Monday, May 28, 2018

ಒಂದು ಊರಿನ ಕಥೆ - 15 (ಹೊಕ್ಕಳಿಕೆ)


ವಾಸುದೇವಯ್ಯ
ತಿಮ್ಮಪ್ಪಯ್ಯನವರ ತಮ್ಮ ವಾಸುದೇವಯ್ಯನವರದು ತುಂಬಾ ಅಪರೂಪದ ವ್ಯಕ್ತಿತ್ವ. ಆಗಿನ ಕಾಲದಲ್ಲಿ ಹೆಬ್ಬಾರ್ ಸಮಾಜದ ವ್ಯಕ್ತಿಗಳು ಬೇಸಾಯವನ್ನು ಬಿಟ್ಟು ಬೇರೆ ವೃತ್ತಿಗಳನ್ನು ಮಾಡುವುದು ತುಂಬಾ ಅಪರೂಪವಾಗಿತ್ತು. ಆದರೆ ನಾನು ಹೊಕ್ಕಳಿಕೆಗೆ ಓದಲು ಹೋಗುವ ಮುನ್ನವೇ  ವಾಸುದೇವಯ್ಯನವರು ಊರನ್ನು ಬಿಟ್ಟು ಪ್ರಾಯಶಃ ಕೊಪ್ಪದಲ್ಲಿ ನೆಲಸಿ ಅಕ್ಕಿ-ಭತ್ತದ  ಹೋಲ್ ಸೇಲ್ ವ್ಯಾಪಾರದಲ್ಲಿ ತೊಡಗಿದ್ದರು. ಊರಿನ ಮಧ್ಯದಲ್ಲಿ ಅವರ ಒಂದೆಕರೆ ಅಡಿಕೆ ತೋಟವೂ ಇತ್ತು. ಭತ್ತದ ವ್ಯಾಪಾರಕ್ಕಾಗಿ ಆಗಾಗ ನಮ್ಮ ಭಾವನ ಮನೆಗೆ ಬರುತ್ತಿದ್ದರು. ಭತ್ತವನ್ನು ಲಾರಿಗಳಲ್ಲಿ ತುಂಬಿ ತೆಗೆದುಕೊಂಡು ಹೋಗುತ್ತಿದ್ದರು. ಅವರ ಪತ್ನಿ ಶೃಂಗೇರಿಯಿಂದ ಆಚೆಗಿದ್ದ ಜಕ್ಕಾರು ಕೊಡಿಗೆ ಎಂಬ ಊರಿನವರು. ತಮ್ಮ ವೃತ್ತಿಯಲ್ಲಿ ಚೆನ್ನಾಗಿ ಸಂಪಾದನೆ ಮಾಡಿದ ವಾಸುದೇವಯ್ಯನವರು ಅದನ್ನು ದೊಡ್ಡಮಟ್ಟದಲ್ಲಿ ಬೆಳೆಸುವ ಯೋಜನೆ ಹಾಕಿ ತಮ್ಮ ಸಂಸಾರ ಸಮೇತ ಶಿವಮೊಗ್ಗೆ ಸೇರಿದರು.

ಶಿವಮೊಗ್ಗೆಯ ದುರ್ಗಿಗುಡಿಯಲ್ಲಿ ಕವಿಲ್ಕೊಡಿಗೆ ಸಾಹುಕಾರರಿಗೆ ಸೇರಿದ ಮನೆಯೊಂದಿತ್ತು. ಅದರ  ಪಕ್ಕದಲ್ಲಿ ಅರುಣಾಚಲಂ ಮೇಷ್ಟರ ಮನೆಯಲ್ಲಿ ನಾನು ಹೈಸ್ಕೂಲ್ ಓದುವಾಗ ಕೆಲದಿನಗಳು ತಂಗಿದ್ದೆ. ನಾನು ೧೯೭೦ನೇ ಇಸವಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿ ಪುನಃ ಶಿವಮೊಗ್ಗೆಗೆ ಹೋದಾಗ ವಾಸುದೇವಯ್ಯನವರು ಕವಿಲ್ಕೊಡಿಗೆ ಸಾಹುಕಾರರ ಮನೆಯಲ್ಲಿ ಬಾಡಿಗೆಗೆ ಇದ್ದರು. ಅವರ ಅಕ್ಕಿ-ಭತ್ತದ  ಹೋಲ್ ಸೇಲ್ ವ್ಯಾಪಾರ ಬೇಗನೆ ಉನ್ನತ ಮಟ್ಟಕ್ಕೆ ಹೋಯಿತು. ಸಂಪಾದನೆ ಚೆನ್ನಾಗಿತ್ತು. ನಮ್ಮ ರುಕ್ಮಿಣಕ್ಕನ ಮಗ ಉಮೇಶನಿಗೆ ಕಿವಿಯಲ್ಲಿ ಸಮಸ್ಯೆ ಇತ್ತು. ಅದನ್ನು ಡಾಕ್ಟರಿಗೆ  ತೋರಿಸಲು ಆಗಾಗ ಅಕ್ಕ ಮತ್ತು ಭಾವ ಶಿವಮೊಗ್ಗೆಗೆ ಬಂದಾಗ ವಾಸುದೇವಯ್ಯನವರ ಮನೆಯಲ್ಲಿ ತಂಗುತ್ತಿದ್ದರು. ನಾನು ಅವರನ್ನು ನೋಡಲು ವಾಸುದೇವಯ್ಯನವರ ಮನೆಗೆ ಹಲವು ಬಾರಿ ಹೋಗಿದ್ದೆ.
ಮರಳಿ ಮಣ್ಣಿಗೆ
ವಾಸುದೇವಯ್ಯನವರಿಗೆ ಇದ್ದಕಿದ್ದಂತೆ ಮಲೆನಾಡಿನ ತೋಟ ಮತ್ತು ಗದ್ದೆಗಳ ನಡುವೆ ವಾಸಮಾಡುವ ಆಸೆ ಮರುಕಳಿಸಿತು. ಅವರು ನಮ್ಮ ಊರಿನ ಉತ್ತಮೇಶ್ವರದ ಸಮೀಪದಲ್ಲಿ ಜಮೀನು ಮತ್ತು ಮನೆ ಖರೀದಿ ಮಾಡಿ ಹಳ್ಳಿ ಜೀವನಕ್ಕೆ ಹಿಂದಿರುಗಿದರು. ಸಮಯದಲ್ಲಿ ಒಂದೆರಡು ಬಾರಿ ನಾನು ಊರಿಗೆ ಬಂದು ವಾಪಸ್ ಶಿವಮೊಗ್ಗೆಗೆ ಹೋಗುವಾಗ ಅವರ ಜೊತೆಯಲ್ಲಿ ಬಸ್ಸಿನ ಪ್ರಯಾಣ ಮಾಡಿದ್ದೆ. ಆದರೆ ದುರದೃಷ್ಟವಶಾತ್  ಅವರ ಹಳ್ಳಿ ಜೀವನ ಸುಖಕರವಾಗಲಿಲ್ಲ. ನಿರ್ವಾಹವಿಲ್ಲದೇ ಜಮೀನು ಮಾರಿ ಶಿವಮೊಗ್ಗೆಗೆ ವಾಪಸ್ ಬರಬೇಕಾಯಿತು. ನಾನು ಶಿವಮೊಗ್ಗೆಯಲ್ಲಿ ಇರುವಾಗಲೇ ಅವರು ತೀರಿಕೊಂಡರು. ಅವರ ಮಕ್ಕಳು ಚೆನ್ನಾಗಿರುವರೆಂದು ಮತ್ತು ಹೊಕ್ಕಳಿಕೆ ತೋಟ ಮಾರಾಟ ಮಾಡಿದರೆಂದೂ ತಿಳಿಯಿತು.
ಹೆಚ್ ವಿ ಕೃಷ್ಣಮೂರ್ತಿ
ಇವರು ತಿಮ್ಮಪ್ಪಯ್ಯನವರ ಇನ್ನೊಬ್ಬ ತಮ್ಮ. ಇವರದೂ ಸ್ವಲ್ಪ ಅಪರೂಪದ ವ್ಯಕ್ತಿತ್ವವೇ ಆಗಿತ್ತು. ಇವರೆಂದೂ ಧ್ವನಿ ಏರಿಸಿ ಮಾತನಾಡಿದವರಲ್ಲ. ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ತುಂಬಾ ಮೆಲು  ಧ್ವನಿಯಲ್ಲೇ ಹೇಳುವ ಕಲೆ ಇವರಿಗೆ ಸಾಧಿಸಿತ್ತು. ಅಣ್ಣ ತಿಮ್ಮಪ್ಪಯ್ಯನ ಮೇಲೆ ತುಂಬಾ ಗೌರವ ಇಟ್ಟುಕೊಂಡಿದ್ದರು. ಆದರೆ ಮನೆಯನ್ನು ತಿಮ್ಮಪ್ಪಯ್ಯನವರ 'ಹೊಸಮನೆ'ಗಿಂತಲೂ ತುಂಬಾ ಸುಂದರವಾಗಿ ಕಟ್ಟಿಸಿಕೊಂಡಿದ್ದರು! ಇವರ ಅಭಿರುಚಿ ತುಂಬಾ ಉನ್ನತ ಮಟ್ಟದ್ದೇ ಆಗಿತ್ತು. ತಮ್ಮ ಅಡಿಕೆ  ತೋಟವನ್ನು ಕೂಡಾ ತುಂಬಾಶ್ರೇಷ್ಠ ಮಟ್ಟದಲ್ಲಿ ಇಟ್ಟುಕೊಂಡಿದ್ದರು.  ಇವರ ಪತ್ನಿ ನಮ್ಮ ಸಂಬಂಧಿಗಳಾದ ಹೆಬ್ಬಿಗೆ ಶಿಂಗಪ್ಪಯ್ಯನವರ ಮಗಳಾದ ಕಮಲಾಕ್ಷಮ್ಮ. ಕೃಷ್ಣಮೂರ್ತಿಯವರು ಪ್ರತಿ ವರ್ಷ ಚೈತ್ರಮಾಸದಲ್ಲಿ ನಡೆಯುತ್ತಿದ್ದ ದೇವರ ಭಜನೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರು. ಭಜನಾಮಂಡಳಿ ಊರಿನ ಪ್ರತಿ ಮನೆಗೂ ಒಂದೊಂದು ದಿನ ದೇವರ ಮೂರ್ತಿಯನ್ನು  ತೆಗೆದುಕೊಂಡು ಹೋಗಿ ಮನೆಯಲ್ಲಿ ಅರ್ಚನೆ ಮತ್ತು ಪನಿವಾರ ಮುಗಿಸಿ ದೇವಸ್ಥಾನಕ್ಕೆ ಹಿಂದಿರುಗುತ್ತಿತ್ತು. ಕೃಷ್ಣಮೂರ್ತಿಯವರು ಒಂದು ಕೀರ್ತನೆಯನ್ನು ಸ್ವತಃ ಪ್ರಾರಂಭಿಸುತ್ತಿದ್ದರು. ಅದು ಸ್ವಲ್ಪ ಹೀಗಿತ್ತು:
“ವೇಣುನಾದನೆ ಬಾರೋ ಸೀತಾರಮಣನೇ ಬಾರೋ
ಬಾಣಾನ ಬಂಧಿಸಿದಂತಾ ಭಾವಜನಯ್ಯನೇ ಬಾರೋ
ಪೂತನಿಯಾ ಅಸುವಾನಳಿದಾ ನವನೀತ ಚೋರನೆ  ಬಾರೋ
ಶೇಷ ಶಯನ ವಾಸಾ ಮೂರುತಿ ಗೋಪಾಲ ಕೃಷ್ಣನೇ ಬಾರೋ”
ನಗರ ಜೀವನದ ಕಡೆಗೆ
ಕೃಷ್ಣಮೂರ್ತಿಯವರಿಗೆ ಯಾವುದೊ ಕಾರಣದಿಂದ ಬೇಸಾಯ ಮತ್ತು  ಹಳ್ಳಿ ಜೀವನ ಸಾಕೆನಿಸಿತು. ಅವರು ತಮ್ಮ ಅತ್ತ್ಯುತ್ತಮ ಜಮೀನು ಮತ್ತು ಮನೆಯನ್ನು ಮಾರಿ ಪೇಟೆಯ ಕಡೆ ಪ್ರಯಾಣ ಬೆಳೆಸಿದರು. ಅವರ ಹಿರಿಯ ಮಗ ರಾಮಚಂದ್ರ ಮಣಿಪಾಲದಲ್ಲೂ, ಗುರುಮೂರ್ತಿ ಬೆಂಗಳೂರಿನಲ್ಲೂ ಹಾಗೂ ಭಾಸ್ಕರ ಮಂಗಳೂರಿನಲ್ಲೂ ಇದ್ದರು. ನನಗೆ ತಿಳಿದಂತೆ ದಂಪತಿಗಳು ಮಂಗಳೂರಿನಲ್ಲಿ ನೆಲಸಿದರು. ಹೀಗೆ ಅವರ ಹೊಕ್ಕಳಿಕೆ ಜೀವನ ಮುಕ್ತಾಯ ಕಂಡಿತು.
ಮಂಜಪ್ಪಯ್ಯ
ಮಂಜಪ್ಪಯ್ಯನವರು ತಿಮ್ಮಪ್ಪಯ್ಯನವರ ತಮ್ಮಂದಿರಲ್ಲಿ ಎಲ್ಲರಿಗಿಂತ ಕಿರಿಯರು. ಅವರೊಬ್ಬ ದೃಢಕಾಯದ ವ್ಯಕ್ತಿ. ಹಾಗೆಯೇ  ಅವರದು ಕಂಚಿನ ಕಂಠವಾಗಿತ್ತು. ಚೈತ್ರಮಾಸದಲ್ಲಿ ನಡೆಯುತ್ತಿದ್ದ ದೇವರ ಭಜನೆಯಲ್ಲಿ ಅವರು ಏರು ಧ್ವನಿಯಲ್ಲಿ ಭಜನೆ ಮಾಡುತ್ತಿದ್ದರು. ಅವರು ಅವರಣ್ಣ   ಕೃಷ್ಣಮೂರ್ತಿಯವರೊಡನೆ ಕಾನೂರಿನಲ್ಲಿ ಸಂಸಾರ ಹೂಡಿ ಅವರ ಸಂಬಂಧಿಗಳೊಬ್ಬರ ಜಮೀನು  ಪಾರುಪತ್ಯ ಮಾಡಿಕೊಂಡಿದ್ದರಂತೆ. ಆದರೆ ಕಾರಣಾಂತರದಿಂದ ಅದನ್ನು ಬಿಟ್ಟು ಹೊಕ್ಕಳಿಕೆಗೆ ಹಿಂದಿರುಗಬೇಕಾಯಿತಂತೆ. ಅವರ ಹೊಸಮನೆಯನ್ನು  ೧೯೫೯ ನೇ ಇಸವಿಯಲ್ಲಿ ಮೇಲಿನಮನೆಯ (ಫಣಿಯಪ್ಪಯ್ಯನವರ ಮನೆ) ಮೇಲ್ಭಾಗದಲ್ಲಿ ರಸ್ತೆಯ ಪಕ್ಕಕ್ಕೆ ಕಟ್ಟಿ ಗೃಹ ಪ್ರವೇಶ ಮಾಡಲಾಯಿತು. ಮಂಜಪ್ಪಯ್ಯನವರ ಪತ್ನಿ ಭವಾನಮ್ಮ ಅಂಬುತೀರ್ಥದವರು. ಸಣ್ಣ ಗಣೇಶಯ್ಯ ಮತ್ತು ಅಚ್ಯುತಯ್ಯನವರಿಗೆ ಮಂಜಪ್ಪಯ್ಯನವರಲ್ಲಿ ತುಂಬಾ ಸಲಿಗೆ ಇತ್ತು. ಅವರಿಬ್ಬರೂ ಮಂಜಪ್ಪಯ್ಯನವರೊಡನೆ ತುಂಬಾ ತಮಾಷೆಯಾಗಿ ಮಾತನಾಡುತ್ತಿದ್ದರು.
ಸಣ್ಣ ಗಣೇಶಯ್ಯ
ಸಣ್ಣ ಗಣೇಶಯ್ಯ ಇಡೀ ಹೊಕ್ಕಳಿಕೆಯಲ್ಲಿ ಪ್ರಸಿದ್ಧಿ ಪಡೆದ ಮಾತುಗಾರ. ಹೊಸಮನೆ ತಿಮ್ಮಪ್ಪಯ್ಯನವರಿಗೂ ತಮಾಷೆ ಮಾಡುವಷ್ಟು ಚಾತುರ್ಯ ಹಾಗೂ ಸಲಿಗೆ ಅವರಿಗಿತ್ತು. ಅವರಿಗೆ ನಾನು ಹೊಕ್ಕಳಿಕೆಗೆ ಹೋದಾಗ ಅಂದರೆ ೧೯೫೯ನೇ ಇಸವಿಯಲ್ಲಿ  ಆಗ ತಾನೇ  ಮದುವೆಯಾಗಿತ್ತು.  ನಾನು ಈ  ಮೊದಲೇ ಬರೆದಂತೆ ಅವರ ಪತ್ನಿ ಸೀತಾಲಕ್ಷ್ಮಿ ಕಾನೂರು ಸುಬ್ಬರಾಯರ ಎರಡನೇ ಮಗಳು. ಅವರ ಹಿರಿಯ ಮಗಳು ಜಯಲಕ್ಷ್ಮಿಯವರನ್ನು ನಮ್ಮ ಭಾವನ  ತಮ್ಮ ದೊಡ್ಡ ಗಣೇಶಯ್ಯನವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಾನೂರು ಸುಬ್ಬರಾಯರು ಒಂದು ಬಗೆಯ ಹ್ಯಾಟ್ರಿಕ್ ಸಾಧಿಸಿದ್ದರು. ಅದು ಹೇಗೆಂದರೆ ಅವರ ಸಹೋದರಿಯಾದ ಕಾವೇರಮ್ಮನನ್ನು ನಮ್ಮೂರಿನ ಬೆಳವಿನಕೊಡಿಗೆ ಗಣೇಶ ಹೆಬ್ಬಾರರಿಗೆ ಕೊಟ್ಟು ಮದುವೆ ಮಾಡಲಾಗಿತ್ತು!

ಸಣ್ಣ ಗಣೇಶಯ್ಯ ಬಸವಾನಿಯ ಮಿಡ್ಲ್ ಸ್ಕೂಲ್ ನಲ್ಲೇ ಎಂಟನೇ ತರಗತಿ ಓದಿದ್ದರಂತೆ. ಅವರು ನನ್ನ ಓದಿನ ಬಗ್ಗೆ  ಆಸಕ್ತಿ ವಹಿಸಿ ಆಗಾಗ ನನಗೆ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸರಿಯಾದ ಉತ್ತರ ಕೊಟ್ಟಾಗ ಭೇಷ್ ಎನ್ನುತ್ತಿದ್ದರು. ಹಾಗಾಗಿ ನನಗೆ  ಅವರಲ್ಲಿ ತುಂಬಾ ಗೌರವವಿತ್ತು. ಅವರೂ ಕೂಡ ಚೈತ್ರಮಾಸದಲ್ಲಿ ನಡೆಯುತ್ತಿದ್ದ ದೇವರ ಭಜನೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಕಾರ್ತೀಕ ಮಾಸದಲ್ಲಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ದೀಪಾವಳಿ ಪೂಜೆಯಲ್ಲೊಮ್ಮೆ ಅವರು   ಹೂಕುಂಡವೊಂದನ್ನು ಹಚ್ಚುತ್ತಿರುವಾಗ ಅದು  ಪಟಾಕಿಯಂತೆ ಸಿಡಿದು ಅವರ ಮುಂಗೈ ಸುಟ್ಟು ಹೋಯಿತು. ಅದು ನನ್ನ ಮುಂದೇ ನಡೆದ ಪ್ರಸಂಗ. ಅದರ ಕಲೆ ಅವರ ಕೈಯಲ್ಲಿ ಎದ್ದು ಕಾಣುತ್ತಿತ್ತು. ಸಣ್ಣ ಗಣೇಶಯ್ಯ ಸಾರ್ವಜನಿಕ ವಲಯದಲ್ಲೂ ತಮ್ಮ ಚಟುವಟಿಕೆಗಳಿಂದ ಪ್ರಸಿದ್ಧರಾಗಿದ್ದರೆಂದು ನನಗೆ ಆಮೇಲೆ ತಿಳಿದು ಬಂತು.
       ------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ-----

No comments: