಂದ ನಮ್ಮ
ಮನೆಗೆ ಬೇಕಾದ ದಿನಸಿ ಇತ್ಯಾದಿಗಳನ್ನು
ತರುವ ಕ್ರಮ ತುಂಬಾ
ಮುಜುಗರದ್ದಾಗಿತ್ತು. ಈ ವ್ಯವಸ್ಥೆಯೇ ಒಂದು
ದಿನ ನಮ್ಮ ಕುಟುಂಬಗಳ
ನಡುವಿನ ಸಂಬಂಧ ಸಂಪೂರ್ಣವಾಗಿ ಕಳಚಿ
ಬೀಳುವಂತೆ ಮಾಡಿತು. ನಮ್ಮ ತಂದೆಯವರು
ಜಮೀನನ್ನು ಶ್ರೀನಿವಾಸಯ್ಯನವರ ಹೆಸರಿಗೆ ಪತ್ರ ಮಾಡುವಾಗ
ಅವರು ನಮ್ಮ ಸಂಸಾರದ ಖರ್ಚನ್ನು
ಹೊರಬೇಕೆಂದು ಯಾವುದೇ ದಾಖಲೆ ಮಾಡಿರಲಿಲ್ಲ. ತಂದೆಯವರೇನೋ
ಇನ್ನು ಮುಂದೆ ತಾವೇ ಜಮೀನು
ರೂಢಿಮಾಡುವುದಾಗಿ ತೀರ್ಮಾನಿಸಿದರು. ಆದರೆ ಜಮೀನು ಶ್ರೀನಿವಾಸಯ್ಯನವರ
ಹೆಸರಿನಲ್ಲಿದ್ದಿದ್ದರಿಂದ ಅವರು
ಯಾವಾಗ ಬೇಕಾದರೂ ಅದರ ಬೆಳೆ
ತೆಗೆಯಲು ಬರುವ ಸಾಧ್ಯತೆ ಇತ್ತು.
ಆ
ಸಮಯದಲ್ಲಿ ನಮ್ಮ ಅಮ್ಮ ನಮ್ಮ
ಅಣ್ಣನಿಗೆ ಸಂಸಾರದ ಪೂರ್ಣ ಜವಾಬ್ದಾರಿಯನ್ನು
ಹೊರಿಸಿದಳು. ಅಲ್ಲದೆ
ಹಣಕಾಸಿನ ವ್ಯವಹಾರದಲ್ಲಿ ಅವನಿಗೆ ಸಂಪಿಗೇಕೊಳಲು ಗಣೇಶರಾಯರ ಮಾರ್ಗದರ್ಶನ
ಸಿಕ್ಕ್ಕಿತು. ಗಣೇಶರಾಯರು
ನಮ್ಮ ತಂದೆಯ ಸೋದರ ಮಾವನ ಮಗ.
ಯಾವುದೇ ಶಾಲೆಯಲ್ಲಿ ಓದಿಲ್ಲದಿದ್ದರೂ ಅವರು ಹಣಕಾಸಿನ ವ್ಯವಹಾರದಲ್ಲಿ ತುಂಬಾ ಕುಶಲರಾಗಿದ್ದರು.
ನಮ್ಮ ತೋಟವನ್ನು ಮೂರು ಭಾಗಗಳಾಗಿ ಮಾಡಿ ಸರದಿಯ
ಮೇಲೆ ವಾರ್ಷಿಕ ಬೇಸಾಯ ಮಾಡಲು
ಪ್ರಾರಂಭ ಮಾಡಲಾಯಿತು. ಅಡಿಕೆ
ಸಸಿಗಳನ್ನು ನಮ್ಮ ತೋಟದಲ್ಲೇ ಪಾತಿಮಾಡಿ
ಬೆಳೆಸಿ ಖಾಲಿಬಿದ್ದ ಸ್ಥಳಗಳನ್ನೆಲ್ಲ ಭರ್ತಿ ಮಾಡಲಾಯಿತು. ಚಿಕ್ಕಮಗಳೂರು ಮತ್ತು ಕೊಪ್ಪ ಸಂತೆಗಳಿಗೆ
ಪ್ರತಿವಾರವೂ ವೀಳ್ಯದೆಲೆ ಮತ್ತು ಬಾಳೆಕಾಯಿ ಕೊಂಡು
ಹೋಗಿ ಮನೆಗೆ ಬೇಕಾದ ಸಾಮಾನುಗಳನ್ನು
ತರಲಾಗುತ್ತಿತ್ತು.
