ತಿಮ್ಮಪ್ಪ
ನಮ್ಮೂರಿನ ಪ್ರಸಿದ್ಧ ಜಮೀನ್ದಾರರಾಗಿದ್ದ ಹೊಸಳ್ಳಿ ವೆಂಕಪ್ಪಯ್ಯನವರ ಮಗ
ಹಾಗೂ ನಮ್ಮಣ್ಣನ ಆತ್ಮೀಯ ಸ್ನೇಹಿತ. ನಮ್ಮಣ್ಣನಂತೆ
ಅವನೂ ಕೂಡ ಲೋಯರ್ ಸೆಕೆಂಡರಿ
ಪರೀಕ್ಷೆ ಪಾಸ್ ಮಾಡಿ ಮನೆ
ಸೇರಿದ್ದ. ಆಗಿನ ಕಾಲದಲ್ಲಿ ನಮ್ಮೂರಿನ
ಯಾವ ಅಪ್ಪಂದಿರಿಗೂ ತಮ್ಮ ಮಗ ಅದಕ್ಕಿಂತ
ಮುಂದೆ ಓದಲೆಂಬ ಇರಾದೆಯೇ ಇರಲಿಲ್ಲ.
ಏಕೆಂದರೆ ಮಗನು ಜಮೀನು ನೋಡಿಕೊಳ್ಳುವುದರಲ್ಲಿ
ತಮಗೆ ಸಹಾಯ ಮಾಡಲೆಂದು ಎಲ್ಲರೂ
ಬಯಸುತ್ತಿದ್ದರು. ಆದರೆ ನಮ್ಮಣ್ಣ ಮತ್ತು
ತಿಮ್ಮಪ್ಪ ಇಬ್ಬರಿಗೂ ಜಮೀನು ನೋಡಿಕೊಳ್ಳುವುದರಲ್ಲಿ ಒಂದೊಂದು
ಸಮಸ್ಯೆ ಇದ್ದಿತು. ನಮ್ಮಣ್ಣನ ಸಮಸ್ಯೆ
ಎಂದರೆ ನೋಡಿಕೊಳ್ಳುವಷ್ಟು ಜಮೀನು ನಮ್ಮ ತಂದೆಗೆ
ಇಲ್ಲದುದು! ಆದರೆ ತಿಮ್ಮಪ್ಪನ ಸಮಸ್ಯೆ
ಬೇರೆಯದೇ ಆಗಿತ್ತು. ಚಿಕ್ಕಂದಿನಲ್ಲಿ ಬಂದ ಪೋಲಿಯೊ ಕಾಹಿಲೆಯಿಂದ
ಅವನ ಎರಡು ಕಾಲುಗಳೂ ಯಾವುದೇ
ಕಷ್ಟದ ಕೆಲಸ ಮಾಡದಂತಾಗಿದ್ದುವು. ಹಾಗಾಗಿ
ಅವನು ನಮ್ಮೂರಿನ ಇತರ ತರುಣರಂತೆ ಜಮೀನು
ಕೆಲಸ ಮಾಡಲು ಅಶಕ್ತನಾಗಿದ್ದ.
ಸ್ನೇಹಿತರಿಬ್ಬರ ಪರಿಸ್ಥಿತಿ ಈ ರೀತಿ ಇದ್ದರೂ ಇಬ್ಬರಿಗೂ
ಹೈಸ್ಕೂಲಿನಲ್ಲಿ ಓದುವ ಅವಕಾಶ ಮಾತ್ರ ದೊರೆಯಲಿಲ್ಲ.
