Sunday, April 1, 2018

ಒಂದು ಊರಿನ ಕಥೆ - 8 (ಹೊಕ್ಕಳಿಕೆ)


ಮಾಲೆಯ ಹಾಕಿದಳು
ರುಕ್ಮಿಣಿ ನಾರಾಯಣ ಹರಿಗೆ

ಧೀರ ಪಾರ್ಥನಿಗೆ ತಾನೇ
ಸಾರಥಿಯಾಗಿ ದೇವ  ಧ್ವಜವ ಇಳುಹಿ
ನಾರಿ ದ್ರೌಪಧಿ ಅಭಿಮಾನವ ಕಾಯ್ದ
ಪಾಂಡವರ ಮನೆ ಕಾವಲುಗಾರ ಚಿನ್ಮಯಗೆ
ಮಾಲೆಯ ಹಾಕಿದಳು
ರುಕ್ಮಿಣಿ ನಾರಾಯಣ ಹರಿಗೆ


ಧರಣಿಯ ಅಳೆದವಗೇ
ಕ್ಷತ್ರಿಯರ ಕುಲವ
ಬಿಡದೆ ಸಂಹರಿಸಿದವಗೆ
ದ್ವಾರಕೀವಾಸನಿಗೆ ಓಲೆಯನೈತಂದು
ಮಾಲೆಯ ಹಾಕಿದಳು
ರುಕ್ಮಿಣಿ ನಾರಾಯಣ ಹರಿಗೆ
ರುಕ್ಮಿಣಕ್ಕನ ಮದುವೆ
ನಾವು ಚಿಕ್ಕಂದಿನಲ್ಲಿ ತಮ್ಮಂದಿರ ತೊಟ್ಟಿಲನ್ನು  ತೂಗುತ್ತಾ ಹೇಳುತ್ತಿದ್ದ ಮೇಲ್ಕಂಡ ಹಾಡಿನ ಕೆಲವು ಸಾಲುಗಳು ಮಾತ್ರಾ ನನಗೆ ಈಗ ನೆನಪಿಗೆ ಬರುತ್ತಿವೆ. ಆದರೆ ಅವೇ ಸಾಲುಗಳು ನನಗೆ  ಅಂದಗಾರು ದೇವಸ್ಥಾನದಲ್ಲಿ ನಡೆದ ನಮ್ಮ ಪ್ರೀತಿಯ ರುಕ್ಮಿಣಕ್ಕನ ಮದುವೆಯ ನೆನಪನ್ನೂ ತರುತ್ತಿವೆ. ೧೯೬೦ನೇ ಇಸವಿ ನಮ್ಮ ಅಡೇಖಂಡಿ  ಮನೆಯವರಿಗೆ ಒಂದು ವಿಶೇಷ ವರ್ಷವೇ ಆಗಿತ್ತು ಎಂದು ಹೇಳಬಹುದು.  ಅಕ್ಕನ ಮದುವೆಯ ದಿಬ್ಬಣ ನಮ್ಮೂರಿನಿಂದ  ಐದು ಜೋಡೆತ್ತಿನ  ಗಾಡಿಗಳಲ್ಲಿ ಅಂದಗಾರು ತಲುಪಿತು. ಎಲ್ಲಕ್ಕೂ ಮುಂದಿದ್ದ ಗಾಡಿ ಮದುವಣಗಿತ್ತಿ ಇದ್ದ ಗೋಳಿಕಟ್ಟೆ ಕೃಷ್ಣಮಾವಯ್ಯನವರ ಪ್ರಸಿದ್ಧ ಗಾಡಿ. ಅವರ ಗಾಡಿ ಎತ್ತುಗಳು ಪ್ರತಿ ವರ್ಷವೂ ಹಾಸನದ ಜಾತ್ರೆಯಲ್ಲಿ ಮೊದಲ ಬಹುಮಾನ ಪಡೆಯುತ್ತಿದ್ದವು. ಪ್ರಾಯಶಃ ನಾನು ನೋಡಿದ ಕೊಟ್ಟ ಕೊನೆಯ ಜೋಡೆತ್ತಿನ  ಗಾಡಿ ದಿಬ್ಬಣ ಅದಾಗಿತ್ತು. ಹಾಗೆಯೇ ಅಂದಗಾರಿನಲ್ಲಿ ಅದು ನಾನು ನೋಡಿದ ಮೊದಲ ಮತ್ತು ಕೊನೆಯ ಮದುವೆ.

ಮದುವೆ ತಕ್ಕಮಟ್ಟಿಗೆ ವಿಜೃಂಭಣೆಯಿಂದಲೇ ಜರುಗಿತು. ಆದರೆ ನಮಗೆಲ್ಲಾ ಅಕ್ಕನ ಅಗಲಿಕೆಯನ್ನು ಸಹಿಸಲು ಎಷ್ಟು ಕಷ್ಟವಾಗಿತ್ತೆಂದು ನಮಗೆ ಮಾತ್ರ ಗೊತ್ತು. ಮಾಮೂಲು ಸಂಪ್ರದಾಯದಂತೆ ಅಕ್ಕನು ಗಂಡನ ಮನೆಗೆ ಹೋಗುವಾಗ ಅವಳೊಡನೆ ತವರು ಮನೆಯಿಂದ ಒಬ್ಬ ಹುಡುಗ ಅಥವಾ ಹುಡುಗಿ ಹೋಗಬೇಕಿತ್ತು. ನಾನು ಆಗ ಬೇಸಿಗೆ ರಜೆಯಿದ್ದರಿಂದ ಹೊಕ್ಕಳಿಕೆಯಿಂದ ಊರಿಗೆ ಬಂದಿದ್ದೆ. ನಾನೇ ಅಕ್ಕನೊಡನೆ ಅವಳ ಮಾವನ ಮನೆಯಾದ ಹೊಸಮನೆಗೆ ಗಾಡಿಯಲ್ಲಿ ಹೋಗುವುದೆಂದು ತೀರ್ಮಾನವಾಯಿತು. ನನ್ನೊಂದಿಗೆ ತಿಮ್ಮಪ್ಪಯ್ಯನವರ ತಂಗಿ ಗೋಳ್ಗಾರ್ ಸುಬ್ಬಮ್ಮನವರ ಮಗ ವೆಂಕಟರಮಣ ಕೂಡ ಇದ್ದ. ಗಾಡಿ ಹೊಡೆಯುವನ ಹೆಸರು ಗೋಂದು. ಅವನು ಹೊಸಮನೆ ಸಂಸಾರಕ್ಕೆ ಗೋಂದಿನಂತೆಯೇ ಅಂಟಿಕೊಂಡು ಬಿಟ್ಟಿದ್ದ!
ಮೊದಲ ಮೊಮ್ಮಗ ನಾಗರಾಜನ ಜನನ
ನಾನು ಬೇಸಿಗೆ ರಜೆಯಲ್ಲಿದ್ದಾಗಲೇ ಗೌರಕ್ಕ ನಮ್ಮ ಮನೆಯಲ್ಲೇ ನಮ್ಮ ತಂದೆ ತಾಯಿಗಳಿಗೆ ಮೊದಲ ಮೊಮ್ಮಗನಾದ  ನಾಗರಾಜನಿಗೆ ಜನುಮ ನೀಡಿದಳು. ಅಕ್ಕನ ಚೊಚ್ಚಲ ಹೆರಿಗೆ ನಮ್ಮೂರಿನ ಪ್ರಸಿದ್ಧ ಪ್ರಸೂತಿ ಶಾಸ್ತ್ರಜ್ಞೆ ಕುಳಗಾರು ಪುಟ್ಟುವಿನ ಕೈಯಲ್ಲೇ ನೆರವೇರಿತು. ನಾಗರಾಜನ ಜನನ ದಿನಾಂಕ  ೧೯೬೦ನೇ ಇಸವಿಯ  ಏಪ್ರಿಲ್ ೪ನೇ ತಾರೀಕು. ಅವನನ್ನು ತೊಟ್ಟಿಲಲ್ಲಿ ತೂಗುವುದಕ್ಕೆ ನಮ್ಮ ಮನೆಯಲ್ಲಿ ಸ್ವಲ್ಪ ಪೈಪೋಟಿ ಇತ್ತೆಂದರೆ ಉತ್ಪ್ರೇಕ್ಷೆ ಆಗುವುದಿಲ್ಲ. ಆದರೆ ನನಗೆ ಬೇಸಿಗೆ ರಜೆ ಮುಗಿದು ನಾನು ಪುನಃ ಅಕ್ಕನ ಮನೆಗೆ ತಲುಪಿ ಅಕ್ಕ ಮತ್ತು ನಾಗರಾಜನೂ ಅಲ್ಲಿಗೆ ಬಂದ ಮೇಲೆ ತೊಟ್ಟಿಲು ತೂಗುವುದಕ್ಕೆ ನಾನು ಏಕೈಕ ಹಕ್ಕುದಾರನಾದೆ.
ಶನಿವಾರದ ಹೊಸಮನೆ ಪಯಣ
ರುಕ್ಮಿಣಕ್ಕ ಮದುವೆಯಾಗಿ  ಹೊಸಮನೆಗೆ ಬಂದ ಮೇಲೆ ನಾನು ವಾರದಲ್ಲಿ ಒಂದು ದಿನ ಅವಳ ಮನೆಯಲ್ಲಿ ಇರಬೇಕೆಂದು ತೀರ್ಮಾನವಾಯಿತು. ಅದರಂತೆ ನಾನು ಪ್ರತಿ ಶನಿವಾರ ಸಂಜೆ ಹೊಸಮನೆಗೆ ಹೋಗಲಾರಂಭಿಸಿದೆ. ಅಕ್ಕನಿಗೇನೋ ನಾನು ಹಾಗೆ ಮನೆಗೆ ಬರುವುದು ತುಂಬಾ ಖುಷಿ ಕೊಟ್ಟರೂ ಅವಳು ನನ್ನೊಡನೆ ಹೆಚ್ಚು ಮಾತನಾಡಲು ಅವಕಾಶವಿರಲಿಲ್ಲ. ಅವಳು ಅಡಿಗೆಮನೆಯಲ್ಲಿ ಕೆಲಸದಲ್ಲಿ ತೊಡಗಿರುತ್ತಿದ್ದಳು ಮತ್ತು ಅವಳು ಮಾವ ತಿಮ್ಮಪ್ಪಯ್ಯನವರ ಮುಂದೆ ಒಂದು ಮಾತೂ ಆಡುತ್ತಿರಲಿಲ್ಲ. ಭಾವನೂ ನನ್ನೊಡನೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಅವರ ತಮ್ಮ ವಿಶ್ವನಾಥಭಾವ ತುಂಬಾ ಮಾತನಾಡುತ್ತಿದ್ದರು. ಅವರೂ ಬಸವಾನಿ ಶಾಲೆಯಲ್ಲಿ ಓದಿದ್ದರು. ಹಾಗೂ ನಮ್ಮ ಹಿಂದಿ ಟೀಚರ್ ಗೋಪಾಲ ಮೇಷ್ಟ್ರು (ಕೃಪಾನಂದ)  ಅವರ ಕ್ಲಾಸ್ ಮೇಟ್ ಆಗಿದ್ದರಂತೆ. ಹಾಗಾಗಿ ಮಾತನಾಡಲು ವಿಷಯಗಳಿರುತ್ತಿದ್ದವು.

ಆದರೂ ಕೂಡ ಪ್ರಾರಂಭದಲ್ಲಿ ನನಗೆ ಹೊತ್ತು ಕಳೆಯುವುದು ಕಷ್ಟವಾಗುತ್ತಿತ್ತು. ಗೌರಕ್ಕನ ಮನೆಯಲ್ಲಿ ನಾನು ಅವಳ ಬಾಲದಂತೆ ಅಡಿಗೆಮನೆಯಲ್ಲಿ ಕೂಡ ಅವಳ ಹಿಂದೆ ಸುತ್ತುತ್ತಾ ಮಾತಿನಲ್ಲಿ ತೊಡಗಿರುತ್ತಿದ್ದೆ. ಆ ಸ್ವಾತಂತ್ರ ಹೊಸಮನೆಯಲ್ಲಿ ನನಗಿರಲಿಲ್ಲ. ನಾನು ಜಗಲಿಯ ಮೂಲೆಯಲ್ಲಿದ್ದ ಕಲಬಿಯೊಂದರ ಮೇಲೆ ಕುಳಿತು ರಾತ್ರಿ ಊಟಕ್ಕೆ ಕರೆಯುವುದನ್ನೇ ಕಾಯುತ್ತಿದ್ದೆ. ಎಷ್ಟೋ ಬಾರಿ ನನಗೆ ಹಾಗೆಯೇ ನಿದ್ದೆ ಬಂದು ಬಿಡುತ್ತಿತ್ತು. ಅಕ್ಕ ಬಂದು ನಿದ್ದೆಯಿಂದ ಎಬ್ಬಿಸಿ ಊಟಕ್ಕೆ ಕರೆಯುತ್ತಿದ್ದಳು.  ಬೆಳಗಿನ ತಿಂಡಿ ಮುಗಿಸಿ ಅಕ್ಕನಿಂದ ಬೀಳ್ಗೊಂಡು ಗೌರಕ್ಕನ ಮನೆಗೆ ವಾಪಾಸ್ ಬಂದ ಮೇಲೆ ನನ್ನ ರೆಕ್ಕೆಗೆ ಪುಕ್ಕ ಬಂದಂತಾಗುತ್ತಿತ್ತು!
ರೇಡಿಯೋ ಬಂತು ರೇಡಿಯೋ!
ಇಟಲಿಯ ಮಾರ್ಕೋನಿ ಕಂಡು ಹಿಡಿದ ರೇಡಿಯೋ ನಮ್ಮ ದೇಶಕ್ಕೆ ೧೯೩೦ರಲ್ಲಿ ಆಲ್ ಇಂಡಿಯಾ ರೇಡಿಯೋ ಎಂಬ ಹೆಸರಿನಲ್ಲಿ ಪ್ರವೇಶ ಮಾಡಿತು. ೧೯೫೬ನೇ ಇಸವಿಯಲ್ಲಿ ಅದಕ್ಕೆ ಆಕಾಶವಾಣಿ ಎಂದು ನಾಮಕರಣ ಮಾಡಲಾಯಿತು. ನಮ್ಮೂರಿನ ಪುರದಮನೆಗೆ ಸರಿ ಸುಮಾರು ೧೯೫೩ನೇ ಇಸವಿಯಲ್ಲೇ ಅದು ಬಂದು ಬಿಟ್ಟಿತ್ತು. ಆದರೆ ಹೊಕ್ಕಳಿಕೆಗೆ ನಾನು ಹೋಗುವಾಗಲೂ ಅಲ್ಲಿ ಅದರ ಪ್ರವೇಶವಾಗಿರಲಿಲ್ಲ.  ಆದರೆ ನಾನು ಒಂದು ಶನಿವಾರ ಸಂಜೆ ಹೊಸಮನೆಗೆ ಕಾಲಿರಿಸಿದಾಗ ನನಗೊಂದು ಆಶ್ಚರ್ಯ ಕಾದಿತ್ತು. ಜಗಲಿಯ ಒಂದು ಮೂಲೆಯಲ್ಲಿ ಎತ್ತರದ ಪೀಠವೊಂದರಮೇಲೆ ಮಾರ್ಕೋನಿಯ ಪರಿಷ್ಕಾರ ಸ್ಥಾಪಿತಗೊಂಡಿತ್ತು. ಅದರಿಂದ ಗಟ್ಟಿ ಧ್ವನಿಯಲ್ಲಿ ಕಾರ್ಯಕ್ರಮಗಳು ಪ್ರಸಾರಗೊಳ್ಳುತ್ತಿದ್ದವು. ತಿಮ್ಮಪ್ಪಯ್ಯನವರು ತಮ್ಮ ಮನೆಯ ಹೆಸರನ್ನು ಹೊಸಮನೆಯೆಂದು ಸರ್ವ ಕಾಲದಲ್ಲೂ ಉಳಿಯುವಂತೆ ನೋಡಿಕೊಂಡಿದ್ದರು. ಹಾಗೆಯೇ ಊರಿನಲ್ಲಿಯೇ ಮೊದಲ ರೇಡಿಯೋ ಹೊಂದಿದ ಮನೆಯೆಂದೂ ಹಿರಿಮೆ ಸಾಧಿಸಿ ಬಿಟ್ಟರು!

ನನ್ನ ಅದೃಷ್ಟಕ್ಕೆ ಪ್ರತಿ ಶನಿವಾರ ರೇಡಿಯೋದಲ್ಲಿ ಹರಿಕಥೆಯೊಂದು ಪ್ರಸಾರಗೊಳ್ಳುತ್ತಿತ್ತು. ಆದ್ದರಿಂದ ನಾನು ಜಗಲಿಯ ಇನ್ನೊಂದು ಮೂಲೆಯಲ್ಲಿದ್ದ ಕಲಬಿಯ ಮೇಲೆ ಕುಳಿತು ನಿದ್ದೆ ಮಾಡುವ ಅಭ್ಯಾಸ ನಿಲ್ಲಿಸುವಂತಾಯಿತುಹರಿಕಥೆ ಮುಗಿಯುವಷ್ಟರಲ್ಲಿ ಅಕ್ಕನಿಂದ ಊಟಕ್ಕೆ ಕರೆ ಬರುತ್ತಿತ್ತು.
----ಮುಂದುವರಿಯುವುದು ---

No comments: