Saturday, November 28, 2026

 ಓಡಿಹೋದವರು (ಮತ್ತು ಕಾಣೆಯಾದವರು)

ಅಧ್ಯಾಯ ೨

ಚಂದ್ರಣ್ಣಯ್ಯ

ಚಂದ್ರಣ್ಣಯ್ಯ ನಮ್ಮ ತಂದೆಯವರ ಸೋದರಮಾವನ ಮೊಮ್ಮಗ (ಮಗಳ ಮಗ). ಅವನ ಅಮ್ಮನನ್ನು ಶರಾವತಿ ನದಿಯ ಉಗಮಸ್ಥಾನವಾದ ಅಂಬುತೀರ್ಥದ ಶಾಮರಾವ್ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗಳಿಗೆ ಅಶ್ವತ್ಥ ಮತ್ತು ಚಂದ್ರಶೇಖರ  (ಚಂದ್ರಣ್ಣಯ್ಯ) ಎಂಬ ಇಬ್ಬರು ಗಂಡು ಮಕ್ಕಳಿದ್ದರು. ದುರದೃಷ್ಟವಶಾತ್ ಚಂದ್ರಣ್ಣಯ್ಯ ಹುಟ್ಟಿ ಸ್ವಲ್ಪ ವರ್ಷದಲ್ಲಿಯೇ ದಂಪತಿಗಳಿಬ್ಬರೂ ಯಾವುದೊ ಕಾಹಿಲೆಯಿಂದ ಒಮ್ಮೆಗೇ ತೀರಿಕೊಂಡರಂತೆ.

ಮಕ್ಕಳಿಬ್ಬರ ಸೋದರಮಾವನಾದ ನಮ್ಮ ನೆರೆಮನೆ ಸಂಪಿಗೆಕೊಳಲಿನ ಗಣೇಶರಾಯರಾಯರು ಅವರಿಬ್ಬರನ್ನೂ ನಮ್ಮೂರಿಗೆ ಕರೆತಂದರಂತೆ. ದೊಡ್ಡ ಮಗ ಅಶ್ವತ್ಥನನ್ನು ಅವರ ಮನೆಯಲ್ಲೇ ಇಟ್ಟುಕೊಂಡು ಎರಡನೇ ಮಗ ಚಂದ್ರಣ್ಣಯ್ಯನನ್ನು ನಮ್ಮ ಕೆಳಗಿನ ಮನೆಯಲ್ಲಿದ್ದ ಅವನ ತಾಯಿಯ ಸೋದರಮಾವ ಕೃಷ್ಣಯ್ಯನವರ ಮನೆಯಲ್ಲಿ ಬಿಟ್ಟರಂತೆ. ಅಂಬುತೀರ್ಥದಲ್ಲಿದ್ದ ಅವರ ಭಾವನ ಆಸ್ತಿ ಎಲ್ಲವನ್ನೂ ಮಾರಿ ಹಣವನ್ನು ಬ್ಯಾಂಕಿನಲ್ಲಿಟ್ಟರಂತೆ.

ಸ್ವಲ್ಪ ವರ್ಷಗಳ ನಂತರ ತರುಣನಾದ ಚಂದ್ರಣ್ಣಯ್ಯನನ್ನೂ ಗಣೇಶರಾಯರು ತಮ್ಮ ಮನೆಯಲ್ಲೇ ಇಟ್ಟುಕೊಂಡರು.ದೊಡ್ಡವನಾದ ಅಶ್ವತ್ಥ ಜಮೀನಿನ ಕೆಲಸಗಳನ್ನೆಲ್ಲಾ ನೋಡುತ್ತಿದ್ದರೆ, ಚಂದ್ರಣ್ಣಯ್ಯನಿಗೆ ಹಣಕಾಸಿನ ವ್ಯವಹಾರ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಯಿತು. ಬ್ಯಾಂಕಿನಲ್ಲಿದ್ದ ಜಮೀನು ಮಾರಿದ ಹಣವನ್ನು  ಹೊರತೆಗೆದು ಲೇವಾದೇವಿಯಲ್ಲಿ ತೊಡಗಿಸಿ ಅದು ದೊಡ್ಡ ಮೊತ್ತವಾಗಿ ಬೆಳೆಯುವಂತೆ ಮಾಡಲಾಯಿತು.

