Thursday, August 6, 2020

ಬಾಲ್ಯ ಕಾಲದ ನೆನಪುಗಳು – ೧೦೭

 

ನಾವು ಇನ್ಸ್ಟಿಟ್ಯೂಟಿಗೆ ಸೇರಿದ ಮಾರನೇ ದಿನದಿಂದಲೇ ನಮ್ಮ ತರಗತಿಗಳು ಪ್ರಾರಂಭವಾದುವು. ಆ ದಿನಗಳಲ್ಲಿ ಎಲ್ಲಾ ವಿಶ್ವವಿದ್ಯಾನಿಲಯಗಳೂ ವಾರ್ಷಿಕ ಪರೀಕ್ಷೆ ನಡೆಸುತ್ತಿದ್ದವು. ಆದರೆ ಇನ್ಸ್ಟಿಟ್ಯೂಟಿನಲ್ಲಿ ಮಾತ್ರಾ ಆಗಲೇ ಸೆಮಿಸ್ಟರ್ ಪದ್ಧತಿ ಜಾರಿಯಲ್ಲಿತ್ತು. ಅಷ್ಟು ಮಾತ್ರವಲ್ಲ. ಇನ್ಸ್ಟಿಟ್ಯೂಟಿನಲ್ಲಿ ಮಾಸಿಕ ಟೆಸ್ಟ್ ಗಳನ್ನೂ ಮಾಡುವುದಲ್ಲದೇ ಅದರಲ್ಲಿ ಬಂದ ಅಂಕಗಳನ್ನೂ ಪರಿಗಣಿಸಿ ಸೆಮಿಸ್ಟರ್ ಪರೀಕ್ಷೆಯ ನಂತರ ಗ್ರೇಡೇಷನ್ ಮಾಡಲಾಗುತ್ತಿತ್ತು. ಒಟ್ಟಿನಲ್ಲಿ ವಿದ್ಯಾರ್ಥಿಗಳು ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳುವ ಮೊದಲೇ ಅವರ ಮೇಲೆ ಪರೀಕ್ಷೆಗಳ ಒತ್ತಡ ಹೇರಲಾಗುತ್ತಿತ್ತು. ಮೊದಲ ಎರಡು ಸೆಮಿಸ್ಟರ್ ಗಳಲ್ಲಿ ಇನ್ಸ್ಟಿಟ್ಯೂಟಿನ ಮೂರು ಇಂಜಿನಿಯರಿಂಗ್ ವಿಭಾಗಗಳಿಗೂ ಕೆಲವು ಕಾಮನ್ ಸಬ್ಜೆಕ್ಟುಗಳು ಇದ್ದವು. ಈ ಸಬ್ಜೆಕ್ಟುಗಳ ತರಗತಿಗಳನ್ನು ಒಂದು ವಿಶಾಲವಾದ  ಸಭಾಂಗಣದಲ್ಲಿ ನಡೆಸಲಾಗುತ್ತಿತ್ತು. ಏಕೆಂದರೆ ಅದರಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿರುತ್ತಿದ್ದರು.

ನಮ್ಮ ಮೆಟಲರ್ಜಿ ವಿಭಾಗದಲ್ಲಿ ಸುಮಾರು ೧೨ ವಿದ್ಯಾರ್ಥಿಗಳು ಕನ್ನಡಿಗರೇ ಆಗಿದ್ದರು. ಉಳಿದವರು ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದರು. ಆದರೆ ಹೆಚ್ಚಿನ ವಿದ್ಯಾರ್ಥಿಗಳು ತಮಿಳುನಾಡಿನವರಾಗಿದ್ದರು. ಕನ್ನಡಿಗರಲ್ಲಿ ಹೆಚ್ಚಿನವರು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ Rank ಪಡೆದವರಾಗಿದ್ದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಂದ ಮೂರು ವಿದ್ಯಾರ್ಥಿಗಳಲ್ಲಿ ನಾನು ಮಾತ್ರಾ Rank ಪಡೆದವನಾಗಿದ್ದೆ. ಉಳಿದಿಬ್ಬರು ಮೊದಲ ತರಗತಿಯಲ್ಲಿ ಉನ್ನತ ಅಂಕಗಳನ್ನು ಪಡೆದವರಾಗಿದ್ದರು.

ನಮ್ಮ ಹಾಸ್ಟೆಲಿನಲ್ಲಿ ಮೂರು ಮೆಸ್ಸುಗಳಿದ್ದವು. ಅವುಗಳೆಂದರೆ  - ಸೌತ್ ಇಂಡಿಯನ್ ವೆಜೆಟೇರಿಯನ್ ಮೆಸ್, ನಾರ್ತ್ ಇಂಡಿಯನ್ ವೆಜೆಟೇರಿಯನ್ ಮೆಸ್ ಮತ್ತು ನಾನ್-ವೆಜೆಟೇರಿಯನ್ ಮೆಸ್. ನಾನು ಸೌತ್ ಇಂಡಿಯನ್ ವೆಜೆಟೇರಿಯನ್ ಮೆಸ್ ಸೇರಿಕೊಂಡೆ. ಈ ಮೆಸ್ಸಿನ ಊಟ ಮತ್ತು ತಿಂಡಿಗಳು ತುಂಬಾ ರುಚಿಕರ ಮತ್ತು ಉನ್ನತ ಮಟ್ಟದ್ದಾಗಿದ್ದವು. ಹಾಲು, ಮೊಸರು, ಬೆಣ್ಣೆ ಮತ್ತು ತುಪ್ಪ ಸಮೃದ್ಧಿಯಾಗಿ ದೊರೆಯುತ್ತಿದ್ದವು. ನಮ್ಮ ಮೆಸ್ಸಿನ ಬಿಸಿಬಿಸಿ ಮಸಾಲೆ ದೋಸೆ ಮತ್ತು ಪರೋಟ ತುಂಬಾ ಪ್ರಸಿದ್ಧಿ ಪಡೆದಿದ್ದವು. ಸ್ವಚ್ಛತೆಗೆ ಹೆಸರಾಗಿದ್ದ ಈ ಮೆಸ್ಸಿನಲ್ಲಿ ನಾವು ತೆಗೆದುಕೊಳ್ಳುತ್ತಿದ್ದ ಊಟ ಮತ್ತು ತಿಂಡಿಗಳಿಗೆ ಯಾವುದೇ ಮಿತಿ ಇರುತ್ತಿರಲಿಲ್ಲ. ಊಟ ಮುಗಿದ ನಂತರ ನಮ್ಮಿಚ್ಛೆಯಷ್ಟು ತಿನ್ನಲು ತಾಜಾ ಹಣ್ಣುಗಳು ಅವಲಭ್ಯವಿದ್ದವು. ಒಟ್ಟಿನಲ್ಲಿ ಆಹಾರದ ಮಟ್ಟ ಹೇಗಿತ್ತೆಂದರೆ ಕೇವಲ ಸ್ವಲ್ಪ ದಿನಗಳಲ್ಲೇ ನನ್ನ ದೇಹದ ತೂಕ ಜಾಸ್ತಿಯಾಗಲಾರಂಭಿಸಿತು!

ನಾನು ಇನ್ಸ್ಟಿಟ್ಯೂಟಿನ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಂತೆ ಎರಡು ಮುಖ್ಯ ಕೆಲಸಗಳಿಗೆ ಆದ್ಯತೆ ನೀಡಿದೆ. ಮೊದಲನೆಯದಾಗಿ ನನಗೆ ಮ್ಯಾಥಮ್ಯಾಟಿಕ್ಸ್ ಉಪನ್ಯಾಸಕರಾಗಿದ್ದು ಆಗ ಸಿಂಡಿಕೇಟ್ ಬ್ಯಾಂಕಿನಲ್ಲಿ ಆಫೀಸರ್ ಆಗಿದ್ದ ಎನ್.ಆರ್.ಭಟ್ ಅವರಿಗೆ ಅವರು ನೀಡಿದ್ದ ಹಣಕಾಸಿನ ಸಹಾಯದ ಭರವಸೆಯನ್ನು ನೆನಪಿಸಿ ಒಂದು ಪತ್ರ ಬರೆದೆ. ಆಗ ಅವರು ಬ್ಯಾಂಕಿನ ಕಾರವಾರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ನಾನು ಅವರಿಂದ ಪ್ರತಿ ತಿಂಗಳೂ ಸ್ವಲ್ಪ ಹಣವನ್ನು ನಿರೀಕ್ಷಿಸುತ್ತಿದ್ದೆ. ಆದರೆ ನಾನು ಪತ್ರ ಬರೆದು ಒಂದು ತಿಂಗಳಾದರೂ ಅವರಿಂದ ಯಾವುದೇ ಉತ್ತರ ಬರಲಿಲ್ಲ.

ನನ್ನ ಎರಡನೇ ಪತ್ರ ಮಣಿಪಾಲ್ ಅಕಾಡೆಮಿಗೆ ಬರೆದ ಪತ್ರವಾಗಿತ್ತು. ಅದರಲ್ಲಿ ನಾನು ಹಿಂದೆಯೇ ತಿಳಿಸಿದಂತೆ ಟಾಟಾ ಇನ್ಸ್ಟಿಟ್ಯೂಟಿಗೆ ಸೇರಿರುವುದಾಗಿಯೂ ಮತ್ತು ಹಿಂದೆ ನನಗೆ ಪ್ರಿನ್ಸಿಪಾಲರ ಮೂಲಕ ನೀಡಿದ ಭರವಸೆಯ ಪ್ರಕಾರ ಇನ್ಸ್ಟಿಟ್ಯೂಟಿನ ಫೀ ಮೊತ್ತವನ್ನು ಕಳಿಸಿಕೊಡುವಂತೆಯೂ ಕೇಳಿಕೊಂಡಿದ್ದೆ. ಆದರೆ ಅಲ್ಲಿಂದಲೂ ನನ್ನ ಪತ್ರಕ್ಕೆ ಒಂದು ತಿಂಗಳ ಮೇಲಾದರೂ ಕೂಡ ಯಾವುದೇ ಉತ್ತರ ಬರಲಿಲ್ಲ. ಆಗ ನನ್ನ ಮನಸ್ಸಿನಲ್ಲಿ ಸ್ವಲ್ಪ ಕಸಿವಿಸಿಯಾಗಲಾರಂಭಿಸಿತು.

ಈ ನಡುವೆ ಪುಟ್ಟಣ್ಣ ತನ್ನ ನೌಕರಿ ಹುಡುಕಾಟವನ್ನು ಮುಂದುವರಿಸಿದ್ದ. ಆದರೆ ಯಶಸ್ಸಿನ  ಯಾವುದೇ ಸೂಚನೆಗಳು ಕಾಣುತ್ತಿರಲಿಲ್ಲ. ಒಟ್ಟಿನಲ್ಲಿ ನನ್ನ ಹಣಕಾಸಿನ ವ್ಯವಸ್ಥೆ ಬಗೆಹರಿಯುವ ಯಾವುದೇ ಸಾಧ್ಯತೆ ಗೋಚರಿಸುತ್ತಿರಲಿಲ್ಲ. ನನ್ನ ಹಾಸ್ಟೆಲ್ ವಾಸದ ಒಂದು ತಿಂಗಳು ಅಷ್ಟುಹೊತ್ತಿಗೆ ಕಳೆದು ಹೋಗಿತ್ತು. ನಾನು ಬ್ಯಾಂಕಿನಿಂದ ಹಣ ತೆಗೆದು ಆ ತಿಂಗಳ ಫೀ ಕಟ್ಟಿದೆ. ಬ್ಯಾಂಕಿನಲ್ಲಿದ್ದ ನನ್ನ ಹಣ ಅತಿ ವೇಗವಾಗಿ ಕರಗುತ್ತಿದ್ದಂತೆ ನನಗನ್ನಿಸತೊಡಗಿತು.

ನಮಗೆ ಮೊದಲ ತಿಂಗಳ ಟೆಸ್ಟ್ ಗಳನ್ನು ನಡೆಸಲಾಯಿತು. ನಾನು ಅವುಗಳಲ್ಲಿ ಸಾಕಷ್ಟು ಚೆನ್ನಾಗಿಯೇ ಉತ್ತರಗಳನ್ನು ಬರೆದಿದ್ದೆ. ಈ ನಡುವೆ ನಾನು ನನ್ನ ಅನೇಕ ಸಹಪಾಠಿಗಳೊಡನೆ ಸ್ನೇಹ ಬೆಳೆಸಿದ್ದೆ. ಎಲ್ಲರಿಗಿಂತಲೂ ಹೆಚ್ಚಾಗಿ ಕೃಷ್ಣಕುಮಾರನೆಂಬ ನಗೆಮೊಗದ ಕೊಯಮುತ್ತೂರಿನ ಹುಡುಗ ಬೇಗನೆ ನನ್ನ ಆತ್ಮೀಯ ಮಿತ್ರನಾಗಿಬಿಟ್ಟ. ನನಗೆ ಅವನೊಡನೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಯಿತು. ವೀರರಾಘವನ್ ಎಂಬ ಇನ್ನೊಬ್ಬ  ಹುಡುಗ ತುಂಬಾ ಮೇಧಾವಿ ಮತ್ತು ತೀಕ್ಷ್ಣ ಮತಿಯಾಗಿದ್ದ. ಎಂತಹ ಕಠಿಣ ಸಮಸ್ಯೆಯೇ ಇರಲೀ, ಅದನ್ನು ಬೇಗನೆ ಬಗೆಹರಿಸುವ ಮೇಧಾವಿತನ ಅವನಲ್ಲಿತ್ತು. ನನಗೆ ಅವನ ಬಗ್ಗೆ ತುಂಬಾ ಮೆಚ್ಚುಗೆ ಉಂಟಾಯಿತು. ಇನ್ನು ಕನ್ನಡಿಗನೇ ಆದ ಕೋಲಾರದ ಕೇಶವಮೂರ್ತಿ ಎಂಬ ಹುಡುಗನೂ ಬೇಗನೆ ನನ್ನ ಆತ್ಮೀಯ ಮಿತ್ರನಾಗಿಬಿಟ್ಟ. ಈ ನಡುವೆ ನನ್ನ ಮೆಂಟರ್ ಆಗಿದ್ದ ಪ್ರೊಫೆಸರ್ ಕೆ. ಐ. ವಾಸು ಅವರು ಆಗಾಗ ನನ್ನ ಪರಿಸ್ಥಿತಿಯ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಆದರೆ ನಾನು ಅವರ ಹತ್ತಿರ ನನ್ನ ಹಣಕಾಸಿನ ಪರಿಸ್ಥಿತಿಯ ಬಗ್ಗೆ ಏನೂ ಹೇಳಲಿಲ್ಲ.

