ಅಧ್ಯಾಯ ೧೮
“ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು”
------ ಗೋವಿನ ಹಾಡು
ನಮ್ಮ
ಬಾಲ್ಯಕಾಲದಲ್ಲಿ ನಮಗೆ ಅತ್ಯಂತ ಪ್ರಿಯವಾದ ಹಾಡೆಂದರೆ ಅಜ್ಞಾತ ಕವಿ ರಚಿಸಿದ ಗೋವಿನ ಹಾಡು. ಅದಕ್ಕೆ
ಮುಖ್ಯ ಕಾರಣ ನಮ್ಮೆಲ್ಲರ ಮನೆಯಲ್ಲೂ ಇರುತ್ತಿದ್ದ ದನಕರುಗಳು. ಈ ದನಕರುಗಳು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದುವು.
ದನಗಳ ಹಾಲು ಕರೆಯುವುದು ಮತ್ತು ಅವುಗಳಿಗೆ ಮುರುವನ್ನು ಬೇಯಿಸಿ ಅಥವಾ ಹಸಿಯಾಗಿ ಹಾಕುವುದು ಹೆಂಗಸರ
ಕೆಲಸವಾಗಿದ್ದರೆ, ಅವುಗಳನ್ನು ಮೇವಿಗೆ ಬಿಡುವುದು ಹಾಗೂ ಸಂಜೆಗೆ ಅವು ಕೊಟ್ಟಿಗೆ ಸೇರುವಂತೆ ಮಾಡುವುದು
ಗಂಡಸರ ಕಾರ್ಯವಾಗಿತ್ತು. ಮಕ್ಕಳಾದ ನಮಗೆ ಹೊಸದಾಗಿ ಜನಿಸಿದ ಕರುಗಳು ಕೊಟ್ಟಿಗೆಯಲ್ಲಿ ಚಂಗ್ ಚಂಗ್
ಎಂದು ಹಾರುತ್ತಾ ಬೇರೆ ದನಗಳ ಅಡಿಯಲ್ಲಿ ನುಗ್ಗುವುದು ಮತ್ತು ಅಮ್ಮನ ಮೊಲೆಯನ್ನು ಜಗ್ಗಿ ಹಾಲು ಕುಡಿಯುವುದನ್ನು ನೋಡುವುದೇ ಒಂದು
ಸಡಗರವಾಗಿತ್ತು. ಇನ್ನು ದೀಪಾವಳಿ ಹಬ್ಬದ ಗೋಪೂಜೆಯ ಸಂಭ್ರಮ ಎಂದೂ ಮರೆಯುವಂತದ್ದಲ್ಲ.
ಚೌಡನ ಕಥೆ
ನಾನು
ಈ ಹಿಂದೆಯೇ ಆಲೆಮನೆಯ
ಬಗ್ಗೆ ಬರೆವಾಗ ಬೆಳೆದು ನಿಂತ
ನಮ್ಮ ಕಬ್ಬಿನ ತೋಟದ ಕಾವಲಿಗೆ
ನಮ್ಮ ದನಗಳನ್ನು ಮೇಯಿಸುವ ಗೊಲ್ಲನಾದ ಚೌಡನನ್ನು
ನೇಮಿಸಿದ ಬಗ್ಗೆ ಬರೆದಿದ್ದೇನೆ. ಈ
ಚೌಡ ವಂಶ ಪಾರಂಪರ್ಯದಿಂದ ನಮ್ಮೂರಿನ
ದನಗಳನ್ನು ಮೇಯಿಸುವ ಗೊಲ್ಲನಾಗಿದ್ದ. ಅವನು
ನಮ್ಮೂರಿಗೇ ದೊಡ್ಡ ಸಾಹುಕಾರರಾಗಿದ್ದ ಬೆಳುವಿನಕೊಡಿಗೆಯವರ
ಮನೆಯ ಹತ್ತಿರವಿದ್ದ ತನ್ನ "ಗುಡಿಯಲ್ಲಿ " ವಾಸಮಾಡುತ್ತಿದ್ದ. ಅವನ ಮಡದಿಯ ಹೆಸರು
ಕುಂದಿ ಮತ್ತು ಮೊದಲನೇ ಮಗನ
ಹೆಸರು ತಿಪ್ಪ ಎಂದಿತ್ತು. ಈ
ತಿಪ್ಪ ನಮ್ಮ ಸಮ ವಯಸ್ಕನಾಗಿದ್ದ.
ಸಾಮಾನ್ಯವಾಗಿ
ಚೌಡ ಬೆಳಗಿನ ೮ ಘಂಟೆಯ
ವೇಳೆಗೆ ಮನೆಯ ಮುಂದೆ ಹಾಜರಾಗುತ್ತಿದ್ದ.
ಅವನು ಬಾರಿಸುತ್ತಾ ಬರುತ್ತಿದ್ದ ಕೊಳಲಿನ ದ್ವನಿ ಅವನ
ಬರುವಿಕೆಯ ಮುನ್ಸೂಚನೆ ಕೊಡುತ್ತಿತ್ತು. ಆ
ವೇಳೆಗೆ ಹಾಲು ಕರೆಯುವ ಮತ್ತು
ಮೇವು ಹಾಕುವ ಕೆಲಸ ಮುಗಿದಿರುತ್ತಿತ್ತು.
ಅವನಿಗೆ ಮಾಮೂಲಿನಂತೆ"'ಎಲೆ ಅಡಿಕೆ" ಕೊಟ್ಟನಂತರ
ಎಲ್ಲರ ಮನೆಯ ದನಗಳನ್ನು ಒಂದುಗೂಡಿಸಿ
ಅವುಗಳನ್ನು ಮೇವಿಗಾಗಿ ಬೆಟ್ಟ, ಕಾಡು ಅಥವಾ
ಗದ್ದೆಗಳಿಗೆ (ಬೆಳೆ ಕೊಯ್ಲಾದ ನಂತರ)
ಕೊಂಡೊಯ್ಯುತ್ತಿದ್ದ. ಚೌಡನ ಕೈಯಲ್ಲಿ ಸಾಮಾನ್ಯವಾಗಿ
ಒಂದು ದೊಣ್ಣೆ ಮತ್ತು ಕೊಳಲು
ಇರುತ್ತಿದ್ದವು. ದೊಣ್ಣೆಯನ್ನು ದನಗಳನ್ನು ನಿಯಂತ್ರಿಸಲು ಬಳಸಿದರೆ, ಕೊಳಲು ಒಬ್ಬನಿಗೇ ಬೇಸರವೆನಿಸಿದಾಗ ಮೈ
ಮರೆಯುವ ಸಾಧನವಾಗಿತ್ತು.
ಚೌಡನೊಬ್ಬ ಅಸಾಮಾನ್ಯ ಕೊಳಲು ವಾದಕ. ಆದರೆ
ಅವನ ಕೊಳಲು ವಾದನ ಊರಿನವರಿಗೆ
ಕೇವಲ ಅವನ ಇರುವು ಎಲ್ಲಿ
ಎಂಬುದನ್ನು ತಿಳಿಯುವ ಸಾಧನವಾಗಿತ್ತು. ಅವನ
ಸಂಗೀತ ಸಾಧನೆಗೆ ಯಾವುದೇ ಬೆಲೆಯಿರಲಿಲ್ಲ.
ಸಂಜೆಯ
೫ ಘಂಟೆಯ ವೇಳೆಗೆ
ಚೌಡ ದನಗಳೊಡನೆ ಮನೆಯ ಮುಂದೆ ಹಾಜರಾಗುತ್ತಿದ್ದ. ಸಾಮಾನ್ಯವಾಗಿ
ಅವನ ವೃತ್ತಿಯಲ್ಲಿ ಯಾವುದೇ
ಸಮಸ್ಯೆಗಳಿರಲಿಲ್ಲ. ಆದರೆ ಕೆಲವು ಬಾರಿ
ನಮ್ಮೂರಿಗೆ ಭೇಟಿ ನೀಡುತ್ತಿದ್ದ "ಹುಲಿರಾಯನ"
ಆಗಮನ ಅವನ ವೃತ್ತಿಗೆ ದೊಡ್ಡ
ಮಾರಕವಾಗಿತ್ತು. ಎಷ್ಟೋ ಬಾರಿ ಅವನ
ಕಣ್ಣ ಮುಂದಿನಲ್ಲೇ ಹುಲಿರಾಯ ಹಸುವನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು
ಓಡಿಹೋಗುವ ಪ್ರಸಂಗಗಳು ನಡೆಯುತ್ತಿದ್ದವು. ನಮಗೆ ಅವನು ಸಂಜೆ
ಬಂದು ಹೇಳಿದಾಗಲೇ ವಿಷಯ ಗೊತ್ತಾಗುತ್ತಿತ್ತು. ನಮ್ಮ
ಪ್ರೀತಿಪಾತ್ರ ಹಸುವನ್ನು ಹುಲಿ ಕೊಂಡೊಯ್ದ ಸಮಾಚಾರ
ಕೇಳಿ ನಮಗಾಗುತ್ತಿದ್ದ ದುಃಖಕ್ಕೆ ಮಿತಿಯೇ ಇರಲಿಲ್ಲ. ನಮ್ಮ
ರೋದನ ಆಗ ಮುಗಿಲು ಮುಟ್ಟುತ್ತಿತ್ತು.
ಚೌಡನ ಇತರ ಕೆಲಸಗಳಲ್ಲಿ ಸತ್ತುಹೋದ
ಜಾನುವಾರುಗಳನ್ನು ಕೊಟ್ಟಿಗೆಯಿಂದ ಹೊತ್ತೊಯ್ದು ಗುಡ್ಡದಲ್ಲಿ ಹೂತಿಡುವ ಜವಾಬ್ದಾರಿಯೂ ಸೇರಿತ್ತು.
ಆಗಿನ ಕಾಲದಲ್ಲಿ
ಯಾವುದೇ ಮಕ್ಕಳು ಶಾಲೆಗೆ ಹೋಗಲು
ಇಷ್ಟಪಡದಿದ್ದರೆ ಅಥವಾ ಓದಿನಲ್ಲಿ ಹಿಂದಿದ್ದರೆ
ಅವರಿಗೆ ಮನೆಯ ಹಿರಿಯರು ದನ
ಮೇಯಿಸಲು ಕಳಿಸುವುದಾಗಿ ಹೆದರಿಸುತ್ತಿದ್ದರು. ಆದರೆ ನಮಗಂತೂ ಚೌಡನ
ವೃತ್ತಿ ಒಂದು ಆಕರ್ಷಕ ವೃತ್ತಿ
ಎಂದೇ ಅನಿಸುತ್ತಿತ್ತು. ಹಾಗೆ ನೋಡಿದರೆ ಅದು
ಸ್ವತಃ ಕೃಷ್ಣ ಪರಮಾತ್ಮನೇ ಮಾಡಿದ
ವೃತ್ತಿಯಾಗಿತ್ತು! ನಮ್ಮೂರಿನ ಹಸಿರು ಬೆಟ್ಟಗುಡ್ಡಗಳಲ್ಲಿ ಕೊಳಲನ್ನು
ಬಾರಿಸುತ್ತಾ ಸುಂದರವಾಗಿ ಕಾಣುತ್ತಿದ್ದ ಹಸುಕರುಗಳನ್ನು ಮೇಯಿಸುವುದು ಮನಸ್ಸಿಗೆ ಸಂತಸವಾದ ಕಾರ್ಯವಾಗಿತ್ತೆಂದು ಇಂದಿಗೂ
ಅನ್ನಿಸುತ್ತಿದೆ.
ಚೌಡನ
ಇತರ ಸೇವೆಗಳಲ್ಲಿ ಮುಖ್ಯವಾದವೆಂದರೆ ಹೆಂಗಸರಿಗೆ ತಲೆ ಸ್ನಾನ ಮಾಡಲು
ಬಳಸುತ್ತಿದ್ದ ಬೆಳ್ಳಟ್ಟೆ ಸೊಪ್ಪನ್ನು ಕಾಡಿನಿಂದ ತರುವುದು, ಮಕ್ಕಳಿಗೆ ಬಿದಿರಿನಿಂದ ಕೊಳಲನ್ನು
ತಯಾರಿಸಿ ಕೊಡುವುದು, ಕಾಡಿನಲ್ಲಿ ಬೆಳೆದ ವಿವಿಧ ಹಣ್ಣುಗಳನ್ನು
ತರುವುದು, ಇತ್ಯಾದಿ. ಆದರೆ ಎಲ್ಲಕ್ಕಿಂತ ಮುಖ್ಯವಾದ
ಕೆಲಸವೆಂದರೆ ಮಕ್ಕಳಿಗೆ ವರ್ಷಕ್ಕೊಮ್ಮೆ ಬರುವ ಪೆಟ್ಲು ಹಬ್ಬದಲ್ಲಿ
ಪೆಟ್ಲು ತಯಾರಿಸಿ ಕೊಡುವುದು.
ಈ ಪೆಟ್ಲು ಹಬ್ಬ
ಮಲೆನಾಡಿನ ಮನೆಗಳಲ್ಲಿ ಮಾತ್ರ ಮಾಡುವ ವಿಶೇಷ
ವಾರ್ಷಿಕ ಹಬ್ಬ. ಬಿದಿರಿನಿಂದ ಮಾಡಿದ ಪಿಸ್ತೂಲಿನಂತೆ
ಕಾಣುವ ಪೆಟ್ಲಿನಲ್ಲಿ ಪೆಟ್ಲು
ಕಾಯಿಯನ್ನು ಗುಂಡಿನಂತೆ ಇಟ್ಟು ಮರದಿಂದ ತಯಾರಿಸಿದ
ಗಜದಿಂದ ಜೋರಾಗಿ ತಳ್ಳಿದರೆ ಅದು
ಶಬ್ದಮಾಡಿ ಗುರಿಯಿಟ್ಟಲ್ಲಿಗೆ ತಲುಪುತ್ತದೆ. ಪೆಟ್ಲು ಗಿಡ ಮಲೆನಾಡಿನಲ್ಲಿ
ಮಾತ್ರ ಬೆಳೆಯುವ ಗಿಡ. ಅದರ
ಬೆಳೆದ ಕಾಯಿಯನ್ನು ಪೆಟ್ಲಿಗೆ ಗುಂಡಿನ ರೂಪದಲ್ಲಿ ಬಳಸಿದರೆ,
ಎಳೆಯ ಕಾಯಿಯಿಂದ ತಯಾರಿಸಿದ ಉಪ್ಪಿನ ಕಾಯಿಯ ರುಚಿ
ಅಸದಳ.
ಚೌಡನೊಬ್ಬ
ಸಾಮಾನ್ಯ ಜೀವಿ. ಅವನಿಗೆ ಯಾವುದೇ
ಹೆಚ್ಚಿನ ಆಶೆಗಳಿರಲಿಲ್ಲ. ಅವನ ಅವಶ್ಯಕತೆಗಳೂ ಅತಿ
ಕಡಿಮೆಯಾಗಿದ್ದವು. ಅವನು ಊರಿನವರು ಕೊಟ್ಟ ಹಳೆ ಬಟ್ಟೆಗಳನ್ನು ಮಾತ್ರ ಧರಿಸುತ್ತಿದ್ದ. ಹಾಗೂ
ಅವುಗಳನ್ನು ಎಂದೂ ತೊಳೆಯುವ
ಗೋಜಿಗೆ ಹೋಗುತ್ತಿರಲಿಲ್ಲ! ಅವನ ಪ್ರಕಾರ ಬಟ್ಟೆ
ತೊಳೆಯುವುದೊಂದು ಅನಾವಶ್ಯಕ ಕೆಲಸವಾಗಿತ್ತು! ಬಟ್ಟೆ ತೀರಾ ಹರಿದು
ಹೋದಾಗ ಯಾರಿಂದಲಾದರೂ ಇನ್ನೊಂದು ಬಟ್ಟೆಯನ್ನು ಪಡೆದು ಹಳೆಯದನ್ನು ಬಿಸಾಕುತ್ತಿದ್ದ.
ಆದರೆ ಅವನದೊಂದು ವಿಶೇಷವಾದ ಕಪ್ಪು ಕೋಟು ಇತ್ತು.
ಅದನ್ನು ಯಾರೋ ಕಾಶಿಯಾತ್ರೆ ಮಾಡಿ
ಬಂದವರು ಅವನಿಗೆ ಕೊಟ್ಟಿದ್ದರಂತೆ. ಅದರ
ಬಣ್ಣ ಸವೆದು ಬೂದಿ ಬಣ್ಣಕ್ಕೆ
ತಿರುಗಿತ್ತು. ಅದಕ್ಕೆ ಆರು ಜೇಬುಗಳಿದ್ದು
ಅವನಿಗೆ ಎಲೆ ಅಡಿಕೆ ಇತ್ಯಾದಿಗಳನ್ನು
ಇಡಲು ಉಪಯೋಗವಾಗುತ್ತಿತ್ತು. ಆದರೆ ಯಾವುದೇ ಜೇಬಿನಲ್ಲಿ
ಹಣವಿಡುವ ಸಮಸ್ಯೆ ಅವನಿಗೆ ಇರಲಿಲ್ಲ!
ರೇಡಿಯೋ,
ದೂರದರ್ಶನ ಮತ್ತು ಸಮಾಚಾರ ಪತ್ರಿಕೆಗಳೂ
ಇಲ್ಲದಿದ್ದ ಆ ಕಾಲದ ನಮ್ಮೂರಿನಲ್ಲಿ
ಚೌಡನೊಬ್ಬ ವಿಶೇಷ ವರದಿಗಾರನಾಗಿದ್ದ. ಊರಿನ
ಎಲ್ಲಾ ಮನೆಗಳಿಗೂ ಹೋಗುತ್ತಿದ್ದ ಚೌಡ ಮನೆಯ ಯಜಮಾನರಿಂದ
ಮತ್ತು ವಿಶೇಷವಾಗಿ ಹೆಂಗಸರ ಬಾಯಿಯಿಂದ ರಹಸ್ಯ
ಸಮಾಚಾರಗಳನ್ನು ಜಾಣ್ಮೆಯಿಂದ ಹೊರತರುತ್ತಿದ್ದ. ಅವನಿಗೆ ಅದೇ ಸಮಾಚಾರಗಳನ್ನು
ಇನ್ನೊಬ್ಬರ ಮನೆಗೆ ಹೋದಾಗ ಸ್ವಲ್ಪ
ಬಣ್ಣ ಹಚ್ಚಿ ಆಕರ್ಷಕವಾಗಿ ವರ್ಣನೆ
ಮಾಡುವ ಕಲೆ ಸಾಧಿಸಿತ್ತು. ಅವನೊಬ್ಬ
ಅಪ್ರತಿಮ ಕಥೆಗಾರನೇ ಆಗಿದ್ದ. ಈ ಬಗೆಯ
ಸಮಾಚಾರ ಬಿತ್ತನೆಗೆ ಬದಲಾಗಿ ಚೌಡನು ಬಯಸುತ್ತಿದ್ದ
ಬೆಲೆಯೂ ತೀರಾ ಕಡಿಮೆಯಾದಾಗಿತ್ತು. ಕೇವಲ
ಒಂದು ಲೋಟ ಕಾಫಿ ಅಥವಾ ಹೆಚ್ಚೆಂದರೆ ಸ್ವಲ್ಪ
ಯಾವುದಾದರೂ ತಿಂಡಿ!
ಚೌಡನ
ಮುಪ್ಪಿನ ದಿನಗಳು ತುಂಬಾ ಕಷ್ಟಗಳನ್ನು
ಕಂಡವು. ಅವನ ಮಗ
ತಿಪ್ಪ ಶಾಲೆಗೆ ಹೋಗಲೂ ಇಲ್ಲ.
ಹಾಗೆ ಅವನಿಗೆ ಕುಲ ಕಸಬಾದ
ಗೊಲ್ಲನ ವೃತ್ತಿಯಲ್ಲೂ ಆಸಕ್ತಿ ಇರಲಿಲ್ಲ. ತನ್ನ
ಅಂತಿಮ ದಿನಗಳಲ್ಲಿ ಚೌಡ ಬೆಳಿಗ್ಗೆ ಮನೆಗಳಿಗೆ
ಹೋಗಿ ಎಲೆ ಅಡಿಕೆ ಮತ್ತು
ಕಾಫಿ ತೆಗೆದುಕೊಂಡು ಹಸುಗಳನ್ನು ಮೇವಿಗೆ ಬಿಟ್ಟುಕೊಂಡು ಹೋಗುತ್ತಿದ್ದ.
ಆದರೆ ಆಮೇಲೆ ಅವನಿಗೆ ಅವುಗಳ
ಕಡೆ ಗಮನ ಕೊಡಲಾಗುತ್ತಿರಲಿಲ್ಲ. ಸಂಜೆಗೆ
ಹೆಚ್ಚಿನ ದನಗಳು ಅಭ್ಯಾಸ ಬಲದಿಂದ
ವಾಪಾಸ್ ಕೊಟ್ಟಿಗೆಗೆ ಬರುತ್ತಿದ್ದವು. ಚೌಡನೇನೋ ಪುನಃ ಮನೆಗಳ
ಹತ್ತಿರ ಬಂದು ಅವುಗಳು ಬಂದ
ಬಗ್ಗೆ ವಿಚಾರಿಸುತ್ತಿದ್ದ. ಆದರೆ ಯಾವುದೇ ಹಸುಗಳು
ಬಾರದಿದ್ದರೆ ಅವನ್ನು ಹುಡುಕುವುದಾಗಿ ಹೇಳಿಹೋದ
ಚೌಡ ಪುನಃ ಕಣ್ಣಿಗೆ ಬೀಳುತ್ತಿರಲಿಲ್ಲ.
ನನಗೆ
ಆ ದಿನ ಇಂದೂ
ಸ್ಪಷ್ಟವಾಗಿ ಕಣ್ಣ ಮುಂದೆ ಬರುತ್ತಿದೆ.
ನಾನು ಶಾಲೆಯಿಂದ ವಾಪಾಸ್ ಬರುತ್ತಿದ್ದೆ. ಆಗ
ನನ್ನ ಕಣ್ಣಿಗೆ ತಿಪ್ಪ ಗಡಿಬಿಡಿಯಲ್ಲಿ
ಎಲ್ಲೋ ಹೋಗುತ್ತಿರುವುದು ಕಾಣಿಸಿತು. ನಾನು ಮಾಮೂಲಿನಂತೆ ತಮಾಷೆಯಾಗಿ
ಅವನಿಗೆ ಏನೋ ಹೇಳಲು ಹೋದೆ.
ಅವನು ಅಸಮಾಧಾನದಿಂದ ಈ ದಿನವಾದರೂ ನನ್ನ
ಸುದ್ದಿಗೆ ಬರಬೇಡಿ ಎಂದು ಹೇಳಿ
ಹೊರಟು ಹೋದ.
ನಾನು
ಮನೆಗೆ ಹೋದಾಗ ಅಮ್ಮನಿಂದ ಚೌಡ
ಇನ್ನಿಲ್ಲ ಎಂಬ ಸಮಾಚಾರ ಕೇಳಿದೆ.
ಒಂದು ನಿಮಿಷ ನನಗೆ ಅದನ್ನು
ನಂಬಲೇ ಆಗಲಿಲ್ಲ. ಇಡೀ ನಮ್ಮೂರಿನ ಏಕೈಕ
ಸಮಾಚಾರ ವಾಹಿನಿಯಾಗಿದ್ದ ಚೌಡ ಇನ್ನಿಲ್ಲವೆಂಬ ಸತ್ಯವನ್ನು
ಒಪ್ಪಿಕೊಳ್ಳಲು ನನ್ನ ಮನಸ್ಸು ಸಿದ್ಧವಿರಲಿಲ್ಲ.
ಆದರೆ ಚೌಡನ ಆತ್ಮ ಪರಲೋಕ
ಪ್ರಯಾಣ ಮಾಡಿದ ಸಂಗತಿ ಅರಗಿಸಿಕೊಳ್ಳಲಾಗದ
ಸತ್ಯವೇ ಆಗಿತ್ತು.
ಇಂದು
ನನ್ನ ನೆನಪಿನ ಅಂಗಳದಿಂದ ಚೌಡನ ಕಥೆಯನ್ನು ಹೊರತೆಗೆದು
ಬರೆಯುವಾಗ ನನ್ನ ಕಣ್ಣಿನಿಂದ ನೀರು ಹೊರಬರುತ್ತಿದೆ.
ಚೌಡನೇ ಸ್ವತಃ ಬಂದು ನನ್ನ
ಕಣ್ಣ ಮುಂದೆ ನಿಂತು ತನ್ನ
ಆತ್ಮಕಥೆಯನ್ನು ಬರೆದುದಕ್ಕಾಗಿ ಮತ್ತು ತನ್ನನ್ನು ಅಮರನಾಗುವಂತೆ
ಮಾಡಿದ್ದಕ್ಕಾಗಿ ಕೃತಜ್ಞತೆ ಸೂಚಿಸುತ್ತಿರುವಂತೆ ಭಾಸವಾಗುತ್ತಿದೆ. ಹೌದು. ಇದು ನಿಜ.
ಇಂದು ಚೌಡ ಕೇವಲ ನೆನಪು
ಮಾತ್ರ. ಅವನಂತಹ ವ್ಯಕ್ತಿ ಪುನಃ
ಜನಿಸಿ ಬರಲು ಖಂಡಿತವಾಗಿಯೂ ಸಾಧ್ಯವಿಲ್ಲ.
ಅವನ ಆತ್ಮ ಸ್ವರ್ಗದಲ್ಲಿ ನಿರಂತರವಾಗಿ
ಕೊಳಲು ಊದುತ್ತಿರಲಿ!
----ಮುಂದುವರಿಯುವುದು ---