ನಿನ್ನ ಬಾಲ್ಯದ ಯಾವ ದಿನಗಳು ಅತ್ಯಂತ ಸುಖೀ ದಿನಗಳಾಗಿದ್ದವು ಎಂದು ಯಾರಾದರೂ ಕೇಳಿದರೆ ನಾನು ಚಂದಮಾಮ ಓದುತ್ತಾ ಕಳೆದ ದಿನಗಳು ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ. ನನ್ನ ತಲೆಮಾರಿನ ಹೆಚ್ಚು ಮಂದಿ ಇದೇ ಉತ್ತರ ಹೇಳುತ್ತಾರೆಂದೂ ಕೂಡ ನನಗೆ ಗೊತ್ತು. ನಿಜ ಹೇಳಬೇಕೆಂದರೆ ಚಂದಮಾಮ ನಮ್ಮ ಬಾಲ್ಯ ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿ ಬಿಟ್ಟಿತ್ತು. ಮಕ್ಕಳಾದ ನಾವು ಬೇಕಾದರೆ ಒಂದು ಹೊತ್ತಿನ ಊಟ ತಿಂಡಿಯನ್ನು ಬಿಡಲು ತಯಾರಿದ್ದೆವೇ ಹೊರತು ಚಂದಮಾಮದ ರೋಚಕ ಕಥೆಗಳನ್ನು ಓದುವುದರಿಂದ ವಂಚಿತರಾಗಲು ಯಾವತ್ತೂ ಸಿದ್ಧರಿರಲಿಲ್ಲ.
ಈ ಚಂದಮಾಮ ಎಂಬ ಅದ್ಭುತ ಪತ್ರಿಕೆ ಯಾವ
ಮಧುರ ಕ್ಷಣದಲ್ಲಿ ನನ್ನ ಬಾಲ್ಯವನ್ನು ಹೊಕ್ಕಿತೋ ಎಂಬುದು ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿಲ್ಲ.
ಆದರೆ ಅದು ಸದಾಕಾಲವೂ ನನ್ನ ಜೊತೆಯಾಗೇ ಇದ್ದಂತಿದೆ. ನಮ್ಮ ತಂದೆಯವರೇನು ಈ ಮಾಸಿಕ ಪತ್ರಿಕೆಗೆ ಚಂದಾದಾರರಾಗಿರಲಿಲ್ಲ.
ಆದರೆ ನಾವು ಹೊಸ ಚಂದಮಾಮ ಬಂತೆಂದು ಗೊತ್ತಾದೊಡನೆ ಅದು ಹೇಗಾದರೂ ನಮ್ಮ ಕೈಗೆ ಓದಲು ಸಿಗುವಂತೆ ಶತಪ್ರಯತ್ನ
ಮಾಡುತ್ತಿದ್ದೆವು. ಪುಟ್ಟಣ್ಣ
ಮತ್ತು ನಾನು ಒಮ್ಮೆ ಕೆಳಕೊಡಿಗೆ ಎಂಬಲ್ಲಿದ್ದ ನಮ್ಮ
ಅಮ್ಮನ ಸೋದರಮಾವ ಶೇಷಗಿರಿ ಅಜ್ಜಯ್ಯನವರ ಮನೆಗೆ ಹೋಗಿದ್ದುದು ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ.
ಅವರ ಒಬ್ಬಳೇ ಮಗಳು ಲಕ್ಷ್ಮಿಗೆ ಮದುವೆಯಾಗಿ
ಅವಳು ಪುರದಮನೆ ಎಂಬ ಗಂಡನ ಮನೆಯಲ್ಲಿದ್ದಳು. ಹಾಗಾಗಿ ಮನೆಯಲ್ಲಿ ಅಜ್ಜಯ್ಯ ಮತ್ತು ಅವರ ಪತ್ನಿ ಗೌರಮ್ಮ
ಮಾತ್ರ ವಾಸಿಸುತ್ತಿದ್ದರು. ನಮ್ಮ
ಜೊತೆಯಲ್ಲಿ ಆಡಲು ಯಾವುದೇ ಮಕ್ಕಳಿರದಿದ್ದರಿಂದ ನಮಗಾದ ಬೇಸರ ಅಷ್ಟಿಷ್ಟಲ್ಲ. ನಮ್ಮ ಗೋಳನ್ನು ನೋಡಲಾರದೇ
ಅಜ್ಜಯ್ಯನವರು ನಮ್ಮ ಕೈಗೆ ಬೈಂಡ್ ಮಾಡಿದ ಎರಡು ಸಂಪುಟಗಳನ್ನು ಕೊಟ್ಟರು. ಅವನ್ನು ತೆರೆದು ನೋಡಿದಾಗ
ನಮಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವು ಕ್ರಮಾನುಸಾರ ಬೈಂಡ್ ಮಾಡಿಸಿದ್ದ ಹಳೆಯ ಚಂದಮಾಮಗಳ ಸಂಪುಟಗಳಾಗಿದ್ದವು. ಆಮೇಲೆ ಅಲ್ಲಿ ನಮ್ಮ ಸಮಯ ಅಲ್ಲಿ ಹೇಗೆ
ಕಳೆಯಿತೆಂದು ನಮಗೇ ಅರಿವಾಗಲಿಲ್ಲ. ಹಸಿದ ಸಾಕುಪ್ರಾಣಿಗಳು ಕೊಟ್ಟ ತಿಂಡಿಯನ್ನು ಗಬಗಬನೆ ತಿನ್ನುವಂತೆ
ನಾವು ನಮ್ಮ ಒಲವಿನ ಚಂದಮಾಮಗಳ ಪುಟ ತಿರುಗಿಸುತ್ತಾ ಹೋದೆವು.
ಮತ್ತೆರಡು ದಿನಗಳ ನಂತರ ನಮ್ಮ ಅಮ್ಮ ನಮ್ಮನ್ನು ಮನೆಗೆ ಕರೆದೊಯ್ಯಲು ಬಂದಾಗ
ನಮಗೆ ಅವಳು ಯಾತಕ್ಕಾದರೂ ಬಂದಳೋ ಅನ್ನಿಸಿತು.
ನಾವಿನ್ನೂ
ಅವುಗಳಲ್ಲಿದ್ದ ಎಲ್ಲಾ ಕಥೆಗಳನ್ನು ಓದಲಾಗಿರಲಿಲ್ಲ. ಆದ್ದರಿಂದ ಚಂದಮಾಮಗಳ ಆ ಸಂಪುಟಗಳನ್ನು ಮನೆಗೆ
ತೆಗೆದುಕೊಂಡು ಹೋಗಲು ಶೇಷಗಿರಿ ಅಜ್ಜಯ್ಯನವರ ಅನುಮತಿ
ಕೇಳುವಂತೆ ನಾವು ಅಮ್ಮನನ್ನು ಪೀಡಿಸಿದೆವು.
ಅವುಗಳಲ್ಲಿರುವ
ಎಲ್ಲಾ ಕಥೆಗಳನ್ನು ಇನ್ನೂ ಒಂದೆರಡು ಬಾರಿ ಓದಿ ಹಿಂದಿರುಗಿಸುವುದು ನಮ್ಮ ಉದ್ದೇಶವಾಗಿತ್ತು. ಶೇಷಗಿರಿ ಅಜ್ಜಯ್ಯ ತೀರಾ ಗಂಭೀರ ಸ್ವಭಾವದ
ವ್ಯಕ್ತಿಯಾಗಿದ್ದರು. ನಮ್ಮ ಅಮ್ಮನಿಗೆ ಕೂಡ ಅವರೊಡನೆ ಹೆಚ್ಚು ಮಾತಾಡುವಷ್ಟು ಸಲಿಗೆ ಇರಲಿಲ್ಲ. ಆದರೆ
ನಮ್ಮ ಓದಿನ ಗೀಳನ್ನು ಬಲ್ಲ ಆಕೆಗೆ ನಮ್ಮನ್ನು ನಿರಾಶೆಗೊಳಿಸಲೂ ಇಷ್ಟವಿರಲಿಲ್ಲ. ಅಂತೂ ಇಂತೂ ಇದ್ದ ಧೈರ್ಯವನ್ನೆಲ್ಲಾ
ಒಟ್ಟುಗೂಡಿಸಿ ಅಜ್ಜಯ್ಯನವರನ್ನು ಕೇಳಿಯೇ ಬಿಟ್ಟಳು.
ನೋಡಿ. ಇದಪ್ಪ ಆಶ್ಚರ್ಯ! ಅಜ್ಜಯ್ಯನವರು
ಪುಸ್ತಕಗಳನ್ನು ಕೊಡಲು ಒಪ್ಪಿಯೇ ಬಿಟ್ಟರು. ಆದರೆ ಒಂದು ನಿಬಂಧನೆಗೆ ಒಳಪಟ್ಟು. ಯಾವುದೇ ಕಾರಣಕ್ಕೂ
ಪುಸ್ತಕಗಳು ಕೊಂಚವೂ ಹಾಳಾಗಿರಬಾರದು. ಅಮ್ಮ ನಮ್ಮ ಪರವಾಗಿ ಗ್ಯಾರಂಟಿ ನೀಡುತ್ತಿದ್ದಂತೇ ಅವು ನಮ್ಮ
ಕೈಗೆ ಬಂದವು. ನಾವು ಅಪೂರ್ವ ನಿಧಿಯೊಂದನ್ನು ಸಾಗಿಸುವಂತೆ ಸಂಭ್ರಮದಿಂದ ಎರಡು ಸಂಪುಟಗಳನ್ನು ಕೈಯಲ್ಲಿ
ಹಿಡಿದು ನಮ್ಮ ಮನೆಯತ್ತ ಹೊರಟೆವು. ಮೂರು ಮೈಲಿ ದೂರದಲ್ಲಿದ್ದ ನಮ್ಮ ಮನೆಗೆ ನಾವು ಗಾಳಿಯಲ್ಲಿ ತೇಲಿಹೋಗುತ್ತಿದ್ದಂತೇ
ನಮಗನ್ನಿಸುತ್ತಿತ್ತು!
ಮತ್ತೆ ನಮಗೆ ಚಂದಮಾಮದ ನಿಧಿ ದೊರೆತದ್ದು
ನಮ್ಮೂರಿನ ಅತ್ಯಂತ ಶ್ರೀಮಂತ ಜಮೀನ್ದಾರರಾದ ಬೆಳವಿನಕೊಡಿಗೆ ಗಣೇಶ ಹೆಬ್ಬಾರರ ಮನೆಯಲ್ಲಿ. ಅಲ್ಲಿ ಮೊದಲ ಬಾರಿಗೆ ನಾವು ಈ ನಿಧಿಯನ್ನು
ಕಂಡು ಹಿಡಿದುದು ನನಗೆ ಈಗಲೂ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ:
ಅವರ ಮನೆಯಲ್ಲಿ ಹಬ್ಬ ಹರಿದಿನ ಅಂತ
ಯಾವಾಗಲೂ ಏನಾದರೂ ಸಮಾರಂಭವಿದ್ದೇ ಇರುತ್ತಿತ್ತು. ಅವುಗಳಲ್ಲಿ ಮುಖ್ಯವಾದವು ನವರಾತ್ರಿ ಸಮಾರಾಧನೆ,
ಅನಂತನ ವ್ರತ ಮತ್ತು ರಾಮ ನವಮಿ. ಆಗ ಇಡೀ ಊರಿಗೆ ಆಮಂತ್ರಣವಿರುತ್ತಿತ್ತು. ಆಹ್ವಾನಿತರು ಸುಮಾರು ೧೦
ಗಂಟೆಗೆ ಬರತೊಡಗಿದಂತೆ ಅವರಿಗೆ ಸಕ್ಕರೆ ಮತ್ತು ನಿಂಬೆ ಹಣ್ಣಿನ ಪಾನಕ ನೀಡಲಾಗುತ್ತಿತ್ತು. ಅಲ್ಲಿಂದ ಸುಮಾರು ಮೂರು ಗಂಟೆಗಳ ಕಾಲ ಅತಿಥಿಗಳಿಗೆ ಬಿಡುವಿನ
ಸಮಯ. ಆಗ ಹಿರಿಯರಾದವರ ಒಂದು ಗುಂಪು ವೃತ್ತಾಕಾರದಲ್ಲಿ ಕುಳಿತು ಇಸ್ಪೇಟಿನ ಆಟ ಆಡುವುದು ವಾಡಿಕೆ.
ಕೇವಲ ಇಪ್ಪತ್ತೆಂಟರ ಆಟ. ದುಡ್ಡುಗಿಡ್ಡು ಪಣಕ್ಕಿಡುವಂತಿರಲಿಲ್ಲ. ಹಾಗಿದ್ದರೆ ಮಾತ್ರ ಅನುಮತಿ. ಮಕ್ಕಳಾದ ನಾವು ಏನಾದರೂ ಆಟವಾಡುತ್ತಾ ಅಥವಾ ಎರಡು ಗುಂಪು ಮಾಡಿಕೊಂಡು ಪರಸ್ಪರ ಕಿತ್ತಾಡುತ್ತಾ
ಸಮಯ ಕಳೆಯುತ್ತಿದ್ದೆವು.
ಅಂತಹುದೇ ಒಂದು ಸನ್ನಿವೇಶ. ದೊಡ್ಡವರಲ್ಲಿ
ಕೆಲವರು ಇಸ್ಪೇಟಿನ ಆಟವಾಡದವರೂ ಇದ್ದರು. ಒಂದು ಸಂದರ್ಭದಲ್ಲಿ ಅಂತಹವರೆಲ್ಲಾ ಪಂಚೆ ಎತ್ತಿಕಟ್ಟಿಕೊಂಡು
ಉಪ್ಪರಿಗೆ ಮೆಟ್ಟಲು ಹತ್ತುತ್ತಿರುವುದು ನಮಗೆ ಕಾಣಿಸಿತು. ಆ ಕಾಲದ ನಮ್ಮೂರಿನಲ್ಲಿ ಉಪ್ಪರಿಗೆಯ ವೈಭವ ಇರುತ್ತಿದ್ದುದು
ಕೇವಲ ಶ್ರೀಮಂತರ ಮನೆಯಲ್ಲಿ ಮಾತ್ರ. ಸಾಮಾನ್ಯವಾಗಿ ನಮಗೆ ಅಂತಹ ಉಪ್ಪರಿಗೆಗೆ ಪ್ರವೇಶವಿರುತ್ತಿರಲಿಲ್ಲ.
ಹಾಗಾಗಿ ನಮ್ಮ ಮಟ್ಟಿಗೆ ಅದೊಂದು ನಿಗೂಢ ಸ್ಥಳ. ಅಸಲು ಸಂಗತಿ ಏನೆಂದರೆ ಶ್ರೀಮಂತರ ಮನೆಯ ಉಪ್ಪರಿಗೆಯಲ್ಲಿ
ಹಣದ ಕೊಪ್ಪರಿಗೆ ಅಡಗಿಸಿಟ್ಟಿರುತ್ತಾರೆಂದು ನಮ್ಮ ಬಾಲ್ಯ ಕಾಲದ ನಂಬಿಕೆ!
ಕೆಲವರು ಉಪ್ಪರಿಗೆಗೆ ಹೋಗುತ್ತಿರುವುದನ್ನು
ನೋಡಿ ನನ್ನ ಅಣ್ಣ ಮತ್ತು ನಾನು ಕುತೂಹಲದಿಂದ ಅವರನ್ನು ಹಿಂಬಾಲಿಸಿದೆವು. ಅಲ್ಲಿ ಕೊಪ್ಪರಿಗೆ ಇದ್ದದ್ದಂತೂ
ನಿಜ. ಆದರೆ ಹಣದ ಕೊಪ್ಪರಿಗೆಯಲ್ಲ. ಇತ್ತೀಚಿನ ಹೊಸ ಸಂಚಿಕೆಯ ಜೊತೆಗೆ ನಾಲ್ಕೈದು ವರ್ಷಗಳ ಹಳೆಯ ಚಂದಮಾಮಗಳ
ಕೊಪ್ಪರಿಗೆ. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ.
ಅಲ್ಲಿ
ಸೇರಿದವರೆಲ್ಲಾ ಒಂದೊಂದು ಸಂಚಿಕೆಯನ್ನು ಕೈಯಲ್ಲಿ ಹಿಡಿದು ಮಾತಿಲ್ಲದೇ ಓದತೊಡಗಿದರು. ನಾವೂ ಕೂಡ ಚಂದಮಾಮ
ಓದುಗರ ಬಳಗ ಸೇರಿದೆವು. ಮತ್ತೆಂದೂ ನಾವು ಹಿಂತಿರುಗಿ ನೋಡಲೇ ಇಲ್ಲ!
ಅಂದಿನಿಂದ ನಾವು ಬೆಳವಿನಕೊಡಿಗೆಗೆ
ಹೋದಾಗಲೆಲ್ಲಾ ಸಕ್ಕರೆ ನಿಂಬೆ ಪಾನಕ ಕುಡಿದ ನಂತರ ಧಾವಿಸುತ್ತಿದ್ದುದು ಸೀದಾ ಉಪ್ಪರಿಗೆಗೇ. ಒಂದಾದ
ಮೇಲೆ ಒಂದು ಸಂಚಿಕೆ ತಿರುವಿ ಹಾಕುತ್ತಿದ್ದರೆ ಎಂತಹಾ ರೋಮಾಂಚನ! ಸಮಯ ಹೋದದ್ದೇ ಅರಿವಾಗುತ್ತಿರಲಿಲ್ಲ.
ನಂತರದ ಭರ್ಜರಿ ಸಂತರ್ಪಣೆ ಊಟಕ್ಕೆ ಕರೆ ಬಂದರೆ ಅದು ಕೂಡ ನಮಗೆ ಕರ್ಕಶವಾಗಿ ಕೇಳುತ್ತಿತ್ತು ಎಂದರೆ
ನಮಗಿದ್ದ ಚಂದಮಾಮದ ಆಕರ್ಷಣೆಯನ್ನು ನೀವೇ ಊಹಿಸಿಕೊಳ್ಳಿ!
ಆ ಕಾಲದ ಚಂದಮಾಮ ನಿಜಕ್ಕೂ ಒಂದು ಪರಿಪೂರ್ಣ
ಮಾಸಪತ್ರಿಕೆಯಾಗಿತ್ತು. ಪತ್ರಿಕೆಯ ಪ್ರತಿ ಪುಟವನ್ನೂ, ಪ್ರತಿ ಸಾಲನ್ನೂ ನಾವು ಆಸ್ವಾದಿಸುತ್ತಿದ್ದೆವು
- ವಿಖ್ಯಾತ ಚಿತ್ರ ಕಲಾವಿದ ಎಂ.ಟಿ.ವಿ.ಆಚಾರ್ಯ ಅವರ ಮಹಾಭಾರತದ ಆಖ್ಯಾಯಿಕೆಗಳ ವರ್ಣರಂಜಿತ ಮುಖಪುಟದಿಂದ
ಆರಂಭಿಸಿ ರಕ್ಷಾಪತ್ರದ ಕೊನೆಯ ಪುಟದ ತನಕ. ಒಳಪುಟದ
ಜಾಹೀರಾತುಗಳೂ ಕೂಡ ತಮ್ಮದೇ ಆದ ಆಕರ್ಷಣೆಯಿಂದ ನಮ್ಮನ್ನು ಮೋಡಿ ಮಾಡಿಬಿಡುತ್ತಿದ್ದವು. ನಮ್ಮ ಬಾಲ್ಯದ
ನೆನಪುಗಳು ಚಿರಸ್ಮರಣೀಯವಾಗಿರುವಂತೆ ಮಾಡಿದ ನಾಗಿರೆಡ್ಡಿ ಮತ್ತು ಚಕ್ರಪಾಣಿದ್ವಯರಿಗೆ ನಮೋ ನಮಃ! ನಿಜ ಹೇಳಬೇಕೆಂದರೆ ನಮ್ಮ ಜೀವನದ ಪ್ರಮುಖ ಗುರಿ ಮುಂದೊಂದು
ದಿನ ಮದರಾಸಿನ ವಡಪಳನಿಯ ಚಂದಮಾಮ ಕಾರ್ಯಾಲಯಕ್ಕೆ ಭೇಟಿಕೊಟ್ಟು ಕೈತಪ್ಪಿಹೋದ ಎಲ್ಲಾ ಹಳೆಯ ಸಂಚಿಕೆಗಳನ್ನು
ಓದುವುದೇ ಆಗಿತ್ತು!
ಮಕ್ಕಳನ್ನು ರಂಜಿಸುವುದಕ್ಕೆ, ಅವರ
ಕಲ್ಪನೆಯ ಗರಿಗೆದರಿಸುವುದಕ್ಕೆ ಬೇಕಾದ ಸಕಲ ಸಂಪತ್ತುಗಳೂ ಚಂದಮಾಮದಲ್ಲಿದ್ದವು. ಸಾಹಸ ಕಥೆಗಳು, ಪುರಾಣದ
ಆಖ್ಯಾಯಿಕೆಗಳು,ಅರೇಬಿಯನ್ ನೈಟ್ಸ್, ಗ್ರೀಕ್ ಮೈತಾಲಜಿಗಳನ್ನೊಳಗೊಂಡಂತೆ ನೀತಿಬೋಧಕ, ರಹಸ್ಯಮಯ, ಸಾಹಸಪ್ರಧಾನ
ಬರಹಗಳು, ಶೇಕ್ಸ್ ಪೀಯರ್ನ ಬಹುತೇಕ ನಾಟಕಗಳ ಸರಳ ಗದ್ಯರೂಪಾಂತರ, ಪಾತ್ರಗಳ ಭಾರತೀಯ ಹೆಸರಿನೊಂದಿಗೆ ಪ್ರಕಟವಾಗುತ್ತಿದ್ದವು.
ಒಂದು ದೊಡ್ಡ ಧಾರಾವಾಹಿ ಎಂಟು ತ್ರಿವರ್ಣ
ರಂಜಿತ ಪುಟಗಳಲ್ಲಿ ಯಾವಾಗಲೂ ಇರುತ್ತಿತ್ತು. ಇದು
ಸಾಧಾರಣವಾಗಿ ಹದಿನೆಂಟು ಸಂಚಿಕೆಗಳಲ್ಲಿ ಕ್ರಮವಾಗಿ ಪ್ರಕಟವಾಗುತ್ತಿತ್ತು. ಉಳಿದ
ಧಾರಾವಾಹಿಗಳು ಎರಡರಿಂದ ಒಂಬತ್ತು ಸಂಚಿಕೆಗಳವರೆಗೆ ಮುಂದುವರಿಯುತ್ತಿದ್ದವು. ಅವುಗಳೆಂದರೆ ನಾವಿಕ
ಸಿಂದಾಬಾದ್, ಆಲಿಬಾಬ ಮತ್ತು ನಲವತ್ತು ಮಂದಿ ಕಳ್ಳರು, ಅಲ್ಲಾದೀನನ ಅದ್ಭುತ ದೀಪ, ಭುವನ ಸುಂದರಿ,
ರೂಪಧರನ ಯಾತ್ರೆಗಳು, ಇತ್ಯಾದಿ. ಕೊನೆಯ ಎರಡು ಹೋಮರ್ನ ಗ್ರೀಕ್ ಮಹಾಕಾವ್ಯ ಇಲಿಯಡ್ ಮತ್ತು ಒಡಿಸ್ಸಿಯನ್ನು ಆಧಾರಿಸಿ, ಪಾತ್ರಗಳಿಗೆ
ಭಾರತೀಯ ಹೆಸರನ್ನಿಟ್ಟು ನಿರೂಪಿಸಿದ ಅದ್ಭುತ ಕಥಾನಕಗಳು.
ಆಶ್ಚರ್ಯವೆಂದರೆ ಈ ಧಾರಾವಾಹಿಗಳಿಗೆ
ಲೇಖಕರ ಹೆಸರುಗಳೇ ಇರುತ್ತಿರಲಿಲ್ಲ. ಕೇವಲ "ಚಂದಮಾಮ" ಎಂದು ಮಾತ್ರ ಸೂಚಿಸಲಾಗುತ್ತಿತ್ತು.
ಭುವನಸುಂದರಿ ಮತ್ತು ರೂಪಧರನ ಯಾತ್ರೆಗಳಿಗೆ "ಒಂದು ಗ್ರೀಕ್ ಪುರಾಣ ಕತೆಯ ಆಧಾರದಿಂದ"
ಎಂದಷ್ಟೇ ಮುದ್ರಿಸಲಾಗಿರುತ್ತಿತ್ತು. ಚಂದಮಾಮದ ಆ ಪ್ರತಿಭಾನ್ವಿತ ಅಜ್ಞಾತ ಲೇಖಕರು ಅಲ್ಲಿನ
ಕಥೆಗಳ ಪಾತ್ರಗಳಷ್ಟೇ ನಿಗೂಢ ವ್ಯಕ್ತಿಗಳಾಗಿರುತ್ತಿದ್ದರು!
ಪ್ರತಿಯೊಂದು ಕಥೆ, ಕವನಗಳಿಗೂ ಅದರ
ಪರಿಣಾಮವನ್ನು ದ್ವಿಗುಣಗೊಳಿಸಲು ಪೂರಕವಾದ ನಯನಮನೋಹರ ಚಿತ್ರಗಳಿರುತ್ತಿದ್ದವು. ಮುಖಪುಟದಲ್ಲಿ ಎಂ.ಟಿ.ವಿ.ಆಚಾರ್ಯ
ಅವರ ಮಹಾಭಾರತದ ಚಿತ್ರಗಳದ್ದೇ ಪ್ರಾಬಲ್ಯ. ಪ್ರಮುಖ ಧಾರಾವಾಹಿಯ ಕಲಾವಿದರ ಹೆಸರು "ಚಿತ್ರ"
ಎಂದಿರುತ್ತಿತ್ತು. ಅವರ ಮೂಲ ಹೆಸರು ಕೆ.ವಿ.ರಾಘವನ್ ಎಂದು ಆಮೇಲಷ್ಟೇ ನಮಗೆ ಅರಿವಾಗಿದ್ದು.
ಸಾಮಾನ್ಯವಾಗಿ ಉಳಿದ ಎಲ್ಲಾ ಕಥೆಗಳಿಗೆ
ಜೀವ ತುಂಬುತ್ತಿದ್ದ ಶಂಕರ್ ಅವರ ರಚನೆಗಳೇ ನಿಜಕ್ಕೂ ಅತುತ್ತಮ ಚಿತ್ರಗಳು. ಆ ಚಿತ್ರಗಳು ಅದೆಷ್ಟು
ಸೌಂದರ್ಯಪೂರ್ಣವಾಗಿ, ಚೇತೋಹಾರಿಯಾಗಿ ಇರುತ್ತಿದ್ದವೆಂದರೆ
ಶಂಕರ್ ಅವರು ಬಿಡಿಸುತ್ತಿದ್ದ ಎಷ್ಟೋ ಮೋಹಕ ಯುವತಿಯರ ಪ್ರೇಮಪಾಶದಲ್ಲಿ, ಕಥಾನಾಯಕರಿಗಿಂತ ಹೆಚ್ಚಾಗಿ
ನಾವೇ ಸಿಲುಕಿಬಿಡುತ್ತಿದ್ದೆವೆಂದು ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ!
----ಮುಂದುವರಿಯುವುದು ---
ಎ ವಿ ಕೃಷ್ಣಮೂರ್ತಿ
No comments:
Post a Comment