ಹಾಸ್ಟೆಲಿನಲ್ಲಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನನಗೆ ಇನ್ನೊಂದು ಕೊಠಡಿಗೆ ಶಿಫ್ಟ್ ಮಾಡುವಂತೆ ವಾರ್ಡನ್ ಅವರಿಂದ ಆದೇಶ ಬಂತು. ಆ ವೇಳೆಗೆ ನನ್ನ ರೂಮ್ ಮೇಟ್ ಸುಬ್ಬರಾವ್ ಅವರಿಗೆ ನಾನು ಕಿರಿಯ ಸಹೋದರನಂತಾಗಿಬಿಟ್ಟಿದ್ದೆ. ಹಾಗಾಗಿ ನಾನು ರೂಮ್ ಬಿಟ್ಟು ಹೊರಡುವಾಗ ಸ್ವಲ್ಪ ಭಾವನಾತ್ಮಕ ಸನ್ನಿವೇಶ ಉಂಟಾಯಿತು. ನನ್ನ ಹೊಸ ರೂಮ್ ಮೇಟ್ ಸುಬ್ರಮಣಿಯನ್ ತಮಿಳುನಾಡಿನವರಾಗಿದ್ದು ಎಲ್ಕ್ಟ್ರಿಕಲ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದರು. ತುಂಬಾ ಧಾರ್ಮಿಕ ಸ್ವಭಾವದ ಸುಬ್ರಮಣಿಯನ್ ಅಷ್ಟೇ ಸ್ನೇಹಜೀವಿಯೂ ಆಗಿದ್ದರು. ನಾನು ಅವರೊಡನೆ ಬಹು ಬೇಗನೆ ಹೊಂದಿಕೊಂಡೆ.

ಇನ್ಸ್ಟಿಟ್ಯೂಟಿನಲ್ಲಿ ಒಂದು ಪ್ರತ್ಯೇಕ ಇಂಗ್ಲಿಷ್ ಡಿಪಾರ್ಟ್ಮೆಂಟ್ ಇದ್ದು ಅಮೆರಿಕಾದ ಪ್ರೊಫೆಸರ್ ಎಲ್.ಐ.ಲೆವಿಸ್ ಎನ್ನುವರು ಅದರ ಮುಖ್ಯಸ್ಥರಾಗಿದ್ದರು. ಮೊದಲ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಲ್ಲಾ ಒಂದು ಇಂಗ್ಲಿಷ್ ಟೆಸ್ಟ್ ನಲ್ಲಿ ಭಾಗವಹಿಸಬೇಕಿತ್ತು. ಅದರಲ್ಲಿ ಉತ್ತೀರ್ಣರಾಗದವರು ಇಂಗ್ಲಿಷ್ ಡಿಪಾರ್ಟ್ಮೆಂಟ್ ನಡೆಸುತ್ತಿದ್ದ ಒಂದು ಸ್ಪೆಷಲ್ ಕೋರ್ಸಿಗೆ ಸೇರಿಕೊಳ್ಳಬೇಕಾಗಿತ್ತು. ವಿಚಿತ್ರವೆಂದರೆ ನಮ್ಮಲ್ಲಿ ಅನೇಕರು ಅದರಲ್ಲಿ ಪಾಸಾಗದೇ ಕೋರ್ಸಿಗೆ ಸೇರಿಕೊಳ್ಳಬೇಕಾಯಿತು. ನಾನು ಆ ಟೆಸ್ಟಿನಲ್ಲಿ ತುಂಬಾ ಉತ್ತಮ ಅಂಕಗಳನ್ನು ಪಡೆದು ಪ್ರೊಫೆಸರ್ ಎಲ್.ಐ.ಲೆವಿಸ್  ಅವರಿಂದ ಒಂದು ಸರ್ಟಿಫಿಕೇಟ್ ಪಡೆದುಕೊಂಡೆ. ನನಗೆ ಆ ಬಗ್ಗೆ ತುಂಬಾ ಹೆಮ್ಮೆಯೂ ಆಯಿತು.

ಇನ್ಸ್ಟಿಟ್ಯೂಟಿನ ವಿದ್ಯಾರ್ಥಿಗಳಿಗೆ ಅವರ ಮೆರಿಟ್ ಆಧಾರದ ಮೇಲೆ ಸ್ಕಾಲರ್ಷಿಪ್ ನೀಡಲಾಗುತ್ತಿದ್ದು ನಾನು ಅದಕ್ಕೆ ಅರ್ಹನೂ ಆಗಿದ್ದೆ. ಆದರೆ ಸರ್ಕಾರದ ಸ್ಕಾಲರ್ಷಿಪ್ ಬರುತ್ತಿರುವವರಿಗೆ ಅದಕ್ಕೆ ಅರ್ಹತೆ ಇರಲಿಲ್ಲ. ನನಗೆ Rank ಪಡೆದುದಕ್ಕೆ ತಿಂಗಳಿಗೆ ೧೦೦ ರೂಪಾಯಿ ಸ್ಕಾಲರ್ಷಿಪ್ ಸಿಗುವ ಭರವಸೆ ಸಿಕ್ಕಿತ್ತು. ಅಲ್ಲದೇ ಇನ್ಸ್ಟಿಟ್ಯೂಟಿನ ಸ್ಕಾಲರ್ಷಿಪ್ ಮೊತ್ತ ತಿಂಗಳಿಗೆ ೭೫ ರೂಪಾಯಿ ಮಾತ್ರ ಆಗಿತ್ತು.

ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಂದ ವಿದ್ಯಾರ್ಥಿಗಳಿಗೆ ಅವರು ಮನೆಯಿಂದಲೇ ಬರುತ್ತಿದ್ದರಿಂದ ಹಾಸ್ಟೆಲಿನ ಖರ್ಚು ಇರಲಿಲ್ಲ. ಇನ್ನು ಬೇರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರಿಗೆ ಅವರ ಪೋಷಕರಿಂದ ಸಾಕಷ್ಟು ಹಣ ಪ್ರತಿ ತಿಂಗಳೂ ಬ್ಯಾಂಕಿಗೆ ಬರುತ್ತಿತ್ತು. ಅವರು ಬೆಂಗಳೂರಿನಲ್ಲಿ ಸಿನಿಮಾ, ಹೋಟೆಲ್, ಇತ್ಯಾದಿಗಳಿಗೆ ಧಾರಾಳವಾಗಿಯೇ ಖರ್ಚು ಮಾಡುತ್ತಿದ್ದರು. ನನ್ನ ರೂಮ್ ಮೇಟ್ ಬಳಿಗೆ ತುಂಬಾ ಸ್ನೇಹಿತರು ಮಾತನಾಡಲು ಬರುತ್ತಿದ್ದರು. ಅವರ ಸಂಭಾಷಣೆಯಿಂದ ಒಂದು ವಿಷಯ ಸ್ಪಷ್ಟವಾಗಿ ಅರಿವಾಗುತ್ತಿತ್ತು. ಅವರೆಲ್ಲಾ ತಮ್ಮ ಮುಂದಿನ ವಿದ್ಯಾಭ್ಯಾಸ, ಉದ್ಯೋಗ ಮತ್ತು ಸಂಬಳದ ಬಗ್ಗೆ ಸ್ಪಷ್ಟ ಗುರಿಯನ್ನು ಹೊಂದಿದ್ದರು. ಒಬ್ಬ ವಿದ್ಯಾರ್ಥಿಯಂತೂ ತನ್ನ ಮುಂದಿನ ಗಳಿಕೆಯ ಬಗ್ಗೆ ಒಂದು ಚಾರ್ಟನ್ನೇ ತಯಾರು ಮಾಡಿಬಿಟ್ಟಿದ್ದನ್ನೂ ನಾನು ನೋಡಿದೆ! ಉಳಿದ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಮೆಟಲರ್ಜಿ ವಿದ್ಯಾರ್ಥಿಗಳ ಬಗ್ಗೆ ತುಂಬಾ ಅಸೂಯೆ ಇತ್ತು. ಏಕೆಂದರೆ ಆ ದಿನಗಳಲ್ಲಿ ಮೆಟಲರ್ಜಿಯಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಿಗೆ ಅಮೇರಿಕಾದಲ್ಲಿ ತುಂಬಾ ಬೇಡಿಕೆ ಇತ್ತಂತೆ. ಆದ್ದರಿಂದ ಅವರು ಅಮೇರಿಕಾ ತಲುಪುವ  ಬಗ್ಗೆ ಯಾವುದೇ ಅನುಮಾನಗಳಿರಲಿಲ್ಲವಂತೆ! ಇನ್ನುಳಿದವರಿಗೆ ಟಾಟಾ ಐರನ್ ಮತ್ತು ಸ್ಟೀಲ್ ಕಂಪನಿಯಲ್ಲಿ (TISCO) ಕೆಲಸದ ಗ್ಯಾರಂಟಿ ಇತ್ತು.

ಇನ್ಸ್ಟಿಟ್ಯೂಟಿನಲ್ಲಿ ನನ್ನ ವಾಸದ ಮತ್ತೊಂದು ತಿಂಗಳು ಕಳೆದು ಹೋಯಿತು. ಹಾಸ್ಟೆಲಿನ ಫೀ  ಕಟ್ಟಿದ ನಂತರ ನನ್ನ ಬ್ಯಾಂಕ್ ಖಾತೆಯಲ್ಲಿನ ಹಣದ ಮೊತ್ತ ಕೆಳಗೆ ಹೋಗುತ್ತಿರುವುದನ್ನು ನೋಡಿ ನನ್ನ ತಲೆ ಬಿಸಿಯಾಗತೊಡಗಿತು. ಮಣಿಪಾಲ್ ಅಕಾಡೆಮಿಗೆ ನಾನು ಪುನಃ ಒಂದು ಪತ್ರ ಬರೆದೆ ಮತ್ತು ಎನ್.ಆರ್.ಭಟ್ ಅವರಿಗೆ ಅವರು ನೀಡಿದ್ದ ಹಣಕಾಸಿನ ಸಹಾಯದ ಭರವಸೆಯನ್ನು ನೆನಪಿಸಿ ಇನ್ನೂ ಒಂದು ಪತ್ರ ಬರೆದೆ.  ಹಾಗೆಯೇ ಫಿಸಿಕ್ಸ್ ಡಿಪಾರ್ಟ್ಮೆಂಟಿನ ಅಸೋಸಿಯೇಟ್ ಪ್ರೊಫೆಸರ್ ಭಟ್ ಅವರನ್ನು ಇನ್ನೊಮ್ಮೆ ಭೇಟಿ ಮಾಡಿ ನನ್ನ ಹಣಕಾಸಿನ ಸಮಸ್ಯೆಯನ್ನು ಹೇಳಿಕೊಂಡೆ. ಅವರು ನನಗೆ ಆ ದಿನದ ನ್ಯೂಸ್ ಪೇಪರಿನಲ್ಲಿ ಕೆನರಾ ಬ್ಯಾಂಕಿನವರು ಪ್ರಕಟಿಸಿದ್ದ ಒಂದು ಅನೌನ್ಸಮೆಂಟನ್ನು ತೋರಿಸಿದರು. ಆ ಪ್ರಕಟಣೆಯಲ್ಲಿ ಕೆನರಾ ಬ್ಯಾಂಕ್ ಗೋಲ್ಡನ್ ಜ್ಯೂಬಿಲಿ ಸ್ಕಾಲರ್ಷಿಪ್ ಗೆ ಅರ್ಹರಾದ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿತ್ತು. ಭಟ್ ಅವರಿಗೆ ಆ ಸ್ಕಾಲರ್ಷಿಪ್ ಕಮಿಟಿಗೆ ಸೆಕ್ರೆಟರಿಯಾಗಿದ್ದ ಎಸ್. ಆರ್.  ಪ್ರಭು ಅವರ ಪರಿಚಯವಿತ್ತಂತೆ. ಅವರನ್ನು ಹೋಗಿ ಭೇಟಿ ಮಾಡುವಂತೆ ನನಗೆ ಸಲಹೆ ಕೊಟ್ಟರು.

ನಾನು ಮಾರನೇ ದಿನವೇ ಜೆ. ಸಿ. ರಸ್ತೆಯಲ್ಲಿದ್ದ ಕೆನರಾ ಬ್ಯಾಂಕಿನ ಹೆಡ್ ಆಫೀಸಿಗೆ ಹೋದೆ. ಅದರ ಒಂದು ಮಹಡಿಯಲ್ಲಿದ್ದ ಸ್ಕಾಲರ್ಷಿಪ್ ವಿಭಾಗಕ್ಕೆ ನನ್ನನ್ನು ಕಳಿಸಲಾಯಿತು. ಅಲ್ಲಿದ್ದ ಒಬ್ಬ ವ್ಯಕ್ತಿಯ ಬಳಿಗೆ ನಾನು ಹೋಗಿ ನಾನು  ಸ್ಕಾಲರ್ಷಿಪ್ ಗೆ ಅರ್ಜಿ ಸಲ್ಲಿಸಲು ಬಂದುದಾಗಿ ತಿಳಿಸಿದೆ. ಆ ವ್ಯಕ್ತಿ ನಾನು ಎಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದಾಗಿ ಪ್ರಶ್ನಿಸಿದರು. ನಾನು ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ನಲ್ಲಿ (IISc) ಮೆಟಲರ್ಜಿ ಇಂಜಿನಿಯರಿಂಗ್ ಓದುತ್ತಿರುವುದಾಗಿ ತಿಳಿಸಿದೆ. ಆದರೆ ಆ ವ್ಯಕ್ತಿ ನನ್ನ ಮಾತನ್ನು ನಂಬಲಿಲ್ಲ! ಅವರ ಪ್ರಕಾರ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್ ಸ್ಥಾಪಿಸಿದ ಉದ್ದೇಶವೇ ಸೈನ್ಸ್ ಅಥವಾ ವಿಜ್ಞಾನದ ಶಿಕ್ಷಣ ನೀಡುವುದಕ್ಕೆ. ಆದ್ದರಿಂದ ಅಲ್ಲಿ ಇಂಜಿನಿಯರಿಂಗ್ ಅಭ್ಯಾಸಕ್ಕೆ ಆಸ್ಪದ ಇರುವುದೇ ಸಾದ್ಯವಿರಲಿಲ್ಲ! ನಾನು  ಬೇರೆ ಯಾವುದೇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದರೆ ಅರ್ಜಿ ಸಲ್ಲಿಸಬಹುದಿತ್ತೆಂದು ಸ್ಪಷ್ಟಪಡಿಸಿಬಿಟ್ಟರು. ನನಗೆ ಆ ವ್ಯಕ್ತಿಯ ಮಾತನ್ನು ಕೇಳಿ ಪರಮಾಶ್ಚರ್ಯವಾಯಿತು. ಆ ಮಹಾನುಭಾವ ಪ್ರಪಂಚದಲ್ಲೇ ಪ್ರಸಿದ್ಧಿ ಪಡೆದಿದ್ದ ಇನ್ಸ್ಟಿಟ್ಯೂಟ್ ನೀಡುತ್ತಿದ್ದ ಇಂಜಿನಿಯರಿಂಗ್ ಕೋರ್ಸ್ ಒಂದಕ್ಕೆ ಸ್ಕಾಲರ್ಷಿಪ್ ಮಂಜೂರು ಮಾಡಲು ತಯಾರಿರಲಿಲ್ಲ! 

ನನಗೆ ಇದ್ದಕ್ಕಿದಂತೇ ನಾನೊಂದು ದೊಡ್ಡ ತಪ್ಪನ್ನು ಮಾಡಿಬಿಟ್ಟೆನೆಂದು ಅರಿವಾಯಿತು. ಭಟ್ ಅವರು ನನಗೆ ಅವರ ಪರಿಚಯಸ್ತರಾದ ಎಸ್. ಆರ್.  ಪ್ರಭು  ಅವರನ್ನು ಭೇಟಿ ಮಾಡಲು ಹೇಳಿದ್ದರು. ಆದರೆ ನಾನು ಇನ್ಸ್ಟಿಟ್ಯೂಟಿನ ಬಗ್ಗೆ ಏನೂ ಅರಿವಿಲ್ಲದೇ  ತನ್ನದೇ ಪ್ರಪಂಚದಲ್ಲಿದ್ದ ವ್ಯಕ್ತಿಯೊಬ್ಬನೊಡನೆ ವ್ಯರ್ಥವಾಗಿ ಮಾತನಾಡಿದೆನೆಂದು ಅನಿಸಿತು. ನಾನು ಕೂಡಲೇ ಆ ವ್ಯಕ್ತಿಯ ಹತ್ತಿರ ಎಸ್. ಆರ್.  ಪ್ರಭು  ಅವರು ಎಲ್ಲಿರುವರೆಂದು ಕೇಳಿದೆ. ಆಗ ಆ ವ್ಯಕ್ತಿ ತಾನೇ  ಎಸ್. ಆರ್.  ಪ್ರಭು ಎಂದು ಹೇಳಿದಾಗ ನನಗಾದ ಆಶ್ಚರ್ಯ ಅಷ್ಟಿಷ್ಟಲ್ಲ! ನಾನು ಪ್ರೊಫೆಸರ್ ಭಟ್ ಅವರು ನನ್ನನ್ನು ಅವರ ಬಳಿಗೆ ಕಳಿಸಿದ್ದಾಗಿ ಹೇಳಿದಾಗ ಅವರು ತಮಗೆ ಭಟ್ ಅವರು ಗೊತ್ತೆಂದು ಹೇಳಿದರು. ಆದರೆ ಇನ್ಸ್ಟಿಟ್ಯೂಟಿನಲ್ಲಿ  ನಡೆಸುವ ಮೂರು ವರ್ಷದ ಇಂಜಿನಿಯರಿಂಗ್ ಕೋರ್ಸ್ ಒಂದಕ್ಕೆ ತಾವು ಸ್ಕಾಲರ್ಷಿಪ್ ಮಂಜೂರು ಮಾಡಲು ಸಾಧ್ಯವಿಲ್ಲವೆಂದು ಪುನಃ ಸ್ಪಷ್ಟಪಡಿಸಿದರು. ಅದು ಕೆನರಾ ಬ್ಯಾಂಕಿನಲ್ಲಿ ನನ್ನ ಮೊಟ್ಟ ಮೊದಲ ಅನುಭವವಾಗಿತ್ತು.

ಆಮೇಲೆ ನಾನು ಡೈರೆಕ್ಟರ್ ಅಫ್ ಕೊಲಿಜಿಯೇಟ್ ಎಜುಕೇಶನ್ ಅವರ ಆಫೀಸಿಗೆ ಹೋಗಿ ನನಗೆ ಬರಬೇಕಾದ ಮೆರಿಟ್ ಸ್ಕಾಲರ್ಷಿಪ್ ಬಗ್ಗೆ ವಿಚಾರಿಸಿದೆ. ಆ ವೇಳೆಗೆ ಮೈಸೂರು ವಿಶ್ವವಿದ್ಯಾನಿಲಯದಿಂದ Rank ಪಡೆದ ವಿದ್ಯಾರ್ಥಿಗಳ ಪಟ್ಟಿ ಅಲ್ಲಿಗೆ ತಲುಪಿತ್ತು. ಅದರಲ್ಲಿ ನನ್ನ ಹೆಸರು ಇರುವುದಾಗಿಯೂ ಮತ್ತು ಶೀಘ್ರದಲ್ಲೇ ನನಗೆ ಸ್ಕಾಲರ್ಷಿಪ್ ಮಂಜೂರು ಮಾಡಿದ ಪತ್ರ  ಕಳಿಸುವುದಾಗಿಯೂ ಡೈರೆಕ್ಟರ್ ಅವರು ನನಗೆ ಭರವಸೆ ಕೊಟ್ಟರು. ಆದರೆ ನನಗೊಂದು ಆಘಾತ ಕಾದಿತ್ತು. ಅವರ ಪ್ರಕಾರ ಸ್ಕಾಲರ್ಷಿಪ್ ನ ಪೂರ್ತಿ ಹಣವನ್ನು ಶೈಕ್ಷಣಿಕ ವರ್ಷದ ಕೊನೆಯಲ್ಲಿ ಒಮ್ಮೆಗೇ ಕೊಡಲಾಗುವುದಂತೆ.  ಅಲ್ಲಿಯವರೆಗೆ ಅದು ನನ್ನ ಕೈಸೇರುವ ಸಾಧ್ಯತೆಯೇ ಇಲ್ಲವಂತೆ!

ಹೀಗೆ ಒಂದಾದ ಮೇಲೆ ಒಂದರಂತೆ ಆತಂಕದ ಬೆಳವಣಿಗೆಗಳನ್ನು ಕಂಡು ನನಗೆ  ದಿಕ್ಕೇ ತೋಚದಂತಾಯಿತು. ಅದೇ ವೇಳೆ ಪುಟ್ಟಣ್ಣನ ನೌಕರಿ ಹುಡುಕಾಟದಲ್ಲಿ ಕೂಡ ಯಾವುದೇ  ಯಶಸ್ಸಿನ ಸೂಚನೆಗಳು ಕಾಣುತ್ತಿರಲಿಲ್ಲ. ಬ್ಯಾಂಕಿನ ಶಾಖೆಯಲ್ಲಿ  ನನ್ನ ಖಾತೆಯಲ್ಲಿದ್ದ  ಹಣ ಕರಗುತ್ತಾ ಹೋಗುತ್ತಿದ್ದಂತೇ ನನ್ನ ಆತಂಕ ಹೆಚ್ಚುತ್ತಲೇ ಹೋಯಿತು. ನಾನು ನಿಧಾನವಾಗಿ  ಖಾಲಿ ಜೇಬಿನ ಪರಿಸ್ಥಿತಿಯತ್ತ ವಾಪಾಸ್ ಹೋಗತೊಡಗಿದ್ದೆ.

--------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ--------

No comments: