ಕಾಕೋಲೂಕಿಯಂ

ಕರ್ನಾಟಕದ ರಾಜಧಾನಿ ಬೆಂಗಳೂರಿನ ಕಾಗೆಗಳ ಅಧಿಕೃತ ಸಂಸ್ಥೆಯೊಂದು
ತುಂಬಾ ಅವಸರದಿಂದ ತನ್ನ ಸದಸ್ಯರುಗಳ ಬೈಠಕ್ ಒಂದನ್ನು ಕರೆದಿತ್ತು. ಸಭೆಯ ಮುಖ್ಯ ಚರ್ಚೆಯ
ಅಜೆಂಡಾ ಕೆಳಕಂಡಂತಿತ್ತು:
1.ನಗರದಲ್ಲಿ ಮರಗಳನ್ನು ತುಂಬಾ ಕಡಿದು
ಹಾಕುತ್ತಿರುವುದರಿಂದ (ಮುಖ್ಯವಾಗಿ ಮೆಟ್ರೋ ರೈಲ್ ಮಾರ್ಗಕ್ಕಾಗಿ) ಸದಸ್ಯರಿಗೆ ಗೂಡುಗಳನ್ನು ಕಟ್ಟಲಾಗದೆ
ವಸತಿಯ ಕೊರತೆಯಾಗಿರುವುದು
2. ದೇಶದ ಪೂರ್ವ ಪ್ರಧಾನಿಯವರಾಗಿದ್ದ
ದೇವೇಗೌಡರ ಪುತ್ರ ರೇವಣ್ಣ ಅವರಿಂದ ಕಾಗೆಗಳ ಆದ್ಯ ದೈವ ಶನಿ ಮಹಾರಾಜನಿಗೆ ಆಗಿರುವ ಅವಮಾನ ಮತ್ತು
3.ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಕಾಗೆಗಳ ಸಂಸ್ಥೆಯ ಸದಸ್ಯನೊಬ್ಬನಿಗೆ ಆದ ಅವಮಾನ
ಅರಮನೆಯ ಮೈದಾನದಲ್ಲಿ ಕರೆಯಲಾಗಿದ್ದ ಈ
ಸಭೆಯಲ್ಲಿ ಮೇಘವರ್ಣನವರನ್ನು (ಪಂಚತಂತ್ರವನ್ನು ನೋಡಿ) ಅಧ್ಯಕ್ಷರನ್ನಾಗಿ ಆರಿಸಲಾಗಿತ್ತು. ಮಾಮೂಲಿನಂತೆ ಶನಿ ಮಹಾರಾಜರ ಪ್ರಾರ್ಥನೆಯ ನಂತರ ಸಭೆ ಆರಂಭಗೊಳ್ಳುತ್ತದೆ. ಮೇಘವರ್ಣನವರು ಹಿರಿಯ ಸದಸ್ಯರಾದ ಕಾಕಣ್ಣನವರನ್ನು
ವೇದಿಕೆಗೆ ಆಹ್ವಾನಿಸಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸುವಂತೆ ಕೇಳಿಕೊಳ್ಳುತ್ತಾರೆ. ಕಾಕಣ್ಣನವರು ವೇದಿಕೆಗೆ ಬರುತ್ತಾರೆ.
ಅಧ್ಯಕ್ಷ: ಕಾಕಣ್ಣನವರೇ ಈ ಸಭೆಯ ಮೊದಲ
ಅಜೆಂಡಾದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ಕಾಕಣ್ಣ: ನಮ್ಮ ಈ ಬೆಂಗಳೂರು ನಗರವು ಒಂದು ಕಾಲದಲ್ಲಿ ಉದ್ಯಾನ ನಗರಿಯೆಂದು ಪ್ರಸಿದ್ಧಿ ಪಡೆದಿತ್ತು. ಆದರೆ ಹೆಚ್ಚುತ್ತಿರುವ ಜನ ಸಂಖ್ಯೆ ಮತ್ತು ರಿಯಲ್ ಎಸ್ಟೇಟ್ ಬ್ಯುಸಿನೆಸ್,
ಈ ಸುಂದರ ನಗರವನ್ನು ಒಂದು ಕಾಂಕ್ರೀಟ್ ಜಂಗಲ್ ಆಗಿ ಪರಿವರ್ತಿಸಿ ಬಿಟ್ಟಿವೆ. ರಸ್ತೆಯ ಎರಡೂ ಬದಿಗಳಲ್ಲಿದ್ದ ವೃಕ್ಷಗಳನ್ನು
ಕಡಿದು ನಾಶ ಮಾಡುತ್ತಾ ನಮ್ಮ ಕಾಕ ಕುಲದವರಿಗೆ ವಸತಿ ಸೌಕರ್ಯವೇ ಇಲ್ಲದಂತೆ ಮಾಡಲಾಗುತ್ತಿದೆ.
ಅಧ್ಯಕ್ಷ: ಕಾಕಣ್ಣನವರೇ ಈ ಬಗೆಯ ವೃಕ್ಷ ನಾಶಕ್ಕೆ ಯಾರು ಜವಾಬ್ದಾರರೆಂದು
ಹೇಳಬಲ್ಲಿರಾ?
(ಕಾಕಣ್ಣನವರು ಉತ್ತರವನ್ನು ಕೊಡುವ ಮೊದಲೇ
ಮಧ್ಯ ವಯಸ್ಸಿನ ಕಾಗೆಯೊಂದು ಎದ್ದು ನಿಂತು ಇದಕ್ಕೆ ಮೋದಿಯೇ ಜವಾಬ್ದಾರನೆಂದು ಕಿರುಚತೊಡಗುತ್ತದೆ)
ಅಧ್ಯಕ್ಷ: ಯಾರಪ್ಪ ಅವನು? ಏಕೆ ಹೀಗೆ ಕಿರುಚುತ್ತಿದ್ದಾನೆ?
ಪ್ರಧಾನಿ ಮೋದಿಗೂ ಬೆಂಗಳೂರಿನ ಈ ಸಮಸ್ಯೆಗೂ ಏನು ಸಂಬಂಧವಿದೆ?
ಕಾಕಣ್ಣ: ಅವನ ಹೆಸರು ಕೇಜ್ರಿಯಂತೆ! ಅವನು
ಯಾವುದೇ ಮತ್ತು ಯಾರದೇ ಸಮಸ್ಯೆಗಳಿರಲಿ, ಅವಕ್ಕೆಲ್ಲಾ ಪ್ರಧಾನಿ ಮೋದಿಯೇ ಜವಾಬ್ದಾರನೆಂದು ಹೇಳುವುದನ್ನು
ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದಾನೆ, ಅಧ್ಯಕ್ಷರೇ.
ಅಧ್ಯಕ್ಷ: ಅವನಿಗೇನು ಹುಚ್ಚು ಹಿಡಿದಿದೆಯೇ?
ಅದಿರಲಿ. ಅವನ ತಲೆಯ ಮೇಲೆ ಕಾಣಿಸುತ್ತಿರುವುದೇನು?
ಕಾಕಣ್ಣ: ಅವನೊಬ್ಬ ಸೈಕೋ, ಸರ್. ಅವನ
ತಲೆಯ ಮೇಲಿರುವುದು ಎಎಪಿ ಕ್ಯಾಪ್ ಅಂತ ಹೇಳುತ್ತಾನೆ!
ಅಧ್ಯಕ್ಷ: ಅವನಿಗೆ ಬಾಯಿ ಮುಚ್ಚುವಂತೆ
ಹೇಳಿ. ನೀವು ಅಜೆಂಡಾ ಮುಂದುವರಿಸಿ.
ಕಾಕಣ್ಣ: ರಿಯಲ್ ಎಸ್ಟೇಟ್ ಡೆವಲಪ್ ಕಂಪನಿಗಳು
ಈ ಸನ್ನಿವೇಶಕ್ಕೆ ಕಾರಣವೆನ್ನುವುದು ಸುಳ್ಳಲ್ಲ. ಆದರೆ ಮುಖ್ಯ ಅಪರಾಧಿ ಯಾರೆಂದರೆ ಮೆಟ್ರೋ ರೈಲ್ ಪ್ರಾಜೆಕ್ಟ್.
ಕೇಜ್ರಿ: ಮೋದಿಯೇ ಜವಾಬ್ದಾರ! ಮೋದಿಯೇ
ಜವಾಬ್ದಾರ!
ಅಧ್ಯಕ್ಷ: ದಯವಿಟ್ಟು ಬಾಯಿ ಮುಚ್ಚು ಮಾರಾಯ!
ಅಜೆಂಡಾ ಮುಂದುವರಿಸಿ.
ಕಾಕಣ್ಣ: ಮೆಟ್ರೋ ಫೇಸ್-1 ತುಂಬಾ ಮರಗಳನ್ನು,
ಮುಖ್ಯವಾಗಿ ಲಕ್ಷ್ಮಣ ರಾವ್ ಪಾರ್ಕ್ನಲ್ಲಿ, ನಾಶ ಮಾಡಿದೆ.
ನಾವು ಕೇಳಿದಂತೆ ಫೇಸ್-2 ಮುಗಿಯುವಾಗ ಇನ್ನೂ
ಸುಮಾರು 5೦೦ ಮರಗಳು ನಾಶವಾಗುವವಂತೆ.
(ತುಂಬಾ ಚರ್ಚೆಗಳ ನಂತರ ಸದಸ್ಯರುಗಳ ಮೋರ್ಚಾ
ಒಂದನ್ನು ಮೆಟ್ರೋ ರೈಲ್ ಆಫೀಸಿಗೆ ತೆಗೆದುಕೊಂಡು ಹೋಗಿ ಮ್ಯಾನೇಜಿಂಗ್ ಡೈರೆಕ್ಟರ್ ಅವರನ್ನು ಭೇಟಿ
ಮಾಡಿ ಮರಗಳ ನಾಶವನ್ನು ನಿಲ್ಲಿಸುವಂತೆ ಬೇಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ)
ಅಧ್ಯಕ್ಷ: ನಾವೀಗ ಎರಡನೇ ಅಜೆಂಡಾಕ್ಕೆ
ಬರೋಣ. ಕಾಕಣ್ಣನವರೇ ನೀವು ಅದರ ಬಗ್ಗೆ ವಿವರಣೆ ಕೊಡಿ.
ಕಾಕಣ್ಣ: ಮಾಜಿ ಪ್ರಧಾನಿ ದೇವೇಗೌಡರ ಪುತ್ರ
ಮತ್ತು ಜೆಡಿಎಸ್ ಪಕ್ಷದ ಲೀಡರ್ ರೇವಣ್ಣನವರು ತಮ್ಮ ಪಕ್ಷದ ಎಂಟು ಮಂದಿ ಸದಸ್ಯರು ರಾಜ್ಯಸಭೆಯ ಚುನಾವಣೆಯಲ್ಲಿ
ಕಾಂಗ್ರೆಸ್ ಪಾರ್ಟಿಯ ಅಭ್ಯರ್ಥಿಗೆ ವೋಟ್ ಮಾಡಿರುವುದನ್ನು ತಿಳಿದು ಕೋಪದಿಂದ ಅವರನ್ನು ಶನಿಗಳೆಂದು ಕರೆದಿರುತ್ತಾರೆ.
ಮಾತ್ರವಲ್ಲ. ಚುನಾವಣೆಯ ನಂತರ ಶನಿ ಕಾಟ ಕಾಂಗ್ರೆಸ್ ಪಕ್ಷಕ್ಕೆ ಅಂಟಿಕೊಂಡಂತಿದೆ ಎಂದು ಗೇಲಿ ಮಾಡಿದ್ದಾರೆ.
ನಮ್ಮ ಕಾಗೆಗಳ ಕುಲದೇವರಾದ ಮತ್ತು ಕಾಕವಾಹನನೆಂದೇ ಪ್ರಸಿದ್ಧನಾದ ಶನಿದೇವನಿಗೆ ಇದು ಕೆಟ್ಟ ಅವಮಾನ
ಮಾಡಿದಂತಾಗಿದೆ, ಅಧ್ಯಕ್ಷರೇ.
ಕೇಜ್ರಿ: ಮೋದಿಯೇ ಜವಾಬ್ದಾರ! ಮೋದಿಯೇ
ಜವಾಬ್ದಾರ!
ಅಧ್ಯಕ್ಷ: ಇದು ತುಂಬಾ ಅತಿರೇಕ. ಈತನಿಗೆ
ಹುಚ್ಚು ಹಿಡಿದಿದೆಯೇ? ಕಾಕಣ್ಣನವರೇ ನೀವು ಮುಂದುವರಿಸಿ.
ಕಾಕಣ್ಣ: ನನ್ನ ಸಲಹೆ ಏನೆಂದರೆ ನಾವೊಂದು
ಮೋರ್ಚಾ ತೆಗೆದುಕೊಂಡು ಮಾನ್ಯ ದೇವೇಗೌಡರ ಬಳಿಗೆ ಹೋಗಿ ಅವರ ಮಗನು ನಮ್ಮ ಮನಸ್ಸಿಗೆ ನೋವುಂಟುಮಾಡಿರುವನೆಂದು
ತಿಳಿಸುವುದು.
ಅಧ್ಯಕ್ಷ: ನಿಮ್ಮ ಸಲಹೆ ಸರಿಯಾಗಿದೆ.
ದೇವೇಗೌಡರು ದೈವಭಕ್ತರೇ ಅಂತೆ. ಅವರು ನಮ್ಮ ಮಾತಿಗೆ ಬೆಲೆಕೊಡುವರೆಂಬ ಬಗ್ಗೆ ಸಂದೇಹವೇ ಇಲ್ಲ. ಈಗ ನಾವು ನಮ್ಮ ಕೊನೆಯ ಅಜೆಂಡಾದ ಬಗ್ಗೆ
ಚರ್ಚೆ ಮಾಡೋಣ.
ಕಾಕಣ್ಣ: ಇದೊಂದು ತುಂಬಾ ನೇರ ಮತ್ತು
ಸರಳವಾದ ಆರೋಪವೇ ಆಗಿದೆ, ಅಧ್ಯಕ್ಷರೇ. ನಮ್ಮ
ಬಳಗದ ಸದಸ್ಯನೊಬ್ಬ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಫಿಶಿಯಲ್ ಕಾರಿನ ಮೇಲೆ ಕುಳಿತು ವಿಶ್ರಾಂತಿ
ಪಡೆಯುತ್ತಿದ್ದನಂತೆ.
ಅಧ್ಯಕ್ಷ: ಅದೊಂದು ಸಾಮಾನ್ಯ ವಿಷಯವೇ
ಅಲ್ಲವೇ? ಅದರಲ್ಲಿ ಆದ ತಪ್ಪೇನು?
ಕೇಜ್ರಿ: ಮೋದಿಯೇ ಜವಾಬ್ದಾರ! ಮೋದಿಯೇ
ಜವಾಬ್ದಾರ!
ಅಧ್ಯಕ್ಷ: ನಿಮ್ಮಲ್ಲಿ ಯಾರಾದರೂ ಇವನ ಬಾಯಿ ಮುಚ್ಚಿಸಬಲ್ಲಿರಾ? ಇವನು ನನಗೆ ಹುಚ್ಚು ಹಿಡಿಸುವಂತಿದೆ. ಕಾಕಣ್ಣನವರೇ ನಿಮ್ಮ ಮಾತನ್ನು ಮುಂದುವರಿಸಿ.
ಕಾಕಣ್ಣ: ನೀವು ಪ್ರಾಯಶಃ ನಂಬಲಾರಿರಿ,
ಅಧ್ಯಕ್ಷರೇ. ಮುಖ್ಯಮಂತ್ರಿಯವರು ಒಬ್ಬ ನಾಸ್ತಿಕರು ಮತ್ತು ಮೂಢ ನಂಬಿಕೆಗಳಿಗೆ ವ್ಯತಿರಿಕ್ತ ಅಭಿಪ್ರಾಯವುಳ್ಳವರೆಂದು
ಸಕಲರಿಗೂ ತಿಳಿದ ವಿಷಯವೇ ಆಗಿದೆ. ವಿಚಿತ್ರವೆಂದರೆ
ಅವುಗಳ ವಿರುದ್ಧ ಒಂದು ಕಾನೂನನ್ನೇ ತರಬೇಕೆಂದು ಹೇಳುತ್ತಿರುವ ಅವರು ಈ ಪ್ರಸಂಗದ ಬಗ್ಗೆ ಜ್ಯೋತಿಷಿಯೊಬ್ಬನ
ಸಲಹೆ ಪಡೆದರಂತೆ!
ಅಧ್ಯಕ್ಷ: ನಿಮ್ಮ ಮಾತನ್ನು ಮುಂದುವರಿಸಿ.
ಕೇಜ್ರಿ: ಮೋದಿಯೇ ಜವಾಬ್ದಾರ! ಮೋದಿಯೇ
ಜವಾಬ್ದಾರ!
ಕಾಕಣ್ಣ: ನಾನೂ ತಾಳ್ಮೆ ಕಳೆದುಕೊಳ್ಳುವ
ಸ್ಥಿತಿಯಲ್ಲಿದ್ದೇನೆ.
ಅಧ್ಯಕ್ಷ: ದಯವಿಟ್ಟು ನಿಮ್ಮ ಮಾತನ್ನು
ಮುಂದುವರಿಸಿ. ತಾಳ್ಮೆಯಿರಲಿ.
ಕಾಕಣ್ಣ: ಜ್ಯೋತಿಷಿ ಕಾಗೆ ಕಾರಿನ ಮೇಲೆ ಕುಳಿತದ್ದು
ಒಂದು ಅಪಶಕುನವೆಂದು ಆ ಕಾರಿನ ಬದಲಿಗೆ ಬೇರೊಂದು ಕಾರನ್ನು ಕೊಳ್ಳುವಂತೆ ಸಲಹೆ ಮಾಡಿಬಿಟ್ಟನಂತೆ, ಸರ್. ಆ ಸಲಹೆಯಂತೆ ನಮ್ಮ ಬಳಗದ ಸದಸ್ಯನೊಬ್ಬ
ಕುಳಿತ ಕಾರಿನ ಬದಲಿಗೆ ಒಂದು ಬ್ರಾಂಡ್ ನ್ಯೂ ಟೊಯೋಟಾ ಫಾರ್ಚುನರ್ ಕಾರ್ ಖರೀದಿಸಲಾಗಿದೆಯಂತೆ, ಸರ್.
ಅಧ್ಯಕ್ಷ: ಇದು ನಮ್ಮ ಬಳಗಕ್ಕೆ ತೀರಾ
ಕೆಟ್ಟ ಅವಮಾನವೇ ಆಗಿದೆ. ನಮ್ಮ ಬಳಗದ ಸದಸ್ಯರೆಲ್ಲಾ ಒಟ್ಟಾಗಿ ಒಂದು ಮೋರ್ಚಾ ವಿಧಾನಸೌಧಕ್ಕೆ ತೆಗೆದುಕೊಂಡು
ಹೋಗೋಣ. ಅಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ
ನಮ್ಮ ಪ್ರತಿಭಟನೆ ಸಲ್ಲಿಸೋಣ. ಅಂದ ಹಾಗೆ ಕಾರಿನ ಮೇಲೆ ಕುಳಿತ ನಮ್ಮ ಸದಸ್ಯ ಈ ಸಭೆಯಲ್ಲಿ ಇದ್ದಾನೆಯೇ?
ಕಾಕಣ್ಣ: ಅವನೊಬ್ಬ ತುಂಬಾ ಬುದ್ದಿವಂತ
ಮತ್ತು ಬಿಸಿನೆಸ್-ಮೈಂಡೆಡ್ ಕಾಗೆಯೇ ಆಗಿದ್ದಾನೆ, ಸರ್. ಅವನೀಗ ಮುಖ್ಯಮಂತ್ರಿಯವರಿಗೆ ಟೊಯೋಟಾ ಫಾರ್ಚುನರ್ ಕಾರ್
ಮಾರಿದ ಡೀಲರ್ ಬಳಿ ಹೋಗಿದ್ದಾನೆ!
ಅಧ್ಯಕ್ಷ: ಅವನ ಉದ್ದೇಶವೇನು?
ಕಾಕಣ್ಣ: ಅವನಿಗೆ ಡೀಲರ್ ತನ್ನ ಕಮಿಶನ್
ನಲ್ಲಿ ಒಂದು ಭಾಗವನ್ನು ಕೊಡುವಂತೆ ಒತ್ತಾಯಿಸುತ್ತಿದ್ದಾನೆ. ಏಕೆಂದರೆ ಅವನು ಹಿಂದಿನ ಕಾರಿನ ಮೇಲೆ
ಕುಳಿತುದಕ್ಕೇ ಡೀಲರ್ ಗೆ ಒಂದು ಹೊಸ ಕಾರನ್ನು ಸರ್ಕಾರಕ್ಕೆ ಸೇಲ್ ಮಾಡಲು ಸಾಧ್ಯವಾಯಿತಂತೆ!
ಕೇಜ್ರಿ: ಮೋದಿಯೇ ಜವಾಬ್ದಾರ! ಮೋದಿಯೇ
ಜವಾಬ್ದಾರ!
(ಶನಿದೇವರ ಪ್ರಾರ್ಥನೆಯೊಡನೆ ಸಭೆಯು ಮುಕ್ತಾಯಗೊಳ್ಳುತ್ತದೆ)
No comments:
Post a Comment