ನಮ್ಮ ಕಾಲದ ಪಠ್ಯಪುಸ್ತಕಗಳು
ಅಧ್ಯಾಯ ೨
ನಮ್ಮ ೨ನೇ ತರಗತಿಯ ಕನ್ನಡ ಪಠ್ಯಪುಸ್ತಕ
ನಾನು ನಮ್ಮ
೨ನೇ ತರಗತಿಯ ಕನ್ನಡ ಪಠ್ಯಪುಸ್ತಕದ ಪಾಠಗಳನ್ನು ನೆನಪು ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗಲೇ, ನನಗಿಂತ ಎರಡು ವರ್ಷ ಹಿರಿಯನಾದ ನನ್ನ ಅಣ್ಣ ಲಕ್ಷ್ಮೀನಾರಾಯಣ
(ಪುಟ್ಟಣ್ಣ), ತಾನೂ ಅದೇ ಪುಸ್ತಕವನ್ನು ಓದಿದ್ದು, ತನಗೆ ಎಲ್ಲಾ ಪಾಠಗಳ ಹೆಸರು ಇನ್ನೂ ನೆನಪಿನಲ್ಲಿದೆಯೆಂದು
ಹೇಳಿ ಮುಂದೆ ಕಾಣುವ ಅವುಗಳ ಪಟ್ಟಿಯನ್ನೇ ಕಳುಹಿಸಿದ:
೧. ಶ್ರೀರಾಮ
ದೇವರು ೨. ಗುಡಿಗಳು ೩. ಕಾಗೆ ಮತ್ತು ನರಿ ೪.ನರಿ ಮತ್ತು ದ್ರಾಕ್ಷಿ ೫. ನರಿಯ ಯುಕ್ತಿ ೬. ಹೂವಾಡಗಿತ್ತಿ
೭.ಸಿಂಹ ಮತ್ತು ಇಲಿ ೮.ತೋಳ ಮತ್ತು ಕುರಿಮರಿ ೯.ಕಷ್ಟಪಟ್ಟರೆ ಫಲವುಂಟು ೧೦. ಹೋತ ಮತ್ತು ಸಿಂಹ ೧೧.ನಮ್ಮ
ಹಳ್ಳಿ ೧೨. ನಕಲಿಯ ಶ್ಯಾಮ ೧೩.ದೊರೆ ಮತ್ತು ಅಪರಾಧಿ
೧೪. ತಾಯಿ ೧೫.ಪಟ್ಟದ ಆನೆಯ ಕಥೆ ೧೬.ಹೊಲ ೧೭.ಹಾವಿನ ಹಾಡು ೧೮.ದಶರಥನ ಮಕ್ಕಳು ೧೯. ಗದ್ದೆ ೨೦.ಸೀತಾ
ಪರಿಣಯ ೨೧.ಸಂತಮ್ಮಣ್ಣ ೨೨.ಶ್ರೀರಾಮನು ಕಾಡಿಗೆ ಹೊರಟದ್ದು ೨೩.ಶ್ರೀರಾಮ ಮತ್ತು ಭರತ ೨೪.ಮಾದರಿ ಹಳ್ಳಿ
ಶ್ರೀರಾಮ
ದೇವರು
ಈ ಪುಸ್ತಕದಲ್ಲಿ
ಮೊದಲ ಬಾರಿ ನಮಗೆ ರಾಮಾಯಣವನ್ನು ಪಾಠವಾಗಿ ಇಡಲಾಗಿತ್ತು. ಕಥೆಯನ್ನು ಮುಂದಿನ ಕೆಲವು ಪಾಠಗಳಲ್ಲಿ ಮುಂದುವರಿಸಿ
ಶ್ರೀರಾಮ ಮತ್ತು ಭರತ ಎಂಬ ಪ್ರಸಂಗವನ್ನು ಕೊನೆಯ ಪಾಠವಾಗಿ ಇಡಲಾಗಿತ್ತು. ಆದರೆ ಈ ಪಾಠಗಳನ್ನು ಬೇರೆ
ಪಾಠಗಳ ಮಧ್ಯೆ ಮಧ್ಯೆ ಸೇರಿಸಿ ಮುಂದುವರಿಸಲಾಗಿತ್ತು. ಕಥೆಯನ್ನು ತುಂಬಾ ಸರಳ ರೀತಿಯಲ್ಲಿ ಬರೆಯಲಾಗಿತ್ತು.
ಕಾಗೆ ಮತ್ತು ನರಿ
ಪುಸ್ತಕದ ಹಲವು ಪಾಠಗಳು ಈಸೋಪನ ನೀತಿ ಕಥೆಗಳಿಂದ ಆಯ್ದ ಕಥೆಗಳಾಗಿದ್ದವು
ಮತ್ತು ನಮಗೆ ತುಂಬಾ ಆಸಕ್ತಿದಾಯಕವಾಗಿ ಬರೆಯಲ್ಪಟ್ಟಿದ್ದವು. ಅವುಗಳಲ್ಲಿ
ಮೊದಲಿನದೇ ಕಾಗೆ ಮತ್ತು ನರಿ ಎಂಬ ಪಾಠ. ಕಥೆಯಲ್ಲಿ
ಕಾಗೆಯು ನರಿಯ ಹೊಗಳಿಕೆಯ ಮಾತುಗಳಿಗೆ ಮಾರು ಹೋಗಿ ತಾನು ತುಂಬಾ ಚೆನ್ನಾಗಿ ಹಾಡಬಲ್ಲೆನೆಂದು ನಂಬಿ
ಕಾಕಾ ಎಂದು ಹಾಡತೊಡಗುತ್ತದೆ. ಆಗ ಅದರ ಬಾಯಲ್ಲಿದ್ದ ಮಾಂಸದ ತುಂಡು ಕೆಳಗೆ ಬೀಳುತ್ತದೆ. ನರಿ ಅದೆನ್ನೆತ್ತಿಕೊಂಡು ಓಡಿಹೋಗುತ್ತದೆ. ಕಥೆಯ ನೀತಿ ಏನೆಂದರೆ ನಾವೆಂದೂ ಪರರ ಹೊಗಳಿಕೆಗೆ ಈಡಾಗಿ ಮೋಸಹೋಗಬಾರದೆಂದು. ಕಾಗೆ ತನ್ನದು ಕರ್ಕಶ ಸ್ವರವೆಂದು ಅರಿತಿದ್ದರೂ ನರಿಯ ಹೊಗಳಿಕೆಗೆ
ನಂಬಿ ಮೋಸಹೋಗುತ್ತದೆ.
ತೋಳ ಮತ್ತು ಕುರಿಮರಿ
ತೋಳ ಮತ್ತು
ಕುರಿಮರಿ ಇನ್ನೊಂದು ಆಸಕ್ತಿದಾಯಕ ಕಥೆಯಾಗಿತ್ತು. ಕಥೆಯ ಆರಂಭದಲ್ಲಿ ತೋಳ ಮತ್ತು ಕುರಿಮರಿ ಎರಡೂ ಒಂದು
ಹಳ್ಳದಲ್ಲಿ ನೀರು ಕುಡಿಯುತ್ತಿರುತ್ತವೆ. ತೋಳ ಹಳ್ಳದ ಮೇಲ್ಭಾಗದಲ್ಲಿ ನೀರು ಕುಡಿಯುತ್ತಿದ್ದರೆ, ಕುರಿಮರಿ ಸ್ವಲ್ಪ ಕೆಳ ಭಾಗದಲ್ಲಿ ಕುಡಿಯುತ್ತಿರುತ್ತದೆ. ಇದ್ದಕ್ಕಿದ್ದಂತೆಯೇ ತೋಳ ತಾನು ಕುರಿಮರಿಯ ಎಂಜಲು ನೀರು ಕುಡಿಯುವುದಿಲ್ಲವೆಂದೂ,
ಆದ್ದರಿಂದ ಅದು ನೀರು ಕುಡಿಯುವುದನ್ನು ನಿಲ್ಲಿಸಬೇಕೆಂದೂ ಜೋರಾಗಿ ಹೇಳುತ್ತದೆ. ಆದರೆ ಕುರಿಮರಿ ತಾನು
ಹಳ್ಳದ ಕೆಳಭಾಗದಲ್ಲಿ ನೀರು ಕುಡಿಯುತ್ತಿರುವುದರಿಂದ ಅದು ಎಂಜಲಾಗುವ ಪ್ರಶ್ನೆಯೇ ಇಲ್ಲವೆನ್ನುತ್ತದೆ. ತೋಳ ಹಾಗಿದ್ದರೆ ಅದು ಹಿಂದಿನ ಬಾರಿ ಇರಬೇಕು ಎನ್ನುತ್ತದೆ.
ಆದರೆ ಕುರಿಮರಿ ತಾನು ಮೊದಲ ಬಾರಿ ಆ ಹಳ್ಳದ ನೀರನ್ನು ಕುಡಿಯಲು ಬಂದಿರುವುದಾಗಿ ಹೇಳುತ್ತದೆ. ಆದರೆ ತೋಳ
ಒಪ್ಪುವುದಿಲ್ಲ. ಏಕೆಂದರೆ ಅದು ಕುರಿಮರಿಯ ಮೇಲೆ ಆಕ್ರಮಣ ಮಾಡಲು ಕಾರಣ ಹುಡುಕುತ್ತಿತ್ತು ಅಷ್ಟೇ. ಅದು ಹಾಗಿದ್ದರೆ ಅದು ಅದರ ಅಮ್ಮನೋ ಅಪ್ಪನೋ
ಆಗಿರಬೇಕು ಎಂದು ಹೇಳುತ್ತಾ ಕುರಿಮರಿಯ ಮೇಲೆ ಎಗರಿ ಅದನ್ನು ಕೊಂದು ಎತ್ತಿಕೊಂಡು ಹೋಗುತ್ತದೆ.
ಕಥೆಯ ನೀತಿ ಏನೆಂದರೆ, ಈ ಪ್ರಪಂಚದಲ್ಲಿ ಬಲಾಢ್ಯ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೂ ದುರ್ಬಲರ ಮೇಲೆ
ಆಕ್ರಮಣ ಮಾಡುತ್ತಾರೆ.
ನಕಲಿಯ ಶ್ಯಾಮ
ಇನ್ನೊಂದು
ತುಂಬಾ ತಮಾಷೆಯ ಕಥೆಯೆಂದರೆ ನಕಲಿಯ ಶ್ಯಾಮನದು. ಶ್ಯಾಮ
ರಾಜನೊಬ್ಬನ ಆಸ್ಥಾನದಲ್ಲಿ ವಿದೂಷಕನಾಗಿರುತ್ತಾನೆ. ಅವನ
ಕರ್ತವ್ಯಗಳೆಂದರೆ ರಾಜನ ಆಸ್ಥಾನದಲ್ಲಿ ಆಗಾಗ ಹಾಸ್ಯ, ಲೇವಡಿ ಮತ್ತು ಗೇಲಿ ಮುಂತಾದವುಗಳಿಂದ ತಮಾಷೆ
ಪ್ರಸಂಗಗಳನ್ನುಂಟು ಮಾಡುವುದು. ಅವನು ಯಾವಾಗಲೂ ರಾಜನ ಸಂಗಡವೇ ಇರುತ್ತಾನೆ. ಆದರೆ ಅವನ ವೃತ್ತಿ ಸ್ವಲ್ಪ ಅಪಾಯಕರವೇ ಆಗಿರುವುದು. ಏಕೆಂದರೆ
ಅವನು ಮಾಡುವ ಯಾವುದಾದರೂ ತಮಾಷೆಗಳು ರಾಜನಿಗೆ ಇಷ್ಟವಾಗದಿದ್ದರೆ, ರಾಜನು ಅವನಿಗೆ ಶಿಕ್ಷೆ ವಿಧಿಸುವ
ಸಾಧ್ಯತೆ ಇರುವುದು. ಒಂದು ದಿನ
ಶಾಮನು ಮಾಡಿದ ಹಾಸ್ಯವೊಂದು ರಾಜನಿಗೆ ತುಂಬಾ ಕೋಪ ತರುತ್ತದೆ. ಅದೆಷ್ಟೆಂದರೆ ಅವನು ಶಾಮನಿಗೆ ಇನ್ನು
ಮುಂದೆ ಅವನು ರಾಜನಿಗೆ ಮುಖವನ್ನೂ ತೋರಿಸಬಾರದೆಂದು ಆಜ್ಞಾಪಿಸುತ್ತಾನೆ!
ಆ ಸಂಜೆ
ಶಾಮನು ತುಂಬಾ ಚಿಂತಿತನಾಗಿ ಮನೆ ಸೇರುತ್ತಾನೆ. ರಾಜನ ಆಜ್ಞೆಯಂತೆ ಅವನು ಇನ್ನು ಮುಂದೆ ಆಸ್ಥಾನದಲ್ಲಿ
ಮುಖವನ್ನೇ ತೋರಿಸುವಂತಿಲ್ಲ. ಅದನ್ನೇ ಯೋಚಿಸುತ್ತಾ ಅವನು ಮಡಕೆಯೊಂದರಿಂದ ನೀರನ್ನು ಲೋಟದಲ್ಲಿ ಬಗ್ಗಿಸಿ
ಕುಡಿಯತೊಡಗುತ್ತಾನೆ. ಆಗ ಇದ್ದಕ್ಕಿದ್ದಂತೇ ಅವನಿಗೊಂದು ಐಡಿಯಾ ಹೊಳೆಯುತ್ತದೆ. ಕೂಡಲೇ ಅವನು ಕೂಡಲೇ
ಮಾರುಕಟ್ಟೆಗೆ ಹೋಗಿ ಮಡಿಕೆಯೊಂದನ್ನು ಖರೀದಿಸಿ ಮನೆಗೆ ತರುತ್ತಾನೆ. ಮಾರನೇ ದಿನ ರಾಜನಿಗೆ ಆಸ್ಥಾನದಲ್ಲಿ
ಮಡಿಕೆಯೊಂದನ್ನು ಮುಖಕ್ಕೆ ಮುಚ್ಚಿಕೊಂಡ ಒಬ್ಬ ವ್ಯಕ್ತಿ ಕಾಣಿಸುತ್ತಾನೆ. ಆ ಮಡಿಕೆಗೆ ಎರಡು ತೂತುಗಳಿದ್ದು
ಅದರ ಮೂಲಕ ವ್ಯಕ್ತಿಯು ಹೊರಗೆ ನೋಡುವಂತಿರುತ್ತದೆ. ರಾಜನಿಗೆ ವ್ಯಕ್ತಿಯ ಗುರುತು ಗೊತ್ತಾಗುವುದಿಲ್ಲ. ಅವನು ಮಂತ್ರಿಗೆ ಆ ವ್ಯಕ್ತಿ ಯಾರು ಮತ್ತು ಅವನು ಏಕೆ ಮುಖಕ್ಕೆ
ಮಡಿಕೆ ಮುಚ್ಚಿಕೊಂಡಿದ್ದಾನೆಂದು ಪ್ರಶ್ನಿಸುತ್ತಾನೆ. ಮಂತ್ರಿಯು
ಅದು ಬೇರಾರೂ ಅಲ್ಲ, ಅವನು ವಿದೂಷಕ ಶಾಮನೇ ಎಂದು ಹೇಳಿ,
ಅವನು ರಾಜನ ಆಜ್ಞೆಯಂತೆ ಆಸ್ಥಾನದಲ್ಲಿ ಮುಖ ತೋರದಂತೆ ಮಾಡಿಕೊಂಡಿದ್ದಾನೆಂದು ತಿಳಿಸುತ್ತಾನೆ. ರಾಜನಿಗೆ ನಕಲಿ ಶಾಮನ ಬುದ್ಧಿವಂತಿಕೆ ಮತ್ತು ತಮಾಷೆ ತುಂಬಾ
ನಗೆತರುತ್ತದೆ. ಅವನು ಶಾಮನಿಗೆ ಕ್ಷಮಾಪಣೆ ಕೊಟ್ಟು ಮಡಿಕೆಯನ್ನು ಮುಖದಿಂದ ತೆಗೆಯುವಂತೆ ಹೇಳುತ್ತಾನೆ.
ನನಗೆ ನೆನಪಿರುವಂತೆ
ನಮ್ಮ ಎರಡನೇ ತರಗತಿಯಲ್ಲೂ ಒಂದೇ ಪಠ್ಯಪುಸ್ತಕವಿತ್ತು. ಆದರೆ ನಾವು ಕಾಪಿ ಪುಸ್ತವೊಂದರಲ್ಲಿ ಕಾಪಿ
ಬರೆಯಬೇಕಾಗಿತ್ತು. ನನಗೆ ತಿಳಿದಂತೆ ಕಾಪಿ ಎಂಬ ಇಂಗ್ಲಿಷ್
ಪದಕ್ಕೆ ಸಮನಾದ ಕನ್ನಡ ಪದ ದೊರೆಯದಿದ್ದರಿಂದ, ಕಾಪಿಪುಸ್ತಕ ಎಂಬ ಹೆಸರೇ ಅದಕ್ಕಿತ್ತು. ನಮ್ಮ ಪಠ್ಯಪುಸ್ತಕ ನಮಗೆ ಓದನ್ನು ಮತ್ತು ತಿಳುವಳಿಕೆಯನ್ನು
ಬೆಳೆಸಿದರೆ, ಕಾಪಿಪುಸ್ತಕ ನಮ್ಮ ಕೈಬರವಣಿಗೆಯನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿತ್ತು. ಪುಸ್ತಕದಲ್ಲಿ ರಾಮಾಯಣದ ಕಥೆಯನ್ನು ತುಂಬಾ ಒತ್ತಕ್ಷರಗಳ ಮೂಲಕ
ರಚಿಸಲಾಗಿತ್ತು. ನನಗೆ ನೆನಪಿಗೆ ಬರುವ ಕೆಲವು ಸಾಲುಗಳು ಕೆಳಕಂಡಂತಿವೆ:
ಶುದ್ಧ ಬ್ರಹ್ಮ
ಪರಾತ್ಪರ ರಾಮ
ಕಾಲಾತ್ಮಕ
ಪರಮೇಶ್ವರ ರಾಮ
ಲೀಲಾ ಕಲ್ಪಿತ
ಜಗದಭಿ ರಾಮ
ಕೌಶಿಕ ಮುನಿ
ಸಂರಕ್ಷಿತ ರಾಮ
ಬ್ರಹ್ಮಾದ್ಯಮರ
ಪ್ರಾರ್ಥಿತ ರಾಮ
ಚಂಡ ಕಿರಣ
ಕುಲ ಮಂಡನ ರಾಮ
ಕೃತ ವೈವಾಹಿಕ
ಕೌತುಕ ರಾಮ
ಭಾರ್ಗವ
ದರ್ಪ ವಿನಾಶನ ರಾಮ
ಶ್ರೀಮದಹಲ್ಯೋದ್ದಾರಕ
ರಾಮ
ಗೌತಮ ಮುನಿ
ಸಂಪೂಜಿತ ರಾಮ
ಸುರಗುಣ
ವರಮುನಿ ಪ್ರಾರ್ಥಿತ ರಾಮ
ಅವನೀಕಾಮಿನಿ
ಕಾಮಿತ ರಾಮ
ರಾಖಾಚಂದ್ರ
ಸಮಾಗಮ ರಾಮ
ಪಿತೃವಾಕ್ಯ
ಪರಿಪಾಲಕ ರಾಮ
ಕಾಪಿಪುಸ್ತಕ
ಬರವಣಿಗೆ ನಮ್ಮ ಚಿಕ್ಕ ವಯಸ್ಸಿಗೆ ಸ್ವಲ್ಪ ಕಷ್ಟಸಾಧ್ಯವಾಗಿತ್ತು. ಆದರೆ
ಪುಸ್ತಕದಲ್ಲಿದ್ದುದನ್ನು ಸಂಪೂರ್ಣವಾಗಿ ಬರೆದು ಮುಗಿಸಿದ ಮೇಲೆ ನಮ್ಮ ಮಾತೃಭಾಷೆಯ ಬರವಣಿಗೆಯಲ್ಲಿ
ನಾವು ತುಂಬಾ ಉತ್ತಮ ಮಟ್ಟವನ್ನು ತಲುಪಿದ್ದರಲ್ಲಿ ಅನುಮಾನವೇ ಇರಲಿಲ್ಲ.
----------------ಮುಂದುವರಿಯುವುದು-----------------------
No comments:
Post a Comment