ಇಂದಿನ ಕಾಲದ ಶಾಲೆಯ ಪಠ್ಯಪುಸ್ತಕಗಳು ಹೇಗಿರುವವೆಂಬುವ ಬಗ್ಗೆ ನಮಗೆ ಕೊಂಚವೂ ಅರಿವಿಲ್ಲವೆಂಬುದು ನಿಜ. ಆದರೆ ಆಶ್ಚರ್ಯವೆಂದರೆ ಮೊನ್ನೆ ನಾನು ನಮ್ಮ ಕಾಲದ ಪಠ್ಯಪುಸ್ತಕಗಳ ಬಗ್ಗೆ ಯೋಚಿಸುತ್ತಿರುವಾಗ ನನಗೆ ನಮ್ಮ ಒಂದನೇ ತರಗತಿಯ ಪಾಠಗಳೂ ನೆನಪಿಗೆ ಬಂದವು! ಮಾತ್ರವಲ್ಲ. ಆಗಿನ ಪಠ್ಯಪುಸ್ತಕಗಳನ್ನು ರಚಿಸಲು ನೇಮಕವಾದ ಸಮಿತಿಯ ಅಧ್ಯಕ್ಷರು ಮತ್ತು ಕೆಲವು ಸದಸ್ಯರ ಹೆಸರುಗಳೂ ನೆನಪಿಗೆ ಬಂದುವು. ಆ ಸಮಿತಿಗೆ ನಾವು ಚಿರ ಋಣಿಗಳಾಗಿದ್ದೇವೆಂದು ಹೇಳಲೇ ಬೇಕು. ಏಕೆಂದರೆ ನಮ್ಮ ಪಾಠಗಳನ್ನು ಮತ್ತು ಪದ್ಯಗಳನ್ನು ಎಷ್ಟು ಚೆನ್ನಾಗಿ ರಚಿಸಲಾಗಿತ್ತೆಂದರೆ, ನಾವು ಅವುಗಳನ್ನು ಪುನಃ ಪುನಃ ಓದಿ ಸಂತಸ ಪಡುತ್ತಿದ್ದುದು ನೆನಪಿಗೆ ಬರುತ್ತಿದೆ. ಇಷ್ಟಲ್ಲದೇ ಆ ಕಾಲದ ವಿದ್ಯಾರ್ಥಿಗಳಾದ ನಮಗೆ ಪುಸ್ತಕಗಳ ಹೊರೆಯನ್ನು ಹೊತ್ತು ಶಾಲೆಗೆ ಹೋಗುವ ಅವಶ್ಯಕತೆ ಇರಲಿಲ್ಲ. ಒಂದು ಮತ್ತು ಎರಡನೇ ತರಗತಿಗೆ ನಾವು ಕೇವಲ ಸ್ಲೇಟು, ಬಳಪ ಮತ್ತು ಒಂದು ಪಠ್ಯಪುಸ್ತಕವನ್ನು ಕೈಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದೆವು. ನಮ್ಮ ಪಠ್ಯಪುಸ್ತಕಗಳನ್ನು ರಚಿಸಲು ನೇಮಕವಾದ ಸಮಿತಿಯು ಕೆಳಕಂಡಂತಿತ್ತು:
ಶ್ರೀ ಎಂ ಆರ್ ಶ್ರೀನಿವಾಸಮೂರ್ತಿ (ಅಧ್ಯಕ್ಷರು)
ಶ್ರೀ ಕೆ ಎಸ್ ಧರಣೇಂದ್ರಯ್ಯ (ಸದಸ್ಯರು)
ಶ್ರೀ ಎನ್ ಎಸ್ ವೀರಪ್ಪ (ಸದಸ್ಯರು)
ಶ್ರೀ ಓ ಎನ್ ಲಿಂಗಣ್ಣಯ್ಯ (ಸದಸ್ಯರು)
ಹೆಚ್ಚಿನ ಸದಸ್ಯರು ಬಿ.ಎ, ಬಿ. ಟಿ. ಪದವೀಧರರಾಗಿದ್ದರು. ಶ್ರೀ ಎನ್.ಎಸ್.ಹಿರಣ್ಣಯ್ಯ ಅವರು ಆಗ ಸಾರ್ವಜನಿಕ ಶಿಕ್ಷಣದ ನಿರ್ದೇಶಕರಾಗಿದ್ದರು. ಅವರ ನಂತರ ಎ.ಸಿ.ದೇವೇಗೌಡ ಅವರು ನಿರ್ದೇಶಕರಾಗಿ ನೇಮಕವಾದರು.
ಬಹು ದೊಡ್ಡ ವಿದ್ವಾಂಸರಾದ ಎಂ ಆರ್ ಶ್ರೀನಿವಾಸಮೂರ್ತಿಯವರು ಒಬ್ಬ ಸೃಜನಶೀಲ ಬರಹಗಾರರೂ ಆಗಿದ್ದರು. ಮೈಸೂರು ವಿದ್ಯಾ ಇಲಾಖೆಯಲ್ಲಿ ಬೇರೆ ಬೇರೆ ಸ್ಥಾನಗಳಲ್ಲಿ ಕೆಲಸ ಮಾಡಿ ಅನುಭವ ಹೊಂದಿದವರಾಗಿದ್ದರು. ಅವರ ಅತ್ಯುತ್ತಮ ಬರಹಗಳಲ್ಲೊಂದಾದ "ರಂಗಣ್ಣನ ಕನಸಿನ ದಿನಗಳು" ಒಂದು ಅನನ್ಯ ಬರಹವಾಗಿದ್ದು ಶಾಲಾ ಇನ್ಸ್ಪೆಕ್ಟರ್ ಒಬ್ಬನ ಅನುಭವಗಳನ್ನೊಳಗೊಂಡಿದೆ. ಅವರೊಬ್ಬ
ವೀರಶೈವ ಸಾಹಿತ್ಯದ ತಜ್ಞರೂ ಆಗಿದ್ದರು. ಅಲ್ಲದೇ ೧೯೫೦ನೇ
ಇಸವಿಯಲ್ಲಿ ಶೋಲಾಪುರದಲ್ಲಿ ನಡೆದ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು.
ನಮ್ಮ ಒಂದನೇ ತರಗತಿಯ ಮೊದಲ ಪಾಠ ತುಂಬಾ ಆಕರ್ಷಕವಾಗಿಯೇ ಇತ್ತೆಂದು ಹೇಳಲೇ ಬೇಕು. ಆ ಪಾಠದಲ್ಲಿದ್ದ ಪದಗಳು ನಮ್ಮ ಅಂದಿನ ಬಾಲ್ಯ ಮನೋವೃತ್ತಿಗೆ ಪೂರಕವಾಗೇ ಇದ್ದವು. ಅವುಗಳೆಂದರೆ: ೧. ಆಟ ೨. ಊಟ ೩. ಓಟ ಮತ್ತು ೪. ಪಾಠ. ಆಗ ನಮ್ಮಆಸಕ್ತಿ ಮತ್ತು
ಗಮನವೆಲ್ಲಾ ಮೊದಲ ಮೂರು ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದವು. ಅವುಗಳನ್ನು ನಾಲ್ಕನೇ ವಿಷಯವಾದ ಪಾಠದತ್ತ ಸೆಳೆಯುವುದೇ ಉದ್ದೇಶವಾಗಿತ್ತು. ನಮ್ಮ ಮೊದಲ ಪಾಠಗಳು ಕಾಗುಣಿತ ಮತ್ತು ಒತ್ತಾಕ್ಷರಗಳಿಲ್ಲದೇ ಓದಲು ಮತ್ತು ಬರೆಯಲು ಸುಗಮವಾಗಿದ್ದವು. ಆದರೆ ಮುಂದಿನ ಪಾಠಗಳಲ್ಲಿ
ಅವುಗಳಿಂದ ಕೂಡಿದ ಪದಗಳನ್ನು ಪ್ರಾಸಬದ್ಧವಾಗಿ ಪದ್ಯ ರೂಪದಲ್ಲಿ ಬರೆಯಲಾಗಿದ್ದು ನಾವು ಅವುಗಳನ್ನು ತುಂಬಾ ಆಸಕ್ತಿ ಮತ್ತು ಖುಷಿಯಿಂದ ಓದುತ್ತಿದ್ದೆವು. ಅಲ್ಲದೇ ಆ ಪದ್ಯಗಳಿಗೆ ತಕ್ಕ ಚಿತ್ರಗಳನ್ನು ಪಕ್ಕದಲ್ಲೇ ಜೋಡಿಸಿದ್ದರಿಂದ ನಮ್ಮ ಉತ್ಸಾಹ ಮೇರೆ ಮೀರಿರುತ್ತೆಂದೂ ನೆನಪಿಗೆ ಬರುತ್ತಿದೆ.
ನನ್ನ ನೆನಪಿಗೆ ಬರುವ ಕೆಲವು ಚಿಕ್ಕ ಪದ್ಯಗಳು:
ಕ ಒತ್ತು
ಅಕ್ಕಾ
ಅಕ್ಕಾ
ಚೆಕ್ಕುಲಿ ಚಿಕ್ಕಿಲಿ
ಅಕ್ಕಿಯ ದೋಸೆ
ಮುಕ್ಕೇ ಮುಕ್ಕಿತು
ಒಕ್ಕಲ ಮಕ್ಕಳು
ಉಕ್ಕೆಯ ಹೊಡೆದರು
ಪಕ್ಕನೆ ಬೆಳೆದು
ನಕ್ಕಿತು ಭೂಮಿ
ಡ ಒತ್ತು
ಗುಡ್ಡದ ಮೇಲೆ
ರೆಡ್ಡಿಯ ಮದುವೆ
ಬಾಯಿಗೆ ಲಡ್ಡು
ಜೇಬಿಗೆ ದುಡ್ಡು
ಬೆಂಕಿಯ ಕಡ್ಡಿ
ಕಡ್ಡಿಯ ಪೊಟ್ಟಣ
ಬುಡ್ಡಿಯ ದೀಪ
ಗಡ್ಡಾ ಜೋಕೆ
ಗೆಣಸಿನ ಗೆಡ್ಡೆ
ಹೆಗಲಿಗೆ ಅಡ್ಡೆ
ಆಲೂ ಗೆಡ್ಡೆ
ಗುಡ್ಡೆ ಮಾಡು
ಯ ಒತ್ತು
ಉಯ್ಯಾಲೆ ಮೇಲೆ
ನಾಮದ ಅಯ್ಯ
ಕುಯ್ಯುವ ದೋಟಿಗೆ
ಸುಯ್ಯುವ ಹಣ್ಣು
ಸುಯ್ಯುವ ಗಾಳಿಗೆ
ಬಾಯಿಗೆ ಮಣ್ಣು
ಅಯ್ಯೋ ಅಣ್ಣ
ಸಭ್ಯರ ಮಾತು
ಅಯ್ಯೋ ಪಾಪ
ಪುಣ್ಯದ ಮಾತು
ಶಕಾರದ ಪದಗಳು
ಶನಿವಾರ ಶಾಮರಾಯ ಶಿವನ ಗುಡಿ ಶೀಲವಂತ ಅದು ಪಶು ಅವನು ಶೂರ ರಾಜಶೇಖರ ಶೈಲ ಶೋಕ ಶಂಕರ
ನಮ್ಮ ಒಂದನೇ ತರಗತಿಯ ಕೊನೆಯ ಪಾಠ ಪ್ರೊಫೆಸರ್
ಜಿ ಪಿ ರಾಜರತ್ನಂ ಅವರು ಬರೆದ ಜಂಬದ ಕೋಳಿ ಎಂಬ
ಪ್ರಸಿದ್ಧ ಕವನವಾಗಿತ್ತು. ನನಗೆ ಇಂದಿಗೂ ನೆನಪಿರುವಂತೆ ಆ ಪದ್ಯ ಕೆಳಕಂಡಂತಿತ್ತು:
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು
ತನಗೇ ತುತ್ತೂರಿ ಇದೆಯೆಂದು
ಬೇರಾರಿಗೂ ಅದು ಇಲ್ಲೆಂದು
ಕಸ್ತೂರಿ ನಡೆದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ
ತುತ್ತೂರಿ ಊದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರೂರಿ
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತೂರಿ ಬೋಳಾಯ್ತು
ಜಂಬದ ಕೋಳಿಗೆ ಗೋಳಾಯ್ತು!
-----------------------------ಮುಂದುವರಿಯುವುದು-------------------------------------