ಆ
ವರ್ಷ ಅಡಿಕೆ ಕೊಯ್ಲಿನ ಸಮಯದಲ್ಲಿ
ನಾವು ನಮ್ಮ ಮನೆಯ ಅಡಿಕೆ
ಸುಲಿತವಿಲ್ಲದಾಗ ಸಂಪಿಗೆಕೊಳಲು ಮತ್ತು ಕೆಳಗಿನ ಮನೆಗೆ
ರಾತ್ರಿ ಅಡಿಕೆ ಸುಲಿತ ಮಾಡಲು ಹೋಗಲಾರಂಭಿಸಿದೆವು. ಅದರಿಂದ
ಸ್ವಲ್ಪ ಹಣ ದೊರೆಯತೊಡಗಿತು. ಇನ್ನೂ
ಚಿಕ್ಕವರಾದ ನಾವು ಮೆಟ್ಟುಗತ್ತಿಗಳನ್ನು ರಾತ್ರಿ
ಹೆಗಲಮೇಲೆ ಏರಿಸಿಕೊಂಡು ಅಡಿಕೆ ಸುಲಿಯಲು ಹೋಗುತ್ತಿದ್ದುದು
ಇಂದು ಕನಸಿನಂತೆ ಕಾಣುತ್ತಿದೆ. ಅಡಿಕೆ ಸುಲಿತದ ಮಧ್ಯದಲ್ಲಿ
ದೊಡ್ಡವರು ಊರಿನ ರಾಜಕೀಯ ಹಾಗೂ
ಅವರ ಹಳೆಯ ನೆನಪುಗಳ ಬಗ್ಗೆ
ಮಾತನಾಡುವುದನ್ನು ಕೇಳುತ್ತಾ ನಾವು ಅರೆನಿದ್ದೆಯಲ್ಲೇ ಅಡಿಕೆ
ಸುಲಿಯುತ್ತಿದ್ದೆವು . ಒಮ್ಮೂಮ್ಮೆ ಮನೆಯ ಯಜಮಾನಿ ಸುಲಿತದ
ಮಧ್ಯೆ ಎದ್ದು ಅಡಿಗೆ ಮನೆಗೆ
ಹೋಗಿ ಚೆಕ್ಕುಲಿ, ಬೋಂಡ , ಇತ್ಯಾದಿಗಳಲ್ಲಿ ಯಾವುದಾದರೂ
ಕುರುಕು ತಿಂಡಿ ಹಾಗೂ ಶುಂಠಿ
ಬಿಸಿನೀರು ತಂದು ಎಲ್ಲರಿಗೂ ಕೊಡುವ
ರೂಢಿಯಿತ್ತು. ಹಾಗಾಗಿ ನಾವು ಸಂಪಿಗೆಕೊಳಲು ಮತ್ತು ಕೆಳಗಿನ ಮನೆ
ಅತ್ತೆಯಂದಿರು ಯಾವಾಗ ಎದ್ದು ಒಳಗೆ
ಹೋಗುವರೆಂದು ಅವರ ಕಡೆ ಆಗಾಗ
ನೋಡುತ್ತಿದ್ದುದು ನೆನಪಿಗೆ ಬರುತ್ತಿದೆ.
ಪುಟ್ಟಣ್ಣನ ಬೀಡಿ
ವ್ಯಾಪಾರ
ನಮ್ಮ
ಕೆಳಗಿನ ಮನೆಯಲ್ಲಿದ್ದ ಚಂದ್ರಣ್ಣ ಮನೆಯಲ್ಲೇ ಬೀಡಿ ಮತ್ತು ಬೆಂಕಿ
ಪೊಟ್ಟಣದ ವ್ಯಾಪಾರ ಮಾಡುತ್ತಿದ್ದ. ಅವನು
ಸಂಪಿಗೇಕೊಳಲು ಗಣೇಶರಾಯರ ಸಹೋದರಿಯ
ಮಗ. ಬಾಲ್ಯದಲ್ಲೇ ತಮ್ಮ ತಂದೆ ತಾಯಿಯರನ್ನು
(ಅಂಬುತೀರ್ಥ ಶ್ಯಾಮರಾಯ ದಂಪತಿಗಳು) ಕಳೆದುಕೊಂಡ ಚಂದ್ರಣ್ಣ ಮತ್ತು ಅಶ್ವತ್ಥಣ್ಣನನ್ನು ಸೋದರ
ಮಾವ ಗಣೇಶಯ್ಯನವರೇ ಸಾಕಬೇಕಾಯಿತು. ಚಂದ್ರಣ್ಣನೂ ಸಂಪಿಗೇಕೊಳಲು ಸೇರಿದಾಗ ಅವನ ಬೀಡಿ ವ್ಯಾಪಾರ
ನಿಂತು ಹೋಯಿತು. ಅವನ ಮುಖ್ಯ
ಗಿರಾಕಿಗಳು ನಮ್ಮ ತಂದೆ ಮತ್ತು
ಮಾವ ಗಣೇಶಯ್ಯನವರೇ! ಆ ದಿನಗಳಲ್ಲಿ ಒಂದು
ಕಟ್ಟು ಬೀಡಿಗೆ ಎರಡು ಆಣೆ
ಮತ್ತು ಒಂದು ಬೆಂಕಿ ಕಡ್ಡಿ
ಪೊಟ್ಟಣಕ್ಕೆ ಒಂದು ಆಣೆ ಬೆಲೆ ಇತ್ತು.
ನಾವು ಕೇಳಿದ ಪ್ರಕಾರ ಒಂದು
ಡಜನ್ ಬೀಡಿ ಕಟ್ಟನ್ನು ಮಾರಿದರೆ
ಒಂದು ಬೀಡಿ ಕಟ್ಟಿನ ಲಾಭ ಬರುತ್ತಿತ್ತಂತೆ.
ನಮ್ಮ
ಪುಟ್ಟಣ್ಣ ನಾಲ್ಕನೇ ತರಗತಿ ಮುಗಿಸಿ
ಮನೆ ಸೇರಿದ್ದರಿಂದ ಅವನಿಗೆ ನಮ್ಮ ಮನೆಯಲ್ಲೇ
ಬೀಡಿ ವ್ಯಾಪಾರ
ಮಾಡಲು ಏರ್ಪಾಟಾಯಿತು. ಅಣ್ಣಯ್ಯನಿಂದ
ಪುಟ್ಟಣ್ಣ ಲೆಕ್ಕ ಬರೆಯುವ ಕ್ರಮ
ತಿಳಿದುಕೊಂಡ. ಸಂಪಿಗೇಕೊಳಲು ಗಣೇಶರಾಯರ ಬೀಡಿ ಲೆಕ್ಕವನ್ನು
ಒಂದು ಖಾಲಿ ಪುಸ್ತಕದಲ್ಲಿ ಬರೆದಿಡ
ಬೇಕಿತ್ತು. ಅವರು ಒಂದು ತಿಂಗಳಿಗೊಮ್ಮೆ
ಲೆಕ್ಕದ ಮೊತ್ತ ಬರೆಸಿ ಲೆಕ್ಕ
ಚುಕ್ತಾ ಮಾಡುತ್ತಿದ್ದರು. ಪುಟ್ಟಣ್ಣನಿಗೆ ಅದು ಅವನ ಜೀವನದ
ಮೊದಲ ಹಣಕಾಸಿನ ವ್ಯವಹಾರವಾಗಿತ್ತು. ಅವನು
ಅದರಲ್ಲಿ ಎಷ್ಟು ಲಾಭ ಮಾಡಿದನೆಂಬ
ರಹಸ್ಯ ಕೇವಲ ಅವನಿಗೆ ಮಾತ್ರ
ಗೊತ್ತು!
ಆ
ವರ್ಷ ಮೊದಲ ಬಾರಿಗೆ ನಮ್ಮ
ಮನೆಯಲ್ಲಿ ಬತ್ತವನ್ನು ಇಡಲು ಒಂದು ಖಣಜ
ಕಟ್ಟಲಾಯಿತು. ಮೇಲಿನಕೊಡಿಗೆ ಸೀತಾರಾಮಯ್ಯ ಮತ್ತು ಶ್ರೀನಿವಾಸಯ್ಯನವರಿಗೆ ಭತ್ತಕ್ಕಾಗಿ
ಸ್ವಲ್ಪ ಸಾಲ ಕೊಟ್ಟಿದ್ದರಿಂದ ಅವರು
ಕೊಟ್ಟ ಬತ್ತ ಮತ್ತು ನಮಗೆ
ಚಿಟ್ಟೆಮಕ್ಕಿ ಮಂಜನಿಂದ ಬಂದ ಐದು
ಖಂಡುಗ ಬತ್ತ ಸೇರಿ
ನಮ್ಮ ಬತ್ತದ ಖಣಜ ತುಂಬಿ
ಹೋಯಿತು. ಮಳೆಗಾಲಕ್ಕೆ ಬೇಕಾದ ಎಲ್ಲ ಸಾಮಾನುಗಳನ್ನುಬೇಸಿಗೆಯಲ್ಲೇ
ತಂದು ಒಣಗಿಸಿ ಶೇಖರಣೆ ಮಾಡಲಾಯಿತು. ಯುಗಾದಿ
ಹಬ್ಬಕ್ಕೆ ಮನೆಯವರಿಗೆಲ್ಲಾ ಹೊಸ ಬಟ್ಟೆ ತರಲು
ಸಂಪಿಗೇಕೊಳಲು ಮಾವಯ್ಯನವರ ಹತ್ತಿರ ಪೂರ್ತಿ ಒಂದು
ನೂರು ರೂಪಾಯಿ ಠೇವಣಿ ಇಡಲಾಯಿತು. ಒಟ್ಟಿನಲ್ಲಿ ಅಣ್ಣನ ಆಡಳಿತದಲ್ಲಿ ನಮ್ಮ
ಮನೆ ನೆಮ್ಮದಿಯನ್ನು ಕಂಡಿತು.
ಆದರೆ
ಆ ವರ್ಷದ ಅಡಿಕೆ
ಕೊಯ್ಲು ಪೂರ್ತಿ ನಮ್ಮ ಕುಟುಂಬದ
ನೆತ್ತಿಯ ಮೇಲೆ ಒಂದು ಕತ್ತಿ
ನೇತಾಡುತ್ತಿತ್ತು. ಅದಕ್ಕೆ
ಕಾರಣ ಪುರದಮನೆ ಶ್ರೀನಿವಾಸಯ್ಯನವರು ನಮ್ಮ
ತೋಟದ ಅಡಿಕೆ ಕೊನೆ ತೆಗೆಸಲು
ಬರುತ್ತಾರೆಂದು ಆಗಾಗ ಬರುತ್ತಿದ್ದ ಸುದ್ಧಿಗಳು.
ಆ ಸಮಾಚಾರ ಕೇಳುತ್ತಲೇ
ನಮ್ಮ ತಂದೆಯವರು ಸೂರಿನಿಂದ ಒಂದು ಕತ್ತಿಯನ್ನು ಹೊರತೆಗೆದು
ಅಡಿಕೆ ಕೊನೆ ತೆಗೆಯುವನ ಕಾಲನ್ನು
ಕಡಿಯಲು ತಯಾರಿ ಮಾಡುತ್ತಿದ್ದರು! ಆದರೆ
ಅದೃಷ್ಟವಶಾತ್ ಆ ಪ್ರಸಂಗವೆಂದೂ ಬರಲಿಲ್ಲ. ನಮಗೆ
ಮಾತ್ರ ಆಗಾಗ ಅಪ್ಪ ಕೊನೆ
ತೆಗೆಯುವನ ಕಾಲು ಕಡಿದಂತೆ ಮತ್ತು
ಆಮೇಲೆ ನರಸಿಂಹರಾಜಪುರದ ಕೋರ್ಟಿಗೆ ಅಲೆಯುತ್ತಿದ್ದಂತೆಯೂ ಕನಸು ಬೀಳುತ್ತಿತ್ತು.
ನನಗೆ
ಆವೇಳೆಗೆ ಶಾಲೆಗೆ ಹೋಗುತ್ತಿದ್ದ ನೆನಪೇ
ಪುನಃ ಜಾರಿಹೋಗತೊಡಗಿತ್ತು. ಆಗ ಇದ್ದಕಿದ್ದಂತೆ ಸಮಾಚಾರ
ಒಂದು ಬಂತು. ವಿಶ್ವೇಶ್ವರಯ್ಯ ಎಂಬ
ಹೊಸ ಮೇಷ್ಟರು ನಾರ್ವೆಯಿಂದ ನಮ್ಮ
ಸ್ಕೂಲಿಗೆ ಬಂದಿರುವರಂತೆ! ಶಾಲೆಯ ಬಾಗಿಲು ಪುನಃ
ತೆರೆದಿದೆಯಂತೆ! ಆದರೆ
ಶಾಲೆ ಪುರದಮನೆಯಲ್ಲಿ ಇತ್ತು. ಮತ್ತು ಆವೇಳೆಗೆ
ನಮ್ಮ ಮತ್ತು ಪುರದಮನೆಯವರ ಭಾಂಧವ್ಯ
ಸಂಪೂರ್ಣವಾಗಿ ಕಡಿದು
ಹೋಗಿತ್ತು.
----ಮುಂದುವರಿಯುವುದು ---