ನಮ್ಮ ಎರಡನೇ ವರ್ಷದ ಬಿ.ಎಸ್ಸಿ. ಪರೀಕ್ಷೆಯಲ್ಲಿ
ನನ್ನ ಗುರಿ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ೨೦೦ಕ್ಕೆ ೨೦೦ ಅಂಕಗಳನ್ನು ಪಡೆಯುವುದಕ್ಕೆ ಸೀಮಿತವಾಗಿತ್ತು.
ಏಕೆಂದರೆ ನಾನು ಅಂತಿಮ ವರ್ಷದ ಪರೀಕ್ಷೆಯಲ್ಲಿ Rank ತೆಗೆದುಕೊಳ್ಳುವುದಕ್ಕೆ ಅದು ಅವಶ್ಯವಾಗಿತ್ತು.
ಹಾಗೆಯೇ ಅಂತಿಮ ಪರೀಕ್ಷೆಯ ಫಲಿತಾಂಶ ನನ್ನ ಭವಿಷ್ಯವನ್ನು ನಿರ್ಧರಿಸಲಿತ್ತು. ಈ ದೃಷ್ಟಿಯಿಂದ
ನಾನು ಲಾಂಗ್ವೇಜ್ ಸಬ್ಜೆಕ್ಟುಗಳಿಗೆ ಹೆಚ್ಚು ಗಮನ ಕೊಟ್ಟಿರಲಿಲ್ಲ. ಪಿ.ಯು.ಸಿ. ಪರೀಕ್ಷೆಯಲ್ಲಿ ನಾನು
ಲಾಂಗ್ವೇಜ್ ಸಬ್ಜೆಕ್ಟುಗಳಿಗೆ ಕೂಡ ಹೆಚ್ಚು ಗಮನ ಕೊಟ್ಟಿದ್ದೆ. ಏಕೆಂದರೆ Rank ತೆಗೆಯಲು ಅಲ್ಲಿ ಅದು
ಅವಶ್ಯವಾಗಿತ್ತು. ಆದರೆ ಈಗ ಅದರ ಅವಶ್ಯಕತೆ ಇರಲಿಲ್ಲ. ನಾನು ನಿರೀಕ್ಷಿಸಿದಂತೆ ಅವುಗಳಲ್ಲಿ ನನಗೆ
ಹೆಚ್ಚು ಅಂಕಗಳು ಬರಲೂ ಇಲ್ಲ.
ಆದರೆ ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ
ನಾನು ಎಲ್ಲಾ
ಸಮಸ್ಯೆಗಳನ್ನು ಸರಿಯಾಗಿ ಬಿಡಿಸಿದ್ದರೂ ನಿರೀಕ್ಷಿಸಿದಂತೆ ೨೦೦ಕ್ಕೆ ೨೦೦ ಅಂಕಗಳು ನನಗೆ ದೊರೆಯಲಿಲ್ಲ.
ಬದಲಿಗೆ ೨೦೦ಕ್ಕೆ ೧೮೮ ಅಂಕಗಳು ಮಾತ್ರ ನನಗೆ ದೊರೆತವು. ಆಗಿನ ಕಾಲದಲ್ಲಿ ಯಾವುದೇ ಉತ್ತರ ಪತ್ರಿಕೆಯ
ಪುನರ್ಮೌಲ್ಯ ಅಥವಾ ರಿ-ಟೋಟಲಿಂಗ್ ಮಾಡಿಸಲು ಸಾಧ್ಯವಿರಲಿಲ್ಲ. ಒಟ್ಟಿನಲ್ಲಿ
ಪರೀಕ್ಷಾ ಫಲಿತಾಂಶ ನನಗೆ ತುಂಬಾ ನಿರಾಶೆಯನ್ನುಂಟು ಮಾಡಿತು.
ನನ್ನ ಉಪನ್ಯಾಸಕರು ಮತ್ತು
ಶ್ರೀಕಂಠಯ್ಯನವರು ನಾನು ಮ್ಯಾಥಮ್ಯಾಟಿಕ್ಸ್ ಸಬ್ಜೆಕ್ಟಿನಲ್ಲಿ ತೆಗೆದಿದ್ದ ಅಂಕಗಳು ಅಂತಿಮ ಪರೀಕ್ಷೆಯಲ್ಲಿ
Rank ತೆಗೆದುಕೊಳ್ಳಲು ಸಾಕಾಗುವವೆಂದು ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ ನಾನು ನನ್ನ ಮನೋಸ್ಥೈರ್ಯವನ್ನು ಕಾಪಾಡಿಕೊಳ್ಳುವುದು ನನ್ನ ಮುಂದಿನ ಗುರಿಯನ್ನು ಸಾಧಿಸಲು
ಅತ್ಯಾವಶ್ಯವಾಗಿತ್ತು. ನಾನು ನನ್ನ ಚಿಂತೆಗಳನ್ನೆಲ್ಲಾ ಬದಿಗಿಟ್ಟು ಅಂತಿಮ ಪರೀಕ್ಷೆಯ
ಬಗ್ಗೆ ತೀವ್ರ ಗಮನ ಕೊಡುವುದಾಗಿ ತೀರ್ಮಾನಿಸಿದೆ.
ಶೃಂಗೇರಿ
ಮತ್ತು ಬೆಂಗಳೂರು ನಡುವೆ ಕೆ ಎಸ್ ಆರ್ ಟಿ ಸಿ ಬಸ್ಸುಗಳ ನೇರ ಸಂಪರ್ಕ
ಆ ವರ್ಷದ ಒಂದು ಮುಖ್ಯ ಬೆಳವಣಿಗೆ ಎಂದರೆ
ಶೃಂಗೇರಿ ಮತ್ತು ಬೆಂಗಳೂರು ನಡುವೆ ಕೆ ಎಸ್ ಆರ್ ಟಿ ಸಿ ಬಸ್ಸುಗಳ ನೇರ ಸಂಪರ್ಕ ಉದ್ಘಾಟನೆ ಆಗಿದ್ದು.
ಈ ಬಸ್ಸುಗಳು ಎರಡು ಕಡೆಯಿಂದಲೂ ಬೆಳಿಗ್ಗೆ ಹೊರಟು
ರಾತ್ರಿ ೮ ಗಂಟೆಗೆ ಗಮ್ಯಸ್ಥಾನವನ್ನು ತಲುಪುತ್ತಿದ್ದವು.
ಶೃಂಗೇರಿಯಿಂದ ಕೊಪ್ಪ ಮತ್ತು ಜಯಪುರ ಹಾಗೆಯೇ ಬೆಂಗಳೂರಿನಿಂದ ಜಯಪುರ ಕೊಪ್ಪ ಮಾರ್ಗವಾಗಿ ಈ ಬಸ್ಸುಗಳು
ಓಡಾಡುತ್ತಿದ್ದವು. ಅಲ್ಲಿಯವರೆಗೆ ಬೆಂಗಳೂರಿಗೆ ಹೋಗಲು ಶೃಂಗೇರಿಯಿಂದ ಖಾಸಗಿ ಬಸ್ಸುಗಳಲ್ಲಿ ಚಿಕ್ಕಮಗಳೂರು
ಅಥವಾ ಶಿವಮೊಗ್ಗೆಗೆ ಹೋಗಿ ಅಲ್ಲಿಂದ ಸರ್ಕಾರೀ ಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗಿತ್ತು. ಈ ಬೆಳವಣಿಗೆ
ಶೃಂಗೇರಿಯ ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯ ತೆರೆದಿತ್ತು.
ನಮ್ಮೂರಿನಲ್ಲಿ
ಮಲೆನಾಡಿನ ಇತಿಹಾಸ ಸಂಶೋಧನೆ
ನಮ್ಮ ಕಾಲೇಜಿನಲ್ಲಿ ಬಿ. ಏ. ಪದವಿ
ತರಗತಿಗೆ ಇಂಡಾಲಜಿ ಕೂಡ ಒಂದು ಐಚ್ಛಿಕ ಸಬ್ಜೆಕ್ಟ್ ಆಗಿತ್ತು. ಈ ಡಿಪಾರ್ಟ್ಮೆಂಟಿಗೆ ಸುಂದರ್ ಅವರು
ಮುಖ್ಯಸ್ಥರಾಗಿದ್ದರು. ಸುಂದರ್ ಅವರ ವ್ಯಕ್ತಿತ್ವದ ಬಗ್ಗೆ ನಾನೀಗಾಗಲೇ ಬರೆದಿದ್ದೇನೆ. ಈ ಡಿಪಾರ್ಟ್ಮೆಂಟಿನ
ಯೋಜನೆಗಳಲ್ಲಿ ಮಲೆನಾಡಿನ ಇತಿಹಾಸ ಸಂಶೋಧನೆ ಕೂಡ ಒಂದಾಗಿತ್ತು. ಅದಕ್ಕಾಗಿ
ಆರಿಸಿದ ನಿವೇಶನಗಳಲ್ಲಿ ನಮ್ಮೂರಿನ ಗಣಪತಿ ಕಟ್ಟೆಯ
ಮುಂದಿದ್ದ ಜಾಗವೂ ಒಂದಾಗಿತ್ತಂತೆ. ಸುಂದರ್ ಅವರ ನೇತೃತ್ವದಲ್ಲಿದ್ದ ತಂಡ
ಒಂದು ದಿನ ಬೆಳಿಗ್ಗೆ ನಮ್ಮೂರಿನ ಗಣಪತಿ ಕಟ್ಟೆಯ ಬಳಿ
ತಲುಪಿತಂತೆ. ನಮ್ಮೂರಿನಲ್ಲಾಗಲೀ ಅಥವಾ ಸುತ್ತಮುತ್ತ ಎಲ್ಲಾಗಲೀ ಯಾವುದೇ ಹೋಟೆಲ್ ಇಲ್ಲದ್ದರಿಂದ ತಂಡವು
ಹತ್ತಿರದಲ್ಲೇ ಇದ್ದ ಪುರದಮನೆ ಶ್ರೀನಿವಾಸಯ್ಯನವರ ಮನೆಗೆ ಹೋಯಿತಂತೆ. ಅತಿಥಿ
ಸತ್ಕಾರಕ್ಕೆ ಹೆಸರಾಗಿದ್ದ ಶ್ರೀನಿವಾಸಯ್ಯನವರು ತುಂಬಾ ಆದರದಿಂದ ತಂಡವನ್ನು ಬರಮಾಡಿಕೊಂಡರಂತೆ. ಹಾಗೂ
ಎಲ್ಲರಿಗೂ ಶುಚಿ ರುಚಿಯಾದ ಊಟ ಮತ್ತು ತಿಂಡಿ ಏರ್ಪಾಟು ಮಾಡಿದರಂತೆ. ಆದರೆ ಆ ತಂಡದವರು ತಾವು ಶೃಂಗೇರಿ
ಕಾಲೇಜಿನಿಂದ ಬಂದುದಾಗಿ ಹೇಳಿದಾಗ ಶ್ರೀನಿವಾಸಯ್ಯನವರು ಆವರೊಡನೆ ನಾನೇಕೆ ಬಂದಿಲ್ಲವೆಂದು ಆಶ್ಚರ್ಯ
ವ್ಯಕ್ತಪಡಿಸಿದರಂತೆ. ಆ ಮೇಲೆಯೇ ತಂಡದವರಿಗೆ ನಾನು ಅದೇ ಊರಿನವನು ಎಂದು ಗೊತ್ತಾಯಿತಂತೆ!
ತಂಡವು ಮಾಡಿದ ಸಂಶೋಧನೆಯಿಂದ ನಮ್ಮೂರಿಗೆ
ಪುರಾತನ ಇತಿಹಾಸ ಇರುವುದು ಗೊತ್ತಾಯಿತಂತೆ. ಈ ಸಮಾಚಾರವು ಕನ್ನಡ ದಿನಪತ್ರಿಕೆಗಳಲ್ಲಿ
ಮುಖಪುಟದಲ್ಲೇ ಪ್ರಕಟವಾಯಿತು. ಅದರ ಪ್ರಕಾರ ನಮ್ಮೂರಿಗೆ ಪುರಾತನ ಸಂಸ್ಕೃತಿ ಹಾಗೂ ಚರಿತ್ರೆ ಇತ್ತು.
ಆದರೆ ಪರಿಶೋಧನೆಯ ವಿವರಗಳು ನಮಗೆ ಲಭ್ಯವಾಗಲಿಲ್ಲ. ನನಗೆ ತಿಳಿದಂತೆ ಗಣಪತಿ ಕಟ್ಟೆಯ ಹತ್ತಿರದ ಮಕ್ಕಿ
ಗದ್ದೆಯ ಅಂಚಿನಲ್ಲಿದ್ದ ಒಂದು ಜೈನ ಶಾಸನ ಒಂದು ಕಾಲದಲ್ಲಿ ನಮ್ಮೂರಿನಲ್ಲಿ ಜೈನರು ವಾಸಿಸುತ್ತಿದ್ದರೆಂದು ಸೂಚಿಸುತ್ತಿತ್ತು. ಪ್ರಾಯಶಃ ಶಂಕರಾಚಾರ್ಯರು ಶೃಂಗೇರಿಯಲ್ಲಿ ಮಠ ಸ್ಥಾಪಿಸಿದಮೇಲೆ ಹೆಬ್ಬಾರರೆಂದು ಕರೆದುಕೊಳ್ಳುವ ಸ್ಮಾರ್ತ ಸಂಪ್ರದಾಯದ ನಮ್ಮ ಜನಾಂಗ ಮಲೆನಾಡಿಗೆ ವಲಸೆ ಬಂದು ಹಾಗೆಯೇ ನಮ್ಮೂರಿಗೂ ಪ್ರವೇಶಿಸಿ ಅಡಿಕೆ ಮತ್ತು ಬತ್ತದ ಬೇಸಾಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬೇಕು. ಆದರೆ ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧವಾಗಿ ವಾರ್ಷಿಕ ಜಾತ್ರೆ ಮತ್ತು ತೇರು ನಡೆಯುತ್ತಿದ್ದ ನಮ್ಮೂರ
ದೇವಸ್ಥಾನ ಯಾವುದೊ ಕಾರಣಕ್ಕೆ ತನ್ನ ಹಿರಿಮೆಯನ್ನು ಕಳೆದುಕೊಂಡಿರಬೇಕು. ಅದಕ್ಕೆ ಸಾಕ್ಷಿಯಾಗಿ ನಾವು ಚಿಕ್ಕಂದಿನಲ್ಲಿ ಕಂಡಂತೆ ದೇವಸ್ಥಾನದ ಪಕ್ಕದಲ್ಲಿದ್ದ ಬಾವಿ
ಪಾಳುಬಿದ್ದಿತ್ತು. ದೇವಸ್ಥಾನದ ಇನ್ನೊಂದು ಬದಿಯಲ್ಲಿ ತುಂಬಾ
ಹಳೆಯ ಹಾಗೂ ಸುಂದರವಾದ ಮರದ ತೇರೊಂದು ಮುರಿದು ಬಿದ್ದಿತ್ತು. ಅದರಲ್ಲಿದ್ದ ಎಷ್ಟೋ ಸುಂದರವಾದ ಪ್ರಾಣಿ ಪಕ್ಷಿಗಳ ಗೊಂಬೆಗಳು ಹಲವರ ಮನೆಯಲ್ಲಿ ಮಕ್ಕಳ ಆಟದ ಸಾಮಾನುಗಳಾಗಿ ಗೋಚರಿಸುತ್ತಿದ್ದವು. ವಿಚಿತ್ರವೆಂದರೆ ನಮ್ಮ ಕಾಲೇಜಿನ ತಂಡಕ್ಕೆ ಆತಿಥ್ಯ ನೀಡಿದ್ದ ಶ್ರೀನಿವಾಸಯ್ಯನವರು ವಾಸಿಸುತ್ತಿದ್ದ ಪುರಾತನವಾದ ಪುರದಮನೆ ಕೂಡ ಈಗ ನೆಲಸಮವಾಗಿದ್ದು ನಮ್ಮೂರಿನ ಇತಿಹಾಸಕ್ಕೆ ಸೇರ್ಪಡೆಯಾಗಿದೆ!
ವಿವೇಕಾನಂದ ಪಂಡಿತ್
ನಾನು ಈ ಹಿಂದೆಯೇ ಬರೆದಂತೆ ನನ್ನ ಸಂಜೆಯ ಸಮಯವನ್ನು ಹೆಚ್ಚಾಗಿ ಹೆಬ್ಬಿಗೆ ವಿಶ್ವನಾಥ, ಕೊಡಿಗೆತೋಟದ ಪದ್ಮನಾಭ ಮತ್ತು ಗೋಳ್ಗಾರ್ ಕೃಷ್ಣಮೂರ್ತಿ ಅವರ ರೂಮಿನಲ್ಲಿ ಕಳೆಯುತ್ತಿದ್ದೆ. ನಮ್ಮ ಹರಟೆಗಳು ನಮ್ಮ ಕಾಲೇಜಿನ ಮತ್ತು ಶೃಂಗೇರಿ ಪೇಟೆಗೆ ಸಂಬಂಧಪಟ್ಟಿರುತ್ತಿದ್ದವು. ಹಾಗೆಯೇ ನಾವೆಲ್ಲಾ ಒಟ್ಟಿಗೆ ಸಂಜೆ ಶಾರದಾಂಬ ದೇವಸ್ಥಾನಕ್ಕೆ ಹೋಗಿ ದೇವಿಯ ದರ್ಶನ ಮಾಡುತ್ತಿದ್ದೆವು. ನಮ್ಮ ಹರಟೆಯ ತಂಡಕ್ಕೆ ನಮ್ಮ ಕ್ಲಾಸ್ ಮೇಟ್ ಆದ ವಿವೇಕಾನಂದ ಪಂಡಿತ್ ಎಂಬ ಹುಡುಗನೂ ಸೇರಿದ್ದ. ಅವನ ಕುಟುಂಬದವರು ಪೇಟೆಯಲ್ಲಿ ಒಂದು ಜವಳಿ ಅಂಗಡಿ ನಡೆಸುತ್ತಿದ್ದರು. ವಿವೇಕಾನಂದ ಆ ಕುಟುಂಬದಿಂದ ಕಾಲೇಜಿಗೆ ಓದಲು ಹೋದ ಮೊದಲ ಹುಡುಗನಾಗಿದ್ದ. ಅವನು ಎನ್ ಸಿ ಸಿ ಕ್ಯಾಡೆಟ್ ಆಗಿ ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದ
ಮತ್ತು ಒಳ್ಳೆಯ ಹೆಸರು ಗಳಿಸಿದ್ದ. ತುಂಬಾ ತಮಾಷೆ ಸ್ವಭಾವದ ವಿವೇಕಾನಂದ ಬೇರೆ ಬೇರೆ ವ್ಯಕ್ತಿಗಳ ಅನುಕರಣೆ (ಮಿಮಿಕ್ರಿ) ಅಷ್ಟೇ ಚೆನ್ನಾಗಿ ಮಾಡುತ್ತಿದ್ದ. ನಾನು ಕಾಲೇಜ್ ಬಿಟ್ಟ ಎಷ್ಟೋ ವರ್ಷಗಳ ನಂತರ ನನಗೆ ಅವನು ಯಾವುದೊ ಕಾರಣದಿಂದ ಆತ್ಮಹತ್ಯೆಯನ್ನು ಮಾಡಿಕೊಂಡನೆಂದು ತಿಳಿದು ಹೇಳಲಾರದ ವ್ಯಥೆಯಾಯಿತು. ದೇವರು ಅವನ ಆತ್ಮಕ್ಕೆ ಶಾಂತಿಯನ್ನೀಯಲಿ.
ರಘುಪತಿಯ ಮಹತ್ವಾಕಾ೦ಕ್ಶ!
ಮೇಲೆ ಹೇಳಿದ ನಮ್ಮ ಗುಂಪಿಗೆ ತೀರಾ ಹತ್ತಿರದವನಾಗಿದ್ದ ಇನ್ನೊಬ್ಬ ವ್ಯಕ್ತಿ ಎಂದರೆ ಅಗಳಗಂಡಿಯ ರಘುಪತಿ. ಅವನು ನಮ್ಮ ಪುರದಮನೆ ಶ್ರೀನಿವಾಸಯ್ಯನವರ ಚಿಕ್ಕಪ್ಪನಾಗಿದ್ದ ಪುಟ್ಟಶಾಮಯ್ಯ ಎಂಬುವರ ಮೂರು ಗಂಡು ಮಕ್ಕಳಲ್ಲಿ ಒಬ್ಬನಾಗಿದ್ದ. ಸರ್ಕಾರೀ ಪ್ರಾಥಮಿಕ ಶಾಲೆಯಲ್ಲಿ ಮೇಷ್ಟ್ರಾಗಿದ್ದ ರಘುಪತಿಗೆ ಚಂದ್ರಮೌಳಿರಾಯರ ಊರಾದ ಹುಲಗಾರಿಗೆ ವರ್ಗವಾಗಿತ್ತು. ತುಂಬಾ ತಮಾಷೆಯ ಮಾತುಗಾರನಾಗಿದ್ದ ರಘುಪತಿ ನಮ್ಮ ಸಂಜೆ ಗುಂಪಿನ ಸಕ್ರಿಯ ಸದಸ್ಯನಾಗಿ ತುಂಬಾ ನಗೆ ಬರಿಸುತ್ತಿದ್ದ. ಶೃಂಗೇರಿಯ ಅಂದಿನ ಸಮಾಚಾರಗಳ ಬಗ್ಗೆ ರಘುಪತಿಯ ಟೀಕೆ ಟಿಪ್ಪಣಿಗಳು ನಮಗೆ ತುಂಬಾ ಸ್ವಾರಸ್ಯವಾಗಿ ಕಾಣುತ್ತಿದ್ದವು.
ರಘುಪತಿ ಮದುವೆಯ ವಯಸ್ಸಿಗೆ ಬಂದಿದ್ದರೂ ಇನ್ನೂ ಮದುವೆಯಾಗಿರಲಿಲ್ಲ. ಅವನಿಗೆ ಸರ್ಕಾರೀ ಸಂಬಳವಲ್ಲದೇ ಪಿತ್ರಾರ್ಜಿತ ಜಮೀನಿನಲ್ಲಿ ಪಾಲು ಕೂಡ ಸಿಗಲಿತ್ತು. ಇನ್ನೂ ಬ್ರಹ್ಮಚಾರಿಯೇ ಆಗಿದ್ದ ರಘುಪತಿಗೆ ಅವನು ನಮಗೆ ಹೇಳಿದ ಪ್ರಕಾರ ಜೀವನದಲ್ಲಿ ಒಂದು ಮಹತ್ವಾಕಾ೦ಕ್ಶೆಇತ್ತು! ಅದೇನೆಂದರೆ ಅವನು ಮುಂದೆ ತನ್ನ ಮದುವೆಯ ನಂತರದ ಮೊದಲ ರಾತ್ರಿಗೆ ಒಂದು ವಿಶೇಷವಾದ ಪ್ಲಾನ್ ತಯಾರಿಸಿಬಿಟ್ಟಿದ್ದ. ನೀವು ಪ್ರಾಯಶಃ ನಂಬಲಾರಿರಿ. ಆ ಪ್ಲಾನ್ ಪ್ರಕಾರ ರಘುಪತಿ ನವ ದಂಪತಿಗಳ ಕೊಠಡಿಗೆ ಪ್ರವೇಶಿಸಿದೊಡನೇ ಗಂಡು-ಹೆಣ್ಣಿನ ಸಂಬಂಧದ ಬಗ್ಗೆ ಏನೂ ಅರಿಯದ ಮಂಕುತಿಮ್ಮನಂತೆ ಹಾಸಿಗೆಯ ಒಂದು ಮೂಲೆಯಲ್ಲಿ ಮುಸುಕೆಳೆದು ಮಲಗಿಬಿಡಬೇಕೆಂದಿದ್ದ! ಆ ಸನ್ನಿವೇಶದಲ್ಲಿ ಅವನ ಪ್ರಿಯ ಪತ್ನಿಯ ಪರಿಸ್ಥಿತಿ ಹೇಗಿರಬಹುದೆಂದು ಯೋಚಿಸಿ ಅವನು ಮನದಲ್ಲೇ ಆನಂದಿಸುತ್ತಿದ್ದ!
ಇಂತಹ ವಿಲಕ್ಷಣ ಪ್ಲಾನ್ ನಾನೆಂದೂ ಯಾರ ಬಾಯಿಂದಲೂ
ಕೇಳಿರಲಿಲ್ಲ.
ನನ್ನ ಕಾಲೇಜು ಓದು ಮುಗಿದ ನಂತರ ನಾನೆಂದೂ ರಘುಪತಿಯನ್ನು ಭೇಟಿಯಾಗಲಿಲ್ಲ. ಅವನ ಮದುವೆಯ ಮೊದಲ ರಾತ್ರಿ ಹೇಗೆ ಕಳೆದಿರಬಹುದೆಂದು ಅವನಿಂದಲೇ ತಿಳಿಯಬೇಕೆಂಬ ಕುತೂಹಲ ನನಗೆ ತುಂಬಾ ಇತ್ತು. ವಿಚಿತ್ರವೆಂದರೆ ನನಗೆ ಅವನ ಬಂಧು ಒಬ್ಬನಿಂದ ತಿಳಿದುಬಂದ ಪ್ರಕಾರ ಅವನ ಪತ್ನಿ ಸೂಲಗಿತ್ತಿಯಾಗಿ (midwife) ಸರಕಾರಿ ನೌಕರಿಯಲ್ಲಿದ್ದಳಂತೆ! ಆದ್ದರಿಂದ ಅವಳು ಮೂಲೆಯಲ್ಲಿ ಮುಸುಕೆಳೆದು ಮಲಗಿದ್ದ ತನ್ನ ಗಂಡನಿಗೆ ಗಂಡು-ಹೆಣ್ಣಿನ ಸಂಬಂಧ ಏನೆಂದು ಸೂಕ್ತ ರೀತಿಯಲ್ಲಿಯೇ ಪಾಠ ಹೇಳಿರುವುದರಲ್ಲಿ ಯಾವುದೇ ಸಂಶಯವಿಲ್ಲ! ಪಾಪ! ನಮ್ಮ ಪ್ರಿಯ ಗೆಳೆಯ ರಘುಪತಿಯ ಮಹತ್ವಾಕಾ೦ಕ್ಶೆಕೊನೆಗೂ ಈಡೇರಲಿಲ್ಲ
ಅನಿಸುತ್ತದೆ!
----ಮುಂದುವರಿಯುವುದು ---
No comments:
Post a Comment