ಕಂದಕ್ಕಯ್ಯ ನಮ್ಮ ತಂದೆಯ ಆಕ್ಕನ ಕೊನೆಯ ಮಗಳು. ನಮ್ಮ ತಂದೆಗೆ ಇಬ್ಬರು ಅಕ್ಕಂದಿರು ಮತ್ತು ಒಬ್ಬಳು ತಂಗಿ . ಮೊದಲ ಅಕ್ಕನ ಮಕ್ಕಳೆಂದರೆ ಮರಡಿಯ ಕೃಷ್ಣ ರಾವ್, ಕಂದಮ್ಮ, ಗಣೇಶ್ ರಾವ್, ಶಾಮರಾವ್, ಶಾರದೆ ಮತ್ತು ತಿಮ್ಮಪ್ಪ.
ಎರಡನೇ ಅಕ್ಕನ ಮಕ್ಕಳೆಂದರೆ ಸುಬ್ಬಣ್ಣ, ಸೀತಮ್ಮ, ಮುತ್ತಮ್ಮ ಮತ್ತು ಕಂದಮ್ಮ.
ಸೀತಮ್ಮ ಮತ್ತು ಮುತ್ತಮ್ಮ ಇಬ್ಬರನ್ನೂ ತೀರ್ಥಹಳ್ಳಿ ತಾಲೂಕಿನ ನರ್ಜಿ ಊರಿಗೆ ಮದುವೆ ಮಾಡಿ ಕೊಡಲಾಗಿತ್ತು . ಸುಬ್ಬಣ್ಣ ತೀರ್ಥಹಳ್ಳಿ
ತಾಲೂಕಿನ ಹೊಸತೋಟ (ದೇವಾಸ) ಎಂಬಲ್ಲಿ ಹೋಗಿ ನೆಲಸಿದ್ದರು. ಕಂದಕ್ಕಯ್ಯನ ಗಂಡ ನಮ್ಮೂರಿನ ಪಣಿಯಪ್ಪಯ್ಯ. ಈ ದಂಪತಿಗಳ ಸಂಸಾರ ನಮ್ಮ ಕೆಳಗಿನ ಅಡೇಕಂಡಿ ಯಿಂದ ಪ್ರಾರಂಬವಾಗಿ ಪುರದಮನೆಯ ಮೂಲಕ ಅಡೇಕಂಡಿಯ ಮೇಲಿದ್ದ
'ನಡುವಿನಮನೆ 'ಯನ್ನು ಸೇರಿತ್ತು
.
ನಮ್ಮ ತಂದೆ ವೆಂಕಟರಮಣಯ್ಯ ಓರ್ವ ನಿಗೂಡ ವ್ಯಕ್ತಿ. ಚಿಕ್ಕ
ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡು ಸೋದರಮಾವನ ಮನೆಯಲ್ಲಿ ಬಾಲ್ಯವನ್ನು ಕಳೆದು ನಂತರ ಊರೂರು
ತಿರುಗುತ್ತಿದ್ದರಂತೆ. ತಮ್ಮ ಸ್ವಂತ ಸಂಸಾರದಬಗ್ಗೆ ಏನೂ ಯೋಚನೆ ಮಾಡದೆ ಪರೋಪಕಾರಿ ಪಾಪಣ್ಣನಂತೆ ಇತರರ ಸೇವೆ ಮಾಡುವುದೇ ಅವರ ದಿನಚರಿಯಾಗಿತ್ತಂತೆ
. ಅವರ ಬಾಲ್ಯ ಜೀವನದಲ್ಲಿ ಎಷ್ಟೋ ಕಷ್ಟ ನಷ್ಟಗಳನ್ನನುಬವಿಸಿದ್ದರೂ
ಅದರ ಬಗ್ಗೆ ಯಾರೊಡನೆಯೂ ಹೇಳುತ್ತಿದ್ದಿಲ್ಲ. ವಿಚಿತ್ರವೆಂದರೆ ನಾವೂ ಆಬಗ್ಗೆ ಅವರನ್ನು ವಿಚಾರಿಸಿದ್ದಿಲ್ಲ
. ಅವರ ಜೀವನದ ದುರಂತಗಳಲ್ಲಿ ಬಹುಮುಖ್ಯವಾದುವೆಂದರೆ ತಮ್ಮಿಬ್ಬರು
ಅಕ್ಕಂದಿರನ್ನು (ಭಾವಂದಿರನ್ನು ಸಹಾ) ಬಹುಬೇಗನೆ ಕಳೆದುಕೊಂಡಿದ್ದುದು. ಮೊದಲನೇ ಅಕ್ಕ ಬಾಣಂತಿ ಆಗಿದ್ದಾಗಲೇ ತೀರಿಕೊಂಡರೆ, ಎರಡನೇ ಅಕ್ಕ
ಕಂದಮ್ಮ ಹುಟ್ಟಿದ ಕೆಲವರ್ಷಗಳಲ್ಲೇ ತೀರಿಕೊಂಡಿದ್ದರು . ಇನ್ನು ತಂಗಿಯ ಜೀವನದಲ್ಲಿ ಬಹು ದೊಡ್ಡ ಅನಾಹುತ
ನಡೆಯಿತು. ಆ ಬಗ್ಗೆ ಇಲ್ಲಿ ಬರೆಯದಿರುವುದೇ ಲೇಸು.
ನಮ್ಮಮ್ಮನೊಡನೆ ನಮ್ಮ
ತಂದೆಯ ಮದುವೆ ನಡೆದಾಗ ಎಲ್ಲರೂ ಅವರಿಗೆ ದೊಡ್ಡ ಲಾಟರಿ ಹೊಡೆಯಿತೆಂದೇ ತಿಳಿದಿದ್ದರಂತೆ . ಏಕೆಂದರೆ
ನಮ್ಮಮ್ಮ ಅವರ ಶ್ರೀಮಂತ ತಂದೆಗೆ ಒಬ್ಬಳೇ ಮಗಳು. ಮೊದಲಮನೆ ಸುಬ್ಬಣ್ಣಯ್ಯ ಮೂರು ಜನ ಗಂದುಮಕ್ಕಳಲ್ಲಿ
ಹಿರಿಯರು. ಅವರ ಒಬ್ಬಳೇ ಪ್ರೇಮದಪುತ್ರಿ ನಮ್ಮಮ್ಮ.
ಅವರಿಗೆ ಮನೆಯ ಹತ್ತಿರವಿದ್ದ ಐದೆಕರೆ ತೋಟವಲ್ಲದೆ ,ಬೇರೆಬೇರೆಕಡೆ ಜಮೀನುಗಳಿದ್ದುವು . ಅದರಲ್ಲಿ
ಮೂರನೇ ಒಂದು ಭಾಗ ನಮ್ಮಪ್ಪನ ಸುಪರ್ದಿಗೆ ಬಂದೇ ಬರುವಂತೆ ಕಾಣುತ್ತಿತ್ತು. ಆದರೆ ಅದು ಇದ್ದಕ್ಕಿದ್ದಂತೆ
ಕೇವಲ ಮರೀಚಿಕೆ ಆಗಿಬಿಟ್ಟಿತು!
ಧಾರ್ಮಿಕ ಸ್ವಭಾವದ ಸುಬ್ಬಣ್ಣಯ್ಯ ಮತ್ತು ರುಕ್ಮಿಣಿಯಮ್ಮನ ಜೋಡಿಗೆ ವ್ಯವಹಾರಿಕ
ಪ್ರಪಂಚದಲ್ಲಿ ಯಾವುದೇ ಆಸಕ್ತಿ ಇರಲಿಲ್ಲ . ತುಂಬಾ
ಅನ್ಯೋನ್ಯವಾಗಿದ್ದ ಈ ದಂಪತಿಗಳು ದುರದೃಷ್ಟವಶಾತ್ ತಮ್ಮ ಮಧ್ಯ ವಯಸ್ಸಿನ ಕೊನೆಯ ಭಾಗದಲ್ಲಿ
ಇದ್ದಕ್ಕಿದ್ದಂತೆ ಒಟ್ಟೊಟ್ಟಿಗೆ ತೀರಿಕೊಂಡುಬಿಟ್ಟರು.
ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಹಕ್ಕಿಲ್ಲವೆಂಬ ನೆವವೊಡ್ಡಿ ನಮ್ಮಜ್ಜನ ಇಬ್ಬರು ತಮ್ಮಂದಿರು
ನಮ್ಮ ಅಮ್ಮನಿಗೆ 'ಚೆಂಬು' ತೋರಿಸಿಬಿಟ್ಟರು. ಆಗ ನಮ್ಮ ತಂದೆ ನಿಜವಾಗಿ ಲಾಟರಿ
ಹೊಡೆಯುವ ಪರಿಸ್ತಿತಿಗೆ ಬಂದರು! ಆಗ ಅವರ ನೆರವಿಗೆ ಬಂದವರು ಪುರದಮನೆ ಶಿಂಗಪ್ಪಯ್ಯ. ಅವರಿಗೆ ತೀವ್ರ
ಕಾಹಿಲೆಯಾಗಿದ್ದಾಗ ಸೇವೆ ಮಾಡಿದ್ದಕ್ಕೆ ನಮ್ಮಪ್ಪನನ್ನು ಒಂದೆಕರೆ ತೋಟದ ಜಮೀನ್ದಾರನಾಗಿ ಮಾಡಿಬಿಟ್ಟರು!
ಹೀಗೆ ಶುರುವಾಯಿತು ನಮ್ಮಪ್ಪನ ಅಡೇಕಂಡಿ ಸಂಸಾರ .
ಗೇಣಿದಾರರೇ ಹೆಚ್ಚಾಗಿದ್ದ
ನಮ್ಮೂರಿನಲ್ಲಿ ನಮ್ಮ ತಂದೆಯ ಒಂದೆಕರೆ ಜಮೀನ್ದಾರಿಕೆ ಸ್ವಲ್ಪ ವಿಚಿತ್ರವಾಗೇ ಕಾಣುತ್ತಿತ್ತಂತೆ
. ಮುಂದೆ ಒಂದು ಕಾಲಕ್ಕೆ ಗೇಣಿದಾರರೆಲ್ಲಾ ಜಮೀನ್ದಾರರಾಗಿ,
ಮೊದಲಿನ ಜಮೀನ್ದಾರರು
ಜಮೀನು ಮಾರಿ ಊರು ತೊರೆಯುವಂತಾದರೂ,
ನಮ್ಮ ತಂದೆಯ ಪರಿಸ್ತಿತಿಯಲ್ಲಿ ಯಾವುದೇ ಬದಲಾವಣೆ ಕಾಣದುದೂ ಒಂದು ವಿಚಿತ್ರವೇ
ಅನ್ನಿ !
ಇದೆಲ್ಲಾ ನಡೆದು ನಮ್ಮ
ತಂದೆಯವರು ತೀರಿಕೊಂಡು ಎಷ್ಟೋ ವರ್ಷದನಂತರ ನನಗೆ ಅವರ ಜೀವನಚರಿತ್ರೆ ಬರೆಯಬೇಕೆಂಬ ಹಠ ಹುಟ್ಟಿಕೊಂಡಿತು. ಅದಕ್ಕಾಗಿ ನಮ್ಮಪ್ಪನ ಪ್ರೀತಿಯ ಸೋದರಳಿಯ ಕರಿಗೆರಸಿ ಗಣೇಶಭಾವನ
ಮನೆಗೆ ಒಮ್ಮೆ ಹೋಗಿದ್ದೆ . ನಾವು ಚಿಕ್ಕಂದಿನಲ್ಲಿ ನೋಡಿದಂತೆ ನಮ್ಮ ತಂದೆ ತುಂಬಾ ಕಷ್ಟಬಂದಾಗ ಗಣೇಶಭಾವನ
ಮನೆಗೆ ಸೀದಾ ಹೋಗಿಬಿಡುತ್ತಿದ್ದರು . ಅಲ್ಲಿ ಎರಡು ದಿನ ಕಳೆದು ನಂತರ ಹೊರಡುವಾಗ ಗಣೇಶಭಾವ ಒಂದು ಗಾಡಿಯಲ್ಲಿ
ಅವರನ್ನು ಕೂರಿಸಿ ಕೈಗೊಂದು ಪತ್ರಕೊಟ್ಟು ಕಳಿಸುತ್ತಿದ್ದರು . ಆ ಪತ್ರವನ್ನು ಕೊಪ್ಪದಲ್ಲಿ ಸಿದ್ದಿ
ಸಾಹೇಬರ ಕೈಗೆ ಕೊಟ್ಟಾಗ ಗಾಡಿತುಂಬಾ ಸಾಮಾನು ಹೇರಲ್ಪಡುತ್ತಿತ್ತು. ಅಷ್ಟಲ್ಲದೇ ಒಂದು ನೂರು ರೂಪಾಯಿಯ ‘ಇಡೀ’ ನೋಟನ್ನು ಕೈಗೆ ಕೊಡುತ್ತಿದ್ದರು! ನಾವು ಬೆಳಿಗ್ಗೆ ಎದ್ದು
ನೋಡುವಾಗ ಕರಿಗೆರಸಿ ಗಾಡಿ ನಮ್ಮ ಮನೆಯ ಮುಂದಿರುತ್ತಿತ್ತು
! ನಮ್ಮ ತಂದೆಯ ಮುಖದಲ್ಲಿ ಅವರ ಸೋದರಳಿಯನ ಮೇಲಿನ
ಅಭಿಮಾನ ಎದ್ದು ಕಾಣುತ್ತಿತ್ತು !
ನಾನು ನನ್ನ ತಂದೆಯ ಕಥೆ
ಹೇಳುವಂತೆ ಕೇಳಿದಾಗ ಗಣೇಶಭಾವನ ಮುಖ ಅರಳಿತು . ಅವರು
ಕೂಡಲೇ 'ನನ್ನನ್ನು ಬಾಲ್ಯದಲ್ಲಿ ಸಾಕಿದುದೇ ಪುಣ್ಯಾತ್ಮನಾದ ನಿನ್ನ
ತಂದೆ ಕಣಪ್ಪ ' ಎಂದು ತುಂಬಾ ಅಭಿಮಾನದಿಂದ ಹೇಳಿದರು . ಅವರ ಪ್ರಕಾರ ಚಿಕ್ಕಂದಿನಲ್ಲೇ ತಂದೆತಾಯಿಗಳನ್ನು ಕಳೆದುಕೊಂಡಿದ್ದ
ಅವರನ್ನು ನಮ್ಮ ತಂದೆಯೇ ಅಡೇಕಂಡಿಯಲ್ಲಿ ಕರೆತಂದು ಸಾಕಿದ್ದರಂತೆ . ಆಗ ನಮ್ಮ ತಂದೆ ಹಣಕ್ಕಾಗಿ ಪಡುತ್ತಿದ್ದ
ಬವಣೆಗಳನ್ನು ವರ್ಣಿಸಿದರು . ಆದರೆ ಅವರಿಗೆ ನಮ್ಮ ತಂದೆಯಬಗ್ಗೆ ಬೇರೆ ವಿಚಾರಗಳೇನು ಗೊತ್ತಿಲ್ಲವೆಂದರು. ನನ್ನ ಕುತೂಹಲ ಮಾತ್ರ
ಕರಗಲಿಲ್ಲ.
ಆಮೇಲೆ ಸುಮಾರು ಒಂದು
ವರ್ಷದ ನಂತರ ನನಗೆ ಕಂದಕ್ಕಯ್ಯನ ನೆನಪಾಯಿತು. ಆ ವೇಳೆಗೆ ಅವಳ ಸಂಸಾರ ನಮ್ಮೂರಿನಿಂದ ಹೊರಟುಬಿಟ್ಟಿತ್ತು. ಒಮ್ಮೆ ನಮ್ಮಕ್ಕನ
ಮನೆಗೆ ಹೋದಾಗ, ಅವಳು ಹರಿಹರಪುರದಲ್ಲಿ ಮೊಮ್ಮಗನ
ಮನೆಯಲ್ಲಿರುವಳೆಂದು ತಿಳಿಯಿತು . ತಡಮಾಡದೇ ಸೀದಾ ಅಲ್ಲಿಗೆಹೋದೆ . ನನ್ನ ಅದೃಷ್ಟಕ್ಕೆ ನನ್ನ ಕೈಗೆ
ಸಿಕ್ಕಿಯೇ ಬಿಟ್ಟಳು! ಅವಳಿಗಾಗ ತೊಂಬತ್ತರ ಹತ್ತಿರ ವಯಸ್ಸು . ಆದರೆ ಯಾವುದೇ ಕಾಹಿಲೆ ಕಸಾಲೆ ಇಲ್ಲದೆ ಗಟ್ಟಿ ಮುಟ್ಟಾಗಿದ್ದಳು.
ನನ್ನನ್ನು ನೋಡಿ ತುಂಬಾ ಸಂತೋಷಪಟ್ಟಳು.
ನಾನು ತಡಮಾಡದೇ ನನಗೆ
ಅವಳ ಬಾಲ್ಯದ ಹಾಗೂ ನಮ್ಮ ತಂದೆಯ ಬಗ್ಗೆ ವಿವರವಾಗಿ ಹೇಳುವಂತೆ ಕೇಳಿಕೊಂಡೆ . ಆಗ ಅವಳು ತನ್ನದು ತುಂಬಾ ಹೃದಯವಿದ್ರಾವಕ ಮತ್ತು ನಂಬಲಾಗದ ಕಥೆಯೆಂದು ಹೇಳ ತೊಡಗಿದಳು . ನಾನು ಗಮನವಿಟ್ಟು
ಕೇಳ ತೊಡಗಿದೆ . ಆ ಕಥೆ ಹೀಗಿತ್ತು:
ಕಂದಕ್ಕಯ್ಯನ ತಂದೆಯ ಪೂರ್ವಿಕರು
ಗಡೀಕಲ್ ಹತ್ತಿರವಿರುವ ಕೊಕ್ಕೋಡು ಎಂಬಲ್ಲಿ ದೊಡ್ಡ ಜಮೀನ್ದಾರರಾಗಿದ್ದರಂತೆ . ಆ ಜಮೀನು ಹೇಗೆ ಕಳೆದು
ಕೊಂಡರೆಂದು ಅವಳಿಗೆ ಗೊತ್ತಾಗಲಿಲ್ಲ . ಅವಳಿಗೆ ತಿಳಿದಂತೆ
ಅವಳು ತೀರಾ ಚಿಕ್ಕವಳಿದ್ದಾಗ (೩-೪ ವರ್ಷ) ಅವಳ ಅಮ್ಮನೊಡನೆ ನರ್ಜಿಯಲ್ಲಿದ್ದ ಅವಳ ಮೊದಲ ಅಕ್ಕನ ಮನೆಯಲ್ಲಿ ವಾಸವಾಗಿದ್ದಳಂತೆ . ಆ ಅಕ್ಕ ಆಗ ತನ್ನ ಮೊದಲನೇ ಮಗುವಿನ ಜನನದ ನಿರೀಕ್ಷೆ ಯಲ್ಲಿದ್ದಳಂತೆ .
ಆಗ ಇದ್ದಕ್ಕಿದ್ದಂತೆ ಆ ಊರಿಗೆ ಆ ಕಾಲಕ್ಕೆ ಪ್ರಸಿದ್ದವಾಗಿದ್ದ ‘ಮಹಾಮಾರಿ’ ಕಾಹಿಲೆಯ ಪ್ರವೇಶವಾಯಿತಂತೆ
. ಅದು ಮೊದಲು ತಗಲಿಕೊಂಡದ್ದು ಕಂದಕ್ಕಯ್ಯನ ಅಮ್ಮನಿಗೇ! ಈ ವಿಷಯ ಗೊತ್ತಾಗುತ್ತಲೇ ಊರಿನ ಬೇರೆಯವರೆಲ್ಲಾ
ಇವರನ್ನು ಊರುಬಿಟ್ಟು ಹೋಗುವಂತೆ ಒತ್ತಾಯಿಸಿದರಂತೆ. ಆದರೆ ಊರು ಬಿಟ್ಟು ಹೋಗುವುದಾದರೂ ಎಲ್ಲಿಗೆ ?
ಕಾಹಿಲೆ ಬಂದವಳನ್ನು ಏನು ಮಾಡುವುದು ? ನರ್ಜಿಯ ಕುಟುಂಬಕ್ಕೆ ಅದೊಂದು ಅಗ್ನಿಪರೀಕ್ಷೆ
ಆಗಿತ್ತು .
ಆಗ ಆಪದ್ ಬಾಂಧವನಂತೆ ಅಲ್ಲಿಗೆ ಬಂದವರು ನಮ್ಮ ತಂದೆ.
ಅವರು ಆಗ ಕೆಸವೆಯೆಂಬ ಊರಿನಲ್ಲಿದ್ದ ತಮ್ಮ ದೊಡ್ಡಪ್ಪನ ಮಗನ ಮನೆಯಲ್ಲಿದ್ದರಂತೆ . ಅವರಿಗೆ
ಯಾರಿಂದಲೋ ಸಮಾಚಾರಸಿಕ್ಕಿ ಕೂಡಲೇ ತಮ್ಮ ಅಕ್ಕನ ನೆರವಿಗೆ ಧಾವಿಸಿ ಬಂದಿದ್ದರು . ಆದರೆ ಅಕ್ಕನ ಪರಿಸ್ತಿತಿ
ತಮ್ಮ ಕೈಮೀರಿದೆಯೆಂದು ಅವರಿಗೆ ಗೊತ್ತಾಯಿತು . ಎಲ್ಲರೂ ಸೇರಿ ಒಂದು ತೀರ್ಮಾನಕ್ಕೆ ಬಂದರಂತೆ . ಅದೇನೆಂದು
ಚಿಕ್ಕವಳಾಗಿದ್ದ ಕಂದಕ್ಕಯ್ಯನಿಗೆ ಗೊತ್ತಾಗಲಿಲ್ಲ .
ಇದ್ದಕ್ಕಿದ್ದಂತೆ ಎಲ್ಲರೂ
ಗಂಟು ಮೂಟೆ ಕಟ್ಟಿಕೊಂಡು ಹೊರಡಲು ತಯಾರಾದರಂತೆ . ಕಂದಕ್ಕಯ್ಯನ ಅಮ್ಮನನ್ನು ಅಲ್ಲಿಯೇ ಬಿಟ್ಟು ಮನೆಯ
ಬಾಗಿಲಿಗೆ ಬೀಗ ಜಡಿದು ಬಿಟ್ಟರಂತೆ !ಚಿಕ್ಕ ಮಗುವಾಗಿದ್ದ ಕಂದಕ್ಕಯ್ಯನಿಗೆ ದಿಗ್ಬ್ರಮೆಯಾದಂತಾಗಿ ಜೋರಾಗಿ
ಅಮ್ಮಾ ಅಮ್ಮಾ ಎಂದು ಬೊಬ್ಬೆ ಹಾಕತೊದಗಿದಳಂತೆ .
ಕೂಡಲೇ ಅವಳನ್ನು ಸೆಳೆದು ಸೊಂಟಕ್ಕೇರಿಸಿಕೊಂಡ ನಮ್ಮ ತಂದೆ ಎಲ್ಲರೊಟ್ಟಿಗೆ ಬಿಸಬಿಸನೆ ಕಾಲು
ಹಾಕುತ್ತಾ ಹೊರಟುಬಿಟ್ಟರು . ಆಗ ಮನೆಯೊಳಗಿಂದ ಅವಳ ಅಮ್ಮನ ಆರ್ತನಾದ ಜೋರಾಗಿ ಕೇಳತೊಡಗಿತ್ತು . ಆದರೆ
ಯಾರೂ ಕೂಡಾ ತಿರುಗಿನೋಡುವ ಸಾಹಸ ಮಾಡಲಿಲ್ಲ . ಆದರೆ ಅಪ್ಪನ ಸೊಂಟದಲ್ಲಿದ್ದ ಕಂದಕ್ಕಯ್ಯ ಮಾತ್ರ ತಿರುತಿರುಗಿ
ನೋಡತೊದಗಿದಳಂತೆ . ಆಗ ಅವಳಿಗೆ ಅವಳ ಅಮ್ಮ ಕಿಟಕಿಯೊಳಗಿಂದ ಕೈಚಾಚಿ ತನ್ನನ್ನೂ ಕರೆದೊಯ್ಯುವಂತೆ ಬೊಬ್ಬೆ
ಹಾಕುತ್ತಿರುವುದು ಕಾಣಿಸಿತಂತೆ . ಆ ದೃಶ್ಯ ಅವಳ ಇಡೀ ಜೇವಮಾನದಲ್ಲಿ ಮರೆಯುವಂತದಲ್ಲ . ಆದರೆ ಅದೇ
ಕೊನೆ . ಅವಳ ಪ್ರೀತಿಯ ಅಮ್ಮನ ಜೀವನ ಈಬಗೆಯ ಹೃದಯವಿದ್ರಾವಕ ಪ್ರಸಂಗದಲ್ಲಿ ಅಂತ್ಯ ಕಂಡಿತ್ತು .
ನಮ್ಮ ಅಪ್ಪನ ನೇತ್ರತ್ವದಲ್ಲಿ
ಇಡೀ ಸಂಸಾರ ಕಾಲ್ನಡಿಗೆಯಲ್ಲೇ ಕೊಪ್ಪ ತಾಲೂಕಿನ ಕೆಸವೆ ಊರಿನ ಗಡಿ ತಲುಪಿತು . ಆದರೆ ಅವರಿಗೆ ಅಲ್ಲೊಂದು
ಆಘಾತ ಕಾದಿತ್ತು. ಆ ಊರಿನವರಿಗೆ ಇವರು ಬರುತ್ತಿರುವ
ಸಮಾಚಾರ ಮೊದಲೇ ತಿಳಿದು ಊರಿನ ಗಡಿಯಲ್ಲೇ ಇವರನ್ನು ತಡೆದರು . ಅವರಲ್ಲಿ ಯಾರಿಗಾದರು ಆಗಲೇ ಕಾಹಿಲೆ
ಅಂಟಿರಬಹುದೆಂದು ಅವರಿಗೆ ಸಂಶಯ . ಆದ್ದರಿಂದ ನಮ್ಮಪ್ಪನಿಗೆ ಮಾತ್ರ ಊರಿಗೆ ಪ್ರವೇಶವೆಂದು ನಿರ್ದಾಕ್ಷಿಣ್ಯವಾಗಿ
ಹೇಳಿಬಿಟ್ಟರು . ಆಗ ನಮ್ಮಪ್ಪನ ಪರಿಸ್ತಿತಿ ತುಂಬಾ
ಕಷ್ಟಕ್ಕೆ ಬಂತು. ಆದರೆ ಅವರು ಉಳಿದವರ ಕೈಬಿಡಲು ತಯಾರಿರಲಿಲ್ಲ .
ಹುಟ್ಟು ಹೋರಾಟಗಾರರಾದ
ನಮ್ಮ ತಂದೆ ಸ್ವಲ್ಪವೂ ದೃತಿಗೆಡದೆ ಎಲ್ಲರನ್ನೂ ಹತ್ತಿರದ ಕಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ
ಒಂದು ಗುಡಿಸಲು (ಕ್ಯಾಂಪ್) ಕಟ್ಟಿ ಅದರಲ್ಲೇ ಇರುವಂತೆ ವ್ಯವಸ್ಥೆ ಮಾಡಿದರು . ಅವರು ಊರೊಳಗೆ ಹೋಗಿ
ಆಗಾಗ ಅಲ್ಲಿಂದ ತಮ್ಮ ಕೈಲಾದ ಆಹಾರ ಪದಾರ್ಥಗಳನ್ನು ಕಾಡಿನ ಮನೆಗೆ ರಹಸ್ಯವಾಗಿ ತಲುಪಿಸತೊಡಗಿದರು. ಹೀಗೆ ಸುಮಾರು ಒಂದು ತಿಂಗಳು ಕಳೆಯುವಾಗ ಮಹಾಮಾರಿ ರೋಗ ಎಲ್ಲಕಡೆಯಿಂದಲೂ
ಹೊರಟುಹೋಗಿದೆ ಎಂಬ ಸಮಾಚಾರ ಸರ್ಕಾರದಿಂದ ಪ್ರಚಾರವಾಯಿತು
. ಆಮೇಲೆ ಎಲ್ಲರೂ ಅವರವರ ಊರು ಸೇರಿದರಂತೆ .
ಇಷ್ಟು ಹೇಳಿ ಮುಗಿಸುವಾಗ
ಕಂದಕ್ಕಯ್ಯನ ಕಣ್ಣಲ್ಲಿ ನೀರು ಹರಿಯ ತೊಡಗಿತು . ನನಗೂ ಅವಳು ಕಥೆಯಿಂದ ಸೃಷ್ಟಿಸಿದ ಸನ್ನಿವೇಶದಿಂದ ಹೊರಗೆ ಬರಲು ಸ್ವಲ್ಪ ಕಾಲ ಬೇಕಾಯಿತು .
ತನ್ನ ಒಡಹುಟ್ಟಿದ ಅಕ್ಕನನ್ನು ಮೃತ್ಯುವಿನ ಕೈಯಲ್ಲಿ ಬಿಟ್ಟು ಬರುವಾಗ ನಮ್ಮ ತಂದೆಯ ಮನಸ್ಥಿತಿ ಹೇಗಿದ್ದಿರಬಹುದು
? ಆ ನೆನಪು ಅವರ ಜೀವಮಾನವಿಡೀ ಕೊರಗುವಂತೆ ಮಾಡಿತೆ?
ಇದು ಈಗ ಕೇವಲ ಒಂದು ಯಕ್ಷಪ್ರಶ್ನೆಯಷ್ಟೇ .
ಇಂದು ನಮ್ಮ ತಂದೆ ತೀರಿಕೊಂಡು
ಎಷ್ಟೋ ವರ್ಷಗಳು ಸಂದಿವೆ . ಕಂದಕ್ಕಯ್ಯನೂ ಕಳೆದ ವರ್ಷ ತೀರಿಕೊಂಡು ಬಿಟ್ಟಳು . ಆದರೆ ಅವಳು ಹೇಳಿದ
ದುರಂತ ಕಥೆಯನ್ನು ಮರೆಯಲಾಗುತ್ತಿಲ್ಲ.
ನಮ್ಮ ಸೋದರತ್ತೆಯಾಗಿದ್ದ ಅವಳ ಅಮ್ಮ ನರ್ಜಿ ಮನೆಯ ಕಿಟಕಿಯಿಂದ ಕೈಚಾಚಿ ಕರೆಯುತ್ತಿರುವ ದೃಶ್ಯ ಪದೇ ಪದೇ ಕಣ್ಣ ಮುಂದೆ ಬರುತ್ತದೆ
. ದೇವರು ಕಂದಕ್ಕಯ್ಯನ ಆತ್ಮಕ್ಕೆ ಶಾಂತಿಯನ್ನೀಯಲಿ.