ನಾನು
ಬಸವಾನಿ ಶಾಲೆಯಲ್ಲಿ ೬ನೇ ತರಗತಿಯಿಂದ ಪಾಸಾಗಿ
೧೯೬೦-೬೧ ರಲ್ಲಿ ೭ನೇ
ತರಗತಿಗೆ ಪ್ರವೇಶಿಸಿದೆ. ಆ ವರ್ಷ ಹೊಕ್ಕಳಿಕೆಯಲ್ಲಿ
ನಾಲ್ಕನೇ ತರಗತಿ ಪಾಸಾದ ಮಂಜಪ್ಪ,
ಪುರುಷೋತ್ತಮ ಮತ್ತು ಸದಾಶಿವಯ್ಯನವರ ಮಗ
ರಾಮಚಂದ್ರ ನನ್ನೊಡನೆ ೫ನೇ ತರಗತಿಗಾಗಿ ಬಸವಾನಿ
ಶಾಲೆಗೆ ಬರತೊಡಗಿದರು. ಪುರುಷೋತ್ತಮ ಮಾರನೇ ವರ್ಷ ಗಡಿಕಲ್
ಶಾಲೆಗೆ ತನ್ನ ಅಕ್ಕ ರಮಾದೇವಿಯೊಡನೆ
ಹೋಗತೊಡಗಿದ. ಹಾಗೆಯೇ ಜನಾರ್ಧನಯ್ಯನವರ ಮಗ
ನಾಗರಾಜ ಬಸವಾನಿ ಶಾಲೆಗೆ ಬರತೊಡಗಿದ.
ಹೊಕ್ಕಳಿಕೆ ಹುಡುಗರ ನನ್ನ ಆಟದ
ಗುಂಪು ಸ್ವಲ್ಪ ಕಡಿಮೆಯಾಯಿತು. ಏಕೆಂದರೆ
ವೆಂಕಟ್ರಾಯ ನರ್ಜಿಗೆ ವಾಪಸ್ ಹೋಗಿ
ಬಿಟ್ಟ. ಇನ್ನು ಕೃಷ್ಣಯ್ಯನವರ ಮಗ
ರಾಮಚಂದ್ರ ತನ್ನ ಅಕ್ಕ ಲಲಿತಾಳ
ಸಂಗಡ ಬಸರಿಕಟ್ಟೆ ಸದ್ಗುರು ವಿದ್ಯಾಶಾಲೆ ಸೇರಿಬಿಟ್ಟ.
ಬಸರಿಕಟ್ಟೆ ಶಾಲೆ
ಮತ್ತು ಗಂಜಿ ಊಟ!
ಚಿಕ್ಕಂದಿನಿಂದಲೂ
ನಮಗೆ ನಮ್ಮ ಮನೆಯಲ್ಲಿ ಬೆಳಗಿನ
ಉಪಾಹಾರ ನಮ್ಮ ಅಮ್ಮನ ಕೃಪೆಯಿಂದ
ತುಂಬಾ ಗಡದ್ದಾಗಿ ಇರುತ್ತಿತ್ತು. ತುಪ್ಪ, ಚಟ್ನಿ ಮತ್ತು ಮೊಸರಿನ ಒಡನೆ
ನಾವು ತಿನ್ನುತ್ತಿದ್ದ ದೋಸೆಗಳಿಗೆ ಕೆಲವು ಬಾರಿ ಲೆಕ್ಕವೇ
ಸಿಗುತ್ತಿರಲಿಲ್ಲ! ನನಗೆ ಹೊಕ್ಕಳಿಕೆಯಲ್ಲಿ ಅಕ್ಕನ
ಕೃಪೆಯಿಂದ ಅದೇ ವ್ಯವಸ್ಥೆ (ಸ್ವಲ್ಪ
ಜಾಸ್ತಿ ತುಪ್ಪ ಮತ್ತು ಮೊಸರಿನೊಡನೆ!)
ಮುಂದುವರೆಯಿತು. ನಾವು ತಿನ್ನುವ ಭರಾಟೆ
ನೋಡಿ ಅಮ್ಮ ಆಗಾಗ ನಮ್ಮನ್ನು
ಹೆದರಿಸುತ್ತಿದ್ದಳು. ನಮ್ಮನ್ನು ಮುಂದೆ ಬಸರಿಕಟ್ಟೆ ಶಾಲೆಗೆ ಸೇರಿಸಿದರೆ ನಮಗೆ ಬುದ್ಧಿ
ಬರುವುದೆಂದು! ಏಕೆಂದರೆ ನಾವು ಕೇಳಿದ ಪ್ರಕಾರ ಬಸರಿಕಟ್ಟೆ ಶಾಲೆಯಲ್ಲಿ ಬೆಳಗಿನ ಉಪಾಹಾರಕ್ಕೆ ಕೇವಲ ಅಕ್ಕಿ ಗಂಜಿಯಂತೆ! ನಾವು ಎಷ್ಟೋ ಬಾರಿ ರಾತ್ರಿ ಕನಸಿನಲ್ಲಿ
ಬಸರಿಕಟ್ಟೆ ಶಾಲೆಯಲ್ಲಿ ಗಂಜಿ ತಿನ್ನುತ್ತಿರುವಂತೆ ಕಂಡು ಬೆಚ್ಚಿ ಬಿದ್ದು ಎಚ್ಚರಗೊಳ್ಳುತ್ತಿದ್ದುದು ನೆನಪಿಗೆ ಬರುತ್ತಿದೆ!
ಸದಾಶಿವಯ್ಯನವರ ರೌದ್ರಾವತಾರ
ಮತ್ತು ಗಣೇಶಯ್ಯನವರ
ಹೊಸಮನೆ
ಗೃಹ
ಪ್ರವೇಶ
ಸದಾಶಿವಯ್ಯನವರ
ಮಗ ರಾಮಚಂದ್ರ ತುಂಬಾ ಸಾಧು ಸ್ವಭಾವದ
ಹುಡುಗ ಹಾಗೂ ಓದಿನಲ್ಲೂ ಬುದ್ಧಿವಂತನಾಗಿದ್ದ.
ಅವನ ಚಿಕ್ಕಪ್ಪಂದಿರಾದ ಶ್ರೀನಿವಾಸಯ್ಯ, ಅಚ್ಯುತಯ್ಯ ಮತ್ತು ಗಣೇಶಯ್ಯ ಆಗ
ಅವರ ಹಳೆಮನೆಯಲ್ಲಿ ಒಟ್ಟಾಗಿ ಇದ್ದರು. ಅವರಿಗೆಲ್ಲಾ
ರಾಮಚಂದ್ರನ ಮೇಲೆ ತುಂಬಾ ಪ್ರೀತಿ
ಇತ್ತು. ಅದೇ ವರ್ಷ ಗಣೇಶಯ್ಯ
ರಸ್ತೆಯ ಪಕ್ಕಕ್ಕೆ ಶಾಲೆಯ ಎದುರಿಗೆ ಹೊಸಮನೆ
ಕಟ್ಟಿ ಗೃಹ ಪ್ರವೇಶ ಮಾಡಿದರು.
ನಾಲ್ಕು ಜನ ಅಣ್ಣ ತಮ್ಮಂದಿರಿಗೂ
ಆಸ್ತಿ ಪಾಲಾಗಿದ್ದರೂ ಸದಾಶಿವಯ್ಯನವರಿಗೆ ಜಮೀನಿನ ಹಂಚಿಕೆಯಲ್ಲಿ ಅಸಮಾಧಾನವಿತ್ತು.
ಮೇಲಾಗಿ ಸದಾಶಿವಯ್ಯನವರಿಗೆ ದೂರ್ವಾಸ ಮುನಿಯಂತೆ ತುಂಬಾ
ಮುಂಗೋಪವಿತ್ತು. ಹಾಗೂ ಅವರು ಬೇರೆಯವರು
ಬುದ್ಧಿವಾದ ಹೇಳಿದರೆ ಕಿವಿಗೊಡುತ್ತಿರಲಿಲ್ಲ. ಆ
ವರ್ಷ ಅವರ ಮನೆಯ ಹತ್ತಿರದ
ತೋಟದಲ್ಲಿ ತಮ್ಮಂದಿರ ಕಡೆಯ ಜನ ಅಡಿಕೆಕೊನೆ
ತೆಗೆಯಲು ಹೋದಾಗ ದೊಡ್ಡ ಕಾಳಗವೇ
ನಡೆದು ಹೋಯಿತು. ರಾಮಚಂದ್ರ ತುಂಬಾ ಮುಜುಗರ ಪಡುವಂತಾಯಿತು.
ಅಣ್ಣನಂತೆ
ಸ್ವಲ್ಪ ಮಟ್ಟಿಗೆ ಹೆಚ್ಚಿನ ಕೋಪವಿದ್ದ
ಅಚ್ಯುತಯ್ಯನವರೂ ಕತ್ತಿ ಹಿಡಿದು ಯುದ್ಧ
ರಂಗಕ್ಕೆ ತೆರಳುವರಿದ್ದರಂತೆ! ಅಷ್ಟರಲ್ಲಿ ಊರಿನವರು ಒಂದುಗೂಡಿ ಪರಿಸ್ಥಿತಿಯನ್ನು
ಹದಕ್ಕೆ ತಂದರಂತೆ. ಮುಂದೆ ರಾಜಿ ಪಂಚಾಯಿತಿ
ನಡೆದು ಒಂದು ತೀರ್ಮಾನಕ್ಕೆ ಬರಲಾಯಿತಂತೆ.
ಅದರ ವಿವರಗಳು ನನಗೆ ತಿಳಿಯಲಿಲ್ಲ.
ಆದರೆ ಪರಿಣಾಮವಾಗಿ ಗಣೇಶಯ್ಯ ನಮ್ಮ ಭಾವನವರ ಹತ್ತಿರ ಸ್ವಲ್ಪ
ಸಾಲ ತೆಗೆದುದು ನನಗಿನ್ನೂ ನೆನಪಿನಲ್ಲಿದೆ.
ವಾಸಪ್ಪ ನಾಯಕರ
ಹೊಸಮನೆ
ಮತ್ತು
ಚಾರಣಬೈಲ್
ಭಟ್ಟರ
ಹೊಸ
ಅಂಗಡಿ
ಹೊಕ್ಕಳಿಕೆಗೆ
ಸಮೀಪವಿದ್ದ ಮೇಲ್ಕೊಪ್ಪದಲ್ಲಿ ಆ ದಿನಗಳಲ್ಲಿ ರಸ್ತೆಯ
ಪಕ್ಕದಲ್ಲಿ ಯಾವುದೇ ಮನೆಗಳಿರಲಿಲ್ಲ. ನಾವು
ನೋಡುತ್ತಿದ್ದಂತೆ ರಸ್ತೆಯ ಕೆಳಗೆ ವಾಸಮಾಡುತ್ತಿದ್ದ
ವಾಸಪ್ಪ ನಾಯಕರು ಶಾಲೆಯ ಮುಂಭಾಗದಲ್ಲಿ
ರಸ್ತೆಯ ಪಕ್ಕದಲ್ಲಿ ಮನೆ ಮತ್ತು ಒಂದು
ಅಂಗಡಿ ಕಟ್ಟಿಸಿದರು. ಅವರಿಗೂ ಮತ್ತು ಅವರ
ತಮ್ಮ ಲಿಂಗಪ್ಪ ನಾಯಕರಿಗೂ ಆಸ್ತಿ
ಪಾಲಾದ ನಂತರ ಲಿಂಗಪ್ಪ ನಾಯಕರು
ಅತ್ತಿಕೊಡಿಗೆಯಲ್ಲಿ ಹೊಸಮನೆ ಕಟ್ಟಿಸಿ ವಾಸಮಾಡತೊಡಗಿದ್ದರು.
ಲಿಂಗಪ್ಪ ನಾಯಕರ ಅರ್ಧ ಮನೆ
ಶಿವಮೊಗ್ಗ ಜಿಲ್ಲೆಯಲ್ಲೂ ಉಳಿದ ಅರ್ಧ ಮನೆ
ಚಿಕ್ಕಮಗಳೂರು ಜಿಲ್ಲೆಯಲ್ಲೂ ಇತ್ತು! ಅವರಿಗೆ ರಾಮ
ಮತ್ತು ಲಕ್ಷ್ಮಣ ಎಂಬ ಅವಳಿ
ಜವಳಿ ಮಕ್ಕಳು ಇದ್ದರು. ವಾಸಪ್ಪ
ನಾಯಕರ ಮಗ ಪುಟ್ಟಪ್ಪ ನಾಯಕ
೬ನೇ ತರಗತಿಯಲ್ಲಿ ನನ್ನ ಸಹಪಾಠಿಯಾಗಿದ್ದ. ಆದರೆ
ಪರೀಕ್ಷೆಯಲ್ಲಿ ನಾಪಾಸಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ.
ಆ
ದಿನಗಳಲ್ಲಿ ಮೈಸೂರು ರಾಜ್ಯದಲ್ಲಿ ಪಾನ
ನಿರೋಧ ಕಾನೂನು ಜಾರಿಯಲ್ಲಿತ್ತು. ಆದರೆ
ಕಳ್ಳಭಟ್ಟಿ ದಂಧೆ ಸರಾಗವಾಗಿ ನಡೆಯುತ್ತಿತ್ತು.
ನಾವು ಶಾಲೆಗೆ ಹೋಗುವ ಮಾರ್ಗದಲ್ಲಿದ್ದ
ಕವಡೆಕಟ್ಟೆಯ ಕೆಳಗೆ ಕಾಡಿನಲ್ಲಿ ಈ
ದಂಧೆ ನಡೆಯುತ್ತಿತ್ತು. ಅನೇಕ ಬಾರಿ ನಾವು ಶಾಲೆಯಿಂದ
ಸಂಜೆ ಹಿಂದಿರುಗುವಾಗ ವಾಸಪ್ಪ ನಾಯಕರು ಆ
ಕಾಡಿನೊಳಗಿಂದ ತಲೆ ಬಗ್ಗಿಸಿಕೊಂಡು ನುಸುಳಿ
ಹೊರಗೆ ಬರುತ್ತಿರುವ ದೃಶ್ಯ ಕಣ್ಣಿಗೆ ಬೀಳುತ್ತಿತ್ತು.
ಅವರ ಬಾಯಿಯಿಂದ ಹೊರಬೀಳುತ್ತಿದ್ದ ಕಳ್ಳಭಟ್ಟಿ ವಾಸನೆ ನಮಗೆ ದೂರದಿಂದಲೇ
ತಿಳಿದುಬಿಡುತ್ತಿತ್ತು.
ಮೇಲ್ಕೊಪ್ಪದ
ಮೊದಲ ಅಂಗಡಿ ವಾಸಪ್ಪ ನಾಯಕರ
ಕಟ್ಟಡದಲ್ಲಿ ಉದ್ಘಾಟನೆಯಾಯಿತು. ಅದನ್ನು ನಡೆಸುತ್ತಿದ್ದ ಚಾರಣಬೈಲ್
ವೆಂಕಟಗಿರಿ ಭಟ್ಟರ ತಮ್ಮ (ಹೆಸರು
ನೆನಪಿಗೆ ಬರುತ್ತಿಲ್ಲ) ಬಹು ಬೇಗನೆ ನಮ್ಮ
ಸ್ನೇಹಿತನಾಗಿ ಬಿಟ್ಟ. ನಾವು ಶಾಲೆಯಿಂದ
ವಾಪಾಸ್ ಬರುವಾಗ ಸ್ವಲ್ಪ ಕಾಲ
ಅವರ ಅಂಗಡಿಯಲ್ಲಿ ಕಳೆಯುತ್ತಿದ್ದೆವು. ಅಂಗಡಿಯಲ್ಲಿ ಸೋಡಾ ಮತ್ತು ಕ್ರಶ್
ಮಾರಾಟಕ್ಕಿರುತ್ತಿತ್ತು. ನನ್ನ ಕೈಗೆ ಹಣ
ಸಿಕ್ಕಾಗ ಕ್ರಶ್ ಕುಡಿಯುತ್ತಿದ್ದದ್ದು ನೆನಪಿಗೆ
ಬರುತ್ತಿದೆ. ಅಂಗಡಿಯನ್ನು ಯಾವಾಗ ಮುಚ್ಚಿದರೋ ಗೊತ್ತಾಗಲಿಲ್ಲ.
ವೆಂಕಟಗಿರಿ ಭಟ್ಟರ ತಮ್ಮ ಈಗ
ಶಿವಮೊಗ್ಗೆಯಲ್ಲಿ ರಾಮಣ್ಣ ಶೆಟ್ಟಿ ಪಾರ್ಕಿನ
ಗಣಪತಿ ಪೂಜೆಗೆ ನಿಯುಕ್ತರಾಗಿದ್ದರೆಂದು ತಿಳಿಯಿತು.
ಜನಾರ್ಧನಯ್ಯ ಮತ್ತು
ಭಂಡಿಗಡಿ
ಸಾಹೇಬರ
ಸಿವಿಲ್
ಕೇಸ್
ಜನಾರ್ಧನಯ್ಯನವರು
ಹಣಕಾಸಿನ ವ್ಯವಹಾರದಲ್ಲಿ ನಮ್ಮ ಭಾವನವರಿಗೇನು ಕಡಿಮೆ
ಇರಲಿಲ್ಲ. ತಮ್ಮ ವಾರ್ಷಿಕ ಗಳಿಕೆಯಲ್ಲಿ
ಹಣ ಮಿಗಿಸಿ
ಅದರಲ್ಲಿ ಹೊಸ
ಜಮೀನುಗಳನ್ನು ಖರೀದಿಸಬೇಕೆಂಬ ಜಾಣ್ಮೆ ಅವರಿಗಿತ್ತು. ತಮ್ಮ
ನಂತರದ ಮುಂದಿನ
ಪೀಳಿಗೆಗಾಗಿ ಸಾಕಷ್ಟು ಜಮೀನು ಇರುವಂತೆ
ಮಾಡುವುದು ಅವರ ಗುರಿಯಾಗಿತ್ತು. ತಮ್ಮ
ರಾಮಯ್ಯನವರೊಡನೆ ಆಸ್ತಿ ಪಾಲಾದ ಸ್ವಲ್ಪ
ಸಮಯದ ನಂತರ ಅವರು ಮೇಲ್ಕೊಪ್ಪದಲ್ಲಿ
ಸ್ವಲ್ಪ ಅಡಿಕೆ ತೋಟವನ್ನು ಖರೀದಿಸಿದರು.
ಆದರೆ ಆ ಆಸ್ತಿ ಅವರ
ಕೈಗೆ ಬರುವ ಮುನ್ನವೇ ಕೋರ್ಟ್
ವ್ಯವಹಾರದಲ್ಲಿ ಸಿಕ್ಕಿಹಾಕಿಕೊಂಡಿತು.
ಆ
ಕೇಸ್ ನರಸಿಂಹರಾಜಪುರದ ನ್ಯಾಯಾಲಯದಲ್ಲಿ ತುಂಬಾ ವರ್ಷ ನಡೆದಿರಬೇಕು.
ಏಕೆಂದರೆ ಜನಾರ್ಧನಯ್ಯನವರು ಆಗಾಗ ನರಸಿಂಹರಾಜಪುರಕ್ಕೆ ಹೋಗಿ
ಬರುವುದು ನಮಗೆ ತಿಳಿಯುತ್ತಿತ್ತು. ಅಂತಿಮವಾಗಿ
ಜನಾರ್ಧನಯ್ಯನವರು ವಿಜಯ ಸಾಧಿಸಿರಬೇಕು. ಏಕೆಂದರೆ
ಅವರ ಒಬ್ಬ ಮಗ ಈಗ
ಮೇಲ್ಕೊಪ್ಪದಲ್ಲಿ ಮನೆ ಕಟ್ಟಿಸಿ ಜಮೀನು
ಸಾಗುವಳಿ ಮಾಡುತ್ತಾನೆಂದು ತಿಳಿಯಿತು.
ಗೋಳ್ಗಾರ್ ನೀಲಕಂಠ
ರಾಯರ
ಮದುವೆ
ಮತ್ತು
ಸೋದರ
ಮಾವಂದಿರೊಡನೆ
ಮನಸ್ತಾಪ
ನಾನು
ಈ ಮೊದಲೇ ಬರೆದಂತೆ
ತಿಮ್ಮಪ್ಪಯ್ಯನವರ ತಂಗಿ ಸುಬ್ಬಮ್ಮನವರನ್ನು ಗೋಳ್ಗಾರ್
ತಿಮ್ಮಪ್ಪಯ್ಯನವರಿಗೆ ಮದುವೆ ಮಾಡಿ
ಕೊಡಲಾಗಿತ್ತು. ದಂಪತಿಗಳು ಮತ್ತು ಅವರ ಮಕ್ಕಳು
ತಿಮ್ಮಪ್ಪಯ್ಯನವರ ಮನೆಗೆ ಎಲ್ಲ ಸಮಾರಂಭಗಳಿಗೂ
ಬಂದು ಹೋಗುತ್ತಿದ್ದರು. ನಾನು ಈ ಮೊದಲೇ
ಬರೆದಂತೆ ಅವರ ಕಿರಿಯ ಮಗ
ವೆಂಕಟರಮಣ ರುಕ್ಮಿಣಕ್ಕ ಮದುವೆಯಾಗಿ ಬರುವಾಗ ನಮ್ಮೊಡನೆ ಎತ್ತಿನ
ಗಾಡಿಯಲ್ಲಿ ಹೊಸಮನೆಗೆ ಬಂದಿದ್ದ. ಆಮೇಲೆ ಅವರ ಹಿರಿಯ
ಮಗ ನೀಲಕಂಠರಾಯರ ಮದುವೆ ಹುಲ್ಕುಳಿ ಸಾಹುಕಾರ್
ಸುಬ್ಬರಾಯರ ಮಗಳು ರಾಧಾಳೊಡನೆ ಹುಲ್ಕುಳಿ
ಮನೆಯಲ್ಲಿ ವಿಜೃಂಭಣೆಯೊಡನೆ ನೆರವೇರಿತು.
ಮದುವೆ ಸಮಾರಂಭದಲ್ಲಿ
ನೀಲಕಂಠರಾಯರ ಸೋದರ ಮಾವಂದಿರಾದ ತಿಮ್ಮಪ್ಪಯ್ಯ,ವಾಸುದೇವಯ್ಯ, ಸುಬ್ಬಣ್ಣ, ಕೃಷ್ಣಮೂರ್ತಿ ಮತ್ತು ಮಂಜಪ್ಪಯ್ಯನವರು ಭಾಗವಹಿಸಿದ್ದರಂತೆ. ಹಿರಿಯ
ಸೋದರ ಮಾವನಾದ ಹೊಸಮನೆ ತಿಮ್ಮಪ್ಪಯ್ಯ ಹುಲ್ಕುಳಿ
ಸುಬ್ಬರಾಯರ ಆತ್ಮೀಯ ಸ್ನೇಹಿತರೂ ಆಗಿದ್ದರು.
ಆದ್ದರಿಂದ ಮದುವೆಯಲ್ಲಿ ಅವರ ಪಾತ್ರ ಹಿರಿದಾಗಿತ್ತು.
ಆದರೆ
ಯಾವುದೋ ಕಾರಣಕ್ಕಾಗಿ ಮದುವೆ ಸಮಾರಂಭದ ನಡುವೆ ಮನಸ್ತಾಪ ಉಂಟಾಯಿತಂತೆ.
ಅದು ಯಾವ ಮಟ್ಟಕ್ಕೆ ಹೋಯಿತೆಂದರೆ
ತಿಮ್ಮಪ್ಪಯ್ಯ ಮತ್ತು ಅವರ ಸಹೋದರರ
ಸಂಬಂಧ ಅವರ ಭಾವ ಗೋಳ್ಗಾರ್
ತಿಮ್ಮಪ್ಪಯ್ಯನವರ ಸಂಸಾರದೊಡನೆ ಸಂಪೂರ್ಣವಾಗಿ ಕಡಿದು ಹೋಯಿತು. ಆಮೇಲೆ
ಅದು ಯಾವಾಗ ಸರಿಹೊಂದಿತೆಂದು ನನಗೆ
ತಿಳಿದು ಬರಲಿಲ್ಲ. ಪ್ರಾಯಶಃ ತಿಮ್ಮಪ್ಪಯ್ಯನವರ ಕಾಲದಲ್ಲಿ
ಅದು ಸರಿ ಹೊಂದಲೇ ಇಲ್ಲ.
----ಮುಂದುವರಿಯುವುದು ---
4 comments:
ಕಥೆ ಚೆನ್ನಾಗಿದೆ
ರವಿಶಂಕರ್ ಕೆ ವಿ
ವಂದನೆಗಳು
ಬೆಳಿಗ್ಗೆ ಏಳುವುದೇ ದೋಸೆ ತಿನ್ನವುದಕ್ಕೆ ಎನ್ನುವ ಜಾಯಮಾನದವರು ನಾವು. ನಾಲ್ಕು ದೋಸೆ ಚಟ್ನಿ ಜೊತೆ ತಿಂದು ನಂತರ ನಂಗೆರಡು ದೋಸೆ ಮಜ್ಜಿಗೆ ಬೆಲ್ಲ ಎಂದು ಕೂಗಿ ಆರು ದೋಸೆಗೆ ತಿಂಡಿ ಮುಗಿಸುತಿದ್ದೆವು . ಅಲ್ಲದೆ ಎಲ್ಲರ ತಿಂಡಿ ಮುಗಿದ ನಂತರ ಮತ್ತೊಂದು ಕಾವಲಿ ಮೇಲೆ ಇರುವ ದೋಸೆಗೆ ಬೆಲ್ಲ ಹಾಕಿ ಸಿಹಿ ದೋಸೆ ಮಾಡಿಕೊಂಡು ತಿನ್ನುತಿದ್ದೆವು. ಇದರ ನಡುವೆ ಪುಟ್ಟಣ್ಣ ಬೆಂಗಳೂರಿಗೆ ಹೋಗಿ ಬಂದವನು ಬೆಂಗಳೂರಿನಲ್ಲಿ ಎಲ್ಲರೂ ಬೆಳಿಗ್ಗೆ ಎರಡು ಇಡ್ಲಿ ಅಥವಾ ಒಂದು ದೋಸೆಯೊಂದಿಗೆ ತಿಂಡಿ ಮುಗಿದುತ್ತಾರೆ ಎಂಬ ಭಯಂಕರ ಸತ್ಯ ಹೇಳಿ ನಮ್ಮ ಮನೆಯಲ್ಲೂ ಅದನ್ನ ಜಾರಿಗೆ ತರಬೇಕೆಂದು ಪ್ರಯತ್ನಿಸಿ ವಿಫಲನಾದ. ಪರಿಣಾಮವಾಗಿ ನಾವು ಅವನು ಏಳುವದಕ್ಕಿಂತ ಮೊದಲೇ ತಿಂಡಿ ತಿನ್ನಲು ಸುರು ಮಾಡಿದೆವು. ಈಗ ಬೆಳಿಗ್ಗೆ ತಿಂಡಿ ತಿನ್ನಬೇಕೆನ್ನುವುದು ಒಂದು ಕಾರ್ಯಕ್ರಮವಾಗಿದೆ ವಿನಃ ಅದರ ಅವಶ್ಯಕತೆ ಇರುವುದಿಲ್ಲ
ನಮ್ಮ ಬೆಳಗಿನ ದೋಸೆ ಪುರಾಣವನ್ನು ಚೆನ್ನಾಗಿ ಬರೆದಿರುವೆ. ಆದರೆ ಆ ಮಜಾ ಈಗಿನ ಬೆಳಗಿನ ಉಪಾಹಾರದಲ್ಲಿ ಇಲ್ಲವೆನ್ನುವುದೂ ಅಷ್ಟೇ ಸತ್ಯ.
Post a Comment