ತಿಮ್ಮಪ್ಪನು
ತನ್ನ ತಾಯಿಯನ್ನು ಬೇಗನೆ (ಅವನ ತಮ್ಮ
ಕೃಷ್ಣರಾಯ ಹುಟ್ಟಿದ ನಂತರ) ಕಳೆದುಕೊಂಡು
ಬಿಟ್ಟಿದ್ದ. ಅವನ ತಂದೆ ಆಮೇಲೆ
ಪುನರ್ವಿವಾಹ ಮಾಡಿಕೊಂಡಿದ್ದರು. ಅವನಿಗೆ
ತಾನು ಸುಮ್ಮನೆ ಮನೆಯಲ್ಲಿದ್ದರೆ ತನಗೆ
ಯಾವುದೇ ಭವಿಷ್ಯವಿಲ್ಲವೆಂದು ಮನದಟ್ಟಾಗಿತ್ತು. ಹಾಗಾಗಿ ಅವನು ಯಾವುದಾದರೂ
ಉದ್ದಿಮೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕೆಂದು ಆಗಲೇ ತೀರ್ಮಾನಿಸಿಬಿಟ್ಟಿದ್ದ. ತಿಮ್ಮಪ್ಪನಿಗೆ ಹುಟ್ಟಿನಿಂದಲೇ
ವ್ಯವಹಾರ ಜಾಣ್ಮೆ ಇತ್ತೆಂದು ಅವನೊಡನೆ
ಸ್ವಲ್ಪ ಮಾತಾಡಿದವರಿಗೆ ಸ್ಪಷ್ಟವಾಗುತ್ತಿತ್ತು. ನಮ್ಮೂರಿನಲ್ಲಿ ಆ ಕಾಲದಲ್ಲಿ ಯಾವುದೇ
ವ್ಯಕ್ತಿಯನ್ನು ಅವನ ವ್ಯವಹಾರ ಜ್ಞಾನದ
ಆಧಾರದ ಮೇಲೆ
ನಾಲ್ಕು ವಿಧವಾಗಿ ಗುರುತಿಸಲಾಗುತ್ತಿತ್ತು. ಅವೆಂದರೆ ದಡ್ಡ
ಅಥವಾ ಶತ ದಡ್ಡ ಮತ್ತು ಬುದ್ಧಿವಂತ ಅಥವಾ
ಮಹಾ ಬುದ್ಧಿವಂತ. ತಿಮ್ಮಪ್ಪ ನಿಸ್ಸಂದೇಹವಾಗಿ ಅದರಲ್ಲಿ ನಾಲ್ಕನೇ ವರ್ಗದಲ್ಲಿ
ಗುರುತಿಸಲ್ಪಟ್ಟಿದ್ದ.
ಆಗಿನ
ಕಾಲದ ಮಲೆನಾಡ ರೈತರಿಗೆ ವ್ಯವಸಾಯ
ಜ್ಞಾನದಷ್ಟೇ ಮುಖ್ಯವಾಗಿ ವ್ಯವಹಾರ ಜ್ಞಾನವೂ ಅವಶ್ಯವಾಗಿತ್ತು.
ಏಕೆಂದರೆ ಅವರು ಬೆಳೆದ ಅಡಿಕೆಯನ್ನು
ಮನೆಯಿಂದಲೇ ಕೊಂಡೊಯ್ಯಲು ಮುಸಲ್ಮಾನ ವ್ಯಾಪಾರಿಗಳು ನಮ್ಮೂರಿಗೆ ಹಾಜರಾಗುತ್ತಿದ್ದರು. ತುಂಬಾ ನಯವಾದ ಕನ್ನಡ ಭಾಷೆಯಲ್ಲೇ
ಮಾತಾಡುತ್ತಾ ಅತಿ ಕಡಿಮೆ ಬೆಲೆಗೆ
ವ್ಯಾಪಾರವನ್ನು ಕುದುರಿಸುವುದರಲ್ಲಿ ಅವರು ನಿಷ್ಣಾತರಾಗಿದ್ದರು. ಪ್ರಾಯಶಃ
ತಿಮ್ಮಪ್ಪನೂ ಅವರಿಂದ ಸ್ವಲ್ಪ ಸ್ಪೂರ್ತಿ
ಪಡೆದಿರಬೇಕು.
ನಾವು
ಚಿಕ್ಕವರಾಗಿದ್ದಾಗ ಕಂಡಂತೆ ತಿಮ್ಮಪ್ಪ ಮೊದಲು
ಕೊಪ್ಪ ಮತ್ತು ಚಿಕ್ಕಮಗಳೂರಿಗೆ ನಮ್ಮೂರಿನಿಂದ ಬಾಳೆಕಾಯಿ
ಮುಂತಾದ ಪದಾರ್ಥಗಳನ್ನು ಮಾರಲು ಕೊಂಡೊಯ್ಯುತ್ತಿದ್ದ.
ಹಾಗೆಯೇ ನಮ್ಮೂರಿನಲ್ಲಿ ಯಕ್ಷಗಾನ ಪ್ರಸಂಗಗಳು ನಡೆಯುವಾಗ
ಹಾಗೂ ಗಣಪತಿ ದೇವಸ್ಥಾನದಲ್ಲಿ ದೀಪಾರಾಧನೆ
ನಡೆಯುವಾಗ ಅಲ್ಲೊಂದು ತಾತ್ಕಾಲಿಕ ಅಂಗಡಿ ತೆರೆದು ವ್ಯಾಪಾರ
ಮಾಡುತ್ತಿದ್ದ. ಅವನಿಗೆ ತನ್ನದೇ ಆದ ಒಂದು
ಅಂಗಡಿಯನ್ನು ತೆರೆದು ವ್ಯಾಪಾರ ಪ್ರಾರಂಭ
ಮಾಡಬೇಕೆಂದು ಗುರಿಯಿತ್ತು. ಆದರೆ ಅದಕ್ಕೆ ಸೂಕ್ತವಾದ
ಸ್ಥಳ ಯಾವುದೆಂದು ಗುರುತಿಸುವುದು ಕಷ್ಟವಾಗಿತ್ತು. ಅವನು ಎಷ್ಟೋ ಬಾರಿ
ನಮ್ಮ ಮನೆಗೆ ಬಂದು ತಂದೆಯವರೊಡನೆ
ನಮ್ಮ ಅಣ್ಣನನ್ನು ಅವನ ಪಾಲುದಾರನಾಗಿ ಮಾಡಿಕೊಳ್ಳಲು
ಅವಕಾಶ ಕೇಳಿಕೊಂಡಿದ್ದ. ಆದರೆ ಕೊನೆಗೂ ತಂದೆಯವರು
ಒಪ್ಪಿಗೆ ನೀಡಲಿಲ್ಲ.
ನಮ್ಮೂರಿನಿಂದ
ನಾಲ್ಕು ಮೈಲಿ ದೂರದಲ್ಲಿ ಜಯಪುರ-ಶೃಂಗೇರಿ ರಸ್ತೆಯಲ್ಲಿ ಅಗಳಗಂಡಿ
ಎಂಬ ಊರಿದೆ. ಕೆರೆಮನೆ ತಿಮ್ಮಪ್ಪಯ್ಯ
ಎಂಬ ಜಮೀನ್ದಾರರು ಪಂಚಾಯತಿ ಅಧ್ಯಕ್ಷರಾಗಿದ್ದಾಗ ಈ ಗ್ರಾಮಕ್ಕೆ ಮಾದರಿ
ಗ್ರಾಮ ಎಂಬ ಬಿರುದು ಸಿಕ್ಕಿತು.
ಶೃಂಗೇರಿಯಲ್ಲಿ ತುಂಗಾ ನದಿಗೆ ೧೯೫೦ನೇ
ದಶಕದಲ್ಲಿ ಸೇತುವೆ ನಿರ್ಮಾಣವಾದಾಗ ಅಗಳಗಂಡಿಗೆ
ಇದ್ದಕ್ಕಿದ್ದಂತೆ ಪ್ರಾಮುಖ್ಯತೆ ಬಂದು ಬಿಟ್ಟಿತು. ಚಿಕ್ಕಮಗಳೂರಿನಿಂದ
ಶೃಂಗೇರಿಗೆ ಹೋಗುವ ಬಸ್ಸುಗಳಿಗೆ ಅಗಳಗಂಡಿಯ
ಮೇಲೆ ಅತಿ ಕಡಿಮೆ ದೂರದಲ್ಲಿ
ಪ್ರಯಾಣ ಮಾಡುವಂತಾಯಿತು. ಅದಕ್ಕೆ ಮೊದಲು ಈ
ಬಸ್ಸುಗಳು ಕೊಪ್ಪ-ಹರಿಹರಪುರ ಮಾರ್ಗದ
ಬಳಸು ದಾರಿಯಲ್ಲಿ ಹೋಗಬೇಕಾಗಿತ್ತು. ಆ ಸಮಯ ನೋಡಿ
ತಿಮ್ಮಪ್ಪ ತನ್ನ ತಮ್ಮ ಕೃಷ್ಣರಾಯನೊಡಗೂಡಿ
ಅಗಳಗಂಡಿಯಲ್ಲಿ ಒಂದು ಅಂಗಡಿ ತೆರೆದು
ಬಿಟ್ಟ. ಅದಕ್ಕೆ ಸೂಕ್ತವಾದ ಬಂಡವಾಳ
ಅವನ ತಂದೆ ವೆಂಕಪ್ಪಯ್ಯನವರಿಂದ ಸಿಕ್ಕಿತು.
ಅಗಳಗಂಡಿ
ಊರಿನ ಬೆಳವಣಿಗೆ ಆದಂತೆ ತಿಮ್ಮಪ್ಪನ ಅಂಗಡಿಯ
ವ್ಯಾಪಾರವೂ ಬೆಳೆಯುತ್ತ ಹೋಯಿತು. ಸುತ್ತಮುತ್ತ ಯಾವುದೇ
ಅಂಗಡಿಗಳು ಇಲ್ಲದೇ ಇದ್ದುದು ಕೂಡ
ಅಂಗಡಿಯ ಬೆಳವಣಿಗೆಗೆ ಕಾರಣವಾಯಿತು.
ತಿಮ್ಮಪ್ಪನು ಒಂದು
ಗುರಿ ಇಟ್ಟುಕೊಂಡಿದ್ದ. ಅದೇನೆಂದರೆ ಯಾವುದೇ ಗಿರಾಕಿ ತನಗೆ
ಬೇಕಾಗಿದ್ದ ವಸ್ತು ತಿಮ್ಮಪ್ಪನ ಅಂಗಡಿಯಲ್ಲಿ
ಸಿಗಲಿಲ್ಲವೆಂದು ವಾಪಾಸ್ ಹೋಗಬಾರದೆಂದು. ಅದಕ್ಕಾಗಿ
ಅವನು ಒಂದು ಪುಸ್ತಕದಲ್ಲಿ ಗಿರಾಕಿಗಳು
ಕೇಳಿ ಅಂಗಡಿಯಲ್ಲಿ ಇರದಂತ ಸಾಮಾನುಗಳನ್ನು ಬರೆದಿಡುತ್ತಿದ್ದ.
ಇನ್ನೊಮ್ಮೆ ಆ
ಗಿರಾಕಿ ಬಂದಾಗ ಆ
ಸಾಮಾನು ಅಂಗಡಿಯಲ್ಲಿ ಇರುವಂತೆ ಮಾಡುವುದೇ ಅವನ
ಉದ್ದೇಶವಾಗಿತ್ತು. ಈ ರೀತಿಯಲ್ಲಿ ಅಂಗಡಿಯಲ್ಲಿರುವ
ಸಾಮಾನುಗಳ ಸಂಖ್ಯೆ ಹೆಚ್ಚುತ್ತಾ
ಅದರಂತೆ ವ್ಯವಹಾರವೂ ಹೆಚ್ಚುತ್ತಾ ಹೋಯಿತು.
ಆ
ದಿನಗಳಲ್ಲಿ ಹಳ್ಳಿಗಳಲ್ಲಿ ಕಡ ಕೇಳುವ ಜನ
ಜಾಸ್ತಿಯಾಗಿದ್ದರು. ಊರಿನ ಜನರೆಲ್ಲರೂ ಪರಿಚಯಸ್ಥರೇ
ಆಗಿದ್ದರಿಂದ ಸಾಮಾನುಗಳನ್ನು ಕಡ ಕೊಡುವುದಿಲ್ಲವೆಂದು ನಿರ್ದಾಕ್ಷಿಣ್ಯವಾಗಿ
ಹೇಳುವುದು ಕಷ್ಟವಾಗಿತ್ತು. ಆದರೆ ಹಾಗೆ ಕಡ
ಕೊಡುತ್ತಾ ಹೋದರೆ
ಅಂಗಡಿಯನ್ನು ಮುಚ್ಚುವ ಸಂದರ್ಭ ಬರುವುದರಲ್ಲಿ
ಆಶ್ಚರ್ಯವಿರಲಿಲ್ಲ. ಅದಕ್ಕಾಗಿ ತಿಮ್ಮಪ್ಪ ಒಂದು ಪ್ಲಾನ್ ಮಾಡಿದ. ಅಂಗಡಿಯ
ಮುಂದೆ ಕಡ ನಾಳೆ
ಎಂದು ಒಂದು
ಬೋರ್ಡ್ ಬರೆಸಿ ಹಾಕಿಬಿಟ್ಟ. ಯಾರೇ
ಕಡ ಕೇಳಿದರೂ ಆ ಬೋರ್ಡಿನ
ಕಡೆ ಕೈ ತೋರಿಸುತ್ತಿದ್ದ.
ತಿಮ್ಮಪ್ಪನ
ವ್ಯವಹಾರ ಬೆಳೆದು
ಅವನು ಸ್ವಂತ ಮನೆ ಮತ್ತು
ಅಂಗಡಿ ಕಟ್ಟಿಸುವಷ್ಟಾಯಿತು. ಇಷ್ಟರಲ್ಲೇ ಅವನಿಗೆ ನಮ್ಮೂರಿನವಳೇ ಆದ
ಹುಡುಗಿಯೊಬ್ಬಳೊಡನೆ ವಿವಾಹ ನಿಶ್ಚಯವೂ ಆಯಿತು.
ದೈವ ಕೃಪೆಯಿಂದ ಅವನಿಗೆ ದಾಂಪತ್ಯ ಜೀವನದಲ್ಲಿ
ಯಾವುದೇ ಕೊರತೆ ಉಂಟಾಗಲಿಲ್ಲ. ಅದೊಂದು
ಅನ್ಯೋನ್ಯ ದಾಂಪತ್ಯವೇ ಆಗಿತ್ತು. ತಿಮ್ಮಪ್ಪನು ಮೂಲತಃ ರೈತ ಕುಟುಂಬದಿಂದ
ಬಂದವನಾಗಿದ್ದರಿಂದ ಅವನಿಗೆ ವ್ಯವಸಾಯದಲ್ಲಿಯೂ ಆಸಕ್ತಿ
ಇತ್ತು. ಅವನು ಸ್ವಲ್ಪ ಜಮೀನನ್ನು
ಕೊಂಡು ಅದರಲ್ಲಿ ಕಾಫಿ ಗಿಡಗಳನ್ನು
ಬೆಳೆಸಿದ. ತನಗೆ
ಸ್ವತಹಃ ತೋಟದ ಬಳಿಗೆ ಹೋಗಲಾಗದಿದ್ದರೂ
ತಮ್ಮ ಕೃಷ್ಣರಾಯನ ಮೂಲಕ ಒಂದು ಕಾಫಿ
ಎಸ್ಟೇಟ್ ಮಾಡಿ ಅದರ ಒಡೆಯನಾಗಿಬಿಟ್ಟ.
ತಿಮ್ಮಪ್ಪ
ನಮ್ಮಣ್ಣನ ಆತ್ಮೀಯ ಸ್ನೇಹಿತನೆಂದು ಆಗಲೇ ಬರೆದಿದ್ದೇನೆ.
ಆ ದಿನಗಳಲ್ಲಿ ನಮ್ಮ
ಸಂಸಾರದ ಹಣಕಾಸಿನ ಪರಿಸ್ಥಿಥಿ ತುಂಬಾ
ಹದಗೆಟ್ಟಿತ್ತು. ಹಾಗಾಗಿ ಹಲವು ಬಾರಿ
ನಮ್ಮಣ್ಣ ನಮ್ಮಿಬ್ಬರನ್ನೂ (ಪುಟ್ಟಣ್ಣ ಮತ್ತು ನಾನು) ತಿಮ್ಮಪ್ಪನ
ಅಂಗಡಿಗೆ ಸಾಮಾನುಗಳನ್ನು ಕಡದಲ್ಲಿ ಕೊಡುವಂತೆ ಪತ್ರ ಬರೆದು
ಕಳಿಸುತ್ತಿದ್ದ. ನಾವು
ಪ್ರಥಮ ಬಾರಿಗೆ ಆ ರೀತಿ
ಹೋದಾಗ ಅಂಗಡಿಯ
ಮುಂದಿದ್ದ ಕಡ ನಾಳೆ
ಎಂಬ ಬೋರ್ಡ್ ನಮ್ಮ ಕಣ್ಣಿಗೆ
ಬಿದ್ದು ತುಂಬಾ ಮುಜುಗರವಾಯಿತು. ತುಂಬಾ
ಸಂಕೋಚದಿಂದಲೇ ನಾವು ಪತ್ರವನ್ನು ಅವನ ಕೈಗಿಟ್ಟೆವು.
ಆದರೆ ಸ್ನೇಹ ಯಾವ ಮಟ್ಟದಲ್ಲಿ
ಇತ್ತೆಂದರೆ ಅವನು ಕೂಡಲೇ ಅಂಗಡಿಯ
ಹುಡುಗರಿಗೆ ನಮ್ಮಣ್ಣನ ಪಟ್ಟಿಯಲ್ಲಿದ್ದ ಎಲ್ಲ
ಸಾಮಾನುಗಳನ್ನೂ ನಾವು ಕೊಂಡೊಯ್ದ ಚೀಲಗಳಲ್ಲಿ
ತುಂಬಿಸುವಂತೆ ಆರ್ಡರ್ ಮಾಡಿಬಿಟ್ಟ! ಆಮೇಲೆಯೂ
ಕೆಲವು ಬಾರಿ ನಾವು ಅದೇ
ರೀತಿ ಅಣ್ಣನ ಪತ್ರದಂತೆ ಸಾಮಾನುಗಳನ್ನು
ತಂದುದು ನಮ್ಮ ನೆನಪಿನಿಂದ ಇವತ್ತಿಗೂ
ಮಾಸಿಲ್ಲ. ಅಷ್ಟು ಮಾತ್ರವಲ್ಲ. ಹಲವು
ಬಾರಿ ನಾವು ನಮ್ಮೊಡನೆ ಸ್ವಲ್ಪ
ಹಣವನ್ನು ಕೊಂಡೊಯ್ದು ಅವನಿಗೆ ಕೊಡಲು ಹೋದಾಗ
ಅದನ್ನು ವಾಪಾಸ್ ನಮ್ಮ ಜೇಬಿಗೆ
ತುರುಕಿದ್ದೂ ಕೂಡ ನೆನಪಿಗೆ ಬರುತ್ತಿದೆ.
ನಾನು
ಶೃಂಗೇರಿ ಕಾಲೇಜಿನಲ್ಲಿ ಓದುತ್ತಿದ್ದಾಗ ಹಲವು ಬಾರಿ ತಿಮ್ಮಪ್ಪನ
ಅಂಗಡಿಯ ಮುಂದೆ ಬಸ್ ಹತ್ತಿ
ಹೋಗುತ್ತಿದ್ದೆ. ಆಗ ತಿಮ್ಮಪ್ಪ ನನ್ನನ್ನು
ಕರೆದು ಕೆಲವು ನೋಟ್ ಬುಕ್ಕುಗಳನ್ನೂ
ನನ್ನ ಚೀಲದೊಳಗೆ ತುರುಕುತ್ತಿದ್ದ. ಹಾಗೂ ಸ್ವಲ್ಪ ಹಣವನ್ನು
ಜೇಬಿನಲ್ಲಿಡುತ್ತಿದ್ದ. ನನ್ನ ವಿದ್ಯಾಭ್ಯಾಸಕ್ಕೆ ಸಹಾಯ
ಮಾಡುವುದು ಅವನ ಉದ್ದೇಶವಾಗಿತ್ತು. ಆಮೇಲೆ
ಅವನ ಮಗಳು ಓದಿನಲ್ಲಿ ಜಾಣೆಯಾಗಿ
ವೈದ್ಯಕೀಯ ಪದವಿ ಪಡೆದು ಈಗ
ಸಾಗರ ಪಟ್ಟಣದಲ್ಲಿ ವೈದ್ಯಕೀಯ
ಪದವೀಧರನೇ ಆದ ತನ್ನ ಗಂಡನೊಂದಿಗೆ
ವೃತ್ತಿಯನ್ನು ನಡೆಸುತ್ತಿರುವುದು ತುಂಬಾ ಸಂತೋಷದ ವಿಷಯ.
ಇಂದು
ತಿಮ್ಮಪ್ಪ ಮತ್ತು ನಮ್ಮಣ್ಣ ಇಬ್ಬರೂ
ತೀರಿ ಹೋಗಿ ಎಷ್ಟೋ ವರ್ಷಗಳು
ಸಂದಿವೆ. ಅವರಿಬ್ಬರ ಸ್ನೇಹ
ಕೊನೆಯವರೆಗೂ ಹಾಗೆ ಮುಂದುವರೆದಿತ್ತು. ತಿಮ್ಮಪ್ಪನ
ವ್ಯಕ್ತಿತ್ವ ಮತ್ತು ಅವನ ವ್ಯವಹಾರ
ಜಾಣ್ಮೆ ಇಂದಿನ ತರುಣ ವ್ಯವಹಾರಸ್ಥರಿಗೆ
ಮಾದರಿಯಾಗಿದೆ. ತನ್ನ ದೇಹ ಶಕ್ತಿಯಲ್ಲಿ
ಕೊರತೆ ಇದ್ದರೂ ಯಾವುದೇ ಕೀಳರಿಮೆ
ಇಲ್ಲದೇ ಒಂದು ಅಂಗಡಿಯನ್ನು ಕಟ್ಟಿ
ಬೆಳೆಸಿ ತನ್ನ ಮುಂದಿನ ಪೀಳಿಗೆ
ಸುಖವಾಗಿ ಬಾಳುವಂತೆ ಮಾಡಿ ಹೋದ ಮಹಾನುಭಾವ
ನಮ್ಮ ತಿಮ್ಮಪ್ಪ. ದೇವರು ಅವನ ಆತ್ಮಕ್ಕೆ
ಶಾಂತಿಯನ್ನೀಯಲಿ.