ಅಧ್ಯಾಯ ೭
ನಾಯಕ್ ಬ್ರದರ್ಸ್
ನಾಯಕ್ ಬ್ರದರ್ಸ್ ಆಗಿನ ಕಾಲದ ಕೊಪ್ಪದಲ್ಲಿ
ತುಂಬಾ ಹೆಸರು ಪಡೆದ ಬಿಸಿನೆಸ್ ಫ್ಯಾಮಿಲಿ ಆಗಿತ್ತು. ಈ ಫ್ಯಾಮಿಲಿಯ ಅಣ್ಣ ತಮ್ಮಂದಿರು ಬಗೆ ಬಗೆಯ
ಬಿಸಿನೆಸ್ ಮಾಡುತ್ತಿದ್ದರು. ಅವುಗಳಲ್ಲಿ ಔಷದಿ ಅಂಗಡಿ, ರೇಡಿಯೋ ಶಾಪ್ ಮತ್ತು ಸ್ಟೇಷನರಿ ಸಾಮಾನುಗಳ
ಅಂಗಡಿಗಳು ಮುಖ್ಯವಾದವು. ಬಾಲಕೃಷ್ಣ ನಾಯಕ್, ನರಹರಿ ನಾಯಕ್, ಸುಬ್ಬರಾವ್ ಮತ್ತು ಶ್ರೀನಿವಾಸ ನಾಯಕ್ ಎಂಬುದು ಈ ಅಣ್ಣ ತಮ್ಮಂದಿರ ಹೆಸರುಗಳು. ಅವರಲ್ಲಿ ಸುಬ್ಬರಾವ್
ಆ ಕಾಲಕ್ಕೆ ತುಂಬಾ ದೊಡ್ಡದಾಗಿದ್ದ ಮತ್ತು ಪ್ರಸಿದ್ಧವಾಗಿದ್ದ ಮೆಡಿಕಲ್ ಶಾಪ್ ಒಂದನ್ನು ನಡೆಸುತ್ತಿದ್ದರು.
ಆ ಶಾಪಿನಲ್ಲಿ ದೊರೆಯದ ಔಷಧಿಗಳಿರಲಿಲ್ಲ. ಹಾಗೆಯೇ
ಶ್ರೀನಿವಾಸ ನಾಯಕ್ ಅವರು ಕಾಂಷ್ (KAMSH Radio)
ಎಂಬ ಹೆಸರಿನಲ್ಲಿ ದೊಡ್ಡ ರೇಡಿಯೋ ಅಂಗಡಿ ನಡೆಸುತ್ತಿದ್ದರು.
ರವೀಂದ್ರ ನಾಯಕ್
ಮತ್ತು
ಮೋಟಾರ್
ಸೈಕಲ್
ರಿಪೇರಿ
ರವೀಂದ್ರ
ನಾಯಕ್ ನರಹರಿ ರಾಯರ ಪುತ್ರ. ನಿರುದ್ಯೋಗಿಯಾಗಿದ್ದ
ರವೀಂದ್ರ ಒಂದು ದೊಡ್ಡ ಮೋಟಾರ್ ಬೈಕ್ ಹೊಂದಿದ್ದು
ಅದನ್ನು ಕೊಪ್ಪ ಪೇಟೆಯಲ್ಲಿ ಗುಡುಗುಡಿಸುತ್ತಾ ಓಡಿಸುತ್ತಿದ್ದ. ಹಾಗೆಯೇ ಸುತ್ತಮುತ್ತಲಿನ ಊರುಗಳಿಗೂ
ಅದನ್ನು ಓಡಿಸಿಕೊಂಡು ಹೋಗುತ್ತಿದ್ದ. ಆ ಕಾಲದಲ್ಲಿ
ಬೇರೆಬೇರೆ ಊರುಗಳಲ್ಲಿ ನಡೆಯುತ್ತಿದ್ದ ಜಾತ್ರೆಗಳಲ್ಲೋ ಅವನ ಬೈಕ್ ಹಾಜರಿರುತ್ತಿತ್ತು. ಸೈಕಲ್ಲು ಕೂಡ
ಅಪರೂಪವಾಗಿದ್ದ ಆ ಕಾಲದಲ್ಲಿ ರವೀಂದ್ರನ ಗುಡುಗುಡು ಮೋಟಾರ್ ಬೈಕ್ ತುಂಬಾ ಪ್ರಸಿದ್ಧಿ ಪಡೆದಿತ್ತು.
ಸುಮಾರು ಏಳು ಅಡಿ ಎತ್ತರವಿದ್ದ ರವೀಂದ್ರನೊಬ್ಬ ಅಜಾನುಬಾಹು ಸೈoಧವನಂತಿದ್ದ. ಆದರೆ ಅವನ ನಿರುದ್ಯೋಗವೊಂದು ದೊಡ್ಡ ಸಮಸ್ಯೆ ಆಗಿತ್ತು.
ಆ
ಕಾಲದಲ್ಲಿ ಕೊಪ್ಪದಲ್ಲಿ ಯಾವುದೇ ಮೋಟಾರ್ ಬೈಕ್ ರಿಪೇರಿ
ವರ್ಕ್ ಶಾಪ್ ಇರಲಿಲ್ಲ. ಆದರೆ ರವೀಂದ್ರ ಬಹು ಬೇಗನೆ ಒಬ್ಬ ಮೋಟಾರ್ ಬೈಕ್ ರಿಪೇರಿ ಪರಿಣಿತನಾಗಿಬಿಟ್ಟ. ಅವನ ತಜ್ಞತೆ ಯಾವ ಮಟ್ಟಕ್ಕೆ
ಹೋಯಿತೆಂದರೆ ಅವನು ಟ್ಯೂಬುಗಳೇ ಇಲ್ಲದ ಟೈಯರ್ ಗಳನ್ನು ಬೈಕ್ ನಲ್ಲಿ ಫಿಕ್ಸ್ ಮಾಡುವ ಟೆಕ್ನಾಲಜಿ ಒಂದನ್ನು
ಕಂಡು ಹಿಡಿದು ಬಿಟ್ಟ! ವಿಚಿತ್ರವೆಂದರೆ ಈ ಟೆಕ್ನಾಲಜಿ ಬಳಸಲು ಹಣದ ಅವಶ್ಯಕತೆಯೇ ಇರಲಿಲ್ಲ! ಏಕೆಂದರೆ
ಅವನು ಟೈರಿನಲ್ಲಿ ಟ್ಯೂಬಿನ ಬದಲಿಗೆ ಕೇವಲ ಹುಲ್ಲು ತುಂಬಿಸುತ್ತಿದ್ದ! ಬಹು ಸುಲಲಿತವಾಗಿ ಓಡಾಡುತ್ತಿದ್ದ
ರವೀಂದ್ರನ ಬೈಕ್ ನೋಡಿದ ಯಾರಿಗೂ ಅವನು ಟೈರಿನೊಳಗೆ ಹುಲ್ಲು ತುಂಬಿರುವನೆಂಬುವ ವಿಚಾರ ಗೊತ್ತೇ ಆಗುತ್ತಿರಲಿಲ್ಲ!
ರವೀಂದ್ರ ಮತ್ತು ಭಾರತೀಯ ಸೇನೆ
ಒಮ್ಮೆ
ಯಾರೋ ರವೀಂದ್ರನ ಪರ್ಸನಾಲಿಟಿ ನೋಡಿ ಅವನೇಕೆ ಇಂಡಿಯನ್ ಆರ್ಮಿ (ಭಾರತೀಯ ಸೇನೆ) ಸೇರಲು ಪ್ರಯತ್ನ ಮಾಡಬಾರದೆಂದು
ಪ್ರಶ್ನಿಸಿದರಂತೆ. ತಡಮಾಡದೇ ರವೀಂದ್ರ ಸ್ವಲ್ಪ ಸಮಯದಲ್ಲೇ ಹತ್ತಿರದ ಊರೊಂದರಲ್ಲಿ ನಡೆಯುತ್ತಿದ್ದ
ಭಾರತೀಯ ಸೇನೆಯ ಆಯ್ಕೆ ಕ್ಯಾಂಪೊಂದರಲ್ಲಿ ಪಾಲ್ಗೊಂಡನಂತೆ. ಆ ಕ್ಯಾಂಪಿನ ಮುಖ್ಯಸ್ಥರಾದ ಪಂಜಾಬಿ ಸರ್ದಾರ್ಜಿ
ಒಬ್ಬರಿಗೆ ರವೀಂದ್ರನ ಪರ್ಸನಾಲಿಟಿ ತುಂಬಾ ಇಷ್ಟವಾಯಿತಂತೆ. ರವೀಂದ್ರನ ಫೈನಲ್ ಇಂಟರ್ವ್ಯೂ ಆ ಸರ್ದಾರ್ಜಿಯವರೇ
ಮಾಡಿದರಂತೆ. ಅವರು ಅವನಿಗೆ ಅವನ ವಿಶೇಷ ಪರಿಣತೆ ಏನೆಂದು ಕೇಳಿದರಂತೆ. ಸ್ವಲ್ಪವೂ ತಡಮಾಡದೇ ರವೀಂದ್ರ
ಮೋಟಾರ್ ಬೈಕ್ ರಿಪೇರಿ ಎಂದು ಹೇಳಿ ಬಿಟ್ಟನಂತೆ.
ಸರ್ದಾರ್ಜಿಯವವರು
ಕೂಡಲೇ ಕೆಟ್ಟು ಹೋಗಿದ್ದ ಮಿಲಿಟರಿ ಮೋಟಾರ್ ಬೈಕ್ ಒಂದನ್ನು ತರಿಸಿ ರವೀಂದ್ರನ ಮುಂದೆ ನಿಲ್ಲಿಸಿದರಂತೆ.
ಅವರು ರವೀಂದ್ರನಿಗೆ ಒಂದು ಚಾಲೆಂಜ್ ಹಾಕಿದರಂತೆ. ಅದರ ಪ್ರಕಾರ ರವೀಂದ್ರ ಸ್ಥಳದಲ್ಲೇ ಮೋಟಾರ್ ಬೈಕ್
ಸಮಸ್ಯೆಯನ್ನು ಕಂಡುಹಿಡಿದು ಅದನ್ನು ರಿಪೇರಿ ಮಾಡಬೇಕು ಮತ್ತು ಅದು ಕೇವಲ ಒಂದೇ ಕಿಕ್ಕಿನಲ್ಲಿ ಸ್ಟಾರ್ಟ್
ಆಗಬೇಕು. ಅದರಲ್ಲಿ ಅವನು ಜಯಗಳಿಸಿದರೆ ಅವನು ಇಂಡಿಯನ್ ಆರ್ಮಿಗೆ ಆಯ್ಕೆಯಾದಂತೆ! ರವೀಂದ್ರ ಆ ಚಾಲೆಂಜ್
ಒಪ್ಪಿಕೊಂಡು ಬಿಟ್ಟನಂತೆ. ಕೂಡಲೇ ಅವನ ಮುಂದೆ ಒಂದು
ಕೆಟ್ಟು ಹೋಗಿದ್ದ ಮಿಲಿಟರಿ ಬೈಕ್ ತಂದಿರಿಸಲಾಯಿತಂತೆ. ತಡಮಾಡದೇ ರವೀಂದ್ರ ಅದರ ಪಾರ್ಟ್ ಗಳನ್ನೆಲ್ಲಾ ಬಿಚ್ಚಿ ಬೈಕಿನ
ನ್ಯೂನತೆ ಯನ್ನು ಕಂಡುಹಿಡಿದು ಅದನ್ನು ಸರಿಪಡಿಸಿ ಪುನರ್ಜೋಡಿಸಿ ಬಿಟ್ಟನಂತೆ. ಅದನ್ನು ಮಿಲಿಟರಿ ಆಫೀಸರ್
ಒಬ್ಬ ಪರಿಶೀಲನೆ ಮಾಡಿ ಒಂದು ಕಿಕ್ ಕೊಟ್ಟನಂತೆ. ಅದು ಗುಡುಗುಡನೆ ಸ್ಟಾರ್ಟ್ ಆಗುತ್ತಿದ್ದಂತೆ ಸರ್ದಾರ್ಜಿಯವವರು
ರವೀಂದ್ರನನ್ನು ಅಭಿನಂದಿಸಿದರಂತೆ.
ಮಿಲಿಟರಿ ಡಾಕ್ಟರ್ ಮತ್ತು ರಶಿಯನ್
ಟ್ರ್ಯಾಕ್ಟರ್
ನಾನು
ಈ ಹಿಂದೆಯೇ ಬರೆದಂತೆ ಮಿಲಿಟರಿ ಡಾಕ್ಟರ್ ಕ್ಯಾಪ್ಟನ್ ಎಂ ಆರ್ ಆರ್ ಅಯ್ಯಂಗಾರ್ ಅವರು ಕೊಪ್ಪದಿಂದ
ಶೃಂಗೇರಿಗೆ ಹೋಗುವ ಮಾರ್ಗದಲ್ಲಿ ನಾಗಲಾಪುರ ಎಂಬಲ್ಲಿ ಕೃಷಿ ಭೂಮಿ ಹೊಂದಿದ್ದರಂತೆ. ಅದು ಅವರ ಮಿಲಿಟರಿ
ಸೇವೆಯನ್ನು ಗಮನಿಸಿ ಭಾರತ ಸರ್ಕಾರ ಕೊಟ್ಟ ಜಮೀನಂತೆ. ಆಗಿನ ಕಾಲದಲ್ಲಿ ಕೃಷಿ ಭೂಮಿಯನ್ನು ಹೂಟೆ ಮಾಡಲು
ನೇಗಿಲನ್ನು ಬಿಟ್ಟು ಬೇರೆ ಯಾವ ಉಪಕರಣಗಳೂ ಇರಲಿಲ್ಲ. ಅಂದಿನ ರಶಿಯಾ ಕೃಷಿ ಯಾಂತ್ರೀಕರಣದಲ್ಲಿ ತುಂಬಾ
ಮುಂದುವರೆದಿತ್ತು. ಹಾಗೂ ಅದು ಭಾರತ ಸರ್ಕಾರದೊಡನೆ ತುಂಬಾ ಸ್ನೇಹದಿಂದಿತ್ತು. ಭಾರತ ಸರ್ಕಾರ ಕೂಡ
ಕೃಷಿ ವಲಯವನ್ನು ಯಾಂತ್ರೀಕರಣ ಮಾಡಲು ತೀರ್ಮಾನಿಸಿ ರಷ್ಯಾದಿಂದ ಒಂದು ಲಾಟ್ ಟ್ರ್ಯಾಕ್ಟರ್ ಗಳನ್ನು
ಆಮದು ಮಾಡಿಕೊಂಡಿತು. ಹಾಗೆ ಆಮದಾದ ಒಂದು ಟ್ರ್ಯಾಕ್ಟರ್ ಮಿಲಿಟರಿ ಡಾಕ್ಟರ್ ಅವರಿಗೆ ಅಲಾಟ್ ಆಯಿತು.
ಅಂದು ಆ ಟ್ರಾಕ್ಟರಿನ ಬೆಲೆ ೧೦,೦೦೦ ರೂಪಾಯಿಗಳಾಗಿತ್ತು. ಪ್ರಾಯಶಃ ಕೊಪ್ಪದ ಜನರು ನೋಡಿದ ಮೊದಲ ಟ್ರ್ಯಾಕ್ಟರ್ ಅದೇ ಆಗಿದ್ದಿರಬಹುದು. ಅದನ್ನು ಡಾಕ್ಟರ್ ಅವರ ಮನೆಯ ಮುಂದೆ ಇದ್ದ ಶೆಡ್ಡಿನಲ್ಲಿ
ಅವರ ಪ್ರಖ್ಯಾತ ರಾಯಲ್ ಬುಲೆಟ್ ಮೋಟಾರ್ ಬೈಕಿನ ಪಕ್ಕದಲ್ಲೇ
ಪಾರ್ಕ್ ಮಾಡಲಾಗುತ್ತಿತ್ತಂತೆ.
ಕೊಪ್ಪದ ಟೂರಿಂಗ್ ಟಾಕೀಸ್
ಆ ಕಾಲದಲ್ಲಿ ಕೊಪ್ಪ, ಶೃಂಗೇರಿ ಮತ್ತು ಜಯಪುರಗಳಲ್ಲಿ
ಕೇವಲ ಟೂರಿಂಗ್ ಟಾಕೀಸುಗಳಿರುತ್ತಿದ್ದವು. ಅವುಗಳನ್ನು ಮಳೆಗಾಲದಲ್ಲಿ ಮುಚ್ಚಲಾಗುತ್ತಿತ್ತು. ಕೇವಲ
ತೀರ್ಥಹಳ್ಳಿ ಮಾತ್ರಾ ವೆಂಕಟೇಶ್ವರ ಟಾಕೀಸ್ ಎಂಬ ಪರ್ಮನೆಂಟ್ ಟಾಕೀಸನ್ನು ಹೊಂದುವ ಹೆಮ್ಮೆ ಪಡೆದಿತ್ತು.
ನಮ್ಮ ತಂದೆಯವರ ಪ್ರಕಾರ ಕೊಪ್ಪ ಟೂರಿಂಗ್ ಟಾಕೀಸು ಮೊದಲು ಪ್ರಾರಂಭವಾದಾಗ ಕೇವಲ ಮೂಕಿ ಸಿನಿಮಾಗಳನ್ನು
ಪ್ರದರ್ಶನ ಮಾಡಲಾಗುತ್ತಿತ್ತಂತೆ. ಆದರೆ ಮೊದಲ ಪ್ರದರ್ಶನದ ದಿನವೇ ದೊಡ್ಡ ಅನಾಹುತ ನಡೆದು ಹೋಯಿತಂತೆ.
ಕಾರಣವಿಷ್ಟೇ. ಆ ಸಿನಿಮಾದಲ್ಲಿ ಒಂದು ಯುದ್ಧದ ಸೀನ್ ಇತ್ತಂತೆ. ಅದು ಪ್ರಾರಂಭವಾಗುವಾಗ ಶತ್ರುಗಳ ಕಡೆಯಿಂದ
ಒಂದು ಕುದುರೆ ಸವಾರರ ತಂಡ ಕುದುರೆಗಳ ಮೇಲೆ ರಣರಂಗಕ್ಕೆ ದೌಡಾಯಿಸಿ ಬಂದಿತಂತೆ. ಆಗ ಒಂದಾಣೆ ಕೊಟ್ಟು
ತೆರೆಯ ಮುಂದಿನ ನೆಲದ ಸೀಟಿನಲ್ಲಿ ಕುಳಿತಿದ್ದ ಪ್ರೇಕ್ಷಕರು ಕುದುರೆಗಳು ತಮ್ಮ ಮೇಲೆಯೇ ಬರುತ್ತಿರುವವೆಂದು
ಭ್ರಮಿಸಿ ಎದ್ದು ಹಿಂದಿನ ಸೀಟುಗಳಲ್ಲಿ ಕುರ್ಚಿಗಳಮೇಲೆ
ಕುಳಿತಿದ್ದ ಪ್ರೇಕ್ಷಕರನ್ನೆಲ್ಲಾ ನೆಲಕ್ಕೆ ಬೀಳಿಸುತ್ತಾ ಟಾಕೀಸಿನಿಂದ ಹೊರಗೆ ದೌಡಾಯಿಸಿದರಂತೆ!
ಆಮೇಲೆ
ಕೊಪ್ಪದಲ್ಲಿ ಡಯಾಸ್ ಎಂಬ ಕಂಟ್ರಾಕ್ಟರ್ ಒಬ್ಬರು ಜೆಎಂಜೆ (JMJ) ಎಂಬ ಪರ್ಮನೆಂಟ್ ಟಾಕೀಸ್ ಒಂದನ್ನು ಬಸ್ ನಿಲ್ದಾಣದ ಪಕ್ಕದಲ್ಲೇ ಕಟ್ಟಿಸಿದರಂತೆ. ಸ್ವಲ್ಪ ಕಾಲದ ನಂತರ ಅದನ್ನು ನಮಗೆ ಗೊತ್ತಿದ್ದ ಹನಕೋಡು
ಗೋಪಾಲಯ್ಯ ಎಂಬುವ ಜಮೀನ್ದಾರರ ಒಬ್ಬ ಮಗ ಸ್ವಲ್ಪ ಕಾಲ ನಡೆಸುತ್ತಿದ್ದುದು ನೆನಪಿಗೆ ಬರುತ್ತಿದೆ. ಆದರೆ
ಅವರು ಪ್ರಾಯಶಃ ಅದನ್ನು ಹೆಚ್ಚು ದಿನ ನಡೆಸಲಿಲ್ಲ.
-----ಮುಂದಿನ
ಅಧ್ಯಾಯದಲ್ಲಿ ಮುಕ್ತಾಯ----
No comments:
Post a Comment