ಅಧ್ಯಾಯ ೬
ಬಂತು! ಬಂತು! ನಯಾಪೈಸ
ಬಂತು! - ತಂತು!
ತಂತು! ಶಂಕರ್ ಕಂಪನಿಗೆ ಸಮಸ್ಯೆ ತಂತು!
ಅದು
೧೯೫೭ನೇ ಇಸವಿ. ಒಂದು ದಿನ ನಮ್ಮ ಶಾಲೆಯ ಮೇಷ್ಟರಾದ ಶ್ರೀಕಂಠ ಜೋಯಿಸರು ಒಂದು ಸಣ್ಣ ಬಟ್ಟೆಯ ಚೀಲದೊಡನೆ
ನಮ್ಮ ಮನೆಗೆ ಬಂದರು. ಅದರಲ್ಲಿದ್ದ ಹಣವನ್ನು ನಮ್ಮ ಮುಂದೆ ಹರಡಿ ತೋರಿಸಿದರು. ಅವುಗಳು ಆಗ ತಾನೇ ಭಾರತ
ಸರ್ಕಾರ ಹೊರಡಿಸಿದ್ದ ನಯಾಪೈಸೆ ನಾಣ್ಯಗಳಂತೆ. ಅವುಗಳು ಒಂದು, ಎರಡು, ಐದು, ಹತ್ತು, ೨೫ ಮತ್ತು ೫೦ ನಯಾಪೈಸೆ ಮತ್ತು ಹೊಸ ಒಂದು ರೂಪಾಯಿ ಅಂದರೆ ೧೦೦ ನಯಾಪೈಸೆ
ಮುಖಬೆಲೆಯ ನಾಣ್ಯಗಳಂತೆ. ನಾವು ಅಲ್ಲಿಯವರೆಗೆ ಕಾಸು,
ಬಿಲ್ಲೆ, ಅರ್ಧ ಆಣೆ, ೧ ಆಣೆ, ೨ ಆಣೆ, ೪ ಆಣೆ, ೮ ಆಣೆ
ಹಾಗೂ ೧ ರೂಪಾಯಿ ನಾಣ್ಯಗಳನ್ನು ಮಾತ್ರಾ ನೋಡಿದ್ದೆವು.
ಹಾಗೂ ಒಂದು ಆಣೆಗೆ ೧೨ ಕಾಸುಗಳು ಮತ್ತು ೧೬ ಆಣೆಗಳಿಗೆ ಒಂದು ರೂಪಾಯಿ ಎಂದು ಶಾಲೆಯಲ್ಲಿ ಕೂಡುಲೆಕ್ಕ
ಮಾಡುವುದನ್ನು ಕಲಿತಿದ್ದೆವು..
ಆದರೆ
ಮೇಷ್ಟರ ಪ್ರಕಾರ ಇನ್ನು ಮುಂದೆ ೧ ಆಣೆಗೆ ೬ ನಯಾಪೈಸೆ ಮತ್ತು ೨ ಆಣೆಗೆ ೧೨ ನಯಾಪೈಸೆ ಸಮವಂತೆ. ಆದರೆ ೪ ಆಣೆಗೆ ೨೫ ನಯಾಪೈಸೆ, ೮ ಆಣೆಗೆ ೫೦ ನಯಾಪೈಸೆ ಹಾಗೂ
೧ ರೂಪಾಯಿಗೆ ೧೦೦ ನಯಾಪೈಸೆ ಆಗುವುದಂತೆ! ನಮಗೆ ಇದೊಂದು
ಮೋಸದ ಲೆಕ್ಖಚಾರ ಎಂದು ಅನಿಸಿತು. ಏಕೆಂದರೆ ವೀಳ್ಯದೆಲೆ
ಮತ್ತು ಬಾಳೆಹಣ್ಣು ನಾವು ೧ ಆಣೆ ಮತ್ತು ೨ ಆಣೆಗೆ ಚಿಲ್ಲರೆ ಮಾರಾಟ ಮಾಡುತ್ತಿದ್ದೆವು. ಹೊಸ ಲೆಕ್ಕದ ಪ್ರಕಾರ
ನಮಗೆ ೧೬ ಆಣೆಯಷ್ಟು ಮಾರಾಟ ಮಾಡಿದಾಗ ಕೈಯ್ಯಲ್ಲಿ ೧ ರೂಪಾಯಿಗೆ ಬದಲಾಗಿ ೯೬ ನಯಾಪೈಸೆ ಇರುತ್ತಿತ್ತು. ಇದು ಒಂದು
ರೂಪಾಯಿಗೆ ೪ ನಯಾಪೈಸೆ ಕಮ್ಮಿ ಆಗುತ್ತಿತ್ತು! ಇನ್ನು
ಶಂಕರ್ ಬಸ್ ಪ್ರಯಾಣಿಕರಿಗೆ ಉಂಟಾದ ಸಮಸ್ಯೆ ಹೇಳತೀರದು. ಕೊಪ್ಪಕ್ಕೆ ಬಿ ಜಿ ಕಟ್ಟೆಯಿಂದ ೬ ಆಣೆ ಚಾರ್ಜ್ ಇತ್ತು. ಕಂಡಕ್ಟರ್ ಪ್ರಕಾರ ಅದು (೨೫+೧೨) ೩೭ ನಯಾಪೈಸೆ. ಆದರೆ ಪ್ರಯಾಣಿಕರ ಪ್ರಕಾರ ಅದು (೬x೬) ಅಂದರೆ ೩೬ ನಯಾಪೈಸೆ
ಮಾತ್ರಾ! ಬೇರೆ ಸ್ಥಳಗಳಿಗೆ ಹೋಗುವವರಿಗೂ ಕೂಡ ಇದೆ
ರೀತಿ ಭಿನ್ನಾಭಿಪ್ರಾಯಗಳು ಬಂದು ಕಂಡಕ್ಟರ್ಗಳ ಸಮಸ್ಯೆ ಜಟಿಲವಾಯಿತು. ಸಮಸ್ಯೆಗಳು ಬಗೆ ಹರಿದು ನಯಾಪೈಸೆ
ಜಮಾನಕ್ಕೆ ಹೊಂದಿಕೊಳ್ಳಲು ತುಂಬಾ ಸಮಯ ಬೇಕಾಯಿತು.
ಮುಂದೆ ಭಾರತ ಸರ್ಕಾರ ೧ ಜೂನ್ ೧೯೬೪ ರಿಂದ ನಯಾಪೈಸೆ ಹೆಸರನ್ನು ತೆಗೆದುಹಾಕಿ ಅದನ್ನು ಕೇವಲ ಪೈಸೆ ಎಂದು
ಮಾಡಿತು.
ಕೊಪ್ಪ ಬಸ್ ಸ್ಟಾಂಡ್ ಟಿಕೆಟ್
ಕೌಂಟರ್ ಮತ್ತು ಮೂರ್ತಿರಾಯರು
ಶಂಕರ್
ಕಂಪನಿಯ ಎಲ್ಲಾ ಬಸ್ಸುಗಳೂ ಕೊಪ್ಪ ಬಸ್ ನಿಲ್ದಾಣಕ್ಕೆ ಬಂದು ಹೋಗಬೇಕಾಗಿತ್ತು. ಅಲ್ಲಿಂದ ಹೊರಡುವ ಪ್ರಯಾಣಿಕರಿಗೆ
ನಿಲ್ದಾಣದಲ್ಲೇ ಒಂದು ಮೇಜಿನ ಹಿಂದೆ ಕುಳಿತಿರುತ್ತಿದ್ದ ಮೂರ್ತಿರಾಯರು ಮತ್ತು ಕಾಮತ್ ಎಂಬ ಇಬ್ಬರು
ಕಂಪನಿಯ ಪರವಾಗಿ ಟಿಕೆಟ್ ನೀಡುತ್ತಿದ್ದರು. ಅಡ್ಡ ಪಂಚೆ ಧರಿಸಿದ ಮೂರ್ತಿರಾಯರು ಕಂಪನಿಯ ಒಂದು ಬ್ರಾಂಡ್
ಆಗಿ ಬಿಟ್ಟಿದ್ದರು. ಕಾಮತ್ ಅವರು ಮಾತ್ರ ಪ್ಯಾಂಟ್ ಮತ್ತು ಬುಷ್ ಶರ್ಟ್ ಧರಿಸಿ ತುಂಬಾ ಟೀಕುಟಾಕಾಗಿ
ಕಾಣಿಸುತ್ತಿದ್ದರು. ಪ್ರತಿಯೊಂದು ಬಸ್ ನಿಲ್ದಾಣದೊಳಗೆ ಬರುತ್ತಿದ್ದಂತೇ ಮೂರ್ತಿರಾಯರು ಏರು ದ್ವನಿಯಲ್ಲಿ ಆ ಬಸ್ ಹೋಗುವ ಮಾರ್ಗವನ್ನು ಹೇಳುತ್ತಾ
(ಉದಾಹರಣೆಗೆ: ಯಾರ್ರೀ ಜಯಪುರ,ಬಾಳೆಹೊನ್ನೂರ್, ಆಲ್ದೂರ್, ಚಿಕ್ಕಮಗಳೂರ್, ಚಿಕ್ಕಮಗಳೂರ್, ಚಿಕ್ಕಮಗಳೂರ್ ಅಥವಾ ಯಾರ್ರೀ ಕುದುರೆಗುಂಡಿ, ಎನ್ ಆರ್ ಪುರ, ಶಿವಮೊಗ್ಗಾ, ಶಿವಮೊಗ್ಗಾ, ಶಿವಮೊಗ್ಗಾ ಎಂದು)
ಮೈಕಿನಲ್ಲಿ ಹೇಳಿದಷ್ಟು ಗಟ್ಟಿಯಾಗಿ ಕೂಗುತ್ತಿದ್ದರು.
ಹಾಗೆಯೇ ಟಿಕೆಟ್ ನೀಡಲು ಪ್ರಾರಂಭಿಸುತ್ತಿದ್ದರು. ಪ್ರತಿಯೊಂದು ಬಸ್ಸೂ ಮೂರ್ತಿರಾಯರು ಅಥವಾ ಕಾಮತ್ ಅವರು ಸೀಟುಗಳನ್ನು ಎಣಿಕೆ ಮಾಡಿ
ಅದು ಗೇಟ್ ಪಾಸಿಗೆ ಹೊಂದಾಣಿಕೆ ಆದ ಮೇಲೆಯೇ ನಿಲ್ದಾಣ ಬಿಡಬೇಕಾಗಿತ್ತು. ಆದ್ದರಿಂದ ಕಂಡಕ್ಟರ್ ಅವರಿಂದ
ಸಹಿ ಪಡೆದ ಗೇಟ್ ಪಾಸ್ ದೊರೆತ ಮೇಲೆಯೇ ಸೀಟಿ ಹೊಡೆಯುತ್ತಿದ್ದ. ಕೆಲವೊಮ್ಮೆ ಕೇವಲ ಒಂದು ಸೀಟ್ ವ್ಯತ್ಯಾಸ
ಬಂದು ಬಸ್ಸು ಹೊರಡಲು ೧೫ ರಿಂದ ೨೦ ನಿಮಿಷಗಳು ತಡವಾಗುತ್ತಿತ್ತು. ಇಂತಹ ಪ್ರಸಂಗಗಳು ಪ್ರಯಾಣಿಕರ ತಾಳ್ಮೆಯ
ಪರೀಕ್ಷೆ ಮಾಡಿದಂತಿರುತ್ತಿತ್ತು. ಎಷ್ಟೋ ಬಾರಿ ಎಲ್ಲ ಪ್ರಯಾಣಿಕರ ಟಿಕೆಟ್ ಚೆಕ್ ಮಾಡುವಾಗ ಅದರಲ್ಲಿ
ಬೇರೆ ಊರಿನಿಂದ ಬಂದ ಒಬ್ಬರು ಪ್ರಯಾಣಿಕರ ಕೈಯಲ್ಲಿ ಥ್ರೂ ಟಿಕೆಟ್ ಇರುವುದು ಗೊತ್ತಾಗುತ್ತಿತ್ತು!
ಅದು ಗೇಟ್ ಪಾಸಿನಲ್ಲಿ ಎಂಟ್ರಿ ಆಗದೇ ಇರುವುದೇ ಒಂದು ಸೀಟ್ ವ್ಯತ್ಯಾಸಕ್ಕೆ ಕಾರಣವಾಗಿರುತ್ತಿತ್ತು.
ಶಂಕರ್ ಕಂಪನಿಯ ಆಫೀಸ್ ಮತ್ತು
ವರ್ಕ್ ಶಾಪ್
ಶಂಕರ್
ಕಂಪನಿಯ ಬಸ್ಸುಗಳು ಯಾವುದೇ ಮಾರ್ಗದಲ್ಲಿ ಕೆಟ್ಟು ನಿಂತು ಹೋಗುವ ಪ್ರಸಂಗಗಳನ್ನು ನಾವು ಕೇಳಿರಲೇ ಇಲ್ಲ.
ಕಂಪನಿಯ ಒಂದು ದೊಡ್ಡ ವರ್ಕ್ ಶಾಪ್ ಮತ್ತು ಅದಕ್ಕೆ ಸೇರಿದಂತಿದ್ದ ಒಂದು ದೊಡ್ಡ ಆಫೀಸ್ ಪಟ್ಟಣದ ಮಧ್ಯ
ಭಾಗದಲ್ಲಿದ್ದುವು. ಪ್ರತಿಯೊಂದು ಬಸ್ ಕೂಡಾ ವರ್ಕ್
ಶಾಪ್ ನೊಳಗೆ ಸಂಪೂರ್ಣ ಪರೀಕ್ಷೆಗೊಂಡ ನಂತರವೇ ಕೊಪ್ಪ ಬಸ್ ನಿಲ್ದಾಣಕ್ಕೆ ಬರುತ್ತಿತ್ತು. ಮನೋಹರ ರಾವ್
ಎಂಬುವವರು ವರ್ಕ್ ಶಾಪಿನ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಕಂಪನಿಯ ಮುಖ್ಯಸ್ಥರಾದ ರಮೇಶ್ ರಾವ್
ಮತ್ತು ಮನೋಹರ ರಾವ್ ಅವರಿಗೆ ಆಫೀಸ್ ಒಳಗೆ ವಿಶೇಷ ಕ್ಯಾಬಿನ್ಗಳು ಇದ್ದುವಂತೆ. ಆಫೀಸ್ ನಲ್ಲಿ ನೌಕರರ
ಸಂಖ್ಯೆ ಕೂಡ ತುಂಬಾ ದೊಡ್ಡದಿತ್ತಂತೆ. ಒಟ್ಟಿನಲ್ಲಿ ಕಂಪನಿಯ ಆಡಳಿತ ವರ್ಗ ಕಂಪನಿಯ ಆಡಳಿತ ಮತ್ತು
ಚಟುವಟಿಕೆಯನ್ನು ತುಂಬಾ ದಕ್ಷತೆಯಿಂದ ಹಾಗೂ ಲಾಭಕರವಾಗಿ ನಡೆಸುತ್ತಿತ್ತು.
"ಸಹಕಾರ ಸಾರಿಗೆ"
ಶಂಕರ್
ಕಂಪನಿಯ ಹೆಸರು ಇಂದು ಕೇವಲ ನೆನಪು ಮಾತ್ರಾ. ಆದರೆ ಮನಸ್ಸಿಗೆ ತುಂಬಾ ಸಂತೋಷ ಕೊಡುವ ವಿಚಾರವೆಂದರೆ,
ಕಂಪನಿ ಮುಚ್ಚುವ ಸಂದರ್ಭದಲ್ಲಿ ನೌಕರ ವರ್ಗ ಅದರ ಆಡಳಿತವನ್ನು ವಹಿಸಿಕೊಂಡು ಇಂದಿಗೂ ಕೂಡಾ"ಸಹಕಾರ
ಸಾರಿಗೆ" ಹೆಸರಿನಲ್ಲಿ ಅದನ್ನು ಸಾಮರ್ಥ್ಯದಿಂದ ನಡೆಸುತ್ತಿರುವುದು. "ಸಹಕಾರ ಸಾರಿಗೆ"
ನಿರಂತರವಾಗಿ ಮುಂದುವರಿಯಲೆಂದು ಆಶಿಸುತ್ತೇನೆ.
----ಮುಂದುವರಿಯುವುದು ---
No comments:
Post a Comment