ಆ ಸಮಯದಲ್ಲಿ ಚಂದ್ರಣ್ಣಯ್ಯನಿಗೆ ತೀವ್ರವಾದ ಹೊಟ್ಟೆ ನೋವಿನ ಕಾಹಿಲೆ ಪ್ರಾರಂಭವಾಯಿತು. ಯಾವ ಚಿಕಿತ್ಸೆಗೂ ಬಗ್ಗದ ಈ ಕಾಹಿಲೆಯನ್ನು ಸಹಿಸಲಾಗದೇ ಅವನು ಮನೆ ಬಿಟ್ಟು ಒಮ್ಮೆ ಓಡಿಹೋಗಿದ್ದ. ಆಮೇಲೆ ಸ್ವಲ್ಪ ಕಾಲದ ನಂತರ ವಾಪಾಸ್ ಬಂದುಬಿಟ್ಟ. ಆದರೆ ಸ್ವಲ್ಪ ಕಾಲದ ನಂತರ ಅವನು ಪುನಃ ಓಡಿಹೋಗಿದ್ದ. ಈ ಬಾರಿ ನಾವೆಂದೂ ಕೇಳದ ಆಂಧ್ರ ಪ್ರದೇಶದ ಪುಟ್ಟಪರ್ತಿ ಎಂಬ ಊರಿಗೆ ಹೋಗಿ ಅಲ್ಲಿದ್ದ ಸಾಯಿಬಾಬಾ ಅವರ ಆಶ್ರಮದಲ್ಲಿದ್ದನಂತೆ. ಸ್ವಲ್ಪ ಸಮಯದ ನಂತರ ಅವನನ್ನು ವಾಪಾಸ್ ಊರಿಗೆ ಕರೆತರಲಾಯಿತು.

ಮುಂದೆ ಗಣೇಶರಾಯರು ತಮ್ಮ ಷಡ್ಡಕರಾದ ಹುರುಳಿಹಕ್ಕಲು ಲಕ್ಷ್ಮೀನಾರಾಯಣರಾವ್ ಅವರಿಂದ ಅರದಳ್ಳಿ ಎಂಬಲ್ಲಿದ್ದ ಅವರ ಜಮೀನನ್ನು ಖರೀದಿಸಿದರು. ಅದರಲ್ಲಿ ತಮ್ಮ ಭಾವನ ಹಣದಿಂದ ಖರೀದಿಸಿದ ಸ್ವಲ್ಪ ಜಮೀನನ್ನು ಅವರ ಮಕ್ಕಳಾದ ಅಶ್ವತ್ಥ ಮತ್ತು ಚಂದ್ರಶೇಖರ  (ಚಂದ್ರಣ್ಣಯ್ಯ)  ಇಬ್ಬರ ಹೆಸರಿನಲ್ಲಿ ರಿಜಿಸ್ಟರ್ ಮಾಡಿ ಅವರಿಬ್ಬರೂ ಜಮೀನಿನ ಹತ್ತಿರವಿದ್ದ ಮನೆಯಲ್ಲಿ ವಾಸಮಾಡುವ ಏರ್ಪಾಟು ಮಾಡಿದರು. ಮುಂದೆ ಅವರಿಬ್ಬರ ಕುಟುಂಬಗಳೂ ಅರದಳ್ಳಿಯಲ್ಲಿಯೇ ನೆಲಯೂರಿದವು.

ಕೆಸವೆ  ರಂಗಪ್ಪಯ್ಯ

ಆ ಕಾಲದಲ್ಲೇ ಕೊಪ್ಪದ  ಕೆಳಗಿನಪೇಟೆಯಲ್ಲಿ ನಮ್ಮ ಸಂಬಂಧಿಗಳಾದ  ಕೆಸವೆ ರಂಗಪ್ಪಯ್ಯನವರ ಮನೆ  ಇತ್ತು. ಹಾಗೂ ಈಗಲೂ ಇದೆ. ರಂಗಪ್ಪಯ್ಯನವರ ಮೂಲಮನೆ ಕೆಸವೆಯ ಹತ್ತಿರವಿರುವ ಊರುಗೊಡಿಗೆಯಂತೆ. ಅವರು ಆಗರ್ಭ ಶ್ರೀಮಂತರಾಗಿದ್ದರಂತೆ. ಅವರಿಗೆ ನಮ್ಮ ತಂದೆಯ ಅಕ್ಕನ ಮಗಳಾದ ಮರಡಿಯ ಕಂದಕ್ಕಯ್ಯನನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಅವಳು ಮೇಲೆ ಹೇಳಿದ ಮನೆಬಿಟ್ಟು ಓಡಿಹೋದ ಶಾಮುವಿನ ಅಕ್ಕನೇ ಆಗಿದ್ದಳು. ರಂಗಪ್ಪಯ್ಯನವರೂ ಕೂಡ ತಮ್ಮ  ಯೌವನ ಸಮಯದಲ್ಲೇ ತಮ್ಮ ಅಪಾರ ಸಂಪತ್ತನ್ನು ಹಾಗೆಯೆ ಬಿಟ್ಟು ದೇಶಾಂತರ ಹೋಗಿ ಬಿಟ್ಟಿದ್ದರಂತೆ.  ಎಷ್ಟೋ ಸಮಯದ ನಂತರ ಅವರು ತಮಿಳುನಾಡಿನ ಯಾವುದೋ ಊರಿನಲ್ಲಿರುವರೆಂದು ಸಮಾಚಾರ ಬಂತಂತೆ. ಆದರೆ ಅವರನ್ನು ಹುಡುಕಿ ವಾಪಾಸ್ ಮನೆಗೆ ಬರುವಂತೆ ಮಾಡುವುದು ಆ ಕಾಲದಲ್ಲಿ ಅಷ್ಟೊಂದು ಸುಲಭವಾಗಿರಲಿಲ್ಲ. ಆದರೆ ಅವರ ಆತ್ಮೀಯರಾದ ಬೇಲಿಹಳ್ಳಿ ಪಟೇಲ್ ಮಹಾಬಲಯ್ಯ ಎಂಬ ಸಜ್ಜನ ಅವರನ್ನು ವಾಪಾಸ್ ಕರೆತರಲೇ ಬೇಕೆಂದು ಪಣತೊಟ್ಟರಂತೆ. ಹಾಗೂ ತಮ್ಮ ಕಾರ್ಯದಲ್ಲಿ ಜಯಶೀಲರಾಗಿಯೂ ಬಿಟ್ಟರಂತೆ. ಮುಂದೆ ರಂಗಪ್ಪಯ್ಯನವರು ಕೊಪ್ಪ ತಾಲೂಕ್ ಬೋರ್ಡಿನ ಪ್ರಮುಖ ಸಿವಿಲ್ ಕಾಂಟ್ರ್ಯಾಕ್ಟರ್ ಗಳಲ್ಲಿ ಒಬ್ಬರಾದರಂತೆ. ಅವರು ರಸ್ತೆ, ಬಾವಿ, ಮೋರಿ  ಮತ್ತು ಸೇತುವೆಗಳನ್ನು ಕಟ್ಟುವುದರಲ್ಲಿ ಪರಿಣಿತರಾಗಿಬಿಟ್ಟರಂತೆ.

ಕಾಣೆಯಾಗಿಹೋದ ಹುರುಳಿಹಕ್ಕಲಿನ ತಿಮ್ಮಪ್ಪ ಮತ್ತು ಅವನ ತಮ್ಮ ಸದಾಶಿವ

ನಾನು ಈ ಹಿಂದೆ ನನ್ನ ಹುರುಳಿಹಕ್ಕಲಿನ ಗತವೈಭವ ಎಂಬ ಲೇಖನವನ್ನು ಐದು ಭಾಗಗಳಲ್ಲಿ ಬರೆದು ಪ್ರಕಟಿಸಿದ್ದೇನೆ. ಅದರಲ್ಲಿ ನಮ್ಮೂರಿನ ಅತಿ ದೊಡ್ಡ ಶ್ರೀಮಂತ ಜಮೀನ್ದಾರರಾಗಿದ್ದ ಹುರುಳಿಹಕ್ಕಲು ಲಕ್ಷ್ಮೀನಾರಾಯಣರಾವ್ ಅವರು ತಮ್ಮ ಆಸ್ತಿಯನ್ನೆಲ್ಲ ಮಾರಿ ಶಿವಮೊಗ್ಗೆಯನ್ನು ಸೇರಿದುದನ್ನು ಬರೆದಿದ್ದೇನೆ. ಮುಂದೆ ಅವರ ಹಣವೆಲ್ಲಾ ಖರ್ಚಾಗಿ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಅವರ ಹಿರಿಯ ಮಗ ತಿಮ್ಮಪ್ಪ ಮನೆಬಿಟ್ಟು ಓಡಿಹೋದದ್ದನ್ನೂ ಬರೆದಿದ್ದೇನೆ. ಅವನಿಗೆ ಆಗ ವಿವಾಹವಾಗಿರಲಿಲ್ಲ. ವಾಸ್ತವವಾಗಿ ರಾಯರು ಜಮೀನನ್ನೆಲ್ಲಾ ಮಾರುವ ಮೊದಲು ತಿಮ್ಮಪ್ಪನಿಗೆ ನಮ್ಮ  ಊರಿನವಳೇ ಆದ ಹುಡುಗಿಯೊಬ್ಬಳೊಡನೆ ವಿವಾಹ ನಿಶ್ಚಯವಾಗಿತ್ತು. ಆದರೆ ರಾಯರ ಕುಟುಂಬ ಶಿವಮೊಗ್ಗೆ ಸೇರಿದೊಡನೆ ಆ ಸಂಬಂಧ ಮುರಿದುಬಿತ್ತು. ತಿಮ್ಮಪ್ಪನೆಲ್ಲಿಗೆ ಹೋದನೆಂದು ಯಾರಿಗೂ ತಿಳಿಯಲಿಲ್ಲ. ಹಾಗೂ ಅವನೆಂದೂ ಹಿಂದಿರುಗಿ ಬರಲೇ ಇಲ್ಲ. ಆಮೇಲೆ ಸ್ವಲ್ಪ ವರ್ಷಗಳ ನಂತರ ತಿಮ್ಮಪ್ಪನ ಎರಡನೇ ತಮ್ಮ ಸದಾಶಿವನೂ ಇದ್ದಕ್ಕಿದ್ದಂತೆ ಕಾಣೆಯಾಗಿ ಹೋಗಿಬಿಟ್ಟ. ಅಲ್ಲಿಯವರೆಗೆ ಅವನು ಶಿವಮೊಗ್ಗೆಯಲ್ಲೇ ಪತ್ನಿ ಮತ್ತು ಮಕ್ಕಳೊಡನೆ ಕಷ್ಟಪಟ್ಟು ಸಂಸಾರ ನಡೆಸುತ್ತಿದ್ದ. ಅವನೂ ಕೂಡ ಹಿಂದಿರುಗಿ ಬರಲೇ ಇಲ್ಲ. ತಿಮ್ಮಪ್ಪ ಮತ್ತು ಸದಾಶಿವ ನಮ್ಮ ಅಣ್ಣ ರಾಮಕೃಷ್ಣನ  ಪತ್ನಿ ಶಾರದೆಯ ತಮ್ಮಂದಿರೇ ಆಗಿದ್ದರು.

------------------------------ಮುಂದುವರಿಯುವುದು--------------------   

 (ಅಂಬುತೀರ್ಥ ಮತ್ತು ಪುಟ್ಟಪರ್ತಿಯ ಫೋಟೋಗಳು)





 

No comments: