ನನಗೆ ನೆನಪಿರುವ ಮುಖ್ಯ ಧಾರಾವಾಹಿಗಳಲ್ಲಿ ಮೊದಲನೆಯದು ಅವಳಿ ಮಕ್ಕಳು,
ನಂತರ ಅಪೂರ್ವ ಸ್ಟಂಭ, ರತ್ನ ಕಿರೀಟ, ಧೂಮಕೇತು, ಮಕರ ದೇವತೆ, ಮೂವರು ಮಾಂತ್ರಿಕರು ಮತ್ತು ಕಂಚಿನಕೋಟೆ.
ಈ ಎಲ್ಲಾ ಧಾರಾವಾಹಿಗಳೂ ಕೊನೆಯ ಕಂತಿನ ತುತ್ತತುದಿಯವರೆಗೆ ನಮ್ಮ ಆತಂಕಪೂರ್ಣ ಕುತೂಹಲವನ್ನು ಹಿಡಿದಿಟ್ಟುಕೊಳ್ಳುತ್ತಿದ್ದ
ಸಾಹಸಮಯ ಕಥೆಗಳು. ಪ್ರತಿಯೊಂದು ಕಂತಿನ ಅಂತ್ಯವೂ :ಮುಂದೇನಾಯಿತು?" ಎಂದು ತುದಿಗಾಲಮೇಲೆ ಕಾಯುವಂತೆ
ಮಾಡುವ ಘಟನೆಯೊಂದಿಗೆ ಧುತ್ತನೆ ನಿಂತುಹೋಗಿಬಿಡುತ್ತಿತ್ತು. ನಾವು ಉಸಿರು ಬಿಗಿಹಿಡಿದು ಜಾತಕ ಪಕ್ಷಿಯಂತೆ
ಕನಿಷ್ಠ ಮೂವತ್ತು ದಿನಗಳು ಕಾಯಬೇಕಿತ್ತು.
ಜಾತಕ
ಕಥೆಗಳು
ಚಂದಮಾಮದಲ್ಲಿ ನಮಗೆ ತುಂಬಾ ಇಷ್ಟವಾಗಿ
ಸುದೀರ್ಘಕಾಲ ಪ್ರಕಟವಾದ ಕಥೆಗಳಲ್ಲಿ ಗೌತಮ ಬುದ್ಧನ ಪೂರ್ವಜನ್ಮಕ್ಕೆ ಸಂಬಂಧಿಸಿದ ಜಾತಕ ಕಥೆಗಳೂ ಸೇರಿದ್ದವು.
"ಬ್ರಹ್ಮದತ್ತನು ಕಾಶಿ ರಾಜ್ಯವನ್ನು ಅಳುತ್ತಿದ್ದ ಕಾಲದಲ್ಲಿ ಬೋಧಿಸತ್ವನು --------ಆಗಿ ಜನ್ಮ
ತಾಳಿದನು". ಇದು ಪ್ರತಿಕಥೆಯ ಪ್ರಾರಂಭ ವಾಕ್ಯವಾಗಿತ್ತು. ಮೊದಲಿನ ಚಿತ್ರದಲ್ಲಿ ಬುದ್ಧನು ತನ್ನ
ಶಿಷ್ಯರಿಗೆ ಕಥೆ ಹೇಳುವ ದೃಶ್ಯ ಇರುತ್ತಿತ್ತು. ಕಥೆಗಳು
ಕುತೂಹಲಕಾರಿಯಾಗಿರುತ್ತಿದ್ದುದು ಮಾತ್ರವಲ್ಲ ಮಕ್ಕಳಾದ ನಾವು ಕೂಡ ಮೆಚ್ಚುವಂತ ನೈತಿಕ ಮೌಲ್ಯಗಳನ್ನೊಡಗೊಂಡಿರುತ್ತಿತ್ತು.
ಪಂಚತಂತ್ರ
ಮತ್ತು ಬೇತಾಳ ಕಥೆಗಳು
ಪದ್ಯರೂಪದಲ್ಲಿ ಪ್ರಕಟವಾಗುತ್ತಿದ್ದ
ಪಂಚತಂತ್ರ ಕಥೆಗಳು ಇನ್ನೊಂದು ಮುಖ್ಯ ಆಕರ್ಷಣೆ. ಒಂದಿಷ್ಟು ತಿಂಗಳು ಮಾರಂಗ ಎಂಬ ಲೇಖಕರು ಮತ್ತು ಇನ್ನು
ಕೆಲವು ತಿಂಗಳು ಮದ್ವಗಿರಿ ಜಲನಾಭತನಯ ಎಂಬುವರೂ ಬರೆಯುತ್ತಿದ್ದರು. ಪ್ರತಿಭಾಪೂರ್ಣವಾಗಿ ನೇಯ್ದ ಪದ್ಯಗಳು.
ನಾವು ಎರಡು ಬಾರಿ ಗಟ್ಟಿಯಾಗಿ ಓದಿಕೊಂಡರೆ ಸಾಕು ಬಾಯಿಪಾಠವಾಯಿತೆಂದೇ ಲೆಕ್ಕ. ಸರಳವಾದ ಪದಪ್ರಯೋಗದಿಂದ
ಕೂಡಿರುತ್ತಿದ್ದವು.
ಮತ್ತೊಂದು ಕುತೂಹಲಕಾರಿ ಧಾರಾವಾಹಿಯೆಂದರೆ
"ಬೇತಾಳ ಕಥೆಗಳು". ಸ್ಮಶಾನದಲ್ಲಿ ತ್ರಿವಿಕ್ರಮನು ಹೆಗಲಮೇಲೆ ಶವ ಹೊತ್ತುಕೊಂಡು ಹೋಗುತ್ತಿದ್ದ
ಎಂದಿಗೂ ಮರೆಯಲಾರದ ಆ ಕೌತುಕಮಯ ಅಪೂರ್ವ ಚಿತ್ರ ಶಂಕರ್ ಅವರ ಕುಂಚದಿಂದ ಮೂಡಿ ಬಂದಿತ್ತು.
ಕಥೆಯ ಅಂತ್ಯದಲ್ಲಿ ಬೇತಾಳ ಶವದೊಂದಿಗೆ
ಸೇರಿ ತ್ರಿವಿಕ್ರಮನ ಕೈಯಿಂದ ಜಾರಿ ಮರದತ್ತ ಸಾಗುತ್ತಿರುವ ಅಪೂರ್ವ ಚಿತ್ರಗಳೂ ಕೂಡ ನೆನಪನ್ನು ಕಾಡುತ್ತಾ
ಉಳಿದುಕೊಂಡುಬಿಟ್ಟಿವೆ. ಹೇಳಲೇ ಬೇಕಾದ ಇನ್ನೊಂದು ವಿಚಾರವೆಂದರೆ ಪ್ರತಿ ಕಥೆಯ ಕೊನೆಗೂ ಅದೇ ತ್ರಿವಿಕ್ರಮ,
ಅದೇ ಶವ, ಅದೇ ಸ್ಮಶಾನ ಮತ್ತು ಅದೇ ಮರ. ಆದರೆ ಪ್ರತಿ ಬಾರಿಯೂ ವಿಭಿನ್ನವಾಗಿ, ಹೊಸ ಹೊಸ ದೃಶ್ಯ ಸೃಷ್ಟಿಸುತ್ತಿದ್ದ
ಶಂಕರ್ ಅವರ ಪ್ರತಿಭೆ ಬೆರಗು ಹುಟ್ಟಿಸುವಂಥದ್ದು.
ಶವವನ್ನು ಸ್ಮಶಾನದಿಂದ ಹಿಂದೆ ತರುವಾಗ
ಒಂದೂ ಮಾತನಾಡದೆ ಮೌನವಾಗಿರಬೇಕೆಂಬುದು ನಿಯಮ. ಮಾತನಾಡಿದರೆ
ಮತ್ತೆ ಬೇತಾಳ ಶವದೊಂದಿಗೆ ಮರ ಸೇರಿ ನೇತಾಡತೊಡಗುತ್ತದೆ. ರಾಜನ ಮೌನಭಂಗ ಮಾಡುವ ದುರುದ್ದೇಶದಿಂದ ಬೇತಾಳ
ಪ್ರತಿಬಾರಿಯೂ ಚಿತ್ರವಿಚಿತ್ರವಾದ, ಆದರೆ ಅಷ್ಟೇ ಕುತೂಹಲಕಾರಿ ಕಥೆಯನ್ನು ಹೇಳಿ ಕಡೆಯಲ್ಲಿ ಒಗಟಿನಂತ
ಒಂದು ಪ್ರಶ್ನೆ ಕೇಳುತ್ತದೆ. "ಈ ಪ್ರಶ್ನೆಗೆ ಉತ್ತರ ಗೊತ್ತಿದ್ದೂ ಹೇಳದಿದ್ದರೆ ನಿನ್ನ ತಲೆ
ಸಿಡಿದು ಸಹಸ್ರಹೋಳಾದೀತು” ಎಂಬ ಧಮಿಕಿ ಬೇರೆ ಹಾಕುತ್ತದೆ!
ರಾಜಾ ತ್ರಿವಿಕ್ರಮ ಮಹಾ ಮೇಧಾವಿ. ಅವನಿಗೆ
ಉತ್ತರ ಹೊಳೆಯದಿರುವುದುಂಟೇ? ಛಲಬಿಡದ ತ್ರಿವಿಕ್ರಮ ಮತ್ತೆಮತ್ತೆ ಶವ ಸಾಗಿಸಲು ಪ್ರಯತ್ನಿಸುತ್ತಾನೆ.
ಬೇತಾಳ ಮತ್ತೆಮತ್ತೆ ಕಥೆ ಹೇಳುತ್ತಲೇ ಇರುತ್ತೆ!
ಎಂತಹ ಕಥೆಯೇ ಆಗಲಿ ಒಂದಲ್ಲ ಒಂದು ದಿನ
ಮುಗಿಯಲೇ ಬೇಕಲ್ಲ. ರಾಜನಿಗೆ ಉತ್ತರ ಹೇಳಲಾಗದ ಆ ಕೊನೆಯ ಕಥೆಗಾಗಿ ನಾವು ತುದಿಗಾಲಿನಲ್ಲಿ ಕಾಯುತ್ತಲೇ
ಇದ್ದೆವು. ಆದರೆ ಎಂತಹ ಅನಾಹುತ ಆಯಿತು ನೋಡಿ! ಇನ್ನೇನು ಕಥೆಗಳು ಮುಗಿಯುತ್ತಾ ಬಂದವು ಎಂಬ ಸೂಚನೆ
ನಮಗೆ ಸಿಗುತ್ತಿರುವಾಗಲೇ ಸಂಪಾದಕರು ಒಂದು ಪ್ರಕಟಣೆಯಲ್ಲಿ ಓದುಗರಿಗೆ ಒಂದು ಅವಕಾಶ ಕಲ್ಪಿಸಿದರು
- "ಆಸಕ್ತರು ತಮ್ಮದೇ ಕಲ್ಪನೆಯ ಬೇತಾಳ ಕಥೆಯನ್ನು ಸೃಷ್ಟಿಸಿ ಕಳಿಸಿ ಕೊಡಬಹುದು".
ಪರಿಣಾಮ
ಏನಾಯಿತೆಂದರೆ ಬೇತಾಳ ಸಂಪಾದಕರ ಬೆನ್ನು ಬಿಡಲೇ ಇಲ್ಲ! ಪತ್ರಿಕೆಯ ಕಚೇರಿ ಕಥೆಗಳ ಪ್ರವಾಹದಿಂದ ತುಂಬಿಹೋಗಿರಬೇಕು! ಇವತ್ತಿಗೂ ಅವು ಎಂದೂಮುಗಿಯದ ಕಥೆಗಳಾಗಿಯೇ ಉಳಿದುಹೋಗಿವೆ!
ಈ ಎಲ್ಲಾ ಬೆಳವಣಿಗೆಗಳಿಂದಾಗಿ ಚಂದಮಾಮದಲ್ಲಿ
ಮೇಧಾವಿ ತ್ರಿವಿಕ್ರಮನಿಗೆ ಉತ್ತರ ಹೇಳಲಾಗದ ಕೊನೆಯ
ಕಥೆಯನ್ನು ಓದುವ ಅವಕಾಶದಿಂದ ನಾವು ಶಾಶ್ವತವಾಗಿ ವಂಚಿತರಾಗಬೇಕಾಯಿತು. ನಾವೇನೋ ಕುತೂಹಲ ತಾಳಲಾರದೇ
ಆ ಕಥೆಯನ್ನು ಬೇರೆಲ್ಲೋ ಓದಿದೆವೆನ್ನಿ. ಆದರೆ ಈಗ ಅದರ ಅಸ್ಪಷ್ಟ ನೆನಪು ಮಾತ್ರ ಉಳಿದಿದೆ. ಅದನ್ನೇ
ಪ್ರಾಯಶಃ ಶಂಕರ್ ಅವರ ಚಿತ್ರದೊಂದಿಗೆ ಬಾಲ್ಯದಲ್ಲೇ
ಓದಿದ್ದರೆ ಜನ್ಮ ಜನ್ಮಾಂತರಕ್ಕೂ ಮರೆಯುತ್ತಿರಲಿಲ್ಲವೇನೋ!
ಪರೋಪಕಾರಿ
ಪಾಪಣ್ಣ ಮತ್ತು ಗುಂಡು ಭೀಮಣ್ಣನ ಕಥೆಗಳು
೧೯೬೨ರಿಂದ ಅನೇಕ ತಿಂಗಳ ಕಾಲ ಪ್ರಕಟವಾಗುತ್ತಿದ್ದ
"ಪರೋಪಕಾರಿ ಪಾಪಣ್ಣ", ಸರಳ ಸ್ವಭಾವದ ಹುಡುಗನೊಬ್ಬ ಸಿಕ್ಕಿಸಿಕ್ಕಿದವರಿಗೆಲ್ಲಾ ಸಹಾಯ
ಮಾಡಲು ಹೋಗಿ ತೊಂದರೆಗೆ ಒಳಗಾಗುತ್ತಿದ್ದ ಕಥೆ. ಬರೆಹಗಾರ್ತಿ ಸುನಂದ. ತುಂಬಾ ಮೋಜಿನಿಂದ ಓದಿಸಿಕೊಂಡು
ಹೋಗುತ್ತಿದ್ದ ಕಥೆ. ಇದಾದ ನಂತರ ಇದೇ ಸುನಂದ ಅವರ "ಗುಂಡು ಭೀಮಣ್ಣನ ಕಥೆಗಳು" ಹಲವಾರು
ತಿಂಗಳು ಪ್ರಕಟವಾಗುತ್ತಿದ್ದವು. ಪಾಪಣ್ಣನದೇ ಇನ್ನೊಂದು ಅವತಾರ. ಅಷ್ಟೇ ಸೊಗಸು.
ಪದ್ಯರೂಪದ
ಕಥೆಗಳು
ಧಾರಾವಾಹಿಗಳಲ್ಲದ ಉಳಿದ ಬರಹಗಳ ಬಗ್ಗೆ
ಹೇಳುವ ಮೊದಲು ಪ್ರತಿ ಸಂಚಿಕೆಯ ಪ್ರಾರಂಭದಲ್ಲಿ ಮುದ್ರಿತವಾಗುತ್ತಿದ್ದ ಪದ್ಯರೂಪದ ಕಥೆಗಳ ಬಗ್ಗೆಯೂ
ಹೇಳಲೇ ಬೇಕು. ಹೆಚ್ಚಿನ ಪದ್ಯಗಳು ನವಗಿರಿನಂದ ಎಂಬ ಲೇಖಕರದು. ತೆಲುಗಿನಿಂದ ಅನುವಾದಗೊಂಡವೇ ಹೆಚ್ಚು.
ಲೇಖಕರ ಹೆಸರೂ ಸೇರಿ ನಮಗೆ ಎಲ್ಲಾ ಪದ್ಯಗಳೂ ಕಂಠಪಾಠವಾಗಿಬಿಟ್ಟಿದ್ದವು. ಪದ್ಯದ ಕೊನೆಯಲ್ಲಿ 'ನವಗಿರಿನಂದ,
ತೆಲುಗಿನಿಂದ' ಎಂಬ ಸಾಲನ್ನೂ ರಾಗವಾಗಿ ಹೇಳುತ್ತಿದ್ದೆವು.
'ನವಗಿರಿನಂದ,
ತೆಲುಗಿನಿಂದ' ಏನು ಲಯ; ಎಂಥ ಪ್ರಾಸ. ಮತ್ತೆ ಕೆಲವು
ಪದ್ಯಗಳಲ್ಲಿ 'ಕಮಲಪ್ರಿಯ' ಮದರಾಸು ಎಂದಿರುತ್ತಿತ್ತು. ನನ್ನ ನೆನಪಿನಿಂದ ಒಂದು ಪದ್ಯವನ್ನು ಕೆಳಗೆ
ಬರೆದಿದ್ದೇನೆ:
ಇಲಿಮರಿಯ
ಮದುವೆ!
ಮುನಿವರನೊಬ್ಬನು ದಾರಿಯೊಳ್ ನಡೆಯುತ
ಇಲಿಮರಿಯೊಂದನು ನೋಡಿದನು
ಮನದಲಿ ಮರುಗಿ ತಪದ ಪ್ರಭಾವದಿ
ಇಲಿಯನು ಚಲುಬಾಲೆಯ ಮಾಡಿದನು
ಮಾನವ ಕುಲದ ಮಾನಿನಿ ತೆರದಿ
ಮುದ್ದಿನಿಂದಲೇ ಪಾಲಿಸಿದ
ಮೋಹಕ ರೂಪದಿ ಯೊವ್ವನವೇರಲು
ಮದುವೆಗೆ ವರನನು ಶೋಧಿಸಿದ
ರವಿಗಿಂತಲೂ ಬಲಶಾಲಿಯ ಕಾಣೆನು
ಆತನೆ ಕುವರಿಗೆ ಸರಿವರನು
ಎಂದೆನ್ನುತ್ತಲಿ ಸೂರ್ಯನ ಧ್ಯಾನಿಸಿ
ಕುವರಿಯ ಕರವಿಡಿ ಎಂದುಸುರಿದನು
ರವಿ ಇಂತರುಹಿದ ಕುವರಿಯ ನೋಡಿ
ಮೇಘನು ನನಗಿಂತಲು ಗಟ್ಟಿ
ಆತನ ಮುಂದೆ ನನ್ನ ಪ್ರಭಾವವು
ವ್ಯರ್ಥವು ಕೇಳಾತನ ಮನಮುಟ್ಟಿ
ಮೇಘನ ಕುರಿತು ಮುನಿ ಬೇಡಿದನು
ಮೇಘನು ಗಾಭರಿ ಹೊಂದಿದನು
ನೋಡೆಲೆ ಮುನಿವರ ನಿನ್ನೀ ಕುವರಿಗೆ
ಮಾರುತನೇ ಸರಿ ಗುಡುಗಿದನು
ನಿಜ ನಿಜ ಮಾರುತ ಬಲಯುತನು
ಆತನು ಬೀಸಲು ಮೇಘನು ನಿಲ್ಲನು
ಗಾವುದ ದೂರಕೆ ಓಡುವನು
ಎನುತಲೆ ಮುನಿವರ ಸಾಗಿದನು
ವಾಯುದೇವನೇ ಲೋಕಪಾಲನೇ
ನೀನೆ ಕುವರಿಗೆ ಸರಿವರನು
ತಕ್ಕ ವರನಿಹೆ ಕರುಣೆ ತೋರೈ
ಎಂದತಿ ದೈನ್ಯದಿ ಮುನಿ ಬೇಡಿದನು
ವಾಯು ಕರುಣದಿ ಮುನಿಗೆ ನಮಿಸಿ
ದೀರ್ಘ ದಂಡದಿ ನುಡಿದನು
ಸ್ವಾಮಿ ಗೋಡೆಯೇ ಶೂರನಿಹನು
ಆತನೆಡೆ ನಾ ದೀನನು
ವಾಯು ಮಾತನು ಮುನಿಯು ನಂಬಿ
ಗೋಡೆಯನೇ ತಾ ಬೇಡಿದನು
ಬಿಡಬೇಡ ಎನುತಲೆ ಗೋಡೆಯು
ಇಲಿಯ ಹಿರಿಮೆಯ ತೋರಿದನು
ಇಲಿಯೊಂದಲ್ಲಿ ಗೋಡೆಯ ಛೇದಿಸೆ
ಇಲಿಯ ಶೌರ್ಯಕೆ ಮುನಿ ಮೆಚ್ಚಿದನು
ಇಲಿಗೆ ಇಲಿಯೇ ಸಾಟಿಯೆನುತ್ತಲಿ
ಇಲಿಗೆ ಇಲಿ ಬಾಲವ ಕಟ್ಟಿದನು!
ಅತಿ ವಿನೋದಮಯವಾದ ಈ ಕಥೆ ಪ್ರಾಯಶಃ
ಪಂಚತಂತ್ರದ ಕಥೆಯೇ ಇರಬೇಕು. ಆದರೆ ಅದನ್ನು ಅತ್ಯಂತ ಪ್ರಾಸಬದ್ಧವಾಗಿ ಕವನವನ್ನಾಗಿ ಪರಿವರ್ತಿಸಿದ
ಲೇಖಕನ ಜಾಣ್ಮೆಯನ್ನು ಮೆಚ್ಚಲೇ ಬೇಕು.
ಶೃಂಗೇರಿ
ಕೆರೆಮನೆಯ ದಿವಂಗತ ಕೆ ಟಿ ಲಕ್ಷ್ಮೀನಾರಾಯಣ
ನಮ್ಮ ದೂರದ ಸಂಬಂಧಿಗಳೇ ಆದ ಶೃಂಗೇರಿ
ಕೆರೆಮನೆಯ ದಿವಂಗತ ಕೆ ಟಿ ಲಕ್ಷ್ಮೀನಾರಾಯಣ ಅವರು ಬರೆದ ಅನೇಕ ಕಥೆಗಳು ಚಂದಮಾಮದಲ್ಲಿ ಪ್ರಕಟವಾಗುತ್ತಿದ್ದವು.
ಅದರಲ್ಲಿ ತಮಾಷೆಯ ಒಂದು ಪುಟ್ಟ ಕಥೆ ಹೀಗಿತ್ತು:
ರಾಮೇಗೌಡ ಒಂಟೆತ್ತಿನ ಗಾಡಿ ಇಟ್ಟಿದ್ದ.
ಒಂದು ದಿನ ಅವನು ಪಟ್ಟಣಕ್ಕೆ ಗಾಡಿ ಹೊಡೆದುಕೊಂಡು ಹೋದ. ಕಟ್ಟೆಯಲ್ಲಿ ಸುಂಕದ ಅಧಿಕಾರಿ "ಎಂಟಾಣೆ
ಟೋಲ್ (ಸುಂಕ) ಕೊಡು" ಎಂದು ಕೇಳಿದ. ರಾಮೇಗೌಡ "ದಮ್ಮಯ್ಯ, ಇದೊಂದ್ಸಾರಿ
ಬುಟ್ ಬಿಡು" ಎಂದ. ಆತ ಕೇಳಲಿಲ್ಲ. ಹೇಳಿದ : "ಬೋರ್ಡ್ ನೋಡು. ಗಾಡಿ ಹೊಡೆಯುವವರು ಗಾಡಿಗೆ
ಎಂಟಾಣೆ ಟೋಲ್ ಕೊಡಬೇಕು ಎಂದಿದೆ. ನೋಡಿದೆಯಾ?”
ರಾಮೇಗೌಡ ಗಾಡಿ ಹಿಂದಿರುಗಿಸಿದ. ಏನಾದರೂ
ಒಂದು ಫಾರ್ಲೊಂಗ್ ಹಿಂದೆ ಬಂದಿರಬಹುದು. ಅಷ್ಟರಲ್ಲಿ ಒಂದು ಪ್ಲಾನ್ ಹೊಳೆಯಿತು. ತಕ್ಷಣ ಎತ್ತನ್ನು
ಬಿಚ್ಚಿ ಗಾಡಿ ಒಳಕ್ಕೆ ಹಾಕಿದ. ಬಾರುಕೋಲನ್ನು ಅದರ ಬಾಯಲ್ಲಿ ಇಟ್ಟ ತಾನೇ ಎತ್ತಿನಂತೆ ಗಾಡಿಯನ್ನು ಎಳೆದುಕೊಂಡು ಹೊರಟ.
ಪೇಟೆಯಲ್ಲಿ ಎಲ್ಲರೂ ನಗುವವರೇ. ಸುಂಕದ
ಅಧಿಕಾರಿಯೂ ನಗಲಾರಂಭಿಸಿದ. ರಾಮೇಗೌಡನನ್ನು ಕೇಳಿದ. "ಎಂಟಾಣೆ ಕೊಡು". ರಾಮೇಗೌಡ ಹೇಳಿದ:
"ಗಾಡಿ ಹೊಡೆಯುವನನ್ನು ಕೇಳಿರಿ!" ಸುಂಕದವ ಹೊಟ್ಟೆ ತುಂಬಾ ನಕ್ಕು ಅವನನ್ನು ಹಾಗೇ ಬಿಟ್ಟ.
ಹೇಗಿದೆ, ರಾಮೇಗೌಡನ ಬುದ್ಧಿವಂತಿಕೆ?
----ಮುಂದುವರಿಯುವುದು ---
No comments:
Post a Comment