Friday, October 23, 2026

 



ಒಂದು ಊರಿನ ಕಥೆ

ಕೊಪ್ಪ

ಅಧ್ಯಾಯ ೮

ಆ ದಿನ ನನಗೆ ಸ್ಪಷ್ಟವಾಗಿ ನೆನಪಿಗೆ ಬರುತ್ತಿದೆ. ಬೆಳವಿನಕೊಡಿಗೆಯಲ್ಲಿ ಯಾವುದೋ ಸಂತರ್ಪಣೆ ಊಟ ಆಗ ತಾನೇ  ಮುಗಿದಿತ್ತು. ಬಂದವರಲ್ಲಿ ಹೆಚ್ಚು ಜನ ಕಾಫಿ ಕೂಡ ಕುಡಿಯದೇ ಕೂಡಲೇ ಮನೆಯಿಂದ ಹೊರಟು ಬಿಟ್ಟರು. ಅವರೆಲ್ಲಾ ಹುರುಳಿಹಕ್ಕಲಿಗೆ ಹೋಗುವವರಂತೆ. ಅಲ್ಲಿಯ ಶಾಲೆಯಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು ಒಂದು ವಿಡಿಯೋ ಕಾರ್ಯಕ್ರಮ ಏರ್ಪಾಟು ಮಾಡಿದ್ದರಂತೆ. ಪುಟ್ಟಣ್ಣ ಮತ್ತು ನಾನು ಕೂಡಾ ಕುತೂಹಲ ತಡೆಯಲಾರದೇ ಅವರೊಂದಿಗೆ ಸೇರಿಕೊಂಡೆವು. ನಮ್ಮ ಗುಂಪು ಕಿತ್ಲೆಕಟ್ಟೆ ಗುಡ್ಡ ಹತ್ತಿ ಕೊಂಗನಸರಳು ಎಂಬ ಕಣಿವೆಯನ್ನು ಹಾದು ಹುರುಳಿಹಕ್ಕಲನ್ನು ತಲುಪಿತು. ಅಲ್ಲಿ ಹುರುಳಿಹಕ್ಕಲಿನ ಸಾಹುಕಾರರು  ಮತ್ತು ಬೆಳವಿನಕೊಡಿಗೆ ಗ್ರಾಮ  ಪಂಚಾಯತಿಯ ಅಧ್ಯಕ್ಷರಾದ ಬಿ.ಎಸ್.ಲಕ್ಷ್ಮೀನಾರಾಯಣರಾಯರ ನೇತೃತ್ವದಲ್ಲಿ ಸಮಾರಂಭ ಒಂದು ಏರ್ಪಟ್ಟಿತ್ತು.

ವೇದಿಕೆಯ ಮೇಲಿದ್ದವರೆಂದರೆ (ನಮಗೆ ಆಮೇಲೆ ಪರಿಚಯ ಮಾಡಿಸಿದಂತೆ)  ವಯಸ್ಕರ ಶಿಕ್ಷಣ ಸಮಿತಿಯ ವತಿಯಿಂದ ಆರಾಧ್ಯ ಎಂಬುವರು, ಕೊಪ್ಪ ತಾಲೂಕ್ ಬೋರ್ಡ್ ಪ್ರೆಸಿಡೆಂಟ್ ಹೆಚ್.ಜಿ.ಗೋವಿಂದೇ ಗೌಡರು, ಕೊಪ್ಪ ಹೈಸ್ಕೂಲ್ ಹೆಡ್ಮಾಸ್ಟರ್ ಕಾಳಿಂಗ ಕೃಷ್ಣ ಮತ್ತು ಕೊಪ್ಪ ರೇಂಜ್ ಫಾರೆಸ್ಟ್ ಆಫೀಸರ್  (ಹೆಸರು ನೆನಪಿಗೆ ಬರುತ್ತಿಲ್ಲ). ಕೊಪ್ಪ ಹೈಸ್ಕೂಲ್ ಹೆಡ್ಮಾಸ್ಟರ್ ಕಾಳಿಂಗ ಕೃಷ್ಣ ಅವರು ತುಂಬಾ ಸಮರ್ಥರೆಂದು ಪ್ರಸಿದ್ಧಿ ಪಡೆದಿದ್ದರು. ಹಾಗೆಯೇ ಕೊಪ್ಪ ಹೈಸ್ಕೂಲ್ ಕೂಡ ತುಂಬಾ ಹೆಸರು ಗಳಿಸಿತ್ತಂತೆ . ಅಲ್ಲಿನ ವಿದ್ಯಾರ್ಥಿಗಳಲ್ಲಿ ಕವಿಲ್ಕೊಡಿಗೆ ಸುಬ್ಬರಾವ್ ಒಬ್ಬರಾಗಿದ್ದರು. ಇನ್ನು ಸುಪ್ರಸಿದ್ಧ ಸಂಗೀತಗಾರ ಶ್ರೀಮಾನ್ ವಿದ್ಯಾಭೂಷಣ ಅವರು ಕೂಡ ಅಲ್ಲಿಯೇ ಓದಿದ್ದರಂತೆ.

 

ನಾನು ಗೋವಿಂದೇ ಗೌಡರನ್ನು ನೋಡಿದ್ದು ಅದೇ ಮೊದಲ ಬಾರಿ. ಆಮೇಲೆ ಅವರನ್ನು ಹಲವು ಬಾರಿ ನೋಡಿದ್ದು ನೆನಪಿದೆ. ಇನ್ನು ರೇಂಜರ್ ಎಂದು ಕರೆಯಲಾಗುತ್ತಿದ್ದ ಫಾರೆಸ್ಟ್ ಆಫೀಸರ್ ಅವರು ಸ್ವಲ್ಪ “ಡೇಂಜರ್” ಎಂದು ಶ್ರೀಮಂತ ಜಮೀನ್ದಾರರು ಹೇಳುತ್ತಿದ್ದರಂತೆ. ಕಾರಣವಿಷ್ಟೇ. ಅವರು ಮಲಯಾಳಿ ಕುಟ್ಟಿಗಳಿಂದ ಗುಟ್ಟಾಗಿ ಕೊಯ್ದು ಕಾಡಿನಲ್ಲಿ  ಕೂಡಿಡುತ್ತಿದ್ದ ನಾಟಾಗಳನ್ನು ರೇಂಜರ್ ಅವರು ರೈಡ್ ಮಾಡಿ ಸೀಜ್ ಮಾಡಿಬಿಡುತ್ತಿದ್ದರಂತೆ!  ಕಾರ್ಯ ಕ್ರಮ ತುಂಬಾ ಚೆನ್ನಾಗಿ ನಡೆಯಿತು. ಕೊನೆಯಲ್ಲಿ ವಯಸ್ಕರ ಶಿಕ್ಷಣ ಸಮಿತಿಯವರು  ವಿಡಿಯೋ ಕಾರ್ಯಕ್ರಮವನ್ನು ತಾವು ತಂದ ಪ್ರೊಜೆಕ್ಟರ್ ಮೂಲಕ ತುಂಬಾ ಆಕರ್ಷಕವಾಗಿ ತೋರಿಸಿದರು. ಅದೆಲ್ಲಾ  ಮುಗಿದು ನಾವು ಮನೆ ಸೇರುವಾಗ  ತುಂಬಾ ರಾತ್ರಿಯಾಗಿತ್ತು.

ಮಲೆನಾಡ ಗಾಂಧಿ ಹೆಚ್.ಜಿ.ಗೋವಿಂದೇ ಗೌಡರು

ಕೊಪ್ಪ ಪಟ್ಟಣ ಮತ್ತು ಕೊಪ್ಪ ತಾಲೂಕಿನ ಅಭಿವೃದ್ಧಿಗೆ ಮುಖ್ಯ ಕಾರಣ ಮುಂದೆ ಮಲೆನಾಡ ಗಾಂಧಿ ಎಂದು ಹೆಸರು ಪಡೆದ  ಹೆಚ್.ಜಿ.ಗೋವಿಂದೇ ಗೌಡರು. ತಮ್ಮ ತಾರುಣ್ಯದಲ್ಲೇ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ್ದ ಗೌಡರು ಒಬ್ಬ ನುರಿತ ರಾಜಕಾರಣಿ. ಕೊಪ್ಪ ಪಟ್ಟಣದ ಮುನಿಸಿಪಲ್ ಅಧ್ಯಕ್ಷರಾಗಿ, ಕೊಪ್ಪ ತಾಲೂಕ್ ಡೆವಲಪ್ಮೆಂಟ್ ಬೋರ್ಡ್ ಅಧ್ಯಕ್ಷರಾಗಿ ಹಾಗೂ ಮುಂದೆ ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸಾರ್ವಜನಿಕ ಸೇವೆಗಳಿಗೆ ಮಿತಿಯಿರಲಿಲ್ಲ.

ಕಾಲೇಜಿಗಾಗಿ ಪೈಪೋಟಿ

ಅಂದಿನ ಕಾಲದ ಮಲೆನಾಡಿನ ತರುಣ ತರುಣಿಯರಿಗೆ ಕಾಲೇಜು ಮಟ್ಟದ ವಿದ್ಯಾಭ್ಯಾಸಕ್ಕೆ ಕೇವಲ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಮಾತ್ರಾ ಅವಕಾಶವಿತ್ತು.. ಹಾಗಾಗಿ ಕೊಪ್ಪ, ಶೃಂಗೇರಿ ಮತ್ತು ತೀರ್ಥಹಳ್ಳಿ ತಾಲೂಕುಗಳಿಗೆ ಶಿವಮೊಗ್ಗೆಯೇ ವಿದ್ಯಾಭ್ಯಾಸ ಕೇಂದ್ರವಾಗಿತ್ತು.  ಗೋವಿಂದೇ ಗೌಡರು ಕೂಡ ತಮ್ಮ ಇಂಟರ್ ಮೀಡಿಯೇಟ್ ತರಗತಿಯನ್ನು ಸಹ್ಯಾದ್ರಿ ಕಾಲೇಜಿನಲ್ಲೇ ಮುಗಿಸಿದ್ದರಂತೆ. ಸುಮಾರು ೧೯೬೩-೧೯೬೫ ನೇ ಇಸವಿಯ ವೇಳೆಗೆ ಈ ಮೂರು ತಾಲೂಕು ಕೇಂದ್ರಗಳಿಗೆ ಹೊಸ ಕಾಲೇಜು ಸ್ಥಾಪನೆ ವಿಚಾರದಲ್ಲಿ ಪೈಪೋಟಿ ಆರಂಭವಾಯಿತು. ಈ ಪೈಪೋಟಿಯಲ್ಲಿ ಶೃಂಗೇರಿಯ ಚಂದ್ರಮೌಳಿ ರಾಯರು ಮತ್ತು ವೀರಪ್ಪ ಗೌಡರ ನೇತೃತ್ವದ ಭಾರತೀ ವಿದ್ಯಾ ಸಂಸ್ಥೆ ವಿಜಯ ಸಾಧಿಸಿತು. ಅದಕ್ಕೆ ಮುಖ್ಯ ಕಾರಣ ಅದು ಮಣಿಪಾಲ್ ಅಕ್ಯಾಡೆಮಿಯೊಂದಿಗೆ ಮಾಡಿಕೊಂಡ ಒಪ್ಪಂದ. ಅದರೊಂದಿಗೆ ಶೃಂಗೇರಿಯಲ್ಲಿ ಜೆ.ಸಿ.ಬಿ.ಎಂ.ಕಾಲೇಜಿನ ಸ್ಥಾಪನೆ ೧೯೬೫ನೇ ಇಸವಿಯಲ್ಲಿ ನೆರವೇರಿತು. ಮುಂದೆ ತೀರ್ಥಹಳ್ಳಿಯಲ್ಲಿ ತುಂಗಾ ಮಹಾವಿದ್ಯಾಲಯ ೧೯೬೭ನೇ ಇಸವಿಯಲ್ಲಿ ಸ್ಥಾಪನೆಗೊಂಡಿತು. ಆದರೆ ಕೊಪ್ಪದಲ್ಲಿ ಕಾಲೇಜಿನ ಸ್ಥಾಪನೆಗೆ ಹಲವು ವರ್ಷಗಳೇ ಬೇಕಾದವು.

ಎಂ ಎಲ್ ಏ ಸ್ಥಾನಕ್ಕೆ ಕಾಂಗ್ರೆಸ್ಸಿನಲ್ಲಿ ಪೈಪೋಟಿ

ಮಾನ್ಯ ಕಡಿದಾಳ್ ಮಂಜಪ್ಪನವರು ೧೯೬೭ರಲ್ಲಿ ರಾಜಕೀಯ ಸನ್ಯಾಸ ಸ್ವೀಕರಿಸುವುದರೊಂದಿಗೆ ಶೃಂಗೇರಿ ಕ್ಷೇತ್ರದಿಂದ ಸ್ಪರ್ದಿಸಲು ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ನಡೆಯಿತು. ಅದರಲ್ಲಿ ಬಸವಾನಿ ರಾಮಶರ್ಮರ ಹೆಸರೂ ಇತ್ತು. ಆದರೆ ಮುಖ್ಯ ಪೈಪೋಟಿ ಕೊಪ್ಪದಿಂದ ಗೋವಿಂದೇ ಗೌಡರು ಮತ್ತು ಶೃಂಗೇರಿಯಿಂದ ವೀರಪ್ಪ ಗೌಡರ ನಡುವೆ ಇತ್ತು. ಅಂದಿನ ಮೈಸೂರು ಕಾಂಗೆಸ್ಸಿನಲ್ಲಿ ನಿಜಲಿಂಗಪ್ಪನವರ ದರ್ಬಾರು ನಡೆಯುತ್ತಿತ್ತು. ನಾನಾಗ ಶೃಂಗೇರಿ ಕಾಲೇಜಿನಲ್ಲಿ ಓದುತ್ತಿದ್ದೆ. ವೀರಪ್ಪ ಗೌಡರ ಮಗ ರವೀಂದ್ರನಾಥ ಟ್ಯಾಗೋರ್ ನನ್ನ ಸಹಪಾಠಿಯಾಗಿದ್ದ.

ಒಂದು ದಿನ ಸಂಜೆ ನಾವು ಕಾಲೇಜಿನಿಂದ ಹಿಂದಿರುಗುವಾಗ ವೀರಪ್ಪ ಗೌಡರು ಮೀಸೆ ತಿರುವುತ್ತಾ ದೊಣ್ಣೆ (Walking Stick) ಕೈಯಲ್ಲಿ ಹಿಡಿದುಕೊಂಡು ಕೆಳಗಿನ ಪೇಟೆಯಲ್ಲಿದ್ದ ಕಳಸಪ್ಪ ನಾಯಕರ ಅಂಗಡಿ ಪ್ರವೇಶ ಮಾಡುವುದನ್ನು ನೋಡಿದೆವು. ವಿಷಯ ಸ್ಪಷ್ಟವಾಗಿತ್ತು. ಮಾರನೇ ದಿನ ವೀರಪ್ಪ ಗೌಡರು ಕಾಂಗ್ರೆಸ್ ಟಿಕೆಟ್ ಪಡೆಯುವುದರಲ್ಲಿ ಜಯಶೀಲರಾದರೆಂದು ಊರಿಗೆಲ್ಲ ತಿಳಿದು ಹೋಯಿತು. ಆಗಿನ್ನೂ ನಲವತ್ತರ ಪ್ರಾಯದಲ್ಲಿದ್ದ ಗೋವಿಂದೇ ಗೌಡರು ಮುಂದೆ ೧೯೮೩ರಲ್ಲಿ ಜನತಾದಳದ ಅಭ್ಯರ್ಥಿಯಾಗಿ ವಿಧಾನ ಸಭೆಯನ್ನು ಪ್ರವೇಶಿಸಿದರು. ಮುಂದೆ ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿ ಅವರು ಸಲ್ಲಿಸಿದ ಸಾರ್ವಜನಿಕ ಸೇವೆಗಳ ವಿವರ ಎಲ್ಲರಿಗೂ ಲಭ್ಯವಿದೆ.

------------------ಮುಂದಿನ ಅಧ್ಯಾಯದಲ್ಲಿ ಮುಕ್ತಾಯ-------  (ಫೋಟೋದಲ್ಲಿ ಮಲೆನಾಡ ಗಾಂಧಿ ಹೆಚ್.ಜಿ.ಗೋವಿಂದೇ ಗೌಡರು ಮತ್ತು ಸುಪ್ರಸಿದ್ಧ ಸಂಗೀತಗಾರ ಶ್ರೀಮಾನ್ ವಿದ್ಯಾಭೂಷಣ ಅವರು }


 

No comments: