ಸುಭಾಷ್ ನಗರದ ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಹೊರಬರುತ್ತಿದ್ದಂತೆಯೇ ನಾವು ಆಟೋರಿಕ್ಷಾ ಚಾಲಕರಿಂದ ಸುತ್ತುವರಿಯಲ್ಪಟ್ಟೆವು. ನಾನಂತೂ ಆ ಮೂರುಚಕ್ರದ ಆಟೋರಿಕ್ಷಾಗಳನ್ನು ನನ್ನ ಜೀವಮಾನದಲ್ಲೇ ಮೊದಲ ಬಾರಿಗೆ ನೋಡುತ್ತಿದ್ದೆ. ಮೂರು ಚಕ್ರಗಳ ಮೇಲೆ ಅವುಗಳು ಓಡುವುದನ್ನು ನೋಡಿ ನನಗೆ ಪರಮಾಶ್ಚರ್ಯವಾಯಿತು. ಹಿಂದೆ ನಾನು ಶಿವಮೊಗ್ಗೆಯ ಬಸ್ ನಿಲ್ದಾಣದಲ್ಲಿ ಟಾಂಗಾಗಳನ್ನು ಮಾತ್ರ ನೋಡಿದ್ದೆ. ಹಾಗೆಯೇ ನಾವು ಶಾಲೆಯಲ್ಲಿ ಮೂರು ಕಾಲಿನ ಪಂದ್ಯದಲ್ಲಿ ಹಗ್ಗ ಕಟ್ಟಿಕೊಂಡು ಓಡುತ್ತಿದ್ದುದು ನೆನಪಾಯಿತು. ನಾನು ಹೆಚ್ಚು ಹೊತ್ತು ಅವುಗಳ ಓಟದ ಬಗ್ಗೆ ಚಿಂತಿಸಬೇಕಾಗಲಿಲ್ಲ. ಏಕೆಂದರೆ ಪುಟ್ಟಣ್ಣ ಅವುಗಳೊಂದರಲ್ಲಿ ನನ್ನನ್ನು ಹತ್ತುವಂತೆ ಹೇಳಿದ ಮತ್ತು ಚಾಲಕನಿಗೆ ನಮ್ಮನ್ನು ಶೇಷಾದ್ರಿಪುರಂಗೆ
ಕರೆದುಕೊಂಡು ಹೋಗುವಂತೆ ಹೇಳಿದ.
ನಾವು ಅತಿ ಶೀಘ್ರದಲ್ಲೇ ಶೇಷಾದ್ರಿಪುರಂನಲ್ಲಿದ್ದ ಬಿ.ಬಿ.ಎಸ್.ಹೋಂ ಎಂಬ ಹಾಸ್ಟೆಲಿಗೆ ತಲುಪಿದೆವು. ಪುಟ್ಟಣ್ಣ ಆ ಹಾಸ್ಟೆಲಿನಲ್ಲೇ ಇದ್ದು ಕಾಲೇಜಿಗೆ ಹೋಗುತ್ತಿದ್ದ. ಅದು ಬಡ ವಿದ್ಯಾರ್ಥಿಗಳಿಗೆ ಕೇವಲ ತಂಗಲು ವ್ಯವಸ್ಥೆಯಿದ್ದ ಹಾಸ್ಟೆಲ್ ಆಗಿತ್ತು. ಅವರು ಸ್ವಂತ ಊಟದ ವ್ಯವಸ್ಥೆ ಮಾಡಿಕೊಳ್ಳಬೇಕಾಗಿತ್ತು. ಹೆಚ್ಚಿನ ವಿದ್ಯಾರ್ಥಿಗಳು
ವಾರಾನ್ನ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಆ ರಾತ್ರಿ ನಾವು ಅಲ್ಲಿಯೇ ಉಳಿದುಕೊಂಡೆವು.
ಬೆಂಗಳೂರಿನ ಮೊಟ್ಟ ಮೊದಲ
ಕಾಮತ್ ಹೋಟೆಲ್
ಬೆಂಗಳೂರಿನ ಮೊಟ್ಟ ಮೊದಲ ಕಾಮತ್ ಹೋಟೆಲನ್ನು ಆಗತಾನೇ ಶೇಷಾದ್ರಿಪುರಂನಲ್ಲಿ ತೆರೆಯಲಾಗಿತ್ತು. ಮುಂದೆ ಸಂಗಮ್ ಥಿಯೇಟರಿನ ಪಕ್ಕದಲ್ಲಿ ಇನ್ನೊಂದನ್ನು ತೆರೆಯಲಾಯಿತು. ಕಾಮತ್ ಬ್ರಾಂಡ್ ಹೋಟೆಲುಗಳ ಮಾಲೀಕತ್ವ ಹುಬ್ಬಳ್ಳಿಯ ಬೇಂಗ್ರೆ ಕುಟುಂಬದ್ದಾಗಿತ್ತು. ಆ ಕಾಲದಲ್ಲಿ ಕಾಮತ್ ಹೋಟೆಲ್ಲುಗಳು ಶುಚಿ,ರುಚಿ ರುಚಿಯಾದ ತಿಂಡಿ ಮತ್ತು ಶೀಘ್ರ ಸೇವೆಗೆ ಪ್ರಸಿದ್ಧಿಯಾಗಿದ್ದವು. ಜನಗಳಿಗೆ ಈ ಹೊಟೇಲುಗಳಲ್ಲಿ ತಿಂಡಿ ತಿನ್ನುವುದೇ ಒಂದು ದೊಡ್ಡ ಸೌಲಭ್ಯವೆಂದು ಅನಿಸುತ್ತಿತ್ತು. ಬೇಂಗ್ರೆ ಕುಟುಂಬದ ಹಿರಿಯರೊಬ್ಬರು ಖುದ್ದಾಗಿ ಹೋಟೆಲಿನ ತಿಂಡಿ ಮತ್ತು ಸರ್ವಿಸ್ ವ್ಯವಸ್ಥೆಯನ್ನು ವಿಚಾರಿಸಿಕೊಳ್ಳುತ್ತಿದ್ದರು. ಪುಟ್ಟಣ್ಣ ನನ್ನನ್ನು ಮೊದಲ ಬಾರಿ ಆ ಹೋಟೆಲಿಗೆ ಕರೆದುಕೊಂಡು ಹೋದಾಗ ಅಲ್ಲಿನ ವ್ಯವಸ್ಥೆ ನೋಡಿ ಮತ್ತು ರುಚಿಯಾದ ತಿಂಡಿಗಳನ್ನು ಸವಿದು ನನಗಾದ ಸಂತೋಷ ಅಷ್ಟಿಟ್ಟಲ್ಲ. ಆ ಹೋಟೆಲಿನ ಮುಂದೆ ನಮ್ಮ ಶೃಂಗೇರಿಯ ಮಲ್ಲಿಕಾ ಮಂದಿರ ಸ್ವಲ್ಪ ಕಳಪೆಯಾಗಿ ಕಂಡಿದ್ದರಲ್ಲಿ ಆಶ್ಚರ್ಯವೇನಿರಲಿಲ್ಲ.
ಪುಟ್ಟಣ್ಣನ ಸ್ನೇಹಿತರ ಬಳಗ ತುಂಬಾ ದೊಡ್ಡದ್ದೇ ಆಗಿತ್ತು. ಅವನ ಅನೇಕ ಸ್ನೇಹಿತರು ಹಾಸ್ಟೆಲಿಗೆ ಬಂದು ನಮ್ಮನ್ನು ಭೇಟಿ ಮಾಡಿದರು. ಟಾಟಾ ಇನ್ಸ್ಟಿಟ್ಯೂಟ್ ನಾವಿದ್ದ ಶೇಷಾದ್ರಿಪುರಂ ಬಡಾವಣೆಯ ನಂತರದ ಬಡಾವಣೆಯಾದ ಮಲ್ಲೇಶ್ವರಂ ಬಡಾವಣೆಯಲ್ಲೇ ಇರುವುದೆಂದು ಪುಟ್ಟಣ್ಣ ನನಗೆ ಹೇಳಿದ್ದ. ಮುಂದಿನ ಎರಡು ದಿನಗಳ ನಂತರ ನಾನು ಅಲ್ಲಿ ಟೆಸ್ಟ್ ಮತ್ತು ಸಂದರ್ಶನಗಳಲ್ಲಿ ಭಾಗವಹಿಸಬೇಕಿತ್ತು. ಅದಕ್ಕೆ ಮುಂಚೆ ಒಮ್ಮೆ ಅಲ್ಲಿಗೆ ಹೋಗಿ ಅಲ್ಲಿನ ವ್ಯವಸ್ಥೆಗಳನ್ನು ನೋಡಿ ಬರುವುದು ನನಗೆ ಅವಶ್ಯವಾಗಿತ್ತು.
ಟಾಟಾ ಇನ್ಸ್ಟಿಟ್ಯೂಟ್
ಕ್ಯಾಂಪಸ್ಸಿಗೆ ಭೇಟಿ
ನಾವು ಆ ದಿನ ಬೆಳಿಗ್ಗೆ ಇನ್ಸ್ಟಿಟ್ಯೂಟಿನ ಕ್ಯಾಂಪಸ್ಸಿಗೆ ಭೇಟಿ ನೀಡಿದೆವು. ನನಗೆ ಕ್ಯಾಂಪಸ್ ಒಳಗಿದ್ದ ಜೇಮ್ ಸೇಠಜಿ ಟಾಟಾ ಅವರ ಪ್ರತಿಮೆ ಮತ್ತು ಚಾರಿತ್ರಿಕ ಇನ್ಸ್ಟಿಟ್ಯೂಟಿನ ಕಟ್ಟಡಗಳನ್ನು ನೋಡಿ ತುಂಬಾ ಖುಷಿಯಾಯಿತು. ನಾವು ಸೀದಾ ಇನ್ಸ್ಟಿಟ್ಯೂಟಿನ ಫಿಸಿಕ್ಸ್ ಡಿಪಾರ್ಟ್ಮಂಟಿನಲ್ಲಿದ್ದ
ಡಾಕ್ಟರ್ ಟಿ.ಕೆ.ಭಟ್ ಅವರ ಮಗನನ್ನು ನೋಡಲು ಹೋದೆವು. ಈ ಫಿಸಿಕ್ಸ್ ಡಿಪಾರ್ಟ್ಮೆಂಟನ್ನು ವಿಖ್ಯಾತ ನೋಬೆಲ್ ಪ್ರಶಸ್ತಿ ವಿಜೇತ ಸರ್ ಸಿ.ವಿ.ರಾಮನ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಅದರಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ ಭಟ್ ಅವರು ನಮ್ಮನ್ನು ಆದರದಿಂದ ಕಂಡು ನನ್ನ ಬಗ್ಗೆ ಆಗಲೇ ಅವರ ಬಳಿ ಅವರ ತಂದೆಯವರು ಮಾತನಾಡಿದುದಾಗಿ ತಿಳಿಸಿದರು. ಅಂತಹ ಉನ್ನತ ಹುದ್ದೆಯಲ್ಲಿದ್ದರೂ ಅವರೊಬ್ಬ ತುಂಬಾ ಸರಳ ವ್ಯಕ್ತಿಯಾಗಿ ನಮಗೆ ಕಂಡರು. ಅವರು ಕೂಡಲೇ ಆಗ ಮೆಟಲರ್ಜಿ ಡಿಪಾರ್ಟ್ಮೆಂಟಿನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದ ಕೆ.ಐ.ವಾಸು ಎಂಬುವರಿಗೆ ಟೆಲಿಫೋನ್ ಮೂಲಕ ಕರೆ ಕಳುಹಿದರು. ಸ್ವಲ್ಪ ಹೊತ್ತಿನಲ್ಲೇ ವಾಸು ಅವರು ಅಲ್ಲಿಗೆ ಆಗಮಿಸಿದರು. ಭಟ್ ಅವರು ವಾಸು ಅವರಿಗೆ ನನ್ನನ್ನು ಪರಿಚಯ ಮಾಡಿಸಿ ಇನ್ನು ಮುಂದೆ ಅವರು ನನಗೆ ಮಾರ್ಗದರ್ಶಕರಾಗಿರಬೇಕೆಂದು (Mentor) ಹೇಳಿದರು.
ಅಸಿಸ್ಟಂಟ್ ಪ್ರೊಫೆಸರ್ ಕೆ.ಐ.ವಾಸು
ವಾಸು ಅವರೊಬ್ಬ ತೀರಾ ಸರಳ ಮತ್ತು ಸಹಾನುಭೂತಿ ಸ್ವಭಾವದ ಮಹನೀಯರಾಗಿದ್ದರು. ಅವರಿಗೆ ಅಂತಹ ಪ್ರತಿಷ್ಠಿತ ಇನ್ಸ್ಟಿಟ್ಯೂಟಿನಲ್ಲಿ ತಾವೊಬ್ಬ ಅಸಿಸ್ಟಂಟ್ ಪ್ರೊಫೆಸರ್ ಎಂಬುವ ಗರ್ವ ಕೊಂಚವೂ ಇರಲಿಲ್ಲ. ಮುಂದೆ ನನಗೆ ಇನ್ಸ್ಟಿಟ್ಯೂಟಿನ ಹೆಚ್ಚಿನ ಉಳಿದ ಅಧ್ಯಾಪಕರು ವಾಸು ಅವರಷ್ಟು ಸರಳ ಮತ್ತು ನಿಗರ್ವಿ ಸ್ವಭಾವದವರಾಗಿರಲಿಲ್ಲವೆಂದು ಗೊತ್ತಾಯಿತು. ಭಟ್ ಅವರು ನಮಗೆ ಮಾರನೇ ದಿನ ಬೆಳಿಗ್ಗೆ ಮಲ್ಲೇಶ್ವರಂ ನಲ್ಲಿದ್ದ ಅವರ ಮನೆಗೆ ಬೆಳಗಿನ ಉಪಹಾರಕ್ಕೆ ಬರುವಂತೆ ಆಹ್ವಾನಿಸಿದರು. ನಾವು ಅವರು ಹೇಳಿದಂತೆ ಬೆಳಿಗ್ಗೆ ಅವರ ಮನೆಗೆ ಹೋಗಿ ಅವರ ಕುಟುಂಬದವರೊಡನೆ ಉಪಹಾರ ಮಾಡಿದೆವು.
ಟೆಸ್ಟ್,
ಇಂಟರ್ವ್ಯೂ ಮತ್ತು
ನನ್ನ ಆಯ್ಕೆ
ನಾನು ಮಾರನೇ ದಿನ
ಇನ್ಸ್ಟಿಟ್ಯೂಟಿಗೆ ಹೋಗಿ ಟೆಸ್ಟ್ ನಲ್ಲಿ ಭಾಗವಹಿಸಿದೆ. ಅದರಲ್ಲಿ ಬೇರೆ ಬೇರೆ ರಾಜ್ಯಗಳ ಅನೇಕ ಮಂದಿ ಭಾಗವಹಿಸಿದ್ದರು. ಸಂಜೆಯ ವೇಳೆಗೆ ಟೆಸ್ಟಿನ ಫಲಿತಾಂಶವನ್ನು ಪ್ರಕಟಿಸಲಾಯಿತು. ನಾನು ಅದರಲ್ಲಿ ಉತ್ತೀರ್ಣನಾಗಿದ್ದೆ. ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾರನೇ ದಿನವೇ ಇಂಟರ್ವ್ಯೂ ನಡೆಯಿತು. ವಿಚಿತ್ರವೆಂದರೆ ನನ್ನ ಸಂದರ್ಶನವನ್ನು ತೆಗೆದುಕೊಂಡವರಲ್ಲಿ ಒಬ್ಬರು ನನ್ನ ಮಾರ್ಗದರ್ಶಿ ವಾಸು ಅವರೇ ಆಗಿದ್ದರು! ಇನ್ನೊಬ್ಬರು ಮೆಟಲರ್ಜಿ
ಡಿಪಾರ್ಟ್ಮೆಂಟಿನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದ ಅಬ್ರಹಾಂ ಅವರು. ಸಂದರ್ಶನ ನನಗೆ ತೃಪ್ತಿಕರವಾಗಿಯೇ ನಡೆಯಿತು. ಒಟ್ಟು ಆಯ್ಕೆಯಾದ ೩೦ ಮಂದಿ ಅಭ್ಯರ್ಥಿಗಳಲ್ಲಿ ನಾನೂ ಒಬ್ಬನಾಗಿದ್ದೆ. ಆಗಸ್ಟ್ ತಿಂಗಳ ಮೊದಲ ವಾರ ನಾನು ಇನ್ಸ್ಟಿಟ್ಯೂಟಿಗೆ ಸೇರಿಕೊಳ್ಳಬೇಕೆಂದು ತಿಳಿಸಲಾಯಿತು. ಒಟ್ಟಿನಲ್ಲಿ ನನ್ನ ಬೆಂಗಳೂರಿನ ಮೊದಲ ಪಯಣ ತುಂಬಾ ಸಂತೋಷದಾಯಕವಾಗಿ ಕೊನೆಗೊಂಡಿತ್ತು.
ನಾವು ಬೆಂಗಳೂರು ಬಿಡುವ ಮೊದಲು ಲಾಲ್ ಭಾಗಿನ ಮುಂದಿದ್ದ ಹಾರ್ಟಿಕಲ್ಚರ್ ಫಾರ್ಮ್ ಗೆ ಭೇಟಿ ನೀಡಿ ಪುರದಮನೆ ಶ್ರೀನಿವಾಸಯ್ಯನವರಿಗಾಗಿ ಹಲವು ಅಪರೂಪದ ಹೂವಿನ ಗಿಡಗಳನ್ನು ಕೊಂಡುಕೊಂಡೆವು. ನನಗೆ ಬೆಂಗಳೂರಿನಲ್ಲೇ
ಪಡೆಯಲೇ ಬೇಕಾದ ಇನ್ನೊಂದು ಮಾಹಿತಿ ಬಾಕಿ ಇತ್ತು. ಅದು ನನ್ನ ವಿದ್ಯಾಭ್ಯಾಸಕ್ಕಾಗಿ ಹಣಕಾಸಿನ ವ್ಯವಸ್ಥೆಯ ಅತಿ ಅವಶ್ಯ ಮಾಹಿತಿಯಾಗಿತ್ತು. ನನಗೆ ಆಗಲೇ ದೊರೆತಿದ್ದ ಮಾಹಿತಿಯ ಪ್ರಕಾರ ಮೈಸೂರು ಸರ್ಕಾರವು ಪ್ರತಿ ವರ್ಷವೂ ವಿಶ್ವವಿದ್ಯಾನಿಲಯದಲ್ಲಿ ಮೊದಲ ೧೦ ರಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಮೆರಿಟ್ ಸ್ಕಾಲರ್ಷಿಪ್ ನೀಡುತ್ತಿತ್ತು. ಅದನ್ನು ನೀಡುವ ಜವಾಬ್ದಾರಿಯನ್ನು ಡೈರೆಕ್ಟರ್ ಅಫ್ ಕೊಲಿಜಿಯೇಟ್ ಎಜುಕೇಶನ್ ಅವರಿಗೆ ಕೊಡಲಾಗಿತ್ತು. ಅವರ ಕಚೇರಿ ಮಹಾರಾಣಿ ಕಾಲೇಜಿನ ಹತ್ತಿರವಿತ್ತು. ನಾನು ಆ ಕಚೇರಿಗೆ ಹೋಗಿ ಡೈರೆಕ್ಟರ್ ಅವರನ್ನು ಭೇಟಿ ಮಾಡಿದೆ. ಅವರು ತಮಗಿನ್ನೂ ಮೈಸೂರು ವಿಶ್ವವಿದ್ಯಾನಿಲಯದಿಂದ Rank ಪಡೆದ ವಿದ್ಯಾರ್ಥಿಗಳ ಪಟ್ಟಿ ಬಂದಿಲ್ಲವೆಂದು ತಿಳಿಸಿದರು. ಆದರೆ ಪಟ್ಟಿ ಬಂದ
ನಂತರ ನನಗೆ ಸ್ಕಾಲರ್ಷಿಪ್ ಗ್ಯಾರಂಟಿಯಾಗಿ ಮಂಜೂರಾಗುವುದೆಂದೂ ತಿಳಿಸಿದರು. ಹಾಗೆಯೇ ಸ್ಕಾಲರ್ಷಿಪ್ ಹಣ ತಿಂಗಳಿಗೆ ೧೦೦ ರೂಪಾಯಿಗಳೆಂದೂ ತಿಳಿಸಿದರು. ಅದನ್ನು ಕೇಳಿ ನನಗಾದ ಸಂತೋಷ ಅಷ್ಟಿಟ್ಟಲ್ಲ. ಇನ್ಸ್ಟಿಟ್ಯೂಟಿನಲ್ಲಿ ಹಾಸ್ಟೆಲ್ ಫೀ ತಿಂಗಳಿಗೆ ಸುಮಾರು ೧೧೦ ರಿಂದ ೧೩೦ ಬರಬಹುದೆಂದು ನನಗೆ ಹೇಳಲಾಗಿತ್ತು. ಅದಲ್ಲದೇ ರೂಮ್ ಬಾಡಿಗೆ ಪ್ರತ್ಯೇಕವಾಗಿ ಕೊಡಬೇಕಿತ್ತು. ಒಟ್ಟಿನಲ್ಲಿ ಸ್ಕಾಲರ್ಷಿಪ್ ಮೂಲಕ ತಿಂಗಳಿಗೆ ೧೦೦ ರೂಪಾಯಿ ಖರ್ಚಿಗೆ ನಾನು ವ್ಯವಸ್ಥೆ ಮಾಡಿಕೊಂಡಂತಾಗಿತ್ತು. ಮಾರನೇ ದಿನ ಬೆಳಿಗ್ಗೆ ನಾವು ಶೃಂಗೇರಿ ಬಸ್ಸಿನಲ್ಲಿ ಊರಿಗೆ ಮರುಪ್ರಯಾಣ ಮಾಡಿದೆವು.
----ಮುಂದುವರಿಯುವುದು ---