ಭಾವನ ತಮ್ಮಂದಿರು
ನಾನು
ಈ ಮೊದಲೇ
ಬರೆದಂತೆ ಆಸ್ತಿ ಪಾಲಾದ ನಂತರ
ಭಾವನ ನಾಲ್ಕು ತಮ್ಮಂದಿರು ಅವರ
ಮನೆಗೆ ಬರುತ್ತಿರಲಿಲ್ಲ. ತಂದೆಯವರ ಶ್ರಾದ್ಧವನ್ನೂ ಕೂಡ
ಬೇರೆಯಾಗಿ ಮಾಡುತ್ತಿದ್ದರು. ಆದರೆ ಅವರ ಪತ್ನಿಯರ
ಸಂಬಂಧ ಅಕ್ಕನೊಡನೆ ಯಥಾ ಪ್ರಕಾರ ಮುಂದುವರೆದಿತ್ತು.
ಅದರಲ್ಲೂ ಕೃಷ್ಣಮೂರ್ತಿ ಭಾವನ ಹೆಂಡತಿ ಗೋಪಿ
ಮತ್ತು ನಾಗೇಶ ಭಾವನ ಪತ್ನಿ
ಸಿಂಗಾರಿ ಅಕ್ಕನೊಡನೆ ತುಂಬಾ ಸ್ನೇಹದಿಂದ ಇರುತ್ತಿದ್ದರು.
ನನಗೂ ಕೂಡಾ ಅವರಿಬ್ಬರೊಡನೆ ತುಂಬಾ
ಸಲಿಗೆ ಇತ್ತು. ಗೋಪಿ ಕಳಸದ
ಸಮೀಪ ಇರುವ ಅಂಬಿನಕೊಡಿಗೆ ರಂಗಯ್ಯ
ಹೆಬ್ಬಾರರ ಮಗಳು. ಅವರು ಕಟ್ಟಿಸಿದ
ಸುಂದರವಾದ ಬಂಗಲೆಯೊಂದು ಕಳಸಾ ರಸ್ತೆಯ ಪಕ್ಕದಲ್ಲಿ
ಇತ್ತು. ಪುಟ್ಟಣ್ಣನ ಉಪನಯನಕ್ಕೆ ಹೊರನಾಡಿಗೆ ಪುಟ್ಟ ರಾಯರ ಲಾರಿಯಲ್ಲಿ
ಹೋಗುವಾಗ ಅದನ್ನು ಹೊರಗಿನಿಂದ ನೋಡಿದ
ನೆನಪು ಇನ್ನೂ ಉಳಿದಿದೆ. ಗೋಪಿಯ ಮಕ್ಕಳಾದ ಚಂದ್ರಮತಿ
ಮತ್ತು ಗಾಯತ್ರಿ ಯಾವಾಗಲೂ ಅಕ್ಕನ
ಮನೆಯಲ್ಲೇ ಬಂದಿರುತ್ತಿದ್ದರು. ನಾನು ಅವರನ್ನು ಸೊಂಟದ
ಮೇಲೆ ಎತ್ತಿಕೊಂಡು ಓಡಾಡುತ್ತಿದ್ದೆ. ಊಟ ಮತ್ತು ತಿಂಡಿಯ
ವೇಳೆಗೆ ಗೋಪಿ ಅವರನ್ನು ಬಲಾತ್ಕಾರದಿಂದ
ಎತ್ತಿಕೊಂಡು ಹೋಗ ಬೇಕಾಗುತ್ತಿತ್ತು!
ನಾಗರಾಜ ಹುಟ್ಟಿದ ಮೇಲೆ ಅವನು
ನನ್ನ ಸೊಂಟ ಏರಿ ಬಿಟ್ಟ.
ಅವನನ್ನು ಎತ್ತಿಕೊಂಡು ಮನೆಯ ಸುತ್ತಾ ಸುತ್ತುತ್ತಾ
ಚರಿತ್ರೆ ಮತ್ತು ಭೂಗೋಳದ ಪಾಠಗಳನ್ನು
ಉರು ಹೊಡೆಯುತ್ತಿದ್ದ ನೆನಪುಗಳು ಹಾಗೆ ಉಳಿದಿವೆ. ನಾಗರಾಜ
ಹುಟ್ಟುವುದಕ್ಕೆ ಸ್ವಲ್ಪ ಮೊದಲು ಗೋಪಿ
ತನ್ನ ಮೊದಲ
ಮಗ ವೇಣುಗೋಪಾಲನಿಗೆ ಜನ್ಮ ನೀಡಿದಳು.
ಕೃಷ್ಣಮೂರ್ತಿ ಭಾವನ
ವಾಚ್ ಮತ್ತು ಗಡಿಯಾರ ರಿಪೇರಿ ಸರ್ವಿಸ್!
ಗೋಪಿ
ತುಂಬಾ ವಾಚಾಳಿ. ಯಾವಾಗಲೂ ಗಟ್ಟಿ
ಧ್ವನಿಯಲ್ಲೇ ಮಾತನಾಡುವಳು. ಅವಳು ಯಾವ ಸಂಕೋಚವಿಲ್ಲದೆ
ನಮ್ಮ ಭಾವನವರೊಡನೆ ಕೂಡ ಗಟ್ಟಿ ಧ್ವನಿಯಲ್ಲೇ
ಮಾತನಾಡುತ್ತಿದ್ದಳು. ಇದಕ್ಕೆ ತದ್ವಿರುದ್ಧವಾಗಿ ಕೃಷ್ಣಮೂರ್ತಿ
ಭಾವ ಶುದ್ಧ ಮೌನಿಯಾಗಿದ್ದರು. ಹಾಗೆಯೇ
ತುಂಬಾ ಮೆಲುಧ್ವನಿಯಲ್ಲಿ ಮಾತನಾಡುತ್ತಿದ್ದರು. ಅದಕ್ಕೆ ಸರಿಯಾಗಿ ಅವರು
ಸುತ್ತಮುತ್ತಲಿನ ಊರಿನಲ್ಲಿ ಎಲ್ಲೂ ಇಲ್ಲದ ವಾಚ್ ಮತ್ತು ಗಡಿಯಾರ
ರಿಪೇರಿ ವರ್ಕ್ಸ್ ಶಾಪ್ ಒಂದನ್ನು
ನಡೆಸುತ್ತಿದ್ದರು. ನಮಗೆ ಅಕ್ಕನು ಹೇಳಿದ ಪ್ರಕಾರ
ಅವರು ಅದಕ್ಕೆ ಯಾವುದೇ ಟ್ರೈನಿಂಗ್
ಪಡೆದಿರಲಿಲ್ಲ. ಒಮ್ಮೆ ಯಾರೋ ಪರಿಚಿತರು
ತಮ್ಮ ಮನೆಯ ಗಡಿಯಾರ ಕೆಟ್ಟು
ಹೋಗಿದೆಯೆಂದು ಅವರೊಡನೆ ಹೇಳಿದರಂತೆ. ಅದನ್ನು
ತರಿಸಿ ಬಿಚ್ಚಿ ನೋಡಿ ಬೇಗನೆ
ಏನು ತೊಂದರೆಯೆಂದು ಕಂಡು ಹಿಡಿದು ರಿಪೇರಿ
ಮಾಡಿ ಬಿಟ್ಟರಂತೆ! ಅಲ್ಲಿಂದ ಮುಂದೆ ಅವರು
ತಿರುಗಿ ನೋಡಲೇ ಇಲ್ಲ. ಸ್ವಪ್ರಯತ್ನದಿಂದ
ಸಕಲ ಬಗೆಯ ವಾಚ್ ಮತ್ತು
ಗಡಿಯಾರಗಳನ್ನು ರಿಪೇರಿ ಮಾಡುವುದರಲ್ಲಿ ಪರಿಣಿತರಾಗಿ
ಬಿಟ್ಟರು. ಆ ಕಾಲದ ಗಡಿಯಾರ
ಮತ್ತು ವಾಚ್ ಜರ್ಮನಿ ಅಥವಾ
ಸ್ವಿಟ್ಜರ್ಲ್ಯಾಂಡ್ ನಲ್ಲಿ ತಯಾರಾದವು. ಅವುಗಳ
ಒಳಭಾಗಗಳ ಬಗ್ಗೆ ಯಾವುದೇ ಟ್ರೈನಿಂಗ್
ಇಲ್ಲದೇ ಗುರುವಿಲ್ಲದ ವಿದ್ಯೆ ಅವರದ್ದಾಗಿತ್ತು.
ಮನೆಯ ಒಂದು ಮೂಲೆಯಲ್ಲಿದ್ದ ಕೊಠಡಿಯ
ಬಾಗಿಲಿನ ಒಂದು ಬದಿಯಲ್ಲಿ ಅವರ
ಮಿನಿ ವರ್ಕ್ ಶಾಪ್ ಇತ್ತು.
ನೀವು ಯಾವುದೇ ಸಮಯದಲ್ಲಿ ಮನೆಯೊಳಗೇ
ಹೋದರೂ ಅವರು ಒಂದು ಕನ್ನಡಕದ
ಮೂಲಕ ನೋಡುತ್ತಾ ವಾಚ್ ಒಂದರ ಒಳ
ಭಾಗವನ್ನು ಪರಿಶೀಲಿಸುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು!
ಹೊಕ್ಕಳಿಕೆಯಲ್ಲಿ
ಓದು ಮುಗಿಸಿ ನಾನು ಶಿವಮೊಗ್ಗೆಗೆ
ಹೋದ ಮೇಲೆಯೂ ಪ್ರತಿ
ವರ್ಷ ಬೇಸಿಗೆ ರಜೆಯಲ್ಲಿ ಹೊಕ್ಕಳಿಕೆಗೆ
ಹೋಗಿ ಕಡಿಮೆ ಎಂದರೆ ಒಂದು
ವಾರ ಇರುತ್ತಿದ್ದೆ. ನಾನು ಪ್ರತಿ ಬಾರಿ ಹೋದಾಗಲೂ
ಗೋಪಿ ನನ್ನನ್ನು ಒತ್ತಾಯಪೂರ್ವಕವಾಗಿ ಕರೆದು ಒಂದು ಹೊತ್ತು
ಊಟ ಹಾಕಿಯೇ ಕಳಿಸುತ್ತಿದ್ದಳು. ಆ
ಪ್ರೀತಿ ಹಾಗೆಯೆ ಮುಂದುವರೆಯಿತು. ಆದರೆ
ವಿಧಿ ಅವಳನ್ನು ಬಹು ಬೇಗನೆ
ಎಲ್ಲರಿಂದ ದೂರವಾಗಿ ಕೊಂಡೊಯ್ಯುವುದರೊಡನೆ ಅವಳ
ಪ್ರೀತಿ ನನಗೀಗ ಕೇವಲ ನೆನಪಾಗಿ
ಉಳಿದಿದೆ.
ನಾಗೇಶ ಭಾವ
ಮತ್ತು
ತ್ರಿಭಾಷಾ
ಸೂತ್ರ
ಭಾವ
ಮತ್ತು ಅವರ
ಮೊದಲ ಮೂರು ಮಂದಿ ಸಹೋದರರು
ಕೇವಲ ಕನ್ನಡ ಬರೆಯಲು ಮತ್ತು
ಓದಲು ಕಲಿತಿದ್ದರು. ಏಕೆಂದರೆ ಅವರ ವಿದ್ಯಾಭ್ಯಾಸ
ಪ್ರಾಥಮಿಕ ಶಾಲೆಯಲ್ಲೇ ಮುಕ್ತಾಯಗೊಂಡಿತ್ತು. ಆದರೆ ಎಲ್ಲರಿಗೂ ಕಿರಿಯರಾದ
ನಾಗೇಶ ಭಾವ ಬಸವಾನಿ ಮಾಧ್ಯಮಿಕ
ಶಾಲೆಗೆ ಹೋಗಿದ್ದರಿಂದ ಅವರಿಗೆ ಇಂಗ್ಲಿಷ್ ಭಾಷೆ
ಕಲಿಯಲು ಅವಕಾಶ ಸಿಕ್ಕಿತ್ತು. ಅಷ್ಟು
ಮಾತ್ರವಲ್ಲ. ಆ ಕಾಲದಲ್ಲಿ ಯಾವ
ಮಾಧ್ಯಮಿಕ ಶಾಲೆಯಲ್ಲೂ ಇಲ್ಲದ ಹಿಂದಿ ಭಾಷೆಯನ್ನು
ಬಸವಾನಿಯಲ್ಲಿ ಕಲಿಸಲಾಗುತ್ತಿತ್ತು. ಆದ್ದರಿಂದ ಅವರಿಗೆ ಅದನ್ನೂ ಕಲಿಯುವ
ಅವಕಾಶ ಸಿಕ್ಕಿತು. ನಾನು ೬ನೇ ತರಗತಿಗೆ
ಅವರಿಂದ ಹಿಂದಿ ಪುಸ್ತಕ ಪಡೆದು
ಓದಿದ್ದು ನೆನಪಿಗೆ ಬರುತ್ತಿದೆ. ನಾಗೇಶ
ಭಾವ ಕೂಡಾ
ಹೆಚ್ಚು ಮಾತುಗಾರರಲ್ಲ. ಆದರೆ ಅವರ ಪತ್ನಿ
ಸಿಂಗಾರಿ ಮಾತುಗಾರ್ತಿ. ಸಿಂಗಾರಿ ಗುಡ್ಡೇತೋಟದ ಪ್ರಸಿದ್ಧ
ಜಮೀನ್ದಾರ್ ಕೃಷ್ಣರಾಯರ ಮಗಳು.
ನಾನು
ಹೊಕ್ಕಳಿಕೆಗೆ ಓದಲು ಹೋದ ಸ್ವಲ್ಪ
ಸಮಯದ ನಂತರ ಸಿಂಗಾರಿ ಗುಡ್ಡೇತೋಟದಿಂದ
ಮೊದಲ ಹೆರಿಗೆ ಮುಗಿದು ಮಗಳು
ಭಾರತಿಯ ಜೊತೆಗೆ ಹೊಕ್ಕಳಿಕೆಗೆ ವಾಪಾಸ್
ಬಂದಳು. ಅವಳೊಡನೆ ಮಗುವನ್ನು ನೋಡಿಕೊಳ್ಳಲು
ಬೈರೇದೇವರಿನ ಅವಳ ಚಿಕ್ಕಮ್ಮನ ಮಗಳು
ಸರಸ್ವತಿ ಬಂದಿದ್ದಳು. ಆಮೇಲೆ ಸರಸ್ವತಿ
ಸ್ವಲ್ಪ ದಿನ ಹೊಕ್ಕಳಿಕೆಯ ಶಾಲೆಗೂ ಹೋಗುತ್ತಿದ್ದುದು ನೆನಪಿಗೆ ಬರುತ್ತಿದೆ. ಬಹು ಬೇಗನೆ ನನಗೆ ಗೋಪಿಯಂತೆ ಸಿಂಗಾರಿಯ
ಒಡನೆಯೂ ಸಲಿಗೆ ಬೆಳೆಯಿತು. ನಾನು ಬಸವಾನಿ ನಾರಾಯಣ ಭಟ್ಟರ ಪುಸ್ತಕ ಭಂಡಾರದಿಂದ ಅಕ್ಕನಿಗೆ ಓದಲು ತರುತ್ತಿದ್ದ
ಪತ್ತೇದಾರಿ ಕಾದಂಬರಿಗಳಿಗೆ ಸಿಂಗಾರಿಯೂ ಒಬ್ಬ ಓದುಗಳಾದಳು.
ಹೊಕ್ಕಳಿಕೆಯಲ್ಲಿ
ಓದು ಮುಗಿಸಿ ನಾನು ಶಿವಮೊಗ್ಗೆಗೆ
ಹೋದಾಗ ಅರುಣಾಚಲಂ ಮೇಷ್ಟರ ಮನೆಯಲ್ಲಿ ಸಿಂಗಾರಿಯ ತಮ್ಮಂದಿರಾದ
ಶ್ರೀಕಂಠ, ನೀಲಕಂಠ ಮತ್ತು ಸದಾಶಿವ ಅವರೊಡನೆ ಸೇರಿಕೊಂಡೆ. ನೀಲಕಂಠ ನ್ಯಾಷನಲ್ ಹೈಸ್ಕೂಲ್ ನಲ್ಲಿ ಮೂರು ವರ್ಷ ನನ್ನ ಸಹಪಾಠಿಯಾಗಿದ್ದ.
ಸ್ವಲ್ಪ ವರ್ಷಗಳ ನಂತರ ನಾಗೇಶ ಭಾವನವರು ಗಣೇಶ ಭಾವನವರ ಮನೆಯ ಪಕ್ಕದಲ್ಲಿ ಹೊಸಮನೆ ಕಟ್ಟಿಸಿ ಗೃಹ ಪ್ರವೇಶ
ಮಾಡಿದರು. ನಾನು ಇಂದಿನವರೆಗೆ ಪ್ರತಿ ಬಾರಿ ಹೊಕ್ಕಳಿಕೆಗೆ ಹೋದಾಗಲೂ ಸಿಂಗಾರಿಯ ಮನೆಗೆ ಹೋಗಿ ಅವಳನ್ನು
ಮಾತನಾಡಿಸಿ ಬರುವ ಕ್ರಮ ಬಿಟ್ಟಿಲ್ಲ. ಅವಳೂ ಕೂಡಾ ನನ್ನನ್ನು ತನ್ನ ತಮ್ಮನಂತೇ ನೋಡಿಕೊಂಡಿದ್ದಾಳೆ.
ಗಣೇಶ ಭಾವ
ಹಣಕಾಸಿನ
ವ್ಯವಹಾರದಲ್ಲಿ ಗಣೇಶ ಭಾವ ನಮ್ಮ
ಭಾವನವರಿಗೇನು ಕಡಿಮೆ
ಇರಲಿಲ್ಲ. ‘ದೊಡ್ಡ ‘ಗಣೇಶಯ್ಯ ಎಂಬ
ಹೆಸರು ಅವರಿಗೆ ಸಾರ್ಥಕವಾಗಿತ್ತು. ತಮ್ಮ
ಅವಶ್ಯಕ್ಕೆ ತಕ್ಕಂತೆ ಕಟ್ಟಿಕೊಂಡಿದ್ದ ಹೊಕ್ಕಳಿಕೆಯ
ಮೊಟ್ಟ ಮೊದಲ ರಸ್ತೆ ಪಕ್ಕದ
ಮನೆ ಅವರದಾಗಿತ್ತು. ಅಲ್ಲದೆ ತಮ್ಮ ಪಾಲಿಗೆ
ಬಂದ ಜಮೀನಿಗೆ ಅಂಟಿಗೊಳ್ಳದೇ ಹೊಸಹೊಸ
ಜಮೀನುಗಳನ್ನು ಕೊಂಡು ತಮ್ಮ ಮುಂದಿನ
ಪೀಳಿಗೆಗೆ ಅನುಕೂಲವಾಗುವಂತೆ ಮಾಡಿಟ್ಟ ಸಾಮರ್ಥ್ಯ ಅವರದು.
ನಮ್ಮ ಭಾವನೊಡನೆ ಸಂಬಂಧ ನಿಂತು ಹೋಗಿದ್ದರೂ
ನನ್ನನ್ನು ಅವರ ಮನೆಯಲ್ಲಿ ನಡೆಯುವ
ಸಮಾರಂಭಗಳಿಗೆ ವಿಷ್ಣುಮೂರ್ತಿಯ ಮೂಲಕ ಕರೆಯುತ್ತಿದ್ದರು.
ನಾನು ಕೂಡ ಹೊಕ್ಕಳಿಕೆಗೆ ಹೋದಾಗಲೆಲ್ಲ
ಅವರ ಮನೆಗೆ ಹೋಗಿ ಅವರನ್ನು
ಮಾತನಾಡಿಸಿಯೇ ಬರುತ್ತಿದ್ದೆ. ಅವರ ಪತ್ನಿ ಜಯಲಕ್ಷ್ಮಿ
ಕೂಡ ನನ್ನೊಡನೆ ಪ್ರೀತಿಯಿಂದ ಮಾತನಾಡುತ್ತಿದ್ದರು.
ಒಮ್ಮೆ
ನಾನು ಅವರ ಮನೆಗೆ ಹೋದಾಗ
ಒಂದು ವಿಶೇಷ ಘಟನೆ ನಡೆಯಿತು.
ಅವರ ಮನೆಯ ರೇಡಿಯೋನಲ್ಲಿ ಆಗ
ಕನ್ನಡ ಸಿನಿಮಾದ ಹಾಡೊಂದು ಪ್ರಸಾರವಾಗುತ್ತಿತ್ತು.
ನಾನು ಆಗಿನ ಎಲ್ಲಾ ಕನ್ನಡ
ಸಿನಿಮಾಗಳನ್ನು ಸಾಧಾರಣವಾಗಿ ನೋಡಿರುತ್ತಿದ್ದೆ. ಹಾಗೆಯೇ ಸಿನಿಮಾ ಹಾಡುಗಳೂ ಪರಿಚಿತವಾಗಿರುತ್ತಿದ್ದವು. ಇದ್ದಕ್ಕಿದ್ದಂತೆ ಗಣೇಶ
ಭಾವ ನನ್ನ
ಹತ್ತಿರ ಆ ಹಾಡು ಯಾವ
ಸಿನಿಮಾದ ಹಾಡೆಂದು ಪ್ರಶ್ನಿಸಿದರು. ನನಗೆ
ನಿಜವಾಗಿ ಗೊತ್ತಿದ್ದರೂ ಆ ಕೂಡಲೇ ನೆನಪಿಗೆ
ಬರಲಿಲ್ಲ. ನಾನು ಅದಕ್ಕಾಗಿಯೇ ಬೇಸರ
ಮಾಡಿಕೊಳ್ಳುವಷ್ಟರಲ್ಲಿ ಗಣೇಶ ಭಾವ ನನಗೆ 'ಭೇಷ್ ' ಎಂದು
ಶಾಭಾಸ್ಗಿರಿ ಕೊಟ್ಟುಬಿಟ್ಟರು.
ನಾನು ಕಕ್ಕಾಬಿಕ್ಕಿಯಾದೆ. ಅವರ ಪ್ರಕಾರ ಆ
ದಿನದ ಹುಡುಗರಿಗೆಲ್ಲಾ ಸಿನಿಮಾದ ಹುಚ್ಚು ಅತಿಯಾಗಿತ್ತಂತೆ.
ನನಗೆ ಮಾತ್ರಾ ಆ ಕೆಟ್ಟ
ಚಾಳಿ ಇಲ್ಲವೆಂದು ತಿಳಿದು ಅವರಿಗೆ ತುಂಬಾ
ಖುಷಿಯಾಯಿತಂತೆ!
ಚಂದ್ರಹಾಸ ಭಾವ
ಚಂದ್ರಹಾಸ
ಎಂಬುದು ಒಂದು ವಿಶೇಷ ಮತ್ತು
ಅಪರೂಪದ ಹೆಸರೇ ಆಗಿತ್ತು. ಆ
ಕಾಲದ ಯಾವುದೇ ಊರಿಗೆ ಹೋದರೂ
ಗಣೇಶ, ತಿಮ್ಮಪ್ಪ, ಶ್ರೀನಿವಾಸ, ಶಂಕರ, ರಾಮಕೃಷ್ಣ , ಇತ್ಯಾದಿ
ಹೆಸರಿನ ಎರಡು ಮೂರು ಜನರಿದ್ದರೂ
ಚಂದ್ರಹಾಸ ಎಂಬ
ಹೆಸರು ಎಲ್ಲೂ ಕಿವಿಗೆ ಬೀಳುತ್ತಿರಲಿಲ್ಲ!
ಚಂದ್ರಹಾಸ ಭಾವ ಕೂಡ ವ್ಯವಹಾರ
ಪರಿಣಿತರೇ ಆಗಿದ್ದರು. ನಾನು ಮೊತ್ತ ಮೊದಲು
ಹೊಕ್ಕಳಿಕೆಗೆ ಹೋದಾಗ ಅವರ ಮಕ್ಕಳಾದ
ವಿಶಾಲಾಕ್ಷಿ ಮತ್ತು ಶ್ರೀನಿವಾಸ ಮೇಲ್ಕೊಪ್ಪ
ಶಾಲೆಗೆ ಹೋಗುತ್ತಿದ್ದರು. ಅವರ ಪತ್ನಿ ಸರಸ್ವತಮ್ಮ
ಬಾವಿಗೆ ಬಿದ್ದ
ನನ್ನನ್ನು ಹೊರಗೆಳೆದು ರಕ್ಷಿಸಿದ ಬಗ್ಗೆ ಹಿಂದೆಯೇ ಬರೆದಿದ್ದೇನೆ.
ಅವರ ತವರುಮನೆ ಮೊದಲು ನಮ್ಮೂರಿನ
ನಡುವಿನ ಮನೆಯಲ್ಲಿದ್ದುದು ಮುಂದೆ ಅರದಳ್ಳಿಗೆ ಹೋಯಿತು.
ಆ ಜಮೀನು ಸಂಪೇಕೊಳಲು
ಗಣೇಶರಾಯರಿಗೆ ಮಾರಾಟವಾದಾಗ ಅವರ ಅಣ್ಣಂದಿರು
ಊರು ಬಿಡುವಂತಾಯಿತು. ಒಬ್ಬ ಅಣ್ಣ ಬಡಿಗೆಮನೆಗೆ
ಹೋದರೆ ಇನ್ನೊಬ್ಬರು ಕಾನೂರಿಗೆ ಹೊರಟು ಹೋದರು.
ನನಗೆ
ತಿಳಿದಂತೆ ಚಂದ್ರಹಾಸ ಭಾವನ ಗಂಡು ಮಕ್ಕಳೆಲ್ಲಾ
ಜಮೀನಿನ ಕೆಲಸಗಳಲ್ಲಿ ಪರಿಣಿತರಾಗಿದ್ದರು. ಅವರ ಇಡೀ
ಸಂಸಾರ ಹೋರಾಟ ಮಾಡಿ ತಮ್ಮ
ಜಮೀನನ್ನು ಅಭಿವೃದ್ಧಿ ಮಾಡಿದ್ದೂ ಮಾತ್ರವಲ್ಲ , ಜಮೀನಿನ ವಿಸ್ತರಣೆ ಕೂಡ
ಮಾಡಿದರು. ಅವರ ಬಿಳುವಿನಕೊಪ್ಪದ
ಮನೆ ಹೊಕ್ಕಳಿಕೆಯಿಂದ ದೂರದಲ್ಲಿದೆಯೆಂದು ಎಂದೂ ಅನಿಸಲಿಲ್ಲ!
ಮಂಜಪ್ಪನ ಉಪನಯನ
ಮತ್ತು
ರಾಜಿ ಪಂಚಾಯಿತಿ
ಅದು
೧೯೬೧ನೇ ಇಸವಿಯ ಫೆಬ್ರವರಿ ತಿಂಗಳಿರಬಹುದು.
ಭಾವನ ಹಿರಿಯ ಮಗ ಮಂಜಪ್ಪನ
ಉಪನಯನ ಶ್ರೀಕ್ಷೇತ್ರ ಧರ್ಮಸ್ಥಳದಲ್ಲೇ ಮಾಡುವುದಾಗಿ ಭಾವ ಹೇಳಿಕೊಂಡಿದ್ದರಂತೆ.
ಅದರಂತೆ ಅಕ್ಕ ಮತ್ತು ಭಾವ,
ನಾಗರಾಜ ಮತ್ತು ಮಂಜಪ್ಪನೊಡನೆ ಧರ್ಮಸ್ಥಳಕ್ಕೆಹೊರಟು ಹೋದರು.
ಮನೆಯಲ್ಲಿ ನಾನೊಬ್ಬನೇ ಇದ್ದೆ. ಅದು ನನಗೆ
ಹೊಸ ಅನುಭವ. ಅಕ್ಕ ನನ್ನ
ಊಟ ತಿಂಡಿಯ ವ್ಯವಸ್ಥೆ ವಿಚಾರಿಸಿಕೊಳ್ಳಲು
ಗೋಪಿಗೆ ಹೇಳಿ ಹೋಗಿದ್ದಳು. ಉಪನಯನ
ಮುಗಿದು ಮಾರನೇ ದಿನ ಬೆಳಿಗ್ಗೆ
ಭಾವ ಬೆಳಗಿನ ಬಸ್ಸಿನಲ್ಲಿ ಧರ್ಮಸ್ಥಳದಿಂದ
ಹೊರಡುವರಿದ್ದರು. ಆ ಹಿಂದಿನ ರಾತ್ರಿಯಲ್ಲಿ
ಭಾವನ ವಯಸ್ಸಾದ ಅಮ್ಮ ಸ್ವರ್ಗವಾಸಿಯಾದರು.
ಊರಿನ
ಹಿರಿಯರೆಲ್ಲಾ ಮನೆಗೆ ಆಗಮಿಸಿದರು. ಆದರೆ ಹಿರಿಯ ಮಗ
ಮತ್ತು ಮರಣೋತ್ತರ ಕ್ರಿಯೆಗಳ ಪ್ರಥಮ ಹಕ್ಕುದಾರನಾದ ನಮ್ಮ
ಭಾವನವರೇ ಊರಿನಲ್ಲಿರಲಿಲ್ಲ. ಅವರು ಅದೇ ದಿನ
ಸಂಜೆಯ ಒಳಗೆ ಹೊಕ್ಕಳಿಕೆಗೆ ಬರುವರೆಂಬುದು
ಕೂಡ ಎಲ್ಲರಿಗೂ ತಿಳಿದಿತ್ತು. ಹಾಗಿದ್ದರೂ ಕೂಡಾ ಭಾವನ ನಾಲ್ವರು
ತಮ್ಮಂದಿರು ಅವರ ಗೈರುಹಾಜರಿಯಲ್ಲೇ ಶವ
ದಹನ ಸಂಸ್ಕಾರವನ್ನು ಮುಗಿಸಿಬಿಟ್ಟರು. ಸಂಜೆಯೊಳಗೆ ಊರಿಗೆ ಹಿಂದಿರುಗಿದ ಭಾವನಿಗೆ
ಅಮ್ಮನ ಮರಣದ ದುಃಖ ಮಾತ್ರವಲ್ಲ ಅವಳ
ದೇಹದ ಅಂತಿಮ ದರ್ಶನ ಸಿಗಲಿಲ್ಲವೆಂಬ
ದುಃಖವೂ ಜೊತೆಗೂಡಿತು. ಅಷ್ಟಲ್ಲದೇ ಮುಂದಿನ ವಿಧಿಗಳನ್ನು ಹೇಗೆ
ಮುಂದುವರೆಸಬೇಕೆಂಬ ಬಗ್ಗೆ ಯಾವುದೇ ವ್ಯವಸ್ಥೆಯ ಸ್ಪಷ್ಟತೆ
ಇಲ್ಲದೆ ಹೋಯಿತು.
ಹೊಕ್ಕಳಿಕೆಯ
ಮೂಲ ಮನೆಯಲ್ಲಿ ಅಂದು ರಾತ್ರಿ ಪಂಚಾಯಿತಿ
ನಡೆಯಿತು. ನಾಲ್ವರು ತಮ್ಮಂದಿರ ಕೋರಿಕೆ
ಒಂದೇ ಆಗಿತ್ತು. ಭಾವನವರು ಇಟ್ಟುಕೊಂಡ ಒಂದು
ಎಕರೆ ಹೆಚ್ಚಿನ ತೋಟದ ಬೆಲೆ ಕಟ್ಟಿ
ಅದರಲ್ಲಿ ಐದನೇ ಒಂದು ಭಾಗವನ್ನು
ನಾಲ್ಕು ತಮ್ಮಂದಿರಿಗೂ ಕೊಡಬೇಕೆಂದು. ಈ ಕೋರಿಕೆಗೆ ಪಂಚಾಯತಿಯ
ಒಪ್ಪಿಗೆಯೂ ಸಿಕ್ಕಿತು. ಅದಕ್ಕೆ
ಭಾವನವರು ಒಪ್ಪಿಗೆ ನೀಡಿದ ನಂತರ
ಸಭೆ ಮುಕ್ತಾಯಗೊಂಡಿತು. ಅಮ್ಮನ ಮರಣೋತ್ತರ ಕ್ರಿಯೆಗಳೆಲ್ಲಾ
ಒಗ್ಗಟ್ಟಿನಲ್ಲಿ ಭಾವನವರ ನೇತೃತ್ವದಲ್ಲಿ ನೆರವೇರಿದುವು.
ಒಂದು ವಾರದ ನಂತರ ಮಂಜಪ್ಪ
ಹಣದಿಂದ ತುಂಬಿದ ನಾಲ್ಕು ಲಕೋಟೆಗಳನ್ನು
ನಾಲ್ವರು ಚಿಕ್ಕಪ್ಪಂದಿರಿಗೂ ತಲುಪಿಸಿ ಬಂದ. ಅಲ್ಲಿಗೆ
ಮುರಿದುಹೋದ ಕುಟುಂಬ
ಪುನಃ ಒಂದುಗೂಡಿತು.
----ಮುಂದುವರಿಯುವುದು ---
No comments:
Post